ಭೂಮ್ತಾಯಿ | ಅಮೆಜಾನ್ ಮೂಲ ನಿವಾಸಿಗಳ ಧ್ವನಿಯನ್ನು ಎತ್ತಿ ಹಿಡಿದ COP30

Date:

ಈ ಶೃಂಗಸಭೆ ಹೇಗೆ ನಡೆಯಿತು, ಅಲ್ಲಿ ಯಾವೆಲ್ಲ ಪ್ರಮುಖ ವಿಷಯಗಳ ಕುರಿತಾಗಿ ಚರ್ಚೆ ನಡೆಸಲಾಯಿತು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸದಸ್ಯ ದೇಶಗಳು ಯಾವೆಲ್ಲ ನಿರ್ಣಯಗಳನ್ನು ತೆಗೆದುಕೊಂಡವು ಎಂಬುದರ ಬಗ್ಗೆ ಇದರಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಎನ್ಐಇ ಕಾಲೇಜಿನ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ತಂತ್ರಜ್ಞಾನ ವಿಭಾಗದ (CREST) ಪ್ರೊ ಶ್ಯಾಮ್‌ಸುಂದರ್ ಸುಬ್ಬಾರಾವ್ ಇಲ್ಲಿ ಬೆಳಕು ಚೆಲ್ಲಿದ್ದಾರೆ.

ಇದೇ ನವೆಂಬರ್ 10 ರಿಂದ 21 ರವರೆಗೆ ಬ್ರೆಜಿನ್‌ನ ಬೆಲೆಮನ್‌ನಲ್ಲಿ ವಿಶ್ವಸಂಸ್ಥೆಯ ನೇತೃತ್ವದಲ್ಲಿ194 ರಾಷ್ಟ್ರಗಳ ಪ್ರಾತಿನಿಧಿತ್ವದೊಂದಿಗೆ ನಡೆದ ಹವಾಮಾನ ಬದಲಾವಣೆ ಕುರಿತ ಶೃಂಗಸಭೆ- COP30 ನಾನಾ ಕಾರಣಗಳಿಗಾಗಿ ಸುದ್ದಿಮಾಡಿತು. ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ತಗ್ಗಿಸುವ ನಿಟ್ಟಿನಲ್ಲಿಈ COP30  ಸಾಕಷ್ಟು ಮಹತ್ವವನ್ನು ಪಡೆದುಕೊಂಡಿತ್ತು. ಹವಾಮಾನ ಬದಲಾವಣೆಯ ಬಿಸಿ ಈಗ ಎಲ್ಲರಿಗೂ, ಎಲ್ಲ ರೀತಿಯಿಂದಲೂ ತಟ್ಟುತ್ತಿರುವುದರಿಂದ, ಈ ಶೃಂಗಸಭೆಯ ಮೇಲೆ ಎಲ್ಲರಿಗೂ ಸಾಕಷ್ಟು ನಿರೀಕ್ಷೆಗಳೂ ಇದ್ದವು. ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿರುವ ಸದಸ್ಯ ದೇಶಗಳು, ಒಪ್ಪಂದದ ಷರತ್ತಿಗೆ ಅನುಗುಣವಾಗಿ ಮಾಡಿರುವ ಕಾರ್ಯಗಳ ಮೌಲ್ಯಮಾಪನ ಈ ಶೃಂಗಸಭೆಯ ಮುಖ್ಯಉದ್ಧೇಶ.  

