ಇನ್ನು ಕೇವಲ ಕೆಲವು ತಿಂಗಳುಗಳು ಕಳೆದರೆ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿ ದಶಕ ತುಂಬುತ್ತದೆ. ಹಾಗಾದರೆ ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಹವಾಮಾನ ಬದಲಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಇದುವರೆಗೂ ಮಾಡಿದ್ದೇನು? ಪ್ರಸ್ತುತ ಭಾರತದಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸುವ ಕ್ರಮಗಳನ್ನು ರೂಪಿಸಲು ರಚಿಸಲಾಗಿರುವ ಸಮಿತಿ/ಮಂಡಳಿಗಳು ಯಾವರೀತಿಯಾಗಿ ಕಾರ್ಯ ನಿರ್ವಹಿಸುತ್ತಿವೆ? ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಆಡಳಿತಾತ್ಮಕ ತೊಡಕುಗಳು ಯಾವುವು? ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನಿನ ಅಗತ್ಯ ಇದೆಯೇ? ಇವುಗಳ ಬಗೆಗೊಂದು ವಿಸ್ಕೃತ ಚರ್ಚೆ ಇಲ್ಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಜಪಾನ್ ಭೇಟಿಯ ಸಂದರ್ಭದಲ್ಲಿ, ಹವಾಮಾನ ಬದಲಾವಣೆ ಕುರಿತಂತೆ ಜಾಗತಿಕ ಮಟ್ಟದಲ್ಲಿ ಕ್ರಮಕೈಗೊಳ್ಳಲು ಜಪಾನ್ ಸರ್ಕಾರ ರೂಪಿಸಿರುವ ಜಾಯಿಂಟ್ ಕ್ರೆಡಿಟಿಂಗ್ ಮೆಕ್ಯಾನಿಸಂ (JCM) ಉಪಕ್ರಮದೊಂದಿಗೆ ಭಾರತ ಸಹಕಾರ ಒಪ್ಪಂದ (MoC)ಕ್ಕೆ ಸಹಿ ಹಾಕಿದೆ. 2070ರ ವೇಳೆಗೆ ನಿವ್ವಳ ಶೂನ್ಯ/ನೆಟ್ ಝೀರೋವನ್ನು ಸಾಧಿಸುವುದು ಮತ್ತು ಕಡಿಮೆ-ಇಂಗಾಲದ ಹೊರಸೂಸುವಿಕೆ ತಂತ್ರಜ್ಞಾನಗಳ ಅಳವಡಿಕೆ ಈ ಒಪ್ಪಂದದ ಪ್ರಮುಖ ಅಂಶಗಳು.
ಈ ಒಪ್ಪಂದದ ಅನುಸಾರ ಜಪಾನ್ ಮತ್ತು ಭಾರತ ತಮ್ಮ ಕಾರ್ಬನ್ ಕ್ರೆಡಿಟ್‌ಗಳನ್ನು ಹಂಚಿಕೊಳ್ಳಬಹುದು. ಕಡಿಮೆ ಇಂಗಾಲದ ತಂತ್ರಜ್ಞಾನಗಳನ್ನು ಒಳಗೊಂಡ ಯೋಜನೆಗಳ ಅನುಷ್ಠಾನಕ್ಕಾಗಿ ತಂತ್ರಜ್ಞಾನ ವರ್ಗಾವಣೆ, ಹೂಡಿಕೆ, ಸೇರಿದಂತೆ ಅಗತ್ಯ ಸಹಾಯಕ್ಕೆ ಈ ಮೂಲಕ ಭಾರತಕ್ಕೆ ಜಪಾನ್ ತನ್ನ ನೆರವನ್ನು ನೀಡುತ್ತದೆ.
