ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡ ದೆಹಲಿಯಲ್ಲಿ ಸೂಫಿ ಪರಂಪರೆ ಇವತ್ತಿಗೂ ತನ್ನತನವನ್ನು ಉಳಿಸಿಕೊಂಡಿದೆ. ಇವತ್ತಿಗೂ ಜನ ತಮ್ಮ ಜಾತಿ ಮತ ಧರ್ಮವನ್ನು ಮರೆತು ಮನಸ್ಸಿನ ನೆಮ್ಮದಿಗಾಗಿ ದರ್ಗಾಗಳತ್ತ ಓಡುತ್ತಾರೆ. ಅಲ್ಲಿ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಪೂಜೆಯೆಂದರೆ ಪ್ರೀತಿಸುವುದು. ಅದೇ ಪೂಜೆಯ ಪರಿಶುದ್ಧ ರೂಪವೆನ್ನುತ್ತದೆ ಸೂಫಿಸಂ. ದರ್ಗಾಗಳಲ್ಲಿ ವಸಂತದ ಆಚರಣೆ, ಹೋಳಿ ಆಚರಣೆಗಳು ಹೊಸದಲ್ಲ. ಅವು ಇವತ್ತಿಗೂ ಅನೂಚಾನವಾಗಿ ನಡೆದುಕೊಂಡು ಬಂದಿವೆ.
ಮೊನ್ನೆ ಏನೋ ಹುಡುಕುತ್ತಿದ್ದಾಗ ಹಳೆಯ ಟೈಮ್ಸ್ ಇಂಡಿಯಾ ಸುದ್ದಿಪತ್ರಿಕೆಯ ಒಂದು ಕಟಿಂಗ್ ಸಿಕ್ಕಿತು. ಸೂಫಿ ಸಂತರುಗಳ ಕುರಿತ ಲೇಖನ. “ದೆಹಲಿಯಲ್ಲಿ ಹದಿಮೂರು – ಹದಿನಾಲ್ಕನೇ ಶತಮಾನದಲ್ಲಿ ಸುಮಾರು ಇಪ್ಪತ್ತೆರಡು ಖ್ವಾಜಾ (ಪ್ರವಾದಿಗಳು, ಅಲ್ಲಾ ಕೇ ಬಂದೇಗಳು) ಗಳು ತಮ್ಮ ಪ್ರಖರವಾದ ವ್ಯಕ್ತಿತ್ವ ವಿಶೇಷಗಳಿಂದ ಸಮಾಜದಲ್ಲಿ ನಿಸ್ವಾರ್ಥ ಪ್ರೇಮ, ಭ್ರಾತೃತ್ವ -ಸಮಾನತೆಗಳನ್ನು ಬೋಧಿಸಿ ಮಾನವ ಕಲ್ಯಾಣಕ್ಕಾಗಿ ಹೆಸರಾಗಿದ್ದಾರೆ. ದೆಹಲಿಯ ಹೊಸ್ತಿಲಿಗೆ ಸುಜ್ಞಾನದ ದೀಪಗಳನ್ನು ಬೆಳಗಿದ ನೆಲದಲ್ಲಿ ಇನ್ನೊಬ್ಬ ಖ್ವಾಜಾ ಕಾಲಿಟ್ಟಿದ್ದರೆ ಇಂದು ದೆಹಲಿ ಪವಿತ್ರ ಯಾತ್ರಾಸ್ಥಳವಾಗುತ್ತಿತ್ತಂತೆ!”
ಚಿರಾಗ್ ದಿಲ್ಲಿಯ ಹೆಸರು ಬಂದಿದ್ದು ಚಿಸ್ತಿ ವಂಶದ ಹಜರತ್ ನಸೀರುದ್ದೀನ್ ಮಹಮೂದ್ ಚಿರಾಗ್ –ಏ- ದಿಲ್ಲಿ (ದೆಹಲ್ವೀ) ಎಂಬ ಸೂಫಿ ಕವಿ, ಸಂತನಿಂದಾಗಿ. ಗುರು ಪರಂಪರೆಗೆ ಹೆಸರಾದ ಕಾಲವದು. ಹದಿನಾಲ್ಕನೇ ಶತಮಾನದಲ್ಲಿ ಹಜರತ್ ನಸೀರುದ್ದೀನ ಮಹಮೂದ್‌ರು ಪ್ರಸಿದ್ದ ಸೂಫಿ ಸಂತ ಹಜರತ್ ನಿಜಾಮುದ್ದೀನ ಔಲಿಯಾರ ಪ್ರಿಯ ಶಿಷ್ಯರಾಗಿದ್ದು ಮುಂದೆ ತನ್ನ ಗುರುವಿನ ಉತ್ತರಾಧಿಕಾರಿಯಾಗಿ ಮತ್ತು ಚಿಸ್ತಿ ಕುಲದ ಕೊನೆಯ ಸಂತರಾಗಿ ಹೆಸರಾದವರು. ಒಮ್ಮೆ ಹಜರತ್ ನಿಜಾಮುದ್ದೀನರ ಜನಪ್ರಿಯತೆಯನ್ನು ಸಹಿಸದ ಸುಲ್ತಾನ್ ಅವರಿಗೆ ಎಣ್ಣೆ ಒದಗಿಸುವುದನ್ನು ನಿಲ್ಲಿಸಿದನಂತೆ. ನಿತ್ಯದ ಪ್ರಾರ್ಥನೆ -ಧ್ಯಾನ, ಆಧ್ಯಾತ್ಮದ ಚಿಂತನೆಗೆ ದೀಪ ಉರಿಸಲು ಎಣ್ಣೆ ಇದ್ದಿಲ್ಲ. ಆಗ ಹಜರತ್ ನಿಜಾಮುದ್ದೀನರು ತಮ್ಮ ಶಿಷ್ಯ ನಸೀರುದ್ದೀನ ಮಹಮೂದನಿಗೆ – ಮೊನ್ನೆ ತೋಡಿದ ಭಾವಿಯಲ್ಲಿ ನೀರಿದೆಯಲ್ಲ? ದೀಪ ಹಚ್ಚು ಎಂದು ಆಜ್ಞಾಪಿಸಿದರು. ಗುರುವಿನ ಸನ್ನೆಯನ್ನು ಗ್ರಹಿಸಿದ ಶಿಷ್ಯ ದೀಪಗಳಿಗೆ ನೀರು ಹಾಕಿ ದೀಪ ಉರಿಸಿದ. ಅವನ ಅಪಾರ ಗುರುಭಕ್ತಿಗೆ ಮೆಚ್ಚಿ ನಿಜಾಮುದ್ದೀನ ಔಲಿಯಾಗಳು ಇವನೇ ರೋಶನ್ -ಚಿರಾಗ್ -ಏ- ದಿಲ್ಲಿ (ದಿಲ್ಲಿಯ ದೀಪದ ಬೆಳಕು) ಎಂದರಂತೆ. ಅಂದಿನಿಂದ ಹಜರತ್ ನಸೀರುದ್ದೀನ ಮಹಮೂದ್ ಚಿರಾಗ್ ಏ ದಿಲ್ಲಿಯಾಗಿ ಪ್ರಸಿದ್ದರಾದರು.

ಗುಲ್ಬರ್ಗಾದ ಖ್ವಾಜಾ ಬಂದೇ ನವಾಜ್ ಗೇಸೂ ದರಾಜ್ ಸಂತರು ಇವರ ಶಿಷ್ಯರು. ತೈಮೂರ್ ದೆಹಲಿಯನ್ನು ಮುತ್ತಿದಾಗ ಬಂದೇ ನವಾಜ್ ದೌಲತ್ತಾಬಾದಿಗೆ ತೆರಳಿದರಂತೆ. ಮುಂದೆ ಬಹಮನಿಯ ಫಿರೋಜ್ ಶಹಾ ಆಹ್ವಾನದ ಮೇರೆಗೆ ದಕ್ಷಿಣದ ಗುಲ್ಬರ್ಗಾಕ್ಕೆ ಹೋಗಿ ಅಲ್ಲಿ ನೆಲೆಸಿದರು. ಅವರ ನೆನಪಿನ ಜನನಿಬಿಡದ ಚಿರಾಗ್ ದಿಲ್ಲಿಯ ಗಲ್ಲಿ-ನುಕ್ಕಡಿನಲ್ಲಿ ಹಾದುಹೋದರೆ ಚರಿತ್ರೆ ಗೊತ್ತಿದ್ದವರಾರೂ ಅರೆಕ್ಷಣ ಪುಳಕಗೊಳ್ಳದಿರುವುದಿಲ್ಲ. ಈಗ ಚಿರಾಗ್ ದಿಲ್ಲಿ ಎದುರು ಬಿರ‍್ಟಿ ರಸ್ತೆಯಾಗಿ ಹಲವಾರು ಸಲ ಅಗೆಯಿಸಿಕೊಂಡು, ಅಳಿಸಿಕೊಂಡು ಗುದ್ದಿಸಿಕೊಂಡು, ಹಿಗ್ಗಿಸಿಕೊಂಡು, ಮುಗ್ಗಿಸಿಕೊಂಡು ಹಲವು ರೂಪ ತಳೆದ ಹಾದಿ-ಬೀದಿಗಳಲ್ಲೆಲ್ಲ ನಾವೇ ಚಿರಾಗ್ ಹಿಡಿದು ಹುಡುಕುವಂತಾಗಿವೆ. ಸ್ಥಳೀಯರು ಹೇಳುವ ಇನ್ನೊಂದು ಕತೆಯೆಂದರೆ ಕುತುಬ್ ಮಿನಾರನ್ನು ಕಟ್ಟುತ್ತಿರುವ ಕೆಲಸ ಬೇಗ ಸಾಗದೇ ಸುಲ್ತಾನ್ ಬೇಗ ಮುಗಿಸುವಂತೆ ಕಟ್ಟಪ್ಪಣೆ ಮಾಡಿದ್ದನಂತೆ. ಕತ್ತಲಲ್ಲಿ ಕೆಲಸ ಮಾಡಲಾಗದೇ ಕಾರ್ಮಿಕರು ಖ್ವಾಜಾ ಹಜರತ್ ನಸೀರುದ್ದೀನರನ್ನು ಬೇಡಿಕೊಂಡರಂತೆ. ಆಗ ಅವರು ಚಿರಾಗ್ ದಿಲ್ಲಿಯಲ್ಲಿ ದೀಪ ಉರಿಸಿ ಬೆಳಕು ಮಾಡಿ ಕುತುಬ್ ಮಿನಾರ್ ಕೆಲಸ ಸರಾಗವಾಗಿ ನಡೆಯುವಂತೆ ಮಾಡಿದರಂತೆ. ಇಂತಹ ಕತೆಗಳು ಹಲವಾರು.
ಮನುಷ್ಯನ ಮನಸ್ಸೇ ವಿಚಿತ್ರ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವಂತೆ ಅಲ್ಲಿಯೇ ಇದ್ದಾಗ ಮೋಹವುಕ್ಕಿಸದ ಚಿರಾಗ್ ದಿಲ್ಲಿ, ಕಿಡಕಿಗಾಂವ್, ಶೇಖ್ ಸರಾಯ್, ನಿಜಾಮುದ್ದೀನ್ ದರ್ಗಾ, ಅಲ್ಲಿಂದ ದೂರ ಹೋದ ಮೇಲೆ ನೆನಪಾಗಿ ಕಾಡುತ್ತವೆ. ಚಿರಾಗ್ ದಿಲ್ಲಿಯ ಸಣ್ಣ ಸಣ್ಣ ಗಲ್ಲಿಗಳನ್ನು ದಾಟಿ ಒಮ್ಮೆ ಯಾರದೋ ದೊಡ್ದ ಚಬೂತರ್, ಸಣ್ಣ ಗವಾಕ್ಷಿಯುಳ್ಳ ಜಾಟ್ ಮನೆಗೆ ಹೋಗಿದ್ದೆ, ಮಗನಿಗೆ ಸೆಕೆಂಡ್ ಹ್ಯಾಂಡ್ ಪುಸ್ತಕ ತರಲು. ಅಷ್ಟೆಲ್ಲಾ ಓಡಾಡಿದವಳಿಗೆ ಹಜರತ್ ನಸೀರುದ್ದೀನ್ ಚಿರಾಗ್ ಏ ದಿಲ್ಲಿ ಮಸೀದಿಗೆ ಒಮ್ಮೆಯೂ ಮಿನಿ ಬಸ್ಸ್ ಇಳಿದು ಹೋಗಲಾಗಲೇ ಇಲ್ಲ.
ಈಗಿನ ಕಾಲಮಾನಗಳನ್ನು ನೋಡಿದರೆ ಅಂತಹ ದೇವಮಾನವರಿಗಾಗಿ ಇಂದ್ರಪ್ರಸ್ಥದ ನೆಲ ಕಾಯುತ್ತಿಲ್ಲ. ನಾವು ಕಾಣುವ ಶಾಂತಿಯ ಕನಸು- ಕಲ್ಪನೆಯ ಹೂಗಳು ನಮಗೆ ನಿಲುಕುವಂತಿಲ್ಲ ಎನಿಸುತ್ತದೆ. ಹಾಗಂತ ಮೊಗಲ, ಖಿಲ್ಜಿ, ತುಗಲಕ್, ಲೋಧಿ, ಮುಂತಾದವರ ಆ ಕಾಲವೂ ಏನು ಶಾಂತಿಯುತವಾಗಿದ್ದಿಲ್ಲ. ಶಾಂತಿ ಎಂಬುದೇನಾದರೂ ನೆಲೆಸಿದ್ದರೆ ಅದು ಸೂಫಿ ಸಂತರುಗಳಿಂದ. ಅಂದು ಬೆಳಕು ಚೆಲ್ಲಿಹೋದ ಮಹಾನ್ ಚೇತನ ಅನೇಕ ಸೂಫಿ ಸಂತರು, ಖ್ವಾಜಾ, ಪೀರ್ ಬಾಬಾ, ಔಲಿಯಾಗಳ ಈ ನಾಡಿನಲ್ಲಿ ಈ ಹೊತ್ತು ಯಾವುದೂ ಸರಿಯಿಲ್ಲ. ಅಂದಿನ ಸೂಫಿಸಂತರು ಪವಾಡ ಸದೃಶದಂತೆ ಗಾಳಿಯಲ್ಲಿ ತೇಲಿಬಂದು ಬದುಕೆಂಬ ಗಾಳಿಪಟವನ್ನು ಬೇಕಾದ ದಿಕ್ಕಿಗೆ ಎಳೆದೊಯ್ಯುವಂತೆ ಈ ಸಂಸಾರವೆಂಬ ಗಾಳಿಪಟದೊಂದಿಗೆ ನಾವೆಲ್ಲ ತೇಲುತ್ತ ನಮಗೆ ಬೇಕಾದ ನೆಲೆಯಲ್ಲಿ ಬೇಕಾದ ರೀತಿಯಲ್ಲಿರುವಂತಿದ್ದಿದ್ದರೆ ಎಷ್ಟು ಚೆನ್ನಿತ್ತು. ಎಲ್ಲವೂ ನ್ಯಾಯಯುತವಾಗಿ ನಡೆಯುತ್ತಿದ್ದರೆ ಎಷ್ಟು ಸುಂದರವಾಗಿರುತ್ತಿತ್ತು ಈ ಲೋಕ!

ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡ ದೆಹಲಿಯಲ್ಲಿ ಸೂಫಿ ಪರಂಪರೆ ಇವತ್ತಿಗೂ ತನ್ನತನವನ್ನು ಉಳಿಸಿಕೊಂಡಿದೆ. ಇವತ್ತಿಗೂ ಜನ ತಮ್ಮ ಜಾತಿ ಮತ ಧರ್ಮವನ್ನು ಮರೆತು ಮನಸ್ಸಿನ ನೆಮ್ಮದಿಗಾಗಿ ದರ್ಗಾಗಳತ್ತ ಓಡುತ್ತಾರೆ. ಅಲ್ಲಿ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಪೂಜೆಯೆಂದರೆ ಪ್ರೀತಿಸುವುದು. ಅದೇ ಪೂಜೆಯ ಪರಿಶುದ್ಧ ರೂಪವೆನ್ನುತ್ತದೆ ಸೂಫಿಸಂ. ದರ್ಗಾಗಳಲ್ಲಿ ವಸಂತದ ಆಚರಣೆ, ಹೋಳಿ ಆಚರಣೆಗಳು ಹೊಸದಲ್ಲ. ಅವು ಇವತ್ತಿಗೂ ಅನೂಚಾನವಾಗಿ ನಡೆದುಕೊಂಡು ಬಂದಿವೆ. ಬಸಂತ್ ಪಂಚಮಿ ಆಚರಣೆಯ ಅಮೀರ್ ಖುಸ್ರೋ –ನಿಜಾಮುದ್ದೀನ ಔಲಿಯಾ ಪರಂಪರೆಯಂತೂ ಪ್ರಸಿದ್ಧವಾದುದು.
“सकल बन फूल रही सरसों,
अम्बुवा फूटे, टेसू फूले,
कोयल बोले डार-डार।”
ಈ ಸಾಲುಗಳಲ್ಲಿ ಸಾಸಿವೆ ಹೂವು, ಮಾವಿನ ಮೊಗ್ಗು, ಟೇಸು ಹೂ, ಕೋಗಿಲೆಯ ಕೂಗು… ಇವೆಲ್ಲವೂ ವಸಂತ ಋತುವಿನ ಆಗಮನದ ಸಂಕೇತಗಳು. “ಹಳದಿ” ಕೇವಲ ಬಣ್ಣವಾಗಿ ಅಲ್ಲ, ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎನ್ನುವಂತೆ ಜೀವನದ ಪುನರುತ್ಥಾನದ ಸಂಕೇತವಾಗಿವೆ. ಒಣಗಿದ ಕೊಂಬೆಗಳಲ್ಲಿ ಹೊಸ ಚಿಗುರು ಮೂಡಿದೆ, ಗಾಳಿಯಲ್ಲಿ ಹೂವಿನ ಸುಗಂಧ ಪಸರಿಸಿದೆ, ಹಕ್ಕಿಗಳ ಹಾಡು ಗಗನದಲ್ಲಿ ತೇಲುತ್ತಿದೆ, ಹೃದಯದಲ್ಲೊಂದು ಹೊಸಕನಸು ಹುಟ್ಟಿದೆ… ಹೀಗೆ ಮುಂದುವರಿಯುತ್ತವೆ ಸಾಲುಗಳು, ಬಸಂತ್ ಎಂದರೆ ಮನದ ಕತ್ತಲಿಗೆ ಬೆಳಕು ತುಂಬುವ ಕ್ಷಣ, ದುಃಖದ ಚಳಿಗಾಲ ಮುಗಿದು ನವಚೇತನವನ್ನು ಅರಳಿಸುವ ಸಮಯ” ಹಾಗಾಗಿ ದರ್ಗಾಗಳಲ್ಲಿ ಬಸಂತ್ ಪಂಚಮಿ, ಹೋಳಿ ಹಬ್ಬದ ಆಚರಣೆಗಳು “ಕೇವಲ ಧಾರ್ಮಿಕ ಹಬ್ಬಗಳಾಗದೇ ಸಹಬಾಳ್ವೆಯ ಋತು-ಉತ್ಸವವಾಗಿ ಮುಂದುವರಿದುಕೊಂಡು ಬಂದಿವೆ. ದರ್ಗಾದೊಳಗಿನ ಈ ಆಚರಣೆಗಳು ಧರ್ಮದ ಎಲ್ಲಾ ಗಡಿಗಳನ್ನು ಮೀರಿದ ಮಾನವ ಜೀವನದ ಸಂಸ್ಕೃತಿಯ ಭಾಷೆಯಾಗಿ ಮಹತ್ವದ್ದಾಗಿದೆ. ವಸಂತದ ಆಗಮನವನ್ನು ಖುಸ್ರೋ ತಮ್ಮ ಹಾಡಿನಲ್ಲಿ ಪ್ರಕೃತಿಯೇ ಉತ್ಸವದ ವೇದಿಕೆಯಾಗಿ ಬದಲಾಗುವುದನ್ನು ಚಿತ್ರಿಸುತ್ತಾರೆ:
“बसंत आई, बसंत आई,
बसंत आई रे।”
ಈ ಒಂದು ಸಾಲೇ ಸ್ವತಃ ಉಲ್ಲಾಸ, ಪುನರುತ್ಪತ್ತಿ ಹಾಗೂ ಪ್ರೀತಿಯ ಸಂಕೇತವಷ್ಟೇ ಅಲ್ಲ, ಕೇವಲ ಋತು ಬದಲಾವಣೆಯಲ್ಲ ಹೊಸ ಜೀವನದ ಕಾವ್ಯವಾಗುತ್ತದೆ.
ಇದನ್ನೇ ಇನ್ನೊಬ್ಬ ಹೆಸರಾಂತ ಸೂಫಿ ಕವಿ ಬುಲ್ಲೇ ಶಾ “ ಇಶ್ಕ್ ದಾ ರಂಗ್ ಜುದಾ ಏ…ಯಹ ರೂಹ ಕೀ ಮಸ್ತಿ ಹೈ, ಫಕೀರಿ ಕೀ ತಾಜ ಹೈ, ಔರ್ ಖುದಾ ತಕ್ ಪಹುಂಚನೇ ಕಾ ರಾಸ್ತಾ ಹೈ!” ಎನ್ನುತ್ತಾರೆ. ಅವರ ಮಾತಿನಲ್ಲಿ, ಸೂಫಿ ಪರಂಪರೆಯಲ್ಲಿ ’ಇಶ್ಕ್’ ಎಂದರೆ ಕೇವಲ ಪ್ರೇಮವಲ್ಲ, ಅದು ಆತ್ಮದ ಉರಿಯುವ ದೀಪ, ದೇವರೊಂದಿಗೆ ಬೆರೆಯುವ ದೀಪದ ಕುಡಿ. ಇನ್ನು “ಮಸ್ತಿ” ಎಂಬುದಕ್ಕೆ ವಿಸ್ತಾರವಾದ ಅರ್ಥವಿದೆ, ಅದು ಮದ್ಯದ ಮಸ್ತಿ ಅಲ್ಲ, ವ್ಯಸನದ ’ಮಸ್ತಿ’ಅಲ್ಲ, ದೈವಿಕ ಪ್ರೀತಿಯ ಮಸ್ತಿ. ಫಕೀರಿತನದ ಕಿರೀಟವೆಂದರೆ, ಇಲ್ಲಿ ಸಿಂಹಾಸನವಿಲ್ಲ- ಸಮರ‍್ಪಣೆ ಇದೆ. ಆಡಂಬರವಿಲ್ಲ, ಅಂತರಾತ್ಮದ ಶಾಂತಿಯಿದೆ. ಸ್ವಾಮಿಯಾಗುವ ಆಸೆಯಿಲ್ಲ, ಸ್ವಾಮಿಯಲ್ಲಿ ಕರಗುವ ಆಕಾಂಕ್ಷೆ ಮಾತ್ರವಿದೆ. ಹೀಗಾಗಿ ದರ್ಗಾಗಳಲ್ಲಿ ಹೋಳಿಯ ಬಣ್ಣಗಳು ಕಾಣಿಸಿಕೊಳ್ಳುವುದು ಕೆಲವರಿಗೆ ಅಚ್ಚರಿ ಆಗಬಹುದು, ಆದರೆ ಅದರೊಳಗಿನ ಅರ್ಥ ತುಂಬ ಸರಳ: ಜೀವನವನ್ನು ಸಂಭ್ರಮಿಸುವುದು, ಮನಸ್ಸಿನ ಕಠಿಣತೆಯನ್ನು ಕರಗಿಸುವುದು, ಸಂಬಂಧಗಳನ್ನು ಜೋಡಿಸುವುದು.

ಒಂದು ಪ್ರಚಲಿತ ಕಥನದ ಪ್ರಕಾರ ಒಮ್ಮೆ ನಿಜಾಮುದ್ದೀನ್ ಔಲಿಯಾ ಅವರು ದುಃಖದಲ್ಲಿದ್ದಾಗ ತಮ್ಮ ಗುರುವಿನ ಸ್ಥಿತಿಯನ್ನು ನೋಡಿ ನೊಂದ ಅಮೀರ್ ಖುಸ್ರೋ ಅವರನ್ನು ಖುಶಿಪಡಿಸಲು ಮನಸ್ಸನ್ನು ತಿಳಿಯಾಗಿಸಲು ಹಳದಿ ಬಟ್ಟೆ ಧರಿಸಿ, ಹಳದಿ ಹೂಗಳನ್ನು ಹಿಡಿದು, ಬಸಂತನ ತರಾನಾ ಹಾಡುತ್ತಾ ಸಂಚರಿಸುತ್ತಾರೆ, ಅದರಿಂದ ಪರರ ಮನಸ್ಸು ಹಗುರಾಗಿ, ದರ್ಗಾದಲ್ಲಿ “ಬಸಂತ್” ಸಂಭ್ರಮ ಒಂದು ಪರಂಪರೆಯಂತೆ ಬೆಳೆಯಿತು ಎಂದು ಹೇಳುತ್ತಾರೆ.
ದರ್ಗಾ ಎಂದರೆ ಅನೇಕ ಜನರಿಗೆ ಕೇವಲ “ಮುಸ್ಲಿಂ ಪವಿತ್ರ ಸ್ಥಳ” ಮಾತ್ರವಲ್ಲ. ಅದು ಬಡವರ, ದುಃಖಿತರ, ಅಸಹಾಯಕರ ಆಶ್ರಯ. ಇಲ್ಲಿ ಬರುವ ಯಾವ ಮನುಷ್ಯನೂ “ಹಿಂದೂ” ಅಥವಾ “ಮುಸ್ಲಿಂ” ಆಗಿ ಬರುವುದಿಲ್ಲ. ಆಶ್ರಯ ಬಯಸಿ, ನಮ್ಮ ಮೊರೆ ಕೇಳು ಎಂದು ಸ್ಮರಣೆಯ ಭಾವದಿಂದ ಬರುತ್ತಾರೆ. ದರ್ಗಾದ ಬಾಗಿಲುಗಳು ತೆರೆದಿರುವುದು ಧರ್ಮದ ಪ್ರದರ್ಶನಕ್ಕಾಗಿ ಅಲ್ಲ; ಅದು ಸೂಫೀ ದರ್ಶನದ ಹೃದಯವಾದ ಪ್ರೀತಿ, ಸಮಾನತೆ, ಸೇವೆ ಎಂಬ ಮೌಲ್ಯಗಳಿಗಾಗಿ.
ಸೂಫೀ ಪರಂಪರೆಯಲ್ಲಿನ ದೇವರ ಹುಡುಕಾಟವು ಕಠಿಣ ನಿಯಮಗಳ ಮೂಲಕ ಮಾತ್ರ ಸಾಗುವುದಿಲ್ಲ. ಅದು ಅಂತರಂಗ ಶುದ್ಧಿ, ಪ್ರೇಮ, ಮತ್ತು ಮಾನವೀಯತೆಯ ಮೂಲಕ ಸಾಗುತ್ತದೆ. ಹಾಗಾಗಿ ಭಾರತದಲ್ಲಿ ಸೂಫೀ ಸಂಸ್ಕೃತಿ ಬೆಳೆಯುವಾಗ ಅದು ಇಲ್ಲಿನ ಜನಜೀವನದ ಜೊತೆ ಬೆರೆತುಕೊಂಡಿತು. ಅನೇಕ ಸ್ಥಳೀಯ ಆಚರಣೆಗಳು, ಹಾಡುಗಳು, ಋತು ಸಂಭ್ರಮಗಳೊಂದಿಗೆ ಸಂವಾದ ನಡೆಸಿದೆ. ದರ್ಗಾಗಳಲ್ಲಿ ಕಾಣುವ ಹೋಳಿ–ಬಸಂತ್ ಆಚರಣೆಗಳ ಹಿನ್ನೆಲೆ ಕೂಡ ಈ “ಸಂವಾದ”ದಲ್ಲೇ ಇದೆ.
ಆದರೆ, ಇಂದು ನಮ್ಮ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಗೋಡೆಗಳು ಎತ್ತರವಾಗುತ್ತಿವೆ. “ನಾವು” ಮತ್ತು “ಅವರು” ಎಂಬ ಗಡಿ ರೇಖೆಗಳು ದಿನೇದಿನೇ ದಟ್ಟವಾಗುತ್ತಿವೆ. ಹಬ್ಬಗಳನ್ನು ಸಂಭ್ರಮಿಸುವುದಕ್ಕಿಂತ ಹೆಚ್ಚಾಗಿ ನಿರ್ದಿಷ್ಟ ಗುಂಪಿನ ಗುರುತಿನ ಪ್ರದರ್ಶನವಾಗಿಸಿ ಶಕ್ತಿ ಪ್ರದರ್ಶನ ನಡೆಸುತ್ತಿವೆ. ನಲಿವಿನ ಆಚರಣೆಗಳನ್ನೆಲ್ಲ ರಾಜಕೀಯ ಧ್ರುವೀಕರಣದ ವೇದಿಕೆಗಳಾಗಿ ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂಕೀರ್ಣವಾದ ಹೊತ್ತಿನಲ್ಲಿ ದರ್ಗಾಗಳಲ್ಲಿ ನಡೆಯುವ ಹೋಳಿ ಮತ್ತು ಬಸಂತ ಪಂಚಮಿ ಆಚರಣೆಗಳು ಕೇವಲ ಆಚರಣೆಗಳಲ್ಲ, ಫ್ಯಾಶನ್ ಅಲ್ಲ, ಅವು ಭಾರತದಂತಹ ವಿಶಾಲವಾದ ದೇಶದ ಮಣ್ಣಗಂಧದಲ್ಲಿ ಅರಳಿದ ಗಂಗಾ–ಜಮುನಿ ತೆಹಜೀಬಿನ ಜೀವಂತ ಸಂಕೇತ. ಗಂಗಾ ಜಮನೀ ತೆಹಜೀಬ್ ಅಂದರೆ “ನಾನು” ಮತ್ತು “ನೀನು” ಎಂಬ ಭೇದವನ್ನು ಅಳಿಸಿ “ನಾವು” ಎಂಬ ಭಾವನೆಯನ್ನು ಮೂಡಿಸುವ ಸಂಸ್ಕೃತಿ. ಅದನ್ನೇ ಈ ಆಚರಣೆಗಳು ಹೇಳುವುದು – ಭಿನ್ನತೆಗಳು ಇದ್ದರೂ ಸಹಬಾಳ್ವೆ ಸಾಧ್ಯವೆಂದು ಸಾರುತ್ತವೆ. ಆದರೆ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಅರ್ಧಸತ್ಯ–ಸುಳ್ಳುಗಳು ಜನರನ್ನು ಇನ್ನಷ್ಟು ದೂರ ಮಾಡುತ್ತಿವೆ.
“मज़हब नहीं सिखाता आपस में बैर रखना,
हिंदी हैं हम, वतन है हिंदोस्ताँ हमारा।”
ಎಂದರು ಕವಿ ಇಕ್ಬಾಲ್. ಸೂಫೀ ಪರಂಪರೆ, ಸೂಫಿ ಸಂಸ್ಕೃತಿಯು ಆಚರಣೆಗಳಿಗಿಂತ ತನ್ನ ಮಾನವೀಯ ಮೌಲ್ಯಗಳ ಮೇಲೆ ನಿಂತಿದೆ. ದರ್ಗಾದ ಲಂಗರ್ (ಅನ್ನದಾನ) ಪದ್ಧತಿ ಇದಕ್ಕೆ ದೊಡ್ಡ ಉದಾಹರಣೆ. ಎಲ್ಲರೂ ಒಂದೇ ಸಾಲಿನಲ್ಲಿ ಕೂತು ತಿನ್ನುವುದು ಇದು ಧರ್ಮದ ಗಡಿಗಳನ್ನು ಕರಗಿಸುವ ಸಮಾನತೆಯ ಸಂದೇಶ. ಈ ಲಂಗರ್ ಸಂಸ್ಕೃತಿಯನ್ನು’ಸಿಖ್’ರ ಗುರುದ್ವಾರಗಳಲ್ಲಿ ಕಾಣುತ್ತೇವೆ. ’ಕವ್ವಾಲಿ’ ಕೂಡ ಅದೇ ರೀತಿ: ಸಂಗೀತವು ಇಲ್ಲಿ ದೇವರನ್ನು ಹುಡುಕುವ ಮಾರ್ಗ ಮಾತ್ರವಲ್ಲ, ಮನುಷ್ಯರನ್ನು ಹತ್ತಿರ ತರುವ ಸೇತುವೆ. ಭಿನ್ನತೆಯ ಅರ್ಥ ಶತ್ರುತ್ವ ಅಲ್ಲ. ಘೋಷಣೆಯ ರೂಪದಲ್ಲೂ ಅಲ್ಲ, ರಕ್ಷಣೆಯ ರೂಪದಲ್ಲೂ ಅಲ್ಲ. ಸಹಬಾಳ್ವೆ ಎಂಬುದು “ಒಬ್ಬರ ಹಬ್ಬದಲ್ಲಿ ಮತ್ತೊಬ್ಬರು ಅತಿಥಿಯಾಗುವ” ಸರಳ ಮಾನವೀಯತೆಯ ಅಭಿವ್ಯಕ್ತಿ. ನಮ್ಮ ನಡೆನುಡಿಗಳ ಮೂಲಕವೇ ವ್ಯಕ್ತವಾಗುತ್ತದೆ. ಈ ಮಾನವೀಯತೆಯೇ ಧ್ರುವೀಕರಣದ ವಿರುದ್ಧ ನಿಂತಿರುವ ಏಕೈಕ ಸಶಕ್ತ ಸಾಂಸ್ಕೃತಿಕ ಪ್ರತಿರೋಧವೆನ್ನಲು ಅಡ್ಡಿಯಿಲ್ಲ.
ಇದನ್ನೂ ಓದಿ ದೇಶದ ಉನ್ನತ ಹುದ್ದೆಗಳಲ್ಲಿ ಮುಂದುವರಿದವರೇ ಮೇಲುಗೈ; ಶೇ.90ಕ್ಕೂ ಅಧಿಕ ಹುದ್ದೆಗಳಲ್ಲಿ ಪಾರುಪತ್ಯ
ಹಾಳುಬಿದ್ದ ಗೋಡೆ ಇಮಾರತುಗಳೇ ಕಾಣುವ ಈ ದಿಲ್ಲಿ ಶಹರಿನಲ್ಲಿ ಕಲ್ಲೂ ಕತೆ ಹೇಳುತ್ತವೆ. ಶೇಖ್ ಸರಾಯ್ ಎದುರು ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದುದು, ಸುರಿಯುವ ಮಳೆಯಲ್ಲಿ ಕೆರೆಯಾಗಿ ನಿಂತ ನೆಹರೂ ಪ್ಲೇಸಿನ ಕಾಲಕಾ ಜಿ ಮಂದಿರದ ಹಿಂಭಾಗದಲ್ಲಿ ಮೊಳಕಾಲಿನವರೆಗಿನ ಮಳೆ ನೀರಲ್ಲಿ ನೆಲವೆಲ್ಲಿ ’ನಾಲಾ’ಯೆಲ್ಲಿ ಗೊತ್ತಾಗದೇ ಸರ್ಕಸ್ ಮಾಡುತ್ತ ನಡೆದದ್ದೂ, ಮೂಳೆ ಕಟಕಟಿಸುವ ಚಳಿಯಲ್ಲಿ ಸ್ಕೂಟರ್ ಮೇಲೆ ಹಿಂಸೆಪಟ್ಟುಕೊಂಡು ಹೋಗುತ್ತಿದ್ದುದೂ, ಪುಷ್ಪವಿಹಾರದ ಮೈದಾನದಲ್ಲಿ ಸರಿರಾತ್ರಿವರೆಗೆ ರಾಮಲೀಲಾ ನೋಡಿ ಬಂದದ್ದೂ, ಬುಧವಾರದ ಹಾಗೂ ಶನಿವಾರದ ಸಂತೆಯನ್ನು ಸುತ್ತಿದ್ದು. ’ಗುಡ್ಡಿ’ ಮದುವೆಯಲ್ಲಿ ’ಚಾಕ್ ’ಪೂಜೆಯಂದು ಕುಂಬಾರನ ಗುಡಿಸಲಲ್ಲಿ ಗುಡ್ಡಿಯ ಚಾಚಿ, ಮಮ್ಮಿ, ಬಡಿ ಮಮ್ಮೀ, ನಾನಿ ಕೂಡ ಡೋಲ್ ಬಡಿತದ ನಾದಕ್ಕೆ ತಕ್ಕ ಹೆಜ್ಜೆ ಹಾಕಿ ಕುಣಿದದ್ದು. ಚಳಿಗಾಲದ ಇಳಿ ಸಂಜೆ ಬೆಚ್ಚಗೇ ಪಂಡಿತಾನಿ ಆಂಟಿಯ ಒಲೆ ಮುಂದೆ ಚಳಿಗೆ ಕಾಸಿಕೊಳ್ಳುತ್ತ ಕುಳಿತು ತುಪ್ಪ ಸುರಿದ ಬಿಸಿಬಿಸಿ ಬಾಜರಾ ಖಿಚಡಿಯನ್ನು ಚಪ್ಪರಿಸಿ ತಿನ್ನುತ್ತಿದ್ದುದು ಎಲ್ಲ ನಿನ್ನೆ ಮೊನ್ನೆಯೇ ನಡೆದಂತಿವೆ. ದಿನವೆಲ್ಲ ಸುರಿದ ಮಳೆಯೊಂದಿಗೆ ತೇಲಿಬಂದ ನೆನಪುಗಳು ಕಾಗದದ ದೋಣಿಯಂತೆ ಮೆಲ್ಲಗೆ ಮನದ ಹರಿವಿನ ಜೊತೆಗೆ ಬದುವಿನ ಗುಂಟ ತೇಲಿ ಬರತೊಡಗಿದ್ದವು….”ಯೆ ಕಾಗಜ್ ಕಿ ಕಸ್ತಿ, ವೊಹ್ ಬಾರಿಶ್ ಕಾ ಪಾನಿ….ನೆನಪಾಯಿತು!

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




