ಟನಲ್ ರಸ್ತೆ ಯೋಜನೆಗೆ ಪರ-ವಿರೋಧ ಚರ್ಚೆ ಹೆಚ್ಚಾಗಿದೆ. ವಿಪಕ್ಷಗಳು ಮತ್ತು ಪರಿಸರಪ್ರಿಯರು ಒಂದು ಕಡೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಭೂವಿಜ್ಞಾನಿಗಳು ಟನಲ್ ರಸ್ತೆ ನಿರ್ಮಾಣದಿಂದ ಬೆಂಗಳೂರಿಗೆ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಬೆಂಗಳೂರಿಗೆ ಈ ಯೋಜನೆ ಪೂರಕವೇ?
ವಿಶ್ವದ ಅತಿ ಹೆಚ್ಚು ಟ್ರಾಫಿಕ್ ಇರುವ ನಗರಗಳಲ್ಲಿ 3ನೇ ಸ್ಥಾನ ಪಡೆದಿರುವ ಬೆಂಗಳೂರು ಸಂಚಾರ ನಿವಾರಣೆಗೆ ರಾಜ್ಯ ಸರ್ಕಾರ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಸುರಂಗ ರಸ್ತೆ ನಿರ್ಮಾಣದಿಂದ ಟ್ರಾಫಿಕ್ ಕಂಟ್ರೋಲ್ ಮಾಡಬಹುದು ಎಂಬ ಲೆಕ್ಕಚಾರದೊಂದಿದೆ ಡಿಸಿಎಂ ಡಿಕೆ ಶಿವಕುಮಾರ್ ಅವರು ‘ಟನಲ್ ರಸ್ತೆ ಯೋಜನೆ’ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ 18 ಕಿ.ಮೀ ಸುರಂಗ ರಸ್ತೆ ನಿರ್ಮಾಣ ಇದಾಗಿದ್ದು, ಅಂದಾಜು 17,780 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಉದ್ದೇಶಿತ ಯೋಜನೆಯ ಪ್ರಕಾರ ಟನಲ್ ರೋಡ್ ಲಾಲ್ಬಾಗ್ ಮೂಲಕವೂ ಹಾದು ಹೋಗಲಿದೆ. ಲಾಲ್ಬಾಗ್ನಲ್ಲಿರುವ ಬಂಡೆ ಕೊರೆದು ಸುರಂಗ ನಿರ್ಮಿಸಲು ನಿರ್ಧರಿಸುವುದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗುತ್ತಿದೆ.
ಒಟ್ಟಾರೆ ಟನಲ್ ರಸ್ತೆ ಯೋಜನೆಗೆ ಪರ-ವಿರೋಧ ಚರ್ಚೆ ಹೆಚ್ಚಾಗಿದೆ. ವಿಪಕ್ಷಗಳು ಮತ್ತು ಪರಿಸರಪ್ರಿಯರು ಒಂದು ಕಡೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಭೂವಿಜ್ಞಾನಿಗಳು ಟನಲ್ ರಸ್ತೆ ನಿರ್ಮಾಣದಿಂದ ಬೆಂಗಳೂರಿಗೆ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಿದ್ದಾರೆ. ಇದೆಲ್ಲದರ ಮಧ್ಯೆ ಯೋಜನೆ ಮಾಡಿಯೇ ಸಿದ್ಧ ಎನ್ನುವ ಅಚಲ ವಿಶ್ವಾಸದಲ್ಲಿ ಡಿ ಕೆ ಶಿವಕುಮಾರ್ ಇದ್ದಾರೆ.
ಬೆಂಗಳೂರು ಸುರಂಗ ರಸ್ತೆ ನಿರ್ಮಾಣದಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ? ತರಾತುರಿ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ? ಬೇರೆ ಯಾವುದಾದ್ರೂ ಪರ್ಯಾಯ ಮಾರ್ಗಗಳಿವೆಯಾ? ಬೆಂಗಳೂರಿನ ಯಾವೆಲ್ಲಾ ಸ್ಥಳಗಳು ಡೇಂಜರ್ ಜೋನ್‌ನಲ್ಲಿವೆ ಎಂಬುವುದರ ಕುರಿತು ಸಮೀಕ್ಷೆಯೇ ನಡೆದಿಲ್ಲ ಎನ್ನುತ್ತಿದ್ದಾರೆ ತಜ್ಞರು.
ಖ್ಯಾತ ಭೂ ವಿಜ್ಞಾನಿ, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆ ನಿವೃತ್ತ ಉಪ ಮಹಾನಿರ್ದೇಶಕರಾಗಿದ್ದ ಡಾ. ಎಚ್ ಎಸ್ ಎಂ ಪ್ರಕಾಶ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, “ಹತ್ತು ವರ್ಷದ ಹಿಂದೆ ನಿಂತು ಯೋಚಿಸಿದರೆ ಟನಲ್ ರಸ್ತೆ ಆಗ ಬೆಂಗಳೂರಿಗೆ ಬೇಕಿರಲಿಲ್ಲ. ಆದರೆ, 2025ರ ಹೊತ್ತಿನಲ್ಲಿ ಬೆಂಗಳೂರಿಗೆ ಟನಲ್ ರಸ್ತೆ ಅಗತ್ಯವಾಗಿ ಬೇಕು. ನಿರ್ಮಾಣದ ಬಗ್ಗೆ ಚರ್ಚೆಗಳಾಗಲಿ. ಅದು ಬಿಟ್ಟು ಯೋಜನೆಯೇ ಬೇಡ ಎನ್ನುವುದನ್ನು ನಾನು ಒಪ್ಪುವುದಿಲ್ಲ” ಎಂದು ಹೇಳಿದರು.
“ಟನಲ್ ರಸ್ತೆ ನಿರ್ಮಾಣದ ಡಿಪಿಆರ್ ಬಗ್ಗೆ ಈಗಲೂ ತಕರಾರುಗಳು ಇವೆ. ವೈಜ್ಞಾನಿಕವಾಗಿ ಅಧ್ಯಯನವಾಗಬೇಕು. 18 ಕಿ.ಮೀ ಉದ್ದದ ಟನಲ್ ರಸ್ತೆ ಇದಾಗಿರುವುದರಿಂದ ಪ್ರತಿಯೊಂದು ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡು ಮುಂದೆ ಹೋಗಬೇಕು. ಆದರೆ ಈಗಿನ ಡಿಪಿಆರ್‌ನಲ್ಲಿ ಕೇವಲ ಮಣ್ಣು ಪರೀಕ್ಷೆ ಬಿಟ್ಟರೆ ಅಂತಹ ದೊಡ್ಡ ಅಧ್ಯಯನಗಳು ಕಾಣುತ್ತಿಲ್ಲ. ಟನಲ್ ರಸ್ತೆ ನಿರ್ಮಾಣ ಸುಮಾರು 60 ಮೀಟರ್ ಕೆಳಗೆ ನಿರ್ಮಾಣವಾಗುತ್ತದೆ. ಮಣ್ಣು ಇರುವುದೇ 10-15 ಅಡಿ. ಇದರಿಂದ ಏನೂ ಸಾಧ್ಯವಿಲ್ಲ” ಎಂದು ತಿಳಿಸಿದರು.
“ಬೆಂಗಳೂರು ಭೂಮಿಯ ಕೆಳಗೆ ಹಾರ್ಡ್ ರಾಕ್ ಇದೆ. ಇದರಿಂದ ಬೆಂಗಳೂರಿಗೆ ಸಮಸ್ಯೆ ಇಲ್ಲ. ಆದರೆ ಟನಲ್ ನಿರ್ಮಾಣ ಹೇಗೆ? ಪ್ರತಿ ಕಿ.ಮೀ ಅಧ್ಯಯನ ಮ್ಯಾಪ್ ಆಗಬೇಕು. ಅಲ್ಲಿ ಕಲ್ಲು, ನೀರಿನ ಮೂಲದ ಬಗ್ಗೆ ಉಲ್ಲೇಖವಾಗಬೇಕು. ಪ್ರತಿ ಸಂಗತಿಗಳು ಮ್ಯಾಪ್ ಆದಾಗ ತಜ್ಞರು ಆಗ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು. ನನ್ನ ಪ್ರಕಾರ ಗಂಭೀರವಾಗಿ ಅಧ್ಯಯನ ಮಾಡಿದ ಬಳಿಕವೇ ಟನಲ್ ರಸ್ತೆ ನಿರ್ಮಾಣಕ್ಕೆ ಕೈಹಾಕಬೇಕು” ಎಂದು ಅಭಿಪ್ರಾಯಪಟ್ಟರು.