ನವೆಂಬರ್‌ನಲ್ಲಿ, ಹವಾಮಾನ ಬದಲಾವಣೆ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಚರ್ಚಿಸಲು ಬ್ರೆಜಿಲ್‌ನ ಬೆಲೆಮ್‌ನಲ್ಲಿ ವಿಶ್ವಸಂಸ್ಥೆ ನಡೆಸುತ್ತಿರುವ ಸಿಒಪಿ30 (COP30) ಅಧಿವೇಶನಕ್ಕೆ ಸದಸ್ಯ ದೇಶಗಳು ಸಜ್ಜಾಗುತ್ತಿರುವ ಹೊತ್ತಿನಲ್ಲಿ ಭಾರತ ಮತ್ತು ಜಪಾನ್ ನಡುವಣ ಈ ಬೆಳವಣಿಗೆ ಮಹತ್ವದ್ದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. COP30 ನಲ್ಲಿ ನಡೆಯುವ ಚರ್ಚೆಗಳು, ಸಿಒಪಿ29 (COP29)ನಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರಲು ಸದಸ್ಯ ದೇಶಗಳಿಗೆ ಅಗತ್ಯವಿರುವ ಪ್ರಾಯೋಗಿಕ ವಿಧಾನಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಉಭಯದೇಶಗಳ ನಡುವಿನ ಒಪ್ಪಂದದ ಮೇಲೆ ಭಾರತದಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.
ಇದೇ ಸಂದರ್ಭದಲ್ಲಿ ಪ್ಯಾರಿಸ್ ಒಪ್ಪಂದದಲ್ಲಿ ಉಲ್ಲೇಖಿಸಿರುವಂತೆ ಕಾರ್ಬನ್ ಮಾರುಕಟ್ಟೆ ಚಟುವಟಿಕೆಗಳನ್ನು ಎಂದರೆ ಮುಖ್ಯವಾಗಿ ಕಾರ್ಬನ್ ಕ್ರೆಡಿಟ್‌ಗೆ ಸಂಬಂಧಿಸಿದ ವಹಿವಾಟುಗಳನ್ನು ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಭಾರತದಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಇದೇ ಆಗಸ್ಟ್ 22ರಂದು ಕೇಂದ್ರ ಸರ್ಕಾರದ ಪರಿಸರ ಕಾರ್ಯದರ್ಶಿಯವರ ನೇತೃತ್ವದಲ್ಲಿ 21 ಸದಸ್ಯರನ್ನು ಒಳಗೊಂಡ ನ್ಯಾಷನಲ್ ಡೆಸಿಗ್ನೇಟೆಡ್ ಅಥಾರಿಟಿ (NDA) ಯನ್ನು ರಚಿಸಿದೆ. ಈ ಸಮಿತಿಯು ವಿದೇಶಾಂಗ ವ್ಯವಹಾರಗಳು, ಹಣಕಾಸು, ವಿದ್ಯುತ್, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಪ್ಯಾರಿಸ್ ಒಪ್ಪಂದದ ಆರ್ಟಿಕಲ್ 6 ರ ನಿಯಮಗಳು ಸಂಪೂರ್ಣವಾಗಿ ಒಪ್ಪಿಗೆಯಾಗಲು ಸಾಕಷ್ಟು ಕಾಲಾವಕಾಶ ತೆಗೆದುಕೊಂಡದ್ದರಿಂದ ಈ ಪ್ರಾಧಿಕಾರವನ್ನು ಇದೀಗ ಸ್ಥಾಪಿಸಲಾಗಿದೆ.

ಈಗಾಗಲೇ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಮಹತ್ತರ ಒಪ್ಪಂದ ಎಂದು ದಾಖಲಾಗಿರುವ ʻಪ್ಯಾರಿಸ್ ಒಪ್ಪಂದದ ಅನುಷ್ಠಾನದ ನಿಟ್ಟಿನಲ್ಲಿ ಜಪಾನ್‌ನೊಂದಿಗಿನ ಒಪ್ಪಂದವು ಪ್ರಮುಖ ಮೈಲಿಗಲ್ಲು ಮತ್ತು ಈ ನಡೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ದಿಕ್ಕಿನಲ್ಲಿ ಭಾರತದ ಬದ್ಧತೆಯನ್ನು ಸೂಚಿಸಿದೆʼ ಎಂದು ಈ ಒಪ್ಪಂದವನ್ನು ಸಾಕಷ್ಟು ಬಣ್ಣಿಸಲಾಗಿದೆ. ಆದರೆ ಹವಾಮಾನ ಬದಲಾವಣೆ ಪರಿಣಾಮಗಳನ್ನು ತಗ್ಗಿಸಲು ಈಗಾಗಲೇ ಅಂತಾರಾಷ್ಟ್ರೀಯ ಒಪ್ಪಂದಗಳು, ಹಣಕಾಸು ಮೂಲಗಳು , ರಾಷ್ಟ್ರೀಯ ಸಂಸ್ಥೆಗಳು, ನೀತಿ ನಿಯಮಗಳು ಸಾಕಷ್ಟಿವೆ. ಆದರೆ ಸವಾಲಿರುವುದು ಅನುಷ್ಠಾನದಲ್ಲಿ.
ಭಾರತ 2016 ಏಪ್ರಿಲ್‌ನಲ್ಲಿಯೇ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಇನ್ನು ಕೇವಲ ಕೆಲವು ತಿಂಗಳುಗಳು ಕಳೆದರೆ ಈ ಪ್ರಮುಖ ಒಪ್ಪಂದಕ್ಕೆ ದಶಕ ತುಂಬುತ್ತದೆ. ಹಾಗಾದರೆ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಹವಾಮಾನ ಬದಲಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಇದುವರೆಗೂ ಮಾಡಿದ್ದೇನು? ಪ್ರಸ್ತುತ ಭಾರತದಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸುವ ಕ್ರಮಗಳನ್ನು ರೂಪಿಸಲು ರಚಿಸಲಾಗಿರುವ ಸಮಿತಿ/ಮಂಡಳಿಗಳು ಯಾವರೀತಿಯಾಗಿ ಕಾರ್ಯ ನಿರ್ವಹಿಸುತ್ತಿವೆ? ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಣೆಯಲ್ಲಿ ಎದುರಾಗುತ್ತಿರುವ ಆಡಳಿತಾತ್ಮಕ ತೊಡಕುಗಳು ಯಾವುವು? ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನಿನ ಅಗತ್ಯ ಇದೆಯೇ? ರಾಜ್ಯ ಮತ್ತು ಕೇಂದ್ರಗಳ ನಡುವೆ ಹವಾಮಾನ ಹಣಕಾಸು ಹಂಚಿಕೆ ಎದುರಿರುವ ಸವಾಲುಗಳು ಯಾವುವು? ಇವುಗಳ ಬಗೆಗೊಂದು ವಿಸ್ಕೃತ ಚರ್ಚೆ ಇಲ್ಲಿದೆ.
ಕೇಂದ್ರ ಸರ್ಕಾರ ರಚಿಸಿರುವ ಹವಾಮಾನ ಸಂಸ್ಥೆ/ಸಮಿತಿ/ಮಂಡಳಿಗಳು
ಕೇಂದ್ರ ಸರ್ಕಾರವು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳ ನಡುವಣ ಸಮಸ್ಯೆಯನ್ನು ಬಗೆಹರಿಸಲು ಮತ್ತು ಸಮನ್ವಯತೆ ಸಾಧಿಸಲು ಹಲವಾರು ಸಮಿತಿ ಮತ್ತು ಮಂಡಳಿಗಳನ್ನು ನೇಮಿಸಿದೆ. 2008 ರಲ್ಲಿ ಆರಂಭಿಸಿದ ಪ್ರೈಮ್ ಮಿನಿಸ್ಟರ್ಸ್ ಕೌನ್ಸಿಲ್ ಆನ್ ಕ್ಲೈಮೇಟ್ ಚೇಂಜ್ (PMCCC) ಇವುಗಳಲ್ಲಿ ಒಂದು. ಭಾರತದಲ್ಲಿ ಹವಾಮಾನ ಬದಲಾವಣೆಗೆ ಸಂಬಂಧಿತ ಅಜೆಂಡಾವನ್ನು ಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳನ್ನು ರೂಪಿಸುವುದು ಈ ಸಮಿತಿಯ ಮುಖ್ಯ ಉದ್ದೇಶ.

ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ರಚಿತವಾದ ಹಿರಿಯ ಸಂಪುಟ ಸಚಿವರು ಮತ್ತು ವಿವಿಧ ವಿಭಾಗಗಳ ತಜ್ಞರನ್ನು ಒಳಗೊಂಡ ಈ ಸಮಿತಿ ಹವಾಮಾನ ಬದಲಾವಣೆಯ ಬಹುಮುಖಿ ಸವಾಲುಗಳನ್ನು ಬಗೆಹರಿಸುವುದರೊಂದಿಗೆ ಹವಾಮಾನ ಸಂಬಂಧಿತ ನೀತಿಗಳನ್ನೂ ಅಷ್ಟೇ ಕೂಲಂಕುಷವಾಗಿ ಪರಿಶೀಲಿಸುತ್ತದೆ. ಪ್ಯಾರಿಸ್ ಒಪ್ಪಂದವೂ ಸೇರಿದಂತೆ ಹವಾಮಾನ ಸಂಬಂಧಿತ ವಿವಿಧ ಅಂತರಾಷ್ಟ್ರೀಯ ಒಪ್ಪಂದಗಳಲ್ಲಿ ಭಾರತದ ನಿಲುವನ್ನು ದೃಢವಾಗಿ ತಿಳಿಸುವಲ್ಲಿ ಈ ಸಮಿತಿಯ ಸ್ಥಾನ ಮಹತ್ತರವಾದುದು.
ಇದರೊಂದಿಗೆ ರಾಷ್ಟ್ರೀಯ ಹವಾಮಾನ ಬದಲಾವಣೆ ಕ್ರಿಯಾ ಯೋಜನೆ (NAPCC), ರಾಷ್ಟ್ರೀಯ ಸೌರ ಮಿಷನ್, ರಾಷ್ಟ್ರೀಯ ಜಲ ಮಿಷನ್ ಸೇರಿದಂತೆ ಎಂಟು ಪ್ರಮುಖ ವಿಭಾಗಗಳನ್ನು ಈ ಸಮಿತಿಯು ಮೇಲ್ವಿಚಾರಣೆ ಮಾಡುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಹಣಕಾಸು ಮತ್ತು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುವ ಮೂಲಕ ಹವಾಮಾನ ಬದಲಾವಣೆ ಸಂಬಂಧಿತ ಕೇಂದ್ರದ ನೀತಿಗಳು ಮತ್ತು ರಾಜ್ಯಗಳ ಕ್ರಿಯಾಯೋಜನೆಗಳ ನಡುವೆ ಸೇತುವಾಗಿ ಕಾರ್ಯ ನಿರ್ವಹಿಸುತ್ತವೆ. ಕೇಂದ್ರ ಮತ್ತು ರಾಜ್ಯದ ಆದ್ಯತೆಗಳನ್ನು ಸರಿದೂಗಿಸಲು ಸಹಕರಿಸುತ್ತದೆ.
ಆದರೆ, ತನ್ನ ಮಹತ್ವದ ಜವಾಬ್ದಾರಿಗಳ ಹೊರತಾಗಿಯೂ, ಈ ಸಮಿತಿಗಳು ಅನಿಯಮಿತ ಸಭೆಗಳು, ನಿರ್ಣಯಗಳ ಫಾಲೋ-ಅಪ್‌ಗಳ ಕೊರತೆ ಮತ್ತು ರಾಜ್ಯಗಳ ಅನಾಸಕ್ತಿಯಿಂದ ಬಳಲುತ್ತಿವೆ.
