ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಹಗರಣದ ಹಣ್ಣು
ಹರಹರಾ,
ನೀವಿಪ್ಪಠಾವನರಿಯದೆ,
ಅಷ್ಟವಿಧಾರ್ಚನೆ ಶೋಡಶೋಪಚಾರ ಮಾಡುವರ ದಿಟ್ಟತನವ ನೋಡಾ!
ಶಿವಶಿವಾ,
ನಿಮ್ಮ ಶ್ರೀಮುಖವನರಿಯದೆ
ಸಕಲ ಪದಾರ್ಥವ ನಿಮಗರ್ಪಿಸಿ
ಪ್ರಸಾದವ ಕೊಂಡೆವೆಂದೆಂಬವರ ಎದೆಗಲಿತನವ ನೋಡಾ!
ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ ಆರು ಮೆಚ್ಚುವರು
ಹೇಳಾ ಗುಹೇಶ್ವರಾ?
ಪದಾರ್ಥ:
ಠಾವು = ಸ್ಥಳ, ಜಾಗ
ಎದೆಗಲಿತನ = ಧೈರ್ಯ
ಮೆದ್ದು = ತಿಂದು
ಆರು = ಯಾರು
ವಚನಾರ್ಥ:
ನೀರು ಗಂಧ ಹೂ ಅಕ್ಷತೆ ಆರತಿ ಧೂಪ ನೈವೇದ್ಯ ತಾಂಬೂಲಗಳೆಂಬ ಎಂಟು ವಿಧದ ಪೂಜಾ ಪರಿಕರಗಳನ್ನು ವಿನಿಯೋಗಿಸಿ ಮಾಡುವ ಪೂಜೆಯೇ ಅಷ್ಟವಿಧದ ಅರ್ಚನೆ. ಶಿವನು ಇರುವ ಸ್ಥಳವನ್ನು ತಿಳಿಯದೆ ಅಷ್ಟವಿಧದ ಅರ್ಚನೆಗಳನ್ನು ಮಾಡುವರು. ಆವಾಹನೆ, ಆಸನ, ಪಾದ್ಯ, ಅರ್ಜ್ಯ, ಆಚಮನ, ಸ್ನಾನ, ವಸ್ತ್ರ, ಕುಂಕುಮ, ಹೂ, ಅಷ್ಟೋತ್ತರ, ಧೂಪ, ದೀಪ, ನೈವೇದ್ಯ, ನೀಲಾಂಜನ, ನಮಸ್ಕಾರ, ಪ್ರಾರ್ಥನೆ ಎಂಬ ಹದಿನಾರು ಬಗೆಯ ಉಪಚಾರವನ್ನು ಶಿವನಿಗೆ ಮಾಡುವವರಿಗೆ ಶಿವನಿರುವ ಜಾಗವೇ ತಿಳಿದಿರುವುದಿಲ್ಲ. ಇದು ಒಂದು ಹಗರಣವೇ ಸರಿ. ಶಿವನ ಶ್ರೀಮುಖವನ್ನು ಅಂದರೆ ಶಿವನ ನಿಜಸ್ವರೂಪವನ್ನು ಅರಿಯದೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ನೈವೇದ್ಯ ಮಾಡಿ ಅವುಗಳನ್ನೇ ಪ್ರಸಾದ ರೂಪದಲ್ಲಿ ಪಡೆದೆವು ಎಂದು ತಿಂದು ತೇಗುವರ ಧೈರ್ಯವಾದರೂ ಎಂತಹುದು? ಇಂತಹವರ ದಿಟ್ಟತನ, ಎದೆಗಲಿತನ ಎಂತಹುದು ಎಂದರೆ ಹಗರಣದ ಹಣ್ಣ ತಿಂದು ಹಸಿವು ಹೋಯಿತು ಎಂದಂತೆ.
ಪದ ಪ್ರಯೋಗಾರ್ಥ:
ಹಗರಣ ಅಂದರೆ ಅವಮಾನಕರ; ನಾಚಿಕೆಗೇಡಿನ ಅಥವಾ ಆಘಾತಕಾರಿ; ಅನುಚಿತ ಸಾರ್ವಜನಿಕ ಮಾನಹಾನಿಕರ ವರ್ತನೆ ಎಂಬ ಅರ್ಥ ನಿಘಂಟಿನಲ್ಲಿದೆ.
ಹಗರಣ ಎಂಬ ಪದ ಸಮಕಾಲೀನವಾದದ್ದು. ಇಂದಿನ ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಪ್ರಚಲಿತವಾದದ್ದು. ಹಗರಣಗಳು ಎಲ್ಲಾ ಕ್ಷೇತ್ರಗಳಲ್ಲೂ ಸಂಭವಿಸುತ್ತವೆ. ಹಗರಣಗಳೇ ಹಣ, ಮಾನ, ಸ್ಥಾನ ಸಂಪಾದನೆಯ ಅಕ್ರಮ ಮಾರ್ಗಗಳಾಗಿವೆ. ಹಗರಣದ ಹಣ್ಣ ಮೆದ್ದು ಹಸಿವು ಹೋಯಿತ್ತೆಂದಡೆ ಆರು ಮೆಚ್ಚುವರು ಹೇಳಾ ಗುಹೇಶ್ವರಾ? ಎಂದು ಅಲ್ಲಮ ಪ್ರಶ್ನೆ ಮಾಡುವ ರೀತಿಯನ್ನು ಗಮನಿಸಿದರೆ ಆಗಿನ ಕಾಲದಲ್ಲೂ ಹಗರಣದಂತ ಅಕ್ರಮ ಜೀವನ ಮಾರ್ಗಗಳು ಇದ್ದವು ಎನಿಸುತ್ತದೆ. ಹಣ್ಣು ತಿಂದು ಹಸಿವು ಹೋಯಿತು ಎಂದರೆ ಎಲ್ಲರೂ ಮೆಚ್ಚುವರು. ಅದು ಸಹಜ. ಹಗರಣದ ಹಣ್ಣು ತಿಂದು ಹಸಿವು ಹೋಯಿತು, ಬಯಕೆ ಈಡೇರಿತು, ಗುರಿ ಸಾಧನೆಯಾಯಿತು ಎಂದರೆ ಮೆಚ್ಚಲಾಗದು. ಇಂದಿನ ದಿನಮಾನಗಳಲ್ಲಿ ಹಗರಣಗಳಲ್ಲಿ ಸಿಕ್ಕು ಮಾನಹರಣಗೊಂಡು ಶಿಕ್ಷೆಗೊಳಗಾಗಿ ಪದವಿ ಪ್ರತಿಷ್ಠೆಗಳಿಂದ ಪದಚ್ಯುತಗೊಂಡವರ ಉದಾಹರಣೆಗಳಿವೆ. “ಹಗರಣದ ಹಣ್ಣು” ಅಲ್ಲಮನ ಕಾಣ್ಕೆಯಲ್ಲಿ ಕಂಡುಬಂದ ಕಾಲಜ್ಞಾನ ಮಹತ್ವವುಳ್ಳ ಅನನ್ಯ ಪದ ಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




