ದಿಲ್ಲಿ ಮಾತು | ಬಂದೂಕಿನ ನಳಿಗೆಯಲ್ಲಿ ಗುಬ್ಬಿ ಗೂಡು ಕಟ್ಟಲಿ

Date:

ಭಯೋತ್ಪಾದಕ ದಾಳಿಯಿಂದ ಯಾರನ್ನೂ ನಂಬದಂತಹ ಸ್ಥಿತಿ, ಜನಜೀವನದಲ್ಲೊಂದು ನಿರ್ವಾತ ಉಂಟಾಗಿದ್ದು ನಿಜ. ನಾಲ್ಕು ದಶಕಗಳ ಹಿಂದೆ ನಾನು ಮುನಿರ್ಕಾದಲ್ಲಿ ಕಂಡಿದ್ದ ದೆಹಲಿಗರ ಜನಜೀವನ, ಸಹಬಾಳ್ವೆ, ಕೊಡುಕೊಳ್ಳುವಿಕೆ ಈಗ ಕೇವಲ ಸಮೀಪವರ್ತಿಗಳಲ್ಲಿ, ಹತ್ತಿರದ ಸಂಬಂಧಗಳಲ್ಲಿ ಉಳಿದುಕೊಂಡಿದೆಯೇ ಹೊರತು ಸಾಮಾಜಿಕ ವಲಯದಲ್ಲಲ್ಲ. ಅಪಾರ್ಟ್ಮೆಂಟುಗಳಲ್ಲಂತೂ ಇಲ್ಲವೇ ಇಲ್ಲ. ಹಾಗೆಂದು ಎಲ್ಲರನ್ನೂ ಒಂದೇ ದುರ್ಬೀನಿನಿಂದ ನೋಡಲಾಗದು. ಆದರೆ ಜನರು ಒಬ್ಬರಿಗೊಬ್ಬರು ಶತ್ರುಗಳಾಗಿ ಹೋಗಿದ್ದಾರೆ

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿ ಜನರು ಮನೆಗಳಲ್ಲಿಯೇ ಇರುವಂತಹ ಪರಿಸ್ಥಿತಿ ಬಂದಿದೆ. ಹೇಗಾದರೂ ಹಣ ಜೋಡಿಸಿ ಹವೆಯನ್ನು ಶುದ್ಧಗೊಳಿಸುವ ಏರ್ ಪ್ಯೂರಿಫೈಯರ್ (ಗಾಳಿ ಶುದ್ಧೀಕರಣ ಯಂತ್ರ) ಅಳವಡಿಸಿಕೊಳ್ಳಬೇಕಾಗಿದೆ. ಮುಂದೊಂದು ದಿನ ವ್ಯಾನಿಟಿ ಬ್ಯಾಗಿನಂತೆ ಪುಟ್ಟ ಆಕ್ಸಿಜನ್ ಸಿಲಿಂಡರನ್ನು ಹೆಗಲೇರಿಸಿಕೊಂಡು ಹೊರಗೆ ಓಡಾಡುವ ಪರಿಸ್ಥಿತಿ ಬರುತ್ತದೋ ಏನೋ. ಹಚ್ಚನೇ ಹಸಿರು ಹೊದ್ದ ನೆಲ, ತಿಳಿಯಾದ ಆಕಾಶ, ತುಂಬಿ ಹರಿಯುವ ಯಮುನೆಯನ್ನು ಇನ್ಯಾವತ್ತೂ ಕಾಣಲಾರೆವು. ಮುಂದೊಮ್ಮೆ ಶರತ್ಕಾಲದ ಇರುಳಿನಲ್ಲಿ ಕಡುನೀಲ ಬಣ್ಣದ ಆಕಾಶದಲ್ಲಿ ಮಿಣುಕುವ ಚುಕ್ಕಿಗಳನ್ನು ತುಂಬಿಕೊಂಡ ಆಕಾಶವೂ ಕಾಣಬಹುದೇನೋ. ಈಗಾಗಲೇ ದಿನಗಳು ಚಿಕ್ಕವಾಗಿ ಇರುಳು ದೀರ್ಘವಾಗಿದೆ. ಬೇಗ ಕತ್ತಲಾಗತೊಡಗಿದೆ. ಹವೆ ಬದಲಾಗುತ್ತಿದೆ. ಶರತ್ಕಾಲದ ಮುಸ್ಸಂಜೆ ಒಬ್ಬಳೇ ಟೆರೇಸಿನಲ್ಲಿ ಕೂತರೆ ನನಗೆ ಏಕಾಂತಕ್ಕೆ ಜೊತೆಯಾಗುವುದು ಈ ವಿಶಾಲವಾದ ಆಗಸ, ಆಗಾಧವಾದ ನೀಲಸಾಗರ, ಅದರಲ್ಲೇ ಕಣ್ಣು ನೆಟ್ಟು ಕೂರುತ್ತೇನೆ. ಏನನ್ನೋ ಹುಡುಕುವವಳಂತೆ, ಧ್ಯಾನಿಸುವವಳಂತೆ, ನಿರ್ವಾತದಲ್ಲಿ ಹಾರಿಬಿಡುವಂತೆ, ಹಳೇ ನೆನಪುಗಳೊಂದಿಗೆ ಮಾತಾಡುತ್ತಿರುವಂತೆ.  

