ಸಮಾಜಮುಖಿಯ ಸ್ವಗತಗಳು | ಬೆಳಗಾವಿಯಲ್ಲಿ ಒಂದು ಕಲಿಗಾಲದ ಪ್ರಹಸನ 

Date:

ಸಂಜೆ ಅನಿರೀಕ್ಷಿತವಾಗಿ ನಮ್ಮ ಮನೆಗೇ ವಾಪಸ್ ಬಂದ ಅಂಕಲ್ ಅವರು ವಟ ವಟನೆ ಮಾತಾಡತೊಡಗಿದರು. ಅವರಿಗೆ ಬೈಯುವುದು, ಇವರಿಗೆ ಬೈಯುವುದು, ಕೊನೆಗೆ ತಮ್ಮ ಅದೃಷ್ಟವನ್ನು ಹಳಿಯುವುದು ಇತ್ಯಾದಿ. ಹೀಗೆ ಆದಾಗಲೆಲ್ಲ ಅವರ ಕೆಲಸ ಆಗಿಲ್ಲ ಅಂತ ಅರ್ಥ. ಇದೇನು ಊರಾ, ಇವರೇನು ಮನಿಶಾರ, ಅಂತ ಶುರು ಮಾಡಿದವರು, ಈ ಸರಕಾರ, ಈ ರಾಜ್ಯ, ದೇಶ, ಕೊನೆಗೆ ಇಡೀ ಭೂಮಂಡಲವನ್ನೇ ಬೈಯಲು ತೊಡಗಿದರು.

ಅವತ್ತು ನಮ್ಮ ಮನೆಗೆ ಬಂದವರು ನಮ್ಮ ಕುಟುಂಬದ ಹಳೆಯ ಸ್ನೇಹಿತರೊಬ್ಬರ ಕಳಬಳ್ಳಿ (ಕರುಳು ಬಳ್ಳಿ ಅಂದರೆ ಸಂಬಂಧಿಕರು). ಅವರು ಚಳಿಗಾಲದ ಅಧಿವೇಶನಕ್ಕೆ ಬಂದ ಜನಪ್ರತಿನಿಧಿಗಳನ್ನು ಭೇಟಿ ಆಗಲು ಬಂದ ನಾಯಕರೊಬ್ಬರನ್ನು ಭೇಟಿ ಮಾಡಿಸಲು ಬಂದ ಇನ್ನೊಬ್ಬರನ್ನು ಭೇಟಿ ಆಗಬಹುದೇ ಅಂತ ನೋಡಲಿಕ್ಕೆ ಬಂದಿದ್ದರು. 

ಈ ಚಳಿಗಾಲದ ಅಧಿವೇಶನ ಎಂದರೆ ಪ್ರತಿ ವರ್ಷ ಇಲ್ಲಿಂದ ತುಸು ದೂರ ಇರುವ ಸುವರ್ಣ ವಿಧಾನಸೌಧ ಎನ್ನುವ ಕಲ್ಲು ಹೃದಯದ ಕಟ್ಟಡದಲ್ಲಿ ನಮ್ಮ ಶಾಸಕರು, ಅಧಿಕಾರಿಗಳು, ಪತ್ರಕರ್ತರು ಹಾಗೂ ಅವರ ಸಹಾಯಕರು, ಸ್ನೇಹಿತರು ಹಾಗೂ ಸಹಚರರಿಗೆ ಅನುಕೂಲ ಆಗಲಿ ಅಂತ ಹೇಳಿ ಡಿಸೆಂಬರ್ ಕೊನೆಯ ವಾರದಲ್ಲಿ ಇಟ್ಟುಕೊಳ್ಳುತ್ತಾರಲ್ಲ, ಅದು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅವರಿಗೆ ಬೆಳಗಾವಿಯಲ್ಲಿ ಹೋಟೆಲು ಸೀಟು ಸಿಗದೇ ಹೋಗಿದ್ದರಿಂದ ಒಂದು ದಿನ ಮುಂಜಾನೆ ಬಸ್ಸು ಇಳಿದ ತಕ್ಷಣ, ಬ್ಯಾಗು ಒಗದು, ಕೈ ಕಾಲು ತೊಳೆದುಕೊಂಡು ಹೋಗಲು ಮನೆಗೆ ಬಂದಿದ್ದರು. ಸರ್ವೇ ಡಿಪಾರ್ಟ್ಮೆಂಟ್ ನಿಂದ ನಿವೃತ್ತರಾದ ಅವರು ಶಾಸಕರೊಬ್ಬರ ಅನಧಿಕೃತ ಸಲಹೆಗಾರರಾಗಿದ್ದರು. ಅವರಿಗೆ ನಮ್ಮ ತಮ್ಮ ದೃಶ್ಯ ಅಂಕಲ್ ಅಂತ ಹೆಸರು ಇಟ್ಟಿದ್ದ. ಅವರು ಸರ್ವೇ ಸಾಧಾರಣ ಚುನಾವಣೆಗೆ ಮುಂಚೆ ನಮ್ಮ ಮನೆಗೆ ಬಂದು ಒಂದು ಎರಡು ದಿವಸ ಠಿಕಾಣಿ ಹೊಡೆದು, ನಂತರ ಐದು ವರ್ಷ ಅದೃಶ್ಯರಾಗುತ್ತಿದ್ದರು. 

ಆದರೆ, ಅವತ್ತು ಮುಂಜ- ಮುಂಜಾಲೆ ರೈಲಿನಿಂದ ಇಳಿದು ಓಡೋಡಿ ಬಂದರು. ಬೆಳಿಗ್ಗೆ ಕೆಲಸಗಳನ್ನು ಮುಗಿಸಿಕೊಂಡು ಓಡೋಡಿ ಹೋದರು. ತಿಂಡಿ ಮಾಡಲು ಒಲ್ಲೆ ಎಂದರು. ಅಲ್ಲಿ ಸಚಿವರ- ಶಾಸಕರೊಂದಿಗೆ ತಿಂಡಿ ಅಂತ ಅಂದ್ರು. ಅವರು ಹೋದ ಮೇಲೆ ನಮ್ಮಜ್ಜಿ “ಅಲ್ಲಿ ಹೋಗಿ ಸಚಿವರ ಸಂಗತೆ ನಾಷ್ಟಾ ಮಾಡತಾನೊ, ಅವರ ಪಿ ಎ ಸಂಗತೆ ಮಾಡತಾನೋ ಯಾವ ಬಲ್ಲ’’, ಅಂತ ಅಂದಳು. ನಮ್ಮ ಬೆಳಗಾವಿ ಭಾಷೆಯಲ್ಲಿ`ಯಾವ ಬಲ್ಲ?’ ಅಂದರೆ `ಯಾರಿಗೆ ಗೊತ್ತು?’ ಅಂತ ಅರ್ಥ ಅಲ್ಲ, `ಯಾರಿಗೂ ಗೊತ್ತಿಲ್ಲ!’ ಅಂತಲೇ ಅರ್ಥ. 

ಸಂಜೆ ಅನಿರೀಕ್ಷಿತವಾಗಿ ನಮ್ಮ ಮನೆಗೇ ವಾಪಸ್ ಬಂದ ಅಂಕಲ್ ಅವರು ವಟ ವಟನೆ ಮಾತಾಡತೊಡಗಿದರು. ಅವರಿಗೆ ಬೈಯುವುದು, ಇವರಿಗೆ ಬೈಯುವುದು, ಕೊನೆಗೆ ತಮ್ಮ ಅದೃಷ್ಟವನ್ನು ಹಳಿಯುವುದು ಇತ್ಯಾದಿ. ಹೀಗೆ ಆದಾಗಲೆಲ್ಲ ಅವರ ಕೆಲಸ ಆಗಿಲ್ಲ ಅಂತ ಅರ್ಥ. ಇದೇನು ಊರಾ, ಇವರೇನು ಮನಿಶಾರ, ಅಂತ ಶುರು ಮಾಡಿದವರು, ಈ ಸರಕಾರ, ಈ ರಾಜ್ಯ, ದೇಶ, ಕೊನೆಗೆ ಇಡೀ ಭೂಮಂಡಲವನ್ನೇ ಬೈಯಲು ತೊಡಗಿದರು.`ಸರಿ ಸರಿ , ಇವರಿಗೆ ಅಲ್ಲಿ ಯಾರು ಸಿಗಬೇಕಾಗಿತ್ತೋ ಅವರು ಸಿಗಲಿಲ್ಲ ಅಂತ ಕಾಣತದ, ಸಿಕ್ಕರೂ ಇವರನ್ನ ಸಮಾ ಮಾತು ಆಡಿಸಿರಲಿಕ್ಕಿಲ್ಲ, ಆಡಿಸಿದರೂ ಕೆಲಸ ಮಾಡಿ ಕೊಟ್ಟಿರಲಿಕ್ಕಿಲ್ಲ. ಅದಕ್ಕ, ಈ ಸ್ಮಶಾನ ವೈರಾಗ್ಯ’, ಅಂತ ನಮ್ಮ ಅಜ್ಜ ಸಣ್ಣ ದನಿಯಲ್ಲಿ ಹೇಳಿಕೊಂಡರು. 

ಬಿಸಿ ಬಿಸಿ ರೊಟ್ಟಿ ತಿಂದು ತಂಪಾದ ಮಜ್ಜಿಗೆ ಕುಡಿದ ಮೇಲೆಯೂ ನಮ್ಮ ಅತಿಥಿಯವರ ಮಂಡೆ ಬಿಸಿ ಕಮ್ಮಿ ಆಗಲಿಲ್ಲ. 

ಊಟ ಮುಗಿದು ತಮ್ಮ ಸಾಮಾನು ಕಟ್ಟುವ ತನಕವೂ ಅವರು ಬೈಯುತ್ತಲೇ ಇದ್ದರು. ಚಳಿಗಾಲದ ಅಧಿವೇಶನ ಅಂತ, ಚಳಿಗಾಲದ ಅಧಿವೇಶನ. ಎಲ್ಲಾ ಸುಳ್ಳ, ಇದು ಚಳಿಗಾಲದ ಅಧಿವೇಶನ ಅಲ್ಲ.`ಕಲಿಕಾಲದ ಪ್ರಹಸನ’ ಅಂತ ವಟಗುಟ್ಟುತ್ತಾ ರಾತ್ರಿ ಬಸ್ಸಿಗೆ ಹೋದರು. 

ಅವರು ಹೋದ ಮೇಲೆ ನನಗೆ ಚಿಂತೆ ಹತ್ತಿತು. ಅವರು ಹೇಳಿದಂತೆ ನಿಜವಾಗಿಯೂ ಇದು ಕಲಿಕಾಲದ ಪ್ರಹಸನವೇ ಅಂತ ಅನ್ನಿಸಲಿಕ್ಕೆ ಶುರು ಆಯಿತು. ಸಿಟ್ಟಿನ ಭರದಲ್ಲಿ ಅವರೇನು ಸಾರ್ವಕಾಲಿಕ ಸತ್ಯವನ್ನೇನಾದ್ರೂ ಒಡ ನುಡಿದರಾ, ಮಣಿಕಟ್ಟಿನಲ್ಲಿ ವಾಚು ಕಟ್ಟಿಕೊಂಡರೂ ಕಾಲದ ಜ್ಞಾನ ಇರಲಾರದ ಈ ಪ್ರಾಣಿ ಕ್ಷಣ ಮಾತ್ರಕ್ಕೆ ಕಾಲಜ್ಞಾನಿಗಳಾಗಿ ಬಿಟ್ಟರಾ, ಅಂತ ಕೂಡ ಅನ್ನಿಸಿತು. 

ಅಖಂಡ ಕರ್ನಾಟಕದ ಜನಾಧಿಕಾರದ ನಿಜ ಯಜಮಾನರಾದ ನಮ್ಮ ಕಡೆಯಿಂದ ವೋಟು- ನೋಟು ಎರಡೂ ಪಡೆದುಕೊಂಡು ಹೋಗಿ ಈ ಪಾಷಾಣ ಪರ್ವತದ ಮೇಲಿನ ಆ ಗಾಜಿನಕಲ್ಲು ಕಟ್ಟಡದಲ್ಲಿ ಕೂತ ಮೇಲೆ, ನಮ್ಮ ಜನಪ್ರತಿನಿಧಿಗಳು ಈ ಅಧಿವೇಶನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರಾ? ರಾಜ್ಯದ 224 ಭೌಗೋಳಿಕ ಹಾಗೂ 75 ಜನ ಕ್ಷೇತ್ರಗಳಿಂದ ಆರಿಸಿ ಬಂದ ಮೇಲೆ ಬೆಂಗಳೂರೇ ನಮ್ಮ ಊರು ಅನ್ನುವಂತೆ ಬೇರು ಬಿಟ್ಟ ನಮ್ಮ ನಾಯಕರು ಪ್ರತಿ ವರ್ಷ ಇಯರ್ ಎಂಡ್‌ಗೆ ಬೆಳಗಾವಿಗೆ ಓಡಿ ಬರೋದು ಯಾಕೆ? ತಾವು ಯಾವ ಕೆಲಸದ ಮೇಲೆ ಇಲ್ಲಿಗೆ ಹೊರಟಿದ್ದೇವೆ? ಅಲ್ಲಿ ಹೋದ ನಂತರ ಏನು ಮಾಡಬೇಕು? ನಮ್ಮ ಭೇಟಿ ಫಲಪ್ರದವಾಗಲು ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಪ್ರಜ್ಞೆ ಅವರಿಗೆ ಇದೆಯೇ? 

ಹೋಗಲಿ, ಈ ಪ್ರಜ್ಞೆ ಅವರನ್ನು ಅಲ್ಲಿಗೆ ನಿಯೋಜಿಸಿದ ಮತದಾರ ಮಹಾಪ್ರಭುಗಳಾದ ನಮಗೆ ಇದೆಯೇ? ಈ  ಪೃಥ್ವಿಯ ಮೇಲೆ ಲಕ್ಷಾಂತರ ವರ್ಷಗಳನ್ನು ಮೃಗಗಳಂತೆ ಕಳೆದ ಮಾನವ ಕುಲದ ಅತಿ ದೊಡ್ಡ ಆವಿಷ್ಕಾರ ಎಂದರೆ  ಪ್ರಜಾಪ್ರಭುತ್ವ ಎಂತಲೂ, ವಿವಿಧ ನದೀತಟಗಳ ಮೇಲೆ ಹುಟ್ಟಿಕೊಂಡ ನಾಗರಿಕತೆಗಳ ವಿಕಾಸದ ಕೊನೆಯ ಮೆಟ್ಟಿಲು ಇದೇ ಎನ್ನುವುದು ನಮಗೆ ಅರಿವಾಗಿದೆಯೇ? 

ಪ್ರಾಥಮಿಕ ಶಾಲೆಯ ಪೌರನೀತಿ ವಿಷಯದಲ್ಲಿ ಕಲಿತ ಪ್ರಜಾಪ್ರಭುತ್ವದ ಪಾಠಗಳನ್ನು ಬಿಟ್ಟರೆ ನಮಗೆ ಏನು ಗೊತ್ತು? ಇರಲಿ, ಸಧ್ಯಕ್ಕೆ ಬೆಳಗಾವಿ ಅಧಿವೇಶನದ ಬಗ್ಗೆ ಮಾತ್ರ ಮಾತಾಡೋಣ. 

ಸ್ವಾತಂತ್ರ್ಯಕ್ಕೆ ಮುಂಚೆ ಪ್ರತ್ಯೇಕ ರಾಜ್ಯ ಆಗಿದ್ದ ವಿದರ್ಭ ಪ್ರಾಂತ ಪ್ರತ್ಯೇಕ ರಾಜ್ಯವೇ ಆಗಬೇಕು, ಮಹಾರಾಷ್ಟ್ರದಲ್ಲಿ ಸೇರಬಾರದು ಎಂದು ಬಯಸಿದ್ದ ಎಂ ಎಸ್ ಆಣೆ, ಬೃಜ್ ಲಾಲ್ ಬಿಯಾನಿ ಮತ್ತು ಇತರ ಸ್ವತಂತ್ರ ಹೋರಾಟಗಾರರ ಮನವೊಲಿಸಲು ಅಂದಿನ ಮಹಾರಾಷ್ಟ್ರ ಸರಕಾರ 1953ರಲ್ಲಿ ನಾಗಪುರದಲ್ಲಿ ನಾಗಪುರ ಒಪ್ಪಂದ ಮಾಡಿಕೊಂಡಿತು. ಅದರ ಪ್ರಕಾರ ಅಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಒಪ್ಪಿಕೊಂಡಿತು. ಅವರು ಸುಮಾರು 60 ವರ್ಷಗಳಿಂದ ನಾಗಪುರದ ಥಂಡಿಯಲ್ಲಿ ಅಧಿವೇಶನ ನಡೆಸುತ್ತಿದ್ದಾರೆ. ಅವರು ಏನನ್ನು ಸಾಧಿಸಿದ್ದಾರೆ? 

ಬೆಳಗಾವಿ ೧

ಡಾ. ಡಿ. ಎಂ ನಂಜುಂಡಪ್ಪ ಅವರು ಸೂಚಿಸಿದ್ದರಿಂದ ನಮಗೆ ಬೆಳಗಾವಿಯಲ್ಲಿ ವಿಧಾನಸಭೆ ಕಲಾಪ ನಡೆಸುತ್ತೇವೆ. ಕಳೆದ 19 ವರ್ಷದಲ್ಲಿ 16 ಕಲಾಪ ನಡೆಸಿದ ನಮಗೆ ಸಿಕ್ಕಿದ್ದು ಏನು? 

ಮಹಾರಾಷ್ಟ್ರದವರೂ ಸಹ ಒಂದು ವರ್ಷಕ್ಕೆ ಕೇವಲ ಒಂದು ವಾರ ಕಲಾಪ ನಡೆಸುತ್ತಾರೆ, ನಾವೂ ಅಷ್ಟೇ. ಅವರು ಹಳೆಯ ರಾಜಧಾನಿಯ ವಿಧಾನ ಸಭೆಯಲ್ಲಿಯೇ ಕಲಾಪ ನಡೆಸುತ್ತಾರೆ. ನಾವು ನಾಗಪುರದ ಶಿರಕೆ ಕಂಪನಿಯವರಿಗೆ 450 ಕೋಟಿ ರೂಪಾಯಿ ಕೊಟ್ಟು ಸುವರ್ಣ ವಿಧಾನಸೌಧ ಕಟ್ಟಿದ್ದೇವೆ ಅಷ್ಟೇ. 

ಒಂದು ವರ್ಷಕ್ಕೆ ಕೇವಲ 2.7 ಶೇಕಡಾ ದಿನಗಳು ಉಪಯೋಗ ಆಗುವ ಈ ಚುಕ್ಕಿ- ಚುಕ್ಕಿ ಕಲ್ಲಿನ ಬಿಳಿಯಾನೆ ಕರುನಾಡ ತಾಯಿಗೆ ಬೆನ್ನಿಗೆ ಭಾರವೇ? ಈ ಚರ್ಚೆ ಪ್ರತಿ ವರ್ಷ ಬರುತ್ತದೆ. ಪತ್ರಿಕಾ ಕಚೇರಿಯಲ್ಲಿ ಸುದ್ದಿ ಡಬ್ಬಿ ಖಾಲಿ ಆದಾಗ,`ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕೇ ಬೇಡವೇ?’ ಎನ್ನುವ ಚರ್ಚೆ ಆಗಾಗ ಬರುತ್ತಲ್ಲವೇ, ಹಾಗೆ. 

ಹಿಂದೊಮ್ಮೆ ಕೋವಿಡ್ ಮಹಾಮಾರಿ ಬಂದು ವಕ್ಕರಿಸಿದಾಗ ಅಂದಿನ ಶಾಸಕಿಯೂ, ವೈದ್ಯರೂ, ಆಗಿದ್ದ ಡಾ ಅಂಜಲಿ ನಿಂಬಾಳಕರ ಅವರು ಸುವರ್ಣ ಸೌಧವನ್ನು ಕೋವಿಡ್ ಆಸ್ಪತ್ರೆಯಾಗಿ ಬಳಸಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದ್ದರು. ಅದನ್ನು ಯಾರೂ ಮನ್ನಿಸಲಿಲ್ಲ. ಅಧಿಕಾರದ ಅಂಬಾರಿ ಏರಿದವರು ಕೇವಲ ಶ್ರೀಸಾಮನ್ಯನ ಸಲಹೆಯನ್ನಷ್ಟೇ ಅಲ್ಲ, ಶಾಸಕರ ಸಲಹೆಗಳನ್ನೂ ತಿರಸ್ಕಾರ ಮಾಡಬಲ್ಲರು ಎಂದು ಅದು ಸಿದ್ಧ ಮಾಡಿ ತೋರಿತು. 

ಈಗ ಸೌಧ ಸಿದ್ಧವಾಗಿದೆ, ಕಲಾಪ ಆರಂಭವಾಗಿದೆ, ಸಾಧ್ಯವಾದಷ್ಟೂ ನಿಯಮಿತವಾಗಿ ನಡೆಯುತ್ತಿದೆ. ಹಾಗಾದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ? ಇದಕ್ಕೆ ಸ್ವಲ್ಪ ಹಿಂದಕ್ಕೆ ಹೋಗಬೇಕು. ಎಷ್ಟೆಂದರೆ ಸುಮಾರು 2000 ವರ್ಷದಷ್ಟು. ಪಾರ್ಲಿಮೆಂಟ್ ಅನ್ನುವ ಪದ ಹಳೆಯ ಗ್ರೀಸ್ -ಲ್ಯಾಟಿನ್- ಫ್ರೆಂಚ್ ಮೂಲದ್ದು. ಅದರ ಅರ್ಥ ಮಾತಿನ ಮನೆ ಅಂತ. ಯಾಕೆ ಅಂದರೆ ಗ್ರೀಸ್ ದೇಶದಲ್ಲಿ ಆರಂಭವಾದ ರಾಜಕೀಯ ಸಂಸತ್ತಿನ ಮೂಲ ಉದ್ದೇಶ ವಿವಿಧ ಅಭಿಪ್ರಾಯ ಇದ್ದ ಜನ ಪ್ರತಿನಿಧಿಗಳು ಒಂದು ಕಡೆ ಕೂತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದಾಗಿತ್ತು. ಅದಕ್ಕೆ ಅದರ ಪ್ರಥಮ ಭಾಷಣಕಾರರನ್ನು ಸ್ಪೀಕರ್ ಎಂದು ಕರೆಯಲಾಗುತ್ತಿತ್ತು. ನಮ್ಮಲ್ಲಿ, ಜೋರು ಮಾತಾಡುವರ ಬಾಯಿ ಮುಚ್ಚಿಸುವವರನ್ನು ಹಾಗೆ ಕರೆಯಲಾಗುತ್ತದೆ. 

ನಮ್ಮ ಮೇಲ್ಮನೆ ಹಾಗೂ ಕೆಳಮನೆ ಶಾಸಕರು ಮಾತು ಆಡುವುದಿರಲಿ, ಸದನಕ್ಕೆ ಬರುವುದೂ ಅಪರೂಪವಾಗಿದೆ. ಬೆಳಗಾವಿ ಅಧಿವೇಶನದ ಬಹುದಿನಗಳು ಕಲಾಪಗಳನ್ನು ಕೇವಲ ಕನಿಷ್ಠ ಕೋರಂ ಆಧಾರದ ಮೇಲೆ ನಡೆಸಲಾಗಿದೆ. ಒಂದು ಉದಾಹರಣೆಯಿಂದ ಇದು ಸ್ಪಷ್ಟವಾಗುತ್ತದೆ. ಪ್ರತಿ ಬಾರಿ ಇಲ್ಲಿ ಕಲಾಪ ನಡೆದಾಗ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಒಂದು ಎರಡು ದಿನ ವಿಶೇಷ ಚರ್ಚೆ ಇಡಬೇಕು ಎನ್ನುವ ಬೇಡಿಕೆ ಹುಟ್ಟುತ್ತದೆ. ಸಾಧಾರಣವಾಗಿ ಅದನ್ನು ಕೊನೆಯ ಎರಡು ದಿವಸಗಳಿಗೆ ತಳ್ಳಲಾಗುತ್ತದೆ. ಆದರೆ ಈ ಬಾರಿ ಈ ವಿಶೇಷ ಚರ್ಚೆ ಎರಡನೇ ದಿನಕ್ಕೆ ಆರಂಭ ಆಯಿತು. ಅದರಲ್ಲಿ ಭಾಗವಹಿಸಿದವರು ಎಷ್ಟು ಜನ? ಒಟ್ಟು 297ರಲ್ಲಿ ಬರೋಬ್ಬರಿ 52 ಜನ. ಅಂದರೆ ಆರರಲ್ಲಿ ಒಬ್ಬರು. (ಸದನ ಕಾಲದಲ್ಲಿ ಇಬ್ಬರು ಸದಸ್ಯರು ತೀರಿ ಹೋದರು). ಕೆಲವು ಹಿರಿಯರಂತೂ – ಹಿಂದೆ ದೊಡ್ಡ ದೊಡ್ಡ ಖಾತೆ ನಿರ್ವಹಿಸಿದ ಮಂತ್ರಿಗಳೂ, ವಿಪಕ್ಷದ ನಾಯಕರಾಗಿದ್ದು, ಸದನವನ್ನು ನಡುಗಿಸಿದವರನ್ನು ಸೇರಿದಂತೆ – ಕಣ್ಣಿಗೇ ಬೀಳಲಿಲ್ಲ. ಅವರನ್ನು ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಆದರೆ ಹೆಚ್ಚು ಹಾಜರಾತಿ ಇದ್ದ ಶಾಸಕರಿಗೆ ಅಧ್ಯಕ್ಷರು ಪ್ರಶಸ್ತಿಯ ರೂಪದಲ್ಲಿ ಒಂದು ಟೀ ಕಪ್‌ ಸೆಟ್ ಕೊಡುತ್ತಾರೆ. ಅದನ್ನು ಆ ಶಾಸಕರು ತಮ್ಮ ಡ್ರೈವರ್ ಸಾಹೇಬರಿಗೆ ಕೊಡುತ್ತಾರೆ. ಬಂದವರಿಗೆ ಫರಮಾಯಿಶಿ ಪೆಟ್ಟಿಗೆ, ಬರಲಾರದವರಿಗೆ ಏನೂ ಇಲ್ಲ, ಪಿಷ್ಯಾ.  

ಇನ್ನು ನಮ್ಮಲ್ಲಿ ಮತದಾರರು, ಶಾಸಕರು ಹಾಗೂ ಭಾವೀ ಶಾಸಕರು ಸೇರಿದಂತೆ, ಅನೇಕರಿಗೆ, ಶಾಸಕರ ಕರ್ತವ್ಯದ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲ. ನಾವು ಒಂದು ತಾಲ್ಲೂಕಿನ ಸರದಾರರು, ವಿಜಯನಗರ ಸಾಮ್ರಾಜ್ಯದ ವೀರ ಪುತ್ರರು, ಅರಸು ಮನೆಯ ವಾರಸುದಾರರು ಅಂತೆಲ್ಲ ಅವರು ತಿಳಿದುಕೊಂಡಿರುತ್ತಾರೆ. ಅವರೇನು, ಪ್ರಜೆಗಳು ಸಹ ಅದನ್ನು ನಂಬಿ ಬಿಟ್ಟಿರುತ್ತಾರೆ. ಅವರ ಪರಾಕ್ರಮ ಶಾಸನ ಸಭೆಗಿಂತ ಜಿಲ್ಲಾ -ತಾಲ್ಲೂಕು ಮಟ್ಟದ ಕೇಡಿಪಿ ಸಭೆಗಳಲ್ಲಿ ಕಿರಿಯ ಹಂತದ ಅಧಿಕಾರಿಗಳನ್ನು ಗುರಿಯಾಗಿಸಿ ಕೂಗಾಡುವುದರಲ್ಲಿ, ಅವರಿಗೆ ಸಾರ್ವಜನಿಕವಾಗಿ ಜೋರು ಮಾಡಿ ಖಾಸಗಿಯಾಗಿ ತಮ್ಮ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಎದ್ದು ಕಾಣುತ್ತದೆ. 

ಸಂಸತ್ತು ಅಥವಾ ವಿಧಾನಸಭೆ ಮಾತಿನ ಮನೆ ಅಂತ ಆದರೆ, ಭಿನಾಭಿಪ್ರಾಯಗಳನ್ನು ಸರಿ ಮಾಡಿ ಜನಾಡಳಿತದ ನೀತಿ- ನಿಯಮ- ಕಾನೂನು -ಕಟ್ಟಳೆಗಳನ್ನು ಜಾರಿಗೆ ತರಬೇಕು. ಈಗ ಹಾಲಿ ಇರುವ ಕಾನೂನು -ನಿಯಮಗಳು ಸರಿ ಇಲ್ಲದಿದ್ದಲ್ಲಿ ಅವುಗಳನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು. 

ಇಲ್ಲಿ ಒಂದೇ ಒಂದು ಉದಾಹರಣೆ ನೋಡೋಣ. ಮೊನ್ನೆ ಕೆಲ ಶಾಸಕರು ಬಡವರಿಂದ ಪಡಿತರ ಚೀಟಿ ಕಸಿದು ಕೊಳ್ಳಲಾಗುತ್ತಿದೆ, ಅರ್ಹರಿಗೂ ಸಿಕ್ಕುತ್ತಿಲ್ಲ, ಇತ್ಯಾದಿ ದೂರು ನೀಡಿದರು. ಆಹಾರ ಸಚಿವರು ಇದಕ್ಕೆ ನಾವು ಕಾರಣ ಅಲ್ಲ, ಕೇಂದ್ರ ಸರಕಾರ ವಿಧಿಸಿದ ನಿಯಮಗಳು ಕಾರಣ. ಅವು ತುಂಬ ಹಳೆಯವು ಹಾಗೂ ಅಪ್ರಯೋಗಿಕ. ಉದಾಹರಣೆಗೆ ಒಂದು ತಿಂಗಳಿಗೆ 10 ಸಾವಿರ ರೂಪಾಯಿ ಗಳಿಸುವವರು ಕೇಂದ್ರದ ಪ್ರಕಾರ ಬಡವರಲ್ಲ, ಅಂದ್ರು. ಅದಕ್ಕೆ ಕೇಂದ್ರದಲ್ಲಿ ಆಳುವ ಪಕ್ಷವಾದ ಬಿಜೆಪಿಯ ಕೆಲ ಸದಸ್ಯರು ದನಿಗೂಡಿಸಿದರು. ಹೌದು. ನಾಲ್ಕು ಚಕ್ರದ ವಾಹನ ಇರಬಾರದು ಅಂತ ಕಾನೂನು ಇದೆಯಂತೆ, ಅದರ ಅಡಿಯಲ್ಲಿ ಹೊಟ್ಟೆಪಾಡಿಗಾಗಿ ಟ್ಯಾಕ್ಸಿ ಓಡಿಸುವ ಬಡವರ ಚೀಟಿಗಳನ್ನೂ ಹಿಂದಕ್ಕೆ ಪಡೆಯಲಾಗಿದೆ. ಒಂದು ರಾಜ್ಯದಲ್ಲಿ ಆದಾಯ ಹೆಚ್ಚು ಇರುತ್ತದೆ, ಇನ್ನು ಕೆಲವು ಕಡೆ ಕಮ್ಮಿ ಇರುತ್ತದೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿದರೆ ಹೇಗೆ? ಅಂತ ಎಲ್ಲರೂ ಕೂಡಿ ಕೆಲ ಕಾಲ ಗೋಳಾಡಿದರು. ಆದರೆ, ಅದನ್ನು ಸರಿ ಪಡಿಸಲಿಕ್ಕೆ ಏನು ಮಾಡಬೇಕು? ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಬರೆಯಬೇಕೆ? ಸದನದಲ್ಲಿ ಒಂದು ಠರಾವು ಪಾಸು ಮಾಡಬೇಕೆ? ಕರ್ನಾಟಕದ ಬಡವರ ಪರ ಕಾನೂನು ರೂಪಿಸಲು ಸಂಸತ್ತು ಸದಸ್ಯರ ಮನವೊಲಿಸಲು ಏನು ಮಾಡಬೇಕು ಅಂತ ಚರ್ಚೆ ಆಗಲಿಲ್ಲ. ಎಲ್ಲರೂ ಕಾಟಾಚಾರಕ್ಕೆ ಮಾತಾಡಿ ಸುಮ್ಮನೇ ಆಗಿ ಬಿಟ್ಟರು. ಮುಂದಿನ ವಿಷಯಕ್ಕೆ ಜಾರಿದರು. 

ತಾನು ಕಲಾಪಕ್ಕೆ ಸರಿಯಾಗಿ ಹಾಜರು ಇರಬೇಕು, ಚರ್ಚೆಯಲ್ಲಿ ಭಾಗವಹಿಸಬೇಕು. ನನ್ನ ಕ್ಷೇತ್ರದ ಜನರ ಪರವಾಗಿ ಮಾತಾಡಬೇಕು, ಅಂತ ಅವರಿಗೆ ಅನ್ನಿಸುವುದಿಲ್ಲವೇ? ಮಾತು ಆಡದಿದ್ದರೆ ಹೋಗಲಿ, ಇತರರು ಮಾತು ಆಡುವುದನ್ನು ಕೇಳಿಸಿಕೊಳ್ಳಬೇಕು ಅಂತಾದ್ರೂ ಅನ್ನಿಸುವುದಿಲ್ಲವೇ? ಅವರಿಗೆ ಕನಿಷ್ಠ ಜವಾಬುದಾರಿಯೂ ಇಲ್ಲವೇ? ಹೇಗೆ ಇರಲು ಸಾಧ್ಯ? ನಮ್ಮ ಸಕಲ ಗುಣ- ಅವಗುಣಗಳನ್ನು ಪ್ರತಿಫಲಿಸುವ ನಮ್ಮಿಂದ ಆಯ್ಕೆಯ ಮುದ್ರೆ ಒತ್ತಿಸಿಕೊಂಡು ಹೋದ ನಮ್ಮ ಪ್ರತಿನಿಧಿಗಳು ಅಲ್ಲವೇ ಅವರು? ನಾವು ಜವಾಬುದಾರರಾಗಿ ಇದ್ದರಷ್ಟೇ ಅವರೂ ಜವಾಬುದಾರರಾಗಿರಬಲ್ಲರು, ಅಲ್ಲವೇ? 