“ಸುರಂಗ ಮಾರ್ಗಗಳು ಈವರೆಗೂ ಬೇರೆ ಬೇರೆ ಕಾರಣಕ್ಕೆ ನಿರ್ಮಾಣವಾಗಿವೆ. ಉದಾಃ ಗುಡ್ಡಗಾಡು ಪ್ರದೇಶ, ಜಲಮೂಲ ದಾಟುವುದು, ಹಿಮಬೀಳುವ ಪ್ರದೇಶ, ದೂರದ ಅಂತರ ಕಡಿಮೆ ಮಾಡುವುದು, ಹೀಗೆ ಬೇರೆ ಬೇರೆ ಕಾರಣಗಳಿಗೆ ಸುರಂಗ ರಸ್ತೆ ನಿರ್ಮಾಣವಾಗಿವೆ. ಆದರೆ ಬೆಂಗಳೂರು ಟನಲ್ ರಸ್ತೆ ನಿರ್ಮಾಣಕ್ಕೆ ಬೇರೆಯದ್ದೇ ಕಾರಣವಿದೆ. ಬೆಂಗಳೂರಿನಲ್ಲಿ ದೂರವನ್ನು ಕಡಿಮೆ ಮಾಡುತ್ತಿಲ್ಲ. ಅನ್ಯ ಮಾರ್ಗಗಳನ್ನು ಹುಡುಕುವಲ್ಲಿ ನಾವು ತುಂಬಾ ಹಿಂದೆ ಇದ್ದೇವೆ. ನಮ್ಮ ರಸ್ತೆಗಳು ಸರಿಯಿಲ್ಲ, ಪುಟ್‌ಪಾತ್‌ಗಳು ಹಾಳಾಗಿವೆ, ಸಾರ್ವಜನಿಕ ಸಾರಿಗೆ ತುಂಬಾ ಹಿಂದೆ ಇದೆ. ಇದೆಲ್ಲವನ್ನು ಪರಿಪೂರ್ಣ ಮಾಡಿದ ನಂತರ ಸುರಂಗ ಮಾರ್ಗ ಆಯ್ಕೆಯಾಗಬೇಕಿತ್ತು. ಆದರೆ ಇದೇ ಅಪೂರ್ಣವಾಗಿದೆ” ಎನ್ನುತ್ತಾರೆ ಸಿಟಿಜನ್ ಫಾರ್ ಸಿಟಿಜನ್ ಸಂಸ್ಥೆಯ ಸಂಸ್ಥಾಪಕ ರಾಜ್ ಕುಮಾರ್ ದುಗಾರ್.