ಈ ಶೃಂಗಸಭೆ ಹೇಗೆ ನಡೆಯಿತು, ಅಲ್ಲಿ ಯಾವೆಲ್ಲ ಪ್ರಮುಖ ವಿಷಯಗಳ ಕುರಿತಾಗಿ ಚರ್ಚೆ ನಡೆಸಲಾಯಿತು, ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸದಸ್ಯ ದೇಶಗಳು ಯಾವೆಲ್ಲ ನಿರ್ಣಯಗಳನ್ನು ತೆಗೆದುಕೊಂಡವು ಎಂಬುದರ ಬಗ್ಗೆ ಇದರಲ್ಲಿ ಪಾಲ್ಗೊಂಡಿದ್ದ ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್ಐಇ) ಕಾಲೇಜಿನ ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ತಂತ್ರಜ್ಞಾನ ವಿಭಾಗದ (CREST) ಪ್ರೊ ಶ್ಯಾಮ್‌ಸುಂದರ್ ಸುಬ್ಬಾರಾವ್ ಇಲ್ಲಿ ಬೆಳಕು ಚೆಲ್ಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈಗಾಗಲೇ ತಮ್ಮ ವಿಭಾಗದಲ್ಲಿ ಅಡುಗೆ ಮನೆ ತ್ಯಾಜ್ಯದಿಂದ ಬಯೋಗ್ಯಾಸ್, ಕರಿದ ಅಡುಗೆ ಎಣ್ಣೆಯ ಮೂಲಕ ಬಯೋಡೀಸೆಲ್, ಸುಸ್ಥಿರ ಕಟ್ಟಡ ತಂತ್ರಜ್ಞಾನ ಹೀಗೆ ಹಲವು ಪರಿಸರ ಸ್ನೇಹಿ ಸಂಶೋಧನೆಗಳನ್ನು ಕೈಗೊಂಡಿರುವ ಶ್ಯಾಮ್‌ಸುಂದರ್, ಸಾವಯವ ಕೃಷಿ, ಸಮುದಾಯ ಕೃಷಿ ಮತ್ತು ಸಮುದಾಯ ಮಾರುಕಟ್ಟೆ ಮುಂತಾದ ಚಟುವಟಿಕೆಗಳಲ್ಲೂ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಎನ್ಐಇ ಕಾಲೇಜಿನ ಕ್ರೆಸ್ಟ್ ವಿಭಾಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜರ್ಮನ್ ಮೂಲದ ಸಂಸ್ಥೆ ಹೆನ್ರಿಚ್-ಬೋಲ್-ಸ್ಟಿಫ್ಟಂಗ್ COP30 ಯಗ್ರೀನ್ ಝೋನ್‌ನಲ್ಲಿ ಆಯೋಜಿಸಿದ್ದ ಪಾನೆಲ್ ಡಿಸ್ಕಷನ್‌ಗಳಲ್ಲಿ ಶ್ಯಾಮ್‌ಸುಂದರ್‌ ಪಾಲ್ಗೊಂಡಿದ್ದರು.

WhatsApp Image 2025 11 30 at 9.37.21 PM
ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪ್ರೊ ಶ್ಯಾಮ್‌ಸುಂದರ್ ಸುಬ್ಬಾರಾವ್

ʻಪಾಸಿಟಿವ್ ಫ್ಯೂಚರ್ ಸಿನಾರಿಯೋ ʼಕುರಿತ ಪ್ಯಾನೆಲ್ ಡಿಸ್ಕಶನ್‌ನಲ್ಲಿ ಪಶ್ಚಿಮ ಘಟ್ಟದ ಸಮುದಾಯಗಳಲ್ಲಿರುವ ಸಾಂಪ್ರದಾಯಿಕ ಪರಿಸರ ಜ್ಞಾನ, ಅಮೆಜಾನ್ ಮತ್ತು ಭಾರತದ ಪಶ್ಚಿಮ ಘಟ್ಟ ಪ್ರದೇಶದ ಪರಿಸರದಲ್ಲಿರುವ ಸಾಮ್ಯತೆ,  ದೇಸಿ ತಂತ್ರಜ್ಞಾನಗಳ ಅರಿವು, ಅರಣ್ಯದಲ್ಲಿ ದೊರಕುವ ಉತ್ಪನ್ನಗಳ ಬಳಕೆಯ ಮೂಲಕ ಆಹಾರ ಪದ್ಧತಿಯಲ್ಲಿ ತರಬಹುದಾದ ಬದಲಾವಣೆ, ಸುಸ್ಥಿರ ಸಮುದಾಯ ಕೃಷಿ, ಸುಸ್ಥಿರ ನಗರಗಳು ಕುರಿತಂತೆ ಭಾರತ, ಕರ್ನಾಟಕ ಹಾಗೂ ಮೈಸೂರನ್ನು ಕೇಂದ್ರವಾಗಿರಿಸಿ ತಮ್ಮ ಹಲವಾರು ವಿಚಾರಗಳನ್ನು ಮಂಡಿಸಿದ್ದಾರೆ.

