ಸಮಾಜಮುಖಿಯ ಸ್ವಗತಗಳು l ಅಮೆರಿಕ, ನೊಬೆಲ್ ಪ್ರಶಸ್ತಿ ಹಾಗೂ ಬೆರೆಯಲಾರದ ಅನಿಲಗಳು…

Date:

ಕಳೆದ ಸುಮಾರು 30-35 ವರ್ಷಗಳಲ್ಲಿ ನಮ್ಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು, ದುಡಿವಾನ, ಕಸಬುದಾರ ಯುವಕ – ಯುವತಿಯರು ತಮ್ಮ ಹುಬ್ಬಿನ ಬೆವರನ್ನು ಸಾಹುಕಾರರ ಅಮುಖ್ಯ ವಾದ ಚಾಕರಿ ಮಾಡುವುದರಲ್ಲಿ ಹರಿಸಿಬಿಟ್ಟಿದ್ದಾರೆ. ಬುದ್ಧಿವಂತ ಹುಡುಗರಾದರೆ ಇಂಜಿನಿಯರ್, ಹುಡುಗಿಯರಾದರೆ ಮೆಡಿಕಲ್, ಅಂತ ನಮ್ಮ ಸಮಾಜದಲ್ಲಿ ಅಲಿಖಿತ ನಿಯಮವೇ ಇದ್ದಂತೆ ಇದೆ.

ಅಮೆರಿಕ ಪ್ರವಾಸ ಮಾಡಿದವರು ತಾವು ಮರಳಿ ಬಂದು ಹತ್ತು ವರ್ಷಗಳವರೆಗೂ ‘ನಾನೂ ಅಮೆರಿಕೆಗೆ ಹೋಗಿದ್ದೆ’ ಎನ್ನುವ ಕತೆ ಹೇಳುತ್ತಾ ಇರುತ್ತಾರೆ, ಎನ್ನುವ ಜೋಕು ಇದೆ. ನಾನು ಅಲ್ಲಿಗೆ ಹೋಗಿ ಬಂದು 20 ವರ್ಷ ಆಗುತ್ತಲಿದೆ. ಆದರೂ ನಾನು ಹೋಗಿ ಬಂದ ಕತೆಗಳನ್ನು ಹೇಳುತ್ತಲೇ ಇದ್ದೇನೆ. ಇದೂ ಒಂದು ಅಂತಹ ಕತೆಯೇ.

ರೋಟರಿ ಫೌಂಡೇಷನ್ ಸಂಸ್ಥೆಯ ಜಿ ಎಸ್ ಈ ಅಂಡ್ ಎಫ್ ಈ ಫೆಲೋಷಿಪ್ -2006 ಪಡೆದು ಫ್ಲೋರಿಡಾ ಹಾಗೂ ಅಟ್ಲಾಂಟಾಕ್ಕೆ ಹೋದ ಐವರ ತಂಡದಲ್ಲಿ ನಾನು ಇದ್ದೆ. ನಾವು ಅಲ್ಲಿಗೆ ಹೋಗುವ ಮುಂಚೆ ರೋಟರಿ ಸಂಸ್ಥೆಯ ಹಿರಿಯರು, ಹಿಂದೆ ಈ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ನಮಗೆ ತರಬೇತಿ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಗ ಬಂದ ಸಂಪನ್ಮೂಲ ವ್ಯಕ್ತಿಗಳು ನಮಗೆ ಅನೇಕ ವಿಷಯ ತಿಳಿಸಿದರು. “ನಾವು ಅಮೆರಿಕದಲ್ಲಿ ಇಳಿದ ಕ್ಷಣದಿಂದ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂತಲೂ, ಸಾಮಾನ್ಯ ಅಮೆರಿಕನ್ನರು ಕೇಳುವ ಪ್ರಶ್ನೆಗಳು ಬೇರೆ, ಸ್ವಲ್ಪ ಓದಿಕೊಂಡವರು, ಸಾಮಾನ್ಯ ಜ್ಞಾನ ಇದ್ದವರು, ರಾಜಕೀಯ – ಸಾಮಾಜಿಕ ಜ್ಞಾನ ಇದ್ದವರು ಕೇಳುವ ಪ್ರಶ್ನೆಗಳು ಬೇರೆ ಎಂತಲೂ, ಇವೆಲ್ಲವಕ್ಕೂ ಸರಿ ಉತ್ತರಗಳನ್ನು ತಯಾರು ಮಾಡಿಕೊಂಡು ಇಟ್ಟುಕೊಂಡಿರಬೇಕು”, ಅಂತ ಹೇಳಿದರು. ನಮ್ಮ ದೇಶದ ಬಗ್ಗೆ ವಿದೇಶಿಯರು ಏನಾದರೂ ಪ್ರಶ್ನೆ ಕೇಳಿದಾಗ ನಾವು ಸಮರ್ಪಕ ಉತ್ತರ ಇರಲಾರದೇ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಇರಬಾರದು ಅನ್ನುವುದು ಅವರ ಕಾಳಜಿ.

ಅವರ ಪ್ರಕಾರ, ಇಂಡಿಯಾದವರು ಕಂಡ ತಕ್ಷಣ ಅಮೆರಿಕದವರು ಪಟಪಟನೆ ಕೇಳುವ ಪ್ರಶ್ನೆಗಳು ಕೆಲವು

1. ನೀವು ಎಲ್ಲರೂ ನಿಮ್ಮ ಹಿರಿಯರು ನಿಶ್ಚಯ ಮಾಡಿದ ಹುಡುಗಿಯರನ್ನು ಮದುವೆ ಆಗುತ್ತೀರಂತೆ, ಹೌದೇ? ಅಪರಿಚಿತರನ್ನು ಮದುವೆ ಆಗುವ ಈ ವ್ಯವಸ್ಥೆ ಅನೂಚಾನವಾಗಿ ಹೇಗೆ ನಡೆಯುತ್ತಿದೆ? ಹಿರಿಯರು ಹೊಂದಿಸಿದ ಸಂಬಂಧವನ್ನು ಕಿರಿಯರು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ, ಇತ್ಯಾದಿ, ಇತ್ಯಾದಿ.

2. ಭಾರತದಲ್ಲಿ ಅಷ್ಟೊಂದು ಮಿಲಿಯನ್ ಭಾಷೆಗಳು ಇವೆಯಂತಲ್ಲಾ? ನೀವು ಒಬ್ಬರಿಗೊಬ್ಬರು ಹೇಗೆ ಮಾತು ಆಡುತ್ತೀರಿ? ಇತ್ಯಾದಿ, ಇತ್ಯಾದಿ. (ಅಮೆರಿಕನ್ನರು ಮಿಲಿಯನ್ ಅನ್ನುವ ಪದ ಬಳಸಿದಾಗಲೆಲ್ಲ ಅದರ ಅರ್ಥ ಹತ್ತು ಲಕ್ಷ ಅಂತ ಅಲ್ಲ. ಅತಿ ಹೆಚ್ಚು ಅಂತ ಹೇಳಬೇಕಾದಾಗಲೆಲ್ಲಾ ಅವರು ಮಿಲಿಯನ್ ಅನ್ನುವ ಪದ ಬಳಸುತ್ತಾರೆ. ನಾವು ಎಣಿಸುವುದಕ್ಕೆ ಅಸಾಧ್ಯ ಅನ್ನುವ ಸಂಖ್ಯೆಗೆ ಲಕ್ಷಾಂತರ, ಕೋಟ್ಯಂತರ, ಅಂತ ಹೇಳುತ್ತೇವೆಲ್ಲಾ, ಹಂಗೆ).

3. ನಿಮ್ಮ ರಸ್ತೆಗಳ ತುಂಬ ದನಕರುಗಳು ಓಡಾಡುತ್ತಾ ಇರುತ್ತವಲ್ಲವಂತೆ? ಯಾಕೆ? ಅವರ ಮಾಲೀಕರು ಯಾರು? ಅವನ್ನು ಅವರು ಯಾಕೆ ಮನೆಗೆ ಕರೆದುಕೊಂಡು ಹೋಗೋದಿಲ್ಲ, ಇತ್ಯಾದಿ, ಇತ್ಯಾದಿ.

ಇನ್ನು ಕೆಲವೇ ಕೆಲವರು, ತಮ್ಮ ದೇಶದ ಗಡಿಗಳ ಆಚೆ ವಿಚಾರ ಮಾಡುವರು, ಭಾರತದ ಬಗ್ಗೆ ಸ್ವಲ್ಪ ಆದರೂ ಕಲ್ಪನೆ ಇದ್ದವರು ಕೇಳುವ ಪ್ರಶ್ನೆಗಳು ಬೇರೆ. ತಮ್ಮಂತೆ ಇರಲಾರದ ಇತರರ ಬಗ್ಗೆ ಇರುವ ಅವರ ಕುತೂಹಲ ದಿಂದ ಹುಟ್ಟಿಕೊಂಡ ಈ ಪ್ರಶ್ನೆಗಳು ಬಹಳ ವಿಶೇಷವಾದವು.

1. ಭಾರತದಲ್ಲಿ ಅಷ್ಟೊಂದು ಬಡತನ ಇದೆ, ಅಷ್ಟೊಂದು ಅನಕ್ಷರತೆ ಇದೆ, ಹೀಗಿದ್ದಾಗಲೂ ಕೂಡ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಡೆಯುತ್ತಾ ಇದೆಯಲ್ಲವಾ ಹೇಗೆ?

2. ಬ್ರಿಟಿಷರ ವಿರುದ್ಧ ನೀವೆಲ್ಲ ಒಂದೂವರೆ ಶತಮಾನಗಳವರೆಗೆ ನಡೆದ ಅಹಿಂಸಾತ್ಮಕ ಹೋರಾಟ ನಡೆಸಿದ್ದು ಹೇಗೆ?

3. ಭಾರತದಲ್ಲಿ ಪ್ರತ್ಯೇಕ ಉಪಖಂಡ ಆಗುವಷ್ಟು ವಿಭಿನ್ನತೆ ಇದೆ. ಇದೆಲ್ಲದರ ಹೊರತಾಗಿಯೂ ಅಲ್ಲಿ ಅನೇಕ ಸಂಸ್ಕೃತಿ- ಉಪ ಸಂಸ್ಕೃತಿಗಳು ಇವೆ, ಧರ್ಮ, ಭಾಷೆ- ಪ್ರದೇಶಗಳ ಸಹ ಬಾಳ್ವೆ ಇರುವುದು ಹೇಗೆ?, ಇತ್ಯಾದಿ, ಇತ್ಯಾದಿ.

ಇವೆಲ್ಲ ಅವರು ಅತಿ ಹೆಚ್ಚು ಬಾರಿ ಕೇಳುವ ಪ್ರಶ್ನೆಗಳು. ಅವಕ್ಕೆ ನೀವು ಸಮಾಧಾನದಿಂದ ಉತ್ತರ ಕೊಡಬೇಕು. ಯಾವುದೋ ಒಂದು ಪಕ್ಷ, ಜಾತಿ, ಧರ್ಮ, ಭಾಷೆಯವರನ್ನ ದೂರಬಾರದು, ಸರಕಾರಕ್ಕೆ ಮುಜುಗರ ಆಗದಂತೆ, ಉತ್ತರ ನೀಡಬೇಕು, ಇತ್ಯಾದಿ ಇತ್ಯಾದಿ, ಅವರು ಹೇಳಿಕೊಟ್ಟರು.

ಅವರು ಹೇಳಿದ್ದು ನಿಜವಾಯಿತು. ನಾವು ತಲಹಾಸಿ ವಿಮಾನ ನಿಲ್ದಾಣ ತಲುಪಿದ ತಕ್ಷಣದಿಂದಲೇ ಪ್ರಶ್ನೆಗಳ ಸುರಿಮಳೆ ಆರಂಭ ವಾಗಿದ್ದು, ತಿರುಗಿ ನಾವು ವಾಪಸ್ ಬರುವ ವಿಮಾನ ಹತ್ತುವವರೆಗೂ ನಿಲ್ಲಲಿಲ್ಲ. ಹೋಗಲಿ ಬಿಡಿ. ನಾನು ಹೇಳಬೇಕಾಗಿರುವುದು ಅದಲ್ಲ.

ನಮ್ಮ ಮೇಲೆ ಸಾವಿರ ಕೂರಂಬುಗಳಂತೆ ಪ್ರಶ್ನೆಗಳನ್ನು ಬೀರಿದ್ದ ಆ ಬಿಳಿಯರಿಗೆ ಕೇಳಲೇಬೇಕಾದ ಪ್ರಶ್ನೆ ಒಂದು ನನ್ನ ಮನಸ್ಸಿನಲ್ಲಿ ಇತ್ತು.

ಆ ಪ್ರಶ್ನೆ ಇದು – “ನಮಗೆ ಅಮೆರಿಕದ ಜನ ಜೀವನದ ಬಗ್ಗೆ ಇದ್ದ ಕಲ್ಪನೆಗಳು ಬಂದಿದ್ದು ನಾವು ಸಣ್ಣವರಿದ್ದಾಗ ನೋಡಿದ ಕೆಲ ಅಮೆರಿಕದ ಸಿನಿಮಾಗಳಿಂದಾಗಿ. ಜನಪ್ರಿಯ ಸಿನಿಮಾಗಳಾದ ‘ಗುಡ್ ಬ್ಯಾಡ್ ಅಗ್ಲಿ’, ಮೇಕೆನ್ನಾಸ್ ಗೋಲ್ಡ್, ಫೈವ್ ಮೆನ್ ಆರ್ಮಿ, ಇತ್ಯಾದಿಗಳನ್ನು ನೋಡಿದ್ದ ನಾವು, ಅಮೆರಿಕ ಎಂದರೆ ಹರಿದ ಜೀನ್ಸ್ ಹಾಕಿಕೊಂಡು, ಕುದುರೆ ಏರಿ ದನ ಕಾಯುವ, ಬ್ಯಾಂಕ್ ಲೂಟಿಕೋರರನ್ನು ಬಾರ್‌ನಲ್ಲಿ ಬೆಂಡೆತ್ತುವ ಕೌ ಬಾಯ್‌ಗಳ ದೇಶ ಅಂತ ತಿಳಿದುಕೊಂಡಿದ್ದೆವು. ಕೇವಲ 50-60 ವರ್ಷಗಳಲ್ಲಿ ಹಾಗಿದ್ದ ದೇಶ ಈಗ ಜಗತ್ತಿನ ಅತಿ ಶಕ್ತಿಶಾಲಿ ದೇಶ ಆಗಿದ್ದು ಹೇಗೆ?”

ನಾನು ಫ್ಲೊರಿಡದಲ್ಲಿ ಇಳಿದ ತಕ್ಷಣ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ನನ್ನನ್ನು ಅತಿ ಪ್ರೀತಿಯಿಂದ ನೋಡಿಕೊಂಡವರು.

ನನ್ನ ಮೊದಲ ಆತಿಥೇಯರಾದ, ಅಂದಿನ ಕಾಲಕ್ಕೆ ಸಿಟಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಸ್ಯಾಮ್ ಫೋರ್ಮನ್. ನಾನು ಅವರಿಗೆ ಈ ಪ್ರಶ್ನೆ ಕೇಳಿದೆ. ನಾನು ಕಾರ್ಪೊರೇಟ್ ಕ್ಷೇತ್ರದಲ್ಲಿ ಇರುವವನು. ನಿಮ್ಮ ಪ್ರಶ್ನೆಗೆ ಯಾರಾದರೂ ಆಕಡೆಮಿಕ್‌ ಕ್ಷೇತ್ರದವರು ಉತ್ತರ ಕೊಡಬಲ್ಲರು, ಅಂತ ಅವರು ಹೇಳಿದರು. ಆ ನಂತರ ನನ್ನನ್ನು ಭೇಟಿ ಆಗುವ ದುರದೃಷ್ಟ ಇದ್ದ ಎಲ್ಲರನ್ನೂ, ಆಕಡೆಮಿಕ್ ಕ್ಷೇತ್ರದ ದಿಗ್ಗಜರೂ ಸೇರಿದಂತೆ ನಾನು ಈ ಪ್ರಶ್ನೆ ಕೇಳಿದೆ. ಕೆಲವರಿಗಂತೂ ನನ್ನ ಪ್ರಶ್ನೆ ಅರ್ಥ ಆಗಲಿಲ್ಲ. “ವಾಟ್ ಡು ಯು ಮೀನ್” ಅಂತ ಕೇಳಿದರು. ಕೆಲವರಂತೂ ತಮಗೆ ಸರಿಯಾಗಿ ಹೊಟ್ಟೆಗೆ ತಿನ್ನಲು ಇಲ್ಲ, ಈ ನನ್ ಮಕ್ಕಳು ನಮ್ಮ ಬಗ್ಗೆ ಪ್ರಶ್ನೆ ಮಾಡ್ತಾರೆ, ಅನ್ನುವಂತೆ ತುಂಬಾ ಮೀನ್ ಆಗಿ ನೋಡಿದರು.

American University Washington DC

ಕೊನೆಗೂ ನನಗೆ ಸ್ವಲ್ಪ ಸಮಾಧಾನಕರ ಉತ್ತರ ಕೊಟ್ಟವರು ಭಾರತೀಯ ಮೂಲದ ರಾಜಕೀಯ ಶಾಸ್ತ್ರದ ವಿದ್ವಾಂಸರಾದ, ಪ್ರೊಫೆಸರ್ ರಾಮ್ ಪಾಲ್. ಅವರ ಮನೆಯಲ್ಲಿ ಊಟದ ಔತಣ ಇತ್ತು. ಅದರ ನಂತರ ತುಂಬ ಹೊತ್ತು ಮಾತಾಡಿದೆವು. ಅವರ ಮಾತಿನ ತಿರುಳು ಇಷ್ಟೇ – ಕಳೆದ ಶತಮಾನದಲ್ಲಿ ಇಲ್ಲಿ ಅಧಿಕಾರಕ್ಕೆ ಬಂದ ಸರಕಾರ ಗಳು ತುಂಬ ಜನಪರ ಕೆಲಸ ಮಾಡಿವೆ. ಇಲ್ಲಿ 1930ರ ಆರ್ಥಿಕ ಮಹಾ ಕುಸಿತದ ನಂತರ ಅಧ್ಯಕ್ಷರಾದ ರೂಸವೆಲ್ಟ್ ಹಾಗೂ ಇತರರು ಕೂಲಿಗಾಗಿ ಕಾಳು, ಸರ್ವರಿಗೂ ಶಿಕ್ಷಣ, ಆರೋಗ್ಯ ವಿಮೆ, ನಿರುದ್ಯೋಗ ಭತ್ತೆ, ಊಟದ ಚೀಟಿ, ಇತ್ಯಾದಿ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳನ್ನು ಕೈಗೊಂಡರು, ಇದರಿಂದ ಅತೀವ ಬಡತನ ಹಾಗೂ ಹಸಿವಿನಿಂದ ಸಾವು, ಇತ್ಯಾದಿ ಸಮಸ್ಯೆಗಳು ದೂರವಾದವು. ಆ ನಂತರದ ಐತಿಹಾಸಿಕ ಆರ್ಥಿಕ ಬೆಳವಣಿಗೆ ಕಾರಣ ಅತ್ಯಂತ ಆಶ್ಚರ್ಯಕರ ಹಾಗೂ ಕುತೂಹಲಕಾರಿ ಆಗಿದ್ದು, ಅದು ಯಾವುದು ಗೊತ್ತೇ? ಅದು ಇಲ್ಲಿನ ಉನ್ನತ ಶಿಕ್ಷಣ ನೀತಿ ಹಾಗೂ ಅದರ ಅಂಗವಾಗಿ ರೂಪುಗೊಂಡಿರುವ ವಿಶ್ವ ವಿದ್ಯಾಲಯಗಳ ವ್ಯವಸ್ಥೆ” ಅಂತ ಅಂದ್ರು.

