ವಿಶ್ವದ ಹತ್ತು ಪ್ರಮುಖ ಲಾಭದಾಯಕ ಉದ್ಯಮಗಳಲ್ಲಿ ಗಡಿಗಳ ಹಂಗಿಲ್ಲದೆ ಅಪಾರ ಜನಪ್ರಿಯತೆಗಳಿಸಿರುವ ಕ್ರೀಡಾ ಉದ್ಯಮವು ಒಂದು ಎಂದು ಹೇಳಲಾಗುತ್ತದೆ. ಕ್ರೀಡಾಳುಗಳಿಗಿರುವ ಜನಪ್ರಿಯತೆ, ಹೆಚ್ಚಿನ ಸಂಖ್ಯೆಯಲ್ಲಿರುವ ಅಭಿಮಾನಿಗಳು, ಅಪಾರ ಮನ್ನಣೆ, ಕ್ರೀಡೆಗಳಿಗೆ ಹಾಗು ಕ್ರೀಡಾಳುಗಳಿಗೆ ದೊರಕುವ ಪ್ರಾಯೋಜಕತ್ವ, ಪ್ರತೀ ಕ್ರೀಡೆಗೂ ಇರುವ ಅದರದ್ದೇ ಆದ ವೀಕ್ಷಕವರ್ಗ ಕ್ರೀಡೆಗಳನ್ನು ಇತರ ಉದ್ಯಮಗಳಿಗಿಂತ ಭಿನ್ನ ಸ್ಥಾನದಲ್ಲಿರಿಸಿದೆ.
ಅದು 2022, ಲಂಡನ್‌ನಲ್ಲಿ ನಡೆಯುತ್ತಿದ್ದ ಲೇವರ್ ಕಪ್ ಟೆನಿಸ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಟೆನ್ನಿಸ್ಸಿನ ದಂತಕಥೆ ರೋಜರ್ ಫೆಡರರ್ ಅವರ ಹಣಾಹಣಿಯನ್ನು ವೀಕ್ಷಿಸಲು ಜಗತ್ತಿನಾದ್ಯಂತ ಅವರ ಅಭಿಮಾನಿಗಳು ತುದಿಕಾಲಿನಲ್ಲಿ ಕಾಯುತ್ತಿದ್ದ ಕ್ಷಣ. ಆದರೆ ರೋಜರ್ ಫೆಡರರ್ ಅವರ ಆಗಮನಕ್ಕೂ ಮುನ್ನ ಆಗಂತುಕನೊಬ್ಬ ಟೆನ್ನಿಸ್ ಕೋರ್ಟ್‌ಗೆ ನುಗ್ಗಿ ತನ್ನ ಕೈಗೆ ಬೆಂಕಿ ಹಚ್ಚಿಕೊಳ್ಳುತ್ತಾನೆ. ಕೆಲ ಕ್ಷಣಗಳ ಕಾಲ ಪಂದ್ಯ ಸ್ಥಗಿತಗೊಳ್ಳಲೂ ಕಾರಣನಾಗುತ್ತಾನೆ. ಹೀಗೆ ರೋಚಕ ಪಂದ್ಯಾಟದ ವೇಳೆಯಲ್ಲಿ ಆಕಸ್ಮಿಕವಾಗಿ ನುಗ್ಗಿದಾತ ಪರಿಸರ ಸಂಘಟನೆಗಳ ಕಾರ್ಯಕರ್ತ. ಇದು ಯುಕೆಯಲ್ಲಿ ಪ್ರೈವೇಟ್ ಜೆಟ್‌ಗಳ ಬಳಕೆಯ ವಿರುದ್ಧ ಆತ ಮಾಡಿದ ಪರಿಸರಪರ ಪ್ರತಿಭಟನೆಯಾಗಿತ್ತು.
ಈ ಘಟನೆಯ ನಂತರ, ಫ್ರೆಂಚ್ ಓಪನ್‌ನ ಸೆಮಿ-ಫೈನಲ್ ಪಂದ್ಯದಲ್ಲಿ ಒಬ್ಬ ಅಕ್ಟಿವಿಸ್ಟ್, ಅಂಕಣದ ನೆಟ್ ಬಳಿಯಲ್ಲಿ ಕುಳಿತು “1028 ದಿನಗಳು ಉಳಿದಿವೆ” ಎಂದು ಬರೆದ ಟಿ-ಶರ್ಟ್ ಧರಿಸಿ ಎಲ್ಲರ ಗಮನ ಸೆಳೆಯುತ್ತಾನೆ. ಈ ಸಂಖ್ಯೆ ಇಂಟರ್ ಗವರ್ನ್‌ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (IPCC) 2023 ವರದಿಯನ್ನು ಅನುಷ್ಠಾನಗೊಳಿಸಲು ನೀಡಲಾಗಿದ್ದ ಸಮಯ ಮಿತಿಯನ್ನು ಸೂಚಿಸುತ್ತಿತ್ತು. 2025 ರ ವೇಳೆಗೆ ಹಸಿರುಮನೆ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದಾದ 39 ದಿನಗಳ ನಂತರ, ಮತ್ತೆ ಆಕ್ಟಿವಿಸ್ಟ್‌ಗಳ ಗುಂಪೊಂದು ಫ್ರಾನ್ಸ್‌ನಲ್ಲಿ ಸೈಕಲಿಂಗ್ ಸ್ಫರ್ಧೆ ನಡೆಯುತ್ತಿದ್ದ ಸ್ಥಳದಲ್ಲಿ ಸ್ಪರ್ಧೆಗೆ ಅಡ್ಡಿಪಡಿಸಿ, ‘ಕೇವಲ 989 ದಿನಗಳು ಉಳಿದಿವೆ’ ಎಂದು ಬರೆದ ಶರ್ಟ್‌ಗಳನ್ನು ಪ್ರದರ್ಶಿಸಿದರು. ಈ ಮೂಲಕ ಜಾಗತಿಕ ತಾಪಮಾನವನ್ನು ಇಳಿಸುವ ನಿಟ್ಟಿನಲ್ಲಿ ಐಪಿಸಿಸಿ ವರದಿ ಅಂಶಗಳು ನೀಡಿರುವ ಕಾಲಮಿತಿಯ ಗಡಿ 2025ಕ್ಕೆ ಬಾಕಿ ಇರುವ ದಿನಗಳನ್ನು ಪರಿಸರ ಕಾರ್ಯಕರ್ತರು ಮತ್ತೆ ನೆನಪಿಸಿದರು.
ಈ ಎಲ್ಲಾ ಉದಾಹರಣೆಗಳು ಹವಾಮಾನ ಬದಲಾವಣೆ ಮತ್ತು ಪರಿಸರ ಪರ ಹೋರಾಟಗಾರರು ಕ್ರೀಡೆಗಳಿಗೆ ಇರುವ ಜಾಗತಿಕ ಮಟ್ಟದ ಅಸಂಖ್ಯಾತ ಪ್ರೇಕ್ಷಕರ ಗಮನವನ್ನು ಹವಾಮಾನ ಬದಲಾವಣೆಯತ್ತ ಸೆಳೆಯುವ ಅವಕಾಶಗಳನ್ನು ಸಾಧಿಸುವ ಛಾತಿಯನ್ನು ತೋರಿಸುತ್ತವೆ. ಆದರೆ ಹವಾಮಾನ ಕಾರ್ಯಕರ್ತರು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರೀಡೆಯನ್ನು ಬಳಸಿದ್ದರೂ, ಕ್ರೀಡಾಪಟುಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹವಾಮಾನ ಬದಲಾವಣೆಯ ಕುರಿತಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸದಿರುವುದು ಖೇದಕರ.
ಕ್ರೀಡಾ ಉದ್ಯಮದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ
ವಿಶ್ವದ ಹತ್ತು ಪ್ರಮುಖ ಲಾಭದಾಯಕ ಉದ್ಯಮಗಳಲ್ಲಿ ಗಡಿಗಳ ಹಂಗಿಲ್ಲದೆ ಅಪಾರ ಜನಪ್ರಿಯತೆಗಳಿಸಿರುವ ಕ್ರೀಡಾ ಉದ್ಯಮವು ಒಂದು ಎಂದು ಹೇಳಲಾಗುತ್ತದೆ. ಕ್ರೀಡಾಳುಗಳಿಗಿರುವ ಜನಪ್ರಿಯತೆ, ಹೆಚ್ಚಿನ ಸಂಖ್ಯೆಯಲ್ಲಿರುವ ಅಭಿಮಾನಿಗಳು, ಅಪಾರ ಮನ್ನಣೆ, ಕ್ರೀಡೆಗಳಿಗೆ ಹಾಗು ಕ್ರೀಡಾಳುಗಳಿಗೆ ದೊರಕುವ ಪ್ರಾಯೋಜಕತ್ವ, ಪ್ರತೀ ಕ್ರೀಡೆಗೂ ಇರುವ ಅದರದ್ದೇ ಆದ ವೀಕ್ಷಕವರ್ಗ ಕ್ರೀಡೆಗಳನ್ನು ಇತರ ಉದ್ಯಮಗಳಿಗಿಂತ ಭಿನ್ನ ಸ್ಥಾನದಲ್ಲಿರಿಸಿದೆ. ಕೇವಲ ಫುಟ್‌ಬಾಲ್ ಒಂದೇ ಅಂದಾಜು ಐದು ಬಿಲಿಯನ್ ಅಭಿಮಾನಿಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಆದರೆ ಹವಾಮಾನ ಬದಲಾವಣೆಯಿಂದಾಗಿ ಕ್ರೀಡಾ ಸೌಲಭ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಮೂಲ ಸೌಕರ್ಯದ ವೆಚ್ಚಗಳು ಹೆಚ್ಚಾಗುತ್ತಿವೆ. ಹಿಮದ ಮೇಲೆ ನಡೆಸಬೇಕಿದ್ದ ಪಂದ್ಯಗಳು ಕೃತಕ ಹಿಮ ಉತ್ಪಾದನೆಯ ಮೇಲೆ ಅವಲಂಬಿಸುವಂತಾಗುತ್ತಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗುತ್ತಿದೆ. ಹವಾಮಾನ ಬದಲಾವಣೆಯು ಕ್ರೀಡಾಕೂಟಗಳು ಮತ್ತು ವೇಳಾಪಟ್ಟಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ, ಇದು ಕ್ರೀಡಾಪಟುಗಳ ತರಬೇತಿ, ಅಭ್ಯಾಸ ಮತ್ತು ಸ್ಪರ್ಧೆಯ ಮೇಲೆಯೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಹೆಚ್ಚುತ್ತಿರುವ ತಾಪಮಾನವು ಕ್ರೀಡಾಪಟುಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆ ಎಂದು ಹೆಸರು ಗಳಿಸಿರುವ, 2.5 ಬಿಲಿಯನ್ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟನ್ನು ಅತಿ ಹೆಚ್ಚಿನ ತಾಪಮಾನ ಇರುವ ಸಮಯದಲ್ಲೂ ಆಡಲಾಗುತ್ತಿದೆ. ಇದು ಆಟಗಾರರು ಮತ್ತು ಅಭಿಮಾನಿಗಳು ಇಬ್ಬರನ್ನೂ ಹೆಚ್ಚು ಅಪಾಯಕ್ಕೆ ಸಿಲುಕಿಸುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಶುಭ್‌ಮನ್ ಗಿಲ್, ಇದರ ಬಿಸಿಯನ್ನು ಅನುಭವಿಸಬೇಕಾಯಿತು ಮತ್ತು ಗಿಲ್ ಕೆಲವು ಇನ್ನಿಂಗ್ಸ್‌ಗಳಿಂದ ಹೊರಗುಳಿಯಬೇಕಾಯಿತು.
ರದ್ದಾಗುತ್ತಿರುವ ಮೊಮೆಂಟಮ್ ಕ್ಯಾಂಪ್
ಒಲಿಂಪಿಕ್ ಕ್ರೀಡಾಕೂಟದ ವಿಜೇತರು, ವಿಶ್ವಕಪ್ ಚಾಂಪಿಯನ್‌ಗಳು ಮತ್ತು ಯುವ ಕ್ರೀಡಾ ಆಸಕ್ತರು, ಪ್ರತಿಭಾನ್ವಿತರನ್ನು ಒಂದುಗೂಡಿಸುವ ಸ್ಥಳ “ಮೊಮೆಂಟಮ್ ಕ್ಯಾಂಪ್”. ಇದು ಮುಖ್ಯವಾಗಿ ಅಮೆರಿಕ ಮತ್ತು ಕೆನಡಾದಲ್ಲಿ ಯುವಕರಿಗೆ ಮತ್ತು ಮಕ್ಕಳಿಗೆ ಹಲವು ಸಂಸ್ಥೆಗಳಿಂದ ನಡೆಸಲ್ಪಡುವ ಕ್ರೀಡೆ ಮತ್ತು ಆಟೋಟಗಳ ಶಿಬಿರಗಳ ಸರಣಿ. ಇಲ್ಲಿ ಹೆಚ್ಚಾಗಿ ಹಿಮದ ಮೇಲೆ ನಡೆಸುವ ಸಾಹಸ ಕ್ರೀಡೆಗಳ (ಸ್ಕೀಯಿಂಗ್ ಮತ್ತು ಸ್ನೋಬೋರ್ಡಿಂಗ್) ತರಬೇತಿಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಒಲಿಂಪಿಕ್ ಆಟಗಾರರು ಮತ್ತು ವಿಶ್ವಕಪ್ ಚಾಂಪಿಯನ್‌ಗಳು ಇಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಯುವ ಕ್ರೀಡಾಪಟುಗಳಲ್ಲಿ ಕ್ರೀಡಾ ಪ್ರೀತಿಯನ್ನು ಅರಳಿಸಲು, ಖ್ಯಾತ ಆಟಗಾರರೊಂದಿಗೆ ಬೆರೆಯುವ, ಆರಂಭದಿಂದ ಒಲಿಂಪಿಕ್‌ವರೆಗೆ ಅವರ ಪ್ರಯಾಣದ ಅನುಭವವನ್ನು ಹಂಚಿಕೊಳ್ಳುವ, ಅವರಿಂದ ಪ್ರೇರೇಪಣೆ ಪಡೆಯುತ್ತ, ತಾವು ಒಲಿಂಪಿಕ್ ಅಂಗಣಕ್ಕೆ ಕಾಲಿಡಬೇಕು ಎನ್ನುವ ಕನಸು ಹುಟ್ಟಲು ಈ ಶಿಬಿರ ಬೇಸ್ ಕ್ಯಾಂಪ್ ಇದ್ದಂತೆ.
ಆದರೆ ಹಿಮನದಿ ವೇಗವಾಗಿ ಕರಗುತ್ತಿದ್ದಂತೆ, ಕೆನಡಾ ದೇಶದಲ್ಲಿ ನಡೆಸಲಾಗುತ್ತಿದ್ದ ಹಿಮತರಬೇತಿ ಕಣ್ಮರೆಯಾಯಿತು. ಈ ಸಮಯದಲ್ಲಿ ಕಾರ್ಯನಿರ್ವಹಿಸುವುದು ಸುರಕ್ಷಿತವಲ್ಲ ಎಂದು ಭಾವಿಸಿ ಶಿಬಿರದ ಆಯೋಜಕರು ಶಿಬಿರಗಳನ್ನು ರದ್ದುಗೊಳಿಸಿದರು. ಉತ್ಸಾಹಿ ಮಕ್ಕಳನ್ನು ಪ್ರಸಿದ್ಧ ಕ್ರೀಡಾಪಟುಗಳೊಂದಿಗೆ ಬೆರೆಯುವ ಅವಕಾಶ ಕಲ್ಪಿಸುವ, ಮಾರ್ಗದರ್ಶನ ಒದಗಿಸುವ ಶಿಬಿರಗಳು ಕಣ್ಮರೆಯಾದವು. ಹವಾಮಾನ ಬದಲಾವಣೆಯು ಹಿಮದಲ್ಲಿ ನಡೆಸುವ ಆಟೋಟಗಳಾದ ಸ್ನೋಬೋರ್ಡಿಂಗ್‌ನಂತಹ ಚಳಿಗಾಲದ ಕ್ರೀಡೆಗಳ ಭವಿಷ್ಯವನ್ನುಆತಂಕಕ್ಕೆ ಒಡ್ಡಿತು. ಹಿಮ ಕರಗುವಿಕೆಯಿಂದ ಉಂಟಾಗುವ ಸುರಕ್ಷತಾ ಸಮಸ್ಯೆಗಳು ಕೆನಡಾದಲ್ಲಿ ಕ್ಯಾಂಪ್ ರದ್ದುಗೊಂಡು ಈ ಕ್ರೀಡೆಗಳ ತರಬೇತಿಗೆ ಸ್ಥಳ ದೊರಕದಂತೆ ಮಾಡಿಬಿಟ್ಟಿತು.
ಅತಂತ್ರವಾಗಿರುವ ಹಿಮದಲ್ಲಿ ನಡೆಸಲಾಗುವ ಕ್ರೀಡೆಗಳ ಭವಿಷ್ಯ
2024 ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ (ಐಒಸಿ) ನಿಯೋಜಿಸಲ್ಪಟ್ಟ ಅಧ್ಯಯನವು ಚಳಿಗಾಲದಲ್ಲಿ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಲು ಅನುಕೂಲಕರ ಹವಾಮಾನವಿರುವ ಪ್ರದೇಶಗಳ ಸಂಖ್ಯೆ ವೇಗವಾಗಿ ಇಳಿಮುಖ ಕಾಣುತ್ತಿದೆ ಎಂಬ ಅಂಶವನ್ನು ಕಂಡುಕೊಂಡಿದೆ. ತಾಪಮಾನ ಏರಿಕೆಯಿಂದಾಗಿ 2050ರ ವೇಳೆಗೆ ಈ ಹಿಂದೆ ಒಲಿಂಪಿಕ್ ಆತಿಥ್ಯವನ್ನು ವಹಿಸಿಕೊಳ್ಳುತ್ತಿದ್ದ ಅತಿಥೇಯ ನಗರಗಳ ಪೈಕಿ ಅರ್ಧದಷ್ಟು ಮಾತ್ರ ಆತಿಥ್ಯ ವಹಿಸಲು ಸೂಕ್ತವಾಗಿರುತ್ತದೆ ಎಂಬ ಆತಂಕಕಾರಿ ಫಲಿತಾಂಶವನ್ನು ಅದು ಹೊರಹಾಕಿದೆ. ಇದರ ಪ್ರಕಾರ 2050ರ ಹೊತ್ತಿಗೆ, ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ 19 ಆತಿಥೇಯರಲ್ಲಿ ಹತ್ತು ದೇಶಗಳು ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ ಮತ್ತು ಸ್ವತಃ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಕ್ರೀಡಾಕೂಟಗಳ ಕಾರ್ಯಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಚಳಿಗಾಲದ ಒಲಿಂಪಿಕ್ಸ್ ಮತ್ತು ಹಿಮ ಕ್ರೀಡೆಗಳು ಹವಾಮಾನ ಬದಲಾವಣೆಯಿಂದ ಆತಂಕ ಎದುರಿಸುತ್ತಿರುವ ಕ್ರೀಡೆಗಳ ಪೈಕಿ ಮುಂಚೂಣಿಯಲ್ಲಿವೆ. ಹೆಚ್ಚಿನ ಹಿಮದಲ್ಲಿ ನಡೆಸಲಾಗುವ ಕ್ರೀಡೆಗಳನ್ನು ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದಾಗಿ ರದ್ದುಗೊಳಿಸಲಾಗಿದೆ ಅಥವಾ ಅವುಗಳನ್ನು ಆಯೋಜಿಸುವುದನ್ನು ಕಡಿಮೆ ಮಾಡಲಾಗಿದೆ. ಇದರೊಂದಿಗೆ ಅವು ಇನ್ನು ಮುಂದೆ ನಡೆಯುತ್ತವೆಯೇ ಎಂಬುದೇ ಪ್ರಶ್ನಾರ್ಥಕವಾಗಿದೆ.

ಹೀಗಾದರೆ ಚಳಿಗಾಲದ ಕ್ರೀಡೆಗಳ ಭವಿಷ್ಯ ಏನು ಎಂಬುದನ್ನು ಕುರಿತು ಆಲೋಚಿಸಿದರೆ ಅದು ಏರುತ್ತಿರುವ ತಾಪಮಾನ, ತೀವ್ರ ಹವಾಮಾನ ಬದಲಾವಣೆ ಮತ್ತು ಅಕಾಲಿಕ ಮಳೆಯತ್ತ ಬೊಟ್ಟು ಮಾಡುತ್ತದೆ. 2022 ಮತ್ತು 2023 ನಂತರದಲ್ಲಿ ಯುರೋಪ್‌ನ ವಿವಿಧ ಭಾಗಗಳಲ್ಲಿ ನಡೆಯಬೇಕಿದ್ದ ಎಫ್‌ಐಎಸ್ ಆಲ್ಪೈನ್ ಸ್ಕೀ ವಿಶ್ವಕಪ್ – ವಿಶ್ವದ ಅತ್ಯಂತ ಉನ್ನತ ಮಟ್ಟದ ಹಿಮದ ಓಟ ಸ್ಪರ್ಧೆಗಳ ಸರಣಿಯಲ್ಲಿ ನಿಗದಿಪಡಿಸಲಾಗಿದ್ದ ಎಂಟು ಸ್ಪರ್ಧೆಗಳ ಪೈಕಿ ಏಳು ಪಂದ್ಯಗಳನ್ನು ಹಿಮದ ಕೊರತೆ, ಅಕಾಲಿಕ ಮಳೆ ಮತ್ತು ಹಿಮಕರಗುವಿಕೆ ಮುಂತಾದ ಕಾರಣಗಳಿಂದ ರದ್ದುಗೊಳಿಸಲಾಯಿತು. ಅದೇ ರೀತಿ ಹವಾಮಾನ ಪರಿಣಾಮಗಳಿಂದಾಗಿ 2020 ರಲ್ಲಿ ಅಂದಾಜು 62,500 ಹವ್ಯಾಸಿ ಫುಟ್‌ಬಾಲ್ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂದು ದಿ ಕ್ಲೈಮೇಟ್ ಕೊಯಲಿಷನ್‌ನ ಸಂಶೋಧನೆ ಹೇಳುತ್ತದೆ. ಇದರೊಂದಿಗೆ ನಾಲ್ಕು ಕ್ರೀಡಾಂಗಣಗಳು ಹೆಚ್ಚು ಅಪಾಯಕಾರಿಯಾದ ಶಾಖದ ಮಟ್ಟವನ್ನು ತಲುಪಬಹುದು ಎಂದು ಅದು ಅಂದಾಜಿಸಿದೆ.
ಹವಾಮಾನ ಬದಲಾವಣೆ ಮತ್ತು ಕ್ರೀಡಾಳುಗಳ ಪ್ರತಿಕ್ರಿಯೆ
ವಿಶ್ವಾದ್ಯಂತ ತಾಪಮಾನ ಹೆಚ್ಚುತ್ತಿರುವಂತೆ, ಉತ್ತರ ಗೋಳಾರ್ಧದ ಬೇಸಿಗೆಯಲ್ಲಿ ವಿಶ್ವಕಪ್ ಮತ್ತು ಇತರ ಫುಟ್‌ಬಾಲ್ ಪಂದ್ಯಾವಳಿಗಳನ್ನು ನಡೆಸುವುದು ಆಟಗಾರರು ಮತ್ತು ಪ್ರೇಕ್ಷಕರಿಗೆ ಹೆಚ್ಚು ಅಪಾಯಕಾರಿಯಾಗುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆಟದಲ್ಲಿ ಹೆಚ್ಚುವರಿ ವಿರಾಮಗಳು, ಮೈದಾನ ತಂಪಾಗಿಸಲು ಹೆಚ್ಚಿನ ನೀರಿನ ಬಳಕೆ, ಹೆಚ್ಚು ಹೆಚ್ಚು ಹವಾನಿಯಂತ್ರಿತ ಸಾಧನಗಳ ಅಳವಡಿಕೆ ಸರ್ವೇ ಸಾಮಾನ್ಯವಾಗುತ್ತಿದೆ. ಇದರ ಹೊರತಾಗಿಯೂ ಕೆಲವು ಆಟಗಾರರು ಬಿಸಿಲಿನ ಝಳ ತಡೆಯಲು ಸಾಧ್ಯವಿಲ್ಲ ಮಧ್ಯಾಹ್ನದ ಪಂದ್ಯಾಟಗಳನ್ನು ರದ್ದುಗೊಳಿಸಿ ಎಂದು ಫಿಫಾವನ್ನು ಕೋರಿದ್ದಾರೆ.
ಆಸ್ಟ್ರಿಯನ್‌ನ ಹಿಮದ ಮೇಲಿನ ಪಂದ್ಯಾಟಗಳ ಪ್ರಮುಖ ಆಟಗಾರ ಯರ್ ಜೂಲಿಯನ್ ಶುಟರ್, ಅಂತರರಾಷ್ಟ್ರೀಯ ಸ್ಕೀ ಫೆಡರೇಶನ್ (FIS) ಗೆ ಬರೆದ ಒಪನ್ ಲೆಟರ್‌ನಲ್ಲಿ ಸಂಸ್ಥೆಯು ರದ್ದಾಗುತ್ತಿರುವ ಹಿಮ ಆಧಾರಿತ ಕ್ರೀಡೆಗಳ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ. ನಂತರದಲ್ಲಿ ಈ ಪತ್ರಕ್ಕೆ 450ಕ್ಕೂ ಹೆಚ್ಚು ಕ್ರೀಡಾಪಟುಗಳ ಸಹಿಹಾಕಿದ್ದಾರೆ.

ಇದರೊಂದಿಗೆ ಭಾರತದ ಸೈನಾ ನೆಹ್ವಾಲ್ ಮತ್ತು ಪಿಆರ್ ಶ್ರೀಜೇಶ್ ಸೇರಿದಂತೆ 85 ದೇಶಗಳ ಸುಮಾರು 350 ಒಲಿಂಪಿಕ್ ವಿಜೇತರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಪತ್ರ ಬರೆದು, ಹವಾಮಾನ ಕ್ರಮವನ್ನು ತಮ್ಮ ಪ್ರಮುಖ ಆದ್ಯತೆಯನ್ನಾಗಿ ಮಾಡುವಂತೆ ಒತ್ತಾಯಿಸಿದ್ದಾರೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿತಗೊಳಿಸುವುದು, ಆತಿಥೇಯ ನಗರಗಳಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವುದು, ಮಾಲಿನ್ಯಕಾರಕಗಳ ಬಳಕೆಯ ಕುರಿತಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸುವುದು ಮುಂತಾದವುಗಳಿಗೆ ಐಒಸಿಯಿಂದ ಬದ್ಧತೆಗಳನ್ನು ಈ ಪತ್ರವು ನಿರೀಕ್ಷಿಸಿದೆ.
***
ಕ್ರೀಡಾ ಉದ್ಯಮವು ಇಂದು ಹವಾಮಾನ ಬದಲಾವಣೆಯ ಸವಾಲುಗಳಿಗೆ ಹೊಂದಿಕೊಳ್ಳಲೇ ಬೇಕಾದ ಅನಿರ್ವಾಯ ಸೃಷ್ಟಿಯಾಗಿದೆ. ಒಲಿಂಪಿಕ್ ಅಥವಾ ಇನ್ನು ಯಾವುದೋ ಪಂದ್ಯಾಟಗಳು ಆರಂಭವಾಗುವ ಸಾಕಷ್ಟು ಮೊದಲೇ ಆ ಪ್ರದೇಶದ ಪರಿಸರಕ್ಕೆ ಅನುಗುಣವಾಗಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಯೋಜನೆಗಳನ್ನು ಸಂಘಟಕರು ಸರ್ಕಾರಗಳು, ಪರಿಸರ ಸಂಸ್ಥೆಗಳು ಮತ್ತು ಇತರೆ ಪಾಲುದಾರರ ಸಹಯೋಗದೊಂದಿಗೆ ರೂಪಿಸಬೇಕಿದೆ. ಹವಾಮಾನ ವೈಪರೀತ್ಯದ ಸ್ಥಿತಿಗಳನ್ನ ತಡೆಯಬಲ್ಲ ಮೂಲಸೌಕರ್ಯದ ವ್ಯವಸ್ಥೆ, ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯವಿರುವ ಸೌಕರ್ಯಗಳಲ್ಲಿ ಹೂಡಿಕೆ, ಪಂದ್ಯಾಟ ಆಯೋಜಿಸುವ ಸ್ಥಳದ ಹವಾಮಾನಕ್ಕೆ ಅನುಗುಣವಾಗಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವುದು ಇತ್ಯಾದಿಗಳನ್ನು ಇದು ಒಳಗೊಳ್ಳುತ್ತದೆ.
ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಕ್ರೀಡಾ ಉದ್ಯಮ ಹೆಚ್ಚಿನ ಪರಿಸರ ಪ್ರಜ್ಞೆ ಮತ್ತು ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯುನೈಟೆಡ್ ನೇಷನ್ಸ್ ಸ್ಪೋರ್ಟ್ಸ್ ಫಾರ್ ಕ್ಲೈಮೇಟ್ ಆಕ್ಷನ್ ಚೌಕಟ್ಟನ್ನು ಅಭಿವೃದ್ಧಿಪಡಿಸಿದೆ, 2030ರ ವೇಳೆಗೆ ಹೊರಸೂಸುವಿಕೆಯನ್ನು ಅರ್ಧಕ್ಕೆ ಇಳಿಸಲು ಮತ್ತು 2040 ರ ವೇಳೆಗೆ ನಿವ್ವಳ-ಶೂನ್ಯವನ್ನು ಸಾಧಿಸುವ ಗುರಿಯನ್ನು ಈ ಕ್ರಿಯಾ ಯೋಜನೆ ಹೊಂದಿದೆ. ಆಯೋಜಕರು ಮತ್ತು ಕ್ರೀಡಾಪಟುಗಳು ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಕಟಿಬದ್ದರಾಗಬೇಕಿದೆ.
ಕ್ರೀಡಾಪಟುಗಳನ್ನು ಅವರ ಅಭಿಮಾನಿಗಳು ಹೆಚ್ಚಾಗಿ ಮಾದರಿ ವ್ಯಕ್ತಿಗಳೆಂದು ಪರಿಗಣಿಸುತ್ತಾರೆ. ಹೀಗಾಗಿ ಸಮಾಜದಲ್ಲಿ ಅವರಿಗೆ ರೋಲ್-ಮಾಡೆಲ್ ಸ್ಥಾನಮಾನವಿದೆ. ಇದು ಅವರನ್ನು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಸಾಮಾಜಿಕ ಚಳವಳಿಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಬಹುದಾದರೂ, ವಿವಾದಾತ್ಮಕ ವಿಷಯಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯು ವೈಯಕ್ತಿಕ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಹೀಗಾಗಿ ಹವಾಮಾನ ಬದಲಾವಣೆ ಕ್ರೀಡಾಳುಗಳ ಕೆರಿಯರ್‌ನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದರೂ, ಈ ವಿಷಯದ ಬಗ್ಗೆ ನಾಯಕತ್ವವನ್ನು ವಹಿಸಿಕೊಳ್ಳಲು ಅಷ್ಟಾಗಿ ಮುಂದೆ ಬರುತ್ತಿಲ್ಲ. ಆದರೆ ಹವಾಮಾನ ಬದಲಾವಣೆ ಕ್ರೀಡಾಳುಗಳ ಕಾರ್ಯಕ್ಷೇತ್ರ ಮತ್ತು ಅಸ್ತಿತ್ವವನ್ನೇ ಬುಡಮೇಲು ಮಾಡುತ್ತಿರುವಾಗ ಈ ಮೌನ ತರವಲ್ಲ.

ಡಾ. ಶ್ರೀನಿಧಿ ಅಡಿಗ
ಸಾಮಾಜಿಕ ಮಾಧ್ಯಮ ಸಲಹೆಗಾರರು. ಬೆಂಗಳೂರಿನ ಐಸೆಕ್, ಐಐಎಚ್‌ಆರ್ ಹೆಸರಘಟ್ಟ, ಗ್ರಾಮ್ ಸಂಸ್ಥೆ ಮೈಸೂರು ಇಲ್ಲಿ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ನಲ್ಲಿ ಐಇಸಿ ಸಮಾಲೋಚಕಿಯಾಗಿದ್ದರು. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ವರದಿಗಾರ್ತಿಯಾಗಿಯೂ ಕೆಲಸ ಮಾಡಿದ್ದಾರೆ.




