ಭೂಮ್ತಾಯಿ | ಹವಾಮಾನ ಬದಲಾವಣೆ: ಅಮೆರಿಕದ ನಂತರ ಕೈಕೊಟ್ಟ ಚೀನಾ

Date:

ವಿಶ್ವದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಹಸಿರು ಅನಿಲವನ್ನು ವಾತಾವರಣಕ್ಕೆ ಹೊರಸೂಸುತ್ತಿರುವ ದೇಶ ಎಂದು ಯುಎಸ್‌ಎ ಗುರುತಿಸಿಕೊಂಡಿದ್ದರೂ, ಟ್ರಂಪ್‌ ಅಧಿಕಾರವಹಿಸಿಕೊಂಡ ಕೂಡಲೇ ಹವಾಮಾನ ಬದಲಾವಣೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತ ಪ್ಯಾರಿಸ್‌ ಒಪ್ಪಂದದಿಂದ ಹಿಂದೆಸರಿದರು. ಹೀಗಾಗಿ ಈ ಶೃಂಗಸಭೆ ಚುಕ್ಕಾಣಿ ಇಲ್ಲದ ಹಡಗಿನಂತಾಗಿತ್ತು.

ಕಳೆದ ಅಂಕಣದಲ್ಲಿ COP30ಯಲ್ಲಿ ಭಾಗವಹಿಸಿದ್ದವರನ್ನು ಸಂದರ್ಶಿಸಿ, ಈ ಶೃಂಗಸಭೆಯಲ್ಲಿ ಪೀಪಲ್ಸ್‌ COP ಮತ್ತು ಅಫೀಶಿಯಲ್ಸ್‌ COP ಯಾವ ರೀತಿ ನಡೆಯುತ್ತದೆ, ಸಭೆಯ ಮುಖ್ಯಾಂಶ ಏನಾಗಿತ್ತು, ಸದಸ್ಯ ರಾಷ್ಟ್ರಗಳ ಪ್ರಮುಖ ನಿರ್ಣಯಗಳೇನು ಎಂಬುದರ ಕುರಿತಾಗಿ ಬರೆಯಲಾಗಿತ್ತು.

ಜಾಗತಿಕ ಹವಾಮಾನ ನಾಯಕತ್ವವನ್ನು ವಹಿಸಿಕೊಳ್ಳಲು ಚೀನಾ ಏಕೆ ಹಿಂದೇಟು ಹಾಕಿತು? ಅದರ ಬದಲು ತನ್ನ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ವಿಸ್ತರಿಸುವ ಆಸಕ್ತಿ ಹೊಂದಿದ್ದ ಚೀನಾದ ಲೆಕ್ಕಾಚಾರ ಏನಾಗಿತ್ತು? ಪಳೆಯುಳಿಕೆ ಇಂಧನಗಳ ವಿಷಯದಲ್ಲಿ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವಿನ ಭಿನ್ನಾಭಿಪ್ರಾಯ ಹೇಗೆ COP30ಯನ್ನು ಅಸ್ಪಷ್ಟವಾಗಿ ಅಂತ್ಯವಾಗುವಂತೆ ಮಾಡಿತು? ಹೀಗೆ COP30ರ ಬಗ್ಗೆ ಇನ್ನಷ್ಟು ವಿಷಯಗಳು ಈ ಸಲದ ಅಂಕಣದಲ್ಲಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಿನೇ ದಿನೇ ವಿನಾಶಕಾರಿಯಾಗುತ್ತಿರುವ ಹವಾಮಾನ ವಿಪತ್ತು, ತಾಪಮಾನ ಏರಿಕೆ ಇನ್ನಷ್ಟು ತೀವ್ರವಾಗಿ, ಜಗತ್ತು ಹಳಿ ತಪ್ಪದಂತೆ ಕಾದುಕೊಳ್ಳಲು ಸ್ಪಷ್ಟ ಮಾರ್ಗಸೂಚಿಗಳನ್ನು ರಚಿಸುವುದು ಮತ್ತು ಅದನ್ನು ಕಾರ್ಯ ರೂಪಕ್ಕೆ ತರುವುದು ವಿಶ್ವಸಂಸ್ಥೆ ಆಯೋಜಿಸಿದ್ದ COP30ಯ ಗುರಿಯಾಗಿತ್ತು. ಪ್ಯಾರಿಸ್‌ ಒಪ್ಪಂದದಲ್ಲಿ ವಿವಿಧ ದೇಶಗಳು ಕೈಗೊಂಡಿದ್ದ ಪ್ರತಿಜ್ಞೆಯನ್ನು ಮತ್ತೊಮ್ಮೆ ನೆನಪಿಸಿ ಅದನ್ನು ಅನುಷ್ಠಾನಕ್ಕೆ ತರಲು ಈ ಶೃಂಗಸಭೆಯಲ್ಲಿ ವಿಶ್ವಸಂಸ್ಥೆ ಸಾಕಷ್ಟು ಹೆಣಗಾಡಿತು. ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸಲು ಮತ್ತು ರಾಜ್ಯ, ದೇಶ, ಖಂಡಗಳನ್ನು ಮೀರಿ ಅದು ತಂದೊಡ್ಡುತ್ತಿರುವ ಸವಾಲುಗಳನ್ನು ನಿಭಾಯಿಸಲು ಜಾಗತಿಕ ಮಟ್ಟದಲ್ಲಿ ಒಮ್ಮತದ, ಕಾರ್ಯಸಾಧು ಪರಿಹಾರಗಳನ್ನು ಅನ್ವೇಷಿಸಲು ಈ ಶೃಂಗಸಭೆಯಲ್ಲಿ ಸಾಕಷ್ಟು ಶ್ರಮಿಸಲಾಯಿತು.

ಆದರೆ, ಸದಸ್ಯ ರಾಷ್ಟ್ರಗಳಲ್ಲಿ ಎಷ್ಟು ರಾಷ್ಟ್ರಗಳು ನಿಜವಾಗಿಯೂ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಗುರಿಗಳತ್ತ ಕಳಕಳಿ ಹೊಂದಿವೆ? ಇನ್ನೆಷ್ಟು ತೋರಿಕೆಯ ನಾಟಕವಾಡುತ್ತ ಈ ಸಂದರ್ಭವನ್ನು ಹೇಗೆ ತಮ್ಮ ಲಾಭಕೋರತನಕ್ಕೆ ಬಳಸಿಕೊಳ್ಳಬಹುದೆಂದು ಹೊಂಚುಹಾಕುತ್ತಿವೆ? ಎಂಬುದು ಈ ಶೃಂಗಸಭೆಯಲ್ಲಿ ಬಹಿರಂಗಗೊಂಡಿತು. ಪ್ಯಾರಿಸ್‌ ಒಪ್ಪಂದಿಂದ ಹೊರಗುಳಿಯುವ ಟ್ರಂಪ್‌ನ ನಿಲುವು ಉಳಿದ ದೇಶಗಳು ಅದನ್ನೇ ಅನುಸರಿಸಲು ಅಥವಾ ಒಪ್ಪಂದವನ್ನು ಉಪೇಕ್ಷಿಸಲು ದಾರಿ ಮಾಡಿಕೊಡಬಹುದು ಎಂಬ ಆತಂಕವನ್ನು ಈ ಸಭೆ ಕೆಲವು ರಾಷ್ಟ್ರಗಳ ವಿಷಯದಲ್ಲಿ ನಿಜವಾಗಿಸಿತು.

ಜಾಗತಿಕ ಹವಾಮಾನ ನಾಯಕತ್ವ ನಿರಾಕರಿಸಿದ ಚೀನಾ

ವಿಶ್ವದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಹಸಿರು ಅನಿಲವನ್ನು ವಾತಾವರಣಕ್ಕೆ ಹೊರಸೂಸುತ್ತಿರುವ ದೇಶ ಎಂದು ಯುಎಸ್‌ಎ ಗುರುತಿಸಿಕೊಂಡಿದ್ದರೂ, ಟ್ರಂಪ್‌ ಅಧಿಕಾರವಹಿಸಿಕೊಂಡ ಕೂಡಲೇ ಹವಾಮಾನ ಬದಲಾವಣೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತ ಪ್ಯಾರಿಸ್‌ ಒಪ್ಪಂದದಿಂದ ಹಿಂದೆಸರಿದರು. ಹೀಗಾಗಿ ಈ ಶೃಂಗಸಭೆ ಚುಕ್ಕಾಣಿ ಇಲ್ಲದ ಹಡಗಿನಂತಾಗಿತ್ತು.

00CLI USCHINA1 articleLarge

ಯುಎಸ್‌ಎ ಯ ನಿರ್ಗಮನದಿಂದ ತೆರವಾದ ನಾಯಕತ್ವವನ್ನು ಸಮರ್ಥವಾಗಿ ನಿಭಾಯಿಸಬಲ್ಲ ರಾಷ್ಟ್ರಕ್ಕಾಗಿ ಈ ಸಂದರ್ಭದಲ್ಲಿ ಹುಡುಕಾಟ ನಡೆದಿತ್ತು. ಯುಎಸ್‌ಎ ನಂತರ ʻಸೂಪರ್‌ಪವರ್‌ʼ ಎಂದು ಪರಿಗಣಿಸಲ್ಪಡುತ್ತಿರುವ, ವಿಶ್ವದ ಎರಡನೇ ದೊಡ್ಡ ಆರ್ಥಿಕತೆಯನ್ನು ಹೊಂದಿರುವ, ಕ್ಲೀನ್‌ ಎನರ್ಜಿ ಉತ್ಪಾದನೆಯಲ್ಲಿ ವಿಶ್ವದ ನಾಯಕ ಎಂದೇ ಬಿಂಬಿತವಾಗಿರುವ ಚೀನಾ, ನಾಯಕತ್ವದ ಸ್ಥಾನವನ್ನು ವಹಿಸಿಕೊಳ್ಳಲಿ ಎಂದು ಎಲ್ಲಾ ರಾಷ್ಟ್ರಗಳು ಎದುರು ನೋಡುತ್ತಿದ್ದವು. ಆದರೆ ಚೀನಾ ಈ ಕುರಿತು ಯಾವುದೇ ಆಸಕ್ತಿ ವಹಿಸಲಿಲ್ಲ.

ಪವನಶಕ್ತಿ ಮತ್ತು ಸೌರಶಕ್ತಿ ಬಳಸಿಕೊಂಡು ವಿದ್ಯುತ್‌ ಉತ್ಪಾದನೆಯಲ್ಲಿ ಚೀನಾ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಈ ತಂತ್ರಜ್ಞಾನವನ್ನು ವಿಶ್ವದಾದ್ಯಂತ ಎಲ್ಲರಿಗೂ ಪರಿಚಯಿಸುತ್ತಿರುವುದಲ್ಲದೆ, ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆಯಲ್ಲೂ ತಾನೇ ಮೊದಲಿದೆ. ಆದರೆ ಭೂಮಂಡಲದಲ್ಲಿ ಏರುತ್ತಿರುವ ತಾಪಮಾನವನ್ನು ಇಳಿಸುವ ನಿಟ್ಟಿನಲ್ಲಿ ಪ್ರಮುಖ ಹೊಣೆಗಾರಿಕೆ ಹೊರುವ, ಜಾಗತಿಕ ಹವಾಮಾನ ನಾಯಕನಾಗುವ ಅವಕಾಶ ಕೈಗೆಟಕುವಂತಿದ್ದರೂ ಚೀನಾ ಅದರ ಬಗ್ಗೆ ಜಾಣಮೌನ ತಾಳಿಬಿಟ್ಟಿತು.

ತಾನು ವಾತಾವರಣಕ್ಕೆ ಹೊರಬಿಡುತ್ತಿರುವ ಹಸಿರುಅನಿಲಗಳನ್ನು ಕಡಿಮೆ ಮಾಡುತ್ತೇನೆ ಎಂದಾಗಲಿ, ಅಥವಾ ಇತರ ದೇಶಗಳು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದಾಗಲೀ ಯಾವುದನ್ನೂ ಚೀನಾ ಹೇಳಲೇ ಇಲ್ಲ. ಜೊತೆಗೆ ಬಡದೇಶಗಳು ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಲಾಗಲೀ ಅಥವಾ ಉಷ್ಣವಲಯದ ಅರಣ್ಯಗಳ ರಕ್ಷಣೆಗಾಗಲೀ ಧನಸಹಾಯಮಾಡಲೂ ಮುಂದೆ ಬರಲಿಲ್ಲ. ಚೀನಾದ ಈ ನಡೆ ವಿವಿಧ ಸದಸ್ಯ ರಾಷ್ಟ್ರಗಳ ನಾಯಕರುಗಳಿಂದ ಸಾಕಷ್ಟು ಟೀಕೆಗೂ ಗುರಿಯಾಯಿತು.

