ಹೈಕಮಾಂಡ್ ಸೂಚನೆ ಮೇರೆಗೆ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಮತ ಕಳವು ವಿಚಾರದಲ್ಲಿ ಹೇಳಿಕೆ ನೀಡಿದ್ದ ರಾಜಣ್ಣ ಅವರು ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಮತ ಕಳ್ಳತನವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದರು. ಹೀಗಾಗಿ ಹೈಕಮಾಂಡ್ ರಾಜೀನಾಮೆ ನೀಡಲು ಸೂಚಿಸಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕೆಎನ್ ರಾಜಣ್ಣ ಮತ್ತು ಪರಮೇಶ್ವರ್ ಅವರೇ, ಸಚಿವಗಿರಿ ಎಂದರೆ ಚಮಚಾಗಿರಿ ಅಲ್ಲ: ಕುಮಾರಸ್ವಾಮಿ ಕಿಡಿ
ಮತ ಕಳವು ವಿರುದ್ಧವಾಗಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೋರಾಟವನ್ನು ನಡೆಸುತ್ತಿದೆ. ಈಗಾಗಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಹಾದೇವಪುರ ಕ್ಷೇತ್ರದಲ್ಲಿ ನಡೆದಿರುವ ಮತಗಳವು ಬಗ್ಗೆ ವಿವರಿಸಿದ್ದಾರೆ.
ಈ ನಡುವೆ ಮತ ಕಳವು ಬಗ್ಗೆ ಹೇಳಿಕೆ ನೀಡಿದ್ದ ರಾಜಣ್ಣ ಅವರು, ಮಹಾದೇವಪುರ ಕ್ಷೇತ್ರದಲ್ಲಿ ಮತ ಕಳವು ನಡೆಯಲು ನಮ್ಮ ಲೋಪವೇ ಕಾರಣ. ಈ ಆರೋಪ ನಿಜವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ನಮ್ಮಿಂದ ಅಕ್ರಮಗಳನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.