“ಸುರಂಗ ಮಾರ್ಗ ನಿರ್ಮಾಣ ಮಾಡುವುದು ನಾವು ಅಂದುಕೊಂಡಷ್ಟು ಸುಲಭವಿಲ್ಲ. ಬೆಂಗಳೂರನ್ನೇ ಉದಾಹರಣೆ ನೋಡಿ. ಮೆಟ್ರೋ ಸುರಂಗ ನಡೆಯುತ್ತಿದೆ. 2017ರಲ್ಲಿ ಬನ್ನೇರಘಟ್ಟದಿಂದ ನಾಗವಾರಕ್ಕೆ ಸುರಂಗ ಮಾರ್ಗ ನಡೆಯುತ್ತಿದೆ. ಅದು 6 ಕಿ.ಮೀ. 2025 ಆದ್ರೂ ಆ ಲೈನ್ ಇನ್ನೂ ರೆಡಿಯಾಗಿಲ್ಲ. ಇದು ಬಹಳ ಟೈಮ್ ತೆಗೆದುಕೊಳ್ಳುತ್ತದೆ. ಅಷ್ಟೊತ್ತಿಗೆ ಬೇರೆ ಬೇರೆ ಪರಿಹಾರಗಳು ಸೃಷ್ಟಿಯಾಗಬಹುದು. ಅದನ್ನು ನಾವು ಅಳವಡಿಸಿಕೊಂಡರೆ ಟನಲ್ ರಸ್ತೆಯೇ ಬೇಕಾಗಿಲ್ಲ”
“ಬೆಂಗಳೂರಿನಲ್ಲಿ 20 ಲಕ್ಷ ಕಾರುಗಳಿವೆ. 1 ಕೋಟಿಗೆ ಹೆಚ್ಚು ಬೇರೆ ಬೇರೆ ವಾಹನಗಳಿವೆ. 20 ಲಕ್ಷ ಕಾರುಗಳಿಗೆ ಮಾತ್ರ ಸುರಂಗ ಮಾರ್ಗ ಸೂಕ್ತವಾಗಿರುತ್ತದೆ. 20 ಲಕ್ಷ ಕಾರಲ್ಲಿ ಆ ರಸ್ತೆಯಲ್ಲಿ ಹೋಗುವ ಎಷ್ಟು ಕಾರುಗಳು ಇರಬಹುದು? ದಿನಕ್ಕೆ 2-3 ಲಕ್ಷ ಇರಬಹುದು. ಇದರಲ್ಲಿ ಯಾರು ಸದ್ಯಕ್ಕೆ 20 ರೂ. ಪ್ರತಿ ಕಿ.ಮೀ ಟೋಲ್ ಕಟ್ಟಬಹುದು? ಇದೆಲ್ಲ ಮ್ಯಾಟರ್ ಆಗುತ್ತದೆ. ಸರಾಸರಿ 1 ಲಕ್ಷ ಕಾರುಗಳಿಗೆ ಇಂತಹ ದೊಡ್ಡ ಟನಲ್ ಯೋಜನೆ ಬೇಕಾ? ಉಳಿದ 1 ಕೋಟಿ ವಾಹನಗಳಿಗೆ ರಸ್ತೆ ಮಾರ್ಗದ ಪರಿಹಾರವೇನು” ಎಂದು ಪ್ರಶ್ನಿಸಿದರು.
“ಟನಲ್ ರಸ್ತೆ ಮಾರ್ಗವಾಗಿ 90 ನಿಮಿಷದ ಪ್ರಯಾಣವನ್ನು 30 ನಿಮಿಷಕ್ಕೆ ಇಳಿಸುವುದಾಗಿ ಸರ್ಕಾರ ಹೇಳುತ್ತದೆ. ಆದರೆ, ಅದು ಟನಲ್ ಪ್ರವೇಶಿಸಿದ ನಂತರ. ಟನಲ್ ರಸ್ತೆ ಪ್ರವೇಶ ಮತ್ತು ಹೊರಬರುವುದು ಮುಂದೆ ಅದೇ ದೊಡ್ಡ ಸಂಚಾರ ದಟ್ಟನೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಟನಲ್ ರಸ್ತೆ ನಿರ್ಮಾಣದ ವೇಳೆ ಸಾವಿರಾರು ಲಾರಿಗಟ್ಟಲೇ ಮಣ್ಣು ಹೊರಬರುತ್ತದೆ. ಅದನ್ನು ಎಲ್ಲಿ ಸುರಿಯುತ್ತಾರೆ? ರಸ್ತೆ ನಿರ್ಮಾಣವಾದರೆ 24X7 ಮಾನಿಟರಿಂಗ್ ಬೇಕು, ವಿದ್ಯುತ್ ಬೇಕು, ಒಳ್ಳೆಯ ಗಾಳಿ ಬೇಕು. ಇದನ್ನೆಲ್ಲ ನೋಡಿದರೆ ಸವಾಲುಗಳು ಸಾಕಷ್ಟಿವೆ” ಎಂದು ಹೇಳಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.




