ಕೃಷಿರಂಗ | ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಕರ್ಷಕ ಕೃಷಿ ಮೇಳ

Date:

ಈ ಸಾರಿಯ ಕೃಷಿಮೇಳದಲ್ಲಿ ಐದು ಹೊಸ ತಳಿಗಳಾದ ಹಳದಿ ಅರಿಶಿನ, ಕಪ್ಪು ಅರಿಶಿನ, ಸೂರ್ಯಕಾಂತಿ, ಮೇವಿನ ಜೋಳ ಮತ್ತು ಹರಳು ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೃಷಿ ಮಹಾಶಯ ವಿಜ್ಞಾನಿಯೆಂದು ಕರೆಯಬಹುದಾದ ಡಾ. ಲೆಸ್ಲಿ ಸಿ. ಕೋಲ್ಮನ್‍ರವರ ಕಾಲದಲ್ಲಿ 1930ಕ್ಕೂ ಹಿಂದೆ ಹೆಬ್ಬಾಳ ಕೃಷಿ ಕ್ಷೇತ್ರದಲ್ಲಿ ‘ಎಚ್ 1 ಹರಳು’ ತಳಿಯನ್ನು ಬಿಡುಗಡೆ ಮಾಡಲಾಗಿತ್ತು

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳವು ಇದೇ ನವೆಂಬರ್ 13ರಿಂದ 16ರವರೆಗೆ ನಾಲ್ಕು ದಿನಗಳ ಕಾಲ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯ ಕಾಯ್ದೆ 1963ರ ಪ್ರಕಾರ 1965ರಲ್ಲಿ ಕಾರ್ಯಾರಂಭ ಮಾಡಿದ ರಾಜ್ಯದ ಮೊಟ್ಟಮೊದಲ ಕೃಷಿ ವಿಶ್ವವಿದ್ಯಾಲಯವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಇತ್ತೀಚೆಗೆ 60 ವರ್ಷಗಳನ್ನು ಪೂರೈಸಿ ಅರ್ಥಪೂರ್ಣವಾಗಿ ‘ವಜ್ರ ಮಹೋತ್ಸವ’ವನ್ನು ಆಚರಿಸಿಕೊಂಡಿದೆ. 

ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀಮತಿ ಇಂದಿರಾ ಗಾಂಧಿಯವರಿಂದ ಜಿಕೆವಿಕೆಯ ಆವರಣದಲ್ಲಿ ಹಲವು ಕಟ್ಟಡಗಳ ಶಂಕುಸ್ಥಾಪನೆಯನ್ನು 1969ರಲ್ಲಿ ನೆರವೇರಿಸಲಾಯಿತು. ಅದರ ಒಟ್ಟು ವಿಸ್ತೀರ್ಣವು ಸುಮಾರು 1300 ಎಕರೆಗಳು. ಅಲ್ಲಿ ಕೃಷಿ ವಿಜ್ಞಾನ ಪದವಿಗಳ ಮೊದಲ ತಂಡದ ತರಗತಿಗಳು 1975ರಿಂದ ಆರಂಭವಾದವು. ಜಿಕೆವಿಕೆ ಆವರಣ ಕಾರ್ಯಾರಂಭ ಮಾಡಿದ ಸುವರ್ಣ ಮಹೋತ್ಸವದ ವರ್ಷವಿದು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದು ಅಂದಾಜಿನಂತೆ ಕಳೆದ ವರ್ಷ 34 ಲಕ್ಷಕ್ಕೂ ಅಧಿಕ ರೈತರು ಮತ್ತು ಸಾರ್ವಜನಿಕರು ಕೃಷಿ ಮೇಳಕ್ಕೆ ಭೇಟಿ ನೀಡಿದರು. ಕೃಷಿ ಮೇಳವೆಂದರೆ ರೈತರಿಗೊಂದು ವಾರ್ಷಿಕ ಕೃಷಿ ಹಬ್ಬದಂತಾಗಿದೆ.  ಅಲ್ಲಿ ವಿಶ್ವವಿದ್ಯಾಲಯ, ರಾಜ್ಯ ಸರ್ಕಾರದ ಅಭಿವೃದ್ಧಿ ಇಲಾಖೆಗಳು ಹಾಗೂ ಖಾಸಗಿ ಮಳಿಗೆಗಳು ಮತ್ತು ಬೆಳೆ ತಾಕುಗಳು ಎಲ್ಲರನ್ನೂ ತಮ್ಮತ್ತ ಸೆಳೆಯುತ್ತವೆ.

uas banglore 1536x807 1

ಸುಧಾರಿತ ಕೃಷಿ ಪದ್ದತಿಗಳು, ನೂತನ ತಳಿಗಳು, ಜೈವಿಕ ಹಾಗೂ ನವೀಕರಿಸಲ್ಪಡುವ ಇಂದನ, ಮಣ್ಣುರಹಿತ ಕೃಷಿ, ಔಷಧೀಯ ಮತ್ತು ಸುಗಂಧದ್ರವ್ಯ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ, ಸಮಗ್ರ ಬೇಸಾಯ ಪದ್ದತಿಗಳು, ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳು, ಸಿರಿಧಾನ್ಯಗಳು, ಕೀಟ ಹತೋಟಿ, ಪೋಷಕಾಂಶಗಳ ನಿರ್ವಹಣೆ, ಮಾರುಕಟ್ಟೆ ನೈಪುಣ್ಯತೆ, ಮಣ್ಣು ಪರೀಕ್ಷೆ, ಹನಿ ಮತ್ತು ತುಂತುರು ನೀರಾವರಿ, ಮಳೆ ನೀರಿನ ಕೊಯ್ಲು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಕೃಷಿ ಯಂತ್ರೋಪಕರಣಗಳು, ಪಶು ಸಂಗೋಪನೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ಕೃಷಿ ಪ್ರವಾಸೋಧ್ಯಮ, ರೈತರಿಗಾಗಿ ರೈತರಿಂದ ಚರ್ಚೆ ಹಾಗೂ ರೈತರಿಗೆ ತಜ್ಞರಿಂದ ಸಲಹೆಯಂತಹ ಹಲವು ಬಗೆಯ ಆಕರ್ಷಣೆಗಳು, ಪ್ರಾತ್ಯಕ್ಷಿಕೆಗಳು ಹಾಗೂ ಮಾಹಿತಿಯು ಕೃಷಿ ಮೇಳದಲ್ಲಿ ಲಭ್ಯ.

ಹೂ, ಕಾಯಿ, ತೆನೆಗಳಿಂದ ನಳನಳಿಸುತ್ತಿರುವ ತೊಗರಿ, ರಾಗಿ, ಸೂರ್ಯಕಾಂತಿ, ಹುಚ್ಚೆಳ್ಳು, ಸಿರಿಧಾನ್ಯ, ಏರೋಬಿಕ್ ಭತ್ತ, ಅವರೆ, ಮುಸುಕಿನ ಜೋಳ, ಹರಳು, ತರಕಾರಿ ಸೊಪ್ಪು, ಹೀಗೆ ಹಲವು ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆ ದೃಶ್ಯಗಳು ಬಹುಕಾಲ ಮನದಲ್ಲುಳಿಯುತ್ತವೆ. ಹಲವು ಬೆಳೆ ಪದ್ದತಿಗಳು ಅನ್ನದಾತರನ್ನು ಪ್ರೇರೇಪಿಸುತ್ತವೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭವಿರುತ್ತದೆ. ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುವ ವೇದಿಕೆ ಕಾರ್ಯಕ್ರಮಗಳು ನಾಲ್ಕೂ ದಿನಗಳು ಜರುಗಲಿವೆ.

Finger Millet 2

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹೆಗ್ಗಳಿಕೆ

ವಿದ್ಯಾಸಂಸ್ಥೆಗಳ ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 2024 ಮತ್ತು 2025ರ ಸಾಲಿನಲ್ಲಿ ವಿವಿಧ ವಿಭಾಗಗಳಲ್ಲಿ ತಲಾ ಮೂರು ಶ್ರೇಯಾಂಕ ಪಡೆದಿದೆ. ಅವೆಲ್ಲಾ ರಾಷ್ಟ್ರ ಮಟ್ಟದ ಶ್ರೇಯಾಂಕಗಳಾಗಿದ್ದು, 2025ರ ಸಾಲಿನಲ್ಲಿ ದೇಶದ ಅತ್ಯುತ್ತಮ 100 ವಿಶ್ವವಿದ್ಯಾಲಯಗಳ ಪೈಕಿ 95ನೇ ಶ್ರೇಯಾಂಕ, ಅತ್ಯುತ್ತಮ 40 ಕೃಷಿ ವಿಶ್ವವಿದ್ಯಾಲಯಗಳ ಪೈಕಿ 11ನೇ ಶ್ರೇಯಾಂಕ ಮತ್ತು ಅತ್ಯುತ್ತಮ 50 ರಾಜ್ಯ ವಿಶ್ವವಿದ್ಯಾಲಯಗಳ ಪೈಕಿ 37ನೇ ಶ್ರೇಯಾಂಕ ಪಡೆದಿದೆ. ಇಂತಹ ಸಾಧನೆಯು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹೆಗ್ಗಳಿಕೆಯಷ್ಟೇ ಅಲ್ಲದೆ ನಮ್ಮ ರಾಜ್ಯದ ಹೆಗ್ಗಳಿಕೆಯೂ ಹೌದು.

ಭಾರತೀಯ ಕೃಷಿ ಅನುಸಂದಾನ ಪರಿಷತ್ತು ನೀಡುವ ದೇಶದ ಅತ್ಯುನ್ನತ ಪ್ರಶಸ್ತಿಯಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರಶಸ್ತಿಯನ್ನು ಎರಡು ಸಾರಿ ಪಡೆದಿದೆ. ಇತ್ತಿಚೇಗೆ ನ್ಯಾಕ್ ಎ ಪ್ಲಸ್ (NAAC A+) ಗ್ರೇಡ್ ಪಡೆದಿದೆ. ಕೆಲ ವಿಜ್ಞಾನಿಗಳು ಅಮೆರಿಕದ ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದ ವಿಶ್ವದ ಪ್ರತಿಷ್ಟಿತ ಸಂಶೋಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟಿನಲ್ಲಿ ವಿದೇಶಿ ವಿಶ್ವವಿದ್ಯಾಲಯದ ಗುಣಮಟ್ಟವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹೊಂದಿದೆ.

ಪ್ರಸಿದ್ಧ ವ್ಯಕ್ತಿಗಳು

ಹಾಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರರವರು ಹೆಬ್ಬಾಳ ಮತ್ತು ಜಿಕೆವಿಕೆ ಆವರಣಗಳಲ್ಲಿ ಅಧ್ಯಯನ ಮಾಡಿದವರು. ಅವರೊಬ್ಬ ಅಥ್ಲೀಟ್ ಆಗಿದ್ದರು. ಅವರ ಹೆಸರಿನಲ್ಲಿ 100 ಮೀಟರ್ ಓಟದ ದಾಖಲೆ ಇಂದಿಗೂ ಇದೆ. ಮಾಜಿ ಕೃಷಿ ಸಚಿವರಾದ ದಿ. ಎನ್. ಚಿಕ್ಕೇಗೌಡ, ದಿ. ಬಿ. ಎಲ್. ಗೌಡ, ಸಂಸದರಾಗಿದ್ದ ದಿ. ಆರ್. ಧ್ರುವನಾರಾಯಣ, ಹೆಸರಾಂತ ಕೃಷಿ ವಿಜ್ಞಾನಿಗಳಾದ ಡಾ. ಎಂ. ಮಹಾದೇವಪ್ಪ, ಡಾ. ಜಿ.ಕೆ. ವೀರೇಶ್, ಡಾ. ಕೆ. ಕೃಷ್ಣಮೂರ್ತಿ, ಡಾ. ಬಿ.ಎಸ್. ರಾಮಪ್ಪ, ಡಾ. ಆರ್. ವಿ. ರಾಮಕೃಷ್ಣ, ಡಾ. ಆರ್. ದ್ವಾರಕಿನಾಥ್, ಡಿ. ಜಿ. ಬಸವನಗೌಡ ಮತ್ತಿತರರು ಕೃಷಿ ಕಾಲೇಜು ಮತ್ತು ವಿಶ್ವವಿದ್ಯಾಲಯ ರೂಪಿಸಿದ ವ್ಯಕ್ತಿಗಳು. 

ಕೃಷಿ ಮೇಳದ ಇತಿಹಾಸ

ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಬ್ರಿಟಿಷರು 1870ರಲ್ಲಿ ಕರ್ನಲ್ ಬೊದ್ದಾಮ್ ಅವರನ್ನು ಮೈಸೂರು ಸಂಸ್ಥಾನದ ಕೃಷಿ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಹಲವು ಜವಾಬ್ದಾರಿಗಳನ್ನು ಹೊರಿಸಿದರು. ಅವುಗಳಲ್ಲಿ 6ರಿಂದ 8 ತಿಂಗಳ ಕಾಲ ರಾಜ್ಯಾದ್ಯಂತ ಸಂಚರಿಸಿ ಕೃಷಿ ಮೇಳಗಳನ್ನು ಆಯೋಜಿಸಬೇಕು ಎಂಬ ಜವಾಬ್ದಾರಿಯೂ ಇತ್ತು. ತದನಂತರ, ಆರಂಭವಾದ ಲಾಲ್‍ಬಾಗ್ ಕೃಷಿ ಕ್ಷೇತ್ರ, ಹೆಬ್ಬಾಳ ಕೃಷಿ ಕ್ಷೇತ್ರ, ಮಂಡ್ಯದ ಇರ್ವಿನ್ ನಾಲಾ ಕೃಷಿ ಕ್ಷೇತ್ರ ಮುಂತಾದ ಕೃಷಿ ಕ್ಷೇತ್ರಗಳಲ್ಲಿ ಕೃಷಿ ಮೇಳಗಳು ನಿರಂತರವಾಗಿ ನಡೆದುಬಂದವು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಗಮಕ್ಕೆ ಕಾರಣವಾದ ಹೆಬ್ಬಾಳ ಕೃಷಿ ಕ್ಷೇತ್ರದಲ್ಲಿ 1906ರಿಂದ 2005ರವರೆಗೆ ಸುಮಾರು ಒಂದು ಶತಮಾನದ ಕಾಲ ಕೃಷಿ ಮೇಳ ನಡೆಯಿತು. ಈ ಮಧ್ಯೆ ಜಿಕೆವಿಕೆಯಲ್ಲಿ ಆಯೋಜಿಸಲಾದ ಬೃಹತ್ ಕೃಷಿ ಮೇಳಕ್ಕೆ ಹೆಬ್ಬಾಳ ಕೃಷಿ ಕ್ಷೇತ್ರವೂ 2005ರವರೆಗೆ ಜೊತೆಯಾಗುತ್ತಾ ಬಂತು.  

Maize 2

 ಹೊಸ ಬೆಳೆಗಳ ಬಿಡುಗಡೆ

ಈ ಸಾರಿಯ ಕೃಷಿಮೇಳದಲ್ಲಿ ಐದು ಹೊಸ ತಳಿಗಳಾದ ಹಳದಿ ಅರಿಶಿನ, ಕಪ್ಪು ಅರಿಶಿನ, ಸೂರ್ಯಕಾಂತಿ, ಮೇವಿನ ಜೋಳ ಮತ್ತು ಹರಳು ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೃಷಿ ಮಹಾಶಯ ವಿಜ್ಞಾನಿಯೆಂದು ಕರೆಯಬಹುದಾದ ಡಾ. ಲೆಸ್ಲಿ ಸಿ. ಕೋಲ್ಮನ್‍ರವರ ಕಾಲದಲ್ಲಿ 1930ಕ್ಕೂ ಹಿಂದೆ ಹೆಬ್ಬಾಳ ಕೃಷಿ ಕ್ಷೇತ್ರದಲ್ಲಿ ‘ಎಚ್ 1 ಹರಳು’ ತಳಿಯನ್ನು ಬಿಡುಗಡೆ ಮಾಡಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಕೃಷಿಯಲ್ಲಿ ಹೊಸ ಬೆಳೆಗಳ ಶೋಧನೆ ನಿತ್ಯ ನಿರಂತರ. ಕೃಷಿ ವಿವಿ ಆರಂಭವಾದ 1965ರಿಂದ 2025ರವರೆಗೆ ಬಿಡುಗಡೆ ಮಾಡಿದ ಎಲ್ಲಾ ತಳಿಗಳ ಮಾಹಿತಿಯ ಸಂಗ್ರಹಯೋಗ್ಯ ಪುಸ್ತಕವನ್ನು ಪ್ರಕಟಿಸಲಾಗಿದೆ.

ಸಮಗ್ರ ಬೇಸಾಯ ಪದ್ದತಿ

ಎರಡೂವರೆ ಎಕರೆಗಳ ವಿಸ್ತೀರ್ಣದಲ್ಲಿಯೂ ಹಲವು ರೀತಿಯ ಬೆಳೆಗಳನ್ನು ಬೆಳೆದು ರೈತ ಸ್ವಾವಲಂಬಿಯಾಗ ಬಹುದಾಗಿದೆ ಎಂಬ ಸಿದ್ದ ಮಾದರಿಯನ್ನು ವಿಶ್ವವಿದ್ಯಾಲಯವು ರೂಪಿಸಿದೆ. ಒಂದು ಬೆಳೆ ಕೈ ಕೊಟ್ಟರೂ ಉಳಿದ ಬೆಳೆಗಳು ರೈತನನ್ನು ಕಾಪಾಡುತ್ತವೆ ಎನ್ನುವುದು ಉತ್ತಮ ಸಲಹೆ. ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ, ದನ ಸಾಕಾಣಿಕೆ, ಜೇನು ಕೃಷಿ, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ, ಹಿಪ್ಪುನೇರಳೆ ಬೇಸಾಯ, ಸೋಲಾರ್ ವಿದ್ಯುತ್ ಉತ್ಪಾದನೆ, ಮಿಶ್ರ ಬೆಳೆಗಳ ಕೃಷಿ, ತರಕಾರಿ ಬೆಳೆ, ಹನಿ ನೀರಾವರಿ, ಮಳೆ ನೀರು ಕೊಯ್ಲು, ನೀರಿನ ಮರುಬಳಕೆಯಂತಹ ಹಲವು ಕೃಷಿ ಪದ್ದತಿಗಳು ಕನಿಷ್ಟ ಎರಡೂವರೆ ಎಕರೆ ವಿಸ್ತೀರ್ಣದಿಂದ ಹಿಡಿದು ವಿಶಾಲವಾದ ಕೃಷಿ ಜಮೀನಿನಲ್ಲೂ ಕೈಗೊಳ್ಳಬಹುದೆಂದು ‘ಸಮಗ್ರ ಬೇಸಾಯ ಪದ್ದತಿ’ (Integrated Farming Systems : IFS)ಯ ಪರಿಕಲ್ಪನೆಯು ಪ್ರಾಯೋಗಿಕವಾಗಿ ಯಶಸ್ವಿಯಾಗುತ್ತಿದೆ. ಈಗಾಗಲೇ ಈ ಪದ್ದತಿಯನ್ನು ಅಳವಡಿಸಿಕೊಂಡ ರೈತರು ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. ಕೃಷಿ ಕಾಯಕಕ್ಕೆ ಇದ್ದುದರಲ್ಲಿಯೇ ತಮ್ಮನ್ನು ತಾವು ಅರ್ಪಿಸಿಕೊಂಡು ಸುಖಪಡುತ್ತಿದ್ದಾರೆ.

ಮಣ್ಣು ರಹಿತ ಕೃಷಿ

ಜಲಕೃಷಿ (ಹೈಡ್ರೋಪೋನಿಕ್ಸ್) ಜೊತೆಗೆ ಹಸಿರು ಮನೆಗಳಲ್ಲಿ (ಪಾಲಿ ಹೌಸ್) ಮಣ್ಣು ರಹಿತ ಕೃಷಿಯನ್ನು ಕೈಗೊಳ್ಳಬಹುದಾಗಿದೆ. ಮಣ್ಣಿಲ್ಲದೆ ಕೋಕೋಪಿಟ್ ಮತ್ತು ಎರೆಹುಳ ಗೊಬ್ಬರ ಬಳಸಿ ಹಲವು ಸೊಪ್ಪು ತರಕಾರಿಗಳು, ಸೌತೆಕಾಯಿ, ಟೊಮೆಟೊ, ಔಷಧ ಬೆಳೆಗಳ ಬೇಸಾಯವನ್ನು ಮಾಡಬಹುದಾಗಿದೆ. ಅವು ಆರೋಗ್ಯಕರ ಆಹಾರಗಳಾಗಿರುತ್ತವೆ. ಈ ಪದ್ದತಿಯಲ್ಲಿ ಕೀಟಗಳ ಸುಲಭ ಹತೋಟಿ ಸಾಧ್ಯ. ಜಿಕೆವಿಕೆಯಲ್ಲಿ 2022ರಲ್ಲಿ ಆರಂಭಿಸಲಾಗಿರುವ ಇಂತಹ ಪ್ರಾತ್ಯಕ್ಷಿಕೆಯು ಅತ್ಯಾಕರ್ಷಕವಾಗಿದೆ. ವಿಶಾಲ ಮನೆಗಳಲ್ಲಿಯೂ ಕೂಡ ಇಂತಹ ಮಣ್ಣು ರಹಿತ ಕೃಷಿಯನ್ನು ಕೈಗೊಳ್ಳಬಹುದು.

Red gram 1

ಸಾವಯವ ಕೃಷಿ

ಸಾವಯವ ಕೃಷಿಗೆ ಒತ್ತು ನೀಡಲು ಜಿಕೆವಿಕೆಯಲ್ಲಿ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯನ್ನು 2008ರಲ್ಲಿ ಆರಂಭಿಸಲಾಗಿದೆ. ಸಾಂಪ್ರದಾಯಿಕ ಕೃಷಿಯನ್ನು ಮರು ಅಧ್ಯಯನ ಮಾಡಿ, ಸುಧಾರಣೆಗೊಳಿಸಿ ರೈತರಿಗೆ ಮತ್ತು ಸಾವಯವ ಕೃಷಿ ಉದ್ದಿಮೆದಾರರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ.  ಸರ್ಕಾರವು ಸಾವಯವ ಕೃಷಿ ನೀತಿ ಮತ್ತು ಯೋಜನೆಗಳನ್ನು ರೂಪಿಸಲು ಸಂಸ್ಥೆ ನೆರವಾಗುತ್ತಿದೆ. ಕೃಷಿ ಮೇಳದಲ್ಲಿ ರೈತರಿಗೆ ಸೂಕ್ತ ಸಲಹೆ ನೀಡಲಾಗುವುದು.

ಕೃಷಿ ಪ್ರಶಸ್ತಿ

ಕೃಷಿ ಮೇಳದಲ್ಲಿ 2025ರ ಪ್ರಶಸ್ತಿ ವಿಜೇತ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಕೋಲಾರ ತಾಲ್ಲೂಕಿನ ಮದನಹಳ್ಳಿಯ ರವಿಶಂಕರ್ ಎಂ. ಎನ್. ಅವರಿಗೆ ಎಚ್. ಡಿ. ದೇವೇಗೌಡ ಪ್ರಶಸ್ತಿ, ದೇವನಹಳ್ಳಿ ತಾಲ್ಲೂಕಿನ ಬೀಡಿಗಾನಹಳ್ಳಿಯ ಮಂಜುನಾಥ ಬಿ. ಆರ್.ರವರಿಗೆ ಡಾ. ಎಂ. ಎಚ್. ಮರಿಗೌಡ ಪ್ರಶಸ್ತಿ, ರಾಮನಗರ ತಾಲ್ಲೂಕಿನ ಲಕ್ಷೀಪುರದ ಎಲ್. ವಿ. ಶಿವರಾಜುರವರಿಗೆ ಕ್ಯಾನ್ ಬ್ಯಾಂಕ್ ರೈತ ಪ್ರಶಸ್ತಿ, ದೊಡ್ಡಬಳ್ಳಾಪುರ ತಾಲ್ಲೂಕು ಕೆಂಜಿಗನಹಳ್ಳಿಯ ಪದ್ಮಿನಿಯವರಿಗೆ ಕ್ಯಾನ್ ಬ್ಯಾಂಕ್ ರೈತ ಮಹಿಳೆ ಪ್ರಶಸ್ತಿ ಮತ್ತು ಹೆಗ್ಗಡದೇವನಕೋಟೆಯ ಎಚ್. ಎಲ್. ಗೋವಿಂದಪ್ಪನವರಿಗೆ ಡಾ. ಆರ್. ದ್ವಾರಕಿನಾಥ್ ಪ್ರಶಸ್ತಿ ನೀಡಲಾಗುವುದು.

ಜಿಲ್ಲಾ ಮಟ್ಟದ ಪ್ರಶಸ್ತಿಗೆ ಮಾಗಡಿ ತಾಲ್ಲೂಕು ಹಲಸಬೆಲೆಯ ಚಂದ್ರಯ್ಯ, ಚನ್ನಪಟ್ಟಣ ತಾಲ್ಲೂಕು ವಿಠಲೇನಹಳ್ಳಿಯ ಪೂರ್ಣಿಮಾ, ದೊಡ್ಡಬಳ್ಳಾಪುರ ತಾಲ್ಲೂಕು ನಾರಸಿಂಹನಹಳ್ಳಿಯ ಬಿ. ಶ್ರೀಕಾಂತ್, ದೇವನಹಳ್ಳಿ ತಾಲ್ಲೂಕು ಚೌಡಪ್ಪನಹಳ್ಳಿಯ ಅನುಷ ಆರ್., ಶ್ರೀನಿವಾಸಪುರ ತಾಲ್ಲೂಕು ತೆರ್ನಹಳ್ಳಿಯ ಮಂಜುನಾಥ ಟಿ. ಎಮ್., ಕೋಲಾರ ತಾಲ್ಲೂಕು ಸುಗಟೂರಿನ ಮಂಜುಳ ಎಸ್. ಎಂ., ಚಿಂತಾಮಣಿ ತಾಲ್ಲೂಕು ಬನಹಳ್ಳಿಯ ಬಿ. ನಂಜುಂಡಗೌಡ, ಚೇಳೂರು ತಾಲ್ಲೂಕು ಬೈರಪ್ಪನಹಳ್ಳಿಯ ಗೌತಮಿ, ತುರುವೇಕೆರೆ ತಾಲ್ಲೂಕು ಇಂದಿರಾನಗರದ ಉದಯಕುಮಾರ್ ಡಿ. ಆರ್., ತುರುವೇಕೆರೆ ತಾಲ್ಲೂಕು ಗೋಣಿ ತುಮಕೂರಿನ ಸುಧಾಮಣಿ, ಜಿ. ವಿ., ಆನೇಕಲ್ ತಾಲ್ಲೂಕು ಹಳೇಹಳ್ಳಿಯ ಸತೀಶ್ ಕುಮಾರ್ ಜಿ. ವಿ., ಯಲಹಂಕ ತಾಲ್ಲೂಕು ಚೊಕ್ಕನಹಳ್ಳಿಯ ಲಕ್ಷ್ಮಮ್ಮ ಭಾಜನರಾಗಲಿದ್ದಾರೆ. ತಾಲ್ಲೂಕು ಮಟ್ಟದ ಯುವ ರೈತ ಮತ್ತು ಯುವ ರೈತ ಮಹಿಳೆ ಪ್ರಶಸಿಯನ್ನು 74 ಮಂದಿಗೆ ನೀಡಲಾಗುತ್ತಿದೆ.

ಹತ್ತು ಹಲವು ಸಲಹೆ ಮತ್ತು ಮಾಹಿತಿ

ಹಳ್ಳಿಗಳಲ್ಲಿ ಉರುವಲಾಗಿ ಬಳಸುತ್ತಿದ್ದ ಮುಸುಕಿನ ಜೋಳದ ತೆನೆಯ ದಿಂಡಿನಿಂದ ಜೈವಿಕ ಗೊಬ್ಬರ ತಯಾರು ಮಾಡಲಾಗಿದೆ. ಕೃಷಿ ಮೇಳದಲ್ಲಿ ಪುಡಿ ರೂಪದ ಜೈವಿಕ ಗೊಬ್ಬರ ಮತ್ತು ದ್ರವ ರೂಪದ ಜೈವಿಕ ಗೊಬ್ಬರ ತಯಾರಿಕೆಯ ಕುರಿತು ವಿವರಿಸಲಾಗುತ್ತದೆ. 

ಹೊಂಗೆ, ಜತ್ರೋಪ (ಹುಚ್ಚು ಹರಳು), ಬೇವು, ಹಿಪ್ಪೆ, ಸುರಹೊನ್ನೆ, ನಾಗಸಂಪಿಗೆ, ಅಮೂರ, ಸಿಮರೂಬ ಬೀಜಗಳಿಂದ ಜೈವಿಕ ಇಂಧನಗಳಾದ ಜೈವಿಕ ಡೀಸೆಲ್, ಜೈವಿಕ ಎಥನಾಲ್, ಜೈವಿಕ ಬಯೋಗ್ಯಾಸ್ ತಯಾರಿಸುವ ತಂತ್ರಜ್ಞಾನವನ್ನು ಪ್ರಚಾರ ಮಾಡಲಾಗುತ್ತಿದೆ. ಜೈವಿಕ ಇಂಧನ ಮರಗಳನ್ನು ಬೆಳೆಸಲು ಉತ್ತೇಜಿಸಲಾಗುತ್ತಿದೆ. ವೈವಿಧ್ಯಮಯ ತಂತ್ರಜ್ಞಾನಗಳ ವಿವರಣೆ ಹಾಗೂ ಮೌಲ್ಡ್ ಬೋರ್ಡ್ ನೇಗಿಲು, ಕೂರಿಗೆ, ಔಷಧಿ ಸಿಂಪರಣೆ ಯಂತ್ರ, ಕಟಾವು ಯಂತ್ರ, ಕಳೆ ನಿರ್ಮೂಲನೆಯ ಸರಳ ಸಾಧನಗಳಂತಹ ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನವಿರುತ್ತದೆ.

Soilless Agriculture

‘ನಮ್ಮ ನಡಿಗೆ ಕೃಷಿ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜಿಕೆವಿಕೆಯ ಕೃಷಿ ತಾಕುಗಳ ಭೇಟಿಗೆ ರೈತರನ್ನು ಮತ್ತು ಸಾರ್ವಜನಿಕರನ್ನು ಕರೆದೊಯ್ಯುವ ವಿನೂತನ ಕಾರ್ಯಕ್ರಮವನ್ನು ಇತ್ತೀಚೆಗೆ ರೂಪಿಸಲಾಗಿದೆ. ವಿಶ್ವವಿದ್ಯಾಲಯವು ಆಯೋಜಿಸುತ್ತಿರುವ ರೈತ ಸಂತೆ ಯಶಸ್ವಿಯಾಗಿ ನಡೆಯುತ್ತಿದೆ. ಸಸ್ಯ ಸಂತೆ ಎಂಬ ಹೊಸ ಬಗೆಯ ಕಾರ್ಯಕ್ರಮವನ್ನೂ ಸಂಯೋಜಿಸಲಾಗುತ್ತಿದೆ.

ಅನಿವಾರ್ಯ ನಡೆಯಾಗಬೇಕಿರುವ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆ

ಅಮೆರಿಕನ್ನರ ‘ಲ್ಯಾಂಡ್ ಗ್ರಾಂಟ್’ ಪದ್ದತಿಯಂತೆ ಹೆಚ್ಚು ವಿಸ್ತೀರ್ಣದ ಭೂಮಿಯೊಂದಿಗೆ ಸ್ಥಾಪಿತವಾದ ಕೃಷಿ ವಿಶ್ವವಿದ್ಯಾಲಯಗಳು ಸಮಗ್ರ ಕೃಷಿ ಪದ್ದತಿಗಳ ಮೂಲಕ ‘ಉಳುವಾ ಯೋಗಿಯ’ ಯೋಗಕ್ಷೇಮಕ್ಕೆ ಸದಾ ತುಡಿಯುತ್ತಿವೆ.

WhatsApp Image 2025 11 01 at 2.54.46 PM
ಮಣ್ಣುರಹಿತ ಕೃಷಿಯ ಪಾಲಿಹೌಸ್ ನಲ್ಲಿ ಲೇಖಕರು

ಇದೀಗ ಪ್ರತಿ ಕೃಷಿ ವಿಶ್ವವಿದ್ಯಾಲಯವು ಕೃಷಿಗೆ ಸಂಬಂಧಿಸಿದ ಎಲ್ಲಾ ವಿಜ್ಞಾನಗಳಾದ “ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಕೃಷಿ, ತೋಟಗಾರಿಕೆ, ಅರಣ್ಯ ಶಾಸ್ತ್ರ, ಇತರ ಕೃಷಿ ಸಂಬಂಧಿತ ವಿಷಯಗಳು ಮತ್ತು ತರಬೇತಿ ಅಥವಾ ಶೈಕ್ಷಣಿಕ ಕೇಂದ್ರಗಳ ನಿರ್ವಹಣೆ; ಕ್ಷೇತ್ರ ವಿಸ್ತರಣಾ ಕೆಲಸಗಾರರಿಗೆ ತರಬೇತಿ ಕಾರ್ಯಕ್ರಮಗಳು ಮತ್ತು ಸಂಶೋಧನೆ ಮತ್ತು ಪ್ರಾಯೋಗಿಕ ಕೇಂದ್ರಗಳು ಹಾಗೂ ಅದರ ಪ್ರಾದೇಶಿಕ ಅಧಿಕಾರ ಕ್ಷೇತ್ರವ್ಯಾಪ್ತಿಯೊಳಗಿನ ವಿವಿಧ ಭಾಗಗಳಲ್ಲಿ ಅಗತ್ಯಪಡಿಸಬಹುದಾದ ಅಂಥ ಕೇಂದ್ರಗಳ ಸ್ಥಾಪನೆ, ಅಭಿವೃದ್ಧಿ ಮತ್ತು ಕಾರ್ಯಾಚರಣೆ ನಡೆಸುವ ಜವಾಬ್ದಾರಿ ಪ್ರತಿಯೊಂದು ವಿಶ್ವವಿದ್ಯಾಲಯದ್ದಾಗಿರತಕ್ಕದ್ದು” ಎಂದು ಕೃಷಿ ವಿಶ್ವವಿದ್ಯಾಲಯದ ಶಾಸನ 2009ರಲ್ಲಿರುವ ಪ್ರಕರಣ 4 (1)ಕ್ಕೆ ತಿದ್ದುಪಡಿ ತಂದು ಕರ್ನಾಟಕ ರಾಜ್ಯಪತ್ರದಲ್ಲಿ ಏಪ್ರಿಲ್ 24, 2025ರಂದು ಪ್ರಕಟಿಸಿರುವಂತೆ ಅನ್ನದಾತರ ಅನುಕೂಲಕ್ಕಾಗಿ, ಶೈಕ್ಷಣಿಕ ಪ್ರಗತಿಗಾಗಿ ಕೃಷಿ ವಿಜ್ಞಾನಗಳ   ಬಹುಶಿಸ್ತುಗಳನ್ನೊಳಗೊಂಡ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಮರುಸ್ಥಾಪನೆಯ ನಿರ್ಧಾರದ ಅನುಷ್ಟಾನಕ್ಕೆ ರಾಜ್ಯ ಸರ್ಕಾರವು ದಿಟ್ಟ ಹೆಜ್ಜೆಗಳನ್ನಿಡಬೇಕಿದೆ.

ಚಿತ್ರಕೃಪೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...