ಅಮೆಜಾನ್ ಮೂಲನಿವಾಸಿಗಳ ಪ್ರತಿಭಟನೆ, ಜಾಗತಿಕ ಮಟ್ಟದಲ್ಲಿ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನುಕಾಯ್ದುಕೊಳ್ಳುವ ಗುರಿ, ಪಳೆಯುಳಿಕೆ ಇಂಧನಗಳ ಬಳಕೆ ಮಿತಗೊಳಿಸುವುದು, ನೆಟ್ ಝೀರೋ, ಪ್ಯಾರಿಸ್ ಒಪ್ಪಂದದ ಅನುಷ್ಠಾನ, ಹೀಗೆ COP30 ಯ  ಮುಖ್ಯಾಂಶಗಳನ್ನು ಒಳಗೊಂಡ ಶ್ಯಾಮ್‌ಸುಂದರ್‌ ಅವರ ಸಂದರ್ಶನ ಇಲ್ಲಿದೆ.

COP30 ಯನ್ನು ಹೇಗೆ ನಡೆಸಲಾಗುತ್ತದೆ?

ಈ ಶೃಂಗಸಭೆ ಗ್ರೀನ್ ಝೋನ್ ಮತ್ತು ಬ್ಲೂ ಝೋನ್ ಎಂದು ಹೇಳಲಾಗುವ ಎರಡು ವಿಭಾಗಗಳಲ್ಲಿ ನಡೆಯುತ್ತದೆ. ಬ್ಲೂ ಝೋನ್‌ನಲ್ಲಿ ಹವಾಮಾನ ಬದಲಾವಣೆ ಸಂಬಂಧ ಚರ್ಚೆಗಳು, ವಿವಿಧ ದೇಶಗಳಿಂದ ಸರ್ಕಾರದ ಪರವಾಗಿ ಅಧಿಕೃತವಾಗಿ ನಿಯೋಜಿಸಲ್ಪಟ್ಟ ನೀತಿನಿರೂಪಕರ ಹಂತದಲ್ಲಿ ನಡೆಯುತ್ತದೆ. ಇಲ್ಲಿಯೂ ಎನ್‌ಜಿಒಗಳ ಪ್ರತಿನಿಧಿಗಳು ಇರುತ್ತಾರೆ. ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಇಲ್ಲಿ ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ತಮ್ಮ ಬಾಧ್ಯತೆ, ಹಕ್ಕುಗಳ ಕುರಿತಾಗಿ ಚರ್ಚೆ ನಡೆಸುತ್ತಿರುತ್ತಾರೆ. ಮತ್ತು ಇಲ್ಲಿ ನಡೆಸಲಾಗುವ ಎಲ್ಲ ಮಾತುಕತೆಗಳು ಪಾಲಿಸಿ ಮೇಕಿಂಗ್/ನೀತಿ ನಿರೂಪಣೆಯ ಹಂತದಲ್ಲಾಗುತ್ತದೆ. ಭಾರತ ಸರ್ಕಾರದ ವತಿಯಿಂದ ಪರಿಸರ ಮತ್ತು ಅರಣ್ಯ ಸಚಿವರು ಸೇರಿದಂತೆ ಸರ್ಕಾರದ ಇತರ ಪ್ರತಿನಿಧಿಗಳು ಭಾಗವಹಿಸುತ್ತಾರೆ.

ಈ ಸಭೆಗೆ ಸಮಾನಾಂತರವಾಗಿ ಪೀಪಲ್ಸ್ ಮೂಮೆಂಟ್ ಗ್ರೀನ್ ಝೋನ್‌ನಲ್ಲಿ ನಡೆಯುತ್ತಿರುತ್ತದೆ ಮತ್ತು ಇಲ್ಲಿ ವಿವಿಧ ರಾಷ್ಟ್ರಗಳ ಎನ್‌ಜಿಒಗಳು, ಪರಿಸರ ಪರ ಹೋರಾಟಗಾರರು, ಪರಿಸರಾಸಕ್ತರು, ಸಾಮಾನ್ಯ ಜನರು ಭಾಗವಹಿಸಿರುತ್ತಾರೆ. ಎರಡೂ ಕಡೆಯಲ್ಲಿ ಪರಿಸರ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಹಾಗೂ ಹೊಂದಾಣಿಕೆ ಮತ್ತು ಇತರೆ ವಿಷಯಗಳ ಕುರಿತು ಚರ್ಚೆ, ಗೋಷ್ಠಿಗಳು ನಡೆಯುತ್ತಿರುತ್ತವೆ. ಪೀಪಲ್ಸ್ ಮೂಮೆಂಟ್‌ನಲ್ಲಿ ಸಾಮಾನ್ಯವಾಗಿ ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ. ಇಲ್ಲಿನ ಸಂವಾದಗಳಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.

ಪೀಪಲ್ಸ್ ಮೂಮೆಂಟ್‌ನಲ್ಲಿ ಮಂಡಿಸಲಾಗುವ ವಿಚಾರ ಮತ್ತು ಬೇಡಿಕೆಗಳು ಬ್ಲೂ ಝೋನ್‌ಗೆ ತಲುಪುವ ಬಗೆ ಹೇಗೆ?

ಬ್ಲೂ ಝೋನ್‌ನಿಂದ ಅಧಿಕಾರಿ ವರ್ಗದವರು ಗ್ರೀನ್ ಝೋನ್‌ಗೂ ಭೇಟಿ ನೀಡುತ್ತಾ ಇಲ್ಲಿ ನಡೆಯುವ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು. ಇದರೊಂದಿಗೆ  ಬ್ಲೂ ಝೋನ್‌ನಲ್ಲಿ ಏನಾಗುತ್ತಿದೆ ಎಂದು ನೋಡುವ ವ್ಯವಸ್ಥೆ ಗ್ರೀನ್ ಝೋನ್‌ನಲ್ಲಿ ಮಾಡಲಾಗಿತ್ತು. ಅದೇ ರೀತಿ ಗ್ರೀನ್ ಝೋನ್‌ನಲ್ಲಿ ಪೀಪಲ್ಸ್ ಮೂಮೆಂಟ್‌ನಲ್ಲಿ ನಡೆಯುವ ಚಟುವಟಿಕೆಗಳು, ಚರ್ಚೆಗಳನ್ನು ಪರದೆಯ ಮೂಲಕ ವೀಕ್ಷಿಸುವ ಅವಕಾಶ ಬ್ಲೂ ಝೋನ್‌ನಲ್ಲಿಯೂ ಇತ್ತು. ಯೂಟ್ಯೂಬ್‌ನಲ್ಲೂ ಎರಡೂ ಝೋನ್‌ಗಳಲ್ಲಿ ನಡೆಯುವ ಚರ್ಚೆಗಳನ್ನು ವೀಕ್ಷಿಸುವ ಅವಕಾಶ ಲಭ್ಯವಿತ್ತು.

ಗ್ರೀನ್ ಝೋನ್‌ನಲ್ಲಿ ನಡೆದʻಪೀಪಲ್ಸ್ ಮೂಮೆಂಟ್ʼ ಗೆ ಬ್ಲೂ ಝೋನ್‌ನ ಲ್ಲಿರುವವರು ಹೇಗೆ ಸ್ಪಂದಿಸಿದರು?

ಈ ಬಾರಿ ಅಮೆಜಾನನ ಮೂಲನಿವಾಸಿಗಳʻಪೀಪಲ್ಸ್  ಮೂಮೆಂಟ್ʼಗೆ ಗ್ರೀನ್ ಝೋನ್ ಸಾಕ್ಷಿಯಾಯಿತು. ಈ ಸಮುದಾಯದ ಹತ್ತು ಜನರನ್ನು COP30ಯಲ್ಲಿ ಪಾಲ್ಗೊಳ್ಳಲು ಪ್ರಾತಿನಿಧಿಕವಾಗಿ ಆಹ್ವಾನಿಸಲಾಗಿತ್ತು. ಆದರೆ  ಸುಮಾರು 3000 ಮೂಲನಿವಾಸಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು ಅರಣ್ಯದಲ್ಲಿ ತಮ್ಮ ಹಕ್ಕುಗಳನ್ನು ಎತ್ತಿಹಿಡಿಯುತ್ತಾ, ತಮ್ಮನ್ನು ಅರಣ್ಯದಿಂದ ಬೇರ್ಪಡಿಸಬಾರದು ನಾವು ಅರಣ್ಯ ಸಂರಕ್ಷಕರು. ನಮಗೆ ಅರಣ್ಯದಲ್ಲಿ ವಾಸಿಸುವ ಹಕ್ಕಿದೆ. ಇಲ್ಲಿನ ಪಕ್ಷಿ ಪ್ರಾಣಿ ಸಂಕುಲ, ಜೀವ ವೈವಿಧ್ಯತೆಯನ್ನು ನಾವು ಕಾಪಾಡುತ್ತೇವೆ. ʻ ಅಮೆಜಾನ್ ಮೂಮೆಂಟ್ ಈಸ್ ಎ ಮೂಮೆಂಟ್ ಆಫ್ ಪೀಪಲ್ ಟು ಲೀವಿಂಗ್ ಇನ್ ಎ ಫಾರೆಸ್ಟ್ʼ ನಮ್ಮ ಬೇಡಿಕೆಗಳನ್ನೂ ಪರಿಗಣಿಸಿಎಂದು ಸಾಕಷ್ಟು ಪ್ರತಿಭಟನೆ, ಮೆರವಣಿಗೆ, ಇತ್ಯಾದಿಗಳು ನಡೆಸಿದರು.

ಕೊನೆಗೊಮ್ಮೆ ತಮ್ಮ ಬೇಡಿಕೆಗಳಿಗೆ ಸಾಕಷ್ಟು ಸ್ಪಂದನೆ ಸಿಗುತ್ತಿಲ್ಲ, ನಮ್ಮನ್ನು ಚರ್ಚೆಗೆ ಕರೆಯುತ್ತಿಲ್ಲ ಎಂದು ಬ್ಲೂ ಝೋನ್‌ಗೆ ನುಗ್ಗಿದರು. ಆನಂತರ ಈ ಶೃಂಗಸಭೆಯ ಮುಖ್ಯಸ್ಥ ಆಂಡ್ರೆ ಕೊರಿಯಾ ಡೊ ಲಾಗೋ ತಾವೇ ಸ್ವತಃ ಮೂಲನಿವಾಸಿಗಳನ್ನು ಭೇಟಿಯಾದರು.ಇದು ಇಡೀ COP30ಯ ಮುಖ್ಯ ಘಟ್ಟ. ಈ ಘಟನೆಯ ನಂತರ ಅಮೆಜಾನ್ ಮೂಲನಿವಾಸಿಗಳ ಬೇಡಿಕೆಗೆ ಎಲ್ಲರೂ ತಲೆಬಾಗಲೇ ಬೇಕಾಯಿತು.   ಪೀಪಲ್ಸ್ ಮೂಮೆಂಟ್‌ಗೆ, ಜನಸಾಮಾನ್ಯರ ಧ್ವನಿಗೆ ಹೆಚ್ಚಿನ ಪ್ರಾಮುಖ್ಯತೆ ತಂದುಕೊಟ್ಟ ಮೊದಲ ಶೃಂಗಸಭೆ ಎಂದು COP30ಯನ್ನು ಇತಿಹಾಸದಲ್ಲಿ ದಾಖಲಿಸಬಹುದು.

COP30ಯಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಮಿತಗೊಳಿಸುವ  ಕುರಿತಾದ ಚರ್ಚೆಯಲ್ಲಿ ಸದಸ್ಯ ರಾಷ್ಟ್ರಗಳು ಒಮ್ಮತಕ್ಕೆ ಬರಲಿಲ್ಲ ಎಂಬುದು ಸುದ್ದಿಯಾಗಿತ್ತು. ಈ ಕುರಿತು ಶೃಂಗಸಭೆಯಲ್ಲಿ ಯಾವ ರೀತಿ ಮಾತುಕತೆಗಳಾದವು?

ಹೌದು. ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತ ಹಂತವಾಗಿ ತ್ಯಜಿಸುವ (Fossi fuel phase out)  ಪ್ರಸ್ತಾಪವನ್ನು ಅರಬ್ ದೇಶಗಳು ನಿರಾಕರಿಸಿದವು. ನಮ್ಮ ದೇಶದ ಇಡೀ ಆರ್ಥಿಕ ವ್ಯವಸ್ಥೆಯ ಮೂಲವೇ ಪಳೆಯುಳಿಕೆ ಇಂಧನಗಳು ಅವುಗಳ ಬಳಕೆ ತಗ್ಗಿಸುವುದು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು. ಭಾರತ ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಹೆಚ್ಚಿಸುತ್ತೇವೆ, ಪಳೆಯುಳಿಕೆ ಇಂಧನಗಳ ಬಳಕೆಯನ್ನು ಮಿತಗೊಳಿಸುತ್ತೇವೆ ಎಂದಿತು. ಆದರೆ ಸಂಪೂರ್ಣವಾಗಿ ನಿರಾಕರಿಸಲು ಸಾಧ್ಯವಿಲ್ಲ ಎಂದಿತು. ಆದರೆ ನವೀಕರಿಸಬಹುದಾದ ವಿದ್ಯುತ್ ವಿಭಾಗದಲ್ಲಿ ನಾವು ನಮ್ಮ ಗುರಿಯನ್ನು ಈಗಾಗಲೇ ಸಾಧಿಸಿದ್ದೇವೆ.

ಪಳೆಯುಳಿಕೆ  ಇಂಧನಗಳ ಬಳಕೆಯನ್ನು ಹಂತಹಂತವಾಗಿ ತಗ್ಗಿಸುವ ನಿರ್ಧಾರಕ್ಕೆ ಸದಸ್ಯ ದೇಶಗಳ ಪ್ರತಿಕ್ರಿಯೆಯಲ್ಲಿ  ಯಾವುದೇ ಒಮ್ಮತಕ್ಕೆ ಬರಲಾಗದ ಕಾರಣ ಅದನ್ನು ಮುಂದಿನ ಬಾರಿ ಟರ್ಕಿಯಲ್ಲಿ ನಡೆಯುವ COP31 ನಲ್ಲಿ ಚರ್ಚಿಸಲು ನಿರ್ಧರಿಸಲಾಯಿತು. ಸುಮಾರು 30 ದೇಶಗಳು  ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತ ಹಂತವಾಗಿ ಮಿತಗೊಳಿಸುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದವು. ಕೊಲಂಬಿಯಾ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಮಿತಗೊಳಿಸುವುದು ಅನಿವಾರ್ಯ ಆಯ್ಕೆ. ಈ ಕುರಿತ ಮಾತುಕತೆಯನ್ನು  ಮುಂದಿನ COPಗೆ ಮೊದಲು ತಾನೇ ಆಯೋಜಿಸಿ, ಪಳೆಯುಳಿಕೆ ಇಂಧನಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಸೂಕ್ತ ಮಾರ್ಗಗಳನ್ನು ಹುಡುಕುವುದಾಗಿ ಘೋಷಿಸಿತು. ಕೊಲಂಬಿಯಾದ ಈ ನಿರ್ಧಾರಕ್ಕೆ ಸಾಕಷ್ಟು ರಾಷ್ಟ್ರಗಳು ಸಮ್ಮತಿಯನ್ನೂ ಸೂಚಿಸಿದವು.

ಟ್ರಂಪ್ ತಾವು ಪಳೆಯುಳಿಕೆ ಇಂಧನಗಳನ್ನು ಬಳಸಿಯೇ ಸಿದ್ಧ ಎನ್ನುತ್ತಾ,ʻಡ್ರಿಲ್ ಬೇಬಿ ಡ್ರಿಲ್ʼ ಎಂದು ಘೋಷಿಸುತ್ತ ಪ್ಯಾರಿಸ್ ಒಪ್ಪಂದದಿಂದ ಹೊರಗುಳಿದರು. ಈ ಕುರಿತು COP30 ಯಲ್ಲಿ ಏನಾದರೂ ಚರ್ಚೆಗಳಾಯಿತೇ?

ಹೌದು, ಸಭೆಯ ಮೊದಲ ದಿನಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಗಳಾಯಿತು. ಅಮೆರಿಕಾದಿಂದ ಕೇವಲ ಒಬ್ಬ ಪ್ರತಿನಿಧಿ ಬಂದಿದ್ದರು ಮತ್ತು ಅವರು ಹವಾಮಾನ ಬದಲಾವಣೆ ತಗ್ಗಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿದ್ದ ಚರ್ಚೆಯ ಅಂಶಗಳಲ್ಲಿ ಯಾವುದನ್ನೂ ಒಪ್ಪಿಕೊಳ್ಳಲು ತಯಾರಿರಲಿಲ್ಲ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ  ಕ್ಲೈಮೇಟ್ ಫಿನಾನ್ಸ್ / ಹವಾಮಾನ ಹಣಕಾಸು ತೀರಾ ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳು ಈ ಬಗ್ಗೆ ಸಾಕಷ್ಟು ಉತ್ಸುಕತೆ ತೋರುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದರ ಬಗ್ಗೆ COP30ಯಲ್ಲಿ ಯಾವ ರೀತಿಯ ಚರ್ಚೆಗಳಾದವು?