ಪರಿಸರ, ಅರಣ್ಯ ಮತ್ತು ಹವಾಮಾನಬದಲಾವಣೆ ಸಚಿವಾಲಯ
ಇದೇ ರೀತಿ ಹವಾಮಾನ ಬದಲಾವಣೆ ಮತ್ತು ಪರಿಸರ ಕುರಿತಂತೆ ಸಮಗ್ರವಾಗಿ ಕಾರ್ಯ ನಿರ್ವಹಿಸುವ ಮತ್ತೊಂದು ಪ್ರಮುಖ ಸಂಸ್ಥೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC). ಇದು ಭಾರತದ ಹವಾಮಾನ ನೀತಿಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ಯಾರಿಸ್ ಒಪ್ಪಂದ ಸೇರಿದಂತೆ, ಭಾರತದ ಅಂತರರಾಷ್ಟ್ರೀಯ ಹವಾಮಾನ ಬದ್ಧತೆಗಳನ್ನು ಅನುಷ್ಠಾನಗೊಳಿಸುವಲ್ಲಿ ಈ ಸಚಿವಾಲಯದ ಪಾತ್ರ ಪ್ರಮುಖವಾದುದು. ಹವಾಮಾನ ಬದಲಾವಣೆ ಕುರಿತಂತೆ ಸಂಶೋಧನೆಗಳು, ಜಾಗೃತಿ, ಆ ಕುರಿತ ಜ್ಞಾನ ವರ್ಧನೆಗಾಗಿ ಸಂಪನ್ಮೂಲಗಳ ಕ್ರೋಢಿಕರಣ, ಸಾಮರ್ಥ್ಯವೃದ್ಧಿ, ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಯೋಗದಂತಹ ಉಪಕ್ರಮಗಳ ಮೂಲಕ ಈ ಸಚಿವಾಲಯವು ಭಾರತದ ಹವಾಮಾನ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತದೆ.
ಹೀಗೆ ಗಮನಾರ್ಹ ಪ್ರಗತಿ ಸಾಧಿಸಿದ್ದರೂ, ಸರ್ಕಾರದ ಸೀಮಿತ ಬಜೆಟ್ ಹಂಚಿಕೆ, ಸಿಬ್ಬಂದಿ ಕೊರತೆ ಮತ್ತು ರಾಜ್ಯಗಳೊಂದಿಗೆ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವಲ್ಲಿನ ಸವಾಲುಗಳು ಸಚಿವಾಲಯದ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿವೆ. ಜೊತೆಗೆ ಪ್ರತ್ಯೇಕ ಹವಾಮಾನ ಸಚಿವಾಲಯವನ್ನು ಹೊಂದಿರುವ ಮಾತ್ರಕ್ಕೆ ಆಡಳಿತಾತ್ಮಕ ಸವಾಲುಗಳನ್ನು ಬಗೆಹರಿಸಲು ಸಾಧ್ಯವೂ ಇಲ್ಲ. ಈ ಸಚಿವಾಲಯದ ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸಿದರೆ ಮಾತ್ರ ಭಾರತದಲ್ಲಿನ ಹವಾಮಾನಕ್ಕೆ ಸಂಬಂಧಿಸಿದ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಬಹುದು.
