ಗಾಯ ಗಾರುಡಿ | ದೊಡ್ಡಬಳ್ಳಾಪುರದಲ್ಲಿ ವಿಷಯುಕ್ತ ತ್ಯಾಜ್ಯ ನೀರು ಬಿಡುತ್ತಿದ್ದ ಕಾರ್ಖಾನೆ ವಿರುದ್ಧದ ಕ್ರಾಂತಿ

Date:

ನಾವುಜನಧ್ವನಿಯಿಂದ ಮಾಡಿದ ಪ್ರಮುಖ ಹೋರಾಟ – ‘ಗೋಗೋ ಇಂಟರ್ನ್ಯಾಷನಲ್ ಕಾರ್ಖಾನೆಮುಚ್ಚಿಸಿದ್ದು. ಮಂಜುನಾಥ ಅದ್ದೆಯವರು ಬರೆದ ವರದಿಯೊಂದು ನಮ್ಮನ್ನು ಎಷ್ಟು ಕಲಕಿಬಿಟ್ಟಿತ್ತೆಂದರೆ, ವೇಷ ಮರೆಸಿಕೊಂಡು ಸತ್ಯಾಸತ್ಯತೆ ಪತ್ತೆ ಮಾಡಲಾಯಿತು. ಕತ್ತಲಾದ ಮೇಲೆ ಹಳ್ಳಿಗಳಲ್ಲಿ ಸುತ್ತಿ ಜನರ ಅಭಿಪ್ರಾಯ ಸಂಗ್ರಹಿಸಲಾಯಿತು. ನಂತರ ನಡೆದದ್ದು ಕ್ರಾಂತಿ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)

2000ನೇ ಇಸವಿಯಲ್ಲಿ ದೊಡ್ಡಬಳ್ಳಾಪುರಕ್ಕೆ ಬಂದು ಬಿದ್ದವನ ಹೆಗಲ ಮೇಲೆ ‘ಜನಧ್ವನಿ ಯುವ ವೇದಿಕೆ’ಯ ಜವಾಬ್ದಾರಿಯನ್ನು ಮಂಜುನಾಥ ಅದ್ದೆ ಮತ್ತು ಗೆಳೆಯರು ಹೊರಿಸಿದರು. ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಕೆಲಸ ಮಾಡುತ್ತಿದ್ದ ‘ಸಂವಾದ’ ಸಂಸ್ಥೆಯ ಮಾಸಿಕ ವಾರ್ತಾಪತ್ರ ಮತ್ತು ಕಾರ್ಯಕ್ರಮದ ಕರಪತ್ರಗಳನ್ನು ಅವರ ಸಂಪರ್ಕದಲ್ಲಿರುವ ಯುವಜನರಿಗೆ ತಲುಪಿಸುವ ಕೆಲಸವನ್ನು ಜನಾರ್ದನ ಕೆಸರಗದ್ದೆ ನನಗೆ ಕೊಟ್ಟರು. ಪೋಸ್ಟ್ ಮಾಡಿದರೆ ಒಂದು ಪತ್ರಕ್ಕೆ ಎರಡು ರೂಪಾಯಿ ಅಂಚೆವೆಚ್ಚಕ್ಕಾಗಿ ಖರ್ಚಾಗುತ್ತಿತ್ತು. ಅದೇ ದೊಡ್ಡಬಳ್ಳಾಪುರ ಪಟ್ಟಣದಲ್ಲಿರುವ ನೂರಕ್ಕೂ ಹೆಚ್ಚು ಯುವಜನರಿಗೆ ನೇರವಾಗಿ ತಲುಪಿಸಿದರೆ ಆ ಹಣವನ್ನು ನನಗೇ ಕೊಡುವುದೆಂದು ಜನಾರ್ದನ್ ನಿರ್ಧರಿಸಿದರು. ಹೀಗೆ, ತಿಂಗಳಿಗೆ ನನಗೆ 400ರಿಂದ 600 ರೂಪಾಯಿ ಗಿಟ್ಟುತ್ತಿತ್ತು. ಇದರೊಂದಿಗೆ ‘ಜನಧ್ವನಿ’ಗೆ ತಿಂಗಳಿಗೆ 100 ರೂಪಾಯಿ ಕೊಡುವ ದಾನಿಗಳನ್ನು ಹುಡುಕಲಾಯಿತು. ಅವರು ಕೊಡುವ 800 ರೂಪಾಯಿಗಳಲ್ಲಿ ಸಂಘಟನೆಯ ಸಣ್ಣಪುಟ್ಟ ಖರ್ಚುಗಳನ್ನು ಸಂಭಾಳಿಸಿಕೊಂಡು ಉಳಿದದ್ದನ್ನು ನನ್ನ ಸಂಬಳವೆಂದು ಬಳಸಿಕೊಳ್ಳಲು ಸಂಘಟನೆ ನಿರ್ಧಾರ ಮಾಡಿತು. ಆದರೆ, ಎಂಟು ಜನರಲ್ಲಿ ಆರು ಜನ-ನಾಲ್ಕು ಜನ ಮಾತ್ರ ಹಣ ಕೊಡುತ್ತಿದ್ದರು. ಆದರೂ ಇಷ್ಟು ಹಣ ನನ್ನ ತಿಂಗಳ ಖರ್ಚಿಗೆ ಹೆಚ್ಚೇ ಆಗುತ್ತಿತ್ತು. ಸಂಸ್ಥೆಯ ಲೈಬ್ರರಿ ನೋಡಿಕೊಳ್ಳುತ್ತಿದ್ದ ನಂದಾ – ಮನೆಯಿಂದ ಆಗಾಗ ಊಟ ತಂದುಕೊಡುತ್ತಿದ್ದಳು. ಕಾಲೇಜಿನಲ್ಲಿ ಮಧ್ಯಾಹ್ನ ಬಿಸಿಯೂಟ ಸಿಗುತ್ತಿತ್ತು ಮತ್ತು ಬೆಳಗ್ಗೆ ಕುಂಬಾರಪೇಟೆಯ ಗೂಡಂಗಡಿಯಿಂದ ಮೂರು ರೂಪಾಯಿಗೆ ಎರಡು ಬನ್ನು ಸಿಗುತ್ತಿತ್ತು. ಊರಿನಲ್ಲಿ ತಂಗಳಿಟ್ಟು ತಿಂದುಕೊಂಡು ಸ್ಕೂಲಿಗೆ ಹೋಗುತ್ತಿದ್ದ ನನಗೆ ಇದು ‘ಐಷಾರಾಮ’ವೇ ಆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸಮಯದಲ್ಲಿ ನಾವು ದೊಡ್ಡಬಳ್ಳಾಪುರ ತಾಲೂಕಿನಾದ್ಯಂತ ಮತದಾರರ ಜಾಗೃತಿ ಆಂದೋಲನ ಮಾಡಿದೆವು. ರೈತಸಂಘದ ಡಾಕ್ಟರ್ ವೆಂಕಟ ರೆಡ್ಡಿ ಅದರ ನೇತೃತ್ವ ವಹಿಸಿದರು. ಊರೂರು ತಿರುಗಿ, ಎಂಥವರಿಗೆ ಮತ ಹಾಕಬೇಕು ಎಂದು ಹಾಡುಗಳೊಂದಿಗೆ ಪ್ರಚಾರ ಮಾಡಿದೆವು. ಇದರಿಂದ ನಮಗೆ ದೊಡ್ಡಬಳ್ಳಾಪುರದ ಪ್ರಗತಿಪರ ಚಳವಳಿಗಳ ನಡುವೆ ಮಾನ್ಯತೆ ಸಿಕ್ಕಿತು. ಆ ಸಂದರ್ಭದಲ್ಲಿ ವಾರಕ್ಕೆ ಮೂರು-ನಾಲ್ಕು ಕಾರ್ಯಕ್ರಮಗಳು ಆ ಪುಟ್ಟ ಪಟ್ಟಣದಲ್ಲಿ ನಡೆಯುತ್ತಿದ್ದವು. ಸಮುದಾಯ, ಎಂಆರ್‌ಎಚ್‍ಎಸ್, ರಾಜ್ಯ ರೈತ ಸಂಘ, ಪ್ರಾಂತ ರೈತ ಸಂಘ, ರಾಜಕುಮಾರ್ ಸಂಘ, ದಲಿತ ಸಂಘಟನೆಗಳು, ಪತ್ರಕರ್ತರ ಸಂಘ, ಕನ್ನಡ ಪಕ್ಷ, ಮಹಿಳಾ ಸಮಾಜ, ನಾಗದಳ, ಗ್ರಾಹಕರ ವೇದಿಕೆ, ಅರ್ಕಾವತಿ ಪುನಶ್ಚೇತನ ಸಮಿತಿ… ಹೀಗೆ, ಎಲ್ಲ ಸಂಘಟನೆಗಳ ಹೋರಾಟಗಳೊಂದಿಗೆ ‘ಜನಧ್ವನಿ’ ಇರುತ್ತಿತ್ತು. ಇದರಿಂದಾಗಿ ಪ್ರತಿದಿನ 12ರಿಂದ 15 ಗಂಟೆ ಕೆಲಸ ಮಾಡುತ್ತಿದ್ದೆವು.

ಈ ಸಮಯದಲ್ಲಿ ಜನಧ್ವನಿ ಯುವ ವೇದಿಕೆ ಒಂದು ‘ಗಲಾಟೆ’ಗೆ ಸಾಕ್ಷಿಯಾಗಬೇಕಾಯಿತು. ನಾನಿದ್ದ ಕುಂಬಾರಪೇಟೆಗೆ ಅಂಟಿಕೊಂಡಿದ್ದ ಮಾರುತಿ ನಗರದಲ್ಲಿ ರಾಜು ಸಣ್ಣಕ್ಕಿ ಮತ್ತು ಬಾಬು ಸೇರಿ ‘ಭೀಮಶಕ್ತಿ ಯುವಜನ ಸಂಘ’ ಶುರುಮಾಡಿದ್ದರು. ಈ ಸಂಘದ ಹೆಸರಿನಲ್ಲಿ ಅವರಿಬ್ಬರೂ ಒಂದು ಪತ್ರಿಕಾ ಹೇಳಿಕೆ ನೀಡಿದರು. “ಶೂದ್ರ ಸನ್ಯಾಸಿ ವಿವೇಕಾನಂದರನ್ನು ಸಂಘ ಪರಿವಾರ ಹೈಜಾಕ್ ಮಾಡಿದೆ,” ಅನ್ನೋದು ಆ ಹೇಳಿಕೆಯ ಹೈಲೈಟ್. ರಾಜು ಮತ್ತು ಬಾಬು ವಿವೇಕಾನಂದರನ್ನು ‘ಶೂದ್ರ’ ಎಂದು ನಿಂದಿಸಿದ್ದಾರೆಂದು ಸಂಘದ ಹುಡುಗರು ಹಲ್ಲೆಗೆ ಮುಂದಾದರು. ವಿಷಯ ತಿಳಿದು ಅದ್ದೆ ನಮ್ಮನ್ನೆಲ್ಲ ಆಟೋದಲ್ಲಿ ಕೂರಿಸಿಕೊಂಡು ಆರ್‌ಎಸ್‍ಎಸ್ ಆಫೀಸಿಗೆ ನುಗ್ಗಿದರು. ಪಾಪ ಹುಡುಗರು ಓಡಿಹೋದರು. ಸಿಕ್ಕವರಿಗೆ ಬುದ್ಧಿ ಹೇಳಿ ಹೊರಟೆವು. ಇದಾದ ಮೇಲೆ ಅವರು ನಮ್ಮ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಕಚೇರಿಗೆ ನುಗ್ಗಿ ಪೀಟೋಪಕರಣ ದ್ವಂಸ ಮಾಡಿದ್ದಾರೆ ಅಂತ. ತಮಾಷೆಯೆಂದರೆ, ಸ್ಟೇಷನ್ನಿಗೆ ಹಿಂದೂ ಜಾಗರಣ ವೇದಿಕೆಯ ಆರೇಳು ಜನ ಹಿರಿಯರ ಜೊತೆ ನಮ್ಮನ್ನು ಅಂದರೆ, ಇನ್ನೂ ಇಪ್ಪತ್ತು ದಾಟದ ಐದು ಜನ ಹುಡುಗರನ್ನು ‘ನ್ಯಾಯ’ಕ್ಕೆ ಕರೆಸಿದರು. ವಿವೇಕಾನಂದ ಹೇಗೆ ‘ಶೂದ್ರ’ ಮತ್ತದು ಹೇಗೆ ‘ನಿಂದನೆ ಅಲ್ಲ’ ಅನ್ನುವುದನ್ನು ಚಿಕ್ಕ ಹುಡುಗರಾದ ನಾವು ಮುದುಕರಿಗೆ ಮನವರಿಕೆ ಮಾಡಿದೆವು. ಪೊಲೀಸ್ ಇನ್ಸ್‌ಪೆಕ್ಟರ್ ಓಬಳೇಶ್ ನಮ್ಮ ಮಾತಿಗೆ ತಲೆದೂಗಿದರು.

ನಾವು ‘ಜನಧ್ವನಿ’ಯಿಂದ ಮಾಡಿದ ಪ್ರಮುಖ ಹೋರಾಟ ‘ಗೋಗೋ ಇಂಟರ್‌ನ್ಯಾಷನಲ್ ಕಾರ್ಖಾನೆ’ಯನ್ನು ಮುಚ್ಚಿಸಿದ್ದು. ‘ಅಗ್ನಿ’ ಪತ್ರಿಕೆಯಲ್ಲಿ ಮಂಜುನಾಥ ಅದ್ದೆಯವರು ಬರೆದ ವರದಿಯೊಂದು ನಮ್ಮನ್ನು ಎಷ್ಟು ಕಲಕಿಬಿಟ್ಟಿತ್ತೆಂದರೆ, ಅದಕ್ಕಾಗಿ ಯುವಜನರ ತಂಡವೊಂದು ಹೋರಾಟದ ಹೊಸ ಮಾದರಿಗಳನ್ನು ಶೋಧಿಸತೊಡಗಿತು. ವೇಷ ಮರೆಸಿಕೊಂಡು ಸತ್ಯಾಸತ್ಯತೆಗಳನ್ನು ತಿಳಿಯಲಾಯಿತು. ಕತ್ತಲಾದ ಮೇಲೆ ಸುತ್ತಲಿನ ಹಳ್ಳಿಗಳಲ್ಲಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಕರಪತ್ರಗಳನ್ನು ಬರೆದು ಆ ಕಾರ್ಖಾನೆಯ ನೌಕರರಿಗೂ ಅದರ ಭೀಕರತೆಯ ಅರಿವು ಮೂಡಿಸಲಾಯಿತು.

