ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನೇತ್ರಮಹಿಮೆ
ಕಣ್ಣಿಂಗೆ ಕಣ್ಣು, ಕಣ್ಣೊಳು ಕಣ್ಣು,
ಕಣ್ಣೇ ನೇತ್ರ, ನೇತ್ರವೆ ಸೂತ್ರ,
ಸೂತ್ರವೆ ಲಿಂಗ, ಲಿಂಗವೆ ಗುಹ್ಯ.
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ,
ರಹಸ್ಯಕ್ಕೆ ರಹಸ್ಯ.
ಈ ನೇತ್ರಮಹಿಮೆಯ
ಗುಹೇಶ್ವರ ಬಲ್ಲನಲ್ಲದೆ
ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಯ್ಯ.
ವಚನಾರ್ಥ:
ಕಣ್ಣು ಮತ್ತು ಒಳಗಣ್ಣು ಈ ವಚನದ ವಸ್ತುಗಳು. ಒಂದು ಬಹಿರಂಗದ ಕಣ್ಣು. ಇನ್ನೊಂದು ಅಂತರಂಗದ ಕಣ್ಣು. ಕಣ್ಣಿಗೆ ಕಣ್ಣಿದೆ. ಕಣ್ಣಿನ ಒಳಗೆ ಕಣ್ಣಿದೆ. ಅದು ಒಳಗಣ್ಣು. ಬಹಿರಂಗದ ಕಣ್ಣು ದೇಹದ ಅಂಗ. ಅಂತರಂಗದ ಅರಿವಿನ ಒಳಗಣ್ಣು ಈ ವಚನದಲ್ಲಿ ನೇತ್ರ ಎಂದೆನಿಸಿಕೊಂಡಿದೆ. ಕಣ್ಣೇ ನೇತ್ರ. ಆ ಒಳನೇತ್ರವೇ ಎಲ್ಲ ಹೊರನೋಟಗಳ ಸೂತ್ರಧಾರಿ. ಅರಿವಿನ ಒಳನೋಟವು ಜೀವನ ದರ್ಶನ ಮಾಡಿಸುತ್ತದೆ. ಜೀವನದ ಸೂತ್ರ ಇರುವುದು ಕಣ್ಣಿಗೆ ಕಾಣದ ದೈವದ ಕೈಯಲ್ಲಿ. ಆ ದೈವವೇ ಲಿಂಗ. ಅಂತಹ ಲಿಂಗವಾದರೂ ಎಂತಹುದು? ಅಗಮ್ಯ, ಅಗೋಚರ. ಗುಹ್ಯವಾದದ್ದು, ಗೌಪ್ಯವಾದದ್ದು, ರಹಸ್ಯವಾದದ್ದು. ಅಂತಹ ಲಿಂಗವನ್ನು ಅರಿಯಲು ಹೊರಗಿನ ಕಣ್ಣು ಸಾಲದು. ಒಳಗಣ್ಣು ತೆರೆದು ನೋಡಬೇಕು.
ಶ್ರೀಕೃಷ್ಣನ ವಿಶ್ವರೂಪವನ್ನು ನೋಡಲು ಅರ್ಜುನನ ಹೊರಗಣ್ಣಿಗೆ ಸಾಧ್ಯವಿರಲಿಲ್ಲ. ಅದಕ್ಕೆ ಶ್ರೀಕೃಷ್ಣನೇ ಅರ್ಜುನನ ನೇತ್ರಗಳಲ್ಲಿ ದಿವ್ಯತೆಯನ್ನು ತುಂಬಬೇಕಾಯಿತು. ಅದು ನೇತ್ರ ಮಹಿಮೆ. ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು, ಮನದೊಳಗಣ ಶಂಕೆ ಹರಿಯಿತ್ತು, ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ! ಅಂತರಂಗದ ನೇತ್ರಗಳು ತೆರೆದು ಅರಿವು ಮೂಡಿದಾಗ ಭಾವ ನಿರಾಳವಾಗುತ್ತದೆ.
ಪದ ಪ್ರಯೋಗಾರ್ಥ:
ಪಂಚೇಂದ್ರಿಯಗಳಲ್ಲಿ ಪ್ರಧಾನವಾದ ಕಣ್ಣನ್ನು ಉದ್ದೇಶಿಸಿ ಬರೆದ ವಚನವಿದು. ದೇಹದ ಚಟುವಟಿಕೆಗಳನ್ನು ನಿಯಂತ್ರಿಸುವ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಎಂಬ ಐದು ಇಂದ್ರಿಯಗಳಲ್ಲಿ ಕಣ್ಣು ಶ್ರೇಷ್ಠವಾದದ್ದು. ಸರ್ವಂಗಗಳಲ್ಲಿ ಶಿರವೇ ಶ್ರೇಷ್ಠ. ಪಂಚೇಂದ್ರಿಯಗಳಲ್ಲಿ ಕಣ್ಣೇ ಶ್ರೇಷ್ಠ. ಕಣ್ಣನ್ನು ಕಿತ್ತು ಲಿಂಗಕ್ಕೆ ಕೊಟ್ಟ ಕಾಡುವಾಸಿ ಬೇಡನು ಕಣ್ಣಿನ ಕಾರಣಕ್ಕಾಗಿ ಕಣ್ಣಪ್ಪ ಎಂದೇ ಪ್ರಸಿದ್ಧನಾದವನು. ಅದು ನೇತ್ರಮಹಿಮೆ. ಅಲ್ಲಮನೇ ತನ್ನ ಇನ್ನೊಂದು ವಚನದಲ್ಲಿ ನೇತ್ರದ ಮಹಿಮೆಯನ್ನು ಬಣ್ಣಿಸುತ್ತಾ ಈ ಲೋಕದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳಿಗೆ ಕಣ್ಣೋಟವೇ ಕಾರಣ ಎಂದು ಹೇಳುವಲ್ಲಿ “ನೋಟದ ಸುಖ ತಾಗಿ ಕೋಟಲೆಗೊಳ್ಳುತ್ತಿದೆ ಲೋಕ” ಎಂಬ ಉದಾಹರಣೆಯಿದೆ. ನೇತ್ರಮಹಿಮೆ ಎಂಬ ಪದಕ್ಕೆ ಲೌಕಿಕ ಅರ್ಥವನ್ನು ಹಚ್ಚಿ ನೋಡಿದರೆ ಈ ಪದದ ಪ್ರಖರತೆ ಹೆಚ್ಚು ಗಮನ ಸೆಳೆಯುತ್ತದೆ. ಕನ್ನಡ ಕವಿಗಳು ಕಣ್ಣ ನೋಟದ ಕುರಿತಾಗಿ ರಚಿಸಿದಷ್ಟು ಸಾಹಿತ್ಯವನ್ನು ಬೇರೆ ಇಂದ್ರಿಯಗಳ ಮೇಲೆ ರಚಿಸಿಲ್ಲ. “ಕಣ್ಣಂಚಿನಾ ಈ ಮಾತಲಿ ಏನೇನೋ ತುಂಬಿದೇ ಕವಿ ಕಾಣದಾ ಶೃಂಗಾರದಾ ರಸ ಕಾವ್ಯ ಇಲ್ಲಿದೇ” ರಾಜ್ ಅಭಿನಯದ ಪಿ.ಬಿ. ಶ್ರೀನಿವಾಸ್ ಹಾಡಿದ್ದ ಅಮೋಘ ಗೀತೆ ಕಳೆದ ಐದು ದಶಕದ ಹಿಂದೆಯೇ ಪ್ರಸಿದ್ಧವಾಗಿತ್ತು. ನೇತ್ರಮಹಿಮೆ ಅಂತಹುದು. ಅಲ್ಲಮ ವಚನದಲ್ಲಿ ಬಳಸಿದ ಪದ ನೇತ್ರಮಹಿಮೆ ಅನನ್ಯವಾದದ್ದು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