ಪ್ಯಾರಿಸ್ ಒಪ್ಪಂದದ ಅನುಷ್ಠಾನಕ್ಕಾಗಿ ಅಪೆಕ್ಸ್ ಸಮಿತಿ
ಪ್ಯಾರಿಸ್ ಒಪ್ಪಂದದ ಅನುಷ್ಠಾನಕ್ಕಾಗಿ ಅಪೆಕ್ಸ್ ಸಮಿತಿ (Apex Committee for Implementation of Paris Agreement – AIPA) ಭಾರತ ಸರ್ಕಾರದಿಂದ 2020ರ ರಚಿತವಾದ ಉನ್ನತ ಮಟ್ಟದ ಸಮಿತಿ. ಆದರೆ ಈ ಅಪೆಕ್ಸ್ ಸಮಿತಿಯ ಗಮನವು ಮುಖ್ಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯತೆ ಸಾಧಿಸುವ ಮೇಲಿದೆ. ಹವಾಮಾನ ಸಂಬಂಧಿತ ಪರಿಣಾಮಕಾರಿ ಕ್ರಮಕ್ಕೆ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಘಟಕಗಳೊಂದಿಗಿನ ಸಹಕಾರ ಅತ್ಯಗತ್ಯ. ಇವುಗಳನ್ನು ಒಳಗೊಳ್ಳಲು ಸಮಿತಿಯಲ್ಲಿರುವ ಸ್ಪಷ್ಟ ಕಾರ್ಯವಿಧಾನಗಳ ಕೊರತೆಯು ಸ್ಥಳೀಯ ಅನುಷ್ಠಾನವನ್ನು ಸೀಮಿತಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಜೊತೆಗೆ ಇದುವರೆಗೆ ಈ ಅಪೆಕ್ಸ್ ಸಮಿತಿಯ ಸಭೆಗಳು ಅಥವಾ ಪ್ರಗತಿ ವರದಿಗಳ ಕುರಿತು ಸಾರ್ವಜನಿಕ ಮಾಹಿತಿ ಅಷ್ಟಾಗಿ ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಸಮಿತಿಯ ಕಾರ್ಯವಿಧಾನಗಳಲ್ಲಿ ಪಾರದರ್ಶಕತೆ ಇಲ್ಲ.
ಆಡಳಿತಾತ್ಮಕ ಅಡ್ಡಿ ಒಡ್ಡುತ್ತಿರುವ ಒಕ್ಕೂಟ ವ್ಯವಸ್ಥೆ
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತವು 2070 ರ ವೇಳೆಗೆ ನಿವ್ವಳ-ಶೂನ್ಯ/ನೆಟ್ ಝೀರೋವನ್ನು ಸಾಧಿಸುವ ಮತ್ತು ಏರುತ್ತಿರುವ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ನಿಂದ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಸುವ ಗುರಿಯನ್ನು ಹೊಂದಿದೆ. ಆರ್ಥಿಕ ಬೆಳವಣಿಗೆಯನ್ನು ಪರಿಸರ ಸುಸ್ಥಿರತೆಯೊಂದಿಗೆ ಸಮತೋಲನಗೊಳಿಸುವ ಮತ್ತು ವಿವಿಧ ವಲಯಗಳಲ್ಲಿ ಹಂತ ಹಂತವಾಗಿ ಬದಲಾವಣೆ ತರುವ ನಿಟ್ಟಿನಲ್ಲಿ ಭಾರತವು ಹೆಜ್ಜೆ ಹಾಕಲು ನಿರ್ಧರಿಸಿದೆ, ಆದರೆ ಭಾರತದ ಒಕ್ಕೂಟ ವ್ಯವಸ್ಥೆಯು/ಫೆಡರಲ್ ರಚನೆಯು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಸರ್ಕಾರದ ಆಡಳಿತ ವ್ಯವಸ್ಥೆಗೆ ಸಾಕಷ್ಟು ಸವಾಲುಗಳನ್ನು ಒಡ್ಡುತ್ತಿದೆ. ಬಹುಪಾಲು ಕೇಂದ್ರ ಸರ್ಕಾರದ ಹಿಡಿತದಲ್ಲಿಯೇ ಇರುವ ಹವಾಮಾನ ಸಂಬಂಧಿ ಆಡಳಿತಾತ್ಮಕ ಅಂಶಗಳು, ಕಾನೂನು ಮತ್ತು ಹಣಕಾಸಿಗೆ ಸಂಬಂಧಿಸಿದ ನಿಯಮಗಳು ಅವುಗಳ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿವೆ.

