ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕೆಂಡದ ಗಿರಿ
ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಬವಿದ್ದಿತ್ತು ನೋಡಯ್ಯಾ.
ಅರಗಿನ ಕಂಬದ ಮೇಲೆ ಹಂಸೆಯಿದ್ದಿತ್ತು.
ಕಂಬ ಬೆಂದಿತ್ತು ಹಂಸೆ ಹಾರಿತ್ತು
ಗುಹೇಶ್ವರಾ
ವಚನಾರ್ಥ:
ಈ ವಚನದಲ್ಲಿ ಒಂದು ದೃಗ್ಗೋಚರವಾಗುವ ದೃಶ್ಯವಿದೆ. ಅಲ್ಲಿ ಬೆಂಕಿಯ ಕೆಂಡದ ಒಂದು ರಾಶಿ. ಬೆಂಕಿಯ ಕೆಂಡದ ರಾಶಿಯ ಮೇಲೆ ಅರಗಿನ ಕಂಬ ಇದೆ. ಅರಗಿನ ಕಂಬ ಅಂದರೆ ಮೇಣದ ಕಂಬ. ಅಂತಹ ಮೇಣದ ಕಂಬದ ಮೇಲೆ ಒಂದು ಹಂಸ ಪಕ್ಷಿ ಕುಳಿತಿದೆ. ಕೆಂಡದ ಶಾಖಕ್ಕೆ ಮೇಣದ ಕಂಬ ನಿಧಾನವಾಗಿ ಕರಗತೊಡಗಿದೆ. ಮೇಣದ ಕಂಬ ಕರಗಿ ಕುಸಿಯಲು ಆರಂಭಿಸಿದೊಡನೆ ಕಂಬದ ಮೇಲೆ ಕುಳಿತಿದ್ದ ಹಂಸ ಪಕ್ಷಿ ಹಾರಿ ಹೋಗುತ್ತದೆ. ಇದಿಷ್ಟು ಕಣ್ಣಿಗೆ ಕಾಣುವ ದೃಶ್ಯ ವಿವರಗಳು. ಇದು ಅಲ್ಲಮನ ಬೆಡಗಿನ ವಚನ. ವಚನದ ಆಂತರ್ಯದಲ್ಲಿ ಹುದುಗಿರುವ ಅರ್ಥ ಹೀಗಿದೆ. ಕೆಂಡದ ಗಿರಿ ಅಂದರೆ ಜ್ಞಾನದ ಜ್ವಾಲೆ. ಅದು ಸದಾ ಪ್ರಜ್ವಲಿಸುತ್ತಿರುತ್ತದೆ. ಅಂತಹ ಜ್ಞಾನದ ಜ್ವಾಲೆಯ ಮಧ್ಯದಲ್ಲೊಂದು ಅತ್ಯಂತ ಸೂಕ್ಷ್ಮವಾದ ದೈವ ಪ್ರಜ್ಞೆಯೊಂದು ಕಂಬದಂತೆ ನಿಂತಿರುತ್ತದೆ. ಅಂತಹ ಪ್ರಜ್ಞಾ ಕಂಬದ ಮೇಲೆ ಶರಣನ ಪ್ರಾಣ ಪಕ್ಷಿ ಕುಳಿತಿರುತ್ತದೆ. ಆ ಜ್ಞಾನಾಗ್ನಿಯ ಜ್ವಾಲೆಯು ದೈವಪ್ರಜ್ಞೆಯನ್ನು ಆವರಿಸಿಕೊಳ್ಳುತ್ತಲೇ ಶರಣನು ಐಕ್ಯ ಸ್ಥಿತಿಯನ್ನು ತಲುಪುತ್ತಾನೆ. ಹಂಸ ಹಾರುವ ಹಾಗೆ ಹಾರುತ್ತಾ ಹಾರುತ್ತಾ ಬಾನ ಬಯಲಿನಲ್ಲಿ ಮರೆಯಾಗುತ್ತಾನೆ. ಓಂ! ಶಾಂತಿ ಶಾಂತಿ ಶಾಂತಿಃ!
ಪದ ಪ್ರಯೋಗಾರ್ಥ:
ಕೆಂಡ ಅಂದರೆ ಕಣ್ಣಿಗೆ ಕಾಣುವಂತೆ ಪ್ರಜ್ವಲಿಸುವ ವಸ್ತು. ಹಾಗೆಯೇ ಮನುಷ್ಯನಲ್ಲಿ ಜ್ಞಾನವೂ ಕೂಡಾ ಪ್ರಜ್ವಲಿಸುತ್ತಿರುತ್ತದೆ. ಆದರೆ ಕಣ್ಣಿಗೆ ಕಾಣುವುದಿಲ್ಲ. ಅದು ಜ್ಞಾನಿಯಲ್ಲಿ ಅಭಿವ್ಯಕ್ತವಾಗುತ್ತಿರುತ್ತದೆ. ಕೆಂಡದ ಗಿರಿ ಅಂದರೆ ಅಪಾರವಾದ ಜ್ಞಾನ ಪ್ರಮಾಣ. ಘನ ಮಹಿಮ ವ್ಯಕ್ತಿಗಳಲ್ಲಿ ಕಂಡು ಬರುವಂತಹ ಬೆಟ್ಟದಷ್ಟು ಜ್ಞಾನ. ಅಂತಹ ಜ್ಞಾನವು ಶರಣನಲ್ಲಿರುವ ಮೇಣದಂತ ಅಂತರಂಗವನ್ನು ಕರಗಿಸುತ್ತಲೇ ಶರಣನ ಪ್ರಾಣ ಪಕ್ಷಿ ಹಾರಿ ಹೋಗುವ ಬೆರಗನ್ನು ಬೆಡಗಿನ ವಚನದಲ್ಲಿ ಕಟ್ಟಿ ಹಿಡಿದಿಟ್ಟಿರುವುದು ಅಲ್ಲಮನ ಅದ್ಭುತಗಳಲ್ಲೊಂದು. “ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ ಅನಲನೆಲ್ಲರೊಳಿಹನು ಮಂಕುತಿಮ್ಮ” ಎಂಬ ಕಗ್ಗ ನುಡಿಯಿದೆ. ಅನಲ ಅಂದರೆ ಬೆಂಕಿ ಕೆಂಡ. ಈ ಜ್ಞಾನವೆಂಬ ಕೆಂಡವು ಎಲ್ಲರಲ್ಲೂ ಇರುತ್ತದೆ. ಘನಮಹಿಮ ವ್ಯಕ್ತಿಯಲ್ಲಿ ಜ್ಞಾನದ ಕೆಂಡ ಪ್ರಜ್ವಲಿಸುತ್ತಿರುತ್ತದೆ. ಇತರೆ ಸಾಮಾನ್ಯ ವ್ಯಕ್ತಿಗಳಲ್ಲಿ ಜ್ಞಾನದ ಕೆಂಡ ನಿದ್ರಾವಸ್ಥೆಯಲ್ಲಿರುತ್ತದೆ ಎಂದು ಡಿವಿಜಿ ಹೇಳಿದ್ದಾರೆ. ಕೆಂಡದ ಗಿರಿ ಎಂಬುದು ಕೆಂಡದಷ್ಟೇ ಪ್ರಖರವಾದ ಅರ್ಥವುಳ್ಳ ಅನನ್ಯ ಪದ ಪ್ರಯೋಗ. ಈ ವಚನವನ್ನು ಕನ್ನಡದ ಜಾನಪದ ಗಾಯಕರಾದ ಬಾನಂದೂರು ಕೆಂಪಯ್ಯ ಅತ್ಯುತ್ತಮವಾಗಿ ಹಾಡಿದ್ದಾರೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