ಚಿಕ್ಕವಳಿದ್ದಾಗ ಅವ್ವನ ಮಡಿಲಲ್ಲಿ ತಲೆಯಿಟ್ಟು ಹೆಂಗಸರ ಕಟ್ಟೆ ಪುರಾಣವನ್ನು ಕೇಳುತ್ತ, ಆಕಾಶವನ್ನು ಅಳೆಯುತ್ತ ನನ್ನವೇ ಕಲ್ಪನೆಗಳ ಲೋಕಕ್ಕೆ ಜಾರುತ್ತಿದ್ದೆ. ಆಕಾಶಕ್ಕೆ ಒಂದೊಂದು ಏಣಿಗಳನ್ನು ಇಡುತ್ತಾ ಹೋದರೆ ಎಷ್ಟು ಬೇಕಾಗಬಹುದು ? ಆಗ ಮೇಲೆ ಹೋದೇವಾ? ಚಂದ್ರನನ್ನು ತಲುಪಬಹುದಾ ಎಂದೆಲ್ಲ ಯೋಚಿಸುತ್ತಿದ್ದ ಬಾಲ್ಯವಿತ್ತು. ಸಿನೆಮಾದಲ್ಲಿ ತೋರಿಸುವಂತೆ ಮೋಡಗಳ ಅಲೆಗಳಲ್ಲಿ ದೇವರುಗಳ ಲೋಕವಿರುತ್ತಿತ್ತೇ? ದೇವರುಗಳು ಕಾಣುತ್ತಿರಬೇಕಲ್ಲ! ಆಕಾಶದಲ್ಲಿ ಏನೋ ವಸ್ತು ಸುಯ್ಯೆಂದು ಮಿಂಚಿನಂತೆ ಹಾರಿಹೋದಂತಾಗಿ ಅವ್ವನನ್ನು ಅದೇನೆಂದು ಪೀಡಿಸಿದರೆ, ಅದೇನೋ ಧೂಮಕೇತು, ಇಲ್ಲ ನಕ್ಷತ್ರ ಉದುರಿರಬಹುದು ಬಿಡು ಅಂದಿದ್ದಳು. ಉದುರುವ ನಕ್ಷತ್ರವನ್ನು ಕಂಡರೆ ಶುಭವಂತೆ ಮನಸ್ಸಿನ ಮುರಾದ್ ಪೂರ್ತಿ ಆಗುತ್ತವಂತೆ. ಹಾಗೆ ಹೇಳುತ್ತಾರಷ್ಟೇ. ಏನು ನಂಬಿಕೆಯೋ ಗೊತ್ತಿಲ್ಲ.   

