ಅಮೆರಿಕ, ಬ್ರೆಜಿಲ್ ಮುಂತಾದ ದೇಶಗಳು ನಮ್ಮ ದೇಶದ ತಳಿಗಳನ್ನು ಸಂರಕ್ಷಿಸಿವೆ. ಅಮೆರಿಕದಲ್ಲಿ ಬ್ರಹ್ಮನ್ ತಳಿಗಳು ಎಂದು ಕರೆಸಿಕೊಂಡ ನಮ್ಮ ದೇಶದ ತಳಿಗಳು ಅಲ್ಲಿಯ ಅಂಗಸ್ ತಳಿಯೊಂದಿಗೆ ಸಂಕರಣಗೊಂಡು ‘ಬ್ರಂಗಸ್’ ಎಂಬ ಹೊಸ ತಳಿಯೊಂದು ರೂಪುಗೊಂಡಿದೆ. ತೆಲಂಗಾಣದ ಒಂಗೋಲ್ ಎಂಬ ಶುದ್ಧ ತಳಿಯನ್ನು ಬ್ರೆಜಿಲ್ ಕಾಪಾಡಿಕೊಂಡಿದೆ.
ನಮ್ಮ ರಾಜ್ಯದ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ‘ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು’ ಎಂದು ಕಂಡಿಕೆ 65ರಲ್ಲಿ ಘೋಷಿಸಲಾಗಿದೆ.
ದೇಶಿ ದನದ ತಳಿಗಳು ರೋಗ ನಿರೋಧಕ ಶಕ್ತಿ ಮತ್ತು ಉಷ್ಣ ಸಹಿಷ್ಣುತೆಗೆ ಹೆಸರುವಾಸಿಯಾಗಿವೆ. ದೇಸಿ ದನಗಳಲ್ಲಿ ರೋಗನಿರೋಧಕ ಪ್ರತಿಕಾಯಗಳು ಮತ್ತಿತರ ನಿಯತಾಂಕಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ವಿದೇಶಿ ತಳಿಗಳಲ್ಲಿ ಚರ್ಮದ ಒಂದು ಚದರ ಸೆಂಟಿಮೀಟರ್ ವಿಸ್ತೀರ್ಣಕ್ಕೆ 600 ಸಂಖ್ಯೆಯ ಸೆಕೆಯ ಗ್ರಂಥಿಗಳಿದ್ದರೆ ದೇಶಿ ತಳಿಗಳಲ್ಲಿ ಅದೇ ಒಂದು ಚದರ ಸೆಂಟಿಮೀಟರಿಗೆ 1600 ಸೆಕೆಯ ಗ್ರಂಥಿಗಳಿರುವುದರಿಂದ ನಮ್ಮ ಉಷ್ಣವಲಯದ ವಾತಾವರಣದಲ್ಲಿ ಸೆಕೆಯನ್ನು ಬಸಿದು ಬದುಕುತ್ತವೆ. ಬೇಸಿಗೆಯ ಬಿಸಿಲಿನ ಝಳವನ್ನು ನಿಗ್ರಹಿಸಿಕೊಳ್ಳುತ್ತವೆ. ಕೃಷಿ ಚಟುವಟಿಕೆಗಳಿಗೆ, ವಿವಿಧ ರೀತಿಯ ಸರಕುಗಳ ಸಾಗಾಣಿಕೆಗೆ, ಪ್ರಯಾಣಕ್ಕೆ, ಹಾಲು ಉತ್ಪತ್ತಿಗೆ ದೇಶಿ ಜಾನುವಾರುಗಳನ್ನು ಬಳಸಿದ್ದೇವೆ. ಪಶುಸಂಪತ್ತನ್ನು ಕಾಪಾಡಿಕೊಳ್ಳಲು ದೇಶಿ ದನಗಳನ್ನು ಸಂರಕ್ಷಿಸಬೇಕಿದೆ.
ದೇಶಿ ದನಗಳನ್ನು ವಿದೇಶಿ ದನಗಳೊಂದಿಗೆ ಸಂಕರಣಗೊಳಿಸಿ ಮಿಶ್ರತಳಿಗಳನ್ನು ಉತ್ಪಾದಿಸಿದಾಗ ಮಿಶ್ರತಳಿಗಳಲ್ಲಿ ರೋಗನಿರೋಧಕ ಶಕ್ತಿ ಮತ್ತು ಉಷ್ಣಸಹಿಷ್ಣುತಾ ಗುಣಗಳು ಕೊಂಚಮಟ್ಟಿಗೆ ಹರಿದುಬರುತ್ತವೆ. ಇಂದು ಮಿಶ್ರತಳೀಕರಣವು ಮಿತಿಮೀರಿರುವುದರಿಂದ ದೇಶಿ ಜಾನುವಾರುಗಳ ಸಂರಕ್ಷಣೆಯನ್ನು ಆಗಿಂದಾಗ್ಗೆ ಕೈಗೊಳ್ಳಬೇಕಾಗಿರುವುದು ತುರ್ತಿನ ಕೆಲಸವಾಗಿದೆ. ವಿಶ್ವ ಆಹಾರ ಸಂಸ್ಥೆಯೂ ಕೂಡ ದೇಶಿ ದನಗಳ ಸಂರಕ್ಷಣೆಗೆ ಕರೆ ಕೊಟ್ಟಿದೆ.
ಅಮೆರಿಕಾ, ಬ್ರೆಜಿಲ್ ಮುಂತಾದ ದೇಶಗಳು ನಮ್ಮ ದೇಶದ ತಳಿಗಳನ್ನು ಸಂರಕ್ಷಿಸಿವೆ. ಅಮೆರಿಕಾದಲ್ಲಿ ಬ್ರಹ್ಮನ್ ತಳಿಗಳು ಎಂದು ಕರೆಸಿಕೊಂಡ ನಮ್ಮ ದೇಶದ ತಳಿಗಳು ಅಲ್ಲಿಯ ಅಂಗಸ್ ತಳಿಯೊಂದಿಗೆ ಸಂಕರಣಗೊಂಡು ‘ಬ್ರಂಗಸ್’ ಎಂಬ ಹೊಸ ತಳಿಯೊಂದು ರೂಪುಗೊಂಡಿದೆ. ತೆಲಂಗಾಣದ ಒಂಗೋಲ್ ಎಂಬ ಶುದ್ಧ ತಳಿಯನ್ನು ಬ್ರೆಜಿಲ್ ಕಾಪಾಡಿಕೊಂಡಿದೆ.
ಹಳ್ಳಿಕಾರ್ ದನಗಳು

ಹಳ್ಳಿಕಾರ್ ತಳಿಯನ್ನು ಕರ್ನಾಟಕದ ಮೂಲ ತಳಿಯೆಂದು ಗುರುತಿಸಲಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಗದಗ, ಹಾವೇರಿ, ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಜಾನುವಾರು ಗಣತಿಯಂತೆ 2019ರಲ್ಲಿ ಹಳ್ಳಿಕಾರ್ ದನಗಳ ಸಂಖ್ಯೆ ಕೇವಲ 4 ಲಕ್ಷ 80 ಸಾವಿರ. ಆದರೆ, ಅವುಗಳ ಸಂಖ್ಯೆ 2003ರ ಜಾನುವಾರು ಗಣತಿಯಂತೆ ಒಟ್ಟು 21 ಲಕ್ಷ 8 ಸಾವಿರ ಆಗಿತ್ತು. ವರ್ಷಗಳು ಉರುಳಿದಂತೆ ಹಳ್ಳಿಕಾರ್ ದನಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ.
ಹಳ್ಳಿಕಾರ್ ದನಗಳು ದುಡಿಮೆಯ ದನಗಳು. ‘ರೂಪಾಯಿ ಬಣ್ಣದ ದನಗಳು’ ಎಂದು ರೈತರು ಗುರುತಿಸಿಕೊಳ್ಳುತ್ತಿದ್ದರು. ಒಂದು ರೂಪಾಯಿಯ ಕಾಗದದ ನೋಟಿನ ಬಣ್ಣಕ್ಕೂ ಹಳ್ಳಿಕಾರ್ ದನಗಳ ಬಣ್ಣಕ್ಕೂ ತುಂಬಾ ಹತ್ತಿರದ ಹೋಲಿಕೆ. ವ್ಯವಸಾಯ ಮತ್ತು ಸರಕು ಸಾಗಣೆಯ ಬಳಕೆಗೆ ಅನುಕೂಲಕರ. ಆದರೆ, ಆಧುನಿಕ ಯಾಂತ್ರೀಕೃತ ಕೃಷಿಯಲ್ಲಿ ದುಡಿಮೆಯ ದನಗಳ ಪಾತ್ರ ಗೌಣವಾಗುತ್ತಿದೆ. ಪಶುಸಂಪತ್ತು ಸಿರಿತನದ ಸಂಕೇತವೆಂಬುದನ್ನು ಕೆಲ ರೈತರು ಇನ್ನೂ ಪಾಲಿಸಿಕೊಂಡು ಬರುತ್ತಿರುವುದರಿಂದ ಅವರ ಹಟ್ಟಿಗಳಲ್ಲಿ ದೇಶಿ ಜಾನುವಾರುಗಳು ಕೊಂಚ ಮಟ್ಟಿಗೆ ಸಂರಕ್ಷಣೆಯಾಗಿವೆ. ರೈತರು ‘ಹಳ್ಳಿಕಾರ್ ಬ್ರೀಡರ್ಸ್ ಕ್ಲಬ್’ ರಚಿಸಿಕೊಂಡಿದ್ದಾರೆ.
ರೈತರ ಅನುಭವದ ಮಾತು
ಮಂಡ್ಯ ತಾಲ್ಲೂಕಿನ ಹೊನ್ನನಾಯಕನಹಳ್ಳಿಯ ನಿರಂಜನ್ ಅವರು ಸಾವಯವ ಕೃಷಿಕರು. ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ವಿಜೇತರು. ಹಳ್ಳಿಕಾರ್ ದನಗಳ ಸಾಕಣೆಯಲ್ಲಿ ಪಳಗಿದವರು. ‘ತಮ್ಮ ಮನೆಯಲ್ಲಿ 35 ಹಳ್ಳಿಕಾರ್ ದನಗಳಿದ್ದವು, ಬರುಬರುತ್ತಾ ಈಗ 16 ಇವೆ. ಹಳ್ಳಿಕಾರ್ ಸಾಕಣೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಹೆಣ್ಣು ಕರುಗಳನ್ನು ಉಚಿತವಾಗಿ ರೈತರಿಗೆ ನೀಡಿ ದತ್ತು ಒಪ್ಪಂದ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಅವರಿಗೆ ಬೇಡವಾದರೆ ನಮಗೆ ವಾಪಸ್ಸು ನೀಡಬೇಕು. ಹೀಗೆ ಹಳ್ಳಿಕಾರ್ ಸಂರಕ್ಷಣೆಯಲ್ಲಿ ತೊಡಗಿದ್ದೇನೆ’ ಎನ್ನುತ್ತಾರೆ. ಅವೇನಾದರೂ, ಸುಳಿ ಇರುವ ಕರು ಹಾಕಿದರೆ, ಫಲ ನಿಲ್ಲುವುದು ತಡವಾದರೆ ರೈತರು ತಾಳ್ಮೆ ಕಳೆದುಕೊಂಡು ದೇಸಿ ದನಗಳ ಸಾಕಣೆಯನ್ನು ಕೈ ಬಿಡುತ್ತಿದ್ದಾರೆ ಎಂಬ ಅಭಿಪ್ರಾಯ ಅವರದು.
ಸುಳಿಗಳು ಎನ್ನುವುದು ಚರ್ಮದ ಮೇಲಿನ ಕೂದಲುಗಳ ವಿನ್ಯಾಸವಷ್ಟೆ. ಕೆಟ್ಟ ಸುಳಿ, ಒಳ್ಳೆ ಸುಳಿ ಎಂಬುದೇನೂ ಇಲ್ಲ. ಅದರ ಹಿಂದೆ ಮೂಢನಂಬಿಕೆಗಳಿರಬಾರದು. ಆ ಕುರಿತು ರೈತರಿಗೆ ಅಗತ್ಯ ತಿಳುವಳಿಕೆಯನ್ನು ಪಶುವೈದ್ಯರು ನೀಡಬೇಕಿದೆ (ಲೇಖಕರ ಅಭಿಪ್ರಾಯ).
‘ಎ-2 ಹಾಲು ಪ್ರಚಾರಕ್ಕೆ ಬಂದಿದ್ದರಿಂದ ಹೆಚ್ಚಿನ ಹಣ ಬರುತ್ತದೆಂಬ ಆಸೆಗೆ ಬಿದ್ದ ರೈತರು ಹಳ್ಳಿಕಾರ್ ಸಾಕಣೆಯನ್ನು ಕೈಬಿಟ್ಟು ಹೆಚ್ಚು ಹಾಲು ಕರೆಯುವ ಉತ್ತರ ಭಾರತದ ಸಾಹಿವಾಲ್ ಮತ್ತು ಗಿರ್ ತಳಿಗಳನ್ನು ತಂದು ಸಾಕುತ್ತಿರುವುದು ಹಳ್ಳಿಕಾರ್ ಸಂಖ್ಯೆ ಕಡಿಮೆಯಾಗಲು ಕಾರಣ’ ಎನ್ನುತ್ತಾರೆ ನಿರಂಜನ್‍ರವರು. ‘ಆಯುವುದು, ಒದೆಯುವುದು ಜಾಸ್ತಿಯಾದದ್ದರಿಂದಲೂ ಹಳ್ಳಿಕಾರ್ ಸಾಕಣೆ ಕಡಿಮೆ. ಶೋಕಿಗಾಗಿ ಹೋರಿಗಳನ್ನು ಸಾಕಿ ಜಾತ್ರೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವವರು, ಯೂ ಟ್ಯೂಬ್‍ನಲ್ಲಿ ಪ್ರಚಾರ ತೆಗೆದುಕೊಳ್ಳುವವರು ಹೋರಿಗಳ ಬೆಲೆಯೇರಿಸಿದ್ದರಿಂದ, ಕೃಷಿಗಾಗಿ ಹಳ್ಳಿಕಾರ್ ಎತ್ತುಗಳ ಬಳಕೆಯೂ ಕಡಿಮೆಯಾಗಿದೆ. ಜಾತ್ರೆಗಳಲ್ಲಿ 10ರಿಂದ 20 ಲಕ್ಷಕ್ಕೆ ಒಂದು ಜೊತೆ ಹೋರಿಗಳು ಮಾರಾಟವಾಗುತ್ತಿವೆ. ವ್ಯವಸಾಯಕ್ಕಾಗಿ ಕೊಳ್ಳಲು ಒಂದು ಜೊತೆ ಹಳ್ಳಿಕಾರ್ ಎತ್ತುಗಳಿಗೆ ಕನಿಷ್ಟ ಎರಡು ಲಕ್ಷ ರೂಪಾಯಿ ಕೊಡಬೇಕು. ಅದರ ಬದಲಿಗೆ ಒಂದು ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ತೆಗೆದುಕೊಂಡು ಬೇಸಾಯಕ್ಕೆ ಬಳಸಿಕೊಂಡರಾಯಿತು ಎನ್ನುವುದು ರೈತರ ನಿಲುವಾಗುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಿ, ಹಳ್ಳಿಕಾರ್ ಸಂರಕ್ಷಣೆ ಮಾಡುವವÀರ್ಯಾರು?’ ಎಂಬ ಕಾಳಜಿ ನಿರಂಜನ್‍ರವರದ್ದು.
ಸರ್ಕಾರದ ಜಾನುವಾರು ಕ್ಷೇತ್ರವಾಗಿ ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿಯಲ್ಲಿ ‘ಹಳ್ಳಿಕಾರ್ ಸಂವರ್ಧನಾ ಕೇಂದ್ರ’ವಿದೆ. ತಿಪಟೂರು ತಾಲ್ಲೂಕಿನ ಹುಲ್ಲೇನಹಳ್ಳಿಯಲ್ಲಿ ಇತ್ತೀಚೆಗೆ ಉಪಕೇಂದ್ರವೊಂದನ್ನು ಸ್ಥಾಪಿಸಲಾಗಿದೆ.
ಅಮೃತ್ ಮಹಲ್ ದನಗಳು

ಇಡೀ ಪ್ರಪಂಚದಲ್ಲೇ ಮೊಟ್ಟಮೊದಲಿಗೆ 1572ರಿಂದ 1600ರ ಅವಧಿಯಲ್ಲಿ ಸಂಕರಣ ಮಾಡಲಾದ ತಳಿ ಅಮೃತ್ ಮಹಲ್. ಆ ಹೆಗ್ಗಳಿಕೆ ಮೈಸೂರು ಸಂಸ್ಥಾನಕ್ಕೆ ದಕ್ಕಿದೆ. ಇಂಗ್ಲೆಂಡಿನ ಶಾರ್ಟ್ ಹಾರ್ನ್ ತಳಿಗಿಂತ ಮೊದಲೇ ಸಂಕರಣಗೊಂಡ ತಳಿಯಿದು. ಅಮೃತ್ ಮಹಲ್ ತಳಿಯ ಮೊದಲ ಹೆಸರು ಬೆಣ್ಣೆ ಚಾವಡಿ. ಪೂರ್ಣಯ್ಯನ ದನಗಳು ಎಂಬ ಹೆಸರೂ ಇತ್ತು. ಹಳ್ಳಿಕಾರ್, ಹಾಗಲವಾಡಿ ಮತ್ತು ಚಿತ್ರದುರ್ಗ ತಳಿಗಳನ್ನು ಬಳಸಿಕೊಂಡು ಬೆಣ್ಣೆ ಚಾವಡಿ ತಳಿಯನ್ನು ಉತ್ಪಾದಿಸಲಾಯಿತು. ಹಾಲೆಂಬ ಅಮೃತವನ್ನು ಅರಮನೆಯೆಂಬ ಮಹಲ್‍ಗೆ ಒದಗಿಸುತ್ತಿದ್ದುದರಿಂದ ಟಿಪ್ಪು ಸುಲ್ತಾನನು ಅಮೃತ್ ಮಹಲ್ ಎಂದು ನಾಮಕರಣ ಮಾಡಿದ. ಜಾನುವಾರು ಗಣತಿ 2003ರಲ್ಲಿ 68 ಸಾವಿರ ಇದ್ದ ಅಮೃತ್ ಮಹಲ್ 2019ರ ಜಾನುವಾರು ಗಣತಿಯಲ್ಲಿ 1 ಲಕ್ಷ 4 ಸಾವಿರಕ್ಕೇರಿರುವುದು ಮೆಚ್ಚತಕ್ಕ ಅಂಶ.
ಅಮೃತ್ ಮಹಲ್ ದನಗಳ ಸಂಖ್ಯೆಯು 1813ರಲ್ಲಿ 13,499ಕ್ಕೆ ಕಡಿಮೆಯಾಗಿದ್ದನ್ನು ಕಂಡು ಬ್ರಿಟಿಷರು ಅವುಗಳ ಸಂರಕ್ಷಣೆಗೆ ಕ್ಯಾಪ್ಟನ್ ಹಾರ್ವೆ ಎಂಬ ಅಧಿಕಾರಿಯನ್ನು ನೇಮಿಸಿದರು. ಅವರು ಕೇವಲ 10 ವರ್ಷಗಳಲ್ಲಿ ಅವುಗಳ ಸಂಖ್ಯೆಯನ್ನು ಇಮ್ಮಡಿಯಾಗುವಂತೆ ಮಾಡಿದರು ಎಂಬುದು ಚಾರಿತ್ರಿಕ ದಾಖಲೆ. ಇವು ದುಡಿಮೆಯ ದನಗಳು, ರೋಷಾವೇಶದ ಗುಣವುಳ್ಳವು. ಮೊದಲ ಜಾಗತಿಕ ಯುದ್ದದಲ್ಲಿ ಮೆಸಪೊಟೋಮಿಯಾದ ಪರ್ವತ ಶ್ರೇಣಿಗಳಲ್ಲಿ ಯುದ್ದ ಸಾಮಗ್ರಿಗಳನ್ನು ಹೊತ್ತೊಯ್ಯಲು ಬಳಸಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಇವುಗಳ ಸಾಕಣೆಗಾಗಿ ಸುಮಾರು 240 ಅಮೃತ್ ಮಹಲ್ ಕಾವಲುಗಳಿದ್ದವು. ಕಾವಲುಗಳ ವಿಸ್ತೀರ್ಣ 4,13,539 ಎಕರೆಗಳಾಗಿತ್ತು. ಆದರೆ, ತೀವ್ರ ಬರಗಾಲಗಳು ತಲೆದೋರಿದಾಗ ಕಾವಲುಗಳ ಜಮೀನನ್ನು 1950ರ ದಶಕದಲ್ಲಿ ‘ಗ್ರೋ ಮೋರ್ ಫುಡ್’ ಯೋಜನೆಯಡಿ ಮತ್ತು ತದನಂತರ ರೈತರಿಗೆ ಹಂಚಲಾಗಿದೆ. ಪ್ರಮುಖವಾಗಿ ಮುಂದುವರೆದುಕೊಂಡು ಬಂದಿರುವ ಅಮೃತ್ ಮಹಲ್ ಸಂವರ್ಧನಾ ಕೇಂದ್ರಗಳು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಬೀರೂರು, ಸೇರಿದಂತೆ ಹಾಸನ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿವೆ.
ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೆಚ್ಚಾಗಿ ಸಾಕಲಾಗುತ್ತಿದೆ. ನಾಡಿನ ಹೆಮ್ಮೆಯ ತಳಿಯಾದ ಅಮೃತ್ ಮಹಲ್ ತಳಿಯನ್ನು ಇನ್ನಷ್ಟು ಸಂರಕ್ಷಿಸಬೇಕಿದೆ.
ಕಿಲಾರಿ ದನಗಳು
ಕಿಲಾರಿ ತಳಿಯು ಮಹಾರಾಷ್ಟ್ರದ ತಳಿ. ಬೆಳಗಾವಿ, ಬಾಗಲಕೋಟೆ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇದೂ ಕೂಡ ದುಡಿಮೆಯ ದನ. ಕಿಲಾರರು ಎಂಬ ಗೊಲ್ಲರು ಸಾಕುತ್ತಿದ್ದುದರಿಂದ ಕಿಲಾರಿ (ಖಿಲಾರಿ) ಎಂಬ ಹೆಸರಿದೆ. ಮಹಾರಾಷ್ಟ್ರದ ಸಾತ್ಪುರ ಬೆಟ್ಟಸಾಲುಗಳಲ್ಲಿ ತಿಲ್ಲಾರಿ ಎಂಬ ಗಿರಿಜನರು ಸಾಕುತ್ತಿದ್ದುದರಿಂದ ತಿಲ್ಲಾರಿ ಎಂಬ ಹೆಸರೂ ಇದೆ. ಇವುಗಳ ಸಂಖ್ಯೆ ಜಾನುವಾರು ಗಣತಿ 2003ರಲ್ಲಿ 2.90 ಲಕ್ಷ. 2019ರ ಗಣತಿಯಲ್ಲಿ 2.60 ಲಕ್ಷ ಇವೆ.
ಬಂಡೂರು ಕುರಿ

ಬಂಡೂರು ಕುರಿಯನ್ನು ಮಂಡ್ಯ ಕುರಿ, ಬನ್ನೂರು ಕುರಿ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಮಂಡ್ಯ ಜಿಲ್ಲೆಯ ಧನಗೂರು ಮತ್ತು ನಾಗಮಂಗಲದಲ್ಲಿ ಈ ತಳಿಯ ಫಾರ್ಮುಗಳಿವೆ. ಶುದ್ಧ ತಳಿಯ ಟಗರುಗಳನ್ನು ರೈತರಿಗೆ ಪೂರೈಸಲಾಗುತ್ತಿದೆ. ರುಚಿಕರ ಮಾಂಸಕ್ಕೆ ಪ್ರಸಿದ್ದಿಯಾಗಿವೆ. ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಹರಡಿಕೊಂಡಿವೆ. ಜಾನುವಾರು ಗಣತಿ 2019ರಂತೆ 1 ಲಕ್ಷ 15 ಸಾವಿರ ಬಂಡೂರು ಕುರಿಗಳಿದ್ದವು. ಕುರಿ ಸಾಕಣೆಯು ಲಾಭದಾಯಕ ಉದ್ದಿಮೆಯಾಗಿರುವುದರಿಂದ ಉನ್ನತ ಶಿಕ್ಷಣ ಪಡೆದವರೂ ಕೂಡ ಕುರಿ ಸಾಕಣೆಯಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ಇತರೆ ಕುರಿ ತಳಿಗಳ ಹಾಗೆ ಬಂಡೂರು ಕುರಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಮುಂಗಡ ಪತ್ರದ ಅನುದಾನದ ಸದ್ಬಳಕೆ

ಮುಂಗಡ ಪತ್ರದಲ್ಲಿ ನಿಗದಿಪಡಿಸಿರುವ ಎರಡು ಕೋಟಿ ರೂಪಾಯಿಗಳಲ್ಲಿ ಒಂದಷ್ಟು ಅನುದಾನ ಬಳಸಿ ವಿಜಯಪುರ ಜಿಲ್ಲೆಯಲ್ಲಿ ಹೊಸದಾಗಿ ಕಿಲಾರಿ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ರೈತರ ಬೇಡಿಕೆ ಈಡೇರಿಸಲು ಉತ್ತಮ ಕಿಲಾರಿ ಗಂಡು ಮತ್ತು ಹೆಣ್ಣು ಕರುಗಳನ್ನು ಪೂರೈಸುವ ಉದ್ದೇಶವಿದೆ. ಬಂಡೂರು ಕುರಿ ಕ್ಷೇತ್ರಕ್ಕೂ ಅನುದಾನ ಹಂಚಿಕೆಯಾಗುತ್ತಿದೆ. ಹಳ್ಳಿಕಾರ್, ಅಮೃತ್ ಮಹಲ್, ಕಿಲಾರಿ ಮತ್ತು ಬಂಡೂರು ಕುರಿ ಸಾಕಣೆ ಫಾರ್ಮುಗಳಲ್ಲಿ ಮೇವು ಅಭಿವೃದ್ಧಿಯೂ ಇನ್ನಷ್ಟು ಆಗಬೇಕಿದೆ. ಡಾ. ಲೆಸ್ಲಿ ಸಿ. ಕೋಲ್ಮನ್‍ರವರು ಅಜ್ಜಂಪುರದಲ್ಲಿ ಅಮೃತ್ ಮಹಲ್ ತಳಿ ಸಂವರ್ಧನಾ ಕ್ಷೇತ್ರವನ್ನು ಸ್ಥಾಪಿಸಲು 1929ರಲ್ಲಿ ಸಲಹೆ ನೀಡಿದರು. ಅವರ ಸಲಹೆಗೆ ಆ ಭಾಗದ ಮಣ್ಣಿನಲ್ಲಿ ಕ್ಯಾಲ್ಸಿಯಂ (ಸುಣ್ಣ) ಲವಣ ಹೆಚ್ಚಾಗಿರುವುದು ಕಾರಣವಾಗಿತ್ತು. ಅಂತಹ ಮಣ್ಣಿನಲ್ಲಿ ಬೆಳೆದ ಮೇವು ದನಗಳಿಗೆ ಕ್ಯಾಲ್ಸಿಯಂ ಒದಗಿಸಿ ಮೂಳೆಗಳು ದೃಢವಾಗಿ ರಚಿಸಲ್ಪಟ್ಟು ಉತ್ತಮ ಮೈಕಟ್ಟಿನೊಂದಿಗೆ ಬೆಳೆಯುತ್ತವೆ ಎಂಬ ವೈಜ್ಞಾನಿಕ ಚಿಂತನೆಯಿತ್ತು.
ಜಾನುವಾರು ತಳಿ ನೀತಿ
ಹಲವಾರು ರಾಜ್ಯಗಳು ತಮ್ಮ ರಾಜ್ಯಗಳ ದೇಶಿ ಜಾನುವಾರು ತಳಿಗಳನ್ನು ಸಂರಕ್ಷಿಸಿಕೊಳ್ಳಲು ನಿರ್ದಿಷ್ಟ ಜಾನುವಾರು ತಳಿ ನೀತಿಯನ್ನು ರಚಿಸಿಕೊಂಡಿವೆ. ನಮ್ಮ ರಾಜ್ಯವೂ ಕೂಡ ರಚಿಸಿದೆ. ಇದೀಗ ಜಾನುವಾರುಗಳ ಅಂಕಿ ಸಂಖ್ಯೆಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಜಾನುವಾರು ತಳಿ ನೀತಿಯನ್ನು ಪುನರ್ ರಚಿಸಿ ದೇಶಿ ಜಾನುವಾರುಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಂತಹ ನೀತಿಯು ಕನ್ನಡದಲ್ಲಿಯೂ ಲಭ್ಯವಾಗಿ ಅಂತರಜಾಲ ಸೇರಿದಂತೆ ಎಲ್ಲ ಕಡೆ ವ್ಯಾಪಕ ಪ್ರಚಾರ ದೊರಕಬೇಕಿದೆ. ರೈತರನ್ನೂ ಒಳಗೊಳ್ಳುವ ಯೋಜನೆ ರೂಪಿಸಬೇಕಿದೆ. ವಿಜಯನಗರದ ಅರಸರು, ಬ್ರಿಟಿಷರು, ಮೈಸೂರು ಅರಸರು ಮತ್ತು ಹೈದರಾಲಿ – ಟಿಪ್ಪು ಸುಲ್ತಾನರಂತೆ ದೇಶಿ ಜಾನುವಾರುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಂಡು ಮುಂದಿನ ತಲೆಮಾರಿಗೆ ಪಶುಸಂಪತ್ತನ್ನು ಉಳಿಸಿಕೊಡಬೇಕಿದೆ.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ




