ಅಸಾಂಪ್ರದಾಯಿಕ ಜೀವನ ಎಂದರೆ ಸಂಪ್ರದಾಯವನ್ನು ತಿರಸ್ಕರಿಸುವುದಲ್ಲ, ಅದನ್ನು ಹೊಸ ಅರ್ಥದಲ್ಲಿ ಜೀವಿಸುವುದು ಎಂಬುದು ಕೆಲವರ ಅಭಿಮತ. ಜಪಾನಿನ ಇಕಿಗೈ ತತ್ವವು ಉದ್ದೇಶಪೂರ್ಣ ಬದುಕನ್ನು ಬೋಧಿಸುತ್ತದೆ. ಅದು ಮನಸ್ಸು, ಕೌಶಲ್ಯ ಮತ್ತು ಕರ್ತವ್ಯಗಳ ಸಂಗಮದಿಂದ ಹುಟ್ಟುವ ಸಮತೋಲನ. ಅಧ್ಯಾತ್ಮವಾದಿಗಳ ಅನ್ವಯ ಭಾರತೀಯ ಸನ್ಯಾಸ ಸಂಪ್ರದಾಯ, ಬಂಧನದಿಂದ ಪಾರಾಗುವುದಲ್ಲ; ಅದು ಜಾಗೃತಿಯಿಂದ ಉಂಟಾಗುವ ಮುಕ್ತಿ.
ಸಮಾಜದ ರೂಢೀಗತ, ಒಂದರ್ಥದಲ್ಲಿ ಕಟ್ಟು ಕಟ್ಟಳೆಗಳಿಗೆ ಜೋತು ಬೀಳದ ಜೀವನ ರೀತಿಗೆ ಅಸಾಂಪ್ರದಾಯಿಕ ಜೀವನ ಶೈಲಿ ಎನ್ನಬಹುದು. ಅದು ಸಮಾಜ ಸಾಮಾನ್ಯವಾಗಿ ಗುರುತಿಸುವ ಸುರಕ್ಷಿತ ಗಡಿಗಳನ್ನು ದಾಟುವ ನಿಶ್ಚಿತವಲ್ಲದ, ಆದರೆ ನಿಷ್ಠಾವಂತ ಪಯಣ. ಈ ಜೀವನ ಸುಲಭವಲ್ಲ; ಅದು ಅನೇಕ ಬಾರಿ ಅರ್ಥಮಾಡಿಕೊಳ್ಳದವರಿಂದ ತಿರಸ್ಕಾರಕ್ಕೂ ಗುರಿಯಾಗುತ್ತದೆ. ಆದರೂ ಅದರಲ್ಲಿ ಒಂದು ಅನನ್ಯ ತೇಜಸ್ಸಿದೆ, ಆತ್ಮಸತ್ಯವನ್ನು ಜೀವಿಸುವ ಧೈರ್ಯದಿಂದ ಹುಟ್ಟುವ ಬೆಳಕು.
ಸಮಾಜವು, ಸಮಾಜಶಾಸ್ತ್ರಜ್ಞರಾದ ಏಮಿಲ್ ದುರ್ಖೈಮ್ ಹಾಗೂ ಮ್ಯಾಕ್ಸ್ ವೇಬರ್ ಸೂಚಿಸಿದಂತೆ, ಸಾಮೂಹಿಕ ನಡತೆ ಮತ್ತು ನಂಬಿಕೆಗಳ ಆಧಾರದ ಮೇಲೆ ನಿರ್ಮಿತವಾಗಿದೆ. ಆದರೆ ಇದೇ ನಡತೆಗಳು ಕೆಲವೊಮ್ಮೆ ವ್ಯಕ್ತಿಯ ಕಲ್ಪನೆ ಮತ್ತು ಸ್ವಾತಂತ್ರ್ಯವನ್ನು ಬಂಧಿಸುತ್ತವೆ. ನಿಯಮ, ರೂಢಿ ಮತ್ತು ತಾರ್ಕಿಕತೆಯ ಹೆಸರಿನಲ್ಲಿ ಮಾನವನು ಕಟ್ಟಿಹಾಕಿಕೊಳ್ಳುವ ಬಂಧನವನ್ನು ಮ್ಯಾಕ್ಸ್ ವೇಬರ್ ʼಐರನ್ ಕೇಜ್ʼ ಎಂದ. ಅಸಾಂಪ್ರದಾಯಿಕ ಜೀವನವು ಆ ಕಬ್ಬಿಣದ ಪಂಜರದ ಬಾಗಿಲನ್ನು ತೆರೆಯುವ ಧೈರ್ಯದಿಂದ ಆರಂಭವಾಗುತ್ತದೆ. ಅದು ಕೇವಲ ಬಂಡಾಯವಲ್ಲ; ಅದು ಜೀವನವನ್ನು ಸತ್ಯಸಂಧವಾಗಿ, ತನ್ನದೇ ಅರ್ಥದಲ್ಲಿ ರೂಪಿಸಿಕೊಳ್ಳುವ ಪ್ರಯತ್ನ.
ಮಾನವ ಸಂಸ್ಕೃತಿಯ ಇತಿಹಾಸವೇ ಇಂತಹ ಧೈರ್ಯಶಾಲಿಗಳಿಂದ ರೂಪುಗೊಂಡಿದೆ. ಅನೇಕ ಕ್ಷೇತ್ರಗಳಿಗೆ ಸೇರಿದ ಇಂಥವರು ಚೌಕಟ್ಟಿನಿಂದಾಚೆ ಯೋಚಿಸುತ್ತಾರೆ ಹಾಗೂ ಕ್ರಿಯೆಗಳಲ್ಲೂ ತೊಡಗುತ್ತಾರೆ. ಅವರು ಕಾಲವೆಂಬ ಉಸುಕಿನಲ್ಲಿ ತಮ್ಮ ಪಾದಗಳ ಗುರುತುಗಳನ್ನು ಬಿಟ್ಟಿರುತ್ತಾರೆ! ಇತಿಹಾಸದಲ್ಲಿ ಅಂತಹ ಅನೇಕ ಮಂದಿ ಆಗಿಹೋಗಿದ್ದಾರೆ. ಐಕಾನ್‌ಗಳು ಮಾತ್ರವಲ್ಲದೇ ಅನೇಕ ಸಾಮಾನ್ಯ ಮಂದಿ ಕೂಡ ಅಸಾಂಪ್ರದಾಯಿಕ ಜೀವನವನ್ನು ನಡೆಸಿದ್ದರು; ನಡೆಸುತ್ತಿದ್ದಾರೆ!

ಚಾರ್ವಾಕ (ನಮ್ಮ ತತ್ವಶಾಸ್ತ್ರದ ಲೋಕಾಯತ ಎಂಬ ಭೌತವಾದಿ, ನಾಸ್ತಿಕ ತಾತ್ವಿಕ ಧಾರೆಯನ್ನು ಸ್ಥಾಪಿಸಿದ ಈತ ಜೀವಂತ ವ್ಯಕ್ತಿಯಾಗಿದ್ದನೇ ಅಥವಾ ಆತ ಪ್ರತಿಪಾದಿಸಿದ ಒಟ್ಟು ವಿಚಾರಗಳ ಮೊತ್ತಕ್ಕೆ ಲೋಕಾಯತ ಎಂದು ಕರೆಯಲಾಗುತ್ತದೆಯೇ ಎಂಬ ವಿಷಯದ ಬಗೆಗೆ ವಿದ್ವಾಂಸರ ನಡುವೆ ಭಿನ್ನ ಅಭಿಪ್ರಾಯಗಳಿವೆ), ಬುದ್ಧ, ಏಸು ಕ್ರಿಸ್ತ, ಮೊಹಮ್ಮದ್ ಪೈಗಂಬರ್, ಬಸವಣ್ಣ, ಕಾರ್ಲ್ ಮಾರ್ಕ್ಸ್, ಏಂಗೆಲ್ಸ್, ರಾಜಾರಾಮ್ ಮೋಹನ್ ರಾಯ್, ವಿವೇಕಾನಂದ, ಮಹಾತ್ಮ ಗಾಂಧೀಜಿ, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ರೋಝಾ ಲಕ್ಸಂಬರ್ಗ್, ಬಿ ಆರ್ ಅಂಬೇಡ್ಕರ್, ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಬೇರೆ ಬೇರೆ ವಲಯಗಳ ಅನೇಕರು ಒಂದರ್ಥದಲ್ಲಿ ಅಸಾಂಪ್ರದಾಯಿಕ ಜೀವನವನ್ನು ನಡೆಸಿದರು ಎಂದರೆ ತಪ್ಪಾಗುವುದಿಲ್ಲ.
ಈಗ ಕೆಲವು ವ್ಯಕ್ತಿಗಳ ಅಸಾಂಪ್ರದಾಯಿಕ ಜೀವನದತ್ತ ಒಂದು ದೃಷ್ಟಿ ಹರಿಸೋಣ.
ಪ್ರಸಿದ್ಧ ಡಚ್ ಚಿತ್ರಕಲಾವಿದ ವಿನ್ಸೆಂಟ್ ವ್ಯಾನ್‌ಹಾಹ್ Vincent van Gogh(ಡಚ್ ಉಚ್ಚಾರಣೆ-1853-1890) ಬಡತನ ಮತ್ತು ನೋವಿನ ನಡುವೆಯೂ ತನ್ನ ಕಲ್ಪನೆಗೆ ನಿಷ್ಠನಾಗಿದ್ದನು. ಆತನ ಚಿತ್ರಗಳು ಪ್ರಸ್ತುತ ಕಾಲಘಟ್ಟದಲ್ಲೂ ಕಲಾರಾಧಕರ ಗಮನವನ್ನು ಸೆಳೆಯುತ್ತಿವೆ; ಚರ್ಚೆಗೆ ಒಳಗಾಗುತ್ತಿವೆ. ಮೆಕ್ಸಿಕೋದ ಚಿತ್ರಕಲಾವಿದೆ ಫ್ರಿದಾ ಕಾಹ್ಲೋ(1907-1954)ತನ್ನ ಶರೀರ ಮತ್ತು ನೋವನ್ನು ಕಲೆಯ ರೂಪದಲ್ಲಿ ಚಿತ್ರಿಸಿ, ಸೌಂದರ್ಯ, ಲಿಂಗ ಮತ್ತು ರಾಜಕೀಯ ಮಿತಿಗಳನ್ನು ಮೀರಿದಳು. ಅವಳು ತನ್ನ ಜೀವನವನ್ನೇ ಒಂದು ಕವಿತೆಯಾಗಿ ಬರೆದಳು.
ಭಾರತದ ಪರಂಪರೆಯಲ್ಲೂ ಹಲವು ಅಸಾಂಪ್ರದಾಯಿಕ ಜೀವನದ ನಾದಗಳಿವೆ. ಬಂಗಾಳದ ಸಂಚಾರಿ ಭಕ್ತಕವಿಗಳಾದ ಬೌಲ್‌ಗಳು ಹಿಂದೂ ಮತ್ತು ಸೂಫಿ ಪರಂಪರೆಯನ್ನು ಮೇಳೈಸಿ, ಸ್ವಾತಂತ್ರ್ಯ ಮತ್ತು ಪ್ರೇಮದ ಸತ್ಯವನ್ನು ಹಾಡುಗಳ ಮೂಲಕ ಪಸರಿಸುತ್ತ ಬಂದಿದ್ದಾರೆ. ಹನ್ನೆರಡನೇ ಶತಮಾನದ ಅಲ್ಲಮ ಪ್ರಭು ವೀರಶೈವ ಮತವನ್ನು ಸೇರಿದಂತೆ ಎಲ್ಲ ಪಂಥ, ಸಂಪ್ರದಾಯಗಳನ್ನು ತನ್ನ ವಚನಗಳ ಮೂಲಕ ನಿಷ್ಠುರವಾಗಿ ವಿಮರ್ಶಾ ನಿಕಷಕ್ಕೆ ಒಡ್ಡಿದ. ಸಂತ ಕಬೀರ ದೇವಾಲಯದ ಹಾಗೂ ಮಸೀದಿಯ ಸೀಮೆಗಳನ್ನು ಮೀರಿ “ನನ್ನ ಮನೇ ದೇವಾಲಯವೂ ಅಲ್ಲ, ಮಸೀದಿಯೂ ಅಲ್ಲ, ಅದು ಹೃದಯದ ಆಲಯ” ಎಂದು ಘೋಷಿಸಿದನು. ಆತನ ಸಬದ್, ರಮೈನಿ ಮತ್ತು ದೋಹೆಗಳಲ್ಲಿ ಭೂಮಿಯ ವಾಸನೆಯಿದೆ; ಆಕಾಶದ ವಿಶಾಲತೆ ಕೂಡ.

ಸಮಾಜಶಾಸ್ತ್ರದ ದೃಷ್ಟಿಯಿಂದ, ಅಸಾಂಪ್ರದಾಯಿಕ ಜೀವನವು ಸಾಮಾಜಿಕ ಶರತ್ತುಬದ್ಧಗೊಳಿಸುವಿಕೆಯ ವಿರುದ್ಧದ ಸ್ಪಂದನವಾಗಿರುತ್ತದೆ. ಫ್ರೆಂಚ್ ಅಸ್ತಿತ್ವವಾದಿ ತತ್ವಶಾಸ್ತ್ರಜ್ಞೆ ಮತ್ತು ಮಹಿಳಾವಾದಿಯಾಗಿದ್ದ ಸಿಮೋನ್ ದಿ ಬುವಾ ತನ್ನ ʼ ದಿ ಸೆಕೆಂಡ್ ಸೆಕ್ಸ್ ʼಕೃತಿಯಲ್ಲಿ ಹೆಣ್ಣಿನ ಅಸ್ತಿತ್ವವೇ ಸಮಾಜದ ನಿರ್ಮಿತಿಯಾಗಿದೆ ಎಂದು ವಿಶ್ಲೇಷಿಸಿದಳು. ಇಂಗ್ಲೆಂಡಿನ ಬರಹಗಾರ್ತಿಯಾಗಿದ್ದ ವರ್ಜೀನಿಯಾ ವುಲ್ಫ್ ತನ್ನ ʼಎ ರೂಮ್ ಆಫ್ ಒನ್ಸ್ ಓನ್ʼ ಕೃತಿಯಲ್ಲಿ ಹೆಣ್ಣುಮಕ್ಕಳಿಗೆ ಆರ್ಥಿಕ ಮತ್ತು ಬೌದ್ಧಿಕ ಸ್ವಾತಂತ್ರ್ಯ ಬೇಕೆಂಬ ಗಾಢ ಸತ್ಯವನ್ನು ಬರೆದಳು. ಭಾರತದಲ್ಲಿ ಅಮೃತಾ ಶೇರ್‌ಗಿಲ್ ತನ್ನ ಚಿತ್ರಗಳಲ್ಲಿ ಭಾರತೀಯ ಮಹಿಳೆಯ ಮೌನದ ಮತ್ತು ಆಳದ ರೂಪಗಳನ್ನು ಹಿಡಿದರು—ಅವರು ಪಿತೃತ್ವದ ನೋಟಕ್ಕೆ ಸವಾಲು ಹಾಕಿದ ಕಲಾವಿದೆ.
ಸಿನಿಮಾ ಕ್ಷೇತ್ರದಲ್ಲಿಯೂ ಈ ಅಸಾಂಪ್ರದಾಯಿಕ ಧೈರ್ಯ ಸ್ಪಷ್ಟ. ಹಾಲಿವುಡ್ ಸಿನಿಮಾ ವ್ಯಾಕರಣವನ್ನು ಮುರಿದ ಇಟಾಲಿಯ ನವವಾಸ್ತವವಾದಿ ಸಿನಿಮಾ, ಫ್ರೆಂಚ್ ನವ ಅಲೆ, ಜರ್ಮನ್ ನವ ಸಿನಿಮಾ ಮತ್ತು ಭಾರತದ ನವ ಅಲೆಯ ಸಿನಿಮಾಗಳದ್ದು ಅಸಾಂಪ್ರದಾಯಿಕ ಅಭಿವ್ಯಕ್ತಿಯ ಹಾದಿ ಎನ್ನಬಹುದು. ಸರ್ಗೈ ಐಸೆನ್ಸ್ಟೀನ್, ಆರ್ಸನ್ ವೆಲ್ಲಿಸ್, ವಿಕ್ಟೋರಿಯಾ ಡಿ ಸಿಕಾ, ಜಾನ್ ಲುಕ್ ಗೋದಾ, ಫ್ರಾನ್ಸುವ ತ್ರೂಫಾ, ಬೆಲ್ಲಾ ಟಾರ್, ಆಂದ್ರೆ ತಾರ್ಕೋವ್ಸ್ಕಿ, ಲವ್ ಡಯಾಝ್, ನೂರಿ ಬಿಲ್ಗೆ ಸೇಲಾನ್, ಸತ್ಯಜಿತ್ ರೇ, ಋತ್ವಿಕ್ ಘಟಕ್, ಮೃಣಾಲ್ ಸೆನ್, ಜಾನ್ ಅಬ್ರಹಂ, ಗಿರೀಶ್ ಕಾಸರವಳ್ಳಿ ಮುಂತಾದ ನಿರ್ದೇಶಕರು ಸಿನಿಮಾ ಕ್ಷೇತ್ರದಲ್ಲಿ ಭಿನ್ನ ಹಾದಿಯ ಪಯಣಿಗರಾದರು; ಅಸಾಂಪ್ರದಾಯಿಕವಾಗಿ ಸಿನಿಮಾ ವ್ಯಾಕರಣವನ್ನು ದುಡಿಸಿಕೊಂಡರು!
ಅಸಾಂಪ್ರದಾಯಿಕ ಜೀವನ ಎಂದರೆ ಸಂಪ್ರದಾಯವನ್ನು ತಿರಸ್ಕರಿಸುವುದಲ್ಲ, ಅದನ್ನು ಹೊಸ ಅರ್ಥದಲ್ಲಿ ಜೀವಿಸುವುದು ಎಂಬುದು ಕೆಲವರ ಅಭಿಮತ. ಜಪಾನಿನ ಇಕಿಗೈ ತತ್ವವು ಉದ್ದೇಶಪೂರ್ಣ ಬದುಕನ್ನು ಬೋಧಿಸುತ್ತದೆ. ಅದು ಮನಸ್ಸು, ಕೌಶಲ್ಯ ಮತ್ತು ಕರ್ತವ್ಯಗಳ ಸಂಗಮದಿಂದ ಹುಟ್ಟುವ ಸಮತೋಲನ. ಅಧ್ಯಾತ್ಮವಾದಿಗಳ ಅನ್ವಯ ಭಾರತೀಯ ಸನ್ಯಾಸ ಸಂಪ್ರದಾಯ, ಬಂಧನದಿಂದ ಪಾರಾಗುವುದಲ್ಲ; ಅದು ಜಾಗೃತಿಯಿಂದ ಉಂಟಾಗುವ ಮುಕ್ತಿ.
ಆದರೆ, ಈ ಅಸಾಂಪ್ರದಾಯಿಕ ಜೀವನದ ಹಾದಿಯ ಪಯಣ ಸುಗಮವಲ್ಲ. ಈ ಮಾರ್ಗದ ಪಯಣಿಗರು ಏಕಾಂಗಿತನ, ನಿರಾಕರಣೆ, ಅಂಚಿಗೆ ತಳ್ಳಲ್ಪಡುವಿಕೆ ಮುಂತಾದುವುಗಳನ್ನು ಸಹಿಸಿಕೊಳ್ಳಬೇಕು. ಸಮಾಜವು ವರ್ಗೀಕರಿಸಲಾಗದವರನ್ನು ಅನೇಕ ಬಾರಿ ಅರ್ಥಮಾಡಿಕೊಳ್ಳುವುದಿಲ್ಲ. ಆದರೂ ಈ ಏಕಾಂತ ಪಯಣ ಸೃಜನಾತ್ಮಕವಾಗುತ್ತದೆ. ಆಸ್ಟ್ರೀಯಾದ ಕವಿ ರೈನರ್ ಮರಿಯಾ ರಿಲ್ಕೆ ಹೇಳಿದಂತೆ, ʼನಿಜವಾದ ಪಯಣವೆಂದರೆ ಅಂತರಂಗದ ಪಯಣʼ ಈ ಅಂತರಂಗದ ಪಯಣವೇ ಹೊಸ ಆಲೋಚನೆಗಳು, ಹೊಸ ಸಂಸ್ಕೃತಿಗಳು, ಹೊಸ ಕಲೆಗಳನ್ನು ಹುಟ್ಟಿಸುತ್ತದೆ.
ಅಮೆರಿಕದ ತತ್ವಶಾಸ್ತ್ರಜ್ಞ ಹಾಗೂ ಪ್ರಬಂಧಕಾರ ಹೆನ್ರಿ ಡೇವಿಡ್ ಥೊರೋ ಹೇಳಿದಂತೆ, ʼಒಬ್ಬ ಮನುಷ್ಯ ತನ್ನ ಸಹಯಾತ್ರಿಗಳಿಗಿಂತ ವೇಗದಲ್ಲಿ ಹಿಂದೆ ಬಿದ್ದಿದ್ದಾನೆ ಎಂದರೆ ಅವನು ಬೇರೆ ವಾದ್ಯವನ್ನು ಆಲಿಸುತ್ತಿದ್ದಾನೆ.ʼ ಅಸಾಂಪ್ರದಾಯಿಕ ಜೀವನವೆಂದರೆ ಆ ಬೇರೆ ವಾದ್ಯದ ನಾದಕ್ಕೆ ನಡೆದು ಹೋಗುವ ಧೈರ್ಯ.
ಅಂತಿಮವಾಗಿ, ಅಸಾಂಪ್ರದಾಯಿಕ ಜೀವನವೆಂದರೆ ಪೂರ್ಣವಾಗಿ ಬದುಕುವ ಕಲೆ. ಅದು ಸಮಾಜದ ಕಣ್ಣುಗಳಿಂದ ಮಾತ್ರವಲ್ಲ, ಅಂತರಂಗದ ದೃಷ್ಟಿಯಿಂದ ನೋಡುವ ಕೌಶಲ್ಯ. ದೊಡ್ಡ ಸಾಹಸವು ದೂರದ ಲೋಕಗಳಲ್ಲಿ ಇಲ್ಲ. ನಮ್ಮೊಳಗಿನ ಅನ್ವೇಷಿಸದ ಅರಣ್ಯಗಳಲ್ಲಿ ಅಡಗಿದೆ. ಇಂತಹ ಜೀವನವು ಅಸ್ಥಿರವೂ ಆಗಬಹುದು, ಏಕಾಂಗಿತನದಿಂದ ಕೂಡಿರಬಹುದು. ಆದರೆ ಅದರಲ್ಲಿ ಒಂದು ವಿಶಿಷ್ಟ ವಿಲಾಸವಿದೆ. ಅದು ನಾವು ಜೀವನವನ್ನು ನಕಲಿಸಿಲ್ಲ, ಸೃಜಿಸಿದ್ದೇವೆ ಎಂಬ ಅರಿವಿನಿಂದ ಹುಟ್ಟುವ ಸಂತೋಷ. ಇಂತಹವರು ಕೇವಲ ಸಂಸ್ಕೃತಿಯಲ್ಲಿ ಪಾಲ್ಗೊಳ್ಳುವವರಾಗಿರುವುದಿಲ್ಲ; ಸಂಸ್ಕೃತಿಯ ಶಿಲ್ಪಿಗಳಾಗಿರುತ್ತಾರೆ! ಸಮಾಜದ/ನಾಗರಿಕತೆಯ ವಿಕಸನ ಇಂತಹವರಿಂದಲೇ ಆಗುತ್ತದೆ ಎಂಬುದು ಕೆಲವರ ಅಂಬೋಣ.
ಚಿತ್ರ : Vincent van Gogh

ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ




