ಇಡೀ ಚಿತ್ರದಲ್ಲಿ ಕೆಂಪು ಬಲೂನ್ ಒಂದು ಪಾತ್ರವಾಗಿ ವೀಕ್ಷಕರನ್ನು ಮೋಡಿ ಮಾಡುತ್ತದೆ. ಸಿನಿಮಾ ತಂತ್ರಜ್ಞಾನ ಅಷ್ಟೇನೂ ಬೆಳೆದಿರದ 1950ರ ದಶಕದಲ್ಲಿ ಒಂದು ಬಲೂನಿನ ಚಲನವಲನವನ್ನು ಆಕರ್ಷಕವಾಗಿ, ಗಮನೀಯವಾಗಿ ಸೆರೆಹಿಡಿದಿರುವುದು ಅಚ್ಚರಿಯ ವಿಷಯ.
ಮಕ್ಕಳ ಚಲನಚಿತ್ರಗಳು ಮಕ್ಕಳಿಗಷ್ಟೇ ಸೀಮಿತವಾಗಿರುವವು ಇರುತ್ತವೆ. ಆದರೆ ವಯಸ್ಕರಿಗೂ ತಲುಪುವಂತಹ ಆಶಯಗಳುಳ್ಳ ಮಕ್ಕಳ ಚಲನಚಿತ್ರಗಳು ಬಂದಿವೆ. ಫೀಚರ್, ಸಾಕ್ಷ್ಯ ಮತ್ತು ಕಿರುಚಿತ್ರಗಳು ಈ ಜಾನ್ರ್ (Genre)ನಡಿ ನಿರ್ಮಾಣಗೊಂಡಿವೆ.
ಅಂತಹ ಒಂದು ಮಕ್ಕಳ ಚಲನಚಿತ್ರ ʼ ದಿ ರೆಡ್ ಬಲೂನ್ ʼ(1956). ಇದರ ಕಾಲಾವಧಿ 34 ನಿಮಿಷಗಳು. ಆಲ್ಬರ್ಟ್ ಲಿಮೊರಿಸ್ ಇದರ ನಿರ್ದೇಶಕರು, ನಿರ್ಮಾಪಕರು ಹಾಗೂ ಕಥಾರಚನಕಾರರು.
ಆಲ್ಬರ್ಟ್ ಲಮೊರಿಸ್‌ಗೆ ಹಾರಾಡುವ ವಸ್ತುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಹವ್ಯಾಸವಿತ್ತು. ಈ ನಿಟ್ಟಿನಲ್ಲಿ ಅವರು ಹೆಲಿಕಾಪ್ಟರ್‌ನಲ್ಲಿ ಸ್ಟೆಡಿ ಕ್ಯಾಮೆರಾವನ್ನು ಅಳವಡಿಸಿ ʼಹೆಲಿವಿಷನ್ ʼ (Helivision) ಎಂಬ ವ್ಯವಸ್ಥೆಯನ್ನು ಹುಟ್ಟುಹಾಕಿದರು! ಅಲ್ಲದೆ ಅವರು ರಾಜತಾಂತ್ರಿಕೆಗೆ ಸಂಬಂಧಿಸಿದ ಆಕ್ರಮಣ, ಸಂಘರ್ಷ ಮತ್ತು ಪರಿಹಾರಗಳ ʼರಿಸ್ಕ್ʼ (Risk) ಎಂಬ ಸ್ಟ್ರ್ಯಾಟಜಿ ಬೋರ್ಡ್ ಗೇಮನ್ನು 1957ರಲ್ಲಿ ರೂಪಿಸಿದರು. ಇದರಲ್ಲಿ ಎರಡರಿಂದ ಆರು ಆಟಗಾರರು ಇರುತ್ತಿದ್ದರು. ಇದು ಬೋರ್ಡ್ ಗೇಮ್ಸ್‌ಗಳ ಚರಿತ್ರೆಯಲ್ಲೇ ಉನ್ನತ ಸ್ಥಾನವನ್ನು ಪಡೆದಿದೆ ಹಾಗೂ ಇತರ ಇಂತಹ ಆಟಗಳಿಗೆ ಸ್ಪೂರ್ತಿಯನ್ನು ನೀಡಿತು. ಇಂತಹ 1950-60 ದಶಕದ ಆಟಗಳು ಮುನ್ನೆಲೆಗೆ ಬಂದದ್ದು ಅಮರಿಕಾ ಮತ್ತು ಸೋವಿಯತ್ ಯೂನಿಯನ್ ನಡುವೆ ಜರುಗುತ್ತಿದ್ದ ಶೀತಲ ಸಮರ(Cold War)ದ ಸಮಯದಲ್ಲಿ ಎಂಬುದು ಗಮನೀಯ ಸಂಗತಿ.
ʼದಿ ರೆಡ್ ಬಲೂನ್ ʼನ ಪ್ರಾರಂಭದ ದೃಶ್ಯದಲ್ಲಿ ಪ್ಯಾಸ್ಕಲ್ ಎಂಬ ಸುಮಾರು ಆರು ವರ್ಷದ ಹುಡುಗ (ಈ ಪಾತ್ರವನ್ನು ನಿರ್ದೇಶಕನ ಮಗನೇ ಮಾಡಿದ್ದಾನೆ) ಪ್ಯಾರಿಸ್‌ನ ಒಂದು ದುಡಿಯುವ ವರ್ಗದ ಪ್ರದೇಶದಲ್ಲಿ ಶಾಲೆಯನ್ನು ತಲುಪಲು ನಡೆದುಕೊಂಡು ಹೋಗುತ್ತಿರುತ್ತಾನೆ. ಕ್ಯಾಮೆರಾ ಆ ಪ್ರದೇಶದ ತುಂಬ ಸಾಮಾನ್ಯವೆನಿಸುವ ಕಟ್ಟಡಗಳು ಮತ್ತು ಮಾರ್ಗವನ್ನು ಸೆರೆಹಿಡಿಯುತ್ತದೆ.
ಮಾರ್ಗ ಮಧ್ಯದಲ್ಲಿ ಪ್ಯಾಸ್ಕಲ್ ಒಂದು ಕಟ್ಟಡದ ರೈಲಿಂಗ್‌ನಲ್ಲಿ ಹೀಲಿಯಂ ಗ್ಯಾಸ್‌ನಿಂದ ತುಂಬಿದ ಕೆಂಪು ಬಲೂನನ್ನು ಕಾಣುತ್ತಾನೆ. ಯಾವ ಮಗು ಬಲೂನ್‌ಗೆ ಮಾರುಹೋಗುವುದಿಲ್ಲ? ಪ್ಯಾಸ್ಕಲ್ ಕೂಡ ಅದನ್ನು ಹೊಂದಬೇಕೆಂಬ ತವಕದಿಂದ ರೈಲಿಂಗನ್ನು ಹತ್ತಿ ಅದನ್ನು ತನ್ನದಾಗಿಸಿಕೊಳ್ಳುತ್ತಾನೆ! ಅವನು ನಿತ್ಯ ಪಯಣಿಸುವ ಬಸ್‌ನ ಕಂಡಕ್ಟರ್ ಬಲೂನನ್ನು ಹೊಂದಿರುವುದಕ್ಕಾಗಿ ಪ್ರವೇಶವನ್ನು ನಿರಾಕರಿಸುತ್ತಾನೆ. ಹೀಗಾಗಿ ಪ್ಯಾಸ್ಕಲ್ ಓಡಿಕೊಂಡೇ ತನ್ನ ಶಾಲೆಯನ್ನು ತಲುಪುತ್ತಾನೆ.
ಶಾಲೆಯಿಂದ ವಾಪಸ್ಸು ಬರುವಾಗ, ಅವನು ಮಳೆಯಿಂದ ತನ್ನ ಬಲೂನನ್ನು ರಕ್ಷಿಸಲು ದಾರಿಹೋಕರ ಕೊಡೆಗಳಲ್ಲಿ ತೂರಿಕೊಂಡು, ಮನೆಯನ್ನು ತಲುಪುತ್ತಾನೆ. ಅವನ ಅಜ್ಜಿ ಬಲೂನನ್ನು ಬಾಲ್ಕನಿಯಿಂದ ಎಸೆಯುತ್ತಾಳೆ. ಆದರೆ ಆ ಬಲೂನು ಅಲ್ಲೇ ಒಲಾಡುತ್ತಿರುತ್ತದೆ. ಪ್ಯಾಸ್ಕಲ್ ಅದನ್ನು ಪುನಃ ತನ್ನ ವಶಕ್ಕೆ ಪಡೆಯುತ್ತಾನೆ.
ಹೀಗೆ ಪ್ಯಾಸ್ಕಲ್ ಮತ್ತು ಬಲೂನ್ ನಡುವೆ ಸ್ನೇಹ ಶುರುವಾಗುತ್ತದೆ! ಅದು ಅವನ ಜೊತೆ ಕಣ್ಣು ಮುಚ್ಚಾಲೆ ಆಟವಾಡುತ್ತದೆ, ಅಣತಿಯನ್ಜು ಪಾಲಿಸುತ್ತದೆ ಮತ್ತು ಬಸ್‌ನಲ್ಲಿ ಪಯಣಿಸುವಾಗ ಅವನ ಹಿಂದೆಯೇ ಬರುತ್ತದೆ! ಒಮ್ಮೆ ಅವನು ನಡೆದು ಬರುತ್ತಿರುವಾಗ, ಒಂದು ಹುಡುಗಿಯ ಕೈನಲ್ಲಿದ್ದ ನೀಲಿ ಬಲೂನಿನತ್ತ ಕೆಂಪು ಬಲೂನ್ ಸೆಳೆಯಲ್ಪಡುತ್ತದೆ! ಈ ಹುಡುಗಿಯ ಪಾತ್ರವನ್ನು ನಿರ್ದೇಶಕರ ಮಗಳೇ ಮಾಡಿದ್ದಾಳೆ.

ನಂತರ ಕೆಲವು ಪುಂಡ ಮಕ್ಕಳು ಆ ಕೆಂಪು ಬಲೂನನ್ನು ಹೊಂದಲು ಹರಸಾಹಸ ಪಡುತ್ತಾರೆ. ಈ ಘಟ್ಟದಲ್ಲಿ ಓಡುತ್ತಿರುವ ಪ್ಯಾಸ್ಕಲ್‌ನನ್ನು ಹಿಂಬಾಲಿಸುವ ಹುಡುಗರ ಸುಮಾರು ಮೂರು ನಿಮಿಷಗಳ ಲಾಂಗ್ ಟೇಕಿದೆ.
ಕೊನೆಯಲ್ಲಿ ಆ ಕೆಂಪು ಬಲೂನಿನ ಮೇಲೆ ಹುಡುಗನೊಬ್ಬ ಎಸೆದ ಕವಣೆ ಕಲ್ಲು ತನ್ನ ಗುರಿಯನ್ನು ತಲುಪಿ ಅದು ನೆಲಕಚ್ಚುತ್ತದೆ. ಆಗ ಒಂದು ಬೂಟ್ ಬಲೂನನ್ನು ಹೊಸಕಿಹಾಕುವುದನ್ನು ವೀಕ್ಷಕರು ನೋಡುತ್ತಾರೆ. ಇದು ಸುಮಾರು ಒಂದೂವರೆ ನಿಮಿಷಗಳ ಅವಧಿಯ ಟೇಕ್‌ನಲ್ಲಿ(ಕ್ಲೋಸ್ ಅಪ್ ಸಹಿತ) ಸೆರೆಹಿಡಿಯಲಾಗಿದೆ.
ಅಂತಿಮ ದೃಶ್ಯದಲ್ಲಿ ಈ ಕಿರುಚಿತ್ರದ ಕ್ಲ್ಯೆಮ್ಯಾಕ್ಸ್ ವೀಕ್ಷಕರಲ್ಲಿ ಅನೇಕ ಭಾವಗಳನ್ನು ಹುಟ್ಟಿಸುತ್ತ, ತಟ್ಟುತ್ತದೆ.
ಈ ಕಿರುಚಿತ್ರದ ಬಗೆಗಿನ ಈ ಬರಹಗಾರನ ಅನಿಸಿಕೆಗಳು ಹೀಗಿವೆ:
- ಇಡೀ ಚಿತ್ರದಲ್ಲಿ ಕೆಂಪು ಬಲೂನ್ ಒಂದು ಪಾತ್ರವಾಗಿ ವೀಕ್ಷಕರ ಮೇಲೆ ಮೋಡಿ ಹಾಕುತ್ತದೆ. ಸಿನಿಮಾ ತಂತ್ರಜ್ಞಾನ ಅಷ್ಟೇನೂ ಬೆಳೆದಿರದ 1950ರ ದಶಕದಲ್ಲಿ ಒಂದು ಬಲೂನಿನ ಚಲನವಲನವನ್ನು ಆಕರ್ಷಕವಾಗಿ, ಗಮನೀಯವಾಗಿ ಸೆರೆಹಿಡಿದಿರುವುದು ಅಚ್ಚರಿಯ ವಿಷಯ.
2) ಕೆಂಪು ಬಲೂನ್ ಸಂತಸ ಹಾಗೂ ಸ್ನೇಹವನ್ನು ಸೂಚಿಸುತ್ತದೆ.
3) ಈ ಕಿರುಚಿತ್ರವನ್ನು ಮಕ್ಕಳು ಮತ್ತು ವಯಸ್ಕರು ಹೇಗೆ ದೃಷ್ಟಿಸುತ್ತಾರೆ ಎಂಬುದು ಕುತೂಹಲಕಾರಿ ಪ್ರಶ್ನೆಯೇ ಸರಿ. ವಯಸ್ಕ ವೀಕ್ಷಕರು ಕೆಂಪು ಬಲೂನಿನ ಪಾತ್ರ ಕಟ್ಟೋಣಕ್ಕೆ ಸಂಬಂಧಿಸಿದಂತೆ ಅನೇಕ ಅರ್ಥಗಳನ್ನು ನೀಡಬಹುದು. ಮಕ್ಕಳು ತಮ್ಮ ಬಾಲ್ಯ ಸಹಜ ಮನೋಭಾವದಿಂದ ಗ್ರಹಿಸಬಹುದು.
4) ಈ ಕಿರುಚಿತ್ರದಲ್ಲಿ ಕೆಂಪು ಬಲೂನಿಗೆ ಸಂಬಂಧಿಸಿದಂತೆ ವಯಸ್ಕರು ನಡೆದುಕೊಳ್ಳುವ ಬಗೆಗೆ ಒಂದರ್ಥದಲ್ಲಿ ಅವರ ಸಂಕುಚಿತ ದೃಷ್ಟಿಕೋನವನ್ನು ಅನಾವರಣಗೊಳಿಸುತ್ತದೆ.
5) ಮಕ್ಕಳು, ಪುಂಡರು ತಮ್ಮ ವಯೋಸಹಜ ನಡವಳಿಕೆಯಿಂದ ಬಲೂನನ್ನು ಹೊಂದಲು ಆತುರದಿಂದ ಇರುತ್ತಾರೆ. ಒಂದಿಷ್ಟು ಪುಂಡಾಟಿಕೆ ನಡೆಸಿದರೂ ಅದು ದೊಡ್ಡ ಪ್ರಮಾದ ಎಂದೆನಿಸುವುದಿಲ್ಲ.
