ಕೃಷಿರಂಗ | ಸಾವಯವ ಕೃಷಿ; ‘ರಸಗೊಬ್ಬರ ಮುಕ್ತ ಕೃಷಿ’ ರೈತರ ಘೋಷವಾಕ್ಯವಾಗಬೇಕು

Date:

ಸಾವಯವ ಕೃಷಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ದನಕರುಗಳ ಸಗಣಿ, ಮೇಕೆ ಕುರಿಗಳ ಗೊಬ್ಬರ, ಕೋಳಿ ಗೊಬ್ಬರ, ಎರೆಹುಳ ಗೊಬ್ಬರ, ಹಸಿರೆಲೆ ಗೊಬ್ಬರ, ಬೆಳೆಯುಳಿಕೆಗಳನ್ನು ಕೊಳೆಸಿ ಮಾಡಿದ ಗೊಬ್ಬರಗಳ ಬಳಕೆಯೇ ನಿತ್ಯನಿರಂತರವಾಗಿರಬೇಕು. ಕೃಷಿ ತ್ಯಾಜ್ಯ ವಸ್ತುಗಳ ಮರು ಬಳಕೆಯಾಗಬೇಕು.

ಕೆಲ ವರ್ಷಗಳ ಹಿಂದೆ ಕೋಲಾರದ ಸುತ್ತಮುತ್ತಲ ಹಳ್ಳಿಗಳ ರೈತರು ಬೆಳಿಗ್ಗೆ ಎದ್ದಾಕ್ಷಣ ತಮಗೆ ಸುಸ್ತಾಗುತ್ತಿದೆ ಎಂದು ಬಿಸಿಲು ಕಾಯುತ್ತಿದ್ದರು. ಅವರ ಸುಸ್ತಿಗೆ ಕಾರಣವೇನೆಂದು ಸಂಶೋಧನೆ ನಡೆಸಿದಾಗ ಕಂಡುಬಂದ ಸತ್ಯವೆಂದರೆ, ಅಲ್ಲಿ ಬೆಳೆಯುವ ತರಕಾರಿ, ದವಸ ಧಾನ್ಯಗಳಲ್ಲಿ ಮತ್ತು ಕೊಳವೆಬಾವಿ ನೀರಿನಲ್ಲಿ ನೈಟ್ರೇಟ್ (NO3-) ಎಂಬ ವಿಷದ ಅಂಶ ಅಧಿಕವಾಗಿತ್ತು. ಅಂತಹ ಆಹಾರವನ್ನು ಸೇವಿಸುತ್ತಿದ್ದ, ಅಂತಹ ನೀರನ್ನು ಕುಡಿಯುತ್ತಿದ್ದ ಅವರ ದೇಹದಲ್ಲಿ ನೈಟ್ರೇಟ್ ಅಂಶವು ಕೆಂಪು ರಕ್ತ ಕಣಗಳ ಹೀಮೊಗ್ಲೋಬಿನ್ ಅನ್ನು ಸೇರಿ ಮೆಟ್‍ಹೀಮೊಗ್ಲೋಬಿನ್ ಪ್ರಮಾಣದ ಉತ್ಪಾದನೆ ಹೆಚ್ಚಾಗಿತ್ತು. ಆಮ್ಲಜನಕವನ್ನು ದೇಹದ ಪ್ರತಿ ಕೋಶಕ್ಕೆ ಕೊಂಡೊಯ್ಯುವ ಆಕ್ಸಿಹೀಮೊಗ್ಲೊಬಿನ್ ಪ್ರಮಾಣವು ಕಡಿಮೆಯಿತ್ತು. ಅದರಿಂದ ಅವರಿಗೆ ಸುಸ್ತು ಕಾಡುತ್ತಿತ್ತು. ಅದಕ್ಕೆ ಕಾರಣ ಅವರು ಯಥೇಚ್ಛವಾಗಿ ತಮ್ಮ ಬೆಳೆಗಳಿಗೆ ನೈಟ್ರೋಜನ್‍ಯುಕ್ತ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದುದಾಗಿತ್ತು. ಅಂತಹ ನೈಟ್ರೋಜೆನ್ ರಾಸಾಯನಿಕವು ನೈಟ್ರೇಟ್ ಎಂಬುದಾಗಿ ಪರಿವರ್ತನೆ ಹೊಂದಿ ಕೃಷಿ ಉತ್ಪನ್ನಗಳಲ್ಲಿ, ತರಕಾರಿಗಳಲ್ಲಿ ಮತ್ತು ನೀರಿನಲ್ಲಿತ್ತು.

ನಾವು ತಿನ್ನುತ್ತಿರುವ ಆಹಾರದಲ್ಲಿ ನೈಟ್ರೇಟ್ ವಿಷದ ಜೊತೆಗೆ ಪಾದರಸ, ಆರ್ಸೆನಿಕ್, ಕ್ಯಾಡ್ಮಿಯಂ, ಕ್ರೋಮಿಯಂ, ನಿಕ್ಕಲ್, ಕಾಪರ್ ಮುಂತಾದ ಹಾನಿಕಾರಕ ಅಂಶಗಳ ಪ್ರಮಾಣ ಹೆಚ್ಚಿದೆ. ಇತ್ತೀಚಿನ ಪರೀಕ್ಷೆಗಳ ಪ್ರಕಾರ ಸೀಸ ಎಂಬ ರಾಸಾಯನಿಕ ವಸ್ತು ನಾವು ತಿನ್ನುತ್ತಿರುವ ಹಲವು ಆಹಾರಗಳಲ್ಲಿದೆ. ಕೀಟನಾಶಕಗಳ ತೃಣಾಂಶಗಳಿರುತ್ತವೆ. ಕೆಲವು ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಲೂಬಹುದು. ಕೃಷಿ ಉತ್ಪನ್ನಗಳಲ್ಲಿ ಇಂತಹ ವಿಷದ ರಾಸಾಯನಿಕಗಳ ಪ್ರಮಾಣವನ್ನು ಕಡಿಮೆ ಮಾಡಲು ಸಾವಯವ ಕೃಷಿಯತ್ತ ಎಲ್ಲರ ಗಮನವನ್ನು ಸೆಳೆಯಬೇಕಿದೆ.

ಸಾವಯವ ಕೃಷಿಯಲ್ಲಿ ಸಾಧನೆ

ಸಿಕ್ಕಿಂ ರಾಜ್ಯವನ್ನು 2016ರಲ್ಲಿ ಇಡೀ ವಿಶ್ವದಲ್ಲಿಯೇ ಶೇ. 100ರಷ್ಟು ಸಾಧನೆ ಮಾಡಿರುವ ಸಾವಯವ ರಾಜ್ಯವೆಂದು ಘೋಷಿಸಲಾಗಿದೆ. ಅಂತಹ ಸಾವಯವ ಸ್ಥಿತಿಗೆ ತಲುಪಲು 2003ರಿಂದ 2016ರವರೆಗೆ ಹಂತಹಂತವಾಗಿ ಸಿಕ್ಕಿಂ ರಾಜ್ಯದಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಯಿತು. ಶ್ರೀಲಂಕಾವು 2021ರಲ್ಲಿ ಸಾವಯವ ದೇಶವಾಗಲು ಕ್ರಮ ಕೈಗೊಂಡಿತಾದರೂ ಉತ್ಪಾದನೆ ಕುಂಠಿತಗೊಂಡು, ಜನಸಂಖ್ಯೆಗನುಗುಣವಾಗಿ ಆಹಾರ ಒದಗಿಸಲು ಸಾಧ್ಯವಾಗದ್ದರಿಂದ ಯೋಜನೆಯನ್ನು ಕೈಬಿಟ್ಟಿತು.

ರಾಜ್ಯ ಮುಂಗಡ ಪತ್ರದ ಘೋಷಣೆಗಳು

ರಾಜ್ಯದ 2026-27ರ ಸಾಲಿನ ಮುಂಗಡ ಪತ್ರದ ಕಂಡಿಕೆ 47ರಲ್ಲಿ ಹೀಗೆ ಘೋಷಿಸಲಾಗಿದೆ, ‘ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು’ ಎಂದಿದೆ. ಇದು ರಾಜ್ಯದ ಹಲವು ಜಿಲ್ಲೆಗಳ ರೈತರಿಗೆ ಸಾವಯವ ಕೃಷಿಯತ್ತ ಗಮನ ಹರಿಸಲು ಉತ್ತೇಜನ ನೀಡಲಿದೆ.

1. Organic Farming Institute GKVK 1
ಸಾವಯವ ಕೃಷಿ ಸಂಶೋಧನಾ ಸಂಸ್ಥೆ, ಜಿಕೆವಿಕೆ

ಕಳೆದ, 2025-26ರ ಸಾಲಿನ ಮುಂಗಡ ಪತ್ರದ ಕಂಡಿಕೆ 38ರಲ್ಲಿ ‘ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಿ, ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಘೋಷಿಸಲಾಗಿದೆ.

ಸಾವಯವ ಕೃಷಿ ಎಂದರೇನು?

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಿದೆ. ಅದರ ಮುಖ್ಯಸ್ಥರಾದ ಡಾ. ಬೋರಯ್ಯ (9448612467)ನವರಿಂದ ಸಾವಯವ ಕೃಷಿ (Organic Farming) ಕುರಿತು ಮಾಹಿತಿ ಪಡೆಯಲಾಯಿತು. ಸಾವಯವ ಕೃಷಿಯಲ್ಲಿ ಆರೋಗ್ಯಕರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸಲಾಗುವುದು. ಅಲ್ಲಿ ರಸಗೊಬ್ಬರಗಳಾದ ಯೂರಿಯಾ, ಅಮೋನಿಯಂ ಸಲ್ಫೇಟ್, ಡಿಎಪಿ, ಎನ್‍ಪಿಕೆ ಮುಂತಾದುವುಗಳ ಬಳಕೆಯಿರುವುದಿಲ್ಲ.

ಇಮಿಡಾಕ್ಲೋಪ್ರಿಡ್, ಕ್ಲೋರ್‍ಪೈರಿಪಾಸ್, ಲ್ಯಾಂಬ್ಡಾ ಸೈಹಲೋತ್ರಿನ್, ಅಸಿಫೇಟ್ ನಂತಹ ಕೀಟನಾಶಕಗಳನ್ನು ಬಳಸುವುದಿಲ್ಲ. ಪಾರಂಪರಿಕವಾಗಿ ಬಂದ ನಿಸರ್ಗದತ್ತವಾದ ಸಾವಯವ ಕೃಷಿಗೆ ಒತ್ತು ನೀಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರಗಳಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಲಾಗುತ್ತದೆ. ಪರಿಸರ ಸ್ನೇಹಿ ಜೀವಿಗಳಿಂದ ಕೀಟ ಮತ್ತು ರೋಗಗಳ ಹತೋಟಿ ಮಾಡಲಾಗುತ್ತದೆ.

ಮಣ್ಣು – ಮಾನವ – ಜೀವಸಂಕುಲಗಳ ಆರೋಗ್ಯಕ್ಕಾಗಿ ಆಧುನಿಕ ಕೃಷಿಯಿಂದ ಸಾವಯವ ಕೃಷಿಯತ್ತ ಹೊರಳಬೇಕಿದೆ. ಅದು ಸುಲಭದ ಕೆಲಸವಲ್ಲ. ಇಡೀ ಊರಿಗೆ ಊರೇ, ಹೋಬಳಿಗೆ ಹೋಬಳಿಯೇ, ತಾಲ್ಲೂಕಿಗೆ ತಾಲ್ಲೂಕೇ ಸಾವಯವ ಕೃಷಿಯನ್ನು ಅಪ್ಪಿಕೊಳ್ಳಬೇಕಿದೆ. ಅದಕ್ಕೆ ರೈತರು ತಯಾರಿರಬೇಕು. ಸರ್ಕಾರವು ಉತ್ತೇಜಿಸಬೇಕು. ಸರ್ಕಾರದ ಸಹಾಯವು ಹಂತಹಂತವಾಗಿ ಹರಿದು ಬರಬೇಕು.

ಸಾವಯವ ಕೃಷಿಯ ಸಾಕಾರ ಹೇಗೆ?

ಸಾವಯವ ಕೃಷಿ ಮಾಡಲು ಮೊದಲು ರೈತರು ಮನಸ್ಸು ಮಾಡಬೇಕು. ರೈತರ ಮನ ಪರಿವರ್ತನೆಯಾಗಬೇಕು. ರೈತರನ್ನು ಗುರುತಿಸಬೇಕು. ಸಾವಯವ ಬೇಸಾಯ ಕೈಗೊಳ್ಳಲು ಗ್ರಾಮ, ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಕೃಷಿ ಭೂಮಿಯನ್ನು ಗುರುತಿಸಬೇಕು. ರೈತರು ಎರೆಹುಳ ಗೊಬ್ಬರ ತಯಾರಿಕೆಗೆ ಗುಂಡಿಗಳನ್ನು, ಕೊಟ್ಟಿಗೆ ಗೊಬ್ಬರಕ್ಕಾಗಿ ತಿಪ್ಪೆಗಳ ಸೌಲಭ್ಯವನ್ನು ಮಾಡಿಕೊಳ್ಳಬೇಕು. ಬೆಳೆಯುಳಿಕೆಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನವನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ಅಗತ್ಯವಿರುವ ಉಪಯುಕ್ತ ಸೂಕ್ಷ್ಮಾಣುಗಳ ಮಿಶ್ರಣವನ್ನು ಕೃಷಿ ವಿಶ್ವವಿದ್ಯಾಲಯಗಳಿಂದ, ಕೃಷಿ ಇಲಾಖೆಯಿಂದ ಪೂರೈಕೆಯಾಗುವಂತೆ ಮಾಡಬೇಕು. ಅಂತಹ ಸೂಕ್ಷ್ಮಾಣುಗಳೆಂದರೆ ರೈಜೋಬಿಯಂ, ಅಜೋಸ್ಪಿರಿಲ್ಲಂ, ಅಜಟೋಬ್ಯಾಕ್ಟರ್, ಆಸ್ಪರ್‍ಜಿಲ್ಲಸ್. ಮೈಕೋರೈಜಾ ಮುಂತಾದುವು. ರೋಗನಿರೋಧಕ ದೇಸಿ ಬೀಜಗಳ ಬಳಕೆಗೆ ಒತ್ತು ನೀಡಬೇಕು.

ಸರ್ಕಾರವು ರೈತರಿಗೆ ಅಗತ್ಯ ತರಬೇತಿ ಕೊಡಬೇಕು. ಕೊಟ್ಟಿಗೆ ಗೊಬ್ಬರ ತಯಾರಿಕೆಗೆ ಜಾನುವಾರುಗಳ ಲಭ್ಯತೆಯನ್ನು ಪರಿಶೀಲಿಸಬೇಕು. ಅಗತ್ಯವಿರುವ ಕಡೆ ಜಾನುವಾರು ಸಾಕಾಣಿಕೆಯನ್ನು ಮತ್ತಷ್ಟು ಉತ್ತೇಜಿಸಬೇಕು. ಸಗಣಿ, ಗಂಜಲ ಸದ್ಬಳಕೆಯ ಕ್ರಮವನ್ನು ತಿಳಿಸಿಕೊಡಬೇಕು. ಹಸಿರೆಲೆ ಗೊಬ್ಬರ ತಯಾರಿಕೆಗೆ ಸೆಣಬು, ಡಯಾಂಚ, ಹಲಸಂದೆ, ಹುರುಳಿಯಂತಹ ಬೀಜಗಳ ಪೂರೈಕೆಯಾಗಬೇಕು. ಹೊಂಗೆ, ಬೇವು, ಗ್ಲಿರಿಸೀಡಿಯಾ, ಸಿಮರೂಬಾ, ಅಗಸೆಯಂತಹ ಹಸಿರೆಲೆ ಮರಗಳನ್ನು ಬೆಳೆಸಬೇಕು. ಅವುಗಳ ಎಲೆಗಳನ್ನು ಹಸಿರೆಲೆ ಗೊಬ್ಬರವಾಗಿ ಬಳಸಬೇಕು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
2. State Organization KSSOCA
ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ, ಹೆಬ್ಬಾಳ

ಸಾವಯವ ಕೃಷಿಯಲ್ಲಿ ಕೀಟ ಹತೋಟಿ

ಸಸ್ಯ ಸಂರಕ್ಷಣೆಗಾಗಿ ಕೀಟಗಳ ಹತೋಟಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಬೇವಿನ ಎಣ್ಣೆ, ಬೆಳ್ಳುಳ್ಳಿ ಕಷಾಯ, ಹಸಿ ಮೆಣಸಿನಕಾಯಿ ಕಷಾಯಗಳ ಸಿಂಪರಣೆ ಮಾಡಬೇಕು. ಇವು ಕೀಟಗಳನ್ನು ಕೊಂಚಮಟ್ಟಿಗೆ ಬೆಳೆಯ ಹತ್ತಿರ ಸುಳಿಯದಂತೆ ಮಾಡುತ್ತವೆ. ಕೊಯ್ಲಿನ ನಂತರ ಆಹಾರ ಧಾನ್ಯಗಳ ಶೇಖರಣೆಯಲ್ಲಿ ಒಣಗಿದ ಬೇವಿನ ಎಲೆಗಳು, ನೀಲಗಿರಿ ಎಲೆಗಳು, ತುಳಸಿ ಪುಡಿ, ಅರಿಶಿನ ಪುಡಿ, ಉಪ್ಪು ಮಿಶ್ರಿತ ಅರಿಶಿನ ಪುಡಿಗಳನ್ನು ಬಳಸಿ ಕೀಟ ಹತೋಟಿ ಮಾಡಬಹುದು.

ಸಾವಯವ ಕೃಷಿಯ ಮೂಲಭೂತ ತತ್ವಗಳು

ಸಾವಯವ ಕೃಷಿಯಲ್ಲಿ ಮುಖ್ಯವಾಗಿ ನಾಲ್ಕು ತತ್ವಗಳಿವೆ. 1). ಮಣ್ಣಿನ ಆರೋಗ್ಯದ ಗುಣಮಟ್ಟ ವರ್ಧನೆ, ಮಣ್ಣಿನ ಉಪಯುಕ್ತ ಜೀವಾಣುಗಳ ಚಟುವಟಿಕೆಗಳ ಸಂರಕ್ಷಣೆ, ವಿಷ ವಸ್ತುಗಳ ತೃಣಾಂಶÀಗಳಿಲ್ಲದ ಆಹಾರದ ಲಭ್ಯತೆಯ ಮೂಲಕ ಮಾನವನ ಆರೋಗ್ಯ ರಕ್ಷಣೆ, 2). ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಮೂಲಕ ಪರಿಸರ ಸಮತೋಲನವನ್ನು ಕಾಪಾಡಿ ಪ್ರಾಣಿ ಮತ್ತು ಮಾನವ ಕುಲದ ರಕ್ಷಣೆ, ಜೀವವೈವಿಧ್ಯತೆಯ ಸಂರಕ್ಷಣೆ 3). ರೈತ ಮತ್ತು ಗ್ರಾಹಕರ ನಡುವಿನ ವಿಶ್ವಾಸಾರ್ಹತೆ, ಬಾಂಧವ್ಯ ಹಾಗೂ ರೈತರಿಗೆ ಉತ್ತಮ ಬೆಲೆ ಮತ್ತು 4). ಭವಿಷ್ಯದ ತಲೆಮಾರುಗಳಿಗಾಗಿ ಮಣ್ಣು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕಾಳಜಿಯಂತಹ ಮೂಲಭೂತವಾದ ತತ್ವಗಳು ಅಡಗಿವೆ.

ರಸಗೊಬ್ಬರ ಮುಕ್ತ ಕೃಷಿ


ಸಾವಯವ ಕೃಷಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ದನಕರುಗಳ ಸಗಣಿ, ಮೇಕೆ ಕುರಿಗಳ ಗೊಬ್ಬರ, ಕೋಳಿ ಗೊಬ್ಬರ, ಎರೆಹುಳ ಗೊಬ್ಬರ, ಹಸಿರೆಲೆ ಗೊಬ್ಬರ, ಬೆಳೆಯುಳಿಕೆಗಳನ್ನು ಕೊಳೆಸಿ ಮಾಡಿದ ಗೊಬ್ಬರಗಳ ಬಳಕೆಯೇ ನಿತ್ಯನಿರಂತರವಾಗಿರಬೇಕು. ಕೃಷಿ ತ್ಯಾಜ್ಯ ವಸ್ತುಗಳ ಮರು ಬಳಕೆಯಾಗಬೇಕು. ರಸಗೊಬ್ಬರಗಳಿಗೆ ಸಂಪೂರ್ಣ ವಿರಾಮ ಹಾಕಬೇಕು. ‘ರಸಗೊಬ್ಬರ ಮುಕ್ತ ಕೃಷಿ’ ಘೋಷವಾಕ್ಯವಾಗಬೇಕು.

ಸಾವಯವ ಕೃಷಿಯಲ್ಲಿ ಪೋಷಕಾಂಶಗಳ ಪೂರೈಕೆ

ಸಾವಯವ ಕೃಷಿಯಲ್ಲಿ ಉತ್ತಮ ಫಸಲಿಗಾಗಿ ಬೀಜಾಮೃತ, ಜೀವಾಮೃತ, ಪಂಚಗವ್ಯಗಳನ್ನು ಬಳಸಬಹುದು. ಬೀಜಾಮೃತ ತಯಾರಿಕೆಯಲ್ಲಿ ಸಗಣಿ + ಗಂಜಲ + ಸುಣ್ಣ + ಬೆಲ್ಲ + ಮಣ್ಣನ್ನು ನೀರಿನಲ್ಲಿ ಮಿಶ್ರಣ ಮಾಡಿ ಬಿತ್ತನೆಗೆ ಮೊದಲು ಬೀಜ ಚಿಕಿತ್ಸೆ ಮಾಡಬೇಕು. ಜೀವಾಮೃತ ತಯಾರಿಕೆಯಲ್ಲಿ ಸಗಣಿ + ಗಂಜಲ + ದ್ವಿದಳ ಧಾನ್ಯದ ಹಿಟ್ಟು + ಬೆಲ್ಲ + ಮಣ್ಣನ್ನು ನೀರನಲ್ಲಿ ಮಿಶ್ರಣ ಮಾಡಿ 9ರಿಂದ 12 ದಿನಗಳ ಕಾಲ ಹುದುಗುವಿಕೆಗೆ ಬಿಟ್ಟು ನಂತರ ಬೆಳೆಗೆ ನೀಡಬೇಕು. ಪಂಚಗವ್ಯದಲ್ಲಿ ಸಗಣಿ + ಗಂಜಲ + ಹಾಲು + ಮೊಸರು + ತುಪ್ಪ + ಬೆಲ್ಲ + ದ್ವಿದಳ ಧಾನ್ಯದ ಹಿಟ್ಟು + ಬಾಳೆಹಣ್ಣು + ಎಳೆನೀರು ಮಿಶ್ರಣ ಮಾಡಿ 21 ದಿನಗಳ ಕಾಲ ಹುದುಗುವಿಕೆಗೆ ಬಿಟ್ಟು, ನಂತರ ಬೆಳೆಯ ವಿವಿಧ ಹಂತಗಳಲ್ಲಿ ನೀಡಬಹುದು.

ಸಾವಯವ ಉತ್ಪನ್ನಗಳ ಪ್ರಮಾಣೀಕರಣ

ಸಾವಯವ ಉತ್ಪನ್ನಗಳನ್ನು ಪ್ರಮಾಣೀಕರಿಸಲು ರಾಜ್ಯ ಸರ್ಕಾರದ ‘ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ’ ಬೆಂಗಳೂರಿನ ಹೆಬ್ಬಾಳದಲ್ಲಿದೆ. ರೈತರು ತಮ್ಮ ಕೃಷಿ ಉತ್ಪನ್ನಗಳ ಸಾವಯವ ಪ್ರಮಾಣೀಕರಣಕ್ಕಾಗಿ ಈ ಸಂಸ್ಥೆಯನ್ನು ಸಂಪರ್ಕಿಸಬಹುದು (ಸಂಪರ್ಕ ಸಂಖ್ಯೆ : 9448096001/02/03, ಇ-ಮೇಲ್ dscbng@gmail.com, ksocabng@gmail.com). ಬೆಳೆ ಬೆಳೆದ ಜಾಗದ ಮಣ್ಣು ಮತ್ತು ಕೃಷಿ ಉತ್ಪನ್ನದ ಮಾದರಿಯನ್ನು ಸಂಗ್ರಹಿಸಿ ಎನ್‍ಎಬಿಎಲ್ ಮಾನ್ಯತೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಹಾಸನದ ಪಶುವೈದ್ಯಕೀಯ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಮಾನ್ಯತೆಯ ಸಾವಯವ ಪ್ರಮಾಣನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ (ಸಂಪರ್ಕ: ಡಾ. ಹೇಮಂತ್ ಗೌಡ: 9008020862, ಇ-ಮೇಲ್ : organiccertificationcentre@gmail.com) ಸಾವಯವ ಕೃಷಿ ಉತ್ಪನ್ನ ಮತ್ತು ಸಾವಯವ ಪಶು ಉತ್ಪನ್ನಗಳನ್ನು ಪರೀಕ್ಷೆಗೊಳಪಡಿಸಿ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಸರ್ಕಾರದ ಮಾನ್ಯತೆ ಪಡೆದ ಹಲವು ಖಾಸಗಿ ಸಂಸ್ಥೆಗಳು ಕೂಡ ಸಾವಯವ ಉತ್ಪನ್ನಗಳ ಪ್ರಮಾಣೀಕರಣ ಮಾಡಿಕೊಡುತ್ತಿವೆ. ಅಂತಹ ಪ್ರಮಾಣೀಕರಣದಿಂದ ಸ್ಥಳೀಯ ಮತ್ತು ಅಂತರರಾಷ್ಟ್ರೀಯವಾಗಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

ಸರ್ಕಾರದಿಂದ ರೈತರು ಬಯಸುವ ಸಹಕಾರ

ಸಾವಯವ ಕೃಷಿಯಲ್ಲಿ ತೊಡಗಿರುವ ರೈತರು ಸರ್ಕಾರದಿಂದ ಸಾವಯವ ಕೃಷಿಗೆ ಉತ್ತೇಜನ, ಸಬ್ಸಿಡಿ, ಕೃಷಿ ಪರಿಕರಗಳ ಪೂರೈಕೆ, ತರಬೇತಿ, ಕೌಶಲ್ಯಾಭಿವೃದ್ಧಿ, ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಗಳ ಆಯೋಜನೆ, ಸಾವಯವ ಉತ್ಪನ್ನಗಳಿಗೆ ಉತ್ತಮ ಬೆಲೆಯಂತಹ ಪ್ರೋತ್ಸಾಹ ಕ್ರಮಗಳನ್ನು ರೈತರು ನಿರೀಕ್ಷಿಸುತ್ತಾರೆ.

ಒಟ್ಟಿನಲ್ಲಿ ಸಾವಯವ ಕೃಷಿ ಒಂದು ಪ್ರಯೋಗಾತ್ಮಕ ಕೃಷಿಯಾಗಿದೆ. ಅಲ್ಲಿ ಆರೋಗ್ಯಕರ ಆಹಾರವನ್ನು ಉತ್ಪಾದಿಸಲಾಗುತ್ತಿದೆ. ನಗರಗಳಲ್ಲಿ ಸಾವಯವ ಆಹಾರದ ಮಾರಾಟದ ಮಳಿಗೆಗಳು ಆರಂಭವಾಗಿವೆ. ಆರೋಗ್ಯದ ದೃಷ್ಟಿಯಿಂದ ಗ್ರಾಹಕರು ಸಾವಯವ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...

ಚದುರಿದ ಚಿತ್ರ | ಮುಟ್ಟು, ಲಜ್ಜೆ ಮತ್ತು ನಮ್ಮ‌ ಪೂರ್ವಗ್ರಹಗಳು

ವಿಜ್ಞಾನ, ವೈಚಾರಿಕತೆ, ಆಧುನೀಕರಣ ಮುಂತಾಗಿ ನಾವೆಷ್ಟೇ ಮಾತನಾಡಿಕೊಂಡರೂ, ಬದಲಾಗಿದ್ದೇವೆ ಎಂದೆಲ್ಲಾ...