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
delhi car blast

ದೆಹಲಿಯ ಕೆಂಪುಕೋಟೆಯ ಬಳಿ ನಡೆದ ವಿಸ್ಪೋಟದ ಘಟನೆ ಜನರಲ್ಲಿ ಭಯ-ಆತಂಕವನ್ನುಂಟು ಮಾಡಿದೆ. ಏನನ್ನೂ ಮಾಡದ ಅಮಾಯಕರ ಜೀವವನ್ನು ತೆಗೆಯುವಂತಹ ಈ ಹೇಯಕೃತ್ಯ ಖಂಡನೀಯ. ಭಯೋತ್ಪಾದಕ ದಾಳಿಯಿಂದ ಯಾರನ್ನೂ ನಂಬದಂತಹ ಸ್ಥಿತಿ, ಜನಜೀವನದಲ್ಲೊಂದು ನಿರ್ವಾತ ಉಂಟಾಗಿದ್ದು ನಿಜ. ನಾಲ್ಕು ದಶಕಗಳ ಹಿಂದೆ ನಾನು ಮುನಿರ್ಕಾದಲ್ಲಿ ಕಂಡಿದ್ದ ದೆಹಲಿಗರ ಜನಜೀವನ, ಸಹಬಾಳ್ವೆ, ಕೊಡುಕೊಳ್ಳುವಿಕೆ ಈಗ ಕೇವಲ ಸಮೀಪವರ್ತಿಗಳಲ್ಲಿ, ಹತ್ತಿರದ ಸಂಬಂಧಗಳಲ್ಲಿ ಉಳಿದುಕೊಂಡಿದೆಯೇ ಹೊರತು ಸಾಮಾಜಿಕ ವಲಯದಲ್ಲಲ್ಲ. ಅಪಾರ್ಟ್ಮೆಂಟುಗಳಲ್ಲಂತೂ ಇಲ್ಲವೇ ಇಲ್ಲ. ಹಾಗೆಂದು ಎಲ್ಲರನ್ನೂ ಒಂದೇ ದುರ್ಬೀನಿನಿಂದ ನೋಡಲಾಗದು. ಆದರೆ ಜನರು ಒಬ್ಬರಿಗೊಬ್ಬರು ಶತ್ರುಗಳಾಗಿ ಹೋಗಿದ್ದಾರೆ ಅಥವಾ ಉದ್ದೇಶಪೂರ್ವಕವಾಗಿ ಶತ್ರುಗಳನ್ನಾಗಿಸಿದೆ ಈ ವ್ಯವಸ್ಥೆ. ಕೋಮುದ್ವೇಷಕ್ಕೆ ರುಜುವಾತು ಹಾಕುವಂತಹ ಅಮಾನವೀಯ ಭಯೋತ್ಪಾದಕ ದಾಳಿ ನಡೆಸಿ ಸಾಧಿಸಿದ್ದಾದರೂ ಏನನ್ನು? ಅಮಾಯಕರನ್ನು ಸಾಯಿಸುವುದೇ? ಜನಸಾಮಾನ್ಯರ ಬದುಕು ಭಯದಲ್ಲಿ ಉಸಿರಾಡುವಂತಾಗಿರುತ್ತದೆ. ಶಾಲೆಗೆ ಹೋಗುವ ಮಕ್ಕಳು, ಉದ್ಯೋಗಕ್ಕೆಂದು ಹೊರಗಡೆ ಪ್ರಯಾಣಿಸುವವರು, ಮಾಲ್‍‍ಗಳು, ರೇಲ್ವೆ ನಿಲ್ದಾಣಗಳು, ಬಸ್ ಟರ್ಮಿನಲ್ ಹೀಗೆ ಜನನಿಬಿಡವಿರುವ ಸ್ಥಾನಗಳಲ್ಲಿ ಶ್ವಾನ ದಳ, ಬಾಂಬ್ ಪತ್ತೆ, ಬಾಂಬ್ ನಿಷ್ಕ್ರಿಯ ದಳಗಳು ದೌಡಾಯಿಸುವುದು, ಪರಿಶೀಲನೆ ನಡೆಸುವ ಕಾರ್ಯಗಳು ಎಲ್ಲೆಡೆಯೂ ನಡೆಯುತ್ತಿವೆ. ಜಾಗರೂಕರಾಗಿರುವುದೆಂದರೆ ಏನು? ಭಯದಲ್ಲಿಯೇ ಬದುಕುತ್ತಿರಿ ಸತ್ತಂತೆ ಎಂದೇ?  

ಇನ್ನೊಂದು ಸಾಮಾಜಿಕ ಕ್ರೌರ್ಯದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಾತಾಡಿದವರನ್ನು ಟ್ರೋಲ್ ಮಾಡಲಾಗುತ್ತದೆ.   ಮಾತಾಡಬಾರದ ಸಂಗತಿ ಎಂದರೆ ಕೆಲಸ ಮಾಡುವ ಕಚೇರಿಗಳಲ್ಲಿ, ಶಾಲಾ ಕಾಲೇಜು, ಸಂತೆ ಮಾಲ್‌ಗಳಲ್ಲಿ ಕೆಲಸ ಮಾಡುವ ಮುಸ್ಲಿಮರು ಎದುರಿಸುವ ಅವಮಾನ, ಅವಹೇಳನ ಇದೆಯಲ್ಲ ಅದನ್ನು ಯಾರೂ ಊಹಿಸಲಾರರು. ನಮ್ಮ ಕಂಪನಿಯಲ್ಲಿ ಇದ್ದ ಮೂರ್ನಾಲ್ಕು ಮುಸ್ಲಿಮ್ ಸಿಬ್ಬಂದಿಗಳಲ್ಲಿ ಇತರರು ಅವರನ್ನು ಆಡಿಕೊಳ್ಳುವ ನೋಡಿಕೊಳ್ಳುವ ಬಗೆ ಇತ್ತಲ್ಲ ಅದನ್ನು ಅನುಭವಿಸಿದವರಿಗೇ ಗೊತ್ತಾಗುತ್ತದೆ. ಅವರು ನಮಾಝಿಗೆ ಹೋಗಿಬಂದರೂ ಕುಹಕ, ಅವರ ಜಮಾತಿನಲ್ಲಿ ಭಯೋತ್ಪಾದನೆಯನ್ನು ಕಲಿಸುತ್ತಾರೆ, ಆ ಬಗ್ಗೆ ಮಾಹಿತಿಗಳನ್ನೂ ಹಂಚಿಕೊಳ್ಳುತ್ತಾರೆ ಎಂದೆಲ್ಲ ಅವರ ಎದುರೇ ಚರ್ಚೆಗಳಾಗಿ ಹಾಗೆಲ್ಲ ಇಲ್ಲಪ್ಪಾ… ಅಂತ ಹೇಳಿದರೂ ವಾದ ವಿವಾದಗಳು ನಡೆದೇ ಇರುತ್ತಿದ್ದವು. ಅಂತಹ ಕಲುಷಿತ ವಾತಾವರಣ ಸೃಷ್ಟಿಯಾಗಿ ಬಹಳ ಕಾಲವಾಗಿದೆ. ಸಧ್ಯ ಇದೆಲ್ಲದರ ಹೊರತಾಗಿ ಒಳ್ಳೆಯದನ್ನೇ ಕಾಣುವ ನೋಡುವ ಜನರೂ ಇದ್ದಾರೆ ಈ ಲೋಕದಲ್ಲಿ ಎನ್ನುವುದಷ್ಟೇ ಹೇಳಲು ಸಾಧ್ಯ.  

ದೆಹಲಿ, ಉತ್ತರಪ್ರದೇಶವಷ್ಟೇ ಏಕೆ ದೇಶದ ಬಹುಭಾಗಗಳಲ್ಲಿ ಕಾರ್ಪೆಂಟರ್, ಏಸೀ ರಿಪೇಯರ್, ಮೇಸ್ತ್ರಿ, ವೆಲ್ಡಿಂಗ್, ಮೆಟಲ್ ಫೆಬ್ರಿಕೇಟರ್, ಟೇಲರಿಂಗ್, ಲಕ್ನೋ ಚಿಕನ್‍ಕಾರಿ, ಜರದೋಸಿ ಎಂಬ್ರಾಯಿಡರಿ ಕುಸುರಿ ಕಲೆಗಾರರು ಇತ್ಯಾದಿ ಕೆಲಸಗಳನ್ನು ಮಾಡುವವರಲ್ಲಿ ಹೆಚ್ಚಿನವರು ಮುಸ್ಲಿಮರು. ನಮ್ಮ ಕಚೇರಿ ಕಟ್ಟಡದ ನವೀಕರಣದಲ್ಲಿನ ಕೆಲಸ ಮಾಡುವವರೆಲ್ಲ ಇಪ್ಪತ್ತರ ಒಳಗಿನ ಮುಸ್ಲಿಮ್ ಹುಡುಗರೇ ಇದ್ದರು. ರಮಜಾನ್ ಎಂದು ರಜೆ ಪಡೆದು ಹೋದ ಕಾರ್ಪೆಂಟರ್ ಹುಡುಗರು ಉಳಿದ ತಳಮನೆಯ ನವೀಕರಣಕ್ಕಾಗಿ ಮರಳಿ ಗೂಡಿಗೆ ಬಂದ ಹಕ್ಕಿಗಳಂತೆ ಅಲ್ಲೊಮ್ಮೆ ಇಲ್ಲೊಮ್ಮೆ ಚಿಲಿಪಿಲಿಗುಡುತ್ತಿರುತ್ತಿದ್ದರು.  ರಮಜಾನ್ ಉಪವಾಸದ ಪೂರ್ತಿ ತಿಂಗಳು ಮರದ ಕೆಲಸ ಮಾಡುತ್ತಿದ್ದ ಇಮ್ರಾನ್, ಅಸದ್, ರಫೀಕ್, ಮಜನೂ (ಅವನ ಹೆಸರು ಮುಜಾಹಿದ್, ಕರೆಯಲು ಬಾರದವರು ಅವನನ್ನು ಮಜನೂ ಮಾಡಿಬಿಟ್ಟಿದ್ದರು). ಇನ್ನೂ ಇಬ್ಬರು ಹುಡುಗರಲ್ಲಿ ಕೆಲವರು ರೋಜಾ ಇಟ್ಟಿದ್ದರು. ಇವರಲ್ಲಿ ಇಮ್ರಾನ್ ಮತ್ತು ಮಜನೂ ಚೆಂದದ ಮಕ್ಕಳು. ದಿನವಿಡೀ ತನ್ಮಯತೆಯಿಂದ ಕೆಲಸ ಮರದ ಮಾಡುತ್ತಿದ್ದ ಅವರನ್ನು ನೋಡಿದರೆ ಏನೋ ಮಮತೆಯುಕ್ಕುತ್ತಿತ್ತು. ನಾನೇ ಕೆಲವೊಮ್ಮೆ ಅವರ ಇಫ್ತಾರ್‌ಗೆ ಏನಾದರೂ ಖಜೂರ್, ಹಣ್ಣು ಇತ್ಯಾದಿ ತರಿಸಲು ಮುಕೇಶನಿಗೆ ಹೇಳುತ್ತಿದ್ದೆ.  

ತಪ್ಪದೇ ನಮಾಜ್ ಗೆ ಹೋಗುವ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿರುವ ಎಳೆ ವಯಸ್ಸಿನ ಹುಡುಗರನ್ನು ಕಂಡಾಗ  ಮನಸ್ಸು ಚುರುಗುಡುತ್ತಿತ್ತು. ಹೆಚ್ಚು ಕಡಿಮೆ ನನ್ನ ಮಗನದೇ ವಯಸ್ಸಿನವರು. ಈಗಾಗಲೇ ಬದುಕಿನ ಜವಾಬ್ದಾರಿಯನ್ನು ಹೊತ್ತಿರುವ ಎಳೆಯರು. ನಾನೊಮ್ಮೆ ಜಸೋಲಾ ಬಸ್ ಸ್ಟಾಪಿನಲ್ಲಿ ಕೂತಿದ್ದೆ, ನನ್ನೆದುರು ಹಾದುಹೋದ ಆಟೋದಲ್ಲಿ ಇಮ್ರಾನ್, ರಫೀಕ್, ಮಜನೂ ದಾಟಿಹೋದದ್ದು ಕಂಡೆ. ಅವರೂ ನನ್ನನ್ನು ಕಂಡು ನಾನು ಇಲ್ಲೇ ಜಸೋಲಾದಲ್ಲೇ ವಾಸಿಸುತ್ತಿರಬಹುದು ಎಂದುಕೊಂಡಿದ್ದರಂತೆ. ರಮಜಾನ್ ಹಬ್ಬದ ಸೀರಾ, ಸೇವಿಯಾ ನನಗಾಗಿ ತರುವ ಹುಮ್ಮಸ್ಸು ಅವರಿಗೆ. ಅವರು ಶಾಹೀನ್ ಬಾಗಿನ ನಿವಾಸಿಗಳು ಎಂದು ಗೊತ್ತಾಯಿತು. ಜಮುನಾದೇವಿ ಗುತ್ತಿಗೆದಾರಿಣಿಯನ್ನು ಪರಿಚಯಿಸಿದ ಹುಡುಗರು, ನಿತ್ಯವೂ ತಮ್ಮ ಕೆಲಸದ ವಿವರವನ್ನೆಲ್ಲ ನನಗೆ ಒಪ್ಪಿಸಬೇಕಿತ್ತು. ಹೀಗೆ ನನ್ನೊಂದಿಗಿನ ಅವರ ಬಾಂಧವ್ಯವೂ ವಿಶೇಷವಾಗಿತ್ತು. ಏನಾದರೂ ಹೇಳುವುದು, ಸಲಹೆ ಪಡೆಯುವುದು ಇದ್ದರೆ ನನ್ನ ಹತ್ತಿರವೇ ಓಡಿಬರುತ್ತಿದ್ದರು. ಶುಕ್ರವಾರದ ನಮಾಜಿಗೆ ಕೆಲಸ ನಿಲ್ಲಿಸಿ ನೀಟಾಗಿ ಟೋಪಿ ಧರಿಸಿ ಹೊರಡುವ ಅವರನ್ನು ಕೇಳುತ್ತಿದ್ದೆ. ನೀವು ಪುರಾನಾ ದಿಲ್ಲಿಗೆ ಹೋದರೆ ನಾನೂ ಬರುತ್ತೇನೆ ಇಮ್ರಾನ್ ನಿಮ್ಮೊಂದಿಗೆ ಜಮಾ ಮಸೀದಿಗೆ ಹೋಗೋಣ ಎನ್ನುವಷ್ಟು ಸಲುಗೆ ಅವರಲ್ಲಿ. ‘ಠೀಕ ಹೈ ಸಬ್ ಮೆಟ್ರೋ ಸೆ ಚಲೇಂಗೆ’ ಎಂಬ ಒಪ್ಪಂದವೂ ಆಗಿತ್ತು. ನಾನು ಭುವನನಿಗೆ ವಿಜಯವಾಣಿಯಲ್ಲಿ ಆಗ ಪ್ರಕಟವಾದ ಫಕೀರ್ ಮೊಹಮ್ಮದ ಕಟ್ಪಾಡಿ ಅವರು ಬರೆದ ರಮಜಾನ್ ಕಥೆಯನ್ನು  ಹೇಳುತ್ತಿದ್ದೆ. ಈ ಹುಡುಗರಲ್ಲಿನ ಹಿರಿಯ ಮೇಸ್ತ್ರಿ ಜಮಾಲ್ ಅಸದ್‌ನ ತಂದೆ. ಅವನೂ ಅರೆಕ್ಷಣ ಕುಳಿತು ಜಕಾತ್ ಬಗ್ಗೆ, ಇಫ್ತಾರ್ ಆಚರಣೆಯ ಬಗ್ಗೆ ತಿಳಿದಂತೆ ವಿವರಿಸಿದ. ಜಕಾತ್ ಮಾಡದ ರಮಜಾನ್ ಉಪವಾಸಕ್ಕೆ ಯಾವ ಅರ್ಥವೂ ಇಲ್ಲವೆಂದು ವಿವರಿಸಿದ್ದ.    

muharram display 1597729459

ಆ ಸಂದರ್ಭದಲ್ಲಿ DMRC ( Delhi Metro Railway Corporation) ಅವರು ತಮ್ಮ ೩ನೇ ಘಟ್ಟದ ಮೆಟ್ರೋ ಕಾರ್ಯ ಆರಂಭಿಸಿದ್ದು, ಜಮಾ ಮಸ್ಜಿದ, ಕೆಂಪುಕೋಟೆ- ನೇತಾಜಿ ಸುಭಾಶ್ ಪಾರ್ಕಿನ ಹತ್ತಿರ ನೆಲ ಅಗಿಯುವಾಗ ಮೊಗಲ್ ಕಾಲದ ’ಅಕಬರಾಬಾದಿ’ ಮಸೀದಿಯೊಂದರ ಅವಶೇಶ ದೊರೆತಿತ್ತು. ಆವಾಗಲೋ ಈವಾಗಲೋ ಒಮ್ಮೆ ಪತ್ರಿಕೆಯಲ್ಲಿ ’ಅಕಬರಾಬಾದಿ ಮಸೀದಿ’ ಅಕ್ರಮ ಕಟ್ಟಡ, ಅದನ್ನು ನೆಲಸಮಗೊಳಿಸಬೇಕು ಎಂದು ಅಖಿಲ ಭಾರತ ಹಿಂದೂ ಸಭೆಯ ಅಭಿಪ್ರಾಯ ಒಂದೆಡೆಯಾಗಿದ್ದರೆ, ಅದು ಮೊಗಲ್ ಕಾಲದ ಅವಶೇಷ  ಹಾಗೂ ಪ್ರಾರ್ಥನಾ ಸ್ಥಾನದ ಪವಿತ್ರ ಮಸೀದಿ, ಅದನ್ನು ಹಾಳುಗೆಡವಬಾರದು ಎಂಬುದು ಸ್ಥಳೀಯ ಮುಸ್ಲಿಮರ ಭಾವನೆಯಾಗಿತ್ತು. ಇದೇ ಒಂದು ದೊಡ್ಡ ಚರ್ಚೆಯಾಗಿತ್ತು ಆ ಕಾಲದಲ್ಲಿ. ಹೈಕೋರ್ಟ್ ಈಗಾಗಲೇ ಅದನ್ನು ನೆಲಸಮಗೊಳಿಸುವ ಆಜ್ಞೆಯನ್ನು ಕೊಟ್ಟಾಗಿತ್ತು. ಮತ್ತೆ ಕೋಮು ಗಲಭೆಯಾಗಬಹುದೆಂದು ಆ ಆಜ್ಞೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಏನಾಗಿದೆಯೋ ತಿಳಿಯದು.

ಹಾಗೇ ಕುತೂಹಲಕ್ಕೆ ಕೊನೆಗೂ ಈ ’ಅಕಬರಾಬಾದಿ ಮಸೀದಿ’ ಬಗ್ಗೆ ಇತಿಹಾಸದ ಕತೆಯೇನು ಎಂಬುದು ಗೂಗಲಿಸಿದಾಗ ತಿಳಿಯಿತು. ಶಹಜಹಾನನ ಹಲವು ಪತ್ನಿಯರಲ್ಲಿ ಅಕಬರಾಬಾದಿ ಬೇಗಂ ಎಂಬುವವಳು ಕೆಂಪುಕೋಟೆಯ ಹತ್ತಿರದ ಜಮಾ ಮಸ್ಜಿದ್ ಗೆ ಹತ್ತಿರವಿರುವ ಇದೇ ಜಾಗದಲ್ಲಿ ಪವಿತ್ರ ಕುರಾನ್‍ಅನ್ನು ಅರೇಬಿಕ್ ಭಾಷೆಯಿಂದ ಉರ್ದುವಿಗೆ ತರ್ಜುಮೆಗೊಳಿಸಿದ್ದಳಂತೆ. ಅವಳ ಗೌರವಾರ್ಥವಾಗಿ ಪವಿತ್ರ ಕುರಾನ್ ಅನ್ನು ಅನುವಾದಿಸಿದ ಆ ಸ್ಥಳದಲ್ಲಿ 1650ರಲ್ಲಿ ಮಸೀದಿಯನ್ನು ಕಟ್ಟಲಾಯಿತಂತೆ. ಬಹದ್ದೂರ್ ಶಾ ಜಫರ್ ನ ಬೇಗಂ ಝೀನತ್ ಮಹಲ್ ಮೊದಲಾದ ಮೊಗಲ್  ವೈಭವ ಕಾಲದ ರಾಜ ಮಹಿಳೆಯರು, ಅನೇಕ ಮಸೀದಿಗಳನ್ನು ಕಟ್ಟಿಸಿದ್ದಾರೆ. ಇದೆ ಶಹಜಹಾನ್ ಬಾದ್ (ಪುರಾನಾ ದಿಲ್ಲಿ) ನ  ಫತೇಹಪುರಿ ಮಸ್ಜಿದ್, ಝೀನತ್-ಉಲ್- ಮಸ್ಜಿದ್ ಮುಂತಾದವು.

ನಾನಿದನ್ನು ಯಾಕೆ ಉಲ್ಲೇಖಿಸುತ್ತಿದ್ದೇನೆಂದರೆ  ದೆಹಲಿನ್ನು ಆಳಿದ ಮೊಗಲರನ್ನು, ನಂತರ ಇಡೀ ದೇಶವನ್ನೇ ಆಳಿದ, ದೆಹಲಿಯ ಹೊಸ ಇತಿಹಾಸಕ್ಕೆ ಹೊಸರೂಪ ನೀಡಿ ವಿನ್ಯಾಸಗೊಳಿಸಿದ  ಬ್ರಿಟಿಷರ ಐತಿಹ್ಯವನ್ನು ತೆಗೆದುಬಿಟ್ಟರೆ  ದೆಹಲಿಗೆ ಯಾವ ಅಸ್ಮಿತೆಯೂ ಇಲ್ಲ. (ನನ್ನ ಭಾವನೆ). ಈ ಕೆಂಪುಕೋಟೆ, ಕುತುಬ್ ಮಿನಾರ್, ಕೆಂಪುಕಲ್ಲು, ಅಮೃತಶಿಲೆಗಳ ಬುರುಜು, ಗುಂಬಜ್, ಮಸೀದಿ, ದರ್ಗಾಗಳು, ಹಳೇ ದಿಲ್ಲಿಯ ಸಂದು-ಗೊಂದಿ ಹಾಗೂ ಯಮುನೆಯ ಜೊತೆ ಈ ಐರೋಪ್ಯ ಹಾಗೂ ಪರ್ಷಿಯನ್ ವಾಸ್ತುಶಿಲ್ಪದ ವೈಭವದ ಕಟ್ಟಡಗಳು, ಪಾರ್ಲಿಮೆಂಟ್, ಕನಾಟ್ ಪ್ಲೇಸ್ ರಾಷ್ಟ್ರಪತಿ ಭವನ ಇತ್ಯಾದಿಗಳಿಲ್ಲದ ದೆಹಲಿಯನ್ನು ಕಲ್ಪಿಸಿಕೊಳ್ಳಲಾಗುತ್ತದೆಯೇ?    

ದಿನ ನಿತ್ಯದ ಬದುಕನ್ನು ಒಂದೊಪ್ಪತ್ತಿನ ಅನ್ನ, ನೀರು ಸುತ್ತಮುತ್ತಲಿನವರ ಪರಸ್ಪರ ಪ್ರೀತಿ -ಸ್ನೇಹ, ಸೌಹಾರ್ದವೇ ಕೈ ಹಿಡಿದು ನಡೆಸುತ್ತಿದೆಯೇ ಹೊರತು ನಾವು ಹುಟ್ಟಿ ಬಂದಿರುವ ಯಾವುದೇ ಕೋಮು-ಜಾತಿಗಳಲ್ಲ. ಚಿಕ್ಕವಳಿದ್ದಾಗ ನನ್ನ ತಲೆಯ ಹೇನು ಹೆಕ್ಕಿದ, ಪುಟ್ಟ ಅಂಗೈಗೆ ಮೆಹಂದಿ ಹಚ್ಚಿದ, ಮೊಹರಂನ ಚೊಂಗೆ, ರಮಜಾನಿನ ಸೇವೈಂಯಾ ಉಣಿಸಿದ  ನನ್ನೂರಿನ ನೆರೆಹೊರೆಯ ಬೂಬುಗಳಾಗಲಿ, ಟಾಂಗೆ ಸವಾರಿ ಮಾಡಿಸುತ್ತಿದ್ದ ಕಾಸೀಂಗಾಗಲಿ, ಇಮ್ರಾನ್, ಮಜನೂ ಮತ್ಯಾರಿಗಾಗಲೀ ಯಾರಿಗೂ ಈ ರಾಜಕೀಯ ಹುನ್ನಾರುಗಳು, ಗಲಭೆಗಳು ಬೇಕಿರುವುದಿಲ್ಲ. ನಾವು ಕಟ್ಟಿಕೊಂಡಿರುವ ಸಮಾಜದ ಪರಿಧಿಯೊಳಗೆ ನೆಮ್ಮದಿಯ ಗಾಳಿಯಾಡುವ ಬದುಕು ಬೇಕು ಅಷ್ಟೇ! ದೊಂಬಿ ದಾಳಿ, ಯುದ್ಧಗಳನ್ನು ಜನ ಬಯಸುದಿಲ್ಲ. ರಾಜಕಾರಣ, ಧರ್ಮಕಾರಣ ನಡೆಸುತ್ತವಷ್ಟೇ.    

ಇದನ್ನೂ ಓದಿ ದಿಲ್ಲಿ ಮಾತು | ಭಯವನ್ನಾಳುವ ದೇಶದಲ್ಲಿ ವಿರೋಧವೇ ಅಪರಾಧವಾದಾಗ…

ಬೆಳಗಿನ ನಮಾಜು ಮುಗಿಸಿ ಬಸ್ಸಿಗೆ ಓಡುವ, ಕುರಾನ್ ಮತ್ತು ಇಸ್ಲಾಮಿನ ಶರೀಯತ್ ಬಗ್ಗೆ ನನ್ನೊಂದಿಗೆ ಚರ್ಚಿಸುವ  ನನ್ನದೇ ಕೇಂದ್ರೀಯ ವಿಹಾರಿನ ಸೀಮಾ ಖಾನ್ ಆಗಲಿ, ಜೈನ ಅಸ್ಮಿತೆಯ ಮಹಾವೀರ ಖಾನ್, ಅರೇಬಿಕ್ ಕಲಿಯುವ ಪೂಜಾ, ಪ್ರಾಕೃತ ಕಲಿಯಬೇಕೆನ್ನುವ ನೂರ್ ಎಲ್ಲರೂ ನನಗೆ ಭಾಷೆ – ಬದುಕು – ಜನಾಂಗದ  ಹರವನ್ನು ಕಲಿಸುತ್ತಾರೆ. ಹಿಂದೂ ಮುಸ್ಲಿಮ್ ಕೋಮುವಾದ, ಪರಸ್ಪರ ದ್ವೇಷ, ಗಲಭೆ, ಹಿಂಸೆಯನ್ನು ಪೋಷಿಸುವ ರಾಜಕೀಯ ವಿದ್ಯಮಾನಗಳನ್ನು ಓದಿದಾಗ, ಕೇಳಿದಾಗ ಮನಸ್ಸು ವಿಚಿತ್ರ ಸಂಕಟಕ್ಕೊಳಗಾಗುತ್ತದೆ.

ಬಹುತ್ವ ಭಾರತ ಒಂದು ರಂಗೋಲಿಯಿದ್ದಂತೆ. ಅದರಲ್