ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ವಿಳಾಸ
ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಲಿಂಗಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಜಂಗಮಸ್ವಾಯತವೆನಗೆ.
ಆಯಿತ್ತು ಬಸವಾ ನಿನ್ನಿಂದ ಪ್ರಸಾದಸ್ವಾಯತವೆನಗೆ.
ಇಂತೀ ಚತುರ್ವಿಧ ಸ್ವಾಯತವನು
ಆಗು ಮಾಡಿದೆಯಾಗಿ
ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.
ವಚನಾರ್ಥ:
ಸ್ವಾಯತ ಅಂದರೆ ಧ್ಯಾನಿಸುವುದು, ಸಹವಾಸಿಸುವುದು, ಸಹಯೋಗದಲ್ಲಿರುವುದು ಎಂದರ್ಥ. ಗುರು, ಲಿಂಗ, ಜಂಗಮ, ಪ್ರಸಾದ ಎಂಬ ನಾಲ್ಕು ಶರಣ ಧರ್ಮದ ಪರಿಕಲ್ಪನೆಗಳು. ಈ ನಾಲ್ಕು ಅಂದರೆ ಚತುರ್ವಿಧ ಪರಿಕಲ್ಪನೆಗಳನ್ನು ಧ್ಯಾನಿಸುವಲ್ಲಿ ಮತ್ತು ಅವುಗಳೊಂದಿಗೆ ಸಹಯೋಗಿಸುವಲ್ಲಿ ಒಬ್ಬ ಅನುಭವಿಯ ಮಾರ್ಗದರ್ಶನ ಬೇಕಾಗುತ್ತದೆ. ಇಂತಹ ಮಾರ್ಗದರ್ಶನವನ್ನು ನೀಡಬಲ್ಲ ಸಾಮರ್ಥ್ಯ ಇರುವ ವ್ಯಕ್ತಿ ಬಸವಣ್ಣ ಎಂದು ಅಲ್ಲಮನ ಅನಿಸಿಕೆ. ಗುರು, ಲಿಂಗ, ಜಂಗಮ, ಪ್ರಸಾದಗಳ ಸ್ವಾಯತವು ತನಗೆ ಬಸವಣ್ಣನಿಂದ ಆಯಿತು ಎಂದು ಅಲ್ಲಮಪ್ರಭು ಬಸವಣ್ಣನನ್ನು ಹಾಡಿ ಹೊಗಳುವ ವಚನವಿದು. ಹೊಗಳಿಕೆಯ ಮಟ್ಟ ತಾರಕಕ್ಕೇರಿ ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ ಎಂದು ವಚನ ಕೊನೆಯಾಗುತ್ತದೆ. ದೇವರು ಎಲ್ಲಾ ಸದ್ಭಕ್ತರ ಮನೆಯಲ್ಲಿ ಅವರೊಂದಿಗೆ ನೆಲೆಸಿರುತ್ತಾನೆ ಎಂಬ ಸಾಮಾನ್ಯ ತಿಳಿವಳಿಕೆಯನ್ನು ಆಕರ್ಷಕವಾಗಿ ವಿಳಾಸ ಎಂಬ ಪದ ಬಳಸಿ ಹೇಳಿರುವುದು ವಚನ ವಿಶೇಷ. ಇದು ಅಲ್ಲಮ ಬಸವಣ್ಣರ ಮಧ್ಯೆ ಇದ್ದ ಪರಸ್ಪರ ಗೌರವವನ್ನು, ಅನ್ಯೋನ್ಯತೆಯನ್ನು ಮತ್ತು ಬಸವಣ್ಣನಲ್ಲಿ ಇದ್ದ ಮೇರು ವ್ಯಕ್ತಿತ್ವವನ್ನು ಅಲ್ಲಮ ಗುರುತಿಸಿದ ಪರಿಯನ್ನು ಪರಿಚಯಿಸುತ್ತದೆ.
ಪದ ಪ್ರಯೋಗಾರ್ಥ:
ವಿಳಾಸ. ಇದು ಒಬ್ಬ ವ್ಯಕ್ತಿಯು ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳಸೂಚಿ. ಹೊಸದಾಗಿ ಪರಿಚಯವಾದವರು ಅವರ ವಿಳಾಸಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸ್ನೇಹ ಸಂಬಂಧವನ್ನು ವೃದ್ಧಿಗೊಳಿಸಿಕೊಳ್ಳುವ ರೂಢಿ ನಡೆದುಬಂದಿದೆ. ವಿಳಾಸದ ನಿಖರತೆಯನ್ನು ಕಾಪಾಡುವ ಉದ್ದೇಶದಿಂದ ನಮ್ಮ ದೇಶದಲ್ಲಿ 1972ರಲ್ಲಿ ಮೊದಲ ಬಾರಿಗೆ ಪಿನ್ ಕೋಡ್ ವ್ಯವಸ್ಥೆ ಬಂತು. ಹೀಗೆ ಯಾರು ಯಾವ ವಿಳಾಸದಲ್ಲಿ ಇರುತ್ತಾರೆ ಎಂಬ ಪ್ರಜ್ಞೆ ಶರಣರಿಗೆ ಹನ್ನೆರಡನೇ ಶತಮಾನದಲ್ಲೇ ಇತ್ತು ಎಂದು ತೋರುತ್ತದೆ. ಹಾಗಾಗಿ ವಿಳಾಸ ಎಂಬ ಪದ ಅಲ್ಲಮನ ವಚನದಲ್ಲಿ ಪ್ರಯೋಗವಾಗಿದೆ. ಗುಹೇಶ್ವರಲಿಂಗಕ್ಕೆ ವಿಳಾಸವಾದೆಯಲ್ಲಾ ಸಂಗನಬಸವಣ್ಣಾ ಎಂದು ಅಲ್ಲಮ ಅಭಿಮಾನದಿಂದ ಹೇಳುವಲ್ಲಿ ಒಂದು ಅಚ್ಚರಿಯ ಅತಿರೇಕವಿದೆ. ಅಲ್ಲಮನ ಆರಾಧ್ಯ ದೈವ ಗುಹೇಶ್ವರ ಎಲ್ಲಿ ಇರುತ್ತಾನೆ ಎಂದರೆ ಕೇರ್ ಆಫ್ ಬಸವಣ್ಣ ಎಂಬ ವಿಳಾಸದಲ್ಲಿ! ಅಂದರೆ ಗುಹೇಶ್ವರ ಈ ಭೂಮಿಗೆ ಬಂದು ತಂಗಲು ಬಳಸುವುದು ಬಸವಣ್ಣನ ವಿಳಾಸವನ್ನು! ಇಂದಿನ ಆಧುನಿಕ ಆಡುಭಾಷೆಯಲ್ಲಿ ತಮಾಷೆಗಾಗಿ ಹೇಳುವುದಾದರೆ ಗುಹೇಶ್ವರನಿಗೆ ನೀನಿರುವ ಲೈವ್ ಲೊಕೇಶನ್ ಕೊಡು ಎಂದರೆ ಅದು ಬಸವಣ್ಣನಿರುವ ಜಾಗಕ್ಕೆ ನಮ್ಮನ್ನು ಕರೆದೊಯುತ್ತದೆ. ಅದು ಗುಹೇಶ್ವರನಿರುವ ವಿಳಾಸ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




