ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಒಂದು-ಮೂರು-ಐದು-ಒಂಬತ್ತು-ಹತ್ತು
ಗಗನದ ಮೇಘಂಗಳು ಸುರಿದಲ್ಲಿ
ಒಂದು ಹಿರಿಯ ಕೆರೆ ತುಂಬಿತ್ತು.
ಆ ಕೆರೆಗೆ ಏರಿ ಮೂರು,
ಅಲ್ಲಿ ಒಳಗೆ ಹತ್ತು ಬಾವಿ,
ಹೊರಗೆ ಐದು ಬಾವಿ!
ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ ಆಕಾಶವೆಲ್ಲ ಜಲಮಯವಾಗಿತ್ತು!
ತುಂಬಿದ ಜಲವನುಂಡು ಬಂದು
ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ
ವಚನಾರ್ಥ:
ಮೇಲೆ ಅನಂತವಾದ ಆಕಾಶ. ಅಲ್ಲಿ ಮೋಡಗಳ ರಾಶಿ. ಕೆಳಗೆ ವಿಸ್ತಾರವಾದ ಭೂಮಿ. ಅದರ ವಿಸ್ತಾರತೆ ಒಂದು ವಿಶಾಲವಾದ ಕೆರೆಯನ್ನು ಹೋಲುವಂತಿದೆ. ಅದು ಹಿರಿಯ ಕೆರೆ. ಆಕಾಶದ ಮೋಡಗಳು ಮಳೆ ಸುರಿಸಿ ಸುರಿಸಿ ಕೆರೆ ತುಂಬುತ್ತದೆ. ಆಕಾಶವೇ ಸೃಷ್ಟಿಕರ್ತನ ದಿವ್ಯ ಸ್ವರೂಪದ ಆವಾಸ ಸ್ಥಾನ. ಕೆಳಗಿರುವುದು ಆತನೇ ಸೃಷ್ಟಿಸಿರುವ ಜೀವ ಜಗತ್ತು. ಆಕಾಶದಿಂದ ಸುರಿಯುವ ಮಳೆಯೇ ಕಾಮನೆಗಳು. ಅವು ಜೀವ ಜಗತ್ತೆಂಬ ಅತೀ ದೊಡ್ಡದಾದ ಕೆರೆಯನ್ನು ತುಂಬಿಸುತ್ತವೆ. ಕಾಮನೆಗಳು ಎಂಬ ಜಲದಿಂದ ತುಂಬಿದ ಕೆರೆಯ ಭಾಗವಾಗಿ ಮನುಷ್ಯ. ಅಂತಹ ಮನುಷ್ಯ ದೇಹಕ್ಕೆ ಮೂರು ಲಕ್ಷಣಗಳು. ಸೂಕ್ಷ್ಮ, ಸ್ತುಲ, ಸಶರೀರ. ಇಂತಹ ಲಕ್ಷಣಗಳನ್ನು ಒಳಗೊಂಡು ರಚಿತವಾದ ದೇಹದಲ್ಲಿ ಪಂಚೇಂದ್ರೀಯಗಳು, ಪಂಚರಸಗಳ ಹತ್ತು ಭಾವಿ. ಇವೆಲ್ಲವನ್ನೂ ಪಂಚಭೂತಗಳೆಂಬ ಭಾವಿಗಳು ಹೊರಗಿನಿಂದ ನಿಯಂತ್ರಿಸುತ್ತವೆ. ಮನುಷ್ಯ ದೇಹದ ಒಂಬತ್ತು ರಂದ್ರಗಳಿಂದ ಹೊಮ್ಮವ ಕಾಮಾದಿ ಬಯಕೆಗಳ ಜಲಧಾರೆಯ ರಭಸ ಮುಗಿಲೆತ್ತರೆಕ್ಕೆ ಮುಟ್ಟುವಂತಹುದು. ಅಂತಹ ಕಾಮಾದಿ ಬಯಕೆಗಳ ಜಲದಲ್ಲಿ ಮಿಂದುಂಡು ಅಂಜದೆ ಅಳುಕದೆ ನಾಚದೆ ಬದುಕುವವರು ಭಂಡಯೋಗಿಗಳು.
ಪದಪ್ರಯೋಗಾರ್ಥ:
ಒಂದು-ಮೂರು-ಐದು-ಒಂಬತ್ತು-ಹತ್ತು. ಇವು ಅಲ್ಲಮನು ವಚನ ರಚನೆಯಲ್ಲಿ ಅಳವಡಿಸಿಕೊಂಡಿರುವ ಸಂಖ್ಯೆಗಳು. ಅಲ್ಲಮನು ಸಂಖ್ಯೆಗಳನ್ನು ಬಳಸಿ ಆ ಸಂಖ್ಯೆಗಳ ಮೂಲಕ ಆಧ್ಯಾತ್ಮಿಕ ವಿಚಾರ ಮಂಡನೆ ಮಾಡಿದ ಹಲವಾರು ವಚನಗಳಿವೆ. ಆದ್ದರಿಂದ ಅಲ್ಲಮಪ್ರಭು ಸಂಖ್ಯಾಶಾಸ್ತ್ರ ನಿಪುಣನಾಗಿದ್ದಿರಬಹುದು ಎಂಬುದಕ್ಕೆ ಆಧಾರ ಸಿಗುತ್ತದೆ. ಸಂಖ್ಯಾಶಾಸ್ತ್ರವು ಪ್ರಾಚೀನ ವಿಜ್ಞಾನವಾಗಿದ್ದು, ವಿಷಯವನ್ನು ಪ್ರತಿಪಾದಿಸಲು ಮತ್ತು ಜ್ಯೋತಿಷ್ಯ ಭವಿಷ್ಯ ನುಡಿಯಲು ಸಂಖ್ಯೆಗಳು ಮತ್ತು ಅವುಗಳ ಶಕ್ತಿಯನ್ನು ಬಳಸುವ ಅಭ್ಯಾಸವಾಗಿ ನಡೆದು ಬಂದಿದೆ. ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಸಂಖ್ಯೆಯು ವ್ಯಕ್ತಿಯ ವ್ಯಕ್ತಿತ್ವದ ಲಕ್ಷಣಗಳು ಮತ್ತು ಘಟನೆಗಳ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿರುತ್ತದೆ ಎನ್ನಲಾಗಿದೆ. ಕನ್ನಡ ಕವಿಗಳಲ್ಲಿ ಬೇಂದ್ರೆಯವರು ಸಂಖ್ಯಾಶಾಸ್ತ್ರ ನಿಪುಣನಾಗಿದ್ದರು. “ಶಬ್ದ ಮೋಸ ಮಾಡ್ತಾವ, ಆದರೆ ಸಂಖ್ಯಾ ಮೋಸಾ ಮಾಡೂದಿಲ್ಲ. ಸಂಖ್ಯಾ ಯಾವಾಗಲೂ ನಿಖರವಾಗಿರುತ್ತದೆ ಅಲ್ಲದೆ, ಎಲ್ಲರಿಗೂ ಒಂದೇ ರೀತಿಯಲ್ಲಿರುತ್ತದೆ. ಎರಡು ಅಂದರೆ ಅದು ಎರಡೇ. ಮೂರಾಗೋಕೆ ಸಾಧ್ಯವಿಲ್ಲ” ಎನ್ನುತ್ತಿದ್ದರು. ಬೇಂದ್ರೆಯವರು ಸಂಖ್ಯೆಗಳನ್ನು ಆಧರಿಸಿ ಬರೆದ ಕೆಲವು ಕವಿತೆಗಳಿವೆ. ಅಲ್ಲಮನ ವಚನಗಳಲ್ಲಿ ಬರುವ ಸಂಖ್ಯಾಧಾರಿತ ಪದಪ್ರಯೋಗಗಳು ಅನನ್ಯವಾದವು ಮತ್ತು ಅಧ್ಯಯನ ಯೋಗ್ಯವಾದವು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