ಈಗ ನೀಡಲಾಗುತ್ತಿರುವ ಹವಾಮಾನ ಹಣಕಾಸಿನ ನೆರವಿಗಿಂತ ಮೂರುಪಟ್ಟು ಹೆಚ್ಚಿನ ನೆರವು ನೀಡಬೇಕು ಎಂಬ ಬೇಡಿಕೆ ಇತ್ತು ಮತ್ತು ಅದನ್ನು ಅಂಗೀಕರಿಸಲಾಯಿತು. ಕ್ಲೈಮೇಟ್ ಜಸ್ಟೀಸ್ ಫಾರ್ ಸೌತ್‌ ಬಗ್ಗೆ ಕೂಡ ಸಾಕಷ್ಟು ಚರ್ಚೆಯಾಯಿತು. ಭಾರತ ಮತ್ತು ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಹೆಚ್ಚಿನ ಪ್ರಮಾಣದ ಹವಾಮಾನ ಹಣಕಾಸಿಗೆ ಬೇಡಿಕೆ ಇಟ್ಟವು. ಜರ್ಮನಿ ತಾನು ಅಮೆಜಾನ್ ಸೇರಿದಂತೆ ಇತರ ಅರಣ್ಯಗಳ ಸಂರಕ್ಷಣೆಗಾಗಿ  ಒಂದು ಬಿಲಿಯನ್ ಹಣಕಾಸಿನ ನೆರವು ನೀಡುತ್ತೇನೆ ಎಂದು ಶೃಂಗಸಭೆಯಲ್ಲಿಯೇ ಘೋಷಿಸಿತು.

ನೆಟ್ ಝೀರೋ ಬಗ್ಗೆ ಚರ್ಚೆಗಳಾಯಿತೇ? ಭಾರತದ ನಿಲುವೇನಾಗಿತ್ತು?

ಭಾರತ 2070ಕ್ಕೆ ನೆಟ್ ಝೀರೋ ಸಾಧಿಸುತ್ತೇವೆ ಎಂದು ಒಪ್ಪಿಕೊಂಡಿತು. ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆ ಪ್ರಮಾಣ ಜಾಸ್ತಿ ಮಾಡಲು ಒಪ್ಪಿಗೆ ಸೂಚಿಸಿದರೂ,  ಪಳೆಯುಳಿಕೆ ಇಂಧನಗಳ ಬಳಕೆ ಈಗ ಎಷ್ಟಿದೆಯೋ ಅದು ಅದೇ ಪ್ರಮಾಣದಲ್ಲಿ ಮುಂದುವರೆಯುತ್ತದೆ ಎಂಬುದಾಗಿ ಭಾರತವು ಹೇಳಿತು.

ಕಾರ್ಬನ್ ಕ್ರೆಡಿಟ್ ಕುರಿತಂತೆ ಮಾತುಕತೆಗಳಾಯಿತೇ?

ಮುಖ್ಯ ಚರ್ಚೆಯಲ್ಲಿ ಅಷ್ಟಾಗಿ ಬರಲಿಲ್ಲ. ಸೈಡ್‌ಲೈನ್‌ನಲ್ಲಿ ಆಯಿತು. ಅದು ಕಡ್ಡಾಯ ಮಾಡಲು ಗ್ಯಾರಂಟಿ ಕೊಡುವುದು ಕಷ್ಟ. ಹೀಗಾಗಿ ಅದು ಪ್ರಮುಖವಾಗಿ ಚರ್ಚೆಯಾಗಲಿಲ್ಲ. ಮುಖ್ಯವಾಗಿ ಚರ್ಚೆಯಾದದ್ದು ಪ್ಯಾರಿಸ್ ಒಪ್ಪಂದದಂತೆ ಜಾಗತಿಕ ಮಟ್ಟದಲ್ಲಿ1.5 ಡಿಗ್ರಿಸೆಲ್ಸಿಯಸ್ ತಾಪಮಾನವನ್ನು ಕಾಯ್ದುಕೊಳ್ಳುವ ಗುರಿಯನ್ನು ಸಾಧಿಸಲು ವಿವಿಧ ರಾಷ್ಟ್ರಗಳಲ್ಲಿ ಯಾವ ರೀತಿಯಾಗಿ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತಾಗಿ. ಈ ನಿಟ್ಟಿನಲ್ಲಿ ವಿವಿಧ ದೇಶಗಳ ಸಾಧನೆ ಏನು ಎಂಬುದರ ಮೌಲ್ಯಮಾಪನಗಳ ಅಂಕಿಅಂಶಗಳನ್ನು ಬಹಿರಂಗಗೊಳಿಸಿಲ್ಲ.

COP 30 ಮುಕ್ತಾಯದೊಂದಿಗೆ ವಿವಿಧ ದೇಶಗಳ ಮುಂದಿನ ನಡೆ ಏನು?

ಇಲ್ಲಿ ಚರ್ಚಿಸಲಾದ ಎಲ್ಲ ಅಂಶಗಳನ್ನುಒಳಗೊಂಡಂತೆ, ಪ್ರತೀ ಸದಸ್ಯ ದೇಶವು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ  ನಿಟ್ಟಿನಲ್ಲಿ ತಮ್ಮ ಬದ್ಧತೆಗಳು ಮತ್ತು ಅವುಗಳನ್ನು ಯಾವ ರೀತಿಯಾಗಿ ಮತ್ತು ಎಷ್ಟು ಪ್ರಮಾಣದಲ್ಲಿಅನುಷ್ಠಾನಕ್ಕೆ ತರುತ್ತೇವೆ ಎಂಬುದಕ್ಕೆ ತಮ್ಮ ನಿರ್ಣಯಗಳನ್ನು ಸಲ್ಲಿಸಬೇಕು.ಇದನ್ನು ನ್ಯಾಷನಲ್ ಡಿಟರಮಿನೇಶನ್  ಕಾಂಟ್ರಿಬ್ಯೂಷನ್ (ಎನ್‌ಸಿಡಿ) ಎಂದು ಕರೆಯಲಾಗುತ್ತದೆ.  ಈ ಶೃಂಗಸಭೆಯಲ್ಲಿ ಭಾಗವಹಿಸಿದ ಎಲ್ಲ ದೇಶಗಳು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತಮ್ಮ ನಿರ್ಣಯಗಳನ್ನು ಅಂತಿಮಗೊಳಿಸಿ ವಿಶ್ವಸಂಸ್ಥೆಯ ಯುನೈಟೆಡ್ ನೇಶನ್ಸ್ ಫ್ರೇಮ್‌ವರ್ಕ್‌ ಕನ್ವೆನ್ಶನ್ ಆನ್ ಕ್ಲೈಮೇಟ್ ಚೇಂಜ್ (United Nations Framework Convention on Climate Change/ UNFCCC)ಗೆ ಸಲ್ಲಿಸಬೇಕು. ಭಾರತದಲ್ಲಿಅರಣ್ಯ ಮತ್ತು ಪರಿಸರ ಸಚಿವಾಲಯ ಈ ಎನ್‌ಸಿಡಿಯನ್ನು ಅಂತಿಮಗೊಳಿಸಿ,  ಸರ್ಕಾರದ ಸಮ್ಮತಿಯೊಂದಿಗೆ ಡಿಸೆಂಬರ್‌ನಲ್ಲಿ ಸಲ್ಲಿಸಬೇಕು.

ಒಟ್ಟಾರೆಯಾಗಿ COP 30 ಕುರಿತಂತೆ ನಿಮ್ಮ ಅಭಿಪ್ರಾಯವೇನು?

ಒಟ್ಟಾರೆಯಾಗಿ ಹೇಳುವುದಾದರೆ ಜನರ ಧ್ವನಿಗೆ ಹಿಂದಿನ ಯಾವ COPಗಳಲ್ಲಿಯೂ ದೊರಕದ ಮನ್ನಣೆ ದೊರೆಯಿತು. ಅರಣ್ಯೀಕರಣ, ಜೀವವೈವಿಧ್ಯತೆಯ ರಕ್ಷಣೆ ಯ ಬಗ್ಗೆಯೂ ಚರ್ಚೆಗಳಾಯಿತು. ಗ್ಲೋಬಲ್ ಮುಟಿರಾವೋ -ಹವಾಮಾನ ಬದಲಾವಣೆಯ ತಗ್ಗಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಇದು ಇಡೀ ಸಭೆಯಲ್ಲಿ ಪ್ರತಿನಿಧಿಸಿತು. ಹವಾಮಾನ ಬದಲಾವಣೆಗಾಗಿ ಯುವಜನರನ್ನು ತೊಡಗಿಸಿಕೊಳ್ಳುವ ಬಗೆಗೂ ಚರ್ಚೆಯಾಯಿತು.

WhatsApp Image 2025 11 30 at 9.32.18 PM
WhatsApp Image 2025 11 17 at 3.57.02 PM
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...