ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನಂದಿನಾಥ
ಅರಿವಿನ ಕುರುಹದೇನೋ,
ಒಳಗೆ ಅನಿಮಿಷ ನಂದಿನಾಥನಿರಲು?
ಪೂಜಿಸುವ ಭಕ್ತನಾರೊ?
ಪೂಜೆಗೊಂಬ ದೇವನಾರೊ?
ಮುಂದು ಹಿಂದು,
ಹಿಂದು ಮುಂದಾದರೆ,
ಗುಹೇಶ್ವರಾ, ನೀನು ನಾನು,
ನಾನು ನೀನಾದಡೆ?
ವಚನಾರ್ಥ:
ನಾನು ಅಂದರೆ ಭಕ್ತ. ನೀನು ಅಂದರೆ ದೇವರು. ಮುಂದು ಎಂದರೆ ಎದುರುಗಡೆ ಪೂಜೆಗೊಳ್ಳುವ ದೇವರು. ಹಿಂದು ಎಂದರೆ ಪೂಜೆ ಮಾಡುವ ಭಕ್ತ. ಸಾಂಪ್ರದಾಯಿಕ ಪೂಜೆಯಲ್ಲಿ ದೇವರ ಎದುರು ಭಕ್ತನಿರುತ್ತಾನೆ.
ಈ ವಚನದಲ್ಲಿರುವ ಪ್ರಶ್ನೆ ಏನೆಂದರೆ ಭಕ್ತ ಎದುರು ಬಂದು ಮುಂದೆ ನಿಂತು ದೇವರು ಹಿಂದೆ ಇದ್ದಂತಹ ಸನ್ನಿವೇಶದಲ್ಲಿ ಏನಾಗುತ್ತದೆ ಎಂದು. ಮುಂದು ಹಿಂದಾಗದೆ ಹಿಂದು ಮುಂದಾದರೆ ಏನಾಗುತ್ತದೆ? ಅಲ್ಲಮನು ಗುಹೇಶ್ವರನಿಗೆ ಕೇಳುವ ಪ್ರಶ್ನೆ. ಗುಹೇಶ್ವರಾ, ನೀನು ನಾನು, ನಾನು ನೀನಾದಡೆ? ಆಗ ಪೂಜಿಸುವ ಭಕ್ತನಾರೊ, ಪೂಜೆಗೊಳ್ಳುವ ದೇವನಾರೊ ಎಂದು ತಿಳಿಯಲಾರದ ಸ್ಥಿತಿ ಸೃಷ್ಟಿಯಾಗುತ್ತದೆ.
ಗುಹೇಶ್ವರನನ್ನು ಪೂಜಿಸುವ ಭಕ್ತ ಅಲ್ಲಮನೇ? ಅಥವಾ ಪೂಜಿಸಿಕೊಳ್ಳುವ ದೇವ ಗುಹೇಶ್ವರನೇ? ಶರಣನು ತನ್ನ ಅರಿವಿನಲ್ಲಿ ಬೆರೆತು ತನ್ನೊಳಗೆ ತಾನೇ ಅನಿಮಿಷ ನಂದಿನಾಥನಾದಾಗ ಅಲ್ಲಿ ಏಕೋಭಾವ ಉಂಟಾಗಿ ಪೂಜಕ ಮತ್ತು ಪೂಜ್ಯ ಎಂಬ ದ್ವಂದ್ವ ಭಾವಗಳು ಅಳಿಯುತ್ತವೆ. ನಾನು ಪೂಜಿಸುವವ, ನೀನು ಪೂಜ್ಯ ಎಂಬ ಎರಡು ಸಂಪೂರ್ಣ ಬೆರೆದು ಒಂದಾಗುತ್ತವೆ. ಇದು ಭಕ್ತನು ಶರಣನಾಗುವ ಪಥದಲ್ಲಿ ಪ್ರಾಣಲಿಂಗಿ ಎಂಬ ಸ್ಥಳದ ಮೈಲುಗಲ್ಲು.
ಪದ ಪ್ರಯೋಗಾರ್ಥ:
ನಮಗೆ ಮಂಜುನಾಥ ಅಂತ ಗೊತ್ತು. ವೃಷಭನಾಥ ಅಂತ ಗೊತ್ತು. ಆದರೆ ನಂದಿನಾಥ ಎಂಬುದು ಬಹಳ ವಿರಳವಾಗಿರುವ ಹೆಸರು. ಮೈಸೂರು ಜಿಲ್ಲೆಯಲ್ಲಿ ನಂದಿನಾಥಪುರ ಎಂಬ ಸ್ಥಳವಿದೆ ಎನ್ನುವುದನ್ನು ಬಿಟ್ಟರೆ ನಂದಿನಾಥ ಎಂಬ ಹೆಸರಿನ ವ್ಯಕ್ತಿಗಳಿರುವುದು ವಿರಳ. ಹಾಗಾಗಿ ನಂದಿನಾಥ ಈ ವಚನದಲ್ಲಿ ಪ್ರಯೋಗವಾಗಿರುವ ವಿರಳವಾದ ಅನನ್ಯ ಪದ. ನಂದಿನಾಥ ಎಂದರೆ ನಂದಿವಾಹನನಾದವನು. ಶಿವ. ಆ ನಂದಿಗೆ ಒಡೆಯನಾದವನು. ಆನಂದಿ ಎಂದರೆ ಸದಾ ಕಾಲ ಆನಂದವಾಗಿರುವವನು. ಸಚ್ಚಿದಾನಂದ ಸ್ವರೂಪಿ. ಶಿವಶಕ್ತಿಯ ಅಗಾಧವಾದ ಭಾರನನ್ನು ಹೊತ್ತು ಆನಂದದಿಂದ ಸಂಚರಿಸುವ ನಂದಿ ಸದಾ ಆನಂದಿ.
“ನಂದಿ ನಾನು, ಆನಂದಿ ನಾನು, ಆ ವೃಷಭ ಧ್ವಜ ಎತ್ತು, ಬಂದೆ ನಾ ಶಿವಶಕ್ತಿಯ ಹೊತ್ತು, ಈ ಹೊತ್ತು” ಎಂದು ಬೇಂದ್ರೆ ನಂದಿಯನ್ನು ವಂದಿಸಿದ್ದಾರೆ. ಅಲ್ಲಮನ ಅಂತರಂಗದ ಗುಹೆಯೊಳಗೆ ಅನಿಮಿಷಯ್ಯನಿದ್ದಾನೆ. ಅವನು ಶಿವಸ್ವರೂಪಿ. ನಂದಿವಾಹನನಾದ ನಂದಿನಾಥ.
ಅಲ್ಲಮನ ಇದೇ ಒಂದು ವಚನದಲ್ಲಿ ಮಾತ್ರ ಬಳಕೆಯಾಗಿರುವ “ನಂದಿನಾಥ” ಕನ್ನಡದ ಅನನ್ಯವಾದ ಪದ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




