ರಾಯಭಾರ | ಮಂಡಲದೊಳಗೆ ಸಿಲುಕಿದ ಬಿಜೆಪಿ: ಮುಖವಾಡದ ರಾಜಕಾರಣ ಅರಿತ ಒಬಿಸಿ ಸಮುದಾಯ

Date:

ಹಿಂದುತ್ವ, ಉಗ್ರ  ಹಿಂದೂ ರಾಷ್ಟ್ರೀಯವಾದಗಳ ಜೊತೆಗೆ ಅಧಿಕಾರ ರಾಜಕಾರಣಕ್ಕೆ ಅಗತ್ಯವಿರುವಷ್ಟು ಒಬಿಸಿ ವರ್ಗಗಳ ಮತಗಳನ್ನು ಸೆಳೆಯುವಲ್ಲಿ ಕಳೆದ ಮೂರು ದಶಗಳ ಅವಧಿಯಲ್ಲಿ ಭಾರತೀಯ ಜನತಾ ಪಕ್ಷ ಸಾಕಷ್ಟು ಯಶಸ್ವಿಯಾಗಿದೆ. ಒಂದೆಡೆ ಪಕ್ಷದೊಳಗೆ ಒಬಿಸಿ ನಾಯಕರನ್ನು ಬೆಳೆಸುವುದು ಹಾಗೂ ಮತ್ತೊಂದೆಡೆ ಒಬಿಸಿ ಮತಗಳನ್ನು ಯಶಸ್ವಿಯಾಗಿ ಒಡೆದು ತನ್ನೊಡನೆ ಜೋಡಿಸುವಂತಹ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು – ಈ ಎರಡು ತಂತ್ರಗಳನ್ನು ಬಿಜೆಪಿ ಅಳವಡಿಸಿಕೊಂಡಿದೆ.

ದೇಶದ ರಾಜಕಾರಣ ಈಗ ಕಮಂಡಲ್‌‌ನಿಂದ ಮಂಡಲ್‌ನೆಡೆಗೆ ಚಲಿಸುತ್ತಿದೆ. ಎಂಭತ್ತರ ದಶಕದ ಉತ್ತರಾರ್ಧ ಹಾಗೂ ತೊಂಬತ್ತರ ದಶಕದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಂಡಲ – ಕಮಂಡಲಗಳು ಎದುರಾದಾಗ ಹಿಂದುತ್ವವಾದಿ ಕಮಂಡಲ ರಾಜಕಾರಣವು ಶ್ರೀರಾಮನ ಹೆಗಲನೇರಿ ರಾಜಕಾರಣದಲ್ಲಿ ಗೆದ್ದಿತ್ತು, ಬಲು ದೂರ ಸಾಗಿತ್ತು. ಮತ್ತೊಂದೆಡೆ, ರಾಜಕಾರಣದಲ್ಲಿ ಮಂಡಲ್‌ನ ಪ್ರಭಾವವು ಮಿಶ್ರಫಲಕ್ಕೆ ಕಾರಣವಾಯಿತಾದರು, ಆಯೋಗದ ಶಿಫಾರಸ್ಸಿನ ಅನ್ವಯ ಉದ್ಯೋಗ, ಶಿಕ್ಷಣಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರೆತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಅಗತ್ಯವಿದ್ದ ಶಕ್ತಿ ರಾಷ್ಟ್ರಮಟ್ಟದಲ್ಲಿ ದೊರೆಯಿತು. ದೇಶದ ಸಾಮಾಜಿಕ ವಿನ್ಯಾಸದಲ್ಲಿ ದೂರಗಾಮಿ ಪರಿಣಾಮಗಳಿಗೆ ಕಾರಣವಾಯಿತು.

ಬಹುಶಃ ಹಿಂದುತ್ವದ ರಾಜಕಾರಣದೊಂದಿಗೆ ಮುಖಾಮುಖಿಯಾಗದಿದ್ದರೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಂಡಲ್‌ ರಾಜಕಾರಣ ಇನ್ನಷ್ಟು ಹೆಚ್ಚಿನ ಸತ್ವವನ್ನು ಪಡೆಯುತ್ತಿತ್ತೇನೋ. ಆದರೆ, ಒಬಿಸಿ ಮತಗಣಿತದ ಮೇಲೆಯೇ ರಾಜಕಾರಣ ಮಾಡುತ್ತಾ ಬಂದಿರುವ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯ ಜನತಾ ದಳ, ಜನತಾ ದಳ (ಯು), ಲೋಕಜನಶಕ್ತಿ ಹಾಗೂ ಇತರೆ ಸಣ್ಣಪುಟ್ಟ ಸಂಖ್ಯೆಯ ಸ್ಥಳೀಯ ಪಕ್ಷಗಳು ಈವರೆಗೆ ಒಬಿಸಿ ಮತ ಕ್ರೋಡೀಕರಣ ಏಕತ್ರವಾಗಿ ಸಾಧ್ಯವಾಗದ ರೀತಿಯಲ್ಲಿ ಮಾಡಿವೆ. ಅಧಿಕಾರ ರಾಜಕಾರಣದ ತಕ್ಕಡಿಯಲ್ಲಿ ಇವುಗಳು ಮಿಶ್ರಫಲವನ್ನು ಅನುಭವಿಸುತ್ತಿವೆ. ಆದಾಗ್ಯೂ, ಹಿಂದುತ್ವದ ರಾಜಕಾರಣದೊಂದಿಗೆ ಅವಕಾಶವಾದಿ ರಾಜಕಾರಣವನ್ನು ನಡೆಸಿದ ಪರಿಣಾಮ ಜೆಡಿಯುನಂಥ ಪಕ್ಷ ಅಧಿಕಾರದ ಕೇಂದ್ರದಲ್ಲಿ ಉಳಿಯುವಲ್ಲಿ ಸಫಲವಾಗಿದೆ. ಇದೇ ವೇಳೆ, ಅತ್ತಿಂದಿತ್ತ ತಕ್ಕಡಿ ಹಾರುವ ತನ್ನ ಪ್ರವೃತ್ತಿಯಿಂದಾಗಿ ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಹಾಗೂ ಜಾತ್ಯತೀತ ಮತದಾರ ವರ್ಗದಲ್ಲಿ ಅನುಮಾನ, ಹೇವರಿಕೆಯನ್ನು ಸಹ ಹುಟ್ಟಿಸಿರುವುದು ಸುಳ್ಳಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿಂದುತ್ವ, ಉಗ್ರ  ಹಿಂದೂ ರಾಷ್ಟ್ರೀಯವಾದಗಳ ಜೊತೆಗೆ ಅಧಿಕಾರ ರಾಜಕಾರಣಕ್ಕೆ ಅಗತ್ಯವಿರುವಷ್ಟು ಒಬಿಸಿ ವರ್ಗಗಳ ಮತಗಳನ್ನು ಸೆಳೆಯುವಲ್ಲಿ ಕಳೆದ ಮೂರು ದಶಗಳ ಅವಧಿಯಲ್ಲಿ ಭಾರತೀಯ ಜನತಾ ಪಕ್ಷ ಸಾಕಷ್ಟು ಯಶಸ್ವಿಯಾಗಿದೆ. ಒಂದೆಡೆ ಪಕ್ಷದೊಳಗೆ ಒಬಿಸಿ ನಾಯಕರನ್ನು ಬೆಳೆಸುವುದು ಹಾಗೂ ಮತ್ತೊಂದೆಡೆ ಒಬಿಸಿ ಮತಗಳನ್ನು ಯಶಸ್ವಿಯಾಗಿ ಒಡೆದು ತನ್ನೊಡನೆ ಜೋಡಿಸುವಂತಹ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು – ಈ ಎರಡು ತಂತ್ರಗಳನ್ನು ಬಿಜೆಪಿ ಅಳವಡಿಸಿಕೊಂಡಿದೆ. ಒಬಿಸಿ ರಾಜಕಾರಣದ ಹಿಂದಿನ ಸಾಮಾಜಿಕ ಆಶಯಗಳನ್ನು ಆಶ್ರಯಿಸದೆ ಬದಲಿಗೆ, ವಾಸ್ತವದ ಅಧಿಕಾರ ರಾಜಕಾರಣಕ್ಕೆ ಅಗತ್ಯವಾದ ಮತಗಣಿತಕ್ಕೆ ಮಾತ್ರವೇ ಅದನ್ನು ಸೀಮಿತಗೊಳಿಸಿ ರಾಜಕೀಯ ಫಲ, ಶಕ್ತಿಯನ್ನು ಪಡೆಯುವಲ್ಲಿ ಪಕ್ಷವು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿದೆ. ಸಂವಿಧಾನವೇ ಆಗಲಿ, ಸಂತರು, ದಾರ್ಶನಿಕರ ತತ್ವಗಳೇ ಆಗಲಿ ತನಗೆ ಪೂರಕವಾಗಿ ಎಷ್ಟನ್ನು ಮಾತ್ರ ಹೆಕ್ಕಿ, ಉಳಿದೆಲ್ಲವನ್ನೂ ಮುಚ್ಚಿ ಜನರ ಮುಂದಿರಿಸಬೇಕು ಎನ್ನುವ ವಿಚಾರದಲ್ಲಿ ಬಿಜೆಪಿಯ ತಂತ್ರಗಾರಿಕೆಯು ವೈದಿಕಶಾಹಿಯು ಶತಮಾನಗಳ ಕಾಲ ನಡೆಸಿಕೊಂಡು ಬಂದ ತಂತ್ರಗಾರಿಕೆಯ ಸುಧಾರಿತ ರೂಪವಾಗಿದೆ.

ಹೀಗೆ ಸಂವಿಧಾನದ ಆಶಯ, ಪ್ರೇರಣೆಗಳಲ್ಲಿ ನೆಲೆ ಕಂಡುಕೊಳ್ಳಬೇಕಿದ್ದ ಒಬಿಸಿ ರಾಜಕಾರಣವನ್ನು ವಾಸ್ತವದ ಅಧಿಕಾರ ರಾಜಕಾರಣದ ತಕ್ಕಡಿಯಲ್ಲಿ ಪಳಗಿಸಿಕೊಂಡು ತನ್ನ ಪಕ್ಕ ಕೂರಿಸಿಕೊಳ್ಳುತ್ತಿದ್ದ ಬಿಜೆಪಿಗೆ ಇತ್ತೀಚಿನ ದಿನಗಳಲ್ಲಿ ಸವಾಲು ಎದುರಾಗಿದೆ. 2024ರ ಲೋಕಸಭಾ ಚುನಾವಣೆ ವೇಳೆ, ವಿಶೇಷವಾಗಿ ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಯ ಈ ರಣತಂತ್ರದ ಅಭೇದ್ಯತೆಯ ಬಗ್ಗೆ ದಟ್ಟ ಸಂದೇಹಗಳನ್ನು ಮೂಡಿಸಿತು. ಬಿಜೆಪಿ ನಾಯಕರು ಆಡತೊಡಗಿದ ಸಂವಿಧಾನ ಬದಲಾವಣೆಯ ಮಾತುಗಳಿಂದಾಗಿ ದಲಿತರ ಮತಗಳು ನಿಚ್ಚಳವಾಗಿ ಇಂಡಿಯಾ ಮೈತ್ರಿಯತ್ತ ಒಲಿಯುವುದರ ಜೊತೆಗೇ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಜಾತಿ ಗಣತಿಯ ಅಗತ್ಯತೆಯ ವಿಚಾರವನ್ನು ಚುನಾವಣೆಯುದ್ದಕ್ಕೂ ಪ್ರಸ್ತಾಪಿಸಿದ್ದು ಒಬಿಸಿ ವರ್ಗಗಳು ಇಂಡಿಯಾ ಮೈತ್ರಿಕೂಟದೆಡೆಗೆ ಒಲವು ತೋರಲು ಕಾರಣವಾಯಿತು. ಮಂಡಲ್‌ ವರದಿಯ ನಂತರ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಮೈತ್ರಿಕೂಟವೊಂದು ವಿಷಯಾಧಾರಿತವಾಗಿ (ಮುದ್ದೇ ಕಿ ಬಾತ್)‌  ಒಬಿಸಿಗಳ ಮತವನ್ನು ಯಾಚಿಸುತ್ತಿದೆ ಎನ್ನುವುದನ್ನು ಒಬಿಸಿ ಮತದಾರರು ಗುರುತಿಸುವಲ್ಲಿ ಸಫಲರಾದರು. ಈ ವಿಚಾರ ಈಗ ದೇಶದ ಒಬಿಸಿ ಮತವರ್ಗದಲ್ಲಿ ಮತ್ತಷ್ಟು ಆಳವಾಗಿ ಇಳಿದಿದೆ. ತಮ್ಮನ್ನು ಅಧಿಕಾರ ರಾಜಕಾರಣಕ್ಕೆ ಯಾರು ಬಳಸುತ್ತಿದ್ದಾರೆ, ವಿಷಯಾಧಾರಿತವಾಗಿ ತಮ್ಮ ಹಿತಾಸಕ್ತಿಯ ವಿಚಾರವನ್ನು ಯಾರು ಮಾತನಾಡುತ್ತಿದ್ದಾರೆ ಎನ್ನುವುದನ್ನು ಈ ವರ್ಗ ಸೂಕ್ಷ್ಮವಾಗಿ ಗಮನಿಸುತ್ತಿದೆ. ಇದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ರಾಹುಲ್

ಇದೇ ಕಾರಣಕ್ಕೆ ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಸ್ವರೂಪದಲ್ಲಿ ಜಾತಿ ಗಣತಿ ನಡೆಸಬೇಕೆನ್ನುವ ಕಾಂಗ್ರೆಸ್‌ನ ಅಸ್ತ್ರವನ್ನು ಅದರಿಂದ ಕಿತ್ತುಕೊಳ್ಳುವ ಸಲುವಾಗಿ ಬಿಜೆಪಿಯು ಮುಂದಿನ ದಿನಗಳಲ್ಲಿ ನಡೆಯಲಿರುವ ಜನಗಣತಿಯ ವೇಳೆಯೇ ಜಾತಿ ಗಣತಿಯನ್ನೂ ನಡೆಸುವುದಾಗಿ ಹೇಳಿದೆ. ಬಿಜೆಪಿಯ ಈ ನಡೆಯನ್ನು ಕೆಲ ಬಾಯಿಬಡುಕ ಮಾಧ್ಯಮಗಳು ಮಾಸ್ಟರ್‌ ಸ್ಟ್ರೋಕ್‌ ಎಂದು ಬಿಂಬಿಸುವ ಪ್ರಯತ್ನವನ್ನು ಮಾಡಿದವಾದರೂ ಬಿಜೆಪಿಯ ಈ ದಾಳ ಒಬಿಸಿ ಮತವರ್ಗದಲ್ಲಿ ವಿಶೇಷ ಪುಳಕವನ್ನೇನೂ ಹುಟ್ಟಿಸಿಲ್ಲ. ಇದಕ್ಕೆ ಕಾರಣ ಬಿಜೆಪಿಯ ಇತಿಹಾಸ. ಶೇ.50ಕ್ಕೂ ಹೆಚ್ಚು ಒಬಿಸಿ ಜನಸಂಖ್ಯೆ ಇರುವ ಮಧ್ಯಪ್ರದೇಶದಂತಹ ರಾಜ್ಯದಲ್ಲಿ ದಶಕಗಳ ಕಾಲ ಉಮಾ ಭಾರತಿ, ಶಿವರಾಜ್‌ ಸಿಂಗ್‌ ಚೌಹಾಣ್‌ ಹಾಗೂ ಪ್ರಸ್ತುತ ಮೋಹನ್‌ ಯಾದವ್‌ ರೀತಿಯ ಒಬಿಸಿ ನಾಯಕರ ಮುಖಗಳನ್ನು ಮುಂದಿರಿಸಿಕೊಂಡು ಅಧಿಕಾರ ಸವಿದರೂ, ಸುಪ್ರೀಂ ಕೋರ್ಟ್‌ ಆದೇಶದ ಹೊರತಾಗಿಯೂ ಈವರೆಗೆ ಒಬಿಸಿ ಮೀಸಲಾತಿಯನ್ನು ಬಿಜೆಪಿ ಜಾರಿ ಮಾಡಿಲ್ಲ. ಛತ್ತೀಸ್‌ಗಢದ ಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿನ ವಿಧಾನ ಮಂಡಲದ ಅನುಮೋದನೆಯ ಹೊರತಾಗಿಯೂ ರಾಜ್ಯಪಾಲರ ಕಚೇರಿಯನ್ನು ಬಳಸಿಕೊಂಡು ಒಬಿಸಿ ಮೀಸಲಾತಿ ಮಸೂದೆಗೆ ಅಂಕಿತ ನೀಡುವುದನ್ನು ತಡೆಹಿಡಿಯಲಾಗಿದೆ. ಇನ್ನು ಉತ್ತರಾಖಂಡ ರಾಜ್ಯದ ಉಗಮದ ಹಿಂದಿನ ಪ್ರೇರಣೆಗಳಲ್ಲಿ ಮಂಡಲ್‌ ವಿರೋಧಿ ಹೋರಾಟವೂ ಪ್ರಮುಖವಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಮೇಲ್ವರ್ಗಗಳು, ವಿಶೇಷವಾಗಿ ಬ್ರಾಹ್ಮಣ ಜಾತಿಯೇ ಪ್ರಬಲ ಸಮುದಾಯವಾಗಿರುವ ಉತ್ತರಾಖಂಡದಲ್ಲಿ ಬಿಜೆಪಿಯು ತನ್ನ ಹಿಡಿತವನ್ನು ಭದ್ರ ಪಡಿಸಿಕೊಂಡಿದ್ದೇ ಮೀಸಲಾತಿ ವಿರೋಧಿ ಹೋರಾಟದಿಂದ. ಇಂತಹ ಕಾರಣಗಳಿಂದಾಗಿ ಬಿಜೆಪಿ ತಮಗೆ ಒಬಿಸಿ ರಾಜಕಾರಣದ ಹೆಸರಿನಲ್ಲಿ ಮುಖವಾಡಗಳನ್ನು ನೀಡುತ್ತದೆಯೇ ಹೊರತು ಅದರ ನೈಜ ಆಶಯಗಳನ್ನು ಈಡೇರಿಸುವುದಿಲ್ಲ ಎನ್ನುವುದು ಒಬಿಸಿ ಮತವರ್ಗದ ಅರಿವಿಗೆ ಬರುತ್ತಿದೆ.      

uma bharathi shivaraj
ಉಮಾ ಭಾರತಿ, ಶಿವರಾಜ್‌ ಸಿಂಗ್‌ ಚೌಹಾಣ್‌

ಇದೇ ವೇಳೆ ಮತ್ತೊಂದೆಡೆ ಒಬಿಸಿ ವರ್ಗಗಳು ತಮ್ಮೆಡೆಗೆ ಲೋಕಸಭಾ ಚುನಾವಣೆ ವೇಳೆ ತೋರಿದ ವಿಶ್ವಾಸವನ್ನು ಭದ್ರವಾಗಿ ಕಾಪಾಡಿಕೊಳ್ಳುವ ಹೊಣೆಗಾರಿಕೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಕೂಟದ ಮೇಲಿದೆ. ಮುಂದಿನ ದಿನಗಳಲ್ಲಿ ದೇಶದ ರಾಜಕೀಯದಲ್ಲಿ ಅಧಿಕಾರದ ಕೇಂದ್ರಕ್ಕೆ ತಾನು ಚಲಿಸಬೇಕೆಂದರೆ ಅದಕ್ಕೆ ಒಬಿಸಿ ಸಮುದಾಯದ ಬೃಹತ್‌ ಬೆಂಬಲ ಅತ್ಯಗತ್ಯ ಎನ್ನುವುದನ್ನು ಇಂಡಿಯಾ ಮೈತ್ರಿಕೂಟ, ವಿಶೇಷವಾಗಿ ಕಾಂಗ್ರೆಸ್‌ ಅರಿತಿದೆ. ವಿಪರ್ಯಾಸವೆಂದರೆ, ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದುಳಿದವರ್ಗಗಳಿಂದ ಬಂದ ನೇತಾರರಿದ್ದಾರಾದರೂ ಕರ್ನಾಟಕವನ್ನು ಹೊರತುಪಡಿಸಿ ಬೇರೆಡೆ ಈ ವರ್ಗಗಳಲ್ಲಿ ಮಾಸ್‌ ಲೀಡರ್‌ಗಳ ಕೊರತೆಯಿದೆ. ಅಶೋಕ್‌ ಗೆಹ್ಲೋಟ್‌, ಭೂಪೇಶ್‌ ಬಘೇಲ್‌, ಸಚಿನ್‌ ಪೈಲಟ್‌ನಂತಹ ನಾಯಕರು ಸ್ಥಳೀಯವಾಗಿ ಹಿಡಿತ ಸಾಧಿಸಿರುವವರಾದರೂ ವ್ಯಾಪಕ ಜನಮನ್ನಣೆ ವಿಚಾರದಲ್ಲಿ ಹಿಂದಿದ್ದಾರೆ, ಪ್ರಸ್ತುತ ತಮ್ಮ ರಾಜ್ಯಗಳಲ್ಲಿ ವಿಪಕ್ಷಗಳಲ್ಲಿ ಕೂತಿದ್ದಾರೆ. ಹೀಗಾಗಿಯೇ, ಸದ್ಯದ ಮಟ್ಟಿಗೆ ಸಿದ್ದರಾಮಯ್ಯನವರು ದೇಶದ ರಾಜಕಾರಣದಲ್ಲಿ ಕಾಂಗ್ರೆಸ್‌ ಪಕ್ಷ ಹೊಂದಿರುವ ಅನುಭವಿ, ಜನಪ್ರಿಯ, ಜನಪರ ಒಬಿಸಿ ನಾಯಕ. ಸಿದ್ದರಾಮಯ್ಯನವರ ಸೆಕ್ಯುಲರ್‌ ಧೋರಣೆ, ಸಂವಿಧಾನಪರತೆ, ಜನಪರ ರಾಜಕಾರಣದ ಬಗ್ಗೆ ಮತ್ತೊಬ್ಬರು ಶಿಫಾರಸ್ಸು ಮಾಡಬೇಕಾದ ಅಗತ್ಯವಿಲ್ಲ. ದೇಶದ ರಾಜಕಾರಣವು ಒಬಿಸಿ ರಾಜಕಾರಣದ ಸುತ್ತ ಹರಳುಗಟ್ಟುತ್ತಿರುವ ಹೊತ್ತಿನಲ್ಲಿ ಯಾವ ರಾಜಕೀಯ ಪಕ್ಷದ ಹೈಕಮಾಂಡ್‌ ತನ್ನ ಬತ್ತಳಿಕೆಯಲ್ಲಿರುವ ಪ್ರಬಲ ಅಸ್ತ್ರವನ್ನು ತಾನೇ ಹೊರದಬ್ಬಿ ರಣರಂಗದಲ್ಲಿ ದಿವ್ಯಾಸ್ತ್ರದ ಮಂತ್ರವನ್ನು ಮರೆತು ವೈರಿಯ ಶರಕ್ಕೆ ಶಿರವೊಡ್ಡುವ ಶಪಿತ ಕರ್ಣನಂತಾಗಲು ಸಾಧ್ಯ!

Siddaramaiah
ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಒಬಿಸಿ ಸಲಹಾ ಮಂಡಳಿಯ ಮೊದಲ ಸಭೆ

ಒಬಿಸಿ ಸಲಹಾ ಮಂಡಳಿ ಮಾಡಿರುವುದೇ ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ತಳ್ಳಲು ಎನ್ನುವ ವಿಪಕ್ಷಗಳು ಹಾಗೂ ಅವರದೇ ಪಕ್ಷದ ಕೆಲ ಅತೃಪ್ತರ ವಾದ ಅವರೊಳಗಿನ ಆಸೆಗಳಿಂದ ಪ್ರೇರಿತವಾದ ವಾದವೇ ಹೊರತು, ಕಾಂಗ್ರೆ‌ಸ್‌ ಹೈಕಮಾಂಡ್‌‌ನ ಉದ್ದೇಶವಲ್ಲ. ಬದಲಿಗೆ ಅವರು ಕರ್ನಾಟಕದಲ್ಲಿ ಹೊಂದಿರುವ ವರ್ಚಸ್ಸು, ಇಲ್ಲಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಜಾರಿ ಮಾಡಿರುವ ಜನಪರ, ಜನಪ್ರಿಯ ಕಾರ್ಯಕ್ರಮಗಳನ್ನು ದೇಶದುದ್ದಗಲಕ್ಕೂ ಬಿಂಬಿಸುತ್ತಾ, ಅಹಿಂದದ ಹೆಸರಿನಲ್ಲಿ ಇಲ್ಲಿ ನಡೆದಿರುವ ಬಹುಜನ ರಾಜಕಾರಣವನ್ನು ದೇಶದ ವಿವಿಧ ರಾಜ್ಯಗಳಲ್ಲಿಯೂ ಸಾಧ್ಯವಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಚಿಂತಿಸುತ್ತಿದೆ. ಹೀಗಿರುವಾಗ ಕೆಲವರ ಆಸೆ, ಆಕಾಂಕ್ಷೆಗಳನ್ನು ತಣಿಸುವ ಸಲುವಾಗಿ ಮುಖ್ಯಮಂತ್ರಿ ಸ್ಥಾನವನ್ನು ಅಲುಗಾಡಿಸುವ ಮೂಲಕ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಪ್ರಯತ್ನಕ್ಕೆ ಮುಂದಾದರೆ ಅದು ತನ್ನ ವಿಸ್ತೃತ ಕಾರ್ಯಯೋಜನೆಗೆ ಯಾವ ಹೊಡೆತವನ್ನು ನೀಡಬಲ್ಲದು, ಒಬಿಸಿ ಮತದಾರರಿಗೆ ಏನು ಸಂದೇಶ ನೀಡಬಲ್ಲದು ಎನ್ನುವುದು ಅದಕ್ಕೆ ತಿಳಿದಿದೆ. 2029ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗಾದಿಯ ಬಳಿ ಸಾಗಬೇಕೆಂದರೆ ಅದಕ್ಕೆ ಅಹಿಂದ ರಾಜಕಾರಣವೇ ರಹದಾರಿ ಎನ್ನುವುದನ್ನು ರಾಹುಲ್‌ ಗಾಂಧಿ ಅರಿತಿದ್ದಾರೆ. ಈ ನಿಟ್ಟಿನಲ್ಲಿ ಒಬಿಸಿ ರಾಜಕಾರಣ ಎಷ್ಟು ಮಹತ್ವದ್ದು ಎನ್ನುವ ಸ್ಪಷ್ಟ ಅರಿವು ಅವರಿಗಿದೆ.  ಹೀಗಾಗಿಯೇ, “ಐದು ವರ್ಷ ನಾನೇ ಸಿಎಂ” ಎಂದು ಸಿದ್ದರಾಮಯ್ಯನವರು ದೆಹಲಿಯಲ್ಲಿ ಕುಳಿತು ಆಡಿದ ಮಾತಿನ ಹಿಂದೆ ರಾಹುಲ್‌ ಸಹಿತ ಕಾಂಗ್ರೆಸ್‌ ಹೈಕಮಾಂಡ್‌ ಪಕ್ಷದ ಹಿತದೃಷ್ಟಿಯಿಂದ ಇರಿಸಿರುವ ಲೆಕ್ಕಾಚಾರದ ಹೆಜ್ಜೆಗಳು ಗೋಚರಿಸುತ್ತಿವೆ.  

ಇದನ್ನೂ ಓದಿ ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು: ಭಾಗ 1

ರಾಜಕಾರಣದಲ್ಲಿ ಮಣಿಸಲಾಗದವರು ಯಾರೂ ಇಲ್ಲ. ಆದರೆ, ಯಾರು ಎಲ್ಲಿಯವರೆಗೆ ತಮ್ಮ ಅನಿವಾರ್ಯತೆಯನ್ನು ಕಾಪಾಡಿಕೊಂಡಿರುತ್ತಾರೋ, ತಾವು ಬದಿಗೆ ಸರಿಸಲಾಗದ ಅತ್ಯವಶ್ಯಕ ಶಕ್ತಿ, “ಇನ್‌ಡಿಸ್ಪೆನ್ಸಬಲ್‌ ಫೋರ್ಸ್‌” ಎಂದು ನಿರೂಪಿಸುತ್ತಿರುತ್ತಾರೋ, ಅಲ್ಲಿಯವರೆಗೆ ಅವರನ್ನು ಎಲ್ಲ ಪಕ್ಷಗಳೂ ಜತನದಿಂದಲೇ ಕಾಪಾಡಿಕೊಳ್ಳುತ್ತವೆ. ಸಿದ್ದರಾಮಯ್ಯ ಕರ್ನಾಟಕದ ರಾಜಕಾರಣದಲ್ಲಿ ಕಾಂಗ್ರೆಸ್‌ ಮಟ್ಟಿಗೆ ಅಂತಹ ಒಂದು ಶಕ್ತಿ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ ಪಕ್ಷದ ಮುಂದಿನ ಚಲನೆಗಳಿಗೆ ಅಗತ್ಯವಾಗಿ ಒದಗಿ ಬರುವ ಜನಪರ ಕಥನ. ಈ ಕತೆಯನ್ನು ಸದ್ಯಕ್ಕೆ ತುಂಡರಿಸುವ ಅಗತ್ಯ ಕಾಂಗ್ರೆಸ್‌ನ ಹೈಕಮಾಂಡ್‌ಗಾಗಲಿ, ರಾಜ್ಯ ಕಾಂಗ್ರೆಸ್‌ನ ಬಹುತೇಕ ನಾಯಕರಿಗಾಗಲಿ ಕಾಣುತ್ತಿಲ್ಲ. ಆದರೆ ಪಕ್ಷದೊಳಗಿನ ಕೆಲವೇ ಕೆಲ ಅತೃಪ್ತ ಆತುರಗಾರರಿಗ ಮಾತ್ರ ಕಣ್ಣ ಮುಂದಿನ ವಾಸ್ತವ ಗೋಚರಿಸುತ್ತಿಲ್ಲ!

?s=150&d=mp&r=g
ನಿಶಾನ್‌ ರಾಜ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...