ನಮ್ಮ ದೇಶದ ವಿಶ್ವವಿದ್ಯಾಲಯಗಳ ಬಗ್ಗೆ ವಿಭಿನ್ನವೇ ಆದ ಕಲ್ಪನೆ ಹೊಂದಿದ್ದ ನಮಗೆ ಆಶ್ಚರ್ಯವಾಯಿತು.`ಅದು ಹೇಗೆ ಸಾಧ್ಯ ಸಾ’ ಅಂತ ನಾವೆಲ್ಲ ಪಾಪಿಗಳು ಕಣ್ಣಾಲಿಯ ಪಾಪೆಗಳನ್ನು ಅಗಲ ಮಾಡಿ ಕೇಳಿದೆವು. “ನಾಳೆ – ನಾಡಿದ್ದು ಒಂದೆರಡು ವಿವಿಗಳಿಗೆ ಹೋಗೋಣ, ಅಲ್ಲಿ ವಿವಿಧ ವಿಭಾಗಗಳನ್ನು ತೋರಿಸುತ್ತೇನೆ, ಅಲ್ಲಿನ ಪ್ರೊಫೆಸರ್‌ಗಳನ್ನು ಮಾತಾಡಿಸಿ, ನಿಮಗೇ ಗೊತ್ತಾಗುತ್ತದೆ”, ಅಂತ ಅಂದ್ರು. ಆ ನಂತರದ ದಿನಗಳಲ್ಲಿ ನಾವು ಅಮೆರಿಕದ ದಕ್ಷಿಣ ರಾಜ್ಯಗಳಲ್ಲಿನ ಕೆಲವು ವಿವಿಗಳಿಗೆ ಭೇಟಿ ನೀಡಿದೆವು, ಅಲ್ಲಿನ ಶಿಕ್ಷಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆವು, ನಮಗೆ ಏನೂ ತಿಳಿಯದೇ ಇದ್ದರೂ, ಕೆಲವು ಆಧುನಿಕ ಪ್ರಯೋಗಾಲಯ ನೋಡಿದೆವು. ಎಲ್ಲ ಕ್ಕಿಂತ ಮುಖ್ಯವಾಗಿ ಕೇವಲ ತನ್ನ 15 ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಫ್ಲೋರಿಡಾ ಎ ಅಂಡ್ ಎಂ ವಿವಿ ಒಂದು ಪ್ರಿಂಟಿಂಗ್ ಪ್ರೆಸ್, ಒಂದು ರೇಡಿಯೊ ಸ್ಟೇಷನ್ ಸ್ಥಾಪಿಸಿದ್ದನ್ನು ನೋಡಿ ಬೆರಗಾದೆವು. ಅಲ್ಲಿನ ಪತ್ರಿಕೆ ಹಾಗೂ ರೇಡಿಯೊ ಸ್ಟೇಷನ್ ಅನ್ನು ಅಲ್ಲಿನ ವಿದ್ಯಾರ್ಥಿಗಳೇ ನಡೆಸುತ್ತಿದ್ದರು. ಅದು ಅಶ್ವೇತ ವಿದ್ಯಾರ್ಥಿಗಳಿಗಾಗಿ ಮಿಸಲಾಗಿದ್ದ ಎಚ್‌ಬಿಸಿಯು ವಿವಿ. ಅಲ್ಲಿನ ನೂರಕ್ಕೆ ನೂರು ವಿದ್ಯಾರ್ಥಿಗಳು ಅಶ್ವೇತರು. ಹೆಚ್ಚು ಪಕ್ಷ ಶಿಕ್ಷಕರು ಸಹಿತ ಅಶ್ವೇತರು. ಈಗಿನ ಅಲ್ಲಿನ ಚಕ್ರಾಧಿಪತಿ ದೊಡ್ಡಣ್ಣ ಜಯಣ್ಣ ಟ್ರಂಪಣ್ಣವರ್ ಅವರು ತೀವ್ರವಾಗಿ ವಿರೋಧ ಮಾಡುತ್ತಿರುವ ಡಿ ಈ ಐ (ಒಳಗೊಳ್ಳುವಿಕೆ- ಸಮಾನ ಅವಕಾಶ) ನೀತಿಯ ಅಡಿಯಲ್ಲಿ ಸ್ಥಾಪಿತವಾದ ವಿವಿ ಅದು. ಅದಕ್ಕಾಗಿ ಅಲ್ಲಿನ ಸ್ಥಳೀಯ ಹಾಗೂ ಒಕ್ಕೂಟದ ಸರಕಾರ ಮಿಲಿಯನ್ ಡಾಲರ್ ಗಟ್ಟಲೆ ಖರ್ಚು ಮಾಡುತ್ತಿತ್ತು. “ಇದು ದುಂದುವೆಚ್ಚ ಅಲ್ಲ, ನಮ್ಮ ಮಾನವ ಸಂಪನ್ಮೂಲ ಅಭಿವೃದ್ಧಿಯ ಬಂಡವಾಳ,” ಅಂತ ಅಲ್ಲಿನ ಪ್ರೊಫೆಸರ್ ವ್ಯಾಲರಿ ವೈಟ್ ಹೇಳಿದರು. ರಾತ್ರಿ ಮಲಗಿದಾಗ ನನಗೆ ನಮ್ಮ ದೇಶದಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣ ಇರಲಾರದ, ಹಾಸ್ಟೆಲ್ ವಿದ್ಯಾರ್ಥಿಗಳ ಊಟಕ್ಕೆ ಹಣ ಹೊಂದಿಸಲಾಗದ, ವಿವಿಗಳನ್ನೂ, ಉತ್ತರ ಭಾರತದಲ್ಲಿ ವಿದ್ಯಾರ್ಥಿಗಳು ಬಾರದೇ ಕಾಲೇಜುಗಳನ್ನು ಕುಸ್ತಿ ಮೈದಾನಗಳನ್ನಾಗಿ ಮಾರ್ಪಡಿಸಿದ ಸುದ್ದಿಗಳು ನೆನಪಾಗಿ ಧಡಕ್ಕನೆ ಎದ್ದೆ. ಇನ್ನೆಲ್ಲಿ ನಿದ್ದೆ?

nobel 1 1760352891
ಜೋಲ್ ಮೊಕಿರ, ಫಿಲಿಪ್ ಅಗಹೀಯಾನ ಹಾಗೂ ಪೀಟರ್ ಹೊವಿಟ

ಈಗ ಹಳೆಯ ಕನ್ನಡ ಚಿತ್ರದ ಜಂಪ್ ಕಟ್ ತಂತ್ರದ ಮೊರೆ ಹೋಗೋಣ. ಈ ವರ್ಷ ಅಂದರೆ, 2025ರ ನೊಬೆಲ್ ಎಂದು ಕರೆಯಲಾಗುವ ಸ್ವರೇಜಿಸ್ ರಿಕ್ಸ್‌ ಬ್ಯಾಂಕ್ ಫ್ರೈಜ್‌, ಜೋಲ್ ಮೊಕಿರ, ಫಿಲಿಪ್ ಅಗಹೀಯಾನ ಹಾಗೂ ಪೀಟರ್ ಹೊವಿಟ ಎಂಬ ಮೂರು ಅರ್ಥಶಾಸ್ತ್ರಜ್ಞರಿಗೆ ಲಭಿಸಿದೆ. ಅವರ ಸಂಶೋಧನೆಯ ವಿಷಯ “ಸಂಶೋಧನೆ ಎಂದರೆ ಏನು?” ಎನ್ನುವುದು. ಅವರು ಅದಕ್ಕೊಂದು ಸಿದ್ಧಾಂತ ಮಂಡಿಸಿದ್ದಾರೆ. ಅವರ ಪ್ರಕಾರ ಸೃಜನಶೀಲ ವಿನಾಶ (ಕ್ರಿಯೇಟಿವ್ ಡಿಸಟ್ರಕ್ಷನ್ ) ಎನ್ನುವುದೇ ಸಂಶೋಧನೆಯ ಮೂಲಮಂತ್ರ ಆಗಿರಬೇಕು. ಇದನ್ನು ಎಲ್ಲರಿಗಿಂತ ಮೊದಲು ಪ್ರತಿಪಾದಿಸಿದವನು ಆಸ್ಟ್ರಿಯಾ ದೇಶದ ಅರ್ಥ ಶಾಸ್ತ್ರಜ್ಞ ಜೋಸೆಫ್ ಶುಂಪೇಟರ್. ಅವನ ಪ್ರಕಾರ ಹೊಸ ತಂತ್ರಜ್ಞಾನ ಜನಬಳಕೆಯಲ್ಲಿ ಬಂದು, ಹೊಸ ಸಾಧನಗಳನ್ನು ಸೃಷ್ಟಿಸಿ, ಜನರ ಜೀವನ ಸುಧಾರಣೆ ಆಗಬೇಕು ಎಂದರೆ, ಹಳೆಯ ತಂತ್ರಜ್ಞಾನ, ಕಂಪನಿಗಳು ಹಾಗೂ ಹಳೆಯ ಅರ್ಥವ್ಯವಸ್ಥೆ ನಾಶ ಆಗಲೇಬೇಕು. ಹೊಸ ಕೌಶಲಗಳನ್ನು ಕಲಿತುಕೊಳ್ಳದೇ ಹೋದವರು ನಿರುದ್ಯೋಗ ಎದುರಿಸಬೇಕಾಗುತ್ತದೆ, ಕಂಪನಿಗಳು ಮುಚ್ಚಿ ಹೋಗಿ ಬಂಡವಾಳ ಹಾಕಿದವರು ನಷ್ಟ ಅನುಭವಿಸಬೇಕಾಗುತ್ತದೆ, ಹಳೆ ಕಾಲದ ವಿಜ್ಞಾನಿಗಳು, ತಂತ್ರಜ್ಞರು ಹೊಸ ತಂತ್ರಜ್ಞಾನ ಕಲಿತು ಕೊಳ್ಳ ಬೇಕಾಗುತ್ತದೆ. ಇಲ್ಲದಿದ್ದರೆ ಅವರಿಗೆ ಬೇರೆ ದಾರಿ ಇಲ್ಲ. ಈ ಸಿದ್ಧಾಂತದ ತಥ್ಯ ಏನು ಎಂದರೆ ಅನ್ವೇಷಣೆ, ಸಂಶೋಧನೆ, ನಾವೀನ್ಯತೆ ಇತ್ಯಾದಿಗಳೇ ಆರ್ಥಿಕ ಅಭಿವೃದ್ಧಿಯ ಮೂಲ ಮಂತ್ರ. ಆರ್ಥಿಕ ಬೆಳವಣಿಗೆ ಆಗಬೇಕು, ಅದರಿಂದ ಜನರ ಜೀವನ ಸುಧಾರಣೆ ಆಗಬೇಕು ಎಂದರೆ ಅದು ಸಂಶೋಧನೆ ಹಾಗೂ ನವೀನ ತಂತ್ರಜ್ಞಾನದ ಅನ್ವೇಷಣೆ ಗಳಿಂದಲೇ ಆಗಬೇಕು ಅಂತ.

ಆಧುನಿಕ ಕಾಲದಲ್ಲಿ ಬೇರೆ ಬೇರೆ ದೇಶಗಳಲ್ಲಿ ಅನೇಕ ವಿಜ್ಞಾನಿಗಳು ಇದ್ದರು, ಅವರು ಅನೇಕ ರೀತಿಯ ಸಂಶೋಧನೆ ಮಾಡಿದರು. ಆದರೂ ಮೊಳದ ಕೈಗಾರಿಕಾ ಕ್ರಾಂತಿ ಆರಂಭ ವಾದದ್ದು ಇಂಗ್ಲೆಂಡ್ ನಲ್ಲಿ ಯಾಕೆ? ಆ ಔದ್ಯೋಗಿಕ ಕ್ರಾಂತಿ ಅನೇಕ ಉದ್ಯೋಗ ಗಳನ್ನು ಆರಂಭಿಸಿತು ಹಾಗೂ ಅಸಂಖ್ಯ ಜನರಿಗೆ ಉದ್ಯೋಗ ನೀಡಿತು. ಬರೀ ಇಂಗ್ಲೆಂಡ್ ಅಲ್ಲದೇ, ಇಡೀ ಯುರೋಪಿನ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಆದರೆ ಕೆಲ ಶತಮಾನಗಳ ನಂತರ ಅದು ಮುಂದುವರೆಯಲಿಲ್ಲ. ಯಾಕೆಂದರೆ ಅಲ್ಲಿ ನಿಯಮಿತವಾಗಿ ಸಂಶೋಧನೆ ನಡೆಯಲಿಲ್ಲ. ಅನ್ವೇಷಣೆ ಗೆ ಸೈದ್ಧಾಂತಿಕ ನೆಲೆಗಟ್ಟು ದೊರಕಲಿಲ್ಲ. ಉದ್ದಿಮೆ ಹಾಗೂ ವಿಶ್ವ ವಿದ್ಯಾಲಯಗಳು ಜೊತೆಗೂಡಿ ಕೆಲಸ ಮಾಡಲಿಲ್ಲ. ಆದರೆ 20 ಹಾಗೂ 21 ನೆ ಶತಮಾನಗಳಲ್ಲಿ, ಜಪಾನು, ಜರ್ಮನಿ, ಹಾಗೂ ಚೈನಾ ಈ ರೀತಿಯ ಸಹ ಚರ್ಯೆ ರೂಢಿಸಿ ಕೊಂಡಿದ್ದರಿಂದ ಅವು ಉಪಯುಕ್ತ ಸಾಧನಗಳ ಅನ್ವೇಷಣೆ, ಹಾಗೂ ಔದ್ಯೋಗಿಕ ಉನ್ನತಿಗಳನ್ನು ಎನ್ನುವ ಸಿದ್ಧಾಂತವನ್ನು ಇವರು ಮೂವರು ಬೇರೆ ಬೇರೆ ದಶಕಗಳಲ್ಲಿ ಮಂಡಿಸಿದರು. ಇವನ್ನು ಒಟ್ಟಾಗಿ ಪರಿಗಣಿಸಿದ ನೊಬೆಲ್ ಕಮೀಟಿ ಈ ಸಿದ್ಧಾಂತಕ್ಕೆ ಮನ್ನಣೆ ನೀಡಿದೆ, ಅದನ್ನು ಮಂಡಿಸಿದವರಿಗೆ ಪ್ರಶಸ್ತಿ ಘೋಷಿಸಿತು. ಒಂದು ಮಜಾ ಏನೆಂದರೆ, ಕಳೆದ ವರ್ಷದ ಅರ್ಥಶಾಸ್ತ್ರದ ನೊಬೆಲ್ ಪಾರಿತೋಷಕ ಬಂದಿದ್ದು -`ತಂತ್ರಜ್ಞಾನದ ಬೆಳವಣಿಗೆಯಿಂದ ಬಡವರು ಇನ್ನೂ ಬಡವರಾಗುತ್ತಿದ್ದಾರೆ. ಇದರಿಂದ ಸರ್ವರೂ ಸುಖವಾಗಿ ಇರುತ್ತಾರೆ ಅನ್ನುವುದು ಸುಳ್ಳು’ ಎನ್ನುವ ಸಿದ್ಧಾಂತಕ್ಕೆ.

images 25

ಮತ್ತೆ ಅಮೆರಿಕಕ್ಕೆ ಹೋಗೋಣ. ಅಲ್ಲಿನ ಕಂಪನಿಗಳು ಹಾಗೂ ಔದ್ಯೋಗಿಕ ಸಂಸ್ಥೆಗಳು ಹೊಸ ಸಂಶೋಧನೆ ಹಾಗೂ ಅನ್ವೇಷಣೆಗಳ ಆಧಾರದ ಮೇಲೆ ಹೊಸ ವ್ಯವಹಾರ ಮಾಡಬೇಕು, ಅದರಿಂದ ಲಾಭ ಪಡೆಯಬೇಕು ಅಂತ ಅಂದುಕೊಳ್ಳುತ್ತವೆ. ವಿವಿಗಳಲ್ಲಿನ ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಫೆಲ್ಲೋಷಿಪ್, ಸಂಶೋಧನಾ ಭತ್ಯೆ, ಇತ್ಯಾದಿಗಳನ್ನು ನೀಡುತ್ತವೆ. ಆ ಸ್ಥಾನಗಳಿಗೆ ಯೋಗ್ಯರನ್ನು ಆಯ್ಕೆ ಮಾಡಿಕೊಂಡು ಅವರನ್ನು ಬೆಂಬಲಿಸುತ್ತವೆ. ಆ ರೀತಿಯ ಧನ ಸಹಾಯ ಪಡೆದ ವಿದ್ಯಾರ್ಥಿ ಹಾಗೂ ಸಂಶೋಧಕರು, ಏಕಚಿತ್ತದಿಂದ ಕೆಲಸ ಮಾಡುತ್ತಾರೆ, ಹೊಸ ಅನ್ವೇಷಣೆ ಮಾಡುತ್ತಾರೆ, ತಂತ್ರಜ್ಞಾನದ ನೆರವಿನಿಂದ ನಮ್ಮ ದಿನ ನಿತ್ಯದ ಜೀವನವನ್ನು ಹಸನು ಮಾಡುವ ಕೆಲಸವನ್ನು ಮಾಡುತ್ತಾರೆ. ವಿಶ್ವವಿದ್ಯಾಲಯ ಹಾಗೂ ಉದ್ದಿಮೆ ಎರಡೂ ಬೆಳೆಯುತ್ತವೆ, ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಇದರ ಉದಾಹರಣೆಗಳು ಹಲವು – ಅಮೆರಿಕದ ಆಟಂ ಬಾಂಬ್, ಸೌರ ಶಕ್ತಿ ಉಪಕರಣಗಳು, ವಿದ್ಯುತ್ ಚಾಲಿತ ಕಾರುಗಳಿಂದ ಹಿಡಿದು ಇಂದಿನ ಗೂಗಲ್, ಫೇಸ್ಬುಕ್, ಷೇರ್ ಮಾರುಕಟ್ಟೆ ಡಿಜಿಟಲೀಕರಣದವರೆಗೆ. ಈ ವರ್ಷದ ಎಲ್ಲ ಕ್ಷೇತ್ರದ ನೊಬೆಲ್ ಪ್ರಶಸ್ತಿಗಳು ವಿವಿಗಳಿಗೇ ಹೋಗಿವೆ. ಅಂದ ಹಾಗೆ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಂಶೋಧಕರಿಗೆ ಇಲ್ಲಿಯವರೆಗೆ ಒಟ್ಟು ಐದು ನೊಬೆಲ್ ಪ್ರಶಸ್ತಿ ಸಿಕ್ಕಿದೆ.

ಒಂದು ಲೆಕ್ಕದಂತೆ ಇಲ್ಲಿಯವರಗೆ ಸುಮಾರು 990 ವ್ಯಕ್ತಿಗಳು ಹಾಗೂ ಸುಮಾರು 30 ಸಂಸ್ಥೆಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಶಾಂತಿ ಹಾಗೂ ಸಾಹಿತ್ಯ ಕ್ಷೇತ್ರಗಳನ್ನು ಬಿಟ್ಟರೆ ಉಳಿದೆಲ್ಲವುಗಳನ್ನು ಹೊಸ ಸಂಶೋಧನೆ ಅಥವಾ ಅನ್ವೇಷಣೆಗಳಿಗೆ ನೀಡಿದ ಪ್ರಶಸ್ತಿ ಎಂದು ಪರಿಗಣಿಸಬಹುದು. ಅವುಗಳಲ್ಲಿ ಶೇಕಡಾ 90ರಷ್ಟು ವಿವಿಗಳಲ್ಲಿ ಕೆಲಸ ಮಾಡುತ್ತಿರುವ ಅಥವಾ ಅವುಗಳ ಜೊತೆ ಸಾವಯವ ಸಂಬಂಧ ಹೊಂದಿದ ಸಂಶೋಧಕರಿಗೆ ದೊರಕಿವೆ. ಅದಕ್ಕೆ ವಿವಿಗಳ ಗಂಭೀರ ಶೈಕ್ಷಣಿಕ ವಾತಾವರಣ ಎಷ್ಟು ಕಾರಣವೋ, ಅಷ್ಟೇ ಅಮೆರಿಕ ಹಾಗೂ ಯುರೋಪಿನ ಕಂಪನಿಗಳ ಸಂಶೋಧನಾ ಮನೋವೃತ್ತಿಯೂ ಕಾರಣ.

ಹಾಗಾದರೆ ನಮ್ಮಲ್ಲಿಯ ಕಂಪನಿಗಳಿಗೆ, ಅದರಲ್ಲೂ ತಂತ್ರಜ್ಞಾನ ಕಂಪನಿಗಳಿಗೆ ಹೊಸ ಸಂಶೋಧನೆ ನಡೆಸಲು, ಅನ್ವೇಷಣೆ ಉತ್ತೇಜಿಸಲು, ಅದರಿಂದ ಹೊಸ ಸಾಧನ ತಯಾರಿಸಿ ದೇಶದ, ವಿಶ್ವದ ಜನರ ಬದುಕು ಸುಧಾರಿಸಲು, ಅದರಿಂದ ಆರ್ಥಿಕ ಪ್ರಗತಿ ಸಾಧಿಸಲು ಏನು ಧಾಡಿ ?

ಇವು ಯಾವುವನ್ನೂ ಮಾಡದೇ, ಅವರು ದುಡ್ಡು ಮಾಡುತ್ತಿದ್ದಾರೆ ಅಂತ ಆದರೆ ಹೇಗೆ ಮಾಡುತ್ತಿದ್ದಾರೆ? ಬ್ರಿಟಿಷರು ಕಳಿಸಿಕೊಟ್ಟ ಹೋದ ಕ್ಲರ್ಕ್ ಕೆಲಸದಿಂದ ಮಾತ್ರವೇ ಈ ಕಂಪನಿಗಳು ಮುನ್ನಡೆಯುತ್ತಿವೆಯೇ? ಅವರಿಗೆ ಸಮಾಜಕ್ಕೆ- ಸರಕಾರಕ್ಕೆ ಉತ್ತರ ಕೊಡಬೇಕು ಎನ್ನುವ ಜವಾಬುದಾರಿ ಇಲ್ಲವೇ?

ನಮ್ಮ ಬೆಂಗಳೂರಿನ ಅತಿ ಹಳೆಯ ಹಾಗೂ ಅತಿ ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟಿಸಿಎಸ್‌ಗಳನ್ನೇ ಉದಾಹರಣೆಗಳಾಗಿ ತೊಗೊಳ್ಳೋಣ. ಈ ಮೂರು ನಮ್ಮೆಲ್ಲರ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ಯಾರಾದರೂ ಒಬ್ಬರು ಕೆಲಸ ಮಾಡಿಯೇ ಮಾಡುವ ಕಂಪನಿಗಳು ಇವು. ಇವುಗಳ ಬಗ್ಗೆ ನಮಗೆ ಎಲ್ಲರಿಗೂ ಗೊತ್ತಿದೆ. ಆದರೆ ಈ ಕಂಪನಿಗಳ ಪ್ರಮುಖ ಉತ್ಪನ್ನ (ಫ್ಲ್ಯಾಗ್ ಶಿಪ್ ಪ್ರಾಡಕ್ಟ್) ಯಾರಿಗಾದರೂ ಗೊತ್ತಿದೆಯೇ ಅಥವಾ ನೆನಪಿದೆಯೇ? ಇಲ್ಲ ಯಾಕೆ ಎಂದರೆ ಇವೆಲ್ಲ ಕಂಪನಿಗಳು, ತಮ್ಮ ಅಸ್ತಿತ್ವ ವನ್ನು ಜನ ಸಾಮಾನ್ಯರು ನಿಖರವಾಗಿ ಗುರುತಿಸುವಂತಹ ಯಾವುದೇ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿಲ್ಲ. ಅವು ಸೇವಾ ಕಂಪನಿಗಳು. ಅಂದರೆ ಏನು? ಅಮೆರಿಕ, ಯೂರೋಪು ಇತ್ಯಾದಿ ಮುಂದುವರೆದ ದೇಶಗಳಲ್ಲಿನ ದೊಡ್ಡ ಕಂಪನಿಗಳಲ್ಲಿ ಯಾವುದೇ ಹೊಸತನ ಇಲ್ಲದ, ದಿನ ನಿತ್ಯದ ಕಾರಕೂನಿಕೆ ಕೆಲಸಗಳನ್ನು ಮಾಡಲು ಜನ ಇರೋದಿಲ್ಲ. ಅಥವಾ ಇವರು ಕೊಡುವ ಸಂಬಳಕ್ಕೆ ಅವರು ಬರೋದಿಲ್ಲ. ಅಂತ ಕೆಲಸಗಳನ್ನು ಗುರುತಿಸಿ, ತಾವಾಗಿಯೇ ಮಾಡಿಕೊಡಲು ಮುಂದಾಗುವವರು ಈ ಭಾರತೀಯ ಕಂಪನಿಗಳು. 90ರ ದಶಕದಲ್ಲಿ ಕಾಲ್‌ ಸೆಂಟರ್ ಕೆಲಸಗಳು ಅಂತ ಯಾವುದನ್ನು ನಾವು ಮಾಡುತ್ತಿದ್ದೆವೋ, ಅದೇ ರೀತಿಯ ಕೆಲಸಗಳು ಇವು. ಸ್ವಲ್ಪ ಹೆಚ್ಚಿನ ಸಂಬಳ ಮತ್ತು ಸಮಾಜದಲ್ಲಿ ಹೆಚ್ಚಿನ ಮಾನ್ಯತೆ ಇರೋದಿಕ್ಕೆ ಇವಕ್ಕೆ ಐ ಟಿ ಕೆಲಸ ಅಂತ ಹೆಸರು.

ಈ ರೀತಿಯ ಯಾವ ಕಂಪನಿಗಳಲ್ಲೂ ಹೊಸ ಸಂಶೋಧನೆ, ಅನ್ವೇಷಣೆಯ ಪ್ರಯೋಗಶಾಲೆಗಳು ಇಲ್ಲ. ಅವುಗಳ ಅವಶ್ಯಕತೆಯೂ ಇವರಿಗೆ ಇಲ್ಲ.

ಅವುಗಳ ಕೆಲಸ ಹೆಚ್ಚಿನ ಪಕ್ಷ, ಬೇರೆ ಕಂಪನಿಗಳು ಕಡೆಗಣಿಸಿದ ಕೆಲಸಗಳನ್ನು ಕಣ್ಣಿಗೆ ಒತ್ತಿಕೊಂಡು, ಶ್ರದ್ಧೆಯಿಂದ, ಅವರು ಕೊಟ್ಟಷ್ಟು ಸಂಬಳಕ್ಕೆ ಚ್ಯುತಿ ಇಲ್ಲದಂತೆ ಮಾಡುವುದು.

ನನಗೆ ಒಂದು ಘಟನೆ ನೆನಪು ಇದೆ. ದಶಕಗಳ ಹಿಂದೊಮ್ಮೆ ಕೆನರಾ ಬ್ಯಾಂಕ್ ನ ಲೆಕ್ಕಾಚಾರ ವಿಭಾಗವನ್ನು ಯಂತ್ರೀಕರಣಗೊಳಿಸುವ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ಇತ್ತು. ಅದಕ್ಕೆ ನಾರಾಯಣ ಮೂರ್ತಿ ಅವರು ಬಂದಿದ್ದರು. ಅವರನ್ನು ವರದಿಗಾರರು ಮಾತನಾಡಿಸಲು ಹೋದಾಗ, `ನೋ ಕ್ವೆಷನ್ಸ್ ಎಬೌಟ್ ಇನ್ಫೋಸಿಸ್ ‘ ಅಂತ ಅಂದ್ರು. ಓಕೆ ಸರ್ ಅಂತ ಅಂದ ಪತ್ರಕರ್ತರು, ಬೆಂಗಳೂರಿನ ಹವಾಮಾನ, ಸ್ಥಳೀಯ ಸಂಸ್ಥೆ ಆಡಳಿತ, ಕಾರ್ಪೊರೇಟ್ ಸಹಭಾಗಿತ್ವ ಇತ್ಯಾದಿಗಳ ಬಗ್ಗೆ ಕೇಳಿದರು. ಆ ನಂತರ ಹಣಕಾಸು ನಿಯತಕಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯರೊಬ್ಬರು ಒಂದು ಆಫ್ ಬೀಟ್ ಪ್ರಶ್ನೆ ಕೇಳಿದರು. (ಯಾವಾಗ ಪತ್ರಕರ್ತರಿಗೆ ಈ ಪ್ರಶ್ನೆ ಕೇಳಬೇಕು, ಆದರೆ ಇದರ ಬಗ್ಗೆ ಬರೆಯಬಾರದು ಅಂತ ಉದ್ದೇಶ ಇರುತ್ತದೋ, ಆ ಪ್ರಶ್ನೆಗೆ ಆಫ್ ಬೀಟ್ ಅಂತ ಕರೆಯುತ್ತಾರೆ. ಇದು ನಿಮಗೆ ಗೊತ್ತಿರಲಿ).

N M

“ಮೂರ್ತಿ ಅವರೇ, ನಿಮ್ಮ ಕಂಪನಿ ಸಾಫ್ಟವೇರ್ ಕ್ಷೇತ್ರದಲ್ಲಿ ತುಂಬ ಹೆಸರು ಮಾಡಿದೆ. ಅನೇಕ ಭಾರತೀಯ ಇಂಜಿನಿಯರ್‌ಗಳಿಗೆ ಕೆಲಸ ಕೊಟ್ಟಿದೆ. ಅದು ಒಳ್ಳೆಯ ವಿಷಯ. ಆದರೆ ಆಪಲ್, ಮೈಕ್ರೋಸಾಫ್ಟ್, ಅಡೋಬ, ಇತ್ಯಾದಿ ಕಂಪನಿಗಳ ಥರ ಅದು ತನ್ನದೇ ಅದ ವಿಶೇಷ ಉತ್ಪನ್ನಗಳಿಗಾಗಿ ಹೆಸರು ಮಾಡಿಲ್ಲ. ನೀವು ನಿಮ್ಮದೇ ಅದ ಯಾವುದಾದರೂ ಒಂದು ವಿಶೇಷ ಐ ಟಿ ಸಾಧನ ಕಂಡು ಹಿಡಿಯಬಾರದೇಕೆ? ನಿಮ್ಮ ಹೆಸರನ್ನು ಕಾಯಂಗೊಳಿಸುವ ಒಂದು ವಿಶೇಷ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸ ಬಾರದೇಕೆ?”, ಅಂತ ಕೇಳಿದರು. ಅದಕ್ಕೆ ಮೂರ್ತಿ ಅವರು, “ನೀವು ಹೇಳುವುದು ಸರಿ, ಆದರೆ ನಾವು ಸೇವಾ ಸಂಸ್ಥೆ, ಅದಕ್ಕೆ ನಾವು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯ ಆಯಿತು. ನಮ್ಮದೇ ವಿಶೇಷ ಉತ್ಪನ್ನ ಮಾಡಬೇಕು ಅಂತ ಹೊರಟರೆ ನಾವು ಕೆಲವೇ ಸಂಖ್ಯೆಯ ಉದ್ಯೋಗಿಗಳನ್ನು ಇಟ್ಟುಕೊಂಡು ಕಂಪನಿ ನಡೆಸಬೇಕಾಗುತ್ತದೆ. ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯ ಇಲ್ಲ,” ಅಂತ ಅಂದ್ರು. ಆಗಷ್ಟೇ ಪತ್ರಿಕೋದ್ಯಮ ಸೇರಿದ್ದ ನನಗೆ ಆ ಕ್ಷೇತ್ರದ ಬಗ್ಗೆ ಅಷ್ಟಾಗಿ ತಿಳಿಯದೇ ಇದ್ದಕ್ಕೆ ನಾನು ನಡುವೆ ಮಾತಾಡಲಿಲ್ಲ. ಆದರೆ ಬಸ್ಸಿನಲ್ಲಿ ವಾಪಸ್ ಬರುವಾಗ ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಇದ್ದವು. ಇವರು ಸೇವಾ ಸಂಸ್ಥೆಯಾಗಿ ಅನೇಕರಿಗೆ ಕೆಲಸ ಕೊಡುವುದು ಸರಿಯೋ, ಅಥವಾ ಆಪಲ್‌ನಂತೆ ಹೊಸ ಆವಿಷ್ಕಾರ ಮಾಡುವುದು ಸರಿಯೋ. ಭಾರತಕ್ಕೆ ಯಾವುದು ಸರಿ ಅಂತ ವಿಚಾರ ಮಾಡುತ್ತಾ ಕಚೇರಿಗೆ ಬಂದೆ. ನನ್ನ ಹಿರಿಯರಲ್ಲಿ ಈ ವಿಚಾರ ಹಂಚಿಕೊಂಡೆ. “ಇದನ್ನು ಬರೆಯಬೇಡ ಅಂತ ಅವರು ಹೇಳಿದ್ದಾರೆ” ಅಂತಲೂ ಹೇಳಿದೆ. ಒಬ್ಬ ಹಿರಿಯರು, “ಅವರು ಹೇಳುವುದೂ ಸರಿ ಇದೆ ಬಿಡಿ. ನಮ್ಮ ಸಮಾಜಕ್ಕೆ ಈಗ ಬೇಕಾಗಿರುವುದು ಮಧ್ಯಮ ಸ್ತರದ ಹೆಚ್ಚಿನ ನೌಕರಿಗಳು. ಹೆಚ್ಚಿನ ಸಂಬಳದ ಕೆಲವೇ ಉದ್ಯೋಗಗಳಲ್ಲ,” ಅಂದ್ರು. ನನಗೂ ಸರಿ ಅನ್ನಿಸಿತು.

ಆದರೆ ಈಗೀಗ ನನಗೆ ವಯಸ್ಸು ಆದಂತೆ, ಅಲ್ಲಿ ಇಲ್ಲಿ ಓಡಾಡಿದ ಮೇಲೆ ನನಗೆ ನನ್ನ ಅಂದಿನ ನಂಬಿಕೆ ಯನ್ನು ಮರು ಪರಿಶೀಲನೆ ಮಾಡಬೇಕು ಅಂತ ಅನ್ನಿಸುತ್ತಿದೆ. ಇಷ್ಟು ದಿನ ನಮ್ಮ ಯುವ ಇಂಜಿನಿಯರ್‌ಗಳು ದೊಡ್ಡ ಕಂಪನಿಗಳ ತೊತ್ತಿನ ಕೆಲಸ ಮಾಡಿದ್ದರೆ? ಅವರನ್ನು ಕೆಲ ಟೀಕಾಕಾರರು ಐ ಟಿ ಕೂಲಿಗಳು ಅಂತ ಕರೆಯುವುದು, ಅವರ ಕೆಲಸವನ್ನು`ಡಾಲರ್ ಜೀತ’ ಅಂತ ಕರೆಯುವುದು ಸರಿಯೇ? ಅಂತ ಅನ್ನಿಸುತ್ತಿದೆ.

ಕಳೆದ ಸುಮಾರು 30-35 ವರ್ಷಗಳಲ್ಲಿ ನಮ್ಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು, ದುಡಿವಾನ, ಕಸಬುದಾರ ಯುವಕ – ಯುವತಿಯರು ತಮ್ಮ ಹುಬ್ಬಿನ ಬೆವರನ್ನು ಸಾಹುಕಾರರ ಅಮುಖ್ಯ ವಾದ ಚಾಕರಿ ಮಾಡುವುದರಲ್ಲಿ ಹರಿಸಿಬಿಟ್ಟಿದ್ದಾರೆ. ಬುದ್ಧಿವಂತ ಹುಡುಗರಾದರೆ ಇಂಜಿನಿಯರ್, ಹುಡುಗಿಯರಾದರೆ ಮೆಡಿಕಲ್, ಅಂತ ನಮ್ಮ ಸಮಾಜದಲ್ಲಿ ಅಲಿಖಿತ ನಿಯಮವೇ ಇದ್ದಂತೆ ಇದೆ.

ಈ ರೀತಿಯ ವಿದ್ಯಮಾನದ ಬಗ್ಗೆ ಕೆಲ ಆಧುನಿಕ ಅರ್ಥಶಾಸ್ತ್ರಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಆಕ್ಸ್ ಫೋರ್ಡ್ ವಿವಿ ಯಲ್ಲಿ ರಾಜಕೀಯಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ ಸೀಮೊನ ವ್ಯಾನ್ ಟ್ಯೂಟಮ್ ಹಾಗೂ ಅರ್ಥ ಶಾಸ್ತ್ರಜ್ಞ ರಟಗರ ಬ್ರೆಗಮ್ಯಾನ್ ಅವರು ನಮ್ಮ ಕಾಲದ ಬುದ್ಧಿವಂತರನ್ನು ನುಂಗಿ ಹಾಕುವ ಬರ್ಮುಡಾ ತ್ರಿಕೋನ ಅಂದರೆ `ಕನ್ಸಲ್ಟೆನ್ಸೀ, ಮೇನೇಜ್ಮೆಂಟ್ ಮತ್ತು ಫೈನಾನ್ಸ್’. ಈ ಕ್ಷೇತ್ರದ ಸೆಳೆತದಿಂದ ತಪ್ಪಿಸಿಕೊಂಡು, ಮೂಲ ವಿಜ್ಞಾನ, ಸಂಶೋಧನೆ, ಶಿಕ್ಷಣ, ಸಾರ್ವಜನಿಕ ಸೇವೆ, ಮಾನವಿಕ ವಿಷಯಗಳು, ಕಾನೂನು ಮತ್ತು ನ್ಯಾಯಾಂಗ, ಕಲೆ, ಸಾಹಿತ್ಯ, ಸಂಗೀತ, ಇತ್ಯಾದಿ ಕ್ಷೇತ್ರಗಳನ್ನು ಹುಡುಕಿಕೊಂಡು ಬರುವ ಯುವಜನರೇ ಇಲ್ಲವಾಗಿದ್ದಾರೆ, ಅಂತ ಅವರು ಅಭಿಪ್ರಾಯಪಡುತ್ತಾರೆ.

ಇನ್ನು ನಮ್ಮ ವಿವಿಗಳ ಆಕೆಡೆಮಿಕ ವಾತಾವರಣದ ಬಗ್ಗೆ ಕಮ್ಮಿ ಮಾತಾಡಿದಷ್ಟೂ ಒಳ್ಳೆಯದು. ಅಲ್ಲಿಯೂ ನೊಬೆಲ್ ಜನ ಇದ್ದಾರೆ. ಅವರು ನೊಬೆಲ್ ಪ್ರಶಸ್ತಿ ಪಡೆಯುವಂತ ಜನ ಅಲ್ಲ. ಅವರು ಒಂಥರಾ ನೊಬೆಲ್ ಗ್ಯಾಸ್ ಇದ್ದಂಗೆ. ನಿಮಗೆ ಮಾಧ್ಯಮಿಕ ಶಾಲೆ ರಸಾಯನಶಾಸ್ತ್ರದ ಪಾಠ ನೆನಪಿರಬೇಕಲ್ಲವೇ? ನೊಬೆಲ್ ಗ್ಯಾಸ್‌ಗಳ ಗುಣಧರ್ಮ ಏನು ಅಂದರೆ ಅವು ಬೇರೆಯವರ ಜೊತೆ ಸುಲಭವಾಗಿ ಬೆರೆಯೋದಿಲ್ಲ. ಈ ಅರ್ಥದಲ್ಲಿ ನಮ್ಮ ಯೂನಿವರ್ಸಿಟಿ ವಿದ್ವಾಂಸರಲ್ಲಿ ಅನೇಕರು ನೊಬೆಲ್ ಗ್ಯಾಸ್ ಇದ್ದಂಗೆ.

ಇದೀಗ ಮತ್ತೆ ಎಲ್ಲ ಬದಲಾಗುತ್ತಿದೆ. ಟ್ರಂಪಣ್ಣವರ್ ಅವರ ಸವಾಲು ರಹಿತ ಚಕ್ರಾಧಿಪತ್ಯದಲ್ಲಿನ `ಅಮೆರಿಕ ಮೊದಲು’, ನೀತಿ ಹಾಗೂ ಮೀಸಲಾತಿ ವಿರೋಧಿ ನೀತಿಗಳಿಂದಾಗಿ ಅಮೆರಿಕನ್ ವಿವಿಗಳಿಗೆ ಅನುದಾನ ಕಮ್ಮಿ ಆಗುತ್ತಲಿದೆ. ಎಲ್ಲಾ ವಿವಿಗಳಲ್ಲಿ ನೌಕರಿ ಹಾಗೂ ಪ್ರವೇಶ ಬಯಸಿ ಬರುವವರಲ್ಲಿ ಅಮೆರಿಕನ್ನರನ್ನು, ಅದರಲ್ಲೂ ಬಿಳಿಯರನ್ನು, ಹೆಚ್ಚಿನ ಸಂಖ್ಯೆಯಲ್ಲಿ ಆರಿಸಬೇಕು. ವಿದೇಶಿ ವಿದ್ಯಾರ್ಥಿಗಳು ಕೇವಲ 15 ಶೇಕಡಾ ಇರಬೇಕು. (ಭಾರತೀಯರೂ ಸೇರಿದಂತೆ) ಯಾವುದೇ ಒಂದು ದೇಶದ ವಿದ್ಯಾರ್ಥಿಗಳ ಪ್ರಮಾಣ ಶೇಕಡಾ ಐದು ಮೀರಬಾರದು, ಇತ್ಯಾದಿ ಷರತ್ತು ವಿಧಿಸಿ ಒಂದು ಆಜ್ಞೆ ಹೊರಡಿಸಿದ್ದಾರೆ. ಇದನ್ನು ಮೀರಿದರೆ ಅನುದಾನ ಕಡಿತ ಮಾಡುವುದಾಗಿ ಹಾಗೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಜಾಗತಿಕ ಮನ್ನಣೆ ಪಡೆದ ಗಣಿತತಜ್ಞ ಟೆರೆನ್ಸ್ ಟಾವೋ ಸೇರಿದಂತೆ ಅನೇಕ ವಿದ್ವಾಂಸರು, ವಿಜ್ಞಾನಿಗಳು ಆ ದೇಶ ತೊರೆಯುತ್ತಿದ್ದಾರೆ. ಅನೇಕರು ಕೆನಡಾ, ಯೂರೋಪು, ಆಸ್ಟ್ರೇಲಿಯ, ಚೀನಾ, ಜಪಾನು ಹಾಗೂ ಕೊರಿಯಾ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಭಾರತೀಯರೂ ಗಮನಾರ್ಹ ಸಂಖ್ಯೆಯಲ್ಲಿ ಅಲ್ಲಿ ಇದ್ದರೆ. ಅವರು ಯಾರೂ ಇಲ್ಲಿಗೆ ಬರುವ ಮನಸು ಮಾಡಿಲ್ಲ. ಅದು ಬೇರೆ ವಿಷಯ.

ಕೊನೆಗೆ, ನಮ್ಮ ವಿವಿಗಳಲ್ಲಿ ನಡೆಯುವ ಸಂಶೋಧನೆಗಳ ಗುಣಮಟ್ಟದ ಬಗ್ಗೆ ಎರಡು ಜೋಕು ನೆನಪಾಗುತ್ತವೆ. ನಿಜ ಹೇಳಬೇಕು ಅಂದರೆ ಇವು ಜೋಕು ಅಲ್ಲ, ನಮ್ಮ ಭವ್ಯ ಭಾರತದ ಆಕಡೆಮಿಕ್ ಕ್ಷೇತ್ರವನ್ನು ತೆರೆದು ಇಡಬಲ್ಲ ಐತಿಹ್ಯಗಳು, ನಮ್ಮನ್ನು ಆಳುವವರು ನಮ್ಮ ನಡುವಿನ ತಿಳಿದವರು ಹಾಗೂ ಉಳ್ಳವರು ನಮ್ಮ ಸಮಾಜವನ್ನು ನಡೆಸುತ್ತಿರುವ ದಾರಿಯನ್ನು ತೋರುವ ಉಪಾಖ್ಯಾನಗಳು.

ಮೊದಲನೆಯದು, ಧಾರವಾಡದದಲ್ಲಿ ಇರುವ ಸಮಾಜ ಸೇವಕರೊಬ್ಬರ ಬಗ್ಗೆ. ಕೃಷಿ ಪದವೀಧರರಾದ ಅವರು , ಸ್ವಾರ್ಥ ರಹಿತರಾಗಿ ಹಳ್ಳಿಗಳಲ್ಲಿ ಜೀವಿಸಿ ಬಡ ಕೃಷಿಕರು ಹಾಗೂ ಕೂಲಿ ಕಾರ್ಮಿಕರನ್ನು ಸಂಘಟಿಸಿ, ಅವರ ಜೀವನ ಸುಧಾರಣೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ, ದಶಕಗಳನ್ನು ಕಳೆದು ಈಗ ನಿವೃತ್ತರಾದವರು. ಅವರನ್ನು ನೋಡಿದ ಕೃಷಿ ವಿವಿಯ ಯುವ ಶಿಕ್ಷಕ ನೊಬ್ಬ ನಾನು ನಿಮ್ಮ ಬಗ್ಗೆ ಪಿಎಚ್‌ಡಿ ಮಾಡುತ್ತೇನೆ ಸರ್, ಒಲ್ಲೆ ಅನ್ನಬೇಡಿ ಅಂತ ಗೋಗರೆದ. ನಾನು ಏನು ಅಂತಹ ದೊಡ್ಡ ಕೆಲಸ ಮಾಡಿಲ್ಲ. ನನ್ನ ಬಗ್ಗೆ ಯಾಕೆ ಡಾಕ್ಟರೇಟ್ ಮಾಡುತ್ತೀರಿ? ನಾವು ಏನು ಅಂತಹ ದೊಡ್ಡ ಕೆಲಸ ಮಾಡಿದ್ದೇವೆ? ಅಂತ ಇವರು ವಿನಯ್ ಪೂರ್ವಕವಾಗಿ ತಪ್ಪಿಸಿಕೊಳ್ಳಲು ಹೋದರೆ, ಇಲ್ಲ ಸಾರ್, ನಿಮ್ಮ ಕೆಲಸ ನಿಮಗೆ ಗೊತ್ತಿಲ್ಲ. ನಾನು ಅನೇಕ ರೈತರನ್ನು ಮಾತಾಡಿಸಿದ್ದೇನೆ. ಅವರೆಲ್ಲ ನಿಮ್ಮನ್ನು ದೇವರು ಅಂತ ತಿಳಿಯುತ್ತಾರೆ. ದಯವಿಟ್ಟು ಅವಕಾಶ ಕೊಡಿ ಅಂತೆಲ್ಲ ಹೇಳಿದ. ಇವರು ತಾವು ಕೆಲಸ ಮಾಡಿದ ಹಳ್ಳಿಗಳಿಗೆ ಅವನ್ನು ಕರೆದುಕೊಂಡು ಹೋದರು, ಅಲ್ಲಿನ ನಿವಾಸಿಗಳ ಜೊತೆ ಭೇಟಿ ಮಾಡಿಸಿದರು, ತಮ್ಮ ಕೆಲಸದ ವಿವರ, ಅವುಗಳ ದೂರಗಾಮಿ ಪರಿಣಾಮ ತಿಳಿಸಿಕೊಟ್ಟರು. ಆಯ್ತು ಸರ್ ಅಂತ ಹೇಳಿ ಹೋದ ಆ ಯುವ ಸಂಶೋದಕ ಕೆಲ ವಾರಗಳ ನಂತರ ಒಂದು ದಪ್ಪ ಪುಸ್ತಕ ವನ್ನು ಇದು ನನ್ನ ಕರಡು ಪ್ರತಿ ಅಂತ ಇವರಿಗೆ ತಂದು ಕೊಟ್ಟ. ಅದನ್ನು ತೆರೆದು ಓದಿದ ಇವರಿಗೆ ಆಘಾತವಾಯಿತು. ಅದರಲ್ಲಿ ಮೊದಲ ಕೆಲ ಪುಟಗಳಲ್ಲಿ ಇವರ ಜೀವನ ಕತೆ ಬಿಟ್ಟರೆ, ಮುಂದಿನ ಎಲ್ಲ ಪುಟಗಳಲ್ಲಿ ಇದ್ದ ಅಂಕಿ- ಸಂಖ್ಯೆ ಗಳಿಗೂ ಶ್ರೀಯುತರ ಕೆಲಸಕ್ಕೂ ಸಂಬಂಧವೇ ಇರಲಿಲ್ಲ. ಅವು ಕೊಂಬೊದಿಯ, ಚೀನಾ, ಜಪಾನ್ ಇತ್ಯಾದಿ ದೇಶಗಳ ಕೃಷಿ ಇಲಾಖ್ಯೆಯ ವೆಬ್ ಸೈಟ್‌ಗಳಿಂದ ಡೌನ್ಲೋಡ್ ಮಾಡಿದ ಮಾಹಿತಿಗಳು. ಇವರಿಗೆ ಕೋಪ ಬಂದು ಅವನ್ನು ಕರೆದು ಕೇಳಿದರೆ, ಆತ ಕಣ್ಣೀರು ಹಾಕಲು ಶುರು ಮಾಡಿದ. ಹೌದು ಸರ್, ನನ್ನಿಂದ ತಪ್ಪಾಗಿದೆ. ನಾನು ನಿಮ್ಮ ಬಗ್ಗೆ ಸರಿಯಾಗಿ ಕೆಲಸ ಮಾಡಲು ಆಗಿಲ್ಲ. ನನಗೆ ಸಮಯ ಇಲ್ಲ. ನನ್ನ ಹೆಂಡತಿಗೆ ಆರಾಮ ಇಲ್ಲ. ಮಕ್ಕಳು ಸಣ್ಣವು, ಈ ಪಿಎಚ್‌ಡಿ ಸಿಗದೇ ಹೋದರೆ ನನ್ನ ಕೆಲಸ ಕಾಯಂ ಆಗೋದಿಲ್ಲ, ದಯವಿಟ್ಟು ತಕರಾರು ಮಾಡಬೇಡಿ ಅಂತ ಗೋಳಾಡಿದ.

ಮರು ದಿನ ಅವನ್ನು ಮಿಸ್ ಗೈಡ್ ಮಾಡಿದ್ದ ಗೈಡ್‌ಗಳು ಬಂದರು. ಅವರೂ ಇದೆ ರೀತಿ ಗೋಳಾಡಿದರು. ಅವನ ಮೇಲೆ ಕರುಣೆ ತೋರಿದ ಈ ಸಮಾಜ ಸೇವಕರು. ಸರಿ, ನೀವು ಏನಾದರೂ ಪಿಎಚ್‌ಡಿ ಮಾಡಿಕೊಳ್ಳಿ. ಆದರೆ ಈ ನಿಮ್ಮ ಸಂಶೋಧನಾ ಪ್ರಬಂಧ ವನ್ನು ಪುಸ್ತಕವಾಗಿ ಪ್ರಕಟಿಸಬೇಡಿ, ಅಂತ ಕರಾರು ಹಾಕಿದರು.

ಸಮಾಜಮುಖಿಯ ಸ್ವಗತಗಳು l ಬೇಜವಾಬುದಾರಿ ಭಾರತೀಯನ ಜೊತೆ ಹೀಗೊಂದು ಭೇಟಿ

ಇನ್ನೊಂದು ಘಟನೆ ನನ್ನ ಜೊತೆ ನಡೆದಿದ್ದು. ಬೆಂಗಳೂರು ವಿವಿ ಮಾಧ್ಯಮ ವಿಭಾಗದ ಹಿಂದೆ ನಾವೆಲ್ಲ ಚಹಾ ಕುಡಿಯುತ್ತಾ ಇದ್ದಾಗ ನಮ್ಮ ಹಳೆಯ ಸ್ನೇಹಿತ ಒಬ್ಬ ಭೇಟಿ ಆದ. ತಮ್ಮ ಸಹೋದ್ಯೋಗಿ ಒಬ್ಬರನ್ನು ಪರಿಚಯಿಸಿದ. ಇವರಿಗೆ ಈಗ ಪಿಎಚ್‌ಡಿ ಅವಾರ್ಡ್ ಆಗಿದೆ ಅಂತ. ನನಗೆ ಈ ಪಿಎಚ್‌ಡಿಗಳು ಭೇಟಿ ಆದಾಗ ನಿಮ್ಮ ಸಂಶೋಧನೆ ಯಾವ ವಿಷಯದ ಬಗ್ಗೆ ಅಂತ ಕೇಳುವ ಒಂದು ಕೆಟ್ಟ ಚಟ. ಕೇಳಿದೆ.

ಅವರು “ನನ್ನದು ರಾಜ್ಯಶಾಸ್ತ್ರ ಸಾ. ನನ್ ಟಾಪಿಕ್, ʼಮಾನ್ಯ ಎಚ್ ಡಿ ದೇವೇಗೌಡರು ಪ್ರಧಾನಿ ಅದ ಘಟನೆಯ ಸಮಜೋ- ರಾಜಕೀಯೋ- ಸಾಂಸ್ಕೃತಿಕ ಹಿನ್ನೆಲೆ , ಒಂದು ಅಧ್ಯಯನ,’ ಅಂತ ಹೇಳಿದರು. ನಾನು ಗಂಭೀರವಾಗಿ ನೀವು ತಪ್ಪಾದ ಟಾಪಿಕ್ ಆಯ್ಕೆ ಮಾಡಿದ್ದೀರಿ ಅಂತ ಹೇಳಿದೆ. ಅವರು ಮುನಿಸಿಕೊಂಡರು. `ಮತ್ತೆ ನಿಮ್ಮ ಪ್ರಕಾರ ಯಾವ ಟಾಪಿಕ್ ತೊಗೊಳ್ ಬೇಕಾಗಿತ್ತು ಸಾ,’ ಅಂತ ಜಗಳಕ್ಕೆ ಬಂದರು. ನಾನು “ಮಾನ್ಯ ಎಚ್ ಡಿ ದೇವೇಗೌಡರು ಪ್ರಧಾನಿ ಅದ ಘಟನೆಯ ಬಗ್ಗೆ ನಾನು ಸಂಶೋಧನೆ ಮಾಡಿದ ಘಟನೆಯ ಸಮಜೋ- ರಾಜಕೀಯೋ- ಸಾಂಸ್ಕೃತಿಕ ಹಿನ್ನೆಲೆ, ಒಂದು ಅಧ್ಯಯನ” ಅಂತ ಟಾಪಿಕ್ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು ಅಂತ ಅಂದೆ. ಅವರು ಮುನಿಸಿಕೊಂಡರೇನೋ ಗೊತ್ತಿಲ್ಲ, ಆದರೆ ಜಗಳಕ್ಕೆ ಬರಲಿಲ್ಲ.

“ಬೋ ತಮಾಷೆ ಮಾಡ್ತೀರಾ ಸಾ, ನೀವ್ ಪೇಪರ್ ನವರೆಲ್ಲಾ ಹೀಗೇ,” ಅಂತ ಜೋರಾಗಿ ನಕ್ಕರು.

WhatsApp Image 2025 11 17 at 5.28.02 PM
ಹೃಷಿಕೇಶ ಬಹದ್ದೂರ ದೇಸಾಯಿ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...