ಕೃಷಿರಂಗ | ಬೆಳೆಗಳನ್ನು ಹಾಳು ಮಾಡುವ ಬೇರುಹುಳುಗಳ ಹತೋಟಿ ಹೇಗೆ? ಇಲ್ಲಿದೆ ಮಾಹಿತಿ

Date:

ಭೂಮಿಯಿಂದ ಹಾರಿದ ದುಂಬಿಗಳ ಹಾರುವ ದೂರ 100ರಿಂದ 200 ಅಡಿಗಳು. ಮೊದಲ ದಿನ ಯಾವ ಮರವನ್ನು ಆಯ್ಕೆ ಮಾಡಿಕೊಂಡಿರುತ್ತವೆಯೋ ಅದೇ ಮರವನ್ನು ಮುಂದಿನ 10ರಿಂದ 15 ದಿನಗಳ ಕಾಲ ಆಯ್ಕೆ ಮಾಡಿಕೊಳ್ಳುತ್ತವೆ. ರಾತ್ರಿ ಕಾಲದಲ್ಲಿ ಎಲೆಗಳನ್ನು ತಿಂದು ಮುಂಜಾವಿನ 5.00 ಗಂಟೆಯ ಹೊತ್ತಿಗೆ ಯಾವ ಜಾಗದಿಂದ ಹಾರಿರುತ್ತವೆಯೋ ಮತ್ತೆ ಅದೇ ಭೂಜಾಗಕ್ಕೆ ಬಂದು ಒದ್ದೆ ಮಣ್ಣಿನೊಳಗೆ ಒಂದು ಅಡಿ ಆಳಕ್ಕೆ ಸೇರಿಕೊಳ್ಳುತ್ತವೆ.

ಕಬ್ಬಿನ ಗದ್ದೆಯ ಸಸಿಗಳು ಒಂದೊಂದಾಗಿ ಒಣಗುತ್ತಾ ಹೋದವು. ಅದಕ್ಕೆ ಕಾರಣವೇನೆಂದು ರೈತರೊಬ್ಬರು ಚಿಂತಾಕ್ರಾಂತರಾದರು. ನೆಲಗಡಲೆ ಹೊಲಕ್ಕೂ ಅದೇ ಅವಸ್ಥೆಯಾಗಿತ್ತು. ಶುಂಠಿ ಮಡುಗಳಲ್ಲೂ ಗಿಡಗಳು ಒಣಗಿ ಹೋಗಿದ್ದವು. ಹೀಗೆಯೇ, ಹಲವು ಬೆಳೆಗಳ ಸಸಿಗಳು ಒಣಗಿ ಹೋಗುವುದನ್ನು ರೈತರು ಗಮನಿಸಿದ್ದಾರೆ. ಅಂತಹ ಸಮಸ್ಯೆಗೆ ಪ್ರಮುಖ ಕಾರಣ ಬೇರುಹುಳುವಿನ ಕಾಟ. ನೆಲದಡಿಯಲ್ಲಿ ಹುದುಗಿಕೊಂಡಿರುವ ಬೇರುಹುಳುಗಳು ಬೆಳೆಗಳ ಬೇರುಗಳನ್ನು ತಿನ್ನುತ್ತಾ ಹೋಗುತ್ತವೆ. ಆಗ ಗಿಡಗಳು, ಪೈರುಗಳು ಒಣಗಿಹೋಗುತ್ತವೆ.

ಬೇರುಹುಳುಗಳ ಹತೋಟಿಯ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಜಿಕೆವಿಕೆಯ ಕೀಟ ವಿಜ್ಞಾನಿ ಡಾ. ಡಿ. ರಾಜಣ್ಣನವರೊಂದಿಗೆ ನಡೆಸಿದ ಮಾತುಕತೆಯಲ್ಲಿ ರೋಚಕ ವಿವರಗಳು ಲಭ್ಯವಾದವು. ರಾಜಣ್ಣನವರು ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಯ ಕರ್ವಾಲೋ ಪಾತ್ರದಂತಹ ದೃಷ್ಟಿಕೋನದ ವಿಜ್ಞಾನಿ. ಜೈವಿಕ ನಿಯಂತ್ರಣದ ವಿಧಾನದಲ್ಲಿ ಬೇರುಹುಳುಗಳ ಹತೋಟಿ ಕುರಿತು ಸಂಶೋಧನೆ ಕೈಗೊಂಡಿದ್ದಾರೆ.

ಅವರು ಕೊಟ್ಟ ವಿವರಗಳು ಹೀಗಿವೆ:

ಇನ್ನೇನು ವರ್ಷದ ಮೊದಲ ಮಳೆ ಹದವಾಗಿ ಸುರಿಯುತ್ತದೆ. ಸಾಮಾನ್ಯವಾಗಿ ಏಪ್ರಿಲ್ – ಮೇ ತಿಂಗಳಲ್ಲಿ ಮೊದಲ ಮಳೆ ಸುರಿದಾಗ ಭೂಮಿಯೊಳಗಿದ್ದು ರೆಕ್ಕೆ ಮೂಡಿಸಿಕೊಂಡಿರುವ ಬೇರುಹುಳುಗಳು ದುಂಬಿಗಳಾಗಿ ರೊಯ್ಯನೆ ಹಾರುತ್ತವೆ. ಮಳೆ ಸುರಿದ ಮಾರನೇ ದಿನ ನಿಗದಿತ ಸಮಯವಾದ ಸಂಜೆ7.15ರಿಂದ 7.30 ಗಂಟೆಯೊಳಗೆ ರೈತರ ಹೊಲಗದ್ದೆಗಳ ಬಳಿಯಲ್ಲಿ ಅಥವಾ ಅತಿ ಹತ್ತಿರದಲ್ಲಿರುವ ಬದುಗಳ ಮೇಲಿರುವ ಬೇವು, ಹೆಬ್ಬೇವು, ಅರಳಿ, ಆಲ, ಹುಣಸೆ, ಹಿಪ್ಪುನೇರಳೆ ಮುಂತಾದ ಮರಗಳನ್ನು ತಲುಪಿಕೊಳ್ಳುತ್ತವೆ. ಈ ಮರಗಳು ದುಂಬಿಗಳಿಗೆ ಆಹಾರ ಒದಗಿಸುವ ಆಸರೆ ಮರಗಳು. ಮೊದಲಿಗೆ ಹಾರಿ ಅಂತಹ ಆಹಾರದ ಮರಗಳನ್ನು ಕಂಡುಕೊಂಡ ಬೇರುಹುಳುಗಳ ದುಂಬಿಯೊಂದು ಆ ಹೊಲದಲ್ಲಿರುವ ಉಳಿದ ದುಂಬಿಗಳಿಗೆ ಆಹಾರ ಸಿಕ್ಕ ಸಂಕೇತಗಳನ್ನು ರವಾನಿಸುತ್ತದೆ. ಆಗ ಗುಂಪು ಗುಂಪಾಗಿ ನೂರಾರು ದುಂಬಿಗಳು ಕೆಲವೇ ಸೆಕೆಂಡುಗಳಲ್ಲಿ ಅದೇ ಮರದ ರೆಂಬೆಕೊಂಬೆಗಳನ್ನು ಮುತ್ತಿಕೊಳ್ಳುತ್ತವೆ. ಅಬ್ಬಾ! ಏನಿದು ಕೀಟ ವಿಸ್ಮಯ!?.

ಗುಂಪಿನ ದುಂಬಿಗಳ ಲಿಂಗಾನುಪಾತ 1:1. ಒಂದು ಹೆಣ್ಣಿಗೆ ಒಂದು ಗಂಡು ಇದ್ದೇ ಇರುತ್ತದೆ. ಆಗ ಅವುಗಳಿಗೆ ಮೊದಲ ಆದ್ಯತೆ ಸಂತಾನೋತ್ಪತ್ತಿಗಾಗಿ ಮಿಲನ. ಮಿಲನವಾದಾಗ ಗಂಡು ದುಂಬಿಯು ಹೆಣ್ಣು ದುಂಬಿಯ ಜನನಾಂಗದ ವ್ಯೂಹದೊಳಕ್ಕೆ ನೂರಾರು ವೀರ್ಯಾಣುಗಳನ್ನು ಬಿಡುಗಡೆ ಮಾಡುತ್ತದೆ. ಮಿಲನದ ನಂತರ ಮರದ ಎಲೆಗಳನ್ನು ಭಕ್ಷಿಸುತ್ತವೆ. ಮರವನ್ನೆಲ್ಲಾ ಬೋಳು ಮಾಡಿಬಿಡುತ್ತವೆ. ಬೋಳಾದ ಮರಗಳ ದೃಶ್ಯಗಳನ್ನು ನಾವೆಲ್ಲಾ ನೋಡಿರುತ್ತೇವೆ.

ಭೂಮಿಯಿಂದ ಹಾರಿದ ದುಂಬಿಗಳ ಹಾರುವ ದೂರ 100ರಿಂದ 200 ಅಡಿಗಳು. ಮೊದಲ ದಿನ ಯಾವ ಮರವನ್ನು ಆಯ್ಕೆ ಮಾಡಿಕೊಂಡಿರುತ್ತವೆಯೋ ಅದೇ ಮರವನ್ನು ಮುಂದಿನ 10ರಿಂದ 15 ದಿನಗಳ ಕಾಲ ಆಯ್ಕೆ ಮಾಡಿಕೊಳ್ಳುತ್ತವೆ. ರಾತ್ರಿ ಕಾಲದಲ್ಲಿ ಎಲೆಗಳನ್ನು ತಿಂದು ಮುಂಜಾವಿನ 5.00 ಗಂಟೆಯ ಹೊತ್ತಿಗೆ ಯಾವ ಜಾಗದಿಂದ ಹಾರಿರುತ್ತವೆಯೋ ಮತ್ತೆ ಅದೇ ಭೂಜಾಗಕ್ಕೆ ಬಂದು ಒದ್ದೆ ಮಣ್ಣಿನೊಳಗೆ ಒಂದು ಅಡಿ ಆಳಕ್ಕೆ ಸೇರಿಕೊಳ್ಳುತ್ತವೆ. ರಾತ್ರಿಯಲ್ಲಿ ಮರವಾಸಿಗಳಾದರೆ ಹಗಲಿನಲ್ಲಿ ಭೂವಾಸಿಗಳಾಗುತ್ತವೆ. ಈ ರಾತ್ರಿ ಹಗಲಿನ ವಾಸಸ್ಥಳದ ಪಲ್ಲಟ ಸುಮಾರು 10ರಿಂದ 15ದಿನಗಳ ಕಾಲ ನಡೆಯುತ್ತದೆ. ಗುಂಪು ಗುಂಪಾದ ಹೆಣ್ಣು ದುಂಬಿಗಳು ಅವುಗಳ ವಾಸಸ್ಥಳದ ಭೂಮಿಯಲ್ಲಿ ಒಂದು ಅಡಿ ಆಳದಲ್ಲಿ ನೂರಾರು ಮೊಟ್ಟೆಗಳನ್ನು ಇಡುತ್ತವೆ. ದುಂಬಿಗಳ ಆಹಾರ ಮರಗಳ ಎಲೆಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
2. Beetles eating Mulberry leaves

ಬೇರುಹುಳುವಿನ ಜೀವನಚಕ್ರ

ಬೇರುಹುಳುವಿನ ಜೀವನಚಕ್ರದಲ್ಲಿ ನಾಲ್ಕು ಹಂತಗಳಿವೆ. ಅವೆಂದರೆ, ಮೊಟ್ಟೆ, ಮರಿ, ಕೋಶ ಮತ್ತು ದುಂಬಿ. ಭೂಮಿಯಲ್ಲಿರುವ ಮೊಟ್ಟೆಗಳಿಂದ 10ರಿಂದ 12 ದಿನಗಳಾದ ಮೇಲೆ ಮರಿಹುಳುಗಳು ಹೊರಬರುತ್ತವೆ. ಮೊದಲ ಒಂದು ತಿಂಗಳ ಕಾಲ ಮರಿಗಳು ಮಣ್ಣು ತಿಂದು ಬದುಕುತ್ತವೆ. ಎರಡನೇ ತಿಂಗಳಲ್ಲಿ ಮಣ್ಣು ಮತ್ತು ಬೇರನ್ನು ತಿನ್ನುತ್ತವೆ. ಮೂರನೇ ತಿಂಗಳಿನಿಂದ ಆರು ತಿಂಗಳುಗಳ ಕಾಲ ಬೇರನ್ನು ಮಾತ್ರ ತಿನ್ನುತ್ತವೆ. ಈ ಅವಧಿಯಲ್ಲಿ ಬೇರುಹುಳುಗಳು ಇಂಗ್ಲಿಷಿನ C ಅಕ್ಷರದ ಆಕಾರದಲ್ಲಿರುತ್ತವೆ. ತೋರುಬೆರಳಿನ ಗಾತ್ರವಿರುತ್ತವೆ. ಅವು ಬೇರುಗಳನ್ನು ತಿನ್ನುವಾಗ ಬೆಳೆಯು ಅಲ್ಲಲ್ಲಿ ಒಣಗುತ್ತಾ ಹೋಗುತ್ತದೆ. ತದನಂತರ, ಕೋಶಾವಸ್ಥೆಯನ್ನು ತಲುಪಿ 15 ದಿನಗಳಲ್ಲಿ ರೆಕ್ಕೆ ಮೂಡಿಸಿಕೊಂಡು ದುಂಬಿಗಳ ರೂಪ ಪಡೆಯುತ್ತವೆ. ದುಂಬಿಗಳು ಭೂಮಿಯೊಳಗೆ ಸುಪ್ತಾವಸ್ಥೆಯಲ್ಲಿರುತ್ತವೆ. ಮೊಟ್ಟೆಯಿಂದ ದುಂಬಿಯಾಗಲು ತೆಗೆದುಕೊಳ್ಳುವ ಒಟ್ಟು ಸಮಯ ಸುಮಾರು 270ರಿಂದ 300 ದಿನಗಳು. ಬೇಸಿಗೆಯಲ್ಲಿ ಮೊದಲ ಮಳೆಯು ಭೂಮಿ ಒದ್ದೆಯಾಗುವಷ್ಟು ಹದವಾಗಿ ಬೀಳುತ್ತಿದ್ದಂತೆ ದುಂಬಿಗಳು ಭೂಮಿಯಿಂದ ಹೊರಗೆ ಜಿಗಿಯುತ್ತವೆ. ದುಂಬಿಗಳಿಗೆ ವಸಂತ ಕಾಲದಲ್ಲಿ ಚಿಗುರಿದ ಎಲೆಗಳು ಭಕ್ಷ್ಯಭೋಜನವಾಗುತ್ತವೆ.

ಬೇರುಹುಳುಗಳ ಹೆಸರುಗಳು

ರೈತರು ಬೇರುಹುಳುಗಳನ್ನು ಗೊಣ್ಣೆ ಹುಳು ಎಂದು ಕರೆಯುತ್ತಾರೆ. ಆದರೆ, ಸಗಣಿಯಲ್ಲಿರುವ ಗೊಣ್ಣೆ ಹುಳುವೇ ಬೇರೆ. ಬೆಳೆಗಳ ಬೇರುಗಳನ್ನು ತಿನ್ನುವ ಗೊಣ್ಣೆ ಹುಳುಗಳೇ ಬೇರೆ. ಕೆಲ ಜಿಲ್ಲೆಗಳ ರೈತರು ಬೇರುಹುಳುಗಳನ್ನು ಕಾಗೆ ಕಡುಬು ಎಂದು ಕರೆಯುತ್ತಾರೆ. ಉಳುಮೆ ಮಾಡುವಾಗ ಭೂಮಿಯಿಂದ ಮೇಲಕ್ಕೆ ತೇಲುವ ಬೇರುಹುಳುಗಳನ್ನು ಕಾಗೆಗಳು ಮತ್ತಿತರ ಪಕ್ಷಿಗಳು ಹಬ್ಬದೂಟದಂತೆ ಹೆಕ್ಕಿ ತಿನ್ನುತ್ತವೆ. ಆದ್ದರಿಂದ ಕಾಗೆ ಕಡುಬು ಎಂಬ ಹೆಸರು ಬಂದಿದೆ. ಇಂಗ್ಲಿಷಿನಲ್ಲಿ Root grub / White grub ಎಂದು ಕರೆಯಲಾಗಿದೆ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಮತ್ತು ತೇವಾಂಶದ ಭೂಮಿಯಲ್ಲಿ ಇವುಗಳ ಉಪಟಳ ಹೆಚ್ಚು.

ಬೇರುಹುಳುಗಳ ಹತೋಟಿಯ ಕ್ರಮಗಳು

ರೈತರು ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಬೆಳೆ ಒಣಗಿದ ನಿದರ್ಶನವನ್ನು ಕಂಡ ತಕ್ಷಣ ಇದು ಬೇರುಹುಳುವಿನ ಕಾಟವೆಂದು ತಿಳಿಯಬೇಕು. ಬೇರುಹುಳುವಿನ ದುಂಬಿಗಳು ವರ್ಷದ ಮೊದಲ ಮಳೆಗೆ ಅವುಗಳ ಆಹಾರದ ಆಸರೆ ಮರಗಳ ಮೇಲೆ ರಾತ್ರಿ 7.15ರಿಂದ 7.30 ಗಂಟೆಯವರೆಗೆ ಬಂದು ಕುಳಿತಾಗ ಮರದ ರೆಂಬೆ ಕೊಂಬೆಗಳನ್ನು ಅಲ್ಲಾಡಿಸಿ, ಮರದ ಕೆಳಗೆ ಅದಾಗಲೇ ಹಾಸಿರುವ ಟಾರ್ಪಲ್ ಅಥವಾ ಬಟ್ಟೆಯ ಮೇಲೆ ಬಿದ್ದ ದುಂಬಿಗಳನ್ನು ಸಂಗ್ರಹಿಸಿ ಸುಡಬೇಕು. ಆ ದಿನಗಳ ಸಂಜೆ ಹೊತ್ತಿನಲ್ಲಿ ಆರು ಗಂಟೆಯ ವೇಳೆಗೆ ಮರಗಳ ಎಲೆಗಳ ಮೇಲೆ ಕೀಟನಾಶಕಗಳನ್ನು ಸಿಂಪಡಿಸಬೇಕು. ಕೀಟನಾಶಕ ತಿಂದ ದುಂಬಿಗಳು ಸತ್ತು ಬೀಳುತ್ತವೆ. ಕ್ಲೋರ್‌ಪೈರಿಫಾಸ್ ಮತ್ತು ಇಮಿಡಾಕ್ಲೋಪ್ರಿಡ್ ಎಂಬ ಕೀಟನಾಶಕಗಳು ಸೂಕ್ತ. ಈ ಕ್ರಮವನ್ನು ಬೇರುಹುಳು ಪೀಡಿತ ಪ್ರದೇಶದಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ಅನುಸರಿಸಬೇಕು.

1. Beetles eating Neem Leaves

ಏಪ್ರಿಲ್ – ಮೇ ತಿಂಗಳಿನಲ್ಲಿ ಮೊಟ್ಟೆ ಇಡುವುದರಿಂದ, ಅಲ್ಲಿಂದ ಸುಮಾರು ಒಂದೂವರೆ ತಿಂಗಳಾಗುತ್ತಿದ್ದಂತೆ, ಜುಲೈ – ಆಗಸ್ಟ್ ತಿಂಗಳಿನಲ್ಲಿ ಮರಿ ಹುಳುಗಳು ಬೇರನ್ನು ತಿನ್ನಲಾರಂಭಿಸುತ್ತವೆ. ಆಗ ಒಣಗಲಾರಂಭಿಸಿದ ಗಿಡಗಳನ್ನು ಕಿತ್ತು ಅವುಗಳ ಬುಡದಲ್ಲಿರುವ ಮರಿ ಹುಳುಗಳನ್ನು ನಾಶಪಡಿಸಬೇಕು. ಜೂನ್-ಜುಲೈ ತಿಂಗಳಿನಲ್ಲಿ ಭೂಮಿಗೆ ಕೀಟನಾಶಕವನ್ನು ಹರಡಬಹುದು. ಕೀಟನಾಶಕವು ಮಣ್ಣಿನ ಸಾವಯವ ಅಂಶಕ್ಕೆ ಅಂಟಿಕೊಳ್ಳುತ್ತದೆ. ಮೊದಲ ತಿಂಗಳ ಮರಿಗಳು ಮಣ್ಣಿನಲ್ಲಿರುವ ಸಾವಯವ ಅಂಶಗಳನ್ನು ತಿನ್ನುತ್ತವೆ. ಆಗ ಮರಿಗಳು ಸಾಯುತ್ತವೆ. ಕೀಟನಾಶಕ ಮತ್ತು ಬಳಸುವ ಪ್ರಮಾಣದ ಮಾಹಿತಿ ಮತ್ತು ಮಾರ್ಗದರ್ಶನವನ್ನು ಕೃಷಿ ಅಧಿಕಾರಿಗಳಿಂದ ಪಡೆದುಕೊಳ್ಳಬೇಕು. ಸಾವಯವ ಕೃಷಿಯಲ್ಲಿ ಕೀಟನಾಶಕ ಬಳಸದೆ ಬೇರುಹುಳುಗಳ ನಾಶಕ್ಕೆ ಅವುಗಳ ನೈಸರ್ಗಿಕ ಶತ್ರುವಾದ ಮೆಟಾರೈಜಿಯಂ ಅನಿಸೋಪ್ಲಿಯಾ ಎಂಬ ಶಿಲೀಂಧ್ರ‍್ರ ಬಳಸಿ ಜೈವಿಕ ನಿಯಂತ್ರಣ ಮಾಡಬಹುದಾಗಿದೆ.

ಸಾಮಾನ್ಯವಾಗಿ ಕಬ್ಬಿನ ಗದ್ದೆಗಳಿಗೆ ಬೇರುಹುಳಗಳ ಹಾವಳಿ ಜಾಸ್ತಿ. ಹೆಚ್ಚು ಪ್ರಮಾಣದಲ್ಲಿ ಇಡೀ ಗದ್ದೆಯಲ್ಲಿ ಕಬ್ಬಿನ ತೆಂಡೆಗಳು ಹಳದಿ ಬಣ್ಣಕ್ಕೆ ತಿರುಗಿ, ಕ್ರಮೇಣ ಸಸಿಗಳು ಒಣಗುತ್ತವೆ. ಅಂತಹ ಸಂದರ್ಭದಲ್ಲಿ ಗದ್ದೆಯನ್ನು ಮತ್ತೆ ಮತ್ತೆ ಉಳುಮೆ ಮಾಡಿ ಬೇರುಹುಳುಗಳು ಮೇಲೇಳುವಂತೆ ಮಾಡಿದರೆ, ಕಾಗೆ, ಕೊಕ್ಕರೆ ಮತ್ತಿತರ ಪಕ್ಷಿಗಳು ಆ ಹುಳುಗಳನ್ನು ಹೆಕ್ಕಿ ತಿನ್ನುತ್ತವೆ.

ಒಟ್ಟಿನಲ್ಲಿ ಬೇರುಹುಳುಗಳಿಂದಾಗುವ ಬೆಳೆನಾಶದ ಸಂದರ್ಭವನ್ನು ರೈತರು ಗಮನಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ಮುಂದಾಗಬಹುದಾದ ನಷ್ಟವನ್ನು ತಡೆಯಬಹುದು.

ಕೊನೆಯ ಮಾತು
ಬೆಳೆಗಳಲ್ಲಿ ಹುಳುಗಳನ್ನು ಮತ್ತು ಕೀಟಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸ. ಆದರೆ ಅನಿವಾರ್ಯ. ಮೈಸೂರು ಸಂಸ್ಥಾನಕ್ಕೆ 1899ರಲ್ಲಿ ಆಗಮಿಸಿದ ಕೆನಡಾದ ಕೃಷಿ ರಾಸಾಯನಿಕ ತಜ್ಞರಾದ ಡಾ. ಅಡಾಲ್ಪ್ ಲೆಹ್ಮನ್ ಎಂಬುವವರು ‘ಬೆಳೆಗಳನ್ನು ಹಾಳುಮಾಡುವ ಹುಳುಗಳ ವಿಷಯ’ ಎಂಬ ಕಿರುಹೊತ್ತಿಗೆಯನ್ನು 1902ರಲ್ಲಿ ಪ್ರಕಟಿಸಿದರು. ಕೀಟಗಳ ಹತೋಟಿಗೆ ಒಬ್ಬ ಪ್ರತ್ಯೇಕ ಕೀಟ ವಿಜ್ಞಾನಿಯ ಅಗತ್ಯವಿದೆಯೆಂದು ಕೆನಡಾದ ಕೀಟ ಹಾಗೂ ಶಿಲೀಂಧ್ರ ವಿಜ್ಞಾನಿಯಾದ ಡಾ. ಲೆಸ್ಲಿ ಚಾರ್ಲ್ಸ್ ಕೋಲ್ಮನ್‌ರವರನ್ನು ಮೈಸೂರು ಸಂಸ್ಥಾನವು ನೇಮಕಾತಿ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡಿದರು. ಡಾ. ಕೋಲ್ಮನ್‌ರವರು 1908ರಿಂದ 1934ರವರೆಗೆ ಸುಮಾರು 26 ವರ್ಷಗಳ ಕಾಲ ರಾಜ್ಯದಲ್ಲಿ ಕೃಷಿಯ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿದರು.

ಮಾವೋ ತ್ಸೆ ತುಂಗ್‌ರವರು 1958ರಲ್ಲಿ ಚೀನಾದ ಅಧ್ಯಕ್ಷರಾಗಿದ್ದಾಗ ಬೆಳೆಗಳ ಕಾಳುಗಳನ್ನು ತಿನ್ನುತ್ತಿದ್ದ ಗುಬ್ಬಚ್ಚಿಗಳನ್ನು ನಿಯಂತ್ರಣ ಮಾಡುವ ಕ್ರಮ ಕೈಗೊಂಡರು. ಲಕ್ಷಾಂತರ ಗುಬ್ಬಚ್ಚಿಗಳನ್ನು ಕೊಲ್ಲಲಾಯಿತು. ಆದರಿಂದ ಜೈವಿಕ ಅಸಮತೋಲನ ಉಂಟಾಯಿತು. ಮಿಡತೆಗಳ ಸಂಖ್ಯೆಯು ಹೆಚ್ಚಾಗಿ ಬೆಳೆಗಳನ್ನು ತಿನ್ನಲಾರಂಭಿಸಿದವು. ಆಗ ಚೀನಾ ದೇಶಕ್ಕೆ ತನ್ನ ತಪ್ಪಿನ ಅರಿವಾಗಿ ರಷ್ಯಾದಿಂದ ಗುಬ್ಬಚ್ಚಿಗಳನ್ನು ಆಮದು ಮಾಡಿಕೊಂಡರು. ಗುಬ್ಬಚ್ಚಿಗಳು ಮಿಡತೆಗಳನ್ನು ತಿಂದು ನಿಯಂತ್ರಣ ಮಾಡಿದವು. ಆಹಾರೋತ್ಪಾದನೆಯ ಕುಸಿತದ ಗಂಡಾಂತರದಿಂದ ಚೀನಾ ಪಾರಾಯಿತು.

ಬೇರುಹುಳುಗಳ ಹತೋಟಿಯಲ್ಲಿ ನಿಸರ್ಗ ಕಲಿಸಿರುವ ಪಾಠಗಳನ್ನು ನಾವೆಲ್ಲಾ ಗಮನಿಸಬೇಕು. ಉಳುಮೆ ಮಾಡುವಾಗ ಬೇರುಹುಳುಗಳನ್ನು ತಿನ್ನಲು ಬರುವ ಪಕ್ಷಿಗಳು ರೈತರ ಮಿತ್ರರೇ ಆಗಿರುತ್ತವೆ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...

ಚದುರಿದ ಚಿತ್ರ | ಮುಟ್ಟು, ಲಜ್ಜೆ ಮತ್ತು ನಮ್ಮ‌ ಪೂರ್ವಗ್ರಹಗಳು

ವಿಜ್ಞಾನ, ವೈಚಾರಿಕತೆ, ಆಧುನೀಕರಣ ಮುಂತಾಗಿ ನಾವೆಷ್ಟೇ ಮಾತನಾಡಿಕೊಂಡರೂ, ಬದಲಾಗಿದ್ದೇವೆ ಎಂದೆಲ್ಲಾ...