ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನೀರ ಸುಟ್ಟ ಕಿಚ್ಚು
ನೀರ ಸುಟ್ಟ ಕಿಚ್ಚಿನ
ಬೂದಿಯ ಬಲ್ಲಡೆ
ನೀವು ಹೇಳಿರೆ!
ಬಯಲ ಸುಟ್ಟ ಕಿಚ್ಚಿನ
ಬೂದಿಯ ಕಂಡಡೆ
ನೀವು ಹೇಳಿರೆ!
ವಾಯು ನಿಂದ ಸ್ಥಾನವ
ಗುಹೇಶ್ವರ ನಿಂದ ನಿಲವ
ಕಂಡಡೆ
ನೀವು ಹೇಳಿರೆ!
ವಚನಾರ್ಥ:
ನಿಂದ ನಿಲವು ಎಂದರೆ ದೈವ ವಸ್ತುವಿನ ಪರ ಬ್ರಹ್ಮ ಸ್ವರೂಪ. ಗುಹೇಶ್ವರ ನಿಂದ ನಿಲವ ಕಂಡಡೆ ನೀವು ಹೇಳಿರೆ ಎಂದು ಅಲ್ಲಮ ಕೇಳಿರುವುದು ಗುಹೇಶ್ವರನ ಪರ ಬ್ರಹ್ಮ ಸ್ವರೂಪವನ್ನು ಕಂಡವರು ಯಾರಾದರೂ ಇದ್ದರೆ ಹೇಳಿ ಎಂದು. ಹೇಗೆ ವಾಯು ಅಂದರೆ ಗಾಳಿಯು ಒಂದು ಕಡೆ ಸ್ಥಿರವಾಗಿ ನಿಂತ ಯಾವುದಾದರು ಒಂದು ಸ್ಥಳವು ಇರುವುದಿಲ್ಲವೋ ಹಾಗೆ ಗುಹೇಶ್ವರನ ಪರ ಬ್ರಹ್ಮ ಸ್ವರೂಪವನ್ನು ಹೀಗೆಯೇ ಕಂಡೆ ಎಂದು ಯಾರೂ ಹೇಳಲಾಗದು. ಅದಕ್ಕೆ ಉದಾಹರಣೆಯಾಗಿ ಅಲ್ಲಮ ನೀಡುವ ಎರಡು ಸಂಗತಿಗಳು. ಬೆಂಕಿಯು ನೀರನ್ನು ಸುಟ್ಟು ಆ ನಂತರ ಉಳಿಯುವ ಬೂದಿಯನ್ನು ಹೇಗೆ ಕಾಣಲು ಸಾಧ್ಯವಿಲ್ಲವೋ ಹಾಗೆ. ಬಯಲನ್ನು ಆವರಿಸಿರುವ ಆಕಾಶವನ್ನು ಬೆಂಕಿ ಸುಟ್ಟು ಆ ನಂತರ ಉಳಿಯುವ ಬೂದಿಯನ್ನು ಹೇಗೆ ಕಾಣಲು ಸಾಧ್ಯವಿಲ್ಲವೋ ಹಾಗೆ. ನೀರಿನಂತೆ ಎಲ್ಲೆಲ್ಲೂ ಹರಿದಾಡುವ ಚಂಚಲ ಮನಸ್ಸನ್ನು ಸ್ಥಿರತೆ ಎಂಬ ಬೆಂಕಿಯಿಂದ ಸುಡಬೇಕು. ಸುಟ್ಟ ನೀರು ಆವಿಯಾಗಿ ಆಕಾಶವನ್ನು ಸೇರುವ ಹಾಗೆ, ಒಂದೆಡೆಯೇ ನಿಲ್ಲದ ವಾಯುವಿನ ಹಾಗೆ, ಶರಣನು ಅವನಲ್ಲಿ ಬೆರೆಯಬೇಕು, ಬೆರೆತು ಒಂದಾಗಬೇಕು.
ಪದಪ್ರಯೋಗಾರ್ಥ:
ನೀರನ್ನು ಸುಡುವ ಬೆಂಕಿ ಇರಬಹುದೇ, ಇಲ್ಲ! ಬಯಲನ್ನು ಆವರಿಸಿರುವ ಆಕಾಶವನ್ನು ಸುಡುವ ಬೆಂಕಿ ಇರಬಹುದೇ, ಇಲ್ಲ! ಆದರೆ ಈ ವಚನದ ಸಂದರ್ಭದಲ್ಲಿ ನೀರನ್ನು ಸುಡುವ ಕಿಚ್ಚಿದೆ. ಆಕಾಶವನ್ನು ಸುಡುವ ಬೆಂಕಿಯಿದೆ. ಅದೇ ಈ ವಚನ ವಿಶೇಷ. ಇವು ಬೆಡಗಿನ ಪದಗಳು. ಹೊರ ಅರ್ಥವೊಂದು. ಒಳಾರ್ಥವೊಂದು. ಬೆಡಗಿನ ಪದಗಳನ್ನು ಪ್ರಯೋಗಿಸಿ ವಚನಗಳನ್ನು ಕಟ್ಟುವಲ್ಲಿ ಶರಣ ಸಾಹಿತ್ಯದಲ್ಲಿ ಅಲ್ಲಮನಿಗೆ ಅಗ್ರಸ್ಥಾನ. ಬೆಂಕಿಯ ಸುಡುವಲ್ಲಿ, ನೀರನ್ನು ತೊಳೆವಲ್ಲಿ, ವಾಯುವ ಮೆಟ್ಟುವಲ್ಲಿ, ಆಕಾಶವ ಹಿಡಿವಲ್ಲಿ ಎಂದು ಬೆಡಗಿನ ಪದ ಬಳಕೆ ಮಾಡಿದ ಅಲ್ಲಮನ ಪ್ರಸಿದ್ದ ವಚನವಿದೆ. “ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ, ಆಕಾಶವ ಹಿಡಿವಲ್ಲಿ” ಎಂದು. ಗುಹೇಶ್ವರ ನಿಂತ ನಿಲುವು ಹೇಗಿರುತ್ತದೆ ಎಂದರೆ ಬಯಲು ಸುಟ್ಟ ನಂತರ ಉಳಿಯುವ ಬೂದಿಯಂತೆ, ನೀರು ಸುಟ್ಟ ನಂತರ ಸಿಗುವ ಬೂದಿಯಂತೆ. ಗುಹೇಶ್ವರನ ನಿಲುವು ಅದೃಶ್ಯ, ಅಗೋಚರ, ಅಪ್ರಮಾಣ, ಅಪ್ರತಿಮ, ಅಗಮ್ಯ. ಅದು “ನೀರ ಸುಟ್ಟ ಕಿಚ್ಚು” ಉಳಿಸಿದ ಬೂದಿಯಂತೆ. ಕಿಚ್ಚು ನೀರನ್ನು ಸುಡುವುದುಂಟೇ? ನೀರು ಸುಟ್ಟ ನಂತರ ಬೂದಿ ಉಳಿವುದುಂಟೇ? ನೀವು ಹೇಳಿರೆ ಎಂದು ಮೂರು ಪ್ರಶ್ನೆಗಳು. “ನೀರ ಸುಟ್ಟ ಕಿಚ್ಚು” ಅನನ್ಯವಾದ ಬೆಡಗಿನ ಪದ ಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