ವಿಶ್ವಸಂಸ್ಥೆಯ ಹವಾಮಾನ ವಿಭಾಗ ಚೀನಾವನ್ನು ಅಭಿವೃದ್ಧಿಹೊಂದುತ್ತಿರುವ ದೇಶ ಎಂದೇ ಗುರುತಿಸಿದೆ. ಒಂದೊಮ್ಮೆ ಅದು ಈ ಗುಂಪಿನಿಂದ ಹೊರಬಂದು ಅಭಿವೃದ್ಧಿ ಹೊಂದಿದ ಅಥವಾ ಶ್ರೀಮಂತ ದೇಶ ಎಂದು ಪರಿಗಣಿಸಲ್ಪಟ್ಟರೆ, ಚೀನಾ ಹವಾಮಾನ ಬದಲಾವಣೆ ಸಂಬಂಧಿತ ಹೆಚ್ಚಿನ ಕಟ್ಟುಪಾಡುಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಚೀನಾ ಈ ಜಾಣ ಮೌನವನ್ನು ಪ್ರದರ್ಶಿಸುತ್ತಾ ತನ್ನ ಈಗಿರುವ ಸ್ಥಾನಮಾನದಲ್ಲೇ ಮುಂದುವರೆಯಲು ನಿರ್ಧರಿಸಿತು. ಪ್ರಸ್ತುತ ಭೂಗ್ರಹವನ್ನು ಕಲುಷಿತಗೊಳಿಸುತ್ತಿರುವ ಪ್ರಮುಖ ರಾಷ್ಟ್ರಗಳ ಪೈಕಿ ಚೀನಾದ ಪಾಲು ಅತ್ಯಧಿಕವಿದ್ದರೂ, ಅದು ಇಂದಿಗೂ ಹವಾಮಾನ ಬದಲಾವಣೆಗೆ ಅಭಿವೃದ್ಧಿ ಹೊಂದಿದ ದೇಶಗಳತ್ತ ಬೊಟ್ಟು ಮಾಡುತ್ತಿದೆ. ಹಸಿರು ಅನಿಲದ ಬಿಡುಗಡೆ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಚೀನಾದ ಪ್ರಯತ್ನ ಅತ್ಯಂತ ನಿರಾಶಾದಾಯಕವಾದುದು.

ತಾನು ಉತ್ಪಾದಿಸುತ್ತಿರುವ ಸೌರ ಫಲಕಗಳು, ವಿದ್ಯುಚ್ಚಾಲಿತ ವಾಹನಗಳು ಮತ್ತು ಇತರ ಹಸಿರು ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯತ್ತ ಕಣ್ಣು ನೆಟ್ಟಿರುವ ಚೀನಾ, ಯುರೋಪಿಯನ್ ದೇಶಗಳಲ್ಲಿ ತನಗೆ ಅಡ್ಡಿಯಾಗಿರುವ ಸುಂಕವನ್ನು ಈ ಸಂದರ್ಭವನ್ನು ಬಳಸಿಕೊಂಡು ಹೇಗೆ ನಿವಾರಿಸಿಕೊಳ್ಳಬಹುದು ಎಂಬುದರತ್ತಲೇ ಗಮನನೆಟ್ಟಿತ್ತು.

ಬಗೆಹರಿಯದ ಪಳೆಯುಳಿಕೆ ಇಂಧನದ ʻಫೇಸ್‌ಔಟ್‌ʼ ಚರ್ಚೆ

ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ಈ COP30 ವಾತಾವರಣದಲ್ಲಿ ತಾಪಮಾನ ಹೆಚ್ಚಿಸುವಲ್ಲಿ ಮುಖ್ಯ ಆರೋಪಿ ಎಂದು ಪರಿಗಣಿಸಲಾಗಿರುವ ಪಳೆಯುಳಿಕೆ ಇಂಧನಗಳ ಬಳಕೆಯನ್ನು ತಗ್ಗಿಸುವ ಬಗ್ಗೆ, ಹಂತ ಹಂತವಾಗಿ ಅದರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಬಗೆಗೆ ಯಾವುದೇ ಸ್ಪಷ್ಟ ನಿಲುವಿಗೆ ಬರದೇ ಕೊನೆಗೊಂಡಿತು.

ಕೈಗಾರಿಕಾ ಕ್ರಾಂತಿಯ ನಂತರ ವಾತಾವರಣಕ್ಕೆ ಅತಿ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಸೇರಿಸಿದ ದೇಶ ಎಂಬ ಕುಖ್ಯಾತಿಗೆ ಒಳಗಾದ ದೇಶ ಅಮೆರಿಕ. ಆದರೆ ಟ್ರಂಪ್ ಆಡಳಿತದಡಿಯಲ್ಲಿ ಅದು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಮಾಡಿದ 2015ರ ಪ್ಯಾರಿಸ್ ಒಪ್ಪಂದದಿಂದ ಹೊರಗುಳಿದಿರುವುದಷ್ಟೇ ಅಲ್ಲದೆ ತಾನು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಇನ್ನಷ್ಟು ಹೆಚ್ಚು ಹೆಚ್ಚು ಮಾಡುತ್ತೇನೆ ಎಂದು ಜಿದ್ದಿಗಿಳಿದಿದೆ. “ಇತಿಹಾಸದಲ್ಲಿ ಅತಿ ದೊಡ್ಡ ಮಾಲಿನ್ಯಕಾರಿಯೇ ಪ್ಯಾರಿಸ್ ಒಪ್ಪಂದದಿಂದ ಹೊರಗುಳಿದಿದೆ” ಎಂಬ ಫೀರ್ಯಾದುಗಳ ನಡುವೆಯೂ ಟ್ರಂಪ್ ಆಡಳಿತವು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಏನೂ ಮಾಡುತ್ತಿಲ್ಲ.

ಈ ನಡುವೆ COP30ಯಲ್ಲಿ ಪಳೆಯುಳಿಕೆ ಇಂಧನಗಳ ʻಫೇಸ್‌ಔಟ್‌ʼ ಚರ್ಚೆ ಪಳೆಯುಳಿಕೆ ಇಂಧನಗಳನ್ನು ಉತ್ಪಾದಿಸುವ ಮತ್ತು ಉತ್ಪಾದಿಸದ ರಾಷ್ಟ್ರಗಳನ್ನು ಎರಡು ಬಣಗಳನ್ನಾಗಿಸಿಬಿಟ್ಟಿತು. ಶೃಂಗಸಭೆಯಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳಾದವು. ಪಳೆಯುಳಿಕೆ ಇಂಧನಗಳ ಮೂಲಕವೇ ತಮ್ಮ ದೇಶದ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ʻಪೆಟ್ರೋಸ್ಟೇಟ್‌ʼಗಳು, ಪಳೆಯುಳಿಕೆ ಇಂಧನಗಳನ್ನು ಹಂತಹಂತವಾಗಿ ತ್ಯಜಿಸುವ ನಿರ್ಧಾರವನ್ನು ಸಾರಾಸಗಟಾಗಿ ತಳ್ಳಿಹಾಕಿದವು. ತಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನಗಳನ್ನೇ ಅವಲಂಬಿಸಿರುವ ದೇಶಗಳಿಗೆ ಇವುಗಳ ಅವಲಂಬನೆಯನ್ನು ಕಡಿಮೆ ಮಾಡುವುದು ಹೇಗೆ ಎಂಬ ತೀರ್ಮಾನಕ್ಕೆ ಬರಲಾಗಲಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಅಭಿವೃದ್ಧಿಹೊಂದುತ್ತಿರುವ ದೇಶಗಳ ನಡುವೆ ಈ ಬಿಕ್ಕಟ್ಟು ಇನ್ನಷ್ಟು ಕಂದಕವನ್ನು ಸೃಷ್ಟಿಸಲಾರಂಭಿಸಿತು.

ಕೊನೆಗೂ ಶೃಂಗಸಭೆ ಈ ಬಗೆಗೆ ಯಾವುದೇ ಒಮ್ಮತಕ್ಕೆ ಬರಲಾಗದೇ ಪಳೆಯುಳಿಕೆ ಇಂಧನಗಳ ಬಗೆಗೆ ಯಾವುದೇ ನಿರ್ಣಯ ಪ್ರಕಟಿಸದೆ ಕೊನೆಗೊಂಡಿತು. ಈ ಶೃಂಗಸಭೆಯಲ್ಲಿ ಹಾಜರಿದ್ದವರಲ್ಲಿ ಅರ್ಧಕ್ಕಿಂತ ಸ್ವಲ್ಪ ಕಡಿಮೆ ದೇಶಗಳು, ಪಳೆಯುಳಿಕೆ ಇಂಧನಗಳಿಂದ ದೂರ ಸರಿಯಲು ವ್ಯವಸ್ಥಿತ ಯೋಜನೆಯನ್ನು ಒತ್ತಾಯಿಸಿದವು. ಕೊಲಂಬಿಯಾ ಮತ್ತು ಯುರೋಪಿಯನ್ ಒಕ್ಕೂಟ ತಾವು ಈ ನಿಟ್ಟಿನಲ್ಲಿ ಸಮಾನಮನಸ್ಕ ದೇಶಗಳೊಡನೆ ಸೇರಿ ಯೋಜನೆಗಳನ್ನು ರೂಪಿಸುವುದಾಗಿ ಫೋಷಿಸಿದವು.

ಅಮೆರಿಕದ ಅನುಪಸ್ಥಿತಿಯಲ್ಲಿ ಕಂಡುಬಂದ ನಾಯಕತ್ವದ ಕೊರತೆ

ಚೀನಾ ಮತ್ತು ಸೌದಿ ಅರೇಬಿಯಾದಂತಹ ಮುಂದುವರೆದ ಆರ್ಥಿಕತೆಯನ್ನು ಹೊಂದಿರುವ, ಆದರೆ ಹೆಚ್ಚಿನ ಹಸಿರುಮನೆ ಅನಿಲ ಹೊರಸೂಸುವ ದೇಶಗಳು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಒತ್ತಡ ಹೇರುವವರು ಸಭೆಯಲ್ಲಿ ಯಾರೂ ಇರಲಿಲ್ಲ. ಈ ಎರಡೂ ದೇಶಗಳು ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ಜಾಗತಿಕ ಹವಾಮಾನ ಬಿಕ್ಕಟ್ಟಿಗೆ ಸಕಾರಾತ್ಮಕವಾಗಿ ಸ್ಪಂದಿಸದೆ, ತಮ್ಮ ದೇಶದ ವಾಣಿಜ್ಯ ವಹಿವಾಟಿಗೇ ಆದ್ಯತೆ ನೀಡಿದವು. ಈ ಸಂದರ್ಭದಲ್ಲಿ ಅಮೆರಿಕದ ಅನುಪಸ್ಥಿತಿ ಶೃಂಗಸಭೆಯಲ್ಲಿ ಎದ್ದು ಕಂಡಿತು.

1.5 ಡಿಗ್ರಿಸೆಲ್ಸಿಯಸ್ತಾಪಮಾನ ಮಿತಿಗೆ ಬದಲಾವಣೆಗೆ ಆಗ್ರಹ

ಪ್ಯಾರಿಸ್ ಹವಾಮಾನ ಒಪ್ಪಂದದ ಭಾಗವಾಗಿ ಬಹುತೇಕ ಪ್ರತಿಯೊಂದು ದೇಶವೂ 10 ವರ್ಷಗಳ ಹಿಂದೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇಡಲು ಶ್ರಮಿಸುವುದಾಗಿ ಒಪ್ಪಿಕೊಂಡಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಈ ನಿಟ್ಟಿನಲ್ಲಿ ವಿವಿಧ ರಾಷ್ಟ್ರಗಳು ಅನುಸರಿಸಿದ ನಿಧಾನಗತಿಯ ಕ್ರಮದಿಂದಾಗಿ ಕೈಗಾರಿಕಾ ಪೂರ್ವದ ಮಟ್ಟಕ್ಕೆ ಹೋಲಿಸಿದರೆ ಈ ಶತಮಾನದಲ್ಲಿ ಭೂಮಿಯು ಸರಿಸುಮಾರು 2.8 ಡಿಗ್ರಿ ಸೆಲ್ಸಿಯಸ್‌ನಷ್ಟು ಬೆಚ್ಚಗಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ COP ಸಭೆಯಲ್ಲಿ ಎಲ್ಲಾ ದೇಶಗಳು 1.5 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಕಾಯ್ದುಕೊಳ್ಳುವ ಮಿತಿಗೆ ಬದಲಾವಣೆ ತರಲು ಆಗ್ರಹಿಸಿದವು.

ಮೂರುಪಟ್ಟಾದ ಹವಾಮಾನ ಹಣಕಾಸು

ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು 2030 ರ ವೇಳೆಗೆ ಹವಾಮಾನ ಹಣಕಾಸನ್ನು ಮೂರು ಪಟ್ಟು ಹೆಚ್ಚಿಸಲು ಆಗ್ರಹಿಸಿದ್ದವು. 2035 ರ ವೇಳೆಗೆ ಕನಿಷ್ಠ ಮೂರು ಪಟ್ಟು ಹಣಕಾಸು ನೀಡುವ ಭರವಸೆಯೊಂದಿಗೆ COP ಮುಕ್ತಾಯವಾಯಿತು. ಯಾವ ಮೂಲದಿಂದ ಹಣಕಾಸು ಒದಗಿಸಬೇಕು ಎಂಬುದರ ಕುರಿತಾಗಿ ಮಾರ್ಗಸೂಚಿಯನ್ನೂ ರೂಪಿಸಲಾಯಿತು. ಇದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದರೂ, ಹಣಕಾಸು ಸಹಾಯಕ್ಕೆ ನಿಗದಿಪಡಿಸಲಾಗಿರುವ ಸಮಯಮಿತಿ ಸಾಕಷ್ಟು ದೀರ್ಘವಾಗಿದೆ.

ಅಸಮರ್ಪಕವಾಗಿದ್ದ ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆಗಳು(NDC)

COP30 ಪ್ರಕಾರ ಎಲ್ಲಾ ದೇಶಗಳು ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ತಮ್ಮ ದೇಶದ ನಿರ್ಣಯಗಳನ್ನು, ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಹೇಳಲಾದಂತೆ ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆಗಳು (NDC ಗಳು) ಎಂದು ಪಟ್ಟಿಮಾಡಿ, ಪ್ರತಿ ಐದು ವರ್ಷಗಳಿಗೊಮ್ಮೆ ಸಲ್ಲಿಸಬೇಕಾಗುತ್ತದೆ. ಈ ಎಲ್ಲಾ ನಿರ್ಣಯಗಳು ಜಾಗತಿಕ ತಾಪಮಾನ ಏರಿಕೆಯನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಸೆಲ್ಸಿಯಸ್‌ ಗೆ ಸೀಮಿತಗೊಳಿಸುವ ನಿಟ್ಟಿನಲ್ಲಿರಬೇಕು ಮತ್ತು ರಾಷ್ಟ್ರಗಳು ತಮ್ಮ ತಮ್ಮ ನಿರ್ಣಯಗಳಿಗೆ ಬದ್ಧರಾಗಿರಬೇಕು. ಆದರೆ ಭಾರತವು ಸೇರಿದಂತೆ 70ಕ್ಕೂ ಹೆಚ್ಚು ದೇಶಗಳು ಇನ್ನೂ ಸೂಕ್ತವಾದ ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆಗಳನ್ನು (NDC ಗಳು)ಸಲ್ಲಿಸಿಲ್ಲ. ಸ್ವೀಕರಿಸಿದವುಗಳು ಹೆಚ್ಚಾಗಿ ಅಸಮರ್ಪಕವಾಗಿದ್ದವು ಎಂಬ ದೂರು ಕೇಳಿ ಬಂತು.

***

ಆರಂಭದಿಂದಲೇ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಈ ಸಭೆಯಲ್ಲಿ ಸಾಧಿಸಲು ಬಯಸಿದ್ದನ್ನು, COP ಅಧ್ಯಕ್ಷ ಆಂಡ್ರೆ ಕೊರಿಯಾ ಡ ಲಾಗೊ ಅಸಾಧ್ಯ ಎಂದು ಮೊದಲೇ ನಿರ್ಧರಿಸಿಬಿಟ್ಟಿದ್ದರು. ಲೂಲಾ COP ಅಧಿಕೃತವಾಗಿ ಪ್ರಾರಂಭವಾಗುವ ಮೊದಲಿನಿಂದಲೇ ಬೆಲೆಮ್‌ಗೆ ಬರುವ ವಿಶ್ವ ನಾಯಕರ ಬಳಿ ಪಳೆಯುಳಿಕೆ ಇಂಧನಗಳಿಂದ ದೂರವಿರುವ ಮಾರ್ಗಸೂಚಿಗಳನ್ನು ರೂಪಿಸುವ ಕುರಿತು ಚರ್ಚಿಸುತ್ತಿದ್ದರೆ, ಡಲಾಗೋ ಪಳೆಯುಳಿಕೆ ಇಂಧನಗಳ ವಿಷಯವನ್ನು ಕಾರ್ಯಸೂಚಿಯಲ್ಲಿ ಸೇರಿಸುವಂತೆ ಒತ್ತಾಯಿಸುವುದು ಇಡೀ ಶೃಂಗಸಭೆಯ ದಿಕ್ಕನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂಬುದನ್ನು ಅರ್ಥಮಾಡಿಕೊಂಡಿದ್ದರು, ಎಂಬುದು ಸಭೆಯಲ್ಲಿ ಭಾಗವಹಿಸಿದ ಸಾಕಷ್ಟು ರಾಜತಾಂತ್ರಿಕರ ಅಭಿಪ್ರಾಯವಾಗಿತ್ತು.

ಇದನ್ನೂ ಓದಿ ವಿಮಾನಯಾನ ದರಕ್ಕಿಲ್ಲ ಮಿತಿ: ‘ಹವಾಯಿ ಚಪ್ಪಲಿ ಧರಿಸಿದವರು ಹವಾಯಿ ಜಹಜು ಹತ್ತಬೇಕು’ -ಮೋದಿ ಮಾತು ಮಾತಾಗಿಯೇ ಉಳಿಯಿತೇ?

ಒಟ್ಟಿನಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತಹಂತವಾಗಿ ತಗ್ಗಿಸುವ ವಿಷಯದಲ್ಲಿ ಸದಸ್ಯ ದೇಶಗಳು ಯಾವುದೇ ಸ್ಪಷ್ಟ ನಿರ್ಣಯಕ್ಕೆ ಬರಲಾಗದ್ದು, ಅರಬ್‌ ರಾಷ್ಟ್ರಗಳು ಮತ್ತು ರಷ್ಯಾದ ತೈಲ ನಿಕ್ಷೇಪ ಮತ್ತು ತಿಜೋರಿ ಎರಡನ್ನೂ ಭದ್ರಪಡಿಸಿತು. ಚೀನಾ, ಅಮೇರಿಕಾದಂತೆ ಈ ಸಭೆಯಿಂದ ಹೊರಗುಳಿಯದೆ, ಈ ಶೃಂಗಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಲೇ, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಯಾವ ರೀತಿಯ ರಾಜಿಯನ್ನೂ ಮಾಡಿಕೊಳ್ಳದೆ, ತನ್ನ ದೇಶದ ವಾಣಿಜ್ಯ ವಹಿವಾಟಿಗೆ ಪ್ರಾಶಸ್ತ್ಯ ನೀಡುತ್ತಾ ಅವಕಾಶವಾದಿತನವನ್ನು ತೋರ್ಪಡಿಸಿತು. ಅಭಿವೃದ್ಧಿಹೊಂದುತ್ತಿರುವ ದೇಶಗಳಿಗೆ ತಮ್ಮ ದೇಶದ ಆರ್ಥಿಕತೆ ಮತ್ತು ಜಾಗತಿಕ ಹವಾಮಾನ ಬದಲಾವಣೆ ಇವೆರಡರಲ್ಲಿ ಯಾವುದಕ್ಕೆ ಆದ್ಯತೆ ನೀಡುವುದು ಎಂಬ ಗೊಂದಲದಿಂದಲೇ ಬಿಡಿಸಿಕೊಳ್ಳಲಾಗದಿದ್ದರೆ, ನಿಜವಾಗಿ ಹವಾಮಾನದ ಕುರಿತಾಗಿ ಕಳಕಳಿ ಹೊಂದಿದ್ದ ರಾಷ್ಟ್ರಗಳ ಅಭಿಪ್ರಾಯಕ್ಕೆ ಯಾವ ಮನ್ನಣೆಯೂ ಇಲ್ಲವಾಯಿತು.

COP ಕಲ್ಪನೆಯನ್ನು ಅನೇಕರು ಇದಕ್ಕೆ ಸ್ಪಷ್ಟವಾದ, ಶಕ್ತಿಯುತ ಉದ್ದೇಶವಿಲ್ಲ ಎಂದು ಟೀಕಿಸುತ್ತಾರೆ. ಆದರೆ ಇದು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಎಲ್ಲರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುತ್ತಿದೆ ಎಂಬ ಉದ್ದೇಶಕ್ಕಾಗಿ ಅದನ್ನು ಬೆಂಬಲಿಸಲೇಬೇಕಿದೆ.

WhatsApp Image 2025 11 17 at 3.57.02 PM
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...