ಕೃಷಿರಂಗ | ರೈತರಿಗೆ ನೆರವಾಗಲು ʼಸಮಗ್ರ ಕೃಷಿ ವಿಶ್ವವಿದ್ಯಾಲಯʼಗಳ ರಚನೆ

Date:

ಹೊಸದಾಗಿ ಘೋಷಿಸಲಾದ ಮಂಡ್ಯ ಕೃಷಿ ವಿಶ್ವವಿದ್ಯಾಲಯವು ಅಕ್ಟೋಬರ್ 1, 2025ರಿಂದ ಕಾರ್ಯಾರಂಭ ಮಾಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಡಳಿತದಲ್ಲಿ ಕೃಷಿ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಲೆಸ್ಲಿ ಚಾರ್ಲ್ಸ್‌ ಕೋಲ್ಮನ್‍ರವರ ಸಲಹೆಯಂತೆ 1931ರಲ್ಲಿ ಆರಂಭವಾದ ʼಇರ್ವಿನ್ ನಾಲಾʼ ಕೃಷಿ ಕ್ಷೇತ್ರದ ಸ್ಥಳದಲ್ಲಿ ಕೃಷಿ ವಿಶ್ವವಿದ್ಯಾಲಯವು ಪ್ರಾರಂಭವಾಗಿರುವುದು ರಾಜ್ಯದ ಕೃಷಿ ಶಿಕ್ಷಣದ ಇತಿಹಾಸದಲ್ಲೊಂದು ಪ್ರಗತಿಯ ಹೊಸ ಮೈಲಿಗಲ್ಲು.

ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಮರುರಚನೆಗೆ ನಮ್ಮ ರಾಜ್ಯದಲ್ಲಿ ನಿರಂತರ ಪ್ರಯತ್ನಗಳಾಗುತ್ತಿವೆ. ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ 2016ರಲ್ಲಿ ಬಸವರಾಜ ಹೊರಟ್ಟಿಯವರು ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆಗೆ ಮುಂದಡಿಯಿಡುವಂತೆ ಕೋರಿದರು. ವೇದಿಕೆಯಲ್ಲಿಯೇ ಮುಖ್ಯಮಂತ್ರಿಗಳು ಕೃಷಿ ಸಚಿವರಾದ ಕೃಷ್ಣಭೈರೇಗೌಡರವರನ್ನು ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತದನಂತರ, ಮೇ 02, 2019ರಲ್ಲಿ ಮಾಜಿ ಕುಲಪತಿಗಳಾದ ಡಾ. ಶೀಲವಂತರ್ ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯು ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆಗಾಗಿ ಶಿಫಾರಸ್ಸು ಮಾಡಿತು.

ಏಪ್ರಿಲ್ 27, 2023ರಲ್ಲಿ ನಿವೃತ್ತ ಐಎಎಸ್ ಅಧಿಕಾರಿಯವರಾದ ಡಾ. ಅಶೋಕ್ ದಳವಾಯಿಯವರ ನೇತೃತ್ವದಲ್ಲಿ ಇದೇ ವಿಷಯವಾಗಿ ಮತ್ತೊಂದು ಸಮಿತಿಯನ್ನು ರಚಿಸಲಾಯಿತು. ಆದರೆ, ಆ ಸಮಿತಿಯು ಯಾವುದೇ ವರದಿಯನ್ನು ಸಲ್ಲಿಸಿಲ್ಲ. ಕೃಷಿ ವಿಶ್ವವಿದ್ಯಾಲಯ ಕಾಯ್ದೆ 2009ರ ಪ್ರಕರಣ 4(1)ಕ್ಕೆ ಮಾರ್ಚ್ 18, 2025ರಂದು ವಿಧಾನ ಸಭೆಯಲ್ಲಿ ತಿದ್ದುಪಡಿ ತಂದು ಹೊಸದಾಗಿ ಮಂಡ್ಯದಲ್ಲೊಂದು ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕೃಷಿ ಸಚಿವರಾದ ಚಲುವರಾಯಸ್ವಾಮಿಯವರು ಮಸೂದೆಯನ್ನು ಮಂಡಿಸಿದರು. ಅದರಂತೆ, ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳು “ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಕೃಷಿ, ತೋಟಗಾರಿಕೆ, ಅರಣ್ಯ ಶಾಸ್ತ್ರ, ಇತರ ಕೃಷಿ ಸಂಬಂಧಿತ ವಿಷಯಗಳ” ಅಧ್ಯಾಪನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ಕರ್ನಾಟಕ ರಾಜ್ಯಪತ್ರದಲ್ಲಿ ಏಪ್ರಿಲ್ 24, 2025ರಂದು ಸದರಿ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ. ಆ ಮೂಲಕ ರೈತರ ಅನುಕೂಲಕ್ಕಾಗಿ, ಶೈಕ್ಷಣಿಕ ಪ್ರಗತಿಗಾಗಿ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಮರುಸ್ಥಾಪನೆಯ ನಿರ್ಧಾರದ ಅನುಷ್ಟಾನಕ್ಕೆ ರಾಜ್ಯ ಸರ್ಕಾರವು ಆರಂಭದ ದಿಟ್ಟ ಹೆಜ್ಜೆಗಳನ್ನಿಟ್ಟಿದೆ.

ಈ ಮಧ್ಯೆ, ಮಾರ್ಚ್ 25, 2025ರಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಟಿ. ಎಂ. ವಿಜಯಭಾಸ್ಕರ್‌ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳನ್ನು ಮರು ಸ್ಥಾಪಿಸಲು ಸಮಿತಿ ರಚಿಸಲಾಯಿತು.

ಹೊಸದಾಗಿ ಘೋಷಿಸಲಾದ ಮಂಡ್ಯ ಕೃಷಿ ವಿಶ್ವವಿದ್ಯಾಲಯವು ಅಕ್ಟೋಬರ್ 1, 2025ರಿಂದ ಕಾರ್ಯಾರಂಭ ಮಾಡಿದೆ. ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಆಡಳಿತದ ಕಾಲದಲ್ಲಿ ಕೃಷಿ ಇಲಾಖೆಯ ನಿರ್ದೇಶಕರಾದ ಡಾ. ಲೆಸ್ಲಿ ಚಾರ್ಲ್ಸ್‌ ಕೋಲ್ಮನ್‍ರವರ ಸಲಹೆಯಂತೆ 1931ರಲ್ಲಿ ಆರಂಭವಾದ ಇರ್ವಿನ್ ನಾಲಾ ಕೃಷಿ ಕ್ಷೇತ್ರದ ಸ್ಥಳದಲ್ಲಿ ಕೃಷಿ ವಿಶ್ವವಿದ್ಯಾಲಯವು ಪ್ರಾರಂಭವಾಗಿರುವುದು ರಾಜ್ಯದ ಕೃಷಿ ಶಿಕ್ಷಣದ ಇತಿಹಾಸದಲ್ಲೊಂದು ಪ್ರಗತಿಯ ಹೊಸ ಮೈಲಿಗಲ್ಲು. ಕೃಷಿ ಅಭಿವೃದ್ಧಿಯ ಎರಡು ಐತಿಹಾಸಿಕ ಕಾಲಘಟ್ಟಗಳ ಬೆಸುಗೆಯ ಪ್ರತೀಕ.

UAS Mandya
ಮಂಡ್ಯ ಕೃಷಿ ವಿವಿ

ರಾಜ್ಯದಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಸ್ಥಾಪನೆಯ ಇತಿಹಾಸ

ಅಮೆರಿಕದ ‘ಲ್ಯಾಂಡ್ ಗ್ರಾಂಟ್’ ಪದ್ದತಿಯಂತೆ ಅಗಾದ ಪ್ರಮಾಣದ ಭೂಮಿ ಮಂಜೂರಿನ ಮೂಲಕ ಕೃಷಿ ಶಿಕ್ಷಣದ ಕ್ಯಾಂಪಸ್‍ಗಳನ್ನು 1970ರ ದಶಕದಲ್ಲಿ ಆರಂಭಿಸಲಾಯಿತು. ಕ್ರಮೇಣ ಕೃಷಿ ವಿಶ್ವವಿದ್ಯಾಲಯಗಳನ್ನು ಸಂಘಟಿಸಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಕ್ಟೋಬರ್ 1965ರಲ್ಲಿ ಕಾರ್ಯಾರಂಭ ಮಾಡಿತು. ಅದು ರಾಜ್ಯದ ಏಕೈಕ ಕೃಷಿ ವಿಶ್ವವಿದ್ಯಾಲಯವಾಗಿ ಕೃಷಿ, ಪಶುವೈದ್ಯಕೀಯ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ಗೃಹ ವಿಜ್ಞಾನ, ಕೃಷಿ ಮಾರುಕಟ್ಟೆಯಂತಹ ವಿಜ್ಞಾನಗಳಲ್ಲಿ ಶಿಕ್ಷಣ ಕೊಟ್ಟಿತು. ರಾಜ್ಯದ ಉತ್ತರ ಭಾಗಕ್ಕೆ ಎರಡನೇ ಕೃಷಿ ವಿಶ್ವವಿದ್ಯಾಲಯವಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವು 1986ರಲ್ಲಿ ಅಸ್ತಿತ್ವಕ್ಕೆ ಬಂತು. ನಂತರ ಕೃಷಿ ವಿಜ್ಞಾನಗಳ ವಿಷಯಕ್ಕೊಂದು ವಿಶ್ವವಿದ್ಯಾಲಯ ಎಂಬಂತೆ ಬೀದರಿನಲ್ಲಿ ರಾಜ್ಯಮಟ್ಟದ ವಿಶ್ವವಿದ್ಯಾಲಯವಾಗಿ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯವು 2005ರಲ್ಲಿ ಆರಂಭವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಧಾರವಾಡ ಕೃಷಿ ವಿಶ್ವವಿದ್ಯಾಲಯವು ಇಬ್ಬಾಗವಾಗಿ ಕಲ್ಯಾಣ ಕರ್ನಾಟಕದ ಶ್ರೇಯಸ್ಸಿಗಾಗಿ ರಾಯಚೂರು ಕೃಷಿ ವಿಶ್ವವಿದ್ಯಾಲಯವು 2008ರಲ್ಲಿ ಅಸ್ತಿತ್ವಕ್ಕೆ ಬಂದರೆ, ಧಾರವಾಡ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಗಳಿಂದ ತೋಟಗಾರಿಕೆ ಶಿಕ್ಷಣದ ಕಾಲೇಜು ಮತ್ತು ಸಂಸ್ಥೆಗಳು ಬೇರ್ಪಟ್ಟು ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯವು 2008ರಲ್ಲಿ ಪ್ರಾರಂಭವಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ನಾಲ್ಕನೇ ಬಾರಿಗೆ ಟಿಸಿಲೊಡೆದು ಶಿವಮೊಗ್ಗದ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯವು 2012ರಲ್ಲಿ ಅಸ್ತಿತ್ವಕ್ಕೆ ಬಂದರೆ, ಇದೀಗ ಅಂತಿಮವಾಗಿ ಐದನೇ ಬಾರಿಗೆ ಕವಲೊಡೆದು ಮಂಡ್ಯ ಕೃಷಿ ವಿಶ್ವವಿದ್ಯಾಲಯವು 2025ರಲ್ಲಿ ಜನ್ಮ ತಾಳಿದೆ.

UAS Dharwad
ಧಾರವಾಡ ಯುನಿವರ್ಸಿಟಿ

ಇಷ್ಟೆಲ್ಲಾ ಆಗುತ್ತಿದ್ದರೂ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 2024 ಮತ್ತು 2025ರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ ಸತತವಾಗಿ ಮೂರು ವಿಭಾಗಗಳಲ್ಲಿ ಅಗ್ರಶ್ರೇಣಿ ಪಡೆದಿರುವುದು ವಿಶ್ವವಿದ್ಯಾಲಯದ ಗುಣಮಟ್ಟವನ್ನು ಕನ್ನಡಿಯಂತೆ ಬಿಂಬಿಸುತ್ತಿದೆ. ಅದು ಸಮಗ್ರ ಕೃಷಿ ವಿಶ್ವವಿದ್ಯಾಲಯವಾದರೆ ರಾಷ್ಟ್ರಮಟ್ಟದಲ್ಲಿ ತನ್ನ ಖ್ಯಾತಿಯನ್ನು ಇನ್ನಷ್ಟು ಎತ್ತರಿಸಿಕೊಳ್ಳುತ್ತದೆ. ಅತಿ ಮುಖ್ಯವಾಗಿ ಅನ್ನದಾತರ ಬದುಕಿಗೆ ಬೆಳಕಾಗುತ್ತದೆ.

ಒಂದು ಕ್ಯಾಂಪಸ್‍ನಲ್ಲಿ ಒಂದೇ ಕಾಲೇಜಿರಬೇಕೇ?

ಕೃಷಿ ಶಿಕ್ಷಣಕ್ಕಾಗಿ ಕ್ಯಾಂಪಸ್‍ಗಳನ್ನು ಆರಂಭಿಸಲಾಗಿದೆ. ನೂರಾರು, ಸಾವಿರಾರು ಎಕರೆಗಳ ಕ್ಯಾಂಪಸ್ಸಿನ ಭೂಸ್ವಾಧೀನಕ್ಕಾಗಿ ರಾಜ್ಯ ಸರ್ಕಾರವು ಸಾಕಷ್ಟು ಹಣ ವ್ಯಯಿಸಿರುತ್ತದೆ. ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಶಿಫಾರಸ್ಸಿನಂತೆ ಸಮತಟ್ಟು ಭೂಮಿಯಾದರೆ ಒಂದು ಪಶುವೈದ್ಯಕೀಯ ಕಾಲೇಜು ಸ್ಥಾಪಿಸಲು 30 ಎಕರೆ ಭೂಮಿ ಸಾಕು. ಆದರೆ ಹಲವಾರು ಕ್ಯಾಂಪಸ್‍ಗಳಲ್ಲಿ ಒಂದೊಂದೇ ವಿಷಯದ ಕಾಲೇಜುಗಳಿವೆ. ಕೆಲವು ಕ್ಯಾಂಪಸ್ಸುಗಳಲ್ಲಿಯಾದರೂ ಮತ್ತೊಂದು ವಿಷಯದ ಕಾಲೇಜನ್ನು ಆರಂಭಿಸಿ ಆವರಣಗಳನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಆಲೋಚಿಸಿಬೇಕಿದೆ.

ವಿಜಯಭಾಸ್ಕರ್ ಸಮಿತಿಯ ವರದಿ

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಟಿ ಎಂ ವಿಜಯಭಾಸ್ಕರ್‌ ಅವರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ರಚಿಸಲಾದ ಸಮಿತಿಯು ಜುಲೈ 2025ರಲ್ಲಿ ವರದಿ ಸಲ್ಲಿಸಿ ಮೊದಲ ಹಂತದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಘಟಕ ಕಾಲೇಜುಗಳು ಮತ್ತಿತರ ಸಂಸ್ಥೆಗಳನ್ನು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಮ್ಮಿಲನಗೊಳಿಸಲು ಮತ್ತು ಎರಡನೇ ಹಂತದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳು ಮತ್ತಿತರ ಸಂಸ್ಥೆಗಳನ್ನು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಮ್ಮಿಲನಗೊಳಿಸಲು ಶಿಫಾರಸ್ಸು ಮಾಡಿದೆ. ಇದು ಸಾಕಾರಗೊಂಡಲ್ಲಿ ರಾಜ್ಯದ ರೈತ ಸಮುದಾಯಕ್ಕೆ ಮಹದುಪಕಾರವಾಗುವುದು. ಅಂತಹ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಯ ದಿನವನ್ನು ‘ಕೃಷಿ ವಿಜ್ಞಾನಗಳ ಶಿಕ್ಷಣದ ಸುವರ್ಣ ದಿನ’ವನ್ನಾಗಿ ಇತಿಹಾಸವು ತಂತಾನೆ ದಾಖಲಿಸಿಕೊಳ್ಳುತ್ತದೆ.
ವಿಜಯಭಾಸ್ಕರ್ ವರದಿಯಲ್ಲಿ ಅಭಿಪ್ರಾಯಪಟ್ಟಂತೆ ಕೃಷಿ ವಿಜ್ಞಾನಗಳ ವಿಸ್ತರಣಾ ಚಟುವಟಿಕೆಗಳು ಉತ್ತಮಗೊಳ್ಳಲು ಮತ್ತು ಅವುಗಳನ್ನು ‘ಒಂದೇ ಸೂರಿನಡಿ’ ಪಡೆದುಕೊಳ್ಳಲು ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಮರು ಸಂಘಟನೆಯ ಅವಶ್ಯಕತೆಯಿದೆ.

ಕೃಷಿ ವಿವಿಗಳು ಎಲ್ಲಾ ಕೃಷಿ ವಿಜ್ಞಾನಗಳನ್ನೊಳಗೊಂಡ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳಾದರೆ ಅದರ ಪದವೀದರರು ವಿವಿಧ ಶಿಸ್ತುಗಳ ಜ್ಞಾನವನ್ನು ಆಳವಾಗಿ ಆಭ್ಯಸಿಸುತ್ತಾರೆ ಹಾಗೂ ನೋಡಿ ಕಲಿಯುವುದರಿಂದ ಸಮಗ್ರ ಜ್ಞಾನ ಮತ್ತು ಕೌಶಲ್ಯತೆಯನ್ನು ಪಡೆಯುತ್ತಾರೆ. ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ಪರಿಪೂರ್ಣ ಜ್ಞಾನದ ಸಂಪಾದನೆಯಾಗುತ್ತದೆ ಎನ್ನುತ್ತದೆ ವಿಜಯಭಾಸ್ಕರ್ ಸಮಿತಿಯ ವರದಿ. ಕೈಗಾರಿಕೆ – ವಿದ್ಯಾಸಂಸ್ಥೆಗಳ ಬಾಂಧವ್ಯವೂ ಹೆಚ್ಚುತ್ತದೆ.

ಕೃಷಿ ವಿದ್ಯಾರ್ಥಿಗಳಿಗೆ ಪಶು ವಿಜ್ಞಾನವನ್ನು ಪಶುವೈದ್ಯಕೀಯ ಶಿಕ್ಷಕರಿಂದ ಬೋಧಿಸಲಾಗುತ್ತಿದೆ. ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಮೇವು ಉತ್ಪಾದನಾ ವಿಜ್ಞಾನವನ್ನು ಕೃಷಿ ವಿಜ್ಞಾನದ ಶಿಕ್ಷಕರಿಂದ ಬೋಧಿಸಲಾಗುತ್ತಿದೆ. ಸಮಗ್ರ ಕೃಷಿ ವಿಶ್ವವಿದ್ಯಾಲಯಗಳಾದರೆ ಲಭ್ಯವಿರುವ ತಜ್ಞ ಶಿಕ್ಷಕರ ಸಂಪನ್ಮೂಲಗಳನ್ನು 2005ಕ್ಕೂ ಮೊದಲಿದ್ದಂತೆ ಬಳಸಿಕೊಳ್ಳಬಹುದು.

ಕೆಲವು ವಿವಿಗಳು ರಾಜ್ಯ ಸರ್ಕಾರದ ಮೀಸಲಾತಿ ಆದೇಶಗಳನ್ನು ಧಿಕ್ಕರಿಸಿ ನೇಮಕಾತಿ ನಡೆಸಿ ವಿವಾದಕ್ಕೊಳಗಾಗಿವೆ. ತನಿಖಾ ವರದಿಗಳಿವೆ. ನ್ಯಾಯಾಲಯಗಳಲ್ಲಿ ಮೊಕದ್ದಮೆಗಳಿವೆ. ಇನ್ನು ಮೇಲಾದರೂ ನೇಮಕಾತಿಗಳನ್ನು ಕಟ್ಟುನಿಟ್ಟಾಗಿ ನೆರವೇರಿಸಲು ರಾಜ್ಯ ಮಟ್ಟದಲ್ಲೊಂದು ಕೃಷಿ ವಿವಿಗಳ ಸಿಬ್ಬಂದಿ ನೇಮಕಾತಿ ಪ್ರಾಧಿಕಾರ ರಚಿಸುವುದೊಳಿತು.

ಸಮಗ್ರ ಕೃಷಿ ವಿವಿಗಳ ವ್ಯಾಪ್ತಿ

ವಿಶ್ವವಿದ್ಯಾಲಯಗಳ ವ್ಯಾಪ್ತಿಯು ಭೌಗೋಳಿಕವಾಗಿ ಕಡಿಮೆಯಿರಬೇಕೆಂದು ಕೇಂದ್ರ ಸರ್ಕಾರದ ವರದಿಯೊಂದು ಹೇಳುತ್ತಿದೆ. ರಾಜ್ಯವ್ಯಾಪ್ತಿಯ ವಿವಿಗಳಲ್ಲಿ ಶಿಕ್ಷಕರು ವರ್ಗಾವಣೆಯ ಭಯದಲ್ಲಿರುತ್ತಾರೆ. ವಿಜಯಭಾಸ್ಕರ್ ವರದಿಯಲ್ಲಿ ಈಗಿರುವ ವಿಶ್ವವಿದ್ಯಾಲಯಗಳ ಎಲ್ಲಾ ಕೇಂದ್ರ ಸ್ಥಾನಗಳನ್ನು ಹಾಗೆಯೇ ಉಳಿಸಿಕೊಂಡು, ಸಮಗ್ರ ಕೃಷಿ ವಿವಿಗಳ ಜಿಲ್ಲೆಗಳ ವ್ಯಾಪ್ತಿಯನ್ನು ನೀಡಲಾಗಿದೆ. ಅದರ ವಿವರಗಳು ಹೀಗಿವೆ.

ಕೃಷಿ ವಿಶ್ವವಿದ್ಯಾಲಯ, ಮಂಡ್ಯ : ಮಂಡ್ಯ, ಹಾಸನ, ಮೈಸೂರು, ಕೊಡಗು ಮತ್ತು ಚಾಮರಾಜನಗರ. ಭೌಗೋಳಿಕ ವಿಸ್ತೀರ್ಣ 28,17,904 ಹೆಕ್ಟೇರ್‌ಗಳು.
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು : ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ. ಭೌಗೋಳಿಕ ವಿಸ್ತೀರ್ಣ 34,17,765 ಹೆಕ್ಟೇರ್‍ಗಳು.

ಕೃಷಿ ವಿಶ್ವವಿದ್ಯಾಲಯ, ರಾಯಚೂರು: ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ. ಭೌಗೋಳಿಕ ವಿಸ್ತೀರ್ಣ 23,44,558 ಹೆಕ್ಟೇರ್‌

ಪಶುವೈದ್ಯಕೀಯ ವಿಶ್ವವಿದ್ಯಾಲಯ, ಬೀದರ್ : ಬೀದರ್, ಕಲಬುರಗಿ ಮತ್ತು ಯಾದಗಿರಿ. ಭೌಗೋಳಿಕ ವಿಸ್ತೀರ್ಣ 21,51,973 ಹೆಕ್ಟೇರ್‌

ಕೃಷಿ ವಿಶ್ವವಿದ್ಯಾಲಯ, ಧಾರವಾಡ: ಧಾರವಾಡ, ಹಾವೇರಿ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಹುಕ್ಕೇರಿ ಮತ್ತು ಖಾನಾಪುರ ತಾಲ್ಲೂಕುಗಳು. ಭೌಗೋಳಿಕ ವಿಸ್ತೀರ್ಣ 25,51,564 ಹೆಕ್ಟೇರ್‌

ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ: ಬಾಗಲಕೋಟೆ, ಬಿಜಾಪುರ, ಗದಗ ಮತ್ತು ಬೆಳಗಾವಿ ಜಿಲ್ಲೆಯ ಅಥಣಿ, ಗೋಕಾಕ, ರಾಯಭಾಗ, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕುಗಳು. ಭೌಗೋಳಿಕ ವಿಸ್ತೀರ್ಣ 29,06,963 ಹೆಕ್ಟೇರ್‌

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ. ಭೌಗೋಳಿಕ ವಿಸ್ತೀರ್ಣ 28,58,259 ಹೆಕ್ಟೇರ್‌

ವಿಶ್ವವಿದ್ಯಾಲಯಗಳ ಜವಾಬ್ದಾರಿಗಳ ಕುರಿತು ಕುವೆಂಪು ಚಿಂತನೆ

ಕುವೆಂಪುರವರು 1956ರಿಂದ 1960ರವರೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಅವರು ವಿಶ್ವವಿದ್ಯಾಲಯದ ಜವಾಬ್ದಾರಿಗಳನ್ನು ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗಗಳೆಂದು ಕರೆದು ಆ ಎಲ್ಲಾ ಅಂಗಗಳನ್ನು ದೇಹದ ಅಂಗಗಳಿಗೆ ಹೋಲಿಸಿದ್ದಾರೆ. ಬೋಧನೆಯಲ್ಲಿ ತೊಡಗಿರುವವರು ಕೈ ಸನ್ನೆಗಳ ಮೂಲಕ ಪರಿಣಾಮಕಾರಿಯಾಗಿ ಬೋಧಿಸುತ್ತಾರಾದ್ದರಿಂದ ಬೋಧನಾಂಗವನ್ನು ಕೈಗಳಿಗೂ, ಸಂಶೋಧನೆ ಮಾಡಲು ಮಿದುಳಿನಲ್ಲಿ ಚಿಂತನೆಗಳು ಹೊರಹೊಮ್ಮುವುದರಿಂದ ಸಂಶೋಧನಾಂಗವನ್ನು ಮಿದುಳಿಗೂ, ಹೃದಯವು ಇಡೀ ದೇಹಕ್ಕೆ ರಕ್ತವನ್ನು ಪೂರೈಸಿದಂತೆ ಪ್ರಸಾರಾಂಗದ ಪುಸ್ತಕಗಳು ಇಡೀ ಸಮಾಜಕ್ಕೆ ತಲುಪುವುದರಿಂದ ಪ್ರಸಾರಾಂಗವನ್ನು ಹೃದಯಕ್ಕೆ ಹೋಲಿಸಿದ್ದಾರೆ.

ಕೃಷಿ ವಿವಿಗಳಲ್ಲಿ ಪ್ರಸಾರಾಂಗಕ್ಕೆ ಸಮನಾದ ಅಂಗವೆಂದರೆ ವಿಸ್ತರಣಾ ಚಟುವಟಿಕೆ ಅಥವಾ ವಿಸ್ತರಣಾ ಶಿಕ್ಷಣ. ರೈತರಿಗೆ, ಉದ್ದಿಮೆದಾರರಿಗೆ, ನವೋದ್ಯಮದಾರರಿಗೆ, ಸಾರ್ವಜನಿಕರಿಗೆ ವಿಸ್ತರಣಾ ಶಿಕ್ಷಣವನ್ನು ತಲುಪಿಸಬೇಕಿದೆ. ಆಂಗ್ಲಭಾಷೆಯಲ್ಲಿ ‘ಲ್ಯಾಬೊರೇಟರಿ ಟು ಲ್ಯಾಂಡ್’ (ಪ್ರಯೋಗಾಲಯದಿಂದ ರೈತರ ಹೊಲಗಳಿಗೆ) ಎಂಬ ಪದಪುಂಜದ ಮೂಲಕ ಒತ್ತು ನೀಡಲಾಗಿದೆ.

Farmers at Mysore

ಕುವೆಂಪು ಚಿಂತನೆಯನ್ನು ಅಕ್ಷರಶಃ ಪಾಲಿಸಿದ ಕೀರ್ತಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಅದು ಸದಾ ಮುಂದಿದೆ. ಗುಣಮಟ್ಟದ ಶಿಕ್ಷಣವಿದೆ. ಹಲವಾರು ತಳಿಗಳನ್ನು ಬಿಡುಗಡೆ ಮಾಡಿದೆ. ಕನ್ನಡ ಅಧ್ಯಯನ ವಿಭಾಗವು 400ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟವಾಗುತ್ತಿದ್ದ ‘ದಿ ಮೈಸೂರ್ ಅಗ್ರಿಕಲ್ಚರಲ್ ಅಂಡ್ ಎಕ್ಸ್‌ಪರಿಮೆಂಟಲ್ ಯೂನಿಯನ್ ಜರ್ನಲ್’ ಅನ್ನು ಆಂಗ್ಲಭಾಷೆಯಲ್ಲಿ ‘ಮೈಸೂರ್ ಜರ್ನಲ್ ಆಫ್ ಆಗ್ರಿಕಲ್ಚರಲ್ ಸೈನ್ಸಸ್’ ಆಗಿ 59 ವರ್ಷಗಳಿಂದ ಉತ್ತಮ ನಾಸ್ ಸ್ಕೋರ್‍ನೊಂದಿಗೆ ಪ್ರಕಟಿಸುತ್ತಿದೆ. ‘ಕೃಷಿ ವಿಜ್ಞಾನ’ ಎಂಬ ಕನ್ನಡ ತ್ರೈಮಾಸಿಕ ಪತ್ರಿಕೆಯು ನಿರಂತರವಾಗಿ 49 ವರ್ಷಗಳಿಂದ ಪ್ರಕಟವಾಗುತ್ತಿದೆ. ವಿಶ್ವದರ್ಜೆಯ ಗ್ರಂಥಾಲಯವಿದೆ. ಇದೇ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವೂ ಪ್ರಗತಿ ಪಥದಲ್ಲಿದೆ ಮತ್ತು 2024 ಹಾಗೂ 2025ರ ಕೃಷಿ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಶ್ರೇಣಿ ಪಡೆದಿದೆ.

ಸಮಗ್ರ ಬೇಸಾಯ ಪದ್ದತಿಯ ಅಳವಡಿಕೆ

ಕೃಷಿಯ ಬೆಳೆಗಳು, ತೋಟಗಾರಿಕೆ ಬೆಳೆಗಳು, ಕುರಿ ಮತ್ತು ಮೇಕೆ ಸಾಕಾಣಿಕೆ, ದನ ಸಾಕಾಣಿಕೆ, ಮಿಶ್ರ ಬೆಳೆಗಳ ಕೃಷಿ, ಕೋಳಿ ಸಾಕಾಣಿಕೆ, ಹನಿ ನೀರಾವರಿ, ಸಾವಯವ ಕೃಷಿ, ಕೃಷಿಯ ಬೆಳೆಯುಳಿಕೆಗಳನ್ನು ದನಗಳಿಗೆ ಮೇವಾಗಿ ಬಳಸುವಿಕೆ, ಮೇವು ಬೆಳೆ, ಮರ ಮೇವುಗಳ ನೆಡುವಿಕೆ. ಹೀಗೆ ಎಲ್ಲವನ್ನೂ ಒಟ್ಟಿಗೆ ಕೈಗೊಂಡರೆ ಕೃಷಿಯು ಸುಸ್ಥಿರ ಹಾಗೂ ಸಮಗ್ರ ಕೃಷಿಯಾಗುತ್ತದೆ. ಅದರಿಂದ ರೈತನಿಗೆ ವರ್ಷಪೂರ್ತಿ ಆದಾಯ ಬರುತ್ತದೆ. ಸಮಗ್ರ ಬೇಸಾಯ ಪದ್ದತಿಯು ಒಂದು ಆಂದೋಲನವಾದಾಗ ರೈತರ ಆತ್ಮಹತ್ಯೆ ಪ್ರಕರಣಗಳು ಕಮ್ಮಿಯಾಗುತ್ತವೆ.

ರೈತ ಯಾವುದೇ ಕೃಷಿ ವಿಜ್ಞಾನಗಳನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ಅವರಿಗೆ ಬೇಕಾದ ಕೃಷಿ ವಿಸ್ತರಣೆಯ ಸಲಹೆ ಸೂಚನೆಗಳಿಗಾಗಿ ಈಗ ‘ಪಿಲ್ಲರ್ ಟು ಪೋಸ್ಟ್’ ಎಂಬಂತೆ ಅಲೆಯಬೇಕಿದೆ. ಕೆಲವು ವಿವಿಗಳು ‘ನಾಟ್ ರೀಚೇಬಲ್ ಯೂನಿವರ್ಸಿಟಿ’ಗಳಾಗಿರುವುದರಿಂದ ಅಲೆಯುವ ಕೆಲಸ ಬೇಡವೇ ಬೇಡವೆಂದು ನಿರ್ಲಿಪ್ತತೆಯಿಂದ ತಮ್ಮ ಪಾಡಿಗೆ ತಾವು ಬೇಸಾಯ ಮಾಡುವ ರೈತರ ಸಂಖ್ಯೆಯೇ ಅಧಿಕವಿದೆ. ಸಮಗ್ರ ಕೃಷಿ ವಿವಿಗಳು ಸ್ಥಾಪನೆಯಾದರೆ ಅವು ರೈತರ ಕೈಗೆಟಕುತ್ತವೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಕೆಲವು ಮಾರಕ ಅಂಶಗಳನ್ನು ರಾಜ್ಯ ಸರ್ಕಾರವು ಅಳವಡಿಸಿಕೊಂಡಿಲ್ಲ. ‘ಮಲ್ಟಿಪಲ್ ಎಂಟ್ರಿ ಅಂಡ್ ಎಕ್ಸಿಟ್’ ಎಂಬ ಬಡವರ ವಿರೋಧಿ ನೀತಿಯನ್ನು ಬಿ.ಎ., ಬಿ.ಕಾಂ., ಹಾಗೂ ಬಿ.ಎಸ್ಸಿ. ಪದವಿಗಳ ವ್ಯಾಸಂಗದಿಂದ ಕೈಬಿಡಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಏಕ ವಿಷಯದ ವಿಶ್ವವಿದ್ಯಾಲಯ (Standalone University)ಗಳನ್ನು ಬಹುಶಿಸ್ತೀಯ ವಿಶ್ವವಿದ್ಯಾಲಯಗಳನ್ನಾಗಿ ಮರು ಸಂಘಟಿಸಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಒಪ್ಪಬಹುದಾದ ಬಹುಮುಖ್ಯ ಅಂಶವಿದು. ಉಳಿದ ಬಹುತೇಕ ಅಂಶಗಳು ಶಿಕ್ಷಣವನ್ನು ಬಡವರಿಂದ ದೂರ ಸರಿಸುವ ನೀತಿಗಳಾಗಿವೆಯೇನೋ ಎಂಬ ಅನುಮಾನಕ್ಕೆಡೆ ಮಾಡಿಕೊಡುತ್ತಿವೆ.

ಜೊತೆಗೆ ಕೃಷಿ ಶಿಕ್ಷಣವನ್ನು ದೇಶದೆಲ್ಲೆಡೆ ನಿಯಂತ್ರಿಸಲು ಆಗಿಂದಾಗ್ಗೆ ಅಧ್ಯಯನ ವರದಿ ಸಲ್ಲಿಸುವ ಡೀನ್ ಸಮಿತಿಯು ತನ್ನ ಆರನೇ ವರದಿಯಲ್ಲಿ ಬಹುಶಿಸ್ತೀಯ ವಿಶ್ವವಿದ್ಯಾಲಯಗಳ ಅರ್ಥಾತ್ ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆಗೆ ಕರೆಕೊಟ್ಟಿದೆ.

ಪಶುವೈದ್ಯಕೀಯ ವಿವಿಯ ಮಸೂದೆ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚೆ

ಫೆಬ್ರವರಿ 11, 2004ರಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕಪಪಮೀವಿವಿ)ದ ಮಸೂದೆಯನ್ನು ವಿಧಾನ ಪರಿಷತ್ತಿನಲ್ಲಿ ಅಂಗೀಕಾರಕ್ಕಾಗಿ ಮಂಡಿಸಿದಾಗ ಮಸೂದೆಯನ್ನು ಅಧ್ಯಯನ ಮಾಡುವುದಕ್ಕೆ ಸ್ವಲ್ಪ ಸಮಯವನ್ನು ಸರ್ಕಾರ ಕೊಡಬೇಕಿತ್ತು ಎಂಬ ಚರ್ಚೆಯಾಗಿದೆ. ನಿನ್ನೆ ಕೊಟ್ಟಿದ್ದರೆ ಓದಿಕೊಂಡು ಬರುತ್ತಿದ್ದೆವು ಎಂದಿದ್ದಾರೆ. ಸದಸ್ಯರಾದ ಡಾ. ವಿ. ಎಸ್. ಆಚಾರ್ಯ ಮತ್ತು ಡಿ. ಎಚ್. ಶಂಕರಮೂರ್ತಿಯವರು ಮಸೂದೆಯನ್ನು ಓದಲು ಸಮಯ ಕೊಡದೆ ಈಗ ಕೊಟ್ಟು ಈಗಲೇ ಅಂಗೀಕರಿಸಿರಿ ಎಂದು ಕೇಳುತ್ತಿರುವುದರ ಕುರಿತು ಮಾತನಾಡಿದ್ದಾರೆ. ನಮ್ಮ ಕಣ್ಣಿನಲ್ಲಿ ಅಥವಾ ಮೆದುಳಿನಲ್ಲಿ ಸ್ಕ್ಯಾನರ್ ಇಲ್ಲವೆಂದು, ನಮಗೆ ಎಕ್ಸ್‍ರೇ ಕಣ್ಣುಗಳಿಲ್ಲವೆಂದು, ಇಷ್ಟೊಂದು ದೊಡ್ಡ ಪುಸ್ತಕವನ್ನು ನಮ್ಮ ಕೈಗೆ ಕೊಟ್ಟು ತಕ್ಷಣ ಹೇಳಿ ಎಂದರೆ ನಾವೇನು ಸರ್ವಜ್ಞರೇ, ಒಂದು ವೇಳೆ ತಪ್ಪುಗಳಿದ್ದರೆ ಅಧಿಕಾರಿಗಳು, ಜನರು ಇದನ್ನು ನೀವೇ ಪಾಸ್ ಮಾಡಿದ್ದು ಎಂದು ಹೇಳುತ್ತಾರೆ ಎಂಬ ಸುದೀರ್ಘ ಚರ್ಚೆಯಾಗಿದೆ.

ರಾಜ್ಯದ ಇತರೆ ಕೃಷಿ ವಿಶ್ವವಿದ್ಯಾಲಯಗಳ ಅಧಿನಿಯಮಗಳಿಗೆ ಹೋಲಿಸಿದರೆ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಮಸೂದೆಯಲ್ಲಿ ಹಲವು ಕೊರತೆಗಳಿವೆ. ಡೀನ್ ಆಫ್ ಸ್ಟೂಡೆಂಟ್ ವೆಲ್ಪೇರ್ ಹುದ್ದೆಯಿಲ್ಲ. ಡೈರೆಕ್ಟರ್ ಆಫ್ ಎಜುಕೇಷನ್ (ಶಿಕ್ಷಣ ನಿರ್ದೇಶಕರು : ಡಿಒಇ) ಹುದ್ದೆ ಇಲ್ಲ. ಇದರಿಂದ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಉತ್ತಮ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆಸ್ತಿ ಅಧಿಕಾರಿಯ ಹುದ್ದೆಯಿಲ್ಲ. ಒಬ್ಬ ಕುಲಸಚಿವರು ಶೈಕ್ಷಣಿಕ, ಆಡಳಿತ, ಆಸ್ತಿ ನಿಯಂತ್ರಣದಂತಹ ಹಲವು ಜವಾಬ್ದಾರಿಗಳನ್ನು ನಿರ್ವಹಿಸುವುದು ದುಸ್ತರವಾಗಿದೆ. ಪಶುವೈದ್ಯಕೀಯ ವಿವಿಯು ಆರಂಭವಾಗಿ 20 ವರ್ಷಗಳಾದರೂ ಅಗತ್ಯ ಹುದ್ದೆಗಳನ್ನು ಸೃಜಿಸಿಲ್ಲ. ಸ್ನಾತಕೋತ್ತರ ಮತ್ತು ಡಾಕ್ಟೊರೇಟ್ ಸ್ಕಾಲರ್‍ಗಳಿಗೆ ಬೋಧಿಸಲು ಮತ್ತು ಸಂಶೋಧನೆಗಳಲ್ಲಿ ಮಾರ್ಗದರ್ಶನ ಮಾಡಲು ಹೆಚ್ಚುವರಿ ಶಿಕ್ಷಕರ ಹುದ್ದೆಗಳಿಲ್ಲ. ಸ್ನಾತಕ ಪದವಿಗೆಂದು ಮಂಜೂರಾದ ಹುದ್ದೆಗಳಲ್ಲಿ ಭರ್ತಿಯಾಗಿರುವ ಅತಿ ಕಡಿಮೆ ಸಂಖ್ಯೆಯ ಶಿಕ್ಷಕರೇ ಎಲ್ಲವನ್ನೂ ನಿಭಾಯಿಸಬೇಕಿದೆ.

ಅನಗತ್ಯ ಪ್ರಯಾಣ ವೆಚ್ಚ

ಬೀದರಿನ ಪಶುವೈದ್ಯಕೀಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಗಳು ಇಡೀ ರಾಜ್ಯ ವ್ಯಾಪ್ತಿಯನ್ನು ಹೊಂದಿರುವುದರಿಂದ ಹಲವು ಸಭೆ, ಸಮಾರಂಭಗಳು, ಬೋರ್ಡ್ ಆಫ್ ಸ್ಟಡೀಸ್ ಸಭೆ, ಅಕಾಡೆಮಿಕ್ ಕೌನ್ಸಿಲ್ ಸಭೆ, ವಾರ್ಷಿಕೋತ್ಸವ, ಘಟಿಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಆಗಿಂದಾಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಬೇಕಾಗಿರುವುದರಿಂದ ಪ್ರಯಾಣ ವೆಚ್ಚವು ಅನಗತ್ಯವಾಗಿ ಹೆಚ್ಚಾಗುತ್ತಿದೆ. ವಿಮಾನ ಪ್ರಯಾಣದ ವೆಚ್ಚವೂ ಇದೆ. ಸಮಗ್ರ ಕೃಷಿ ವಿವಿಗಳ ರಚನೆಯಾದರೆ ಇಂತಹ ಅನಗತ್ಯ ವೆಚ್ಚಗಳನ್ನು ತಗ್ಗಿಸಬಹುದು. ಸ್ಥಳೀಯವಾಗಿ ಸಮಗ್ರ ಕೃಷಿ ಮೇಳಗಳನ್ನು ಅರ್ಥಪೂರ್ಣವಾಗಿ ಹಾಗೂ ಆಕರ್ಷಕವಾಗಿ ಸಂಘಟಿಸಬಹುದು.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಲುವು

ಇಡೀ ದೇಶದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಬಹುಶಿಸ್ತೀಯ ಕೃಷಿ ವಿಶ್ವವಿದ್ಯಾಲಯಗಳ ರಚನೆಯಾಗಬೇಕೆಂಬ ಧೋರಣೆಯನ್ನು ಹೊಂದಿದೆ. ಜೊತೆಗೆ, ಬಹುಶಿಸ್ತೀಯ ಸಂಶೋಧನಾ ಪ್ರಾಯೋಜನೆಗಳಿಗೆ ಅನುದಾನ ನೀಡಲು ಪ್ರಾಮುಖ್ಯತೆ ನೀಡುತ್ತಿದೆ. ರಾಜ್ಯ ಮಟ್ಟದಲ್ಲಿ ನೀತಿ ನಿರೂಪಣೆಯ ತೀರ್ಮಾನ ಮಾಡುವವರಿಗೆ ಇಂತಹ ಸದುದ್ದೇಶಗಳು ಮನವರಿಕೆಯಾಗಬೇಕಿದೆ.

ಉನ್ನತ ಶಿಕ್ಷಣದ ಪ್ರತಿ ಹಂತದಲ್ಲೂ ರಾಜಕೀಯವು ಅನಗತ್ಯವಾಗಿ ನುಸುಳುತ್ತಿದೆ. ಅದರಿಂದ ದೂರ ಸರಿದು ವೈಜ್ಞಾನಿಕ ತಳಹದಿಯ ಮೇಲೆ ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಒಟ್ಟಾರೆ ಸಮಾಜಕ್ಕೆ ನೆರವಾಗಲು ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ಮರು ರಚನೆಯು ಇಂದಿನ ತುರ್ತು ಆಗಬೇಕಿದೆ. ತಲುಪಲಾಗದ ರೈತರನ್ನು ತಲುಪಬೇಕಿದೆ. ಸಮಗ್ರ ಕೃಷಿ ವಿವಿಗಳಿಗೆ ರಾಜ್ಯ ಸರ್ಕಾರವು ಮೊದಲಿದ್ದಂತೆ ಧಾರಾಳವಾಗಿ ‘ಅಭಿವೃದ್ಧಿ ಅನುದಾನ’ವನ್ನು ನೀಡಬೇಕಿದೆ.

ಇದನ್ನೂ ಓದಿ ಕೃಷಿರಂಗ | ಪಶುವೈದ್ಯ ಉದ್ದಿಮೆದಾರರೊಬ್ಬರ ಯಶೋಗಾಥೆ

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...