ಉದಾಹರಣೆಗೆ ಅತಿ ಹೆಚ್ಚು ಇಂಗಾಲವನ್ನು ಹೊರಸೂಸುವ ವಿದ್ಯುತ್ ವಲಯದಲ್ಲಿ ಭಾರತವು 2030 ರವೇಳೆಗೆ ಶೇಕಡಾ 50ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನಗಳ ಮೂಲದಿಂದ ಪಡೆಯುವ ಗುರಿಯನ್ನು ಹೊಂದಿದೆ. ಭಾರತದ ಸಂವಿಧಾನದಲ್ಲಿ, ಇಂಧನವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಕಾನೂನುಗಳನ್ನು ರಚಿಸಬಹುದಾಗಿದೆ ಮತ್ತು ಆಡಳಿತ ನೀತಿಗಳನ್ನು ಜಾರಿಗೊಳಿಸಬಹುದಾಗಿದೆ. ಈ ದ್ವಂದ್ವ ನಿಲುವಿನಿಂದಾಗಿ ರಾಷ್ಟ್ರೀಯ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಗುರಿಗಳನ್ನು ಸಾಧಿಸಲು ರಾಜ್ಯ ಮತ್ತು ಕೇಂದ್ರಗಳ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆ ಇನ್ನೂ ಪಳೆಯುಳಿಕೆ ಇಂಧನಗಳ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿಲ್ಲಿ ಪ್ರಮುಖವಾಗಿ ಗಮನಹರಿಸಬೇಕಾದ ಗಣಿಗಾರಿಕೆ, ಪೆಟ್ರೋಲಿಯಂ, ಕೈಗಾರಿಕೆ ಮುಂತಾದ ವಲಯಗಳ ಮೇಲಿನ ಹಿಡಿತ ಕೇಂದ್ರದ ವ್ಯಾಪ್ತಿಯಲ್ಲಿಯೇ ಇದೆ. ಅರಣ್ಯಗಳು ಮತ್ತು ವನ್ಯಜೀವಿಗಳನ್ನು ಸಮವರ್ತಿ ಪಟ್ಟಿಗೆ ಸೇರಿಸಿದಂತೆ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಮುಖ್ಯವಾಗಿ ಗಮನಹರಿಸಬೇಕಾದ ವಲಯಗಳನ್ನು ಸಮವರ್ತಿ ಪಟ್ಟಿಗೆ ಸೇರಿಸುವುದು ಈ ವಿಷಯಗಳ ಮೇಲೆ ಕಾನೂನು ರೂಪಿಸಲು ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಅನುವು ಮಾಡಿಕೊಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳಿಗೆ ಕೇಂದ್ರ ಸರ್ಕಾರವು ಚೌಕಟ್ಟುಗಳನ್ನು ನಿಗದಿಪಡಿಸಿದರೆ, ರಾಜ್ಯಗಳು ಆ ಚೌಕಟ್ಟುಗಳೊಳಗೆ ತಮ್ಮ ವಿವೇಚನೆಯನ್ನು ಬಳಸಿಕೊಂಡು ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದು ಕೇಂದ್ರ ನಿಗದಿಪಡಿಸಿದ ಚೌಕಟ್ಟಿನಲ್ಲಿಯೇ ರಾಜ್ಯಗಳು ನಿಯಮಾನುಸಾರ ತಮ್ಮ ರಾಜ್ಯಗಳಿಗೆ ಹೊಂದುವಂತೆ ಸೂಕ್ತ ನಿಯಮಗಳನ್ನು ಅಥವಾ ಏಕರೂಪದ ನಿಯಮಗಳನ್ನು ರೂಪಿಸಲು ನೆರವಾಗುತ್ತದೆ.
ಹವಾಮಾನ ಕಾನೂನಿನ ಅನುಪಸ್ಥಿತಿ
ಸಂಶೋಧಕರು ಹವಾಮಾನ ಬದಲಾವಣೆಯ ಕುರಿತು ದೇಶಗಳು ಸಮಗ್ರ ಮತ್ತು ಏಕೀಕೃತವಾದ ಕಾನೂನಿನ ಚೌಕಟ್ಟನ್ನು ಅಳವಡಿಸಿಕೊಳ್ಳುವ ಸ್ಪಷ್ಟ ಅಗತ್ಯವಿದೆ ಎನ್ನುತ್ತಾರೆ. ರಾಜ್ಯ-ಸ್ಥಳೀಯ ಸರ್ಕಾರಗಳ ಮಟ್ಟದಲ್ಲಿ ನೀತಿ ನಿರೂಪಣೆಗಳಿಗೆ, ವ್ಯಾಪಾರ-ವಹಿವಾಟುಗಳಿಗೆ ಮತ್ತು ಸಮುದಾಯದ ಹವಾಮಾನ ಬದಲಾವಣೆಯ ಕ್ರಿಯೆಗೆ ಇದು ಕಾನೂನಾತ್ಮಕ ಚೌಕಟ್ಟು ಒದಗಿಸುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಇದನ್ನೂ ಓದಿ ಭೂಮ್ತಾಯಿ | ಪರಿಸರ ಕಾನೂನುಗಳಿಗೆ ಮೃತ್ಯುಪಾಶವಾಗುತ್ತಿರುವ ಅಭಿವೃದ್ಧಿಯ ಪ್ರಸ್ತಾಪಗಳು
ಭಾರತದಲ್ಲಿ ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಹವಾಮಾನ ಬದಲಾವಣೆ ಸಂಬಂಧಿತ ಯಾವ ಕಾನೂನುಗಳೂ ಇಲ್ಲ. ಪ್ಯಾರಿಸ್ ಒಪ್ಪಂದವನ್ನು ದೇಶವು ಅಂಗೀಕರಿಸಿದ್ದರೂ,ಅಲ್ಲಿನ ನಿಬಂಧನೆಗಳನ್ನು ಪೂರೈಸುವ ನಿಟ್ಟಿನಲ್ಲಿ ದೇಶದಲ್ಲಿ ಯಾವುದೇ ರೀತಿಯ ಹೊಸ ಕಾನೂನು ಅಥವಾ ಈಗಿರುವ ಕಾನೂನಿನಲ್ಲಿ ಮಾರ್ಪಾಡು ಯಾವುದನ್ನೂ ಮಾಡಿಲ್ಲ. ಪ್ರಸ್ತುತ ದೇಶದಲ್ಲಿರುವ ವಿದ್ಯುತ್ ಕಾಯ್ದೆ, ಇಂಧನ ಸಂರಕ್ಷಣೆ ಕಾಯ್ದೆಯಂತಹ ಈಗಿರುವ ಕಾನೂನು ಚೌಕಟ್ಟುಗಳೊಳಗೆ ಹವಾಮಾನ ಬದಲಾವಣೆಯನ್ನು ತುರುಕಿಸಲಾಗಿದೆ.
***
ಇದು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭಾರತದ ಸಧ್ಯದ ಪರಿಸ್ಥಿತಿ. ಹಾಗಾದರೆ ಒಕ್ಕೂಟ ವ್ಯವಸ್ಥೆಯಿಂದ ಎದುರಾಗುತ್ತಿರುವ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹರಿಸಬಹುದು ? ಅಂತರರಾಷ್ಟ್ರೀಯ ಅನುಭವವನ್ನು ಆಧರಿಸಿ, ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವ ಮೂಲಕ ಮತ್ತು ಹವಾಮಾನ ಕ್ರಿಯೆಯನ್ನು ವಿಕೇಂದ್ರೀಕರಿಸುವ ಮೂಲಕ ಭಾರತದ ಹವಾಮಾನ ಆಡಳಿತವನ್ನು ಬಲಪಡಿಸುವುದು ಹೇಗೆ? ಒಕ್ಕೂಟ ವ್ಯವಸ್ಥೆಯಲ್ಲಿ ಹವಾಮಾನ ಹಣಕಾಸಿನ ಹಂಚಿಕೆಯ ಬಗೆ ಹೇಗೆ? ಈ ಎಲ್ಲಾ ಅಂಶಗಳು ಮುಂದಿನ ಅಂಕಣದಲ್ಲಿ.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ




