ಕೃಷಿರಂಗ | ಪಶುವೈದ್ಯ ಉದ್ದಿಮೆದಾರರೊಬ್ಬರ ಯಶೋಗಾಥೆ

Date:

ದೊಡ್ಡಬಳ್ಳಾಪುರದ ಡಾ. ಸಿ. ಎಸ್. ಶ್ರೀನಿವಾಸ್ ಅವರು ವಿದ್ಯಾರ್ಥಿ ಜೀವನದಲ್ಲಿ ಬಹುಮಾನಿತ ಚರ್ಚಾಪಟು. ಕಾಲೇಜಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಗಳಾದ ಎಂ. ನಾರಾಯಣ ಸ್ವಾಮಿ, ಸಹಪಾಠಿ ಸಿ. ಎಸ್. ರಘುಪತಿ ಮತ್ತಿತರರ ಒಡನಾಟದಿಂದ ಪ್ರಗತಿಪರ ಚಿಂತಕರಾದರು. ಪತ್ರಕರ್ತರಾದ ಲಂಕೇಶ್‍ರವರ ಚಿಂತನೆಗಳಿಂದ ಪ್ರಭಾವಿತರಾಗಿದ್ದರು.

ಬರಲಿರುವ ವರ್ಷಗಳು ಪಶು ಕೃಷಿಯ ವರ್ಷಗಳಾಗಲಿವೆ. ಪಶು ಕೃಷಿಯು ಗ್ರಾಮೀಣ ಆರ್ಥಿಕತೆಯನ್ನು ಸದೃಡಗೊಳಿಸಲಿದೆ. ಹಾಲಿನ ಉತ್ಪಾದನೆಯಂತೆಯೇ ಮಾಂಸ ಉತ್ಪಾದನೆ ಜಾಸ್ತಿಯಾಗಿ ಜನತೆಗೆ ಪ್ರೋಟಿನ್‍ಯುಕ್ತ ಆಹಾರ ಲಭ್ಯವಾಗಬೇಕು. ಇಂತಹ ದೃಷ್ಟಿಕೋನವನ್ನಿಟ್ಟುಕೊಂಡಿರುವ ಪಶುವೈದ್ಯ ಉದ್ದಿಮೆದಾರರೊಬ್ಬರು ತಮ್ಮ ಯಶೋಗಾಥೆಯನ್ನು ವಿವರಿಸಿದರು. ಅವರು ಮನಬಿಚ್ಚಿ ಮಾತನಾಡುತ್ತಾ ಹೋದರು. ತಾವು ಕಂಡುಕೊಂಡಿರುವ ಪಶುಸಂಗೋಪನೆಯ ವಿವಿಧ ಮಜಲುಗಳನ್ನು ಇತರರಿಗೆ ಉಪಯೋಗವಾಗಲೆಂದು ಹಂಚಿಕೊಂಡರು. ಅವರ ಮಾತುಗಳು ಈ ಬರಹದಲ್ಲಿ ಅಕ್ಷರ ರೂಪ ಪಡೆದಿವೆ.

ದೊಡ್ಡಬಳ್ಳಾಪುರದ ಡಾ. ಸಿ. ಎಸ್. ಶ್ರೀನಿವಾಸ್ ಅವರು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಿಂದ 1989ರಲ್ಲಿ ಪಶುವೈದ್ಯಕೀಯ ಪದವಿ ಪಡೆದರು. ಕೊಂಚ ಸಮಯ ಖಾಸಗಿ ಕ್ಷೇತ್ರದಲ್ಲಿ ಅನುಭವ. ಸರ್ಕಾರಿ ಉದ್ಯೋಗ ಬೇಡವೆಂದರು. ಹೊಸದೇನನ್ನಾದರೂ ಸಾಧಿಸಬೇಕೆಂದು 1994ರಿಂದ ಕೋಳಿ ಸಾಕಣೆಯನ್ನು ಸಣ್ಣ ಮಟ್ಟದಲ್ಲಿ ಆರಂಭಿಸಿದರು. ಮಾಂಸಕ್ಕಾಗಿ ಬ್ರಾಯ್ಲರ್ ಕೋಳಿ ಸಾಕಣೆ, ಮೊಟ್ಟೆ ಉತ್ಪಾದನೆಗಾಗಿ ಕೋಳಿ ಸಾಕಣೆ, ಪೇರೆಂಟ್ ಸ್ಟಾಕ್‍ನೊಂದಿಗೆ ಮೊಟ್ಟೆ ಉತ್ಪಾದನೆ, ಕೋಳಿ ಮರಿಗಳ ಉತ್ಪಾದನೆಯ ಹ್ಯಾಚರಿಯ ಆರಂಭ ಹಾಗೂ ಕೋಳಿ ಆಹಾರದ ಉತ್ಪಾದನೆಯಲ್ಲಿಯೂ ತೊಡಗಿದರು. ಅವೆಲ್ಲವೂ ಪ್ರಗತಿ ಪಥದಲ್ಲಿ ಸಾಗಿದವು. ಪ್ರತಿ ತಿಂಗಳ ಕಾರ್ಮಿಕರ ಸಂಖ್ಯೆಯು ಕನಿಷ್ಟ 80. ಅವರು ಹಲವರಿಗೆ ಉದ್ಯೋಗದಾತರಾದರು.

ಡಾ. ಶ್ರೀನಿವಾಸ್‍ರವರು ವಿದ್ಯಾರ್ಥಿ ಜೀವನದಲ್ಲಿ ಬಹುಮಾನಿತ ಚರ್ಚಾಪಟು. ಕಾಲೇಜಿನ ದಿನಗಳಲ್ಲಿ ಹಿರಿಯ ವಿದ್ಯಾರ್ಥಿಯಾದ ಎಂ. ನಾರಾಯಣ ಸ್ವಾಮಿ (ಈ ಲೇಖನದ ಬರಹಗಾರರು), ಸಹಪಾಠಿ ಸಿ. ಎಸ್. ರಘುಪತಿ ಮತ್ತಿತರರ ಒಡನಾಟದಿಂದ ಪ್ರಗತಿಪರ ಚಿಂತಕರಾದರು. ಪತ್ರಕರ್ತರಾದ ಲಂಕೇಶ್‍ರವರ ಚಿಂತನೆಗಳಿಂದ ಪ್ರಭಾವಿತರಾದರು. ಲಂಕೇಶರು ಸ್ಥಾಪಿಸಿದ ರಾಜಕೀಯ ಪಕ್ಷವಾದ ‘ಪ್ರಗತಿರಂಗ’ದಿಂದ ಪ್ರಭಾವಿತರಾಗಿ ತಮ್ಮ ಉದ್ದಿಮೆಗೆ ಪ್ರಗತಿ ಗ್ರೂಪ್ ಎಂಬ ಹೆಸರಿಟ್ಟರು. ಪ್ರಗತಿ ಫೀಡ್ಸ್, ಪ್ರಗತಿ ಹ್ಯಾಚರೀಸ್, ಪ್ರಗತಿ ಆಗ್ರೋ ಬಯೋಟೆಕ್, ಪ್ರಗತಿ ಗೋಟರಿ, ಪ್ರಗತಿ ಚಿಕನ್ ಎಂಬ ಹಲವು ಶಾಖೆಗಳು. ರೈತ ಸಂಘದ ನಾಯಕರಾದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ಹಾದಿಯಲ್ಲಿಯೂ ನಡೆದರು. ಲಂಕೇಶರನ್ನು ಮತ್ತು ನಂಜುಂಡಸ್ವಾಮಿಯವರನ್ನು ದೊಡ್ಡಬಳ್ಳಾಪುರದ ಸುತ್ತಮುತ್ತಲಿನ ಹಳ್ಳಿಗಳಿಗೆ ಆಹ್ವಾನಿಸಿ ಕಾರ್ಯಕ್ರಮಗಳನ್ನೇರ್ಪಡಿಸಿದರು.

ಕೋಳಿ ಸಾಕಣೆ

ಪ್ರತಿ ಬ್ಯಾಚಿನಲ್ಲಿ 25,000 ಹೆಣ್ಣು ಕೋಳಿಗಳು, 2500 ಹುಂಜಗಳಿರುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಒಂದು ಬ್ಯಾಚ್ ಬ್ರೂಡರ್ ಹಂತದ ಕೋಳಿ ಮರಿಗಳು, ಒಂದು ಬ್ಯಾಚ್ ಗ್ರೋಯರ್ ಹಂತದ ಕೋಳಿಗಳು ಮತ್ತು ಮೂರು ಬ್ಯಾಚ್ ಲೇಯರ್ ಹಂತದ ಕೋಳಿಗಳಿವೆ. ಒಟ್ಟು 1,25,000 ಹೆಣ್ಣು ಕೋಳಿಗಳು. ಎಲ್ಲವೂ ಯೋಜನಾಬದ್ದವಾಗಿ ನಡೆಯುತ್ತಿರುತ್ತವೆ.

ಕೋವಿಡ್ ಸಂದರ್ಭದಲ್ಲಿ ಕೋಳಿಗಳನ್ನು ಗುಂಡಿ ತೋಡಿ ಹೂಳಬೇಕಾಯಿತು. ಸುಮಾರು 18 ಕೋಟಿ ರೂಪಾಯಿ ನಷ್ಟವಾಯಿತು. ಜೊತೆಗೆ ಕೋಳಿ ಮಾಂಸದ ಬೆಲೆಯು ತೂಗುಯ್ಯಾಲೆಯಲ್ಲಿರುತ್ತದೆ. ಎಲ್ಲೋ ಕುಳಿತವರು ಬೆಲೆ ನಿರ್ಧರಿಸುತ್ತಾರೆ. ಆದ್ದರಿಂದ ಸದಾ ಉತ್ತಮ ಬೆಲೆ ದಕ್ಕುವ ಕುರಿ, ಮೇಕೆ ಸಾಕುವ ಕಡೆಗೆ ಕೋವಿಡೋತ್ತರವಾಗಿ ಯೋಚಿಸಬೇಕಾಯಿತು. ಕುರಿ ಮತ್ತು ಮೇಕೆ ಮಾಂಸ ಖರೀದಿಗೆ ಸದಾ ಸರತಿ ಸಾಲಿರುತ್ತದೆ ಎನ್ನುತ್ತಾರೆ ಉದ್ದಿಮೆದಾರರಾದ ಡಾ. ಶ್ರೀನಿವಾಸ್. ಅವರ ಮಗನಾದ ಸುಚಿತ್ ಅವರನ್ನೂ ಇದೇ ಉದ್ದಿಮೆಗೆ ತೊಡಗಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Sheep and Goat Shed 3

ಕುರಿ ಮತ್ತು ಮೇಕೆ ಫಾರ್ಮ್

ಕೋವಿಡ್ ನಂತರ 2023ರಲ್ಲಿ ಕುರಿ ಮತ್ತು ಮೇಕೆ ಫಾರ್ಮ್ ಅನ್ನು ಆರಂಭಿಸಿದ್ದಾರೆ. ಅಲ್ಲೀಗ ರಾಜಸ್ಥಾನದಿಂದ ತಂದ ಬೀಟಲ್ ಮೇಕೆಗಳು, ನಮ್ಮ ರಾಜ್ಯದ ಎಳಗ ಕುರಿ ತಳಿ ಮತ್ತು ಮಹಾರಾಷ್ಟ್ರದಿಂದ ತರಿಸಿಕೊಂಡ ನಾರಿ ಸುವರ್ಣ ಸಂಕರಣ ತಳಿಯ ಕುರಿಗಳಿವೆ. ಎಳಗ ಕುರಿ ತಳಿಯು ಬಾಗಲಕೋಟೆ, ಬಿಜಾಪುರ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ.

ಡಾ. ಶ್ರೀನಿವಾಸ್‍ರವರ ಫಾರ್ಮಿನಲ್ಲಿ ಉತ್ಪಾದನೆಯಾಗುತ್ತಿರುವ ಕುರಿ ಮತ್ತು ಮೇಕೆಯ ಮರಿಗಳು ಬ್ರೀಡಿಂಗ್ ಉದ್ದೇಶಕ್ಕಾಗಿ ಇತರ ರೈತರಿಗೆ ಸರಬರಾಜಾಗುತ್ತಿವೆ. ಆರು ತಿಂಗಳ ಮರಿಗಳಿಗಾಗಿ ಮುಂಗಡ ಕಾಯ್ದಿರಿಸುವಿಕೆಯಿದೆ. ಉತ್ತಮ ದರ್ಜೆಯ ಮರಿಗಳ ಉತ್ಪಾದನೆಯಿದೆ. ಕೊಟ್ಟಿಗೆಯಲ್ಲಿರುವ ಮಂದೆಯ ಪ್ರತಿ ಪ್ರಾಣಿಗೆ ವೈಯಕ್ತಿಕ ಗಮನವನ್ನು ನೀಡಲಾಗುತ್ತಿದೆ. ಇವರಿಂದ ಕಲಿತವರು ‘ಬ್ರೀಡರ್ಸ್’ ಆಗುತ್ತಿದ್ದಾರೆ.

ಮುಂದುವರೆದ ದೇಶಗಳಲ್ಲಿ ವಾರ್ಷಿಕವಾಗಿ ಪ್ರತಿ ವ್ಯಕ್ತಿಗೆ 45ರಿಂದ 55 ಕಿಲೋಗ್ರಾಂನಷ್ಟು ಮಾಂಸದ ಲಭ್ಯತೆಯಿದೆ. ಆದರೆ ನಮ್ಮ ದೇಶದಲ್ಲಿ 7ರಿಂದ 8 ಕಿಲೋಗ್ರಾಂಗಳ ಆಸುಪಾಸು ಮಾತ್ರ. ದೇಶದ ಜನರಿಗೆ ಪ್ರೋಟೀನ್ ಕೊರತೆಯಿದೆ. ಅದನ್ನು ಕ್ರಮೇಣ ಹೆಚ್ಚಿಸಬೇಕಿದೆ. ಶೇ. 77ರಿಂದ 80ರಷ್ಟು ಜನರು ಮಾಂಸ ತಿನ್ನುತ್ತಾರೆ. ಅದು ನಮ್ಮ ಸಂಸ್ಕೃತಿಯೂ ಹೌದೆನ್ನುತ್ತಾರವರು.

ಡಾರ್ಪರ್ ಟಗರು

ಕುರಿಗಳ ಉನ್ನತೀಕರಣದ ಸಂಕರಣಕ್ಕಾಗಿ ಮಂಡ್ಯದ ರೈತರೊಬ್ಬರಿಂದ ಡಾರ್ಪರ್ ((Dorper) ಕುರಿಯ ಶುದ್ಧರಕ್ತದ ಟಗರೊಂದನ್ನು ತಂದುಕೊಂಡಿದ್ದಾರೆ. ಈ ಡಾರ್ಪರ್ ತಳಿಯು ದಕ್ಷಿಣ ಆಫ್ರಿಕಾದ ತಳಿ. ನಮ್ಮ ದೇಶದಲ್ಲಿ ಒಂದು ಅಂದಾಜಿನಂತೆ ಕೇವಲ 250 ಡಾರ್ಪರ್ ಕುರಿಗಳಿವೆ. ಮದ್ದೂರಿನ ಬಳಿಯ ಫಾರ್ಮಿನಲ್ಲಿ 24 ಡಾರ್ಪರ್‌ಗಳಿವೆ.

ಡಾರ್ಪರ್ ಟಗರಿನ ಬೆಲೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ. ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಹರಾಜಿನಲ್ಲಿ ಭಾಗವಹಿಸಿ ತರಬೇಕು. ಸರ್ಕಾರದ ಕಾನೂನು ಕಟ್ಟಳೆಗಳಂತೆ ಅನುಮತಿ ಪಡೆಯಬೇಕು. ಡಾರ್ಪರ್ ತಳಿಯ ಹೆಣ್ಣು ಕುರಿಯು ಒಂದು ವರ್ಷಕ್ಕೆ 80ರಿಂದ 95 ಕಿಲೋಗ್ರಾಂ ದೇಹತೂಕಕ್ಕೆ ಬಂದರೆ, ಗಂಡು 125ರಿಂದ 135 ಕಿಲೋಗ್ರಾಂ ತೂಕ ಬರುತ್ತದೆ.

Sheep with Dorper

ಡಾರ್ಪರ್ ಕುರಿ ಟಗರನ್ನು ಎಳಗ ಮತ್ತು ನಾರಿ ಸುವರ್ಣ ಕುರಿಗಳಲ್ಲಿ ಬ್ರೀಡಿಂಗ್‍ಗಾಗಿ ಬಳಸುತ್ತಿದ್ದೇವೆ. ಪ್ರತಿ ಸೂಲಿನಲ್ಲಿ ಎರಡು ಮರಿ ಪಡೆಯುವ ಸಾಧ್ಯತೆ ಶೇ. 60ರಿಂದ 70ರಷ್ಟಿದೆ.

ನಾರಿ ಸುವರ್ಣ ಎಂಬ ಸಂಕರಣ ಕುರಿ ತಳಿ

ನಾರಿ ಸುವರ್ಣ ಕುರಿ ತಳಿಯನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ‘ನಿಂಬ್ಕರ್ ಅಗ್ರಿಕಲ್ಚರಲ್ ರೀಸರ್ಚ್ ಇನ್‍ಸ್ಟಿಟ್ಯೂಟ್ (Nari : ನಾರಿ)ನಲ್ಲಿ ಪಶ್ಚಿಮ ಬಂಗಾಳದ ಗೆರೋಲ್ ಮತ್ತು ಡೆಕ್ಕನಿ ತಳಿಯನ್ನು ಸಂಕರಣಗೊಳಿಸಿ ಒಂದು ವಿಧದ ನಾರಿ ಸುವರ್ಣ ತಳಿಯನ್ನು ಹಾಗೂ ಗೆರೋಲ್, ಮಡ್‍ಗ್ಯಾಲ್ ಮತ್ತು ಡೆಕ್ಕನಿ ತಳಿಗಳ ಸಂಕರಣದಿಂದ ಮತ್ತೊಂದು ವಿಧದ ನಾರಿ ಸುವರ್ಣ ತಳಿಯನ್ನು ಉತ್ಪಾದಿಸಲಾಗಿದೆ. ಸರಿಯಾಗಿ ಪೋಷಿಸಿದರೆ ಎರಡೆರಡು ಕುರಿಮರಿಗಳನ್ನು ಹಾಕುವ ತಳಿಯಿದು. ಅದಕ್ಕೆ ಫೆಕ್‍ಬಿ ವಂಶವಾಹಿ (fecB gene) ಯು ಕಾರಣವೆಂದು ತಿಳಿಯಲಾಗಿದೆ.

ಬೀಟಲ್ ಮೇಕೆಗಳು

ರಾಜಸ್ಥಾನದಿಂದ ತಂದಿರುವ ಬೀಟಲ್ ಮೇಕೆಗಳು ಸಾಮಾನ್ಯವಾಗಿ ಎರಡು ಮರಿ ಹಾಕುತ್ತವೆ. ನಮ್ಮ ಅನುಭವದ ಪ್ರಕಾರ ಉತ್ತಮ ಪೋಷಣೆ ಮಾಡಿದರೆ ಮೊದಲ ಮರಿಯ ಹುಟ್ಟುತೂಕ 5.8 ಕಿಲೋ ಮತ್ತು ಎರಡನೇ ಮರಿ 5.0 ಕಿಲೋ. ಒಟ್ಟು ಕನಿಷ್ಠ 10 ಕಿಲೋ ತೂಕದ ಎರಡು ಮರಿಗಳನ್ನು ಬೀಟಲ್ ಮೇಕೆಗಳು ಹೊಟ್ಟೆಯೊಳಗಿಟ್ಟುಕೊಂಡು ಭಾರ ಹೊರುತ್ತವೆ.

Beetal Goat 1

ಬೀಟಲ್ ಮೇಕೆಗಳಿಗೆ ರೋಮನ್ ಮೂಗು ಇರುತ್ತದೆ. ಉದ್ದವಾದ ಕಿವಿಗಳು. ಬೆನ್ನು 60 ಡಿಗ್ರಿ ಕೋನದಲ್ಲಿ ಎತ್ತರಕ್ಕೆ ಏರಿರುತ್ತದೆ. ಪ್ರೌಢಾವಸ್ಥೆಗೆ 5ರಿಂದ 7 ತಿಂಗಳಿಗೆ ಬರುತ್ತವೆ. ಆದರೆ 11 ತಿಂಗಳ ನಂತರ ಹೋತ ಕೊಡಿಸಲಾಗುತ್ತದೆ.

ಮೇಕೆ ಹಾಲಿಗೆ ಬೇಡಿಕೆ ಇದೆ. ಮಾರಾಟ ಮಾಡುವ ಕುರಿತು ಯೋಚಿಸುತ್ತಿದ್ದೇವೆ. ಒಂದು ಲೀಟರ್ ಹಾಲಿಗೆ ರೂ. 120ರಿಂದ 150ರವರೆಗೆ ದರ ಇದೆ. ಜೊತೆಗೆ, ಮೇಕೆ ಹಾಲಿನಿಂದ ಚೀಸ್, ಪನ್ನೀರ್ ಮತ್ತು ತುಪ್ಪ ಮಾಡಿ ಸೂಪರ್ ಮಾರ್ಕೆಟ್‍ಗಳಿಗೆ ಪೂರೈಸಬಹುದಾಗಿದೆ.

ಗ್ರಾಮೀಣ ಆರ್ಥಿಕತೆಗೆ ಕುರಿ – ಮೇಕೆ ಸಾಕಣೆ

ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುಳಿಕೆಗಳು ಸಿಗುತ್ತವೆ. ಅವು ನಾರಿನಾಂಶದ ಮೂಲ. ಕುರಿ, ಮೇಕೆ ಮತ್ತು ದನಗಳ ಮೇವಿನಲ್ಲಿ ಮುಖ್ಯವಾಗಿ ನಾರಿನಾಂಶ ಇರಲೇಬೇಕು. ಬೆಳೆಯುಳಿಕೆಗಳನ್ನು ಸದ್ಬಳಕೆ ಮಾಡಿಕೊಂಡರೆ ಕುರಿ – ಮೇಕೆ ಸಾಕಣೆಯು ಲಾಭದಾಯಕವಾಗುತ್ತದೆ. ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಇವುಗಳ ಸಾಕಣೆಯಿಂದ ಕಟ್ಟಬಹುದು. ಪಶುಗಳ ನಿರ್ವಹಣೆ (ಮ್ಯಾನೇಜ್‍ಮೆಂಟ್), ಪಶು ಪೋಷಕಾಂಶಗಳ ನಿರ್ವಹಣೆ (ನ್ಯೂಟ್ರಿಷನ್) ಮತ್ತು ಸಾಧ್ಯವಾದಷ್ಟೂ ಇತರೆ ತಳಿಗಳೊಂದಿಗೆ ಸಂಕರಣ (ಬ್ರೀಡಿಂಗ್) ಎಂಬ ಮೂರು ಅಭ್ಯಾಸಗಳಿಂದ ಈ ಉದ್ದಿಮೆಯನ್ನು ಯಶಸ್ಸಿನತ್ತ ಕೊಂಡೊಯ್ಯಬಹುದೆನ್ನುವುದು ಡಾ. ಶ್ರೀನಿವಾಸ್‍ರವರ ಫಿಲಾಸಫಿ.

ಬಯಲಿನಲ್ಲಿ ಬಿಟ್ಟು ಮೇಯಿಸುವವರಿಗೊಂದು ಅವರು ಹೇಳುವ ಕಿವಿಮಾತಿದೆ. ಬಯಲಿನಲ್ಲಿ ಪ್ರೋಟೋಜೋವಾ ಪರಾವಲಂಬಿಗಳಿರುತ್ತವೆ. ಪಿಡುದುಗಳು ಪ್ರಾಣಿಗಳನ್ನು ಕಚ್ಚಿ ರೋಗ ಹರಡುತ್ತವೆ. ರಕ್ತ ಕುಡಿಯುತ್ತವೆ. ಅದರಿಂದ ರಕ್ತಹೀನತೆಯ ಸಮಸ್ಯೆ. ದೇಹತೂಕ ತಗ್ಗುತ್ತದೆ. ಗರ್ಭ ಕಟ್ಟುವುದಿಲ್ಲ. ಕೆಲವೊಮ್ಮೆ ಸಾವಿಗೀಡಾಗುತ್ತವೆ. ಅದಕ್ಕೆ ಪರಿಹಾರವೆಂದರೆ ಮೇಯಿಸಿದ ಬಯಲಲ್ಲೇ ಮತ್ತೆ ಮತ್ತೆ ಹಲವು ಗುಂಪುಗಳ ದನಗಳನ್ನು ಮೇಯಿಸುವುದು ಬೇಡ. ಕೆಲಕಾಲ ಆ ಮೇವಿನ ಬಯಲಿಗೆ ವಿಶ್ರಾಂತಿ ಕೊಟ್ಟುಬಿಡಬೇಕು. ಆ ಕಾಲದಲ್ಲಿ ಪರಾವಲಂಬಿಗಳು, ಪಿಡುದುಗಳು ನಾಶವಾಗಬಹುದು. ಸುತ್ತು ಸರದಿಯ ಮೇಯಿಸುವಿಕೆ (ರೊಟೇಷನಲ್ ಗ್ರೇಜಿಂಗ್)ಯನ್ನು ಪಾಲಿಸಬೇಕು.

Sheep flock 12345

ಕುರಿ – ಮೇಕೆಗಳಿಗೆ ಕಾಡುವ ರೋಗಗಳು

ಕುರಿ ಮತ್ತು ಮೇಕೆ ಸಾಕಣೆದಾರರಿಗೆ ಅವುಗಳನ್ನು ಕಾಡುವ ಸಾಮಾನ್ಯ ರೋಗಗಳ ಬಗ್ಗೆ ಜ್ಞಾನವಿರಬೇಕು. ಮೈಕೋಪ್ಲಾಸ್ಮಾ ಎಂಬ ಬ್ಯಾಕ್ಟೀರಿಯಾದಿಂದ ಬರುವ ನ್ಯುಮೋನಿಯಾ, ಪ್ರೋಟೋಜೋವಾಗಳಿಂದ ಬರುವ ಥೈಲೇರಿಯೋಸಿಸ್ ಮತ್ತು ಬೆಬೆಶಿಯೋಸಿಸ್ ಹಾಗೂ ರಕ್ತಹೀರುವ ಹೊರಮೈ ಪರಾವಲಂಬಿಗಳನ್ನು ತಡೆಗಟ್ಟಬೇಕೆನ್ನುತ್ತಾರೆ. ಕಾಕ್ಸಿಡಿಯೋಸಿಸ್ ಸಮಸ್ಯೆಯಿದೆ. ಕುರಿ, ಮೇಕೆ ಸಾಕಣೆಯಲ್ಲಿ ಪರಾವಲಂಬಿ ವಿಜ್ಞಾನದ ಜ್ಞಾನ ಬೇಕು. ಜಂತುಹುಳುಗಳ ಔಷಧಿ ನೀಡಬೇಕು. ಲಸಿಕೆ ನೀಡುವಿಕೆಯು ಕ್ರಮಬದ್ದವಾಗಿರಬೇಕು. ಕೊಟ್ಟಿಗೆಗಳಲ್ಲಿ ಸೊಳ್ಳೆ ಕಾಟವನ್ನು ತಡೆಯಬೇಕು.

ಬಯಲಲ್ಲಿ ಮೇಯಲು ಬಿಟ್ಟರೆ ರೋಗ ರುಜಿನಗಳು ಹರಡುವಿಕೆ ಕೊಂಚ ಜಾಸ್ತಿಯೇ. ಅದಕ್ಕಾಗಿ ಜಮೀನಿನಲ್ಲಿ ನಿರ್ಮಿಸಿಕೊಂಡ ಕೊಟ್ಟಿಗೆಗಳಲ್ಲಿಯೇ ಸಾಕುವುದೊಳಿತು. ಅಗತ್ಯಕ್ಕೆ ತಕ್ಕಂತೆ ಮೇವು ಬೆಳೆದುಕೊಳ್ಳಬೇಕು. ಕೆಲ ಬೆಳೆಯುಳಿಕೆಗಳನ್ನು ಇತರೆ ರೈತರಿಂದ ಕೊಂಡುಕೊಳ್ಳಬಹುದು. ನೆಲಗಡಲೆಯ ಗಿಡಗಳನ್ನು ಕಾಯಿ ಕಿತ್ತ ಮೇಲೆ ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಅದು ಉತ್ತಮ ಮೇವಾಗುತ್ತದೆ. ಅದರಲ್ಲಿ ಶೇ. 30-35 ನಾರಿನಂಶ (ಫೈಬರ್), ಶೇ. 10-13 ಸಸಾರಜನಕ, ಜೊತೆಗೆ ಲವಣಗಳಿರುತ್ತವೆ. ಬೀಜ ಪಡೆದುಕೊಂಡ ನಂತರ ಉಳಿಯುವ ತೊಗರಿಕಾಯಿಯ ಹೊಟ್ಟು ಹಾಗೂ ಎಲ್ಲಾ ದ್ವಿದಳ ಧಾನ್ಯಗಳ ಬೆಳೆಯುಳಿಕೆಗಳು ಕೂಡ ಉತ್ತಮವಾದ ಮೇವುಗಳು.

ರಾಜ್ಯದ ಉತ್ತರಕ್ಕೆ ಕ್ರಮಸಿದಂತೆ, ಶಿರಾ ಬಿಟ್ಟು ಮುಂದೆ ಹೋದರೆ ಅದು ಬೇಳೆಕಾಳುಗಳ ಸಾಮ್ರಾಜ್ಯ. ಅಲ್ಲಿ ಕಾಳುಗಳ ಹೊಟ್ಟು ಸಿಗುತ್ತದೆ. ಆ ಹೊಟ್ಟಿನಲ್ಲಿ ನಾರಿನಂಶ ಹಾಗೂ ಸಸಾರಜನಕವಿರುವುದರಿಂದ ಅದು ಪಶುಗಳಿಗೆ ಉತ್ತಮ ಆಹಾರ. ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಕುರಿ ಮತ್ತು ಮೇಕೆಗಳಿಗೆ ಹಸಿರು ಮೇವು ಅಷ್ಟಾಗಿ ಬೇಡ. ನೇಪಿಯರ್ ಹುಲ್ಲು ತಿಂದೂ ತಿಂದೂ ದನಗಳು ಸೊರಗಿವೆ. ನೇಪಿಯರ್ ಅನ್ನು ನೇಪಥ್ಯಕ್ಕೆ ಸರಿಸಬೇಕಿದೆ.

ಕುರಿ ದೇಹತೂಕದ ಶೇ. 1.5-2 ರಷ್ಟು ಮತ್ತು ಮೇಕೆಯ ದೇಹತೂಕದ 3.5-4ರಷ್ಟು ಒಣಮೇವು (Dry Matter) ಕೊಡಬೇಕು. ಉಣಬಡಿಸುವ ಮೇವಿನಲ್ಲಿ ಇಂತಿಷ್ಟೇ ಪ್ರಮಾಣದ ಶರ್ಕರಪಿಷ್ಟಗಳು, ಸಸಾರಜನಕ ಇರಬೇಕು. ಈಗಂತೂ ‘ಪ್ರಿಸೈಜ್ ನ್ಯೂಟ್ರಿಷನ್’ ಎಂಬ ಪರಿಭಾಷೆ ಬಂದುಬಿಟ್ಟಿದೆ. ಪಶುಗಳ ಸಂಕೀರ್ಣ ಜಠರದ ಭಾಗವಾದ ‘ರೂಮೆನ್’ ಒಳಗಿನ ಪರಿಸರವನ್ನು ಕಾಪಾಡಿಕೊಂಡರೆ ಪಶು ಕೃಷಿಯು ಲಾಭದಾಯಕವಾಗುತ್ತದೆ.

ನಡೆದಾಡುವ ಬ್ಯಾಂಕುಗಳು

ಬ್ರಾಯ್ಲರ್ ಕೋಳಿಗಳಾದರೆ ನಿಗದಿತ ವಯಸ್ಸಿಗೆ, ಸಿಕ್ಕ ದರಕ್ಕೆ ಮಾರಿಬಿಡಬೇಕು. ಕುರಿ, ಮೇಕೆಗಳನ್ನು ಯಾವಾಗ ಬೇಕಾದರೂ ಮಾಂಸಕ್ಕಾಗಿ ಮಾರಬಹುದು. ಖಚಿತ ದರವಂತೂ ಇದ್ದೇ ಇರುತ್ತದೆ. ಪ್ರತಿ ಕಿಲೋ ಕುರಿ ಮಾಂಸಕ್ಕೆ ರೂ. 800ರಿಂದ 850 ಇದೆ. ಬಕ್ರಿದ್ ಹಬ್ಬದ ಸಂದರ್ಭವಂತೂ ದೊಡ್ಡ ಮಾರುಕಟ್ಟೆಯನ್ನು ಒದಗಿಸಿಕೊಡುತ್ತದೆ. ಒಂದು ಅಂದಾಜಿನಂತೆ, ಪ್ರತಿ ಭಾನುವಾರ ಮತ್ತು ಬುಧವಾರ ರಾಜಸ್ಥಾನದಿಂದ 1,75,000 ಮೇಕೆಗಳು ಬೆಂಗಳೂರಿಗೆ ಬಂದು ತಲುಪುತ್ತವೆ. ಮುಂಬೈಗೆ ಒಂದು ಭಾನುವಾರಕ್ಕೆ 10 ಲಕ್ಷ ಮೇಕೆಗಳು ಬೇಕು! ದೊಡ್ಡಬಳ್ಳಾಪುರಕ್ಕೆ ಪ್ರತಿ ಭಾನುವಾರ 5,000 ಕುರಿ ಅಥವಾ ಮೇಕೆಗಳು ಮಾಂಸಕ್ಕಾಗಿ ಬೇಕು. ಕುರಿ, ಮೇಕೆಗಳು ರೈತನಿಗೆ ಗ್ಯಾರಂಟಿ ಬೆಲೆಯನ್ನು ಒದಗಿಸಿಕೊಡುತ್ತವೆ. ಅವು ‘ನಡೆದಾಡುವ ಬ್ಯಾಂಕುಗಳು’.

ಕುರಿಗಳ ಸೂಲುಗಳು

ಕುರಿಗಳು ಮರಿ ಹಾಕಿದ ಮೇಲೆ ಎರಡು ತಿಂಗಳಿಗೆ ಬೆದೆಗೆ ಬರುತ್ತವೆ. ಮೂರು ತಿಂಗಳವರೆಗೆ ಟಗರಿಗೆ ಬಿಡುವುದಿಲ್ಲ. ಪ್ರತಿ ಎಂಟು ತಿಂಗಳಿಗೆ ಒಂದು ಸೂಲು ಆಗುತ್ತದೆ. ಗರ್ಭಾವಸ್ಥೆಯ ಅವಧಿ 155 ದಿನಗಳು. ಎರಡು ವರ್ಷಕ್ಕೆ ಮೂರು ಸೂಲಾಗುತ್ತದೆ. ಇಂತಹ ಲೆಕ್ಕಾಚಾರಗಳು ಯಶಸ್ಸಿನ ಪಶು ಕೃಷಿಗೆ ಅಗತ್ಯ.
ಆಹಾರ ಪರಿವರ್ತನಾ ಅನುಪಾತ (Feed Conversion Ratio : FCR) ಮರಿಗಳು ಸರಿಯಾಗಿ ಬೆಳೆಯಲು ಹಾಲುಣಿಸಬೇಕು. ಮೂರು ತಿಂಗಳಿಗೆ 25-27 ಕಿಲೋ ತೂಕಕ್ಕೆ ಬರುತ್ತವೆ.

Goat Kid 123

ಕುರಿ, ಮೇಕೆಗಳು 6ರಿಂದ 6.5 ಕಿಲೋ ಮೇವು ತಿಂದು 1 ಕಿಲೋ ದೇಹತೂಕವನ್ನು ಹೆಚ್ಚಿಸಿಕೊಳ್ಳುತ್ತವೆ. ದಿನವೊಂದಕ್ಕೆ ಸರಾಸರಿ 300ರಿಂದ 350 ಗ್ರಾಂ ತೂಕ ಹೆಚ್ಚಾಗುತ್ತದೆ. ಪ್ರತಿ ಪ್ರಾಣಿಗೆ ದಿನಕ್ಕೆ 5 ಗ್ರಾಂನಷ್ಟು ಲವಣ ಮಿಶ್ರಣ ಬೇಕು. ಅದರಲ್ಲಿ ಜಿಂಕ್ (ಸತು), ಕಬ್ಬಿಣ, ರಂಜಕ, ಕೋಬಾಲ್ಟ್ ಅಗತ್ಯವಾಗಿ ಇರಬೇಕು.
ಪಶುಗಳ ಉತ್ಪಾದನಾ ಕ್ಷೇತ್ರಕ್ಕೆ ಐಟಿ, ಬಿಟಿ ಉದ್ಯೋಗಿಗಳು ಕಾಲಿಡುತ್ತಿದ್ದಾರೆ. ರೈತರೂ ಮುಂದುವರೆಸುತ್ತಿದ್ದಾರೆ. ಎಲ್ಲರಿಗೂ ಪಶುಗಳ ದಿನನಿತ್ಯದ ನಿರ್ವಹಣೆ, ಪೋಷಕಾಂಶಗಳ ಪೂರೈಕೆ, ಪಶು ಆಹಾರ ವಿಜ್ಞಾನದ ಜ್ಞಾನ, ಕೊಂಚ ಬ್ರೀಡಿಂಗ್ ಜ್ಞಾನವಿದ್ದರೆ ಪಶುಪಾಲನೆಯಲ್ಲಿ, ಪಶುಗಳ ಉತ್ಪಾದನೆಯಲ್ಲಿ ಯಶಸ್ಸು ಕಾಣಬಹುದು.
ಪಶುವೈದ್ಯಕೀಯ ಪದವಿಯ ಜೊತೆಗೆ, ನಿರಂತರವಾಗಿ ದೇಶ ವಿದೇಶಗಳ ವೈಜ್ಞಾನಿಕ ಜರ್ನಲ್‍ಗಳ ಓದುವಿಕೆಯಿಂದ ಜ್ಞಾನ ಪಡೆದು ಅದನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಿರುವ ಡಾ. ಶ್ರೀನಿವಾಸ್‍ರವರು ‘ಪ್ರೊಫೆಸರ್ ಆಫ್ ಪ್ರಾಕ್ಟೀಸ್’ ಎಂಬಂತೆ ನಮಗೆ ಕಾಣುತ್ತಾರೆ.

ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ರಾಜ್ಯ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಪಶುವೈದ್ಯಕೀಯ ಸೇವೆಗಳಿಗೆ ಪ್ರಾಮುಖ್ಯತೆ ಕೊಟ್ಟಷ್ಟು ಪಶುಸಂಗೋಪನೆಗೆ ಕೊಡುತ್ತಿಲ್ಲ. ಚಿಕಿತ್ಸೆ ನೀಡುವ ಪಶುವೈದ್ಯಕೀಯ ಸೇವೆಯಿದೆ. ಆದರೆ ಜಾನುವಾರು ಉತ್ಪತ್ತಿಗೆ, ಪಶುಸಂಗೋಪನೆಗೆ ಅಗತ್ಯವಾದ ಸಲಹೆ, ಸಹಕಾರಗಳು ಸಿಗುತ್ತಿಲ್ಲ.
ಸರ್ಕಾರದ ಯೋಜನೆಗಳು ಜನರನ್ನು ಅಷ್ಟಾಗಿ ಮುಟ್ಟುತ್ತಿಲ್ಲ. ರಾಷ್ಟ್ರೀಯ ಜಾನುವಾರು ಮಿಷನ್ ಎಂಬ ಯೋಜನೆಯ ಅನುಷ್ಟಾನ ಹಂತದಲ್ಲಿ ಭ್ರಷ್ಟತೆಯಿದೆ.

ಕೊನೆಯ ಮಾತು
ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ 1921ರಲ್ಲಿ ನಮ್ಮ ಕುರಿಗಳ ಅಭಿವೃದ್ದಿಗೆ ಆಫ್ರಿಕಾದಿಂದ ಮೆರಿನೋ ಮತ್ತು ತದನಂತರ 1941ರಲ್ಲಿ ನ್ಯೂಜಿಲ್ಯಾಂಡಿನ ಹೊಸ ಸಂಕರಣ ತಳಿಯಾದ ಕಾರಿಡೇಲ್ ಕುರಿಗಳನ್ನು ಆಮದು ಮಾಡಿಕೊಳ್ಳಲಾಯಿತು.

ನಾಲ್ವಡಿಯವರ ಕಾಲದಲ್ಲಿ ಮತ್ತೊಂದು ಕುರಿ ಅಭಿವೃದ್ದಿಯ ಯೋಜನೆ ಜಾರಿಯಾಯಿತು. ಜಿಲ್ಲಾವಾರು ಕುರಿ ಸಾಕಣೆದಾರರ ಸಂಘಗಳನ್ನು ರಚಿಸಲಾಯಿತು. ಸಂಘಗಳ ಅಭಿವೃದ್ದಿಗೆ ಅನುದಾನ ನೀಡಲಾಯಿತು. ಕುರಿಗಳ ಸಂಖ್ಯೆಯು ಹೆಚ್ಚಿರುವ ಕಡೆ ತಾಲ್ಲೂಕು ಮಟ್ಟದ ಕುರಿ ಸಾಕಣೆದಾರರ ಸಂಘಗಳ ರಚನೆಗೆ ಅನುಮತಿ ಸಿಕ್ಕಿತು. ದೊಡ್ಡಬಳ್ಳಾಪುರದ ಗ್ರಾಮೀಣ ಅಭಿವೃದ್ದಿ ಕೇಂದ್ರದಲ್ಲಿ ಕುರಿ ಸಾಕಾಣಿಕೆ ಘಟಕವನ್ನು 1941ರಲ್ಲಿ ಆರಂಭಿಸಿದರು. ಆ ಪರಂಪರೆಯ ಕೊಂಡಿಯಾಗಿ ಡಾ. ಶ್ರೀನಿವಾಸ್‍ರವರು ದೊಡ್ಡಬಳ್ಳಾಪುರದಲ್ಲಿ ಕುರಿ ಮತ್ತು ಮೇಕೆ ಸಾಕಣೆಯ ಉದ್ದಿಮೆಯನ್ನು ವೈಜ್ಞಾನಿಕವಾಗಿ ವಿನೂತನ ರೀತಿಯಲ್ಲಿ ನಡೆಸುತ್ತಿರುವುದು ಎಲ್ಲರಿಗೂ ಸ್ಪೂರ್ತಿದಾಯಕ. ಅವರು ಮೂರು ದಶಕಗಳಿಂದ ಯಶಸ್ವೀ ಉದ್ದಿಮೆದಾರರು.
ಚಿತ್ರಗಳು : ಸಂತೃಪ್ತ. ಎನ್.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...