ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಒಳಗಣ ರಣರಂಗ
ಕಂಗಳ ಮುಂದೆ ಕತ್ತಲೆ ಇದೇನೊ?
ಮನದ ಮುಂದಣ ಮರವೆ ಇದೇನೊ?
ಒಳಗಣ ರಣರಂಗ
ಹೊರಗಣ ಶೃಂಗಾರ
ಬಳಕೆಗೆ ಬಂದ ಬಟ್ಟೆ ಇದೇನೊ?
ಗುಹೇಶ್ವರಾ?
ವಚನಾರ್ಥ:
ಕಣ್ಣುಗಳ ಮುಂದೆ ಕತ್ತಲೆ ಆವರಿಸಿದ್ದರೆ ಆ ಕತ್ತಲಲ್ಲಿ ಏನೂ ಕಾಣುವುದಿಲ್ಲ. ಹಾಗೆ ಮನಸ್ಸಿನಲ್ಲಿ ಭ್ರಮೆ ಭ್ರಾಂತಿ ತುಂಬಿ ಹೋಗಿದ್ದರೆ ನಿಜ ಜೀವನ ದರ್ಶನ ಆಗುವುದಿಲ್ಲ. ಕತ್ತಲೆ, ಮರವೆ ಮುಂತಾದವುದರ ಮಧ್ಯೆ ಜೀವನದಲ್ಲಿ ಆಂತರಿಕ ಸಂಘರ್ಷ ಸಂದೇಹ ನಿರಂತರವಾಗಿ ನಡೆಯುತ್ತಿರುತ್ತವೆ. ಇದು ಒಳಗಣ ರಣರಂಗ. ಇದನ್ನು ಒಳಗಿಟ್ಟುಕೊಂಡೆ ಹೊರಗೆ ಬದುಕನ್ನು ಕಟ್ಟಿಕೊಳ್ಳುವ ಶೃಂಗಾರಗೊಳಿಸುವ ಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಧನ, ಧಾನ್ಯ, ಪೂಜೆ, ಪ್ರಸಾದ, ಯೋಗ, ಭೋಗ, ಆಡಂಬರ, ತೋರಿಕೆ, ಸಂಪ್ರದಾಯ, ವಿಧಿ ವಿಧಾನ ಇವೆಲ್ಲಾ ಶೃಂಗಾರದ ಸಲಕರಣೆಗಳು. ಹೊರಗಣ ಶೃಂಗಾರ. ಎಲ್ಲಿಯವರೆಗೆ ಒಳಗಣ ರಣರಂಗ ನಡೆಯುತ್ತಿರುತ್ತದೋ ಅಲ್ಲಿಯವರೆಗೆ ಮತ್ತೆ ಮತ್ತೆ ಹಳೆಯ ಹಾದಿಯಲ್ಲೇ ಜೀವನ ನಡೆಯುತ್ತಿರುತ್ತದೆ. ಬಳಸಿದ ದಾರಿಯನ್ನೇ ಮತ್ತೆ ಬಳಸುತ್ತಿರುತ್ತೇವೆ. ಹೊಸತನ್ನು ನೋಡಲು ಸಾಧ್ಯವಾಗುವುದಿಲ್ಲ. ಇದರಿಂದ ಆಶ್ಚರ್ಯಚಕಿತನಾದ ಅಲ್ಲಮ ಇದೇನೊ? ಇದೇನೊ? ಇದೇನೊ? ಎಂದು ಗುಹೇಶ್ವರನನ್ನು ಕೇಳುವ ಮೂರು ಪ್ರಶ್ನೆಗಳು ಇಲ್ಲಿವೆ.
ಪದಪ್ರಯೋಗಾರ್ಥ:
ಒಳಗಣ ರಣರಂಗ. ಮನುಷ್ಯನ ಅಂತರಂಗವೆ ಒಳಗು. ಬಹಿರಂಗವೆ ಹೊರಗು. ಅಂತರಂಗದಲ್ಲಿ ಸದಾ ಯುದ್ಧ ನಡೆಯುತ್ತಿರುತ್ತದೆ. ಒಳ್ಳೆಯದು ಕೆಟ್ಟದ್ದು ಸರಿ ತಪ್ಪು ನ್ಯಾಯ ಅನ್ಯಾಯ ಧರ್ಮ ಅಧರ್ಮಗಳ ನಡುವೆ ನಡೆಯುವ ಆಂತರಿಕ ಸಂಘರ್ಷ. ಇಲ್ಲಿ ಗೆಲ್ಲುವವನು ಅವನೇ. ಸೋಲುವವನು ಅವನೇ. ಇದು ಒಳಗಣ ರಣರಂಗ. ಇದನ್ನೇ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ “ದೇವದಾನವರ ರಣರಂಗ ಮಾನವಹೃದಯ ಭಾವ ರಾಗ ಹಠಂಗಳವರ ಸೇನೆಗಳು” ಎಂದಿದ್ದಾರೆ. ಮಾನವಹೃದಯದಲ್ಲಿ ದೇವನೂ ಇದ್ದಾನೆ. ದಾನವನೂ ಇದ್ದಾನೆ. ಅವರಿಬ್ಬರ ನಡುವಣ ತಿಕ್ಕಾಟವೆ ಒಳಗಣ ರಣರಂಗ. ಭಾವನೆಗಳು, ಆಸೆ ಆಕಾಂಕ್ಷೆಗಳು, ಹಠ, ಸೇಡು ಇವೆಲ್ಲಾ ಸೈನಿಕರು. ಇಂತಹ ರಣರಂಗವನ್ನು ಒಳಗಿಟ್ಟುಕೊಂಡು ಹೊರಗೆ ಸಿಂಗಾರ ಬಂಗಾರಗಳ ತೋರಿಕೆಯ ತೊಟ್ಟು ಜೀವನ ನಡೆಯುತ್ತಿರುತ್ತದೆ. ಮನುಷ್ಯ ತನ್ನ ಒಳಗಿನ ರಣರಂಗವನ್ನು ಇಲ್ಲವಾಗಿಸಬೇಕು. ಆಗ ಅಂತರಂಗ ಬಹಿರಂಗಗಳೆರಡು ಶೃಂಗಾರಗೊಳ್ಳುತ್ತವೆ. ಮನದ ಮುಂದಣ ಮರವೆ, ಬಳಕೆಗೆ ಬಂದ ಬಟ್ಟೆ ಎಂಬ ಮೂರು ಮೂರು ಪದಗಳ ಜೋಡಣೆಯೊಂದಿಗೆ ಮೂಡಿಬಂದಿರುವ “ಒಳಗಣ ರಣರಂಗ ಹೊರಗಣ ಶೃಂಗಾರ” -ಅನನ್ಯ ಪದ ಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