ಬಟ್ಟೆಗಳಿಗೆ ಡೈಯಿಂಗ್ ಹಾಕುತ್ತಿದ್ದ ಆ ಕಾರ್ಖಾನೆಯು, ವಿಷಯುಕ್ತ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಘಟಕ ಅಳವಡಿಸಿಕೊಳ್ಳದೆ ಆವರಣದಲ್ಲಿ ಕೊರೆಸಿ ವ್ಯರ್ಥವಾಗಿದ್ದ ಮೂರ್ನಾಲ್ಕು ಕೊಳವೆಬಾವಿಗಳ ಒಳಗೆ ಆ ತ್ಯಾಜ್ಯವನ್ನು ಬಿಡಲಾರಂಭಿಸಿತ್ತು. ಇದರಿಂದಾಗಿ ಸುತ್ತಲಿನ ಆರೇಳು ಹಳ್ಳಿಗಳ ಅಂತರ್ಜಲ ಕ್ಷಾರಗೊಂಡು ಬೋರ್‌ವೆಲ್ಲುಗಳಲ್ಲಿ ವಿಷಯುಕ್ತ ನೀರು ಬರಲಾರಂಭಿಸಿತು. ಹಳ್ಳಿಯಲ್ಲಿ ಸಿಗುತ್ತಿದ್ದ ಸಿಹಿನೀರನ್ನು ಕಂಡು ಆ ಊರಿನ ಹುಡುಗರಿಗೆ ಹೆಣ್ಣು ಕೊಡುತ್ತಿದ್ದ ಪಕ್ಕದ ಊರುಗಳ ಜನ ದೂರ ಉಳಿದರು. ನೀರು ಕುಡಿದ ಮಕ್ಕಳಲ್ಲಿ ನಿಧಾನಕ್ಕೆ ವಿಚಿತ್ರ ಕಾಯಿಲೆಗಳು ಕಾಣಿಸಿಕೊಂಡವು. ಜನ ಗಾಬರಿಗೊಂಡರು. ನಾವು ಹೋರಾಟ ರೂಪಿಸಿದೆವು. ನಮ್ಮ ಸಂಪರ್ಕದಲ್ಲಿದ್ದ ಇತರ ಊರುಗಳ ಸಂಘಟನೆಗಳ ನೆರವು ಪಡೆದೆವು. ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸಿದವು. ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನ ಸೆಳೆದವು. ಹೋರಾಟದ ತೀವ್ರತೆ ಅರಿತು ಅಂತಾರಾಷ್ಟ್ರೀಯ ಮಟ್ಟದ ಪರಿಸರ ಹೋರಾಟಗಾರರು ನಮ್ಮ ಜೊತೆಗೂಡಿದರು. ಗ್ರೀನ್‍ಪೀಸ್ ಇಂಟರ್‌ನ್ಯಾಷನಲ್ ಸಂಘಟನೆ ತನ್ನ ‘ನೋ ಮೋರ್ ಭೂಪಾಲ್ಸ್’ ರಾಷ್ಟ್ರೀಯ ಜಾಗೃತಿ ಜಾಥಾದಲ್ಲಿ ಈ ಸಮಸ್ಯೆಯನ್ನು ಮುಖ್ಯವಾಗಿ ಪರಿಗಣಿಸಿತು. ಅವರ ಜಾಥಾದಲ್ಲಿ ನಾನು ಮತ್ತು ಗೆಳೆಯ ಡಿಎಂಸಿ ಶಿವು ಭಾಗವಹಿಸಿ, ದೇಶವನ್ನೆಲ್ಲ ಸುತ್ತಿ, ನಮ್ಮ ತಾಲೂಕಿನ ‘ಗೋಗೋ ಹೋರಾಟ’ ಕುರಿತು ಮಾತನಾಡಿದೆವು. ಹೈದರಾಬಾದಿನಲ್ಲಿ ನಡೆದ ‘ಏಷಿಯನ್ ಸೋಷಿಯಲ್ ಫೋರಮ್’ನ ಬೃಹತ್ ಸಮಾವೇಶದಲ್ಲಿ ನಮ್ಮ ಹೋರಾಟ ಕುರಿತು ಮಾತನಾಡಲು ನನಗೆ ಅವಕಾಶ ಸಿಕ್ಕಿತು. ಕೊನೆಗೊಂದು ದಿನ ಗೋಗೋ ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಆದೇಶ ಹೊರಡಿಸಿತು.

ಹಳ್ಳಿಗಳಲ್ಲಿ ಜಾಗೃತಿ ಗೀತೆಗಳನ್ನು ಹಾಡುತ್ತಿದ್ದ ನಮ್ಮ ತಂಡದ ಮೇಲೆ ನಿಗಾ ಇಡಲಾಯಿತು. ಕರಪತ್ರ ಹಂಚುತ್ತಿದ್ದ ನನಗೆ ಮತ್ತು ವಕೀಲ ಗೆಳೆಯ ಬ್ಯಾತ ಜಗದೀಶ್‍ಗೆ ಕಾರ್ಖಾನೆ ಗೂಂಡಾಗಳು ಕೊಲೆ ಬೆದರಿಕೆ ಹಾಕಿದರು. ನಮ್ಮ ಮನೆಗಳಿಗೆ ಪೊಲೀಸರು ಭೇಟಿ ಕೊಟ್ಟು, “ನಿಮ್ಮ ಹುಡುಗರು ಕಾಲೇಜಿಗೆ ಓದಲು ಹೋಗುತ್ತಿಲ್ಲ; ಹೋರಾಟ ಮಾಡ್ತಿದಾರೆ… ಹಿಂಗೇ ಬಿಟ್ರೆ ನಕ್ಸಲೈಟ್ ಆಗ್ತಾರೆ,” ಅಂತ ಎಚ್ಚರಿಸಿದರು. ನಾವು ಮಾತ್ರ ಹೋರಾಟವನ್ನು ಮುಂದುವರಿಸಿದೆವು. ದಯಾನಂದ ಗೌಡ, ಶ್ರೀನಾಥ, ಲವಕುಮಾರ್, ಖಾಸಿಂ ಸಾಬ್, ಬದರೀನಾಥ್, ಸಿದ್ಧರಾಜು, ಮೈಲಾರಪ್ಪ, ಮದ್ದೂರಪ್ಪ, ದೇವರಾಜ, ನಂದಾ, ತುಳಸಿ, ರಾಜು ಸಣ್ಣಕ್ಕಿ, ಬಾಬು, ಕೆ ಪಿ ಕುಮಾರ್, ಸಂಪತ್ತು, ಅಶ್ವತ್ಥ, ರೂಪೇಶ, ಶಾಂತ, ಸುನಿತ, ಅಂಬಿಕಾ, ಕಾಂತರಾಜು, ಮಾವಿನಕುಂಟೆ ರವಿ, ರಾಮಕೃಷ್ಣ, ರಂಗನಾಥ್, ಕುಮಾರ, ತಿಪ್ಪೂರು ಮಂಜುನಾಥ್, ನೆಲ್ಕುಂಟೆ ರವಿ… ಹೀಗೆ, ಎಷ್ಟೋಂದು ಜನ ಓದು ಮತ್ತು ಹೋರಾಟಗಳನ್ನು ಜೊತೆಜೊತೆಗೆ ಕಟ್ಟಿಕೊಂಡವರು. ಇವರೆಲ್ಲರ ಜೊತೆಗೆ ಕನಕಪುರದ ಶಿವಣ್ಣ, ಹೊಳಸಾಲಯ್ಯ, ಗಿರಿಯಪ್ಪ, ಶ್ರೀಧರ, ಸೌಮ್ಯ, ರಾಮನಗರದ ರವಿ ಬಾಗಿ, ಪ್ರಕಾಶ, ಆನೇಕಲ್ಲಿನ ಪುರುಷೋತ್ತಮ, ಮುರಳಿ ಕಾಟಿ ಹೆಗಲು ಕೊಟ್ಟರು. ಇವರೆಲ್ಲರೂ ಈಗ ನಾಡಿನ ನಾನಾ ಹೋರಾಟಗಳಲ್ಲಿ ತಮ್ಮ ವೃತ್ತಿಯ ಜೊತೆಗೇ ತೊಡಗಿಸಿಕೊಂಡಿದ್ದಾರೆ.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಹುಲಿಕುಂಟೆ ಮೂರ್ತಿ
ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...