ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಚಳಿಗಾಲದ ಹೊಂಜು ಮಂಜಿಗಷ್ಟೇ ಸೀಮಿತಗೊಳ್ಳದೇ ವರ್ಷಪೂರ್ತಿ
ಹರಡಿಕೊಂಡಿರುತ್ತದೆ. ಕಳೆದ ಜೂನ್‌ನಲ್ಲಿ ಧೂಳಿನ ಚಂಡಮಾರುತ ದೆಹಲಿ ಮತ್ತು ಸುತ್ತಲಿನ
ರಾಷ್ಟ್ರೀಯ ವಲಯವನ್ನು ಪತರಗುಟ್ಟುವಂತೆ ಮಾಡಿತು. ಇಡೀ ಭೂಮಂಡಲವೆಲ್ಲ ಧೂಳು, ಹೊಗೆಮಂಜಿನಿಂದ
ತುಂಬಿಕೊಂಡು ಉಸಿರುಗಟ್ಟಿಸತೊಡಗಿದಾಗ ಸರಕಾರ, ಹಸಿರು ಪೀಠ, ನ್ಯಾಯಾಂಗ, ಶಾಸಕಾಂಗ ಎಲ್ಲವೂ ಚುರುಕಾಗುತ್ತವೆ.
ಸುದ್ದಿ ಮಾಧ್ಯಮಗಳಲ್ಲಿ ಈಗ ದೆಹಲಿ ಮತ್ತು NCR ದ ವಾಯುಮಾಲಿನ್ಯದ್ದೇ ಸುದ್ದಿಯಿದೆ. ಜನರು ಉಸಿರಾಡಲು
ಕಷ್ಟಪಡುತ್ತಿರುವ ವಿಡಿಯೋಗಳು ಬರುತ್ತಿವೆ. ಪ್ರತಿ ದೀಪಾವಳಿಯ ಬಳಿಕ ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳೆಲ್ಲ ಹೊಗೆ
ಹೊಂಜು ಮುಸುಕಿಕೊಂಡು ಭಯ ಹುಟ್ಟಿಸುತ್ತದೆ. 2025ರ ದೀಪಾವಳಿಯಲ್ಲಿ ಹಸಿರು ಪಟಾಕಿಗಳನ್ನು ಬಳಸುವಂತೆ
ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಜನರು ಕ್ಯಾರೇ ಎನ್ನದೇ ಪಟಾಕಿಗಳನ್ನು ಸುಟ್ಟರು. ಪಟಾಕಿ ಸಿಡಿಮದ್ದಿನ
ಮಾಲಿನ್ಯ 70% ಹೆಚ್ಚಾಗಿದ್ದು ದೀಪಾವಳಿಯ ಮೊದಲು AQI 156 ಇದ್ದದ್ದು ದೀಪಾವಳಿಯ ನಂತರ 488ಕ್ಕೆ
ಏರಿಕೆಯಾಗಿದೆ. ಅಸ್ತಮಾ, ಶ್ವಾಸಕೋಶ ಸಂಬಂಧಿತ ರೋಗಗಳು ಉಲ್ಬಣಿಸಿ ಆಸ್ಪತ್ರೆಗಳು ರೋಗಿಗಳಿಂದ ತುಂಬುತ್ತಿವೆ.
ಆರೋಗ್ಯವಂತರಿಗೂ ಉಸಿರು ಕಟ್ಟುವಷ್ಟು ಅಸಹನೀಯವಾಗಿ ದಿಲ್ಲಿ ಬದುಕಲು ಯೋಗ್ಯವಲ್ಲದ ನಗರವಾಗುತ್ತಿದೆ.
ಇಷ್ಟಾದರೂ ಇಲ್ಲಿನ ಜನರಿಗೆ ಬುದ್ಧಿ ಬರುತ್ತಿಲ್ಲ.
ದೆಹಲಿಯನ್ನು ರಮ್ಯವಾಗಿಸಿದ ಚಳಿಗಾಲವಿತ್ತು. ಚಳಿಯನ್ನೂ, ಮಂಜಿನ ಹೊದಿಕೆಯ ಬೆಳಗನ್ನೂ ಮೋಹಿಸುವ ದಿನಗಳಿದ್ದವು.
ಈ ನಾಲ್ಕು ದಶಕಗಳಲ್ಲಿ ವಿಷಗಾಳಿ ಬೀಸತೊಡಗಿದ್ದೆ ಗೊತ್ತಾಗಲಿಲ್ಲ. ಗುಲ್ಜಾರರ “ಜಾಡೋಂ ಕಿ ನರಮ ಧೂಪಮೆ ಆಂಗನ
ಮೆ ಲೇಟಕರ್” ಸಾಲುಗಳು ಚಳಿಗಾಲವಿರುವುದೇ ಪ್ರೇಮಿಗಳಿಗೆ ಎಂದು ಚಳಿಯನ್ನು ಕಾವ್ಯಮಯಗೊಳಿಸಿದ್ದವು. ಪಂಜಾಬದ
ಹೊಲಗಳಲ್ಲಿ “ಪರಾಲಿ” (ಒಣ ಹುಲ್ಲು-ದಂಟು) ಸುಡತೊಡಗಿ ದೆಹಲಿಯ ರಾಜಕೀಯ ಬಿಸಿಯೇರಿ ಪಕ್ಷಗಳು ಒಂದನ್ನೊಂದು
ದೋಷಾರೋಪಣೆ ಮಾಡತೊಡಗಿದಾಗ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆ ಬಿಸಿಯೇರತೊಡಗಿದಾಗ ಬರೆ ಎಳೆದಂತೆ ಜಗತ್ತು
ಎಚ್ಚೆತ್ತುಕೊಳ್ಳುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಚಳಿಗಾಲದ ಹೊಂಜು ಮಂಜುಗಷ್ಟೇ ಸೀಮಿತಗೊಳ್ಳದೇ ವರ್ಷಪೂರ್ತಿ
ಹರಡಿಕೊಂಡಿರುತ್ತದೆ. ಕಳೆದೊಂದು ವರ್ಷದ ಜೂನ್ ತಿಂಗಳಲ್ಲಿ ಧೂಳಿನ ಚಂಡಮಾರುತ ದೆಹಲಿ ಮತ್ತು ಸುತ್ತಲಿನ
ರಾಷ್ಟ್ರೀಯ ವಲಯವನ್ನು ಪತರಗುಟ್ಟುವಂತೆ ಮಾಡಿತು. ಇಡೀ ಭೂಮಂಡಲವೆಲ್ಲ ಧೂಳು, ಹೊಗೆಮಂಜಿನಿಂದ
ತುಂಬಿಕೊಂಡು ಉಸಿರುಗಟ್ಟಿಸತೊಡಗಿದಾಗ ಸರಕಾರ, ಹಸಿರು ಪೀಠ, ನ್ಯಾಯಾಂಗ ಶಾಸಕಾಂಗ ಎಲ್ಲವೂ ಚುರುಕಾಗುತ್ತವೆ.
ವಾಯುಮಾಲಿನ್ಯ ತಗ್ಗಿಸಲು ಸಮ-ಬೆಸ ಸಂಖ್ಯೆಗಳ ವಾಹನ ಸಂಚಾರ ಸೂತ್ರವನ್ನು ಜಾರಿಗೆ ತರುವ ಚರ್ಚೆಗಳಾಗುತ್ತವೆ.
ಹೊರವಲಯದಿಂದ ರಾಜಧಾನಿಗೆ ನುಗ್ಗುವ ಲಾರಿ, ಟ್ರಕ್ಕುಗಳ ಪ್ರವೇಶವನ್ನು ನಿಷೇಧಿಸಲಾಗುತ್ತದೆ, ನಗರದಲ್ಲಿ ಕಟ್ಟಡ
ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುತ್ತದೆ. ಬದರ್ಪುರ್ ಉಷ್ಣ ಶಕ್ತಿ ಸ್ಥಾವರವನ್ನು ಸ್ಥಗಿತಗೊಳಿಸಲಾಗುತ್ತದೆ.
ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ. ಕೃತಕ ಮಳೆಯನ್ನು ಸುರಿಸಲಾಗುತ್ತದೆ. ಹೀಗೆ ನಾನಾ ನಮೂನೆಯ ಕವಾಯತ್ತುಗಳು
ನಡೆಯತೊಡಗುತ್ತವೆ.

ಇಷ್ಟಾದರೆ ಆಯಿತೇ? ವಾಯುಮಾಲಿನ್ಯವನ್ನು ತಡೆಗಟ್ಟುವ ಎಲ್ಲಾ ಕಸರತ್ತುಗಳೂ ತಾತ್ಪೂರ್ತಿಕ ಪರಿಹಾರವೇ ಹೊರತು
ಶಾಶ್ವತವಾದ ಪರಿಹಾರವಲ್ಲವೆಂಬ ಸುಡುಸತ್ಯ ಅಂತರಂಗವನ್ನು ಚುಚ್ಚದೇ ಇರದು. ಅದಕ್ಕೆ ಹೊಣೆಗಾರ ಮನುಷ್ಯನೇ
ಹೊರತು ಪ್ರಕೃತಿಯಲ್ಲ.
“ಒಂದು ಅಡವಿಯಲ್ಲಿ ಒಬ್ಬ ರಕ್ಕಸನಿದ್ದ. ಯಾರಾದರೂ ಮರ ಕಡಿಯಲು ಹೋದರೆ ತಿಂದುಬಿಡುತ್ತಿದ್ದ”. ಇಂಥ ಕಥೆಗಳನ್ನು
ನಾವೆಲ್ಲ ಕೇಳಿಯೇ ದೊಡ್ದವರಾಗಿದ್ದೇವೆ. ಗುಡ್ಡ –ಬೆಟ್ಟ- ಅರಣ್ಯಗಳಿರುವುದು ನಾಶಗೊಳಿಸಲಿಕ್ಕಲ್ಲ ಎಂಬ
ಮನೋಭಾವವನ್ನು ಹಿರಿಯರು ಬಾಲ್ಯದಲ್ಲಿಯೇ ಕಥೆಗಳ ಮೂಲಕ ಬಿತ್ತುತ್ತಿದ್ದರು. ಉತ್ತರಭಾರತದಲ್ಲೂ ಅಡವಿಯ
ಎಲೆಗಳನ್ನು ಮುಟ್ಟಿದರೆ ಅಡವಿದೇವತೆ ಸಿಟ್ಟಾಗುತ್ತಾಳೆಂಬ ಕಥೆಗಳಿವೆ. ಆದರೂ ಮನುಷ್ಯನ ಹೊಟ್ಟೆಬಾಕತನಕ್ಕೆ ಯಾವುದೂ
ಉಳಿಯುತ್ತಿಲ್ಲ. ದೆಹಲಿ, ಗುರಗಾಂವ್, ಫರೀದಾಬಾದ್, ಮಹೇಂದ್ರಗಡ್‍ಗಳನ್ನು ಸುತ್ತುವರಿದು ರಾಜಸ್ಥಾನದ ಬಿರುಬಿಸಿಲಿನ
ಸುಡುಗಾಳಿ, ಮರುಭೂಮಿಯ ಮರಳ ಮಾರುತ, ಧೂಳಿನ ಚಂಡಮಾರುತದಿಂದ ದೆಹಲಿಯನ್ನು ರಕ್ಷಿಸುತ್ತಿದ್ದ ಅರಾವಳಿ ಗುಡ್ದ ಶ್ರೇಣಿಗಳು ಕಳೆದ ನಲ್ವತ್ತು ವರ್ಷಗಳಲ್ಲಿ ನಿರ್ನಾಮಗೊಂಡಿವೆ.
692 ಕಿ.ಮೀ. ವ್ಯಾಪ್ತಿಯಲ್ಲಿ ನೈರುತ್ಯದಲ್ಲಿ ಹರಡಿರುವ ಅರಾವಳಿ ಪರ್ವತಗಳು ಗುಜರಾತ್, ರಾಜಸ್ಥಾನ, ದೆಹಲಿ ಮತ್ತು
ಹರಿಯಾಣ ರಾಜ್ಯಗಳನ್ನು ಬಳಸಿಕೊಂಡು ಗುಜರಾತಿನಲ್ಲಿ ಕೊನೆಗೊಳ್ಳುತ್ತವೆ. ದೆಹಲಿ, ಗುರ್ಗಾಂವ್, ಫರೀದಾಬಾದ್,
ಮೆವಾತ್, ಮಹೇಂದ್ರಗಡ್ ಮತ್ತು ರಿವಾಡಿ ಪ್ರದೇಶಗಳನ್ನೂ ಒಳಗೊಂಡಿದ್ದು ಪ್ರಸ್ತುತ ಭಾರತದ ಅತ್ಯಂತ
ದುಸ್ಥಿತಿಯಲ್ಲಿರುವ ಗುಡ್ದ-ಅಡವಿ ಪ್ರದೇಶವಾಗಿದ್ದು ನಮ್ಮ ದುರಂತ.
1992ರಲ್ಲಿ ಪರಿಸರ ವಿಜ್ಞಾನ ಭಾರತೀಯ ದಂಡ ಸಂಹಿತೆಗಳ ಮೂಲಕ ರಾಜಸ್ಥಾನ ಮತ್ತು ಹರಿಯಾಣದಲ್ಲಿನ ಅರಾವಳಿ
ಬೆಟ್ಟಗಳ ಕೆಲವು ಸೂಕ್ಷ್ಮಪ್ರದೇಶಗಳನ್ನು ಅಕ್ರಮ ಗಣಿಗಾರಿಕೆಯಿಂದ ರಕ್ಷಿಸಲಾಗಿತ್ತು. 2003ರಲ್ಲಿ, ಕೇಂದ್ರ ಸರ್ಕಾರವು ಈ
ಪ್ರದೇಶಗಳಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಿಷೇಧಿಸಿತು. 2004ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಅರಾವಳಿ
ಶ್ರೇಣಿಯ ಗಮನಕ್ಕೆ ಬಂದ ಪ್ರದೇಶಗಳಲ್ಲಿ ಗಣಿಗಾರಿಕೆ ನಿಷೇಧಿಸಿತು. ಮೇ 2009ರಲ್ಲಿ, ಹರಿಯಾಣದ ಫರಿದಾಬಾದ್,
ಗುರುಗ್ರಾಮ ಮತ್ತು ಮೆವಾತ್ ಜಿಲ್ಲೆಗಳಾದ್ಯಂತ 448 ಕಿ.ಮೀ. ಪ್ರದೇಶದ ಅರಾವಳಿ ಶ್ರೇಣಿಯನ್ನು ಒಳಗೊಂಡು ಗಣಿಗಾರಿಕೆಯ
ಮೇಲಿನ ನಿಷೇಧವನ್ನು ಸುರಾಲ್ ಕೋರ್ಟ್ ವಿಸ್ತರಿಸಿತು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಅರಾವಳಿ ಪ್ರದೇಶದ 31
ಬೆಟ್ಟಗಳು ಕಣ್ಮರೆಯಾದದ್ದನ್ನು ಕಂಡ ಸುಪ್ರೀಂಕೋರ್ಟ್ ಆಘಾತ ವ್ಯಕ್ತಪಡಿಸಿದ್ದಲ್ಲದೇ 48 ಗಂಟೆಗಳೊಳಗೆ 115.34
ಹೆಕ್ಟೇರ್ ಪ್ರದೇಶದ ಅಕ್ರಮ ಗಣಿಗಾರಿಕೆ ನಿಲ್ಲಿಸಲು ರಾಜ್ಯ ಸರಕಾರಕ್ಕೆ ಆದೇಶ ನೀಡಿತ್ತು.
ಅರಾವಳಿಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಸುಮಾರು 5 ಸಾವಿರ ಕೋಟಿ ರೂ.ಗಳ ರಾಯಧನವನ್ನು ರಾಜಸ್ಥಾನ
ಗಳಿಸುತ್ತದಂತೆ. ನಿಮ್ಮ ರಾಯಧನಕ್ಕಾಗಿ ದೆಹಲಿಯ ಲಕ್ಷಾಂತರ ಜನರ ಜೀವನವನ್ನು ಬಲಿಗೊಡಲಾಗದೆಂದು ಉನ್ನತ
ನ್ಯಾಯಾಲಯ ಎಚ್ಚರಿಸುತ್ತಲೇ ಇದೆ. ಬೆಟ್ಟಗಳ ಕಣ್ಮರೆ ಪರಿಸರ ಮಾಲಿನ್ಯಕ್ಕೆ ಬಲುದೊಡ್ದ ಕಾರಣವಾಗಿದೆ. ದೆಹಲಿ- NCR
ದಲ್ಲಿ ಜನವಸತಿಯೇ ನರಕವಾಗುತ್ತಿದೆ. ಅಸಂಘಟಿತ ನಗರೀಕರಣದಿಂದ ಪರಿಸರ ಮತ್ತು ಪರಿಸರಕ್ಕೆ ಹಾನಿ, ನೀರು ಮತ್ತು ಖನಿಜಗಳು, ಗಣಿಗಾರಿಕೆ, ಸಂಸ್ಕರಿಸದ ಮಾನವ ತ್ಯಾಜ್ಯ ಮತ್ತು ವಿಲೇವಾರಿ, ಮಾಲಿನ್ಯ, ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ಆವಾಸಸ್ಥಾನ ಅಸುರಕ್ಷಿತ ಸ್ಥಿತಿ, ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ ಅರಾವಳಿ ಪ್ರದೇಶವನ್ನು ವಿನಾಶದ ಸ್ಥಿತಿಗೆ ತಂದಿಟ್ಟಿದ್ದು ಅರಾವಳಿ ನಿರ್ವಹಣಾ ಸಂಸ್ಥೆಯ ಪ್ರಮುಖ ಆತಂಕಗಳು.

ರೈತರು ಬೆಳೆಯ ತ್ಯಾಜ್ಯ ಸುಡುವುದನ್ನು ತಡೆಯಲು ಸರಕಾರ ಯಾವ ಕ್ರಮ ತೆಗೆದುಕೊಂಡಿದೆ ಈವರೆಗೂ? ಕೃಷಿಗೆ ಬಳಸುವ ನೀರಿನ ವಿಲೇವಾರಿಗೆ ರೈತರಿಗೆ ಎಷ್ಟು ಯಂತ್ರಗಳನ್ನು ನೀಡಿದೆ? ರೈತರಿಗೆ ಕನಿಷ್ಠ ಒಂದು ಸಾವಿರ ರುಪಾಯಿ ಕೊಟ್ಟಿದ್ದರೂ
ಅವರು ಈ ರೀತಿ ಸುಡುತ್ತಿರಲಿಲ್ಲ ಎಂದು ತಜ್ಞರು ಹೇಳುತ್ತಾರೆ. ಪಂಜಾಬ್ ರೈತರಿಗೆ ತಮ್ಮ ಕೃಷಿ ತ್ಯಾಜ್ಯವನ್ನು ಸುಡದಿದ್ದರೆ ಮುಂದಿನ ಬೆಳೆಗೆ ಜಮೀನನ್ನು ಅಣಿಗೊಳಿಸಲು ಸಾಧ್ಯವಾಗುವುದಿಲ್ಲ. ದೇಶ ಸ್ವತಂತ್ರವಾದಾಗ ಜನಸಂಖ್ಯೆ ಮೂವತ್ತು ಕೋಟಿ ದನಕರು ಜಾನುವಾರುಗಳ ಸಂಖ್ಯೆ ನೂರ ಇಪ್ಪತ್ತು ಕೋಟಿ ಇತ್ತು. ಈಗ ಜನಸಂಖ್ಯೆ ನೂರಾ ಇಪ್ಪತ್ತಾರು ಕೋಟಿಯಾಗಿ ಜಾನುವಾರುಗಳು ಕೇವಲ ಇಪ್ಪತ್ತುಕೋಟಿಗಳಿಗೆ ಕ್ಷಯಿಸಿದೆ. ಇದೂ ಕೃಷಿ ತ್ಯಾಜ್ಯ ಸುಡುವಿಕೆಗೆ ಮುಖ್ಯ ಕಾರಣಗಳಲ್ಲೊಂದು.
ವಾತಾವರಣ ತಂಪಾಗುತ್ತ, ಗಾಳಿ ಭಾರವಾಗಿ ಗಾಳಿ ಬೀಸುವಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಗಾಳಿಯಲ್ಲಿರಬೇಕಾದ
ಪಿಎಂ 2.5 ಗಾತ್ರದ ಕಣಗಳ ಸುರಕ್ಷಿತ ಸಾಂದ್ರತೆ 50. ಒಂದು ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ
ಮಾಲಿನ್ಯಕಾರಕ ಕಣಗಳ ಪ್ರಮಾಣ 846ರಷ್ಟು ದಾಖಲಾಗಿ 30 ಪಟ್ಟು ಅಧಿಕ ಪ್ರಮಾಣವನ್ನೂ ಮೀರುತ್ತಿದೆ. ಪಿಎಂ 2.5
ಎಂಬುದು ಮನುಷ್ಯನ ತಲೆಕೂದಲ ದಪ್ಪಕ್ಕಿಂತಲೂ 30 ಪಟ್ಟು ಸಣ್ಣಗಿನ ಗಾತ್ರ. ಇವನ್ನು ನೇರವಾಗಿ ಸೇವಿಸುವುದರಿಂದ
ಶ್ವಾಸಕೋಶಕ್ಕೆ ಹಾನಿ, ಹೃದಯಾಘಾತ, ಪಾರ್ಶ್ವವಾಯು, ಶ್ವಾಸಕೋಶ ಕ್ಯಾನ್ಸರ್, ಉಸಿರಾಟದ ಕಾಯಿಲೆಗಳು ಬರಲು
ಸಾಧ್ಯ.
ಇದನ್ನೂ ಓದಿ ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಸೂರ್ಯ ಕಾಂತ್‌ರನ್ನು ಶಿಫಾರಸು ಮಾಡಿದ ಸಿಜೆಐ ಗವಾಯಿ
ಮೊಗಲರ ಕಾಲದಲ್ಲಿ ಅರಾವಳಿ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿದ್ದ ಗುಜ್ಜರರು ಬೇಸಾಯ ಮಾಡಿಕೊಂಡು ಅರಣ್ಯದ
ಮೇಲಿನ ಭಯ ದೈವ ಭಕ್ತಿಯಲ್ಲಿ ಅವನ್ನು ಪೋಷಿಸಿಕೊಂಡು ಬಂದಿದ್ದರು. ಕ್ರಮೇಣ ಕಾಲ ಬದಲಾದಂತೆ ಹಣಕ್ಕಾಗಿ
ಅರಾವಳಿ ತಪ್ಪಲುಪ್ರದೇಶವನ್ನು ಮಾರಿಕೊಂಡು ಗುಜ್ಜರರು ದೆಹಲಿಯ ಧನಿಕರಾದರು. ರಿಯಲ್ ಎಸ್ಟೇಟ್, ಅಕ್ರಮ
ಗಣಿಗಾರಿಕೆಯ ಖಳನಾಯಕರು ಮತ್ತೊಂದಿಷ್ಟು ಅರಾವಳಿಗಳನ್ನು ನೆಲಸಮಗೊಳಿಸಿದರು. ಆಗಲೂ ಮನುಷ್ಯನಿಗೆ ತಾನು
ಮಾಡುತ್ತಿರುವ ಸರ್ವವಿನಾಶದ ಅರಿವು ಮೂಡಲೇ ಇಲ್ಲ. ಅರಿವು ಮೂಡಿಸುವ ಕೆಲಸವನ್ನು ಯಾರೂ ಮಾಡಲಿಲ್ಲ.
ಇನ್ನು ಜಾಗತಿಕ ಮಟ್ಟದಲ್ಲಿ ಪ್ರಗತಿ ಸಾಧಿಸಿರುವ ಈ ದೇಶದ ದಿಲ್ಲಿ, NCRನ ಸುಶಿಕ್ಷಿತ ಜನರು ತಮ್ಮ ಸ್ವಾರ್ಥ
ಬೇಜವಾಬ್ದಾರಿತನವನ್ನು ಬದಿಗಿಟ್ಟು ತಮ್ಮ ಸುತ್ತಲಿನ ಪರಿಸರವನ್ನು ಸುರಕ್ಷಿತವಾಗಿಟ್ಟುಕೊಳ್ಳದೇ ಹೋದರೆ, ತಮ್ಮ
ಮಕ್ಕಳಿಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಹೇಳಿಕೊಡದೇ ಹೋದರೆ, ಬದುಕಿನ ಉಸಿರನ್ನು ಕಸಿದುಕೊಳ್ಳುತ್ತಿರುವ
ಪಟಾಕಿಗಳನ್ನು ಸುಡುವುದರ ಬದಲು ಬಡವರ ಮಕ್ಕಳಿಗೆ ಹೊಸ ಬಟ್ಟೆಬರೆ, ಸಿಹಿತಿಂಡಿ ಹಂಚಿ, ಅವರ ಗುಡಿಸಲುಗಳಲ್ಲಿ ದೀಪ
ಬೆಳಗುವಂತೆ ದೀಪಾವಳಿ ಆಚರಿಸಬಹುದಲ್ಲ. ನಾವು ಏನನ್ನೂ ಮಾಡದೇ ಕೇವಲ ಸರಕಾರವನ್ನು, ಪಕ್ಷಗಳನ್ನು ದೂರುತ್ತ
ಕುಳಿತರೆ ಏನೂ ಪ್ರಯೋಜನವಿಲ್ಲ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




