ದಿಲ್ಲಿ ಮಾತು | ಕುಛ್ ದಿಲ್ ನೇ ಕಹಾ…ಕುಛ ಭಿ ನಹೀ

Date:

ಬಾಲ್ಯದಲ್ಲಿ ಗೋಕರ್ಣ ಹಾಗೂ ಗೋವೆಯ ಕಡಲನ್ನು, ಮಳೆಗಾಲದ ಭೋರ್ಗರೆಯುವ ರೌದ್ರತೆಯನ್ನೂ, ಬೇಸಿಗೆಯ ಹೊಂಬಣ್ಣದ ಸೊಬಗು, ಇಳಿಸಂಜೆಗೆ ಕಡಲ ಒಡಲಲ್ಲಿ ಲೀನವಾಗುವ ರವಿ, ಮೇಲೆ ಶುಭ್ರ ಆಗಸದಲ್ಲಿ ಬೆಳ್ಳಿಯ ಹಾಲು ನೊರೆಯುವ ಚಂದ್ರನ ಬೆಳದಿಂಗಳ ಸ್ವಪ್ನಲೋಕವನ್ನೇ ಕಟ್ಟಿಕೊಂಡ ನನಗೆ, ಈ ಊರು ಬೆಂಗಾಡು, ಶಾಪಗ್ರಸ್ತ ಊರು ಎನಿಸುತ್ತಿತ್ತು. ಕುರುಕ್ಷೇತ್ರದ ಯುದ್ಧದ ಸರ್ವನಾಶ, ರಕ್ತದ ಹೊಳೆಯ ರೌರವವನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಇದೆಲ್ಲ ಸ್ಮಶಾನ ಭೂಮಿಯೇ ಎನಿಸುತ್ತಿತ್ತು.

ಫಾಲ್ಗುಣಕ್ಕಲ್ಲವೇ ನಾನು ಬಂದಿದ್ದು ಇಲ್ಲಿ! ದಿಲ್ಲಿಯ ಫಾಲ್ಗುಣ ಕಳೆದು ವಸಂತದ ಆಗಮನದ ಮುನ್ಸೂಚನೆಯಂತೆ ಅಕ್ಕಪಕ್ಕದ ಬೇವಿನ ಮರ, ಅರಳಿ ಮರದಲ್ಲಿ ಎಲೆಗಳೆಲ್ಲಾ ಉದುರಿ ಬೋಳಾಗಿ ಮತ್ತೆ ಎಣ್ಣೆನೀರು ಹಾಕಿಕೊಂಡ ಹಸಿ ಬಾಣಂತಿಯಂತಹ ಪುಟ್ಟ ಎಲೆಗಳು ಕೊನರಿಕೊಳ್ಳುವ ಸಂಭ್ರಮ. ಹಸಿರೆಲೆ ಕಾಣದಷ್ಟು ಅಮಲ್ತಾಸ್ ಮರದಲ್ಲಿ ಹಳದಿ ಹೂಗಳ ಗೊಂಚಲು ಗೊಂಚಲು ತೊನೆದಾಟ. ಗುಲ್‌ಮೊಹರ್ ಜಾತಿಗೆ ಸೇರಿದ ಅಮಲ್ತಾಸ್ ವಸಂತದ ಸ್ವಾಗತಕ್ಕೆಂದೇ ಅರಳಿಕೊಂಡಂತಿದ್ದು ಮೇ, ಜೂನ್, ಜುಲೈನ ಕೆಟ್ಟ ಬಿಸಿಲಲ್ಲಿ ಇದಕ್ಕೇನು ಸಂಭ್ರಮವೋ ಗೊತ್ತಿಲ್ಲ. ಕೊನೆ ಕೊನೆಗೆ ಎಲೆಗಳೆಲ್ಲ ಕಳಚಿಕೊಂಡು ಬರೀ ಹಳದೀ ಗೊಂಚಲು ತೂಗಾಡುವ ಝೂಮರ್‌ನಂತೆ ಒಮ್ಮೆ, ಗೆಜ್ಜೆಗಳ ಗೊಂಚಲಿನಂತೊಮ್ಮೆ ತೊನೆದಾಡುತ್ತಿರುತ್ತವೆ.

ಇದರ ಜೊತೆಗೆ ಗುಲ್‌ಮೊಹರಿನ ಸಾಮ್ರಾಜ್ಯ. ಮೈ ತುಂಬಾ ಹೂ ಹೊದ್ದ ಬೊಗನ್ ವಿಲ್ಲಾಗಳ ಬಣ್ಣದ ಮೆರವಣಿಗೆಯೂ ಈ ಬೇಸಿಗೆಗೆ ಎಲ್ಲಿಲ್ಲದ ಮೆರಗು ನೀಡಿರುತ್ತವೆ.   

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೀಗೆ ಈ ವಸಂತ ಋತು ಒಂದು ರೀತಿಯ ಯಾತನೆ-ಉಲ್ಲಾಸ ಒಟ್ಟೊಟ್ಟಿಗೆ ತರುತ್ತದೆ. ನನ್ನೂರಿನ ಮನೆ ಹತ್ತಿರದ ಉರ್ದು ಶಾಲೆಯ ಕಾಂಪೌಂಡಿನಲ್ಲಿ ಬೆಳೆದ ಗುಲ್‌ಮೊಹರ್ ಮರವನ್ನು ಬಾಲ್ಯದಿಂದಲೂ ನೋಡುತ್ತಿರುವೆ, ಈಗಲೂ ಹಾಗೆಯೇ ಇದೆ. ನೂರು ವರ್ಷಗಳಾದರೂ ಆಗಿರಬೇಕು ಈ ಮರಕ್ಕೆ. ಆ ಶಾಲೆಯ ಎದುರೇ ನನ್ನ ಬಾಲ್ಯದ ಹುಡುಗನ ಮನೆಯಿತ್ತು. ಆತ ನನಗಿಂತ ತುಸು ದೊಡ್ಡವನಿರಬೇಕು. ಈಗ ಇಲ್ಲ ಅವನು. ವಯಸ್ಸಲ್ಲದ ವಯಸ್ಸಿನಲ್ಲಿ ಬಹುಬೇಗನೇ ತೀರಿಕೊಂಡ. ನನ್ನ ಬಳಿ ಒಂದು ನೀಲಿ ಕವರಿನ ಡೈರಿಯಿತ್ತು. ಬಹುಶಃ ಅವನೇ ಕೊಟ್ಟಿದ್ದನೆಂದು ಕಾಣುತ್ತದೆ. ಆಗ ನಾನು ಹೈಸ್ಕೂಲ್ ವಿದ್ಯಾರ್ಥಿನಿ. ಅದರಲ್ಲೇನಾದರೂ ಬರೆದಿದ್ದಾನಾ ಅಂತ ನೋಡಿದರೆ ಏನೂ ಇದ್ದಿಲ್ಲ. ಜುಲೈ ತಿಂಗಳ ಪುಟದಲ್ಲಿ ತಾರೀಖು 5ರ ಪುಟದಲ್ಲಿ ತನ್ನ ಹೆಸರು ಬರೆದಿದ್ದ ಕಲಾತ್ಮಕವಾದ ವಿನ್ಯಾಸದಲ್ಲಿ. ಆ ಹೆಸರಿನ ಅಕ್ಷರಗಳೊಳಗೇ ಮತ್ತೊಂದು ಹೆಸರು. ಅದು ಬೇರೆಯವರಿಗೆ ಗೊತ್ತಾಗುವಂತಿದ್ದಿಲ್ಲ.

Amaltas Tree

ಊರಿಗೆ ಹೋದಾಗೆಲ್ಲ ಹಳೆಯ ಸ್ನೇಹಿತರು ಸಿಕ್ಕಾಗ ಅವನ ಅಕಾಲ ಮೃತ್ಯುವಿನ ಬಗ್ಗೆ ವಿಷಾಧಪಡುತ್ತಿರುತ್ತೇವೆ. ಈಗಲೂ ಅದೇ ವಿಷಾಧದಿಂದ ನೆನೆಪಿಸಿಕೊಳ್ಳುತ್ತಿದ್ದೇನೆ. ಆಗೆಲ್ಲೊ ಅಂಕೋಲೆಯಲ್ಲೋ, ಕಾರವಾರದಲ್ಲೋ ಇದ್ದಾನೆ ಎಂದು ಅವ್ವ ಹೇಳಿದ್ದಳು. ಈಗ ಇಷ್ಟು ವರುಷಗಳಾದರೂ ನನಗೆ ನೆನಪಾಗುವುದು ಅದೇ ಖಾಕಿ ಚಡ್ಡಿ, ಮಾಸಲು ಬಣ್ಣದ ಬುಶ್ ಶರಟಿನ ಎಣ್ಣೆಗೆಂಪಿನ, ಚೂಪು ಮೂಗಿನ ಹದಿಮೂರೋ ಹದಿನಾಲ್ಕೋ ವರುಷದ ಅವ. ಅದೇ ರೂಪು ಮತ್ತು ದೆಹಲಿಯ  ನಡುಹಗಲಿನ ಗುಲ್ ಮೊಹರ್ ಕೆಂಪಿನ ತಂಪು ನೆರಳು ಕಣ್ಣಲ್ಲಿ ಗೂಡುಕಟ್ಟಿದಂತಿದೆ.   

ಒಮ್ಮೆ ಮುಂದೆಲೆ ಕೂದಲೆಲ್ಲ ಉದುರಿ ತಲೆಬೋಳಾಗಿ, ಕುರುಚಲು ಗಡ್ಡ ಬಿಟ್ಟುಕೊಂಡು ಸಾಬಿಯಂತಾದ ಅವನನ್ನು ನೋಡಿ ‘ಅಯ್ಯೋ ಹೇಗಾಗಿಬಿಟ್ಟ ಇವ’ ಎಂದು ನಕ್ಕಿದ್ದೆನಾದರೂ ಯಾಕೋ ಸಂಕಟವಾಗಿತ್ತು. ನಮ್ಮ ವಯಸ್ಸೂ ಸಂಜೆ ಬಿಸಿಲಿನಂತೆ ಇಳಿಯುತ್ತಿದೆಯೆಂಬ ಸಾಕ್ಷಿಪ್ರಜ್ಞೆಯೂ ಕಾಡತೊಡಗಿತ್ತು. ‘ನೀನು ಮಾತ್ರ ಹಂಗ ಇದ್ದೀಯಲ್ಲ ಮಾರಾಯತೀ’ ಎಂದಾಗ ನಿಜಕ್ಕೂ ಬೀಗಿದ್ದೆ ಎನಿಸಿತ್ತಲ್ಲ! ಅವನ ಹೆಂಡತಿ ಕಮಲೆ ನನ್ನ ಶಾಲಾ ಗೆಳತಿ. ಒಮ್ಮೆ ಅವಳಿಗೂ ಮಗುವಾದ ಕಾಲಕ್ಕೆ  ನನಗೂ ಮಗುವಾಗಿತ್ತು. ತವರಿನಲ್ಲಿರುವ ಹೆಂಡತಿಯನ್ನೂ, ತನ್ನ ಮಗುವನ್ನೂ ಪದೇ ಪದೇ ಹೋಗಿ ನೋಡಲಾರದ್ದಕ್ಕೋ, ಮಗುವಿನ ವ್ಯಾಮೋಹಕ್ಕೋ ನಮ್ಮ ಮನೆಗೆ ಬಂದು, ಬಾಣಂತಿ ಕೋಣೆಯಲ್ಲೇ ಕುಳಿತು ಮಲಗಿದ ನನ್ನ ಮಗುವನ್ನು ತೊಡೆ ಮೇಲಿಟ್ಟುಕೊಂಡು ಗಂಟೆಗಟ್ಟಲೆ ಕುಳಿತು ಮಾತಾಡುತ್ತಿದ್ದ ಅವನನ್ನು ನನ್ನ ಅವ್ವ ಅಸಮಾಧಾನದಲ್ಲಿ ಗುರ್ರಾಯಿಸಿಕೊಂಡು ನೋಡುತ್ತಿದ್ದಳು. ಹೆಸರಿಲ್ಲದ ಆ ನೆನಪುಗಳನ್ನು ಏನೆಂದು ವಿವರಿಸಲಿ? ಅವ್ವ ಬೈಯುತ್ತಿದ್ದಳು ‘ನೀನು ಬಾಣಂತಿ ಮಲಗಿ ಆರಾಮ ತಗೊಳ್ಳದೇ ಕೂರಿಸಿಕೊಂಡು ಕೂರ್ತಿಯಲ್ಲ’ ಎಂದು. ಹೋಗು – ಎಂದು ಹೇಗೆ ಯಾವ ಬಾಯಿಂದ ಹೇಳಲಿ? ಅವ ಹಾಗೇ ಕೂತಿರಲಿ ಇಲ್ಲೇ ಎಂದು ಒಮ್ಮೊಮ್ಮೆ ಬಯಸುವ ಕಳ್ಳ ಮನಸ್ಸನ್ನು ಅವ್ವ ಅರಿತಿದ್ದಳೇ?  

ನನಗೂ ಆಗ ದಿಲ್ಲಿ ಹೊಸದಾಗಿತ್ತು. ಅದರಲ್ಲಿ ಇಂತಹ ನೆನಪುಗಳು ಕಾಡುತ್ತಿರುವಾಗ ಮಧ್ಯಾಹ್ನದ ಹೊತ್ತು, ಸಂಜೆ ಯಾವಾಗೆಂದರೆ ಆವಾಗ ಎದುರು ಮನೆಯ ಮೇಜರ್‌ನ ಹೆಂಡತಿ ಟೆರೇಸ್ ಮೇಲೆ ಟೇಪ್ ರೆಕಾರ್ಡರ್ ಹಾಕಿ ಊರಿಗೆಲ್ಲ ರಫಿ, ಲತಾ ಹಾಡುಗಳನ್ನು ಕೇಳಿಸುತ್ತಿರುತ್ತಿದ್ದಳು. “ಬೇಖುದೀ ಮೇ ಸನಂ, ಉಠ ಗಯೇ ಜೋ ಕದಂ….”, “ಆ ಗಯೇ  ಪಾಸ್ ಹಂ…, ಭಂವರಾ ಬಡಾ ನಾದಾನ್ ಹೈ….” ಮತ್ತಿನ್ನೇನೋ. ಇಲ್ಲಿ ಜುಲೈ ತಿಂಗಳು ಹತ್ತಿರವಾದರೂ ಒಂದು ಹನಿ ಮಳೆ ಇಲ್ಲ. ಆಷಾಢದ ಗಾಳಿಯನ್ನು ಮೀರಿಸಿ, ಆಂಧೀ ಎಂಬ ಧೂಳಿನ ಸುಂಟರಗಾಳಿಯೋ, ಬಿರುಗಾಳಿಯೋ ಎದ್ದು, ಎಲ್ಲವನ್ನೂ ಹಾರಿಸಿಕೊಂಡು ಹೋಗುತ್ತದೆ. ಮನೆತುಂಬ ರಾಜಸ್ಥಾನದ ಮರುಭೂಮಿಯ ಮರಳು ತುಂಬಿಕೊಂಡಂತಾಗಿ ಹಸನುಗೊಳಿಸುವುದರಲ್ಲಿಯೇ ಸಾಕಾಗುತ್ತದೆ. ಹೊರಗಡೆ ಹೋದರೆ ಲೂಊ… ಎಂಬ ಬಿಸಿಹವೆ ಮುಖಕ್ಕೆ ಅಡರಿ ಬೇನೆ ಬೀಳಬಹುದು. ಅಕ್ಕ ಪಕ್ಕದವರನ್ನು ನಾನು ಇಲ್ಲಿ ಮಳೆಯಾಗುವುದಿಲ್ಲವೇ? ಮಳೆಗಾಲ ಯಾವಾಗ ಎಂದೆಲ್ಲ ಮುಗ್ಧ ನಿರಾಸೆಯಿಂದ ಕೇಳುವಾಗ ಅವರೆಲ್ಲರ ಮುಖಭಾವ ಕನಿಕರ ತೋರುತ್ತಿದ್ದಾರೆಂಬಂತೆ ಕಾಣುತ್ತಿತ್ತು.

ಓಹೋ ಯಾಕಿಲ್ಲ? ಆಗುತ್ತದೆ ಇಲ್ಲಿ ಜುಲೈ 7ಕ್ಕೆ ಇಲ್ಲಿ ಮಾನ್ಸೂನ್ ಎಂದಿದ್ದರು. ಅದಕ್ಕಾಗಿ ಜುಲೈನ ಮನ್ಸೂನಿಗಾಗಿ ಕಾಯುವ ಅಭ್ಯಾಸ ಕಲಿತೆ. ದಣಿಸಿಬಿಡುವ ಬೇಸಿಗೆ ನಾನು ನಮ್ಮೂರಿನ ಶಾಲ್ಮಲೆಯನ್ನೂ, ಮಳೆಗಾಲವನ್ನೂ ಹಂಬಲಿಸುವಂತೆ ಮಾಡಿದ್ದವು. ಬಾಲ್ಯದಲ್ಲಿ ಗೋಕರ್ಣ ಹಾಗೂ ಗೋವೆಯ ಕಡಲನ್ನು, ಮಳೆಗಾಲದ ಭೋರ್ಗರೆಯುವ ರೌದ್ರತೆಯನ್ನೂ, ಬೇಸಿಗೆಯ ಹೊಂಬಣ್ಣದ ಸೊಬಗು, ಇಳಿಸಂಜೆಗೆ ಕಡಲ ಒಡಲಲ್ಲಿ ಲೀನವಾಗುವ ರವಿ, ಮೇಲೆ ಶುಭ್ರ ಆಗಸದಲ್ಲಿ ಬೆಳ್ಳಿಯ ಹಾಲು ನೊರೆಯುವ ಚಂದ್ರನ ಬೆಳದಿಂಗಳ ಸ್ವಪ್ನಲೋಕವನ್ನೇ ಕಟ್ಟಿಕೊಂಡ ನನಗೆ, ಈ ಊರು ಬೆಂಗಾಡು, ಶಾಪಗ್ರಸ್ತ ಊರು ಎನಿಸುತ್ತಿತ್ತು. ಕುರುಕ್ಷೇತ್ರದ ಯುದ್ಧದ ಸರ್ವನಾಶ, ರಕ್ತದ ಹೊಳೆಯ ರೌರವವನ್ನು ಕಲ್ಪಿಸಿಕೊಳ್ಳುತ್ತಿದ್ದೆ. ಇದೆಲ್ಲ ಸ್ಮಶಾನ ಭೂಮಿಯೇ ಎನಿಸುತ್ತಿತ್ತು.    

ದೆಹಲಿ ಮಳೆ 3

ಅಂತಹ ಸಮಯದಲ್ಲಿಯೇ ಅವನು ಮತ್ತು ಕಮಲೆ ದೆಹಲಿಗೆ ಆಗಮಿಸಿದ್ದರು. ಅವನಿಗೆ ಯಾವುದೋ ಕಚೇರಿ ಕೆಲಸದ ನಿಮಿತ್ತವಂತೆ. ನಮ್ಮ ಮನೆಯ ಹತ್ತಿರವೇ ಇನ್ನೊಂದು ಕನ್ನಡದ ಕುಟುಂಬವಿತ್ತು. ಹುಬ್ಬಳ್ಳಿಯವರು ಮತ್ತು ಅವನ ಆಪ್ತ ಗೆಳೆಯ. ಆಗ ಅವನ ಗೆಳೆಯ ಒಬ್ಬನೇ ಇದ್ದುದರಿಂದ ಇವರು ಅವರ ಮನೆಯಲ್ಲೇ ಉಳಿದುಕೊಂಡಿದ್ದರು. ಕಮಲೆಗೆ ದೆಹಲಿ ತೋರಿಸುವ, ಸುತ್ತಿಸುವ ಕೆಲಸ ನನಗೆ ವಹಿಸಿಕೊಟ್ಟಿದ್ದ ಅವ ನಿಶ್ಚಿಂತೆಯಿಂದ ತನ್ನ ಕೆಲಸಕ್ಕೆ ಹೊರಟುಬಿಡುತ್ತಿದ್ದ. ನಾನೂ ಕಮಲೆ ಒಂದೇ ಶಾಲೆಯಲ್ಲಿ, ಒಂದೇ ತರಗತಿಯಲ್ಲಿ ಓದಿದ ಗೆಳತಿಯರಾದರೂ ಅವಳ ಗೆಳತಿಯರ ಗುಂಪೇ ಬೇರೆ, ನನ್ನ ಗುಂಪೇ ಬೇರೆ. ನಾವೆಂದೂ ಹೆಚ್ಚು ಬೆರೆತವರಲ್ಲ. ಇಲ್ಲಿ ನಾವಿಬ್ಬರೂ ಮತ್ತೆ ಮರಳಿ ಶಾಲಾ ದಿನಗಳನ್ನು, ಗೆಳತಿಯರನ್ನು, ನಮಗೆ ಕಲಿಸಿದ ಟೀಚರು, ಮೇಷ್ಟ್ರನ್ನು ನೆನಪಿಕೊಳ್ಳುವಂತಾದೆವು. ಬೆಳಿಗ್ಗೆ ತಿಂಡಿ ಮನೆಗೆಲಸ ಮುಗಿಸಿ ಹೊರಟುಬಿಡುತ್ತಿದ್ದೆವು. ಅವಳಿಗೆ ಮೆಹರೋಲಿಯ ಕುತುಬ್ ಮಿನಾರ್, ಚಿರಾಗ ದಿಲ್ಲಿ, ನೆಹರೂ ಪ್ಲೇಸಿನಲ್ಲಿನ ಲೋಟಸ್ ಟೆಂಪಲ್ ಸುತ್ತಾಡಿಸಿದೆ. ಪ್ರತಿಯೊಂದು ಗಲ್ಲಿ, ಇಮಾರತ್ತು, ಗುಮ್ಮಟ, ಪಾಳುಬಿದ್ದ ಕೋಟೆ ಕೊತ್ತಲಗಳ ಐತಿಹಾಸಿಕ ಹಿನ್ನೆಲೆ, ವಿವರ ನನಗೆ ಗೊತ್ತಿದ್ದನ್ನು ತಿಳಿಸಿ, ಲೋಧಿ, ಕುತ್ಬುದ್ದೀನ ಐಬಕ್ ಕಾಲದಲ್ಲಿ ಹೀಗಿದ್ದಿರಬಹುದು, ಹಾಗಿದ್ದಿರಬಹುದು ಎಂಬೆಲ್ಲ ಚರ್ಚೆಗಳೂ ನಡೆದವು. ಹೈಸ್ಕೂಲ್ ಹುಡುಗಿಯರಂತೆ ಗೋಲಾ ಬರ್ಫ್, ಐಸ್ ಕ್ರೀಂ ಇತ್ಯಾದಿ ಮೆಲ್ಲುತ್ತಾ ಬಿಸಿಲಿನ ಪರಿವೆಯಿಲ್ಲದೇ ಕಮಲೆ ದಣಿಯುವಂತೆಲ್ಲ ಓಡಾಡಿಸಿದೆ. ಅಂದಿನ ಆ ಹುರುಪು, ಉತ್ಸಾಹ ನೆನೆದರೆ ಈಗ ಆಶ್ಚರ್ಯವೆನಿಸುತ್ತದೆ. ಇದ್ದ ನಾಲ್ಕು ದಿನ, ಅವಳು ಸಣ್ಣ ಮಕ್ಕಳು ಕಲ್ಲು ಮಣ್ಣಿನಲ್ಲಿ ಅಡುಗೆ  ಆಟ ಆಡುವಂತೆ, ಮನೆಯೆಂಬ ಒಂದೇ ಕೋಣೆಯ ತುಂಬ ಸಾಮಾನುಗಳನ್ನು ಹರಡಿಕೊಂಡು ಸಂಕಷ್ಟಿಯ ಗಣಪನಿಗೆ ಮೋದಕ ಮಾಡುತ್ತಿದ್ದ ಚಿತ್ರ ನನ್ನ ನೆನಪಲ್ಲಿ ಮಾಸದೇ ಉಳಿದಿದೆ. ನೆನೆದು ನಗುವೂ ಬರುತ್ತದೆ. ಸಾಕಷ್ಟು ಬಾರಿ ಮಾತಿನಲ್ಲಿ ಅವನ ವಿಷಯ ಬರುತ್ತಿತ್ತು. ಅಷ್ಟೇ ಬಾರಿ ಆಕೆ “ನಿನ್ನ ಸ್ವಭಾವ, ಅವನ ಸ್ವಭಾವ ಒಂದೇ ಸಮ ಇದೆ ನೋಡು” ಎಂದು ನಾನು ಹುಬ್ಬೇರಿಸುವಂತೆ ಮಾಡಿದ್ದಳು. 

ನನಗೆ ಬಾಲ್ಯದ ಸವಿನೆನಪುಗಳೆಲ್ಲ ಲಗ್ಗೆ ಇಡುತ್ತಿದ್ದವು. ಕಮಲೆಗೆ ಇದನ್ನೆಲ್ಲ ಹೇಳಿದೆನೋ ಇಲ್ಲೋ ಗೊತ್ತಿಲ್ಲ. ನನ್ನ ಫ್ರಾಕಿಗೆ ಅವನ ಅಂಗಿ ಮ್ಯಾಚ್ ಆದರೆ ಹಿಗ್ಗುತ್ತಿದ್ದ ಸಂತಸವನ್ನು, ಎಲ್ಲಮ್ಮನ ಗುಡ್ಡಕ್ಕೆ ನಾಲ್ಕಾರು ಮನೆಯವರೆಲ್ಲ ಸೇರಿ ಹೋದಾಗ ನಾವು ಮಕ್ಕಳು ಅಡುಗೆಗೆ ಗುಡ್ಡ ಗುಡ್ಡ ಹತ್ತಿ ಸೌದೆ, ಕುಳ್ಳು ಹುಡುಕಿ ತರುತ್ತಿದ್ದುದು. ಯಾವಾಗಲೂ ಅವನ ಜೊತೆಯಾಗಿಯೇ ಓಡಾಡಿಕೊಂಡಿದ್ದದ್ದಕ್ಕೆ ಅವ್ವ ಊದುಕೊಳವೆಯಿಂದ ಕಾಲಿಗೆ ಬಾರಿಸಿದ್ದು ಮರೆತೇ ಇಲ್ಲ. ಜೊತೆಗೆ ಬೇರೆ ಮಕ್ಕಳೂ ಇರುತ್ತಿದ್ದರು. ನಾನು ಹೆಣ್ಣುಮಗಳೆಂಬ ಕಾರಣಕ್ಕೆ ಗಂಡುಹುಡುಗನೊಂದಿಗೆ ಮಾತಾಡಿದ ಕಾರಣಕ್ಕೆ ಪೆಟ್ಟು ತಿಂದಿದ್ದೆ. ಅದು ಅವನಿಗೂ ನೆನಪಿತ್ತು. ನೆನೆದುಕೊಂಡು ಸಾಕಷ್ಟು ನಕ್ಕಿದ್ದೇವೆ. “ಪಾಪ ನನ್ನಿಂದಾಗಿ ನೀನು ವಿನಾಕಾರಣ ಪೆಟ್ಟು ತಿಂತಿದ್ದೆ” ಎನ್ನುವಾಗ ಮಾತುಗಳು ಮೂಕವಾಗುತ್ತವೆ. ‘ಹೌದು ಮಾರಾಯ, ಚೂರು ಬುದ್ಧಿ ಇದ್ದಿದ್ದರೆ ಆ ಊದುಗೊಳವೆಯನ್ನು ನೆನಪಿಗೆಂತ ಕದ್ದು ತರುತ್ತಿದ್ದೆ’ ಅಲ್ಲಾ?’ ಎನ್ನುವಾಗೆಲ್ಲ ಬದುಕು ಎಲ್ಲಿಂದೆಲ್ಲಿಗೆ ಕರೆದೊಯ್ಯಿತೆಂಬ ನಿಗೂಢತೆಯ ಬಗ್ಗೆ ಅಚ್ಚರಿಯಾಗುತ್ತದೆ.

ಇದನ್ನೂ ಓದಿ ದಿಲ್ಲಿ ಮಾತು | ಋತುಸಂಹಾರ- ಗ್ರೀಷ್ಮ ಋತುವಿಗೆ ಉಲ್ಬಣಿಸಿದ ಉನ್ಮತ್ತತೆ

ಅವನಿಗೆ, ಕಮಲೆಗೆ ಅದೊಂದು ಕಚೇರಿ ಕೆಲಸದ ಪ್ರವಾಸ ಮಾತ್ರವಾಗಿರಲಿಕ್ಕೆ ಸಾಕು. ಮತ್ತೆ ದಿಲ್ಲಿಗೆ ಬರುವ ಅವಕಾಶವೂ ಸಿಗಲಿಲ್ಲ. ಇಹಲೋಕದ ಯಾತ್ರೆಯನ್ನೇ ಮುಗಿಸಿಬಿಟ್ಟ. ಜುಲೈ ತಿಂಗಳು ಬಂದಾಗ ಅವರಿಬ್ಬರೂ ನೆನಪಾಗುತ್ತಾರೆ. ಊರಲ್ಲಿ ಕಮಲೆ ಮಕ್ಕಳೊಂದಿಗೆ ಆರಾಮಾಗಿದ್ದಾಳಂತೆ. ಬಹಳ ಕಾಲವಾಯ್ತು ಸಿಕ್ಕಿಲ್ಲ. ಅವನು ತೀರಿಹೋದ ಸುದ್ದಿ ಮಾತ್ರ ಇವತ್ತಿಗೂ ಮೊನ್ನೆಮೊನ್ನೆ ನಡೆದಂತೆ ಕಾಡುತ್ತದೆ. ಮನುಷ್ಯನ ಬದುಕು ಕ್ಷಣಭಂಗುರದಂತೆ. ಎಷ್ಟು ನಿಗೂಢ, ಎಷ್ಟು ಕ್ಷಣಿಕ. ಎಷ್ಟೋ ವರ್ಷಗಳವರೆಗೆ ಕಾಪಿಟ್ಟುಕೊಂಡ ನೀಲಿ ಡೈರಿಯನ್ನು ಕೆಲವರ್ಷಗಳ ಹಿಂದೆಯಷ್ಟೇ ಹರಿದುಹಾಕಿದೆ.   

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...