ಕಾಲಮಾನ | ಜೇನ್‌ ಗುಡಾಲ್‌ ಮತ್ತು ಚಿಂಪಾಂಜಿಗಳ ಲೋಕದೊಳಗೆ ಒಂದು ಸುತ್ತು

Date:

1934ರಲ್ಲಿ ಲಂಡನ್‌ನಲ್ಲಿ ಜನಿಸಿದ ಜೇನ್ ಗುಡಾಲ್‌ಗೆ ಒಂದು ವರ್ಷವಾದಾಗ ಆಕೆಯ ತಂದೆ ಒಂದು ಚಿಂಪಾಂಜಿ ಗೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟರು. ಲಂಡನ್‌ನ ಮೃಗಾಲಯದಲ್ಲಿ ಮೊದಲ ಚಿಂಪಾಂಜಿ ಮರಿ ಹುಟ್ಟಿದ್ದಕ್ಕೆ ಈ ಗೊಂಬೆಯನ್ನು ತಯಾರು ಮಾಡಲಾಗಿತ್ತು. ಇಷ್ಟು ಚಿಕ್ಕ ವಯಸ್ಸಿನ ಮಗು ಇಂತಹ ಗೊಂಬೆಯಿಂದ ಗಾಬರಿಯಾಗಬಹುದೆಂಬ ನಿರೀಕ್ಷೆಯಿಂದ ಗುಡಾಲ್‌ ಕುಟುಂಬದ ಮಿತ್ರರು ಆತಂಕಗೊಂಡಿದ್ದರು. ಆದರೆ, ಜೇನ್‌ಗೆ ಈ ಚಿಂಪಾಂಜಿ ಗೊಂಬೆ ಆಪ್ತ ಸಂಗಾತಿಯಾಯಿತು…

ಇದೇ ಅಕ್ಟೋಬರ್‌ 1ರಂದು ಬ್ರಿಟಿಷ್‌ ಮೂಲದ ಪ್ರಾಣಿವರ್ತನಾಶಾಸ್ತ್ರಜ್ಞೆ, ಅಗ್ರಸ್ತನಿತಜ್ಞೆ (Primatologist), ಮಾನವಶಾಸ್ತ್ರಜ್ಞೆ ಹಾಗೂ ವಿಶ್ವಸಂಸ್ಥೆಯ ಶಾಂತಿ ರಾಯಭಾರಿ, ಚಿಂಪಾಂಜಿಗಳ ಬಗೆಗೆ ಸುಮಾರು ಆರು ದಶಕಗಳ ಕಾಲ ಅಪೂರ್ವ ಅಧ್ಯಯನ ಹಾಗೂ ಕ್ಷೇತ್ರಕಾರ್ಯವನ್ನು ನಡೆಸಿದ ಜೇನ್‌ ಗುಡಾಲ್‌ ಅಸುನೀಗಿದರು. ಅವರಿಗೆ 91 ವರ್ಷವಾಗಿತ್ತು. ‌

1934ರಲ್ಲಿ ಲಂಡನ್‌ನಲ್ಲಿ ಜೇನ್ ಗುಡಾಲ್‌ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದರು. ಇವರು ಒಂದು ವರ್ಷದ ಮಗುವಾಗಿದ್ದಾಗ ಆಕೆಯ ತಂದೆ ಜುಬಿಲಿ ಒಂದು ಚಿಂಪಾಂಜಿ ಗೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟರು. ಲಂಡನ್‌ನ ಮೃಗಾಲಯದಲ್ಲಿ ಮೊದಲ ಚಿಂಪಾಂಜಿ ಮರಿ ಹುಟ್ಟಿದ್ದಕ್ಕೆ ಈ ಗೊಂಬೆಯನ್ನು ತಯಾರು ಮಾಡಲಾಗಿತ್ತು. ಇಷ್ಟು ಚಿಕ್ಕ ವಯಸ್ಸಿನ ಮಗು ಇಂತಹ ಗೊಂಬೆಯಿಂದ ಗಾಬರಿಯಾಗಬಹುದೆಂಬ ನಿರೀಕ್ಷೆಯಿಂದ ಗುಡಾಲ್‌ ಕುಟುಂಬದ ಮಿತ್ರರು ಆತಂಕಗೊಂಡಿದ್ದರು. ಆದರೆ, ಜೇನ್‌ಗೆ ಈ ಚಿಂಪಾಂಜಿ ಗೊಂಬೆ ಆಪ್ತ ಸಂಗಾತಿಯಾಯಿತು. ಮುಂದೆ ಆಕೆ ತನ್ನ ಆಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಚಿಂಪಾಂಜಿಗಳ ಲೋಕದ ವಿಸ್ಮಯಗಳನ್ನು ಜಗತ್ತಿಗೆ ತೆರೆದಿಡುತ್ತಾಳೆ ಎಂಬುದನ್ನು ಅವರಾರೂ ಊಹಿಸಿರಲಾರರು! ಚಿಕ್ಕಂದಿನಲ್ಲೇ ಅಕೆಗೆ ವಿವಿಧ ಪ್ರಾಣಿಗಳ ಬಗೆಗೆ ಕುತೂಹಲ ಮತ್ತು ಪ್ರೀತಿ ಅಂಕುರವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡನೇ ವಿಶ್ವ ಸಮರದ ಸಮಯದಲ್ಲಿ ಜೇನ್‌ ತನ್ನ ಅಜ್ಜಿಯ ಮನೆಯಲ್ಲಿ ವಾಸಿಸಬೇಕಾದ ಸಂದರ್ಭ ಸೃಷ್ಟಿಯಾಯಿತು. ಅಲ್ಲಿ ತುಂಬ ಪುಸ್ತಕಗಳಿದ್ದವು. ʼದಿ ಜಂಗಲ್‌ ಬುಕ್‌ʼ, ಎಡ್ಗರ್‌ ಬರೋ ಅವರ ʼಟಾರ್ಝನ್‌ʼ ಪುಸ್ತಕಗಳು, ʼದಿ ವಿಂಡ್‌ ಇನ್ ದಿ ವಿಲ್ಲೋಸ್‌ʼ ʼಅಟ್‌ ದಿ ಬ್ಯಾಕ್‌ ಆಫ್‌ ದಿ ನಾರ್ತ್‌ ವಿಂಡ್‌ ʼ, ʼದಿ ಸ್ಟೋರಿ ಆಫ್‌ ಡಾ. ಡುಲಿಟಲ್‌ʼ ಮುಂತಾದ ಪುಸ್ತಕಗಳು ಆಕೆಯನ್ನು ಆಕರ್ಷಿಸಿದವು. ಇವೆಲ್ಲ ಆಕೆಯಲ್ಲಿ ಮುಂದೆ ಆಫ್ರಿಕಾದಲ್ಲಿ ವಾಸಮಾಡಬೇಕೆಂಬ ಕನಸನ್ನು ಮೂಡಿಸಿದವು! ಆದರೆ ಯುದ್ಧದ ಕರಾಳ ಛಾಯೆ ಆಕೆ ವಾಸಮಾಡುತ್ತಿದ್ದ ಅಜ್ಜಿಯ ಮನೆಗೂ ಕಾಲಿರಿಸಿತ್ತು. ಆ ಮನೆಯ ಒಂದು ಕೋಣೆ ಜರ್ಮನ್‌ ವಿಮಾನಗಳ ದಾಳಿಯಿಂದ ತಪ್ಪಿಸಿಕೊಳ್ಳುವ ತಂಗುದಾಣವಾಗಿತ್ತು! ಹೀಗಾಗಿ ಬಾಲ್ಯದಲ್ಲೇ ಜೇನ್‌ಗೆ ಪ್ರಪಂಚದ ನಾನಾ ತೆರನಾದ ಕ್ರೌರ್ಯಗಳ ಪರಿಚಯವಾಯಿತು. ಸಾಹಿತ್ಯ, ಪ್ರಾಣಿಶಾಸ್ತ್ರ, ಇತಿಹಾಸ, ಆಂಗ್ಲಭಾಷೆ ಆಕೆಗೆ ಶಾಲೆಯಲ್ಲಿ ಮೆಚ್ಚುಗೆಯ ವಿಷಯಗಳಾಗಿದ್ದವು. ನಿಸರ್ಗದ ಮಡಿಲಲ್ಲಿ ಕೂಸಾಗಿ ಆಕೆ ಪ್ರಾಣಿ, ಪಕ್ಷಿ ಮತ್ತು ಕೀಟ ವಿಶ್ವದ ವಿಸ್ಮಯಗಳನ್ನು ವೀಕ್ಷಿಸಿ ಟಿಪ್ಪಣಿಗಳನ್ನು ಬರೆಯುತ್ತಿದ್ದಳು. ಕಿಶೋರಾವಸ್ಥೆಯಲ್ಲಿದ್ದಾಗಲೇ ಸಾರ್ವಜನಿಕರಿಗಾಗಿ ಒಂದು ಸಂಗ್ರಹಾಲಯವನ್ನು ಪ್ರಾರಂಭಿಸಿದ್ದಳು!

ಶಾಲೆಯ ಶಿಕ್ಷಣ ಮುಗಿದು ವಿಶ್ವವಿದ್ಯಾಲಯಕ್ಕೆ ಹೋಗಬೇಕಾದಾಗ, ಆಕೆಯ ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ದೂರದ ಆಫ್ರಿಕಾದ ಆಕರ್ಷಣೆ ಮುಂದುವರೆದಿತ್ತು. ಹಾಗಾಗಿ ಅಕೆ ಲಂಡನ್‌ನಲ್ಲಿ ಸೆಕ್ರೆಟರಿಯಲ್‌ ಡಿಪ್ಲೊಮಾ ಕೋರ್ಸ್‌ ಮುಗಿಸಿ, ಅಲ್ಪಕಾಲ ಕೆಲಸ ಮಾಡಿದರು. ತುಂಬಾ ಕಡಿಮೆ ಸಂಬಳ ದೊರಕುತ್ತಿತ್ತು.

jane goodall chimp getty

ಒಂದು ದಿನ ಅಚಾನಕ್ಕಾಗಿ ಆಫ್ರಿಕಾದಲ್ಲಿದ್ದ ಆಕೆಯ ಶಾಲೆಯ ಗೆಳತಿ ಮೇರಿಯಿಂದ ಒಂದು ಪತ್ರ ಬಂದಿತು. ಗೆಳತಿಯ ತಂದೆ ತಾಯಿಯರು ಕೀನ್ಯಾದ ಒಂದು ಪ್ರಾಂತ್ಯದಲ್ಲಿ ತೋಟವನ್ನು ಖರೀದಿಸಿದ್ದರು. ಜೇನ್‌ಗೆ ಭೇಟಿ ನೀಡಲು ಆಸಕ್ತಿಯಿದೆಯೇ ಎಂದು ಆಕೆ ವಿಚಾರಿಸಿದ್ದಳು. ಜೇನ್‌ಳ ಆನಂದಕ್ಕೆ ಪಾರವೇ ಇರಲಿಲ್ಲ! ಆದರೆ ಹಡಗು ಪಯಣಕ್ಕೆ ಆಕೆಯ ಬಳಿ ಹಣವಿರಲಿಲ್ಲ! ಅಜ್ಜಿಯ ಮನೆಗೆ ವಾಪಸ್ಸಾಗಿ ಹೋಟೆಲುಗಳಲ್ಲಿ ಪರಿಚಾರಕಿಯಾಗಿ ನಂತರ ಇತರ ಕೆಲಸಗಳಲ್ಲಿ ತೊಡಗಿ ಹಣವನ್ನು ಸಂಪಾದಿಸಿ, ಉಳಿಸತೊಡಗಿದಳು. ಐದು ತಿಂಗಳ ತರುವಾಯ ಗಳಿಸಿದ ಹಣವನ್ನು ಎಣಿಸಿದಾಗ, ಹಡಗಿನ ಯಾನಕ್ಕೆ ಬೇಕಾದ ದುಡ್ಡು ಸಂಗ್ರಹವಾಗಿರುವುದು ತಿಳಿಯಿತು. ನಂತರ ಜೇನ್‌ ಕೀನ್ಯಾದ ಕಿನಾನ್‌ಗೋಪ್‌ನಲ್ಲಿದ್ದ ತನ್ನ ಗೆಳತಿಯ ತೋಟವನ್ನು ತಲುಪಿದಳು. ಮಾರ್ಗಮಧ್ಯದಲ್ಲಿ ಬಿಳಿಯರಿಂದ ಕರಿಯರ ಮೇಲೆ ಜರುಗುತ್ತಿದ್ದ ನಾನಾ ಬಗೆಯ ಜನಾಂಗೀಯ ದ್ವೇಷವನ್ನು ಕಂಡು ಮರುಗಿದಳು.

ನಂತರ ಜೇನ್‌ ನೈರೋಬಿಗೆ ಬಂದು ಒಂದು ಬ್ರಿಟಿಷ್‌ ಕಂಪನಿಯ ಮ್ಯಾನೇಜರ್‌ಗೆ ಆಪ್ತ ಕಾರ್ಯದರ್ಶಿಯಾಗಿ ಕೆಲಸವನ್ನು ಶುರು ಮಾಡಿದಳು. ಒಮ್ಮೆ ಔತಣಕೂಟದಲ್ಲಿ ಜೇನ್‌ಗೆ, “ನೀನು ಏಕೆ ಖ್ಯಾತ ಪ್ರಾಚೀನ ಜೀವಶಾಸ್ತ್ರಜ್ಞ ಹಾಗೂ ಮಾನವಶಾಸ್ತ್ರಜ್ಞ ಡಾ. ಲೂಯಿಸ್‌ ಲೀಕಿಯವರನ್ನು ಭೇಟಿ ಮಾಡಬಾರದು?” ಎಂದು ಒಬ್ಬ ವ್ಯಕ್ತಿ ಕೇಳಿದರು. ಶೀಘ್ರದಲ್ಲೇ, ಜೇನ್‌ ಲೀಕಿಯವರನ್ನು ಭೇಟಿಯಾದಳು. ಲೀಕಿ ನೈರೋಬಿಯ ʼಕೊರಿಂಡನ್‌ ಮ್ಯೂಸಿಯಮ್‌ ಆಫ್‌ ನ್ಯಾಚುರಲ್‌ ಹಿಸ್ಟರಿʼಯ ಮೇಲ್ವಿಚಾರಕರಾಗಿದ್ದರು. ಅವರು ಜೇನ್‌ಗೆ ಪ್ರಶ್ನೆಗಳನ್ನು ಹಾಕಿದರು. ಸಂವಾದದಿಂದ ಅವರಿಗೆ ಜೇನ್‌ಳ ಪ್ರಾಣಿಗಳ ಬಗೆಗಿನ ಪ್ರೀತಿ, ಮಾನವಶಾಸ್ತ್ರದ ಅರಿವು ಇತ್ಯಾದಿ ಸಂಗತಿಯಗಳು ತಿಳಿದವು. ನಂತರ ಜೇನ್‌ ಲೀಕಿಯ ವಾರ್ಷಿಕ ಉತ್ಖನನ ಕಾರ್ಯದಲ್ಲಿ ಭಾಗಿಯಾದಳು. ಮ್ಯೂಸಿಯಂ ಮೂಲಕ ಆಕೆಗೆ ಪೂರ್ವ ಆಫ್ರಿಕಾದ ಪ್ರಾಣಿಜಗತ್ತು, ಕಿಕುಯು ಬುಡಕಟ್ಟು ಜನಾಂಗ ಇತ್ಯಾದಿ ವಿಷಯಗಳು ವೇದ್ಯವಾದವು.

ಕ್ರಮೇಣ ಲೀಕ್‌ ಮತ್ತು ಜೇನ್‌ರ ನಡುವೆ ಚಿಂಪಾಂಜಿಗಳ ಬಗೆಗೆ ಸಮಾನ ಕುತೂಹಲವಿರುವ ಅಂಶ ಬಹಿರಂಗಗೊಳ್ಳತೊಡಗಿತು. ಚಿಂಪಾಂಜಿ, ಗೊರಿಲ್ಲಾಗಳಂತಹ ದೊಡ್ಡ ಕೋತಿಗಳು ಮಾನವನ ಹತ್ತಿರದ ಬಂಧುಗಳು. ಚಿಂಪಾಂಜಿಗಳು ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತವೆ. ಹೀಗಾಗಿ ಇಂತಹ ಕೋತಿಗಳ ವಾಸಸ್ಥಾನದಲ್ಲೇ ಅವುಗಳ ವರ್ತನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದರೇ, ಶಿಲಾಯುಗದ ಮಾನವನ ಪೂರ್ವಜರು ಹೇಗೆ ವರ್ತಿಸುತ್ತಿದ್ದರು ಎಂಬ ವಿಷಯವನ್ನು ತಿಳಿಯಬಹುದು ಎಂಬುದು ಲೀಕಿಯವರ ಆಶಯವಾಗಿತ್ತು.

ತರುವಾಯ ಚಿಂಪಾಂಜಿಗಳ ಕುರಿತು ದೀರ್ಘ ಅಧ್ಯಯನ, ಹಣಕಾಸು ವ್ಯವಸ್ಥೆ ಮಾಡಿಕೊಂಡು ಲೀಕಿ ಮತ್ತು ಜೇನ್‌ 1960ರಲ್ಲಿ ಕ್ಷೇತ್ರ ಕಾರ್ಯವನ್ನು ಮಾಡಲು ಮುಂದಾದರು. ಒಬ್ಬ ಯುವತಿ ಇಂತಹ ಕಾರ್ಯದಲ್ಲಿ ಭಾಗಿಯಾಗುವುದು ಸುಲಭದ ವಿಚಾರವಾಗಿರಲಿಲ್ಲ! ಲೀಕಿಯ ಪ್ರಯತ್ನಗಳ ತರುವಾಯ ಆಕೆ ಒಬ್ಬ ಯೂರೋಪಿಯನ್‌ ಸಂಗಾತಿಯೊಂದಿಗೆ ಕಾಡಿನಲ್ಲಿ ಆರು ತಿಂಗಳ ಕಾಲ ಕಾಡಿನಲ್ಲಿ ಇರುಬಹುದೆಂಬ ಷರತ್ತನ್ನು ವಿಧಿಸಲಾಯಿತು! ಜೇನ್‌ ಸಂಗಾತಿಯಾಗಿ ಆಕೆಯ ತಾಯಿಯೇ ಕ್ಷೇತ್ರಕಾರ್ಯದಲ್ಲಿ ತೊಡಗಲು ನಿಶ್ಚಯಿಸಿದರು! ತಾಯಿ ಮತ್ತು ಮಗಳು ಟಾನ್ಸ್‌ನಿಕಾ ಸರೋವರದಾಚೆ ದಟ್ಟ ಅಡವಿಯ ಚಿಂಪಾಂಜಿಗಳ ವಾಸಸ್ಥಾನಕ್ಕೆ ತೆರಳಿದರು. ಗೋಂಬೆ ಎಂಬ ಆ ಪ್ರದೇಶದಲ್ಲಿ ಟೆಂಟ್‌ ಹಾಕಿಕೊಂಡು, ಜೇನ್‌ ಚಿಂಪಾಂಜಿಗಳ ಒಡನಾಟವನ್ನು ಗಳಿಸಲು ಹಲವು ತಿಂಗಳು ಬೇಕಾದವು! ಹೀಗೆ ಶುರುವಾಯಿತು ಜೇನ್‌ ಮತ್ತು ಚಿಂಪಾಂಜಿಗಳ ನಡುವಿನ ದೀರ್ಘ ಕಾಲದ ಗಟ್ಟಿ ಹಾಗೂ ಅನುರಾಗದ ಸಂಬಂಧ.

jane goodall 010549110

ಚಿಂಪಾಂಜಿಗಳಿಗೆ ಮಾನವರಂತೆಯೇ ಕೆಲವು ವರ್ತನೆಗಳು ಇರುತ್ತವೆ. ಉದಾ: ಅಪ್ಪಿಕೊಳ್ಳುವುದು, ಮುತ್ತು ನೀಡುವುದು, ಬೆನ್ನು ತಟ್ಟುವುದು, ಕಚಗುಳಿ ಇಡುವುದು ಇತ್ಯಾದಿ. ಅವುಗಳು ಮಿಶ್ರಾಹಾರಿಗಳು. ಕೆಲವು ಕೋತಿಗಳನ್ನು ಹಾಗೂ ಅವುಗಳ ಮರಿಗಳನ್ನು ಭಕ್ಷಿಸುತ್ತವೆ. ಕೆಲವು ಉಪಕರಣಗಳನ್ನು ತಯಾರಿಸಿ ಮಾನವರಂತೆ ಅವುಗಳನ್ನು ಬಳಸುತ್ತವೆ. ಡೇವಿಡ್‌ ಗ್ರೇಬಿಯರ್ಡ್‌ ಎಂಬ ಹೆಸರನ್ನು ಜೇನ್‌ಳಿಂದ ಪಡೆದ ಒಂದು ಗಂಡು ಚಿಂಪಾಂಜಿ ಒಮ್ಮೆ ಹುತ್ತದ ಕಿಂಡಿಯಲ್ಲಿದ್ದ ಗೆದ್ದಲು ಹುಳುಗಳನ್ನು ಹಿಡಿಯುತ್ತಿತ್ತು. ಅದು ಒಂದು ಸಣ್ಣ ಕಡ್ಡಿಯನ್ನು ಮುರಿದು, ಅದರ ಎಲೆಗಳನ್ನು ಕಿತ್ತು ಹಾಕಿ, ಅದನ್ನು ಹುತ್ತದ ಒಳಗೆ ತೂರಿಸಿತ್ತು. ಗೆದ್ದಲು ಹುಳುಗಳು ಕಡ್ಡಿಯ ಮೇಲೆ ಏರಲು ತೊಡಗಿದವು. ತಕ್ಷಣ ಡೇವಿಡ್‌ ಕಡ್ಡಿಯನ್ನು ಎಳೆದು, ನಾಲಿಗೆಯನ್ನು ಚಾಚಿ ಗೆದ್ದಲು ಹುಳುಗಳನ್ನು ಆಸ್ವಾದಿಸಿತು! ಹೀಗೆ ಅದು ಕೂಡ ಒಂದು ʼಟೂಲ್‌ ಮೇಕರ್‌ʼ ಎಂಬ ಸಂಗತಿಯನ್ನು ಜೇನ್‌ ಕಂಡುಕೊಂಡರು. ಇದರಿಂದ ವಿಜ್ಞಾನ ಜಗತ್ತು ನಿಬ್ಬೆರಗಾಗಿತ್ತು!

ಮನುಷ್ಯರಂತೆ ಚಿಂಪಾಂಜಿಗಳೂ ಪಿತೂರಿ, ಕುಟಿಲೋಪಾಯಗಳನ್ನು ಮಾಡಿ ಜೀವಿಸುತ್ತವೆ. ಹೀಗಾಗಿ ಅವು ಶಾಂತಿಪ್ರಿಯ ಪ್ರಾಣಿಗಳು ಎಂಬ ಮಿಥ್ಯೆ ಕೊನೆಗೊಂಡಿತು. ಕಾಸಕಾಲ ಜನಾಂಗದ ಚಿಂಪಾಂಜಿಗಳು, ಕೊಹಾಮ ಜನಾಂಗದ ವಿರುದ್ಧ ಸಮರವನ್ನು ಸಾರಿ ಅವುಗಳನ್ನು ನಾಶ ಮಾಡಲು ಯತ್ನಿಸುತ್ತವೆ. ಇದು ಕೆಲವು ವರ್ಷಗಳ ಕಾಲದ ಕಾಳಗವಾಗಿರುತ್ತದೆ! ಚಿಂಪಾಂಜಿಗಳು ಸರಾಸರಿ ಸುಮಾರು 50 ವರ್ಷಗಳವರೆಗೆ ಜೀವಿಸುತ್ತವೆ ಎಂಬಿತ್ಯಾದಿ ಸಂಗತಿಗಳನ್ನು ಜೇನ್‌ ಅವರು ಚಿಂಪಾಂಜಿಗಳ ಕುರಿತು ಕ್ಷೇತ್ರಕಾರ್ಯದಲ್ಲಿ ಕಂಡುಕೊಂಡರು. ಮಾನವರಿಗೆ ಭಾದಿಸುವ ಪೋಲಿಯೊ ರೋಗ ಚಿಂಪಾಂಜಿಗಳಿಗೂ ತಗುಲುವುದೆಂದು ಅವರು ಮಾಡಿದ ಸಂಶೋಧನೆ ತಿಳಿಸಿಕೊಟ್ಟಿತು. ಆದರೆ ಇಂತಹ ವಿಚಾರಗಳ ಬಗೆಗೆ ಇಂತಹ ಕ್ಷೇತ್ರಗಳ ಅಧ್ಯಯನವನ್ನು ಮಾಡುವ ವಿಶೇಷಜ್ಞರು ಬೇಗನೆ ನಂಬಲಿಲ್ಲ. ಆದರೆ ನಿಧಾನವಾಗಿ ಅವರು ಜೇನ್‌ ಅವರು ಚಿಂಪಾಂಜಿಗಳ ಬಗೆಗೆ ಕಂಡುಕೊಂಡ ಸತ್ಯಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರು!

jane goodall HUGO VAN LAWICK

ʼಶಾಡೊ ಆಫ್‌ ಮ್ಯಾನ್‌ʼ, ʼಚಿಂಪಾಂಜೀಸ್‌ ಆಫ್‌ ಗೋಂಬೆ ʼ, ʼದಿ ಲಿವಿಂಗ್‌ ಲಿಂಕ್‌ ಬಿಟ್ವೀನ್‌ ಮ್ಯಾನ್‌ ಅಂಡ್‌ ಬೀಸ್ಟ್‌ʼ ಮುಂತಾದ ಕೃತಿಗಳು ಜೇನ್‌ರಿಂದ ಹೊರಬಂದಿವೆ. ಅವರು ಅನೇಕ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಬರೀ ಚಿಂಪಾಂಜಿಗಳ ಬಗೆಗೆ ಮಾತ್ರವಲ್ಲದೆ ಇಡೀ ಪರಿಸರ ಸಂರಕ್ಷಣೆ ಕುರಿತು ಅವರಿಗೆ ಅಪಾರ ಕಾಳಜಿಯಿತ್ತು.

ಇದನ್ನೂ ಓದಿ ಏಕದಿನ ವೃತ್ತಿ ಜೀವನದಲ್ಲಿ ಸತತ 2 ಬಾರಿ ಶೂನ್ಯಕ್ಕೆ ವಿರಾಟ್ ಕೊಹ್ಲಿ ಔಟ್; ನಿವೃತ್ತಿ ಮುನ್ಸೂಚನೆಯೇ?

ಜೇನ್‌ ಗುಡಾಲ್‌ ಬಗೆಗೆ ಆಫಿಕ್ರಾದ ಕೆಲವು ಪರಿಸರವಾದಿಗಳಿಗೆ ಭಿನ್ನಾಭಿಪ್ರಾಯಗಳಿದ್ದವು. ಜೇನ್ ಪಾಶ್ಚಮಾತ್ಯ ದೃಷ್ಟಿಕೋನದಿಂದ ಆಫ್ರಿಕಾದ ಪರ್ಯಾವರಣವನ್ನು ಅಳೆಯುತ್ತಾರೆ ಮತ್ತು ಈ ಖಂಡದಲ್ಲಿ ಕಾರ್ಬನ್‌ ಫುಟ್‌ ಪ್ರಿಂಟ್ಸ್‌ ಕಡಿಮೆಯಾಗಬೇಕೆಂದು ಆಶಿಸುತ್ತಾರೆ. ಆದರೆ ಅವರೇ ವರ್ಷಕ್ಕೆ ಸುಮಾರು 300 ದಿನಗಳ ಕಾಲ ವಿಶ್ವವನ್ನು ಸುತ್ತುತ್ತಿದ್ದರು ಎಂಬುದು ಅವರ ಆರೋಪ.

ಏನೇ ಇರಲಿ, ಜೇನ್‌ ಗುಡಾಲ್‌ ಪ್ರಾಣಿ ಪ್ರಪಂಚ ಮತ್ತು ಪರ್ಯಾವರಣ ಸಂರಕ್ಷಣೆಯ ವಿಷಯಗಳಲ್ಲಿ ದಾಖಲಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...