ಅಧಿವೇಶನಕ್ಕೆ ಬೆಳಗಾವಿಗೆ ವಿಮಾನದಲ್ಲಿ ಬರುತ್ತಿದ್ದ ಒಬ್ಬ ಹಿರಿಯ ಅಧಿಕಾರಿಗೆ ಒಬ್ಬ ವ್ಯಾಪಾರಸ್ಥರು ಭೇಟಿಯಾಗಿದ್ದರಂತೆ. ಪರಿಚಯ ಆದ ಮೇಲೆ ಅವರು ಈ ಅಧಿಕಾರಿಯನ್ನು ಕೇಳಿದರಂತೆ. ನೀವೆಲ್ಲ ಯಾಕೆ ಬೆಳಗಾವಿಗೆ ಬರುತ್ತೀರಿ? ಸುಮ್ಮನೇ ದಂಡ. ಒಂದು ತಿಂಗಳು ನಮಗೆ ಹೋಟೆಲು- ಕಲ್ಯಾಣ ಮಂಟಪ ಬಾಡಿಗೆಗೆ ಸಿಗೋದಿಲ್ಲ, ರಸ್ತೆಯಲ್ಲಿ ವಿಪರೀತ ಟ್ರಾಫಿಕ್, ಮಂತ್ರಿಗಳು- ಅಧಿಕಾರಿಗಳು ದಂಡು ಕಟ್ಟಿಕೊಂಡು ಬರುವುದರಿಂದ ಇಲ್ಲಿನ ಸ್ಥಳೀಯ ಅಧಿಕಾರಿಗಳು ಎಲ್ಲ ಬಿಜೀ. ಯಾವ ಕಚೇರಿಯಲ್ಲೂ ಯಾವ ಕೆಲಸಗಳೂ ಆಗುವುದಿಲ್ಲ. 

ಅಷ್ಟೇ ಅಲ್ಲ, “ನಾವು ಬೆಳಗಾವಿಯವರೆಲ್ಲ ಸ್ವಲ್ಪ ದುಡ್ಡು ಕೂಡಿಸಿ ಸರಕಾರಕ್ಕೆ ಕೊಟ್ಟರೆ ಈ ವಾರ್ಷಿಕ ಸರ್ಕಸ್ ಅನ್ನು ಬೇರೆ ಜಿಲ್ಲೆಗೆ ತೆಗೆದುಕೊಂಡು ಹೋಗಬಹುದೇ?’’ ಅಂತ ಕೇಳಿದರಂತೆ. 

ಇದನ್ನೂ ಓದಿ ಬೀದಿಗಿಳಿದ ‘ಬಂಗಾಳದ ಹುಲಿ’: ಮೋದಿ-ಶಾಗೆ ​’ಪೆನ್ ಡ್ರೈವ್’ ಪಂಥಾಹ್ವಾನ ನೀಡಿದ ದೀದಿ

ಕೇಳದೇ ಕೊಟ್ಟದ್ದು ಕವಡೆ ಕಿಮ್ಮತ್ತಿನದ್ದು ಎನ್ನುವ ಮಾತು ಇದೆ. ನಮಗೆ ಪ್ರಜಾಪ್ರಭುತ್ವದ ಮೌಲ್ಯ ಗೊತ್ತಿಲ್ಲ. ಅದನ್ನು ಯಾಕೆ ಕಾಪಿಟ್ಟುಕೊಳ್ಳಬೇಕು ಅನ್ನುವುದೂ ಇಲ್ಲ. ಗುರೂಪದೇಶದಲ್ಲಿ ಇಬ್ಬರು ಬಾಲ್ಯ ಸ್ನೇಹಿತರ ಒಂದು ಕತೆ ಇದೆ. ಅದರಲ್ಲಿ ಒಬ್ಬನಿಗೆ ತಂದೆ- ತಾಯಿ ಇಲ್ಲ. ಇನ್ನೊಬ್ಬ ತನ್ನ ಪಾಲಕರ ಬಗ್ಗೆ ಹಗಲೆಲ್ಲಾ ದೂರು ಹೇಳುತ್ತಾ ಇರುತ್ತಾನೆ. ಅವರು ಬೈದರು, ಜಗಳ ಮಾಡಿದರು, ಸರಿಯಾಗಿ ಅಡಿಗೆ ಮಾಡಲಿಲ್ಲ, ಕೆಲಸಕ್ಕೆ ಹೋಗಲಿಲ್ಲ, ನಿಶಕ್ತಿ ಅಂತ ಸುಮ್ಮನೆ ಗೊಣಗುತ್ತಾರೆ ಇತ್ಯಾದಿ. ಇನ್ನೊಬ್ಬ ತನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ:`ಅವನಿಗೆ ಎಲ್ಲವೂ ಇದೆ. ಅದರ ಬೆಲೆ ಗೊತ್ತಿಲ್ಲ. ಕಳೆದುಕೊಂಡವರಿಗೆ ಮಾತ್ರ ಅದರ ಮೌಲ್ಯ ಗೊತ್ತು,’ ಅಂತ. ನಮ್ಮ ಸಮಾಜದ ರಥ ನಿಧಾನವಾಗಿಯಾದರೂ ಸಾಗುತ್ತಿದೆ ಅಂದರೆ ಅದಕ್ಕೆ ಕಾರಣ ಪ್ರಜಾಸತ್ತೆ ಅನ್ನುವ ಪರಿಕಲ್ಪನೆ ನಮಗೆ ಇಲ್ಲ. ಹೀಗಾಗಿ, ನಮ್ಮಿಂದ ಆರಿಸಿ ಹೋದ ನಮ್ಮವರಿಗೆ ಅದು ಇಲ್ಲ. ಇದು ಅತಿ ಸರಳ, ಅಲ್ಲವೇ?  

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...