6) ಈ ಕಿರುಚಿತ್ರದ ಅಂತಿಮ ದೃಶ್ಯ ವೀಕ್ಷಕರಲ್ಲಿ ಒಂದು ಬೆಚ್ಚನೆಯ ಭರವಸೆಯ ಭಾವವನ್ನು ಮೂಡಿಸುವುದರಲ್ಲಿ ಸಫಲವಾಗುತ್ತದೆ. ಇದು ಚಿತ್ರದ ಆಪ್ತವೆನಿಸುವ ಭಾಗದ ಜೊತೆಗೆ ಕಲ್ಪನೆ ಮತ್ತು ಫ್ಯಾಂಟಸಿಯ ಮೂಲಕ ಸತ್ಯವನ್ನು ಕೂಡ ಸೃಷ್ಟಿಸುತ್ತದೆ. ಇಡೀ ಕಿರುಚಿತ್ರದಲ್ಲಿ ಪ್ಯಾರಿಸ್‌ನ ನಿತ್ಯದ ವಾಸ್ತವಿಕತೆಯ ಜೊತೆ ಮಕ್ಕಳ ಕಲ್ಪನೆಗಳು ʼ ಕಾವ್ಯಾತ್ಮಕವಾಸ್ತವವಾದʼ(Poetic Realism)ದ ರೂಪವನ್ನು ಪಡೆಯುತ್ತವೆ.

ಹೀಗೆ ಒಂದು ಸರಳ ಮಕ್ಕಳ ಕಿರುಚಿತ್ರ ಎಲ್ಲ ವಯಸ್ಸಿನ ವೀಕ್ಷಕರಲ್ಲಿ ಅನೇಕ ತೆರನಾದ ವ್ಯಾಖ್ಯಾನಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ. ಇದು 1956ರ ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ Palme d Or ಪ್ರಶಸ್ತಿಯನ್ನು ಪಡೆದುಕೊಂಡಿತು. ಆ ವರ್ಷ ಫ್ರಾನ್ಸಿನ ಹೆಸರುವಾಸಿ ನಿರ್ದೇಶಕ ಫೆಡ್ರಿಕೊ ಫೆಲಿನಿಯ ʼಲಾಸ್ಟ್ರಾಡಾʼ (La Strada) ಫಿಲ್ಮನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಪಡೆದದ್ದು ಈ ಕಿರುಚಿತ್ರದ ಹೆಗ್ಗಳಿಕೆ ಎಂದು ಹೇಳಬಹುದು. ಅಲ್ಲದೆ ʼಈ ರೆಡ್ ಬಲೂನ್ ʼ ಮೂಲ ಚಿತ್ರಕಥೆಗಾಗಿ 1956ರ ಆಸ್ಕರ್ ಪ್ರಶಸ್ತಿಗೆ ಭಾಜನವಾಯಿತು.
ಈ ಕಿರುಚಿತ್ರ ಯೂಟ್ಯೂಬ್‌ನಲ್ಲಿ ವೀಕ್ಷಿಸಲು ಲಭ್ಯವಿದೆ. ಆದರೆ ಇದರ ಸಬ್‌ಟೈಟಲ್ಸ್ ಫ್ರೆಂಚ್ ಭಾಷೆಯಲ್ಲಿದೆ. ಈ ಅಂಶ ವೀಕ್ಷಣೆಗೆ ಅಡ್ಡಿಯಾಗುವುದಿಲ್ಲ! ಏಕೆಂದರೆ ಒಂದು ಮೂಖಿ ಸಿನಿಮಾವಾಗಿ ವೀಕ್ಷಿಸಿದರೂ ಇದರ ಸಾರವನ್ನು ವೀಕ್ಷಕರು ಅನುಭವಿಸಬಹುದು!

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ




