ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

Date:

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಆಡಳಿತದಲ್ಲಿ ಸಮನ್ವಯವನ್ನು ಸಾಧಿಸುವುದು. ಈ ಮೂಲಕ ರಾಜ್ಯಗಳಿಗೆ ತಮ್ಮ ಬಾಧ್ಯತೆಗಳು, ತಾವು ಸಾಧಿಸಬೇಕಾಗಿರುವ ಗುರಿ ಮತ್ತು ಪರಿಶೀಲನಾ ನಿಯಮಗಳ ಕುರಿತು ಸ್ಪಷ್ಟ ತಿಳಿವಳಿಕೆ ನೀಡಬೇಕು.

ಪ್ಯಾರಿಸ್ ಒಪ್ಪಂದದಲ್ಲಿ ಉಲ್ಲೇಖಿಸಲಾಗಿರುವ ಅಂತರರಾಷ್ಟ್ರೀಯ ಹವಾಮಾನ ಷರತ್ತುಗಳನ್ನು ಪೂರೈಸಲು, ಭಾರತದ ಕಾನೂನು ಚೌಕಟ್ಟನ್ನು ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಬೇಕು ಎಂಬುದು ಹಲವಾರು ಪರಿಣತರ ಅಭಿಪ್ರಾಯ.

ಏಕೆಂದರೆ ಹವಾಮಾನ ಬದಲಾವಣೆಗೆ ಸಂಬಂಧಿಸಿದ ಯಾವುದೇ ಆದೇಶಗಳನ್ನು ಹೊರಡಿಸಲು, ಅದರ ಅನುಷ್ಠಾನಕ್ಕೆ ಕಾರ್ಯವಿಧಾನಗಳ ರೂಪುರೇಷೆಗಳನ್ನು ಸಿದ್ಧಪಡಿಸಲು ಮತ್ತು ಅದಕ್ಕೆ ನಿರ್ದಿಷ್ಟ ಸಮಯಮಿತಿಯನ್ನು ನಿಗದಿಪಡಿಸಲು ಸ್ಪಷ್ಟ ಕಾನೂನು ಚೌಕಟ್ಟಿನ ಅಗತ್ಯವಿದೆ. ಅದೂ ಭಾರತದ ಒಕ್ಕೂಟ ವ್ಯವಸ್ಥೆಗೆ ಅನುಗುಣವಾಗಿ ರೂಪಿಸಲಾದ, ಭಾರತದಾದ್ಯಂತ ಹವಾಮಾನ ಕ್ರಮಕ್ಕೆ ಅಗತ್ಯವಾದ ಕಾನೂನು ಬೆನ್ನೆಲುಬನ್ನು ಒದಗಿಸಬಲ್ಲ ʻಸಮಗ್ರ ರಾಷ್ಟ್ರೀಯ ಹವಾಮಾನ ಕಾನೂನು’.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದರೊಂದಿಗೆ ಹವಾಮಾನ ಬದಲಾವಣೆಯ ಕುರಿತಾದ ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ರಾಷ್ಟ್ರೀಯ ಅಗತ್ಯತೆಗಳು, ಆದ್ಯತೆಗಳು ಇತ್ಯಾದಿ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಅಂತಾರಾಷ್ಟ್ರೀಯ ಯಶಸ್ವೀ ಮಾದರಿಗಳ ಅಧ್ಯಯನ ನಡೆಸಿ ನಮ್ಮ ದೇಶದ ಸಾಂಸ್ಥಿಕ ಚೌಕಟ್ಟಿಗೆ ಹೊಂದಿಕೊಳ್ಳುವಂತೆ ಅದನ್ನು ಮಾರ್ಪಡಿಸಿ ಅಳವಡಿಸಿಕೊಳ್ಳಬೇಕಾಗುತ್ತದೆ.

ಈ ರೀತಿ ಕಾನೂನಾತ್ಮಕ ಹಾಗು ಆಡಳಿತಾತ್ಮಕ ಬದಲಾವಣೆ ತರುವಲ್ಲಿ ಪ್ರಸ್ತುತ ಇರುವ ಸವಾಲುಗಳಾವುವು? ಹವಾಮಾನ ಕಾನೂನು ಚೌಕಟ್ಟು ಹಣಕಾಸು ಹಂಚಿಕೆ, ಸಾರ್ವಜನಿಕ ಪಾಲ್ಗೊಳ್ಳುವಿಕೆ, ಹೊಣೆಗಾರಿಕೆ ಇತ್ಯಾದಿ ಯಾವೆಲ್ಲ ಅಂಶಗಳನ್ನು ಒಳಗೊಂಡಿರಬೇಕು? ರಾಜ್ಯದಲ್ಲಿ ಹವಾಮಾನ ಆಯೋಗಗಳ ಅಗತ್ಯತೆ ಇದೆಯೇ? ಇದ್ದರೆ ಅದರ ರೂಪುರೇಷೆ ಹೇಗಿರಬೇಕು ಇವುಗಳ ಕುರಿತಾದ ವಿಶ್ಲೇಷಣೆ ಇಲ್ಲಿದೆ.

ಪ್ರಸ್ತುತ ಸವಾಲುಗಳು

ದೇಶದ ಹವಾಮಾನದಲ್ಲಿ ಪ್ರಾದೇಶಿಕವಾರು ವ್ಯತ್ಯಾಸಗಳಿರುವ ಕಾರಣ ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ, ಪ್ರದೇಶಕ್ಕೆ ನಿರ್ದಿಷ್ಟವಾಗಿ ಕಾರ್ಯತಂತ್ರಗಳನ್ನು ರೂಪಿಸಬೇಕಾಗುತ್ತದೆ. ಆದರೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಳೀಯವಾಗಿ ರಾಜ್ಯಗಳು ತಮ್ಮದೇ ಆದ ಹವಾಮಾನ ಕಾರ್ಯಸೂಚಿಗಳನ್ನು ರೂಪಿಸುವ ಮತ್ತು ಕಾರ್ಯಗತಗೊಳಿಸುವ ಅಧಿಕಾರ ಹೊಂದಿಲ್ಲ. ಇದರೊಂದಿಗೆ ಕೇಂದ್ರ ಸರ್ಕಾರದ ನಿಧಿಯು ಸಾಮಾನ್ಯವಾಗಿ ಅದರದ್ದೇ ಆದ ಷರತ್ತುಗಳನ್ನು ಹೊಂದಿರುತ್ತದೆ ಮತ್ತು ಸಾಮಾನ್ಯವಾಗಿ ಈ ಷರತ್ತುಗಳಿಗೂ ಹಾಗು ಸ್ಥಳೀಯ ಆದ್ಯತೆಗಳಿಗೂ ಹೊಂದಿಕೆ ದೂರದ ಮಾತಾಗಿರುತ್ತದೆ.

ಉದಾಹರಣೆಗೆ ರಾಜ್ಯದ ದಕ್ಷಿಣದಲ್ಲಿ ಪ್ರವಾಹಗಳನ್ನ ನಿರ್ವಹಿಸಲು ರಾಜಕಾಲುವೆಗಳು ಹಾಗು ಉತ್ತರದಲ್ಲಿ ಬರಗಾಲ ಎದುರಿಸಲು ಮಳೆನೀರು ಕೊಯ್ಲಿನಂತಹ ಯೋಜನೆಗಳ ಅಗತ್ಯವಿದೆ. ಹೀಗಾಗಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಕಾರ್ಯತಂತ್ರಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲು ಇಲ್ಲಿ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತಾಗಿ ಚಿಂತಿಸಬೇಕಿದೆ. ಇದರೊಂದಿಗೆ ರಾಜ್ಯಗಳಿಗೆ ಅಧಿಕಾರ ಸಿಕ್ಕಿದಲ್ಲಿ, ತಮ್ಮದೇ ಆದ ಅಭಿವೃದ್ಧಿ ಮತ್ತು ರಾಜಕೀಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ, ಹವಾಮಾನ ಬದಲಾವಣೆಯ ಮುನ್ನೆಚ್ಚರಿಕಾ ಕ್ರಮದ ಅನುಸಾರ ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರುತ್ತಾ ಹೋಗುವ ಅಪಾಯವೂ ಇಲ್ಲದಿಲ್ಲ.

kodagu 3
ಕೊಡಗಿನಲ್ಲಿ ಮಹಾಮಳೆಯಿಂದಾಗಿ ಸಂಭವಿಸಿದ ದುರಂತ

ಕೆಲವು ರಾಜ್ಯಗಳ ಹವಾಮಾನ ಬದಲಾವಣೆಯ ಕುರಿತಾದ ರಾಜ್ಯ ಕ್ರಿಯಾ ಯೋಜನೆಗಳು (SAPCCs) ಹವಾಮಾನ ಸಂಬಂಧೀ ವಿಪತ್ತುಗಳನ್ನು, ವಿಪತ್ತು ನಿರ್ವಹಣೆ ವಿಭಾಗದಲ್ಲಿ ಸಂಯೋಜಿಸಿವೆ. ಕೊಡಗಿನಲ್ಲಿ ಮಹಾಮಳೆಯಿಂದಾಗಿ ಸಂಭವಿಸಿದ ದುರಂತ ಮತ್ತು ಇತ್ತೀಚೆಗೆ ಮಳೆಯಿಂದ ಭೂಕುಸಿತ, ಪ್ರವಾಹದಂತಹ ಘಟನೆಗಳು ಸರ್ವೇ ಸಾಮಾನ್ಯವಾಗಿರುವುದರಿಂದ ಈ ವಿಭಾಗದಲ್ಲಿ ಪೂರ್ವಭಾವಿಯಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿರುತ್ತದೆ. ಇದರೊಂದಿಗೆ ತಳ ಮಟ್ಟದಿಂದಲೇ ಎಂದರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಿಂದಲೇ ವಿಪತ್ತು ನಿರ್ವಹಣಾ ತಂಡ ವಿಕೋಪವನ್ನು ಎದುರಿಸಲು ಸಜ್ಜಾಗಿರುವುದರಿಂದ ಇವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಬಹುದು. ಆದರೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವೇ? ಈ ಬಗ್ಗೆ ಸಾಕಷ್ಟು ಸ್ಷಷ್ಟತೆಗಳು ಬೇಕಾಗುತ್ತದೆ.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಆಡಳಿತದಲ್ಲಿ ಸಮನ್ವಯವನ್ನು ಸಾಧಿಸುವುದು. ಈ ಮೂಲಕ ರಾಜ್ಯಗಳಿಗೆ ತಮ್ಮ ಬಾಧ್ಯತೆಗಳು, ತಾವು ಸಾಧಿಸಬೇಕಾಗಿರುವ ಗುರಿ ಮತ್ತು ಪರಿಶೀಲನಾ ನಿಯಮಗಳ ಕುರಿತು ಸ್ಪಷ್ಟ ತಿಳಿವಳಿಕೆ ನೀಡಬೇಕು.

ಹವಾಮಾನ ಕ್ರಮಕ್ಕಾಗಿ ಸ್ಪಷ್ಟ ಕಾನೂನು ಚೌಕಟ್ಟು

ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯತಂತ್ರಗಳ ವಿಕೇಂದ್ರೀಕರಣವು ನೀತಿಗಳ ಅನುಷ್ಠಾನ, ಪರಿಶೀಲನೆಯನ್ನು ಸುಲಭಗೊಳಿಸುವುದಲ್ಲದೆ, ಸಮುದಾಯದ ಹೊಣೆಗಾರಿಕೆ ಮತ್ತು ಸಮುದಾಯದ ಒಳಗೊಳ್ಳುವಿಕೆಯನ್ನು ಬಲಪಡಿಸುತ್ತದೆ. ಒಂದು ದೃಢವಾದ ಹೊಣೆಗಾರಿಕೆ ಚೌಕಟ್ಟು ಹವಾಮಾನ ನಿಧಿಗಳನ್ನು ಪರಿಣಾಮಕಾರಿಯಾಗಿ ಬಳಸುವುದನ್ನು ಮತ್ತು ಉದ್ದೇಶಿತ ಫಲಿತಾಂಶಗಳನ್ನು ಸಾಧಿಸುವುದನ್ನು ಖಚಿತಪಡಿಸುತ್ತದೆ.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ರೂಪಿಸಲಾಗುವ ಸಮಗ್ರ ಕಾನೂನು, ಪ್ಯಾರಿಸ್‌ ಮತ್ತು ಜಪಾನ್‌ ಸೇರಿದಂತೆ ಎಲ್ಲಾ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಗಮನದಲ್ಲಿರಿಸಿಕೊಂಡು ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ, ಇಂಗಾಲದ ಹೊರಸೂಸುವಿಕೆಯ ನಿಯಂತ್ರಣ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಗುರಿಗಳನ್ನು ಸಾಧಿಸುವುದು ಕಡ್ಡಾಯಗೊಳಿಸುವ ಮಾರ್ಗದರ್ಶಿ ನಿಯಮಗಳನ್ನು ರೂಪುಗೊಳ್ಳಬೇಕಾಗಿದೆ.

ಈ ಎಲ್ಲಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ರೂಪಿತವಾಗಬೇಕಾಗಿರುವ ಕಾನೂನು ಯಾವ ಸ್ವರೂಪದ್ದಾಗಿರಬೇಕು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಹಕ್ಕು ಆಧಾರಿತ ವಿಧಾನ

ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆ ಪರಿಸರ ಹಕ್ಕುಗಳ ರಕ್ಷಣೆಗೆ ಸಾಕಷ್ಟು ಬಲ ತುಂಬುತ್ತದೆ. ಇದರಿಂದಾಗಿ ಪರಿಸರ ಹಕ್ಕುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸಾರ್ವಜನಿಕರು ಹಕ್ಕೊತ್ತಾಯ ಹೇರಲು ಮತ್ತು ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇತ್ತೀಚೆಗೆ ನಡೆದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ವಿರುದ್ಧದ ಸಾರ್ವಜನಿಕ ಅಹವಾಲು ಸಭೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು. ಇಲ್ಲಿ ವ್ಯಾಪಕವಾಗಿ ವ್ಯಕ್ತವಾಗುತ್ತಿರುವ ಸಾರ್ವಜನಿಕರ ಪರಿಸರಪರ ಕಾಳಜಿ ಮರೆತು ಹೋಗಿರುವ ಪರಿಸರ ಚಳುವಳಿಗಳನ್ನು ಮತ್ತೆ ನೆನಪಿಸುವಂತಿದೆ. ಈ ಯೋಜನೆಯ ಕುರಿತಾಗಿ ನಡೆಸಲಾದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಜನರು ಯೋಜನೆಯ ಪಾರದರ್ಶಕತೆಯ ಬಗ್ಗೆ, ಯೋಜನೆ ಅನುಸರಿಸಬೇಕಾಗಿರುವ ಕಾನೂನುಗಳ, ಪರಿಸರ ಹೊಣೆಗಾರಿಕೆ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಹೀಗೆ ಸಮುದಾಯದ ಹೊಣೆಗಾರಿಗೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆ ಸಾಧ್ಯವಾಗಬಲ್ಲ, ಕಾನೂನುಗಳು ಅಗತ್ಯವಿದೆ.

ಸಾರ್ವಜನಿಕ ತೊಡಗಿಸಿಕೊಳ್ಳುವಿಕೆ ಉನ್ನತ ಮಟ್ಟದ ಸಮಾಲೋಚನೆಗಳಿಗೆ ಮಾತ್ರ ಸೀಮಿತವಾಗಿರದೆ, ನೆಲದ ವಾಸ್ತವಗಳನ್ನು ಪ್ರತಿಬಿಂಬಿಸುವ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಸ್ಥಳೀಯರನ್ನು, ಒಳಗೊಳ್ಳುವ ಅವಶ್ಯಕತೆಯಿದೆ.

ಹವಾಮಾನ ಹಣಕಾಸು ಹಂಚಿಕೆ

ಸರ್ಕಾರದ ಎಲ್ಲಾ ಹಂತಗಳಲ್ಲಿ ಹವಾಮಾನ-ಸಂಬಂಧಿತ ವೆಚ್ಚಗಳನ್ನು ಟ್ರ್ಯಾಕ್ ಮಾಡಲು ಮತ್ತು ವರದಿ ಮಾಡಲು ಹವಾಮಾನ ಸಂಬಂಧಿತ ಹಣಕಾಸಿಗೆಂದೇ ವಿಶೇಷವಾಗಿ ಬಜೆಟ್ ಟ್ಯಾಗಿಂಗ್ ಪರಿಚಯಿಸಲು ಆರ್ಥಿಕ ತಜ್ಞರು ಸೂಚಿಸುತ್ತಾರೆ. ಇದರೊಂದಿಗೆ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಅಥವಾ ಹೊಂದಾಣಿಕೆ ಕ್ರಮಗಳಲ್ಲಿ ಮುನ್ನಡೆ ಸಾಧಿಸುವ ರಾಜ್ಯಗಳಿಗೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹವನ್ನು ನೀಡುವ ಪ್ರಸ್ತಾವನೆಯನ್ನೂ ಮುಂದಿಡುತ್ತಾರೆ.

ನವೀಕರಿಸಬಹುದಾದ ಇಂಧನ, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಸುಸ್ಥಿರ ನಗರ ಯೋಜನೆ/ಅರ್ಬನ್‌ ಪ್ಲಾನಿಂಗ್‌ ಕುರಿತಾದ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಈ ಹವಾಮಾನ ನಿಧಿಯನ್ನು ಬಳಸಿಕೊಳ್ಳುವಂತೆ ಮಾಡಬಹುದು. ಹವಾಮಾನ ಸ್ಥಿತಿಸ್ಥಾಪಕತ್ವ ಸಾಧಿಸಲು ರೂಪಿಸಲಾದ ಚೌಕಟ್ಟನ್ನು ನಗರ ಮಾಸ್ಟರ್ ಪ್ಲಾನ್‌ಗಳಲ್ಲಿ ಸಂಯೋಜಿಸಬೇಕು. ಇವುಗಳಲ್ಲಿ ಸುಸ್ಥಿರ ಸಾರಿಗೆ, ಪ್ರವಾಹ ರಕ್ಷಣೆ ಮತ್ತು ಹಸಿರು ಮೂಲಸೌಕರ್ಯಕ್ಕೆ ಒತ್ತು ನೀಡಬೇಕು.

ರಾಷ್ಟ್ರೀಯ ಹವಾಮಾನ ವರದಿ ಚೌಕಟ್ಟನ್ನು ಜಾರಿಗೊಳಿಸಿದರೆ, ಅದು ರಾಜ್ಯಗಳು ಪ್ರಗತಿ ವರದಿಗಳನ್ನು ಸಲ್ಲಿಸುವಂತೆ ಮಾಡುತ್ತದೆ. ವರದಿಗಳು ಹೊರಸೂಸುವಿಕೆ ಕಡಿತ, ಹೊಂದಾಣಿಕೆಯ ಪ್ರಗತಿ ಮತ್ತು ಹಣಕಾಸಿನ ವೆಚ್ಚಗಳ ವಿವರಗಳನ್ನು ಒಳಗೊಂಡಿರಬೇಕು. ಎಲ್ಲಾ ಹವಾಮಾನ ಪ್ರಗತಿ ವರದಿಗಳನ್ನು ಸಾರ್ವಜನಿಕಗೊಳಿಸಿ ಸರ್ಕಾರಗಳ ಹೊಣೆಗಾರಿಕೆಯನ್ನು ಹೆಚ್ಚಿಸುವಂತೆ ಮಾಡಬಹುದು.

ರಾಜ್ಯ ಹಣಕಾಸು ಆಯೋಗಗಳು(SFC ಗಳು)

ಭಾರತದ ಹಣಕಾಸು ಆಯೋಗವು ಹಣಕಾಸು ಯೋಜನೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಪ್ರಮುಖವಾಗಿ ಗುರುತಿಸಿದೆ. ಇತ್ತೀಚಿನ ವರ್ಷಗಳಲ್ಲಿ, ರಾಜ್ಯ ಮಟ್ಟದಲ್ಲಿ ಸುಸ್ಥಿರ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಅದು ತನ್ನ ತೆರಿಗೆ ಹಂಚಿಕೆ ಮಾನದಂಡಗಳಲ್ಲಿ ಪರಿಸರ ಮಾನದಂಡಗಳನ್ನು ಸೇರಿಸಿದೆ.

ಅರಣ್ಯ

14 ನೇ ಹಣಕಾಸು ಆಯೋಗ (2015–20) ರಾಜ್ಯಗಳಿಗೆ ತೆರಿಗೆ ಹಂಚಿಕೆಗೆ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಮಾನದಂಡವಾಗಿ ಸೇರಿಸುವ ಮೂಲಕ ಗಮನಾರ್ಹ ಹೆಜ್ಜೆ ಇಟ್ಟಿದೆ. ಇದರ ಪ್ರಕಾರ 7.5 ಶೇಕಡಾ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯಗಳು ಹೆಚ್ಚಿನ ತೆರಿಗೆಯ ಪಾಲುನ್ನು ಪಡೆಯಲು ಅರ್ಹವಾಗುತ್ತವೆ. 15 ನೇ ಹಣಕಾಸು ಆಯೋಗ (2021–26) ಈ ವ್ಯಾಪ್ತಿಯನ್ನು 10 ಶೇಕಡಾ ಕ್ಕೆ ಹೆಚ್ಚಿಸುವ ಮೂಲಕ, ಅರಣ್ಯ ವ್ಯಾಪ್ತಿಯನ್ನು ನಿರ್ವಹಿಸಲು ಮತ್ತು ವಿಸ್ತರಿಸಲು ರಾಜ್ಯಗಳನ್ನು ಮತ್ತಷ್ಟು ಪ್ರೋತ್ಸಾಹಿಸಿದೆ. ಜನಸಂಖ್ಯೆ, ಭೌಗೋಳಿಕ ಪ್ರದೇಶ ಮತ್ತು ಆದಾಯದ ನಡುವಿನ ಅಂತರದಂತಹ ಪರಿಸರೇತರ ಅಂಶಗಳ ಜೊತೆಗೆ, ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಎರಡೂ ಆಯೋಗಗಳು ಪ್ರೋತ್ಸಾಹಿಸಿದವು.

ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆಯ ಪಾಲಿನಲ್ಲಿ ಅಸಮಾನತೆ ಉಂಟಾಗುತ್ತದೆ ಎಂಬ ರಾಜ್ಯಗಳ ಕೂಗಿನ ನಡುವೆಯೂ ಈ ಬೆಳವಣಿಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಆಶಾದಾಯಕವಾಗಿದೆ.

ಇದೇ ರೀತಿಯಾಗಿ ರಾಜ್ಯದಲ್ಲಿಯೂ ರಾಜ್ಯ ಹಣಕಾಸು ಆಯೋಗವನ್ನು ರಚಿಸಬಹುದು. ಆಯೋಗವು ಕಾಡುಗಳ ಸಂರಕ್ಷಣೆ, ಸಕ್ರಿಯ ಅರಣ್ಯೀಕರಣ, ಮರು ಅರಣ್ಯೀಕರಣ, ಜೀವವೈವಿಧ್ಯತೆಯ ಶ್ರೀಮಂತಿಕೆ, ಕಡಿಮೆ ಪ್ರಮಾಣದಲ್ಲಿ ಇಂಗಾಲ ಹೊರಹೊಮ್ಮುವಿಕೆ ಮತ್ತು ಶುದ್ಧ ನೀರು ಈ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸಿನ ಪ್ರೋತ್ಸಾಹವನ್ನು ನೀಡಬಹುದು,

ಅಂತಾರಾಷ್ಟ್ರೀಯ ನಿದರ್ಶನ

ಕೇವಲ ಭಾರತದಲ್ಲಿರುವ ಟಾಪ್‌ ಡೌನ್‌ ಮಾಡೆಲ್‌ (Top Down Model) ಮಾತ್ರ ಹವಾಮಾನ ಬದಲಾವಣೆಯ ನೀತಿಗಳನ್ನು ಅಳವಡಿಸಲು ಸಮಸ್ಯೆಯನ್ನು ಒಡ್ಡುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಇದೇ ರೀತಿಯ ʻಟಾಪ್‌ ಹೆವಿ ಫೆಡರಿಲಿಸಂʼ (Top heavy Fedaralism) ಎಂದು ಕರೆಯಲ್ಪಡುವ ವಾತಾವರಣವೇ ಇದೆ. ಉದಾಹರಣೆಗೆ ಕೆನಡಾದ ಕೇಂದ್ರ ಸರ್ಕಾರ ಇಂಗಾಲದ ತೆರಿಗೆ ಜಾರಿಗೊಳಿಸಿದೆ, ಆದರೆ ಇದು ಸ್ಥಳೀಯ ಆರ್ಥಿಕತೆಗೆ ಹೊರೆಯಾಗಿದೆ ಎಂದು ಒಂಟಾರಿಯೋ ಮತ್ತು ಆಲ್ಬರ್ಟಾದಂತಹ ಪ್ರಾಂತೀಯ ಸರ್ಕಾರಗಳು ಇದನ್ನು ವಿರೋಧಿಸುತ್ತಿವೆ.

ಜರ್ಮನಿಯೂ ಸಹ, ಇಂಧನ ಮತ್ತು ಸಾರಿಗೆ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳ ನೀತಿಗಳನ್ನು ಕೇಂದ್ರದ ಹೊರಸೂಸುವಿಕೆಯಲ್ಲಿ ಕಡಿತ ಗುರಿಗಳೊಂದಿಗೆ ಸಮನ್ವಯಗೊಳಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.

ಪ್ರತಿ ರಾಷ್ಟ್ರಗಳೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಗುರಿಗಳನ್ನು ಸಾಧಿಸಲು ಅನೇಕ ಸಾಂಸ್ಥಿಕ ರಚನೆಗಳನ್ನು ಹೊಂದಿದ್ದರೂ, ಇವು ಸಾಂಸ್ಥಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಣೆಗೆ ನೆರವಾದರೂ, ಇದರ ಪರಿಣಾಮಕಾರಿತ್ವವು ಇತರ ಇಲಾಖೆಗಳು, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು, ಹಾಗೂ ರಾಷ್ಟ್ರಮಟ್ಟದ ಸಮಿತಿ, ಆಯೋಗ ಮತ್ತು ಸಂಸ್ಥೆಗಳ ನಡುವಣ ಸಮನ್ವಯದ ಮೇಲೆ ಅವಲಂಬಿತವಾಗಿದೆ.

ಆದರೆ ನ್ಯೂಜಿಲೆಂಡ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ದೇಶಗಳಲ್ಲಿ ಸರ್ಕಾರಗಳ ನಡುವಿನ ಸಮನ್ವಯ ಸಮಿತಿಗಳು ಮತ್ತು ಸ್ವತಂತ್ರ ಮೇಲ್ವಿಚಾರಣಾ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರದ ಸಮನ್ವಯವನ್ನು ಸುಧಾರಿಸಿವೆ.

ಆಸ್ಟ್ರೇಲಿಯಾ ಹವಾಮಾನ ಬದಲಾವಣೆಯ ಕುರಿತು ಪ್ರಾದೇಶಿಕ ಅಗತ್ಯಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಸರ ಸಮಸ್ಯೆಗಳಿಗೆ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತವೆ. ಅದೇ ರೀತಿ ಇಂಡೋನೇಷ್ಯಾ ಇಂಗಾಲದ ತೆರಿಗೆಯಿಂದ ಬರುವ ಆದಾಯವನ್ನು ರಾಜ್ಯ ಮಟ್ಟದ ಹವಾಮಾನ ಉಪಕ್ರಮಗಳಲ್ಲಿ ಮರುಹೂಡಿಕೆ ಮಾಡುತ್ತದೆ.

ಇದನ್ನೂ ಓದಿ ಭೂಮ್ತಾಯಿ | ಹವಾಮಾನ ಸವಾಲು: ಆಮೆಗತಿಯಲ್ಲಿ ಪ್ಯಾರಿಸ್‌ ಒಪ್ಪಂದದ ಅನುಷ್ಠಾನ

ಚೀನಾ ಹವಾಮಾನ ಬದಲಾವಣೆಯ ಗುರಿಗಳನ್ನು ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಅಳವಡಿಸಿದೆ. ಕೆನಡಾದಲ್ಲಿ ಹವಾಮಾನ ಸಂಬಂಧಿ ಯೋಜನೆಗಳ ಕುರಿತ ಪ್ರಗತಿ ವರದಿಗಳು ಮತ್ತು ಸ್ವತಂತ್ರ ಲೆಕ್ಕಪರಿಶೋಧನೆಗಳು ಹಣಕಾಸಿನ ಯೋಜನೆಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತವೆ. ಭಾರತವು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ನಂತಹ ಸಂಸ್ಥೆಗಳ ಮೂಲಕ ಇದೇ ರೀತಿಯ ಕಾರ್ಯವಿಧಾನಗಳನ್ನು ಕಾರ್ಯಗತಗೊಳಿಸಬಹುದು.

***

ಪ್ಯಾರಿಸ್‌ ಒಪ್ಪಂದದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಭಾರತಕ್ಕೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಳು ಒತ್ತಾಸೆಯಾಗಬೇಕಿದೆ. ದೃಢವಾದ ಶಾಸಕಾಂಗದ ಚೌಕಟ್ಟು, ಕಾನೂನು ಬೆಂಬಲ ಮತ್ತು ಇದರೊಂದಿಗೆ ಇಲ್ಲಿ ರೂಪಿಸಲಾಗಿರುವ ಕಾನೂನು ಮತ್ತು ನೀತಿಗಳನ್ನು ಕೇಂದ್ರದಿಂದ ಸ್ಥಳೀಯ ಸಂಸ್ಥೆಗಳವರೆಗೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಬಲ್ಲ, ಇಚ್ಛಾಶಕ್ತಿಯುಳ್ಳ ಮಾನವ ಸಂಪನ್ಮೂಲವನ್ನು ಹೊಂದಿದ ಕಾರ್ಯಾಂಗ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕಿದೆ. ಇದರೊಂದಿಗೆ ಈ ಮೂರೂ ಅಂಗಗಳ ಕಾರ್ಯವಿಧಾನವನ್ನು ನಿಷ್ಪಕ್ಷಪಾತಿಯಾಗಿ ಮತ್ತು ವಸ್ತುನಿಷ್ಠವಾಗಿ ವಿಮರ್ಶಿಸಬಲ್ಲ ನ್ಯಾಯನಿಷ್ಠುರಿ ಪತ್ರಿಕೋದ್ಯಮವೂ.

WhatsApp Image 2025 11 17 at 3.57.02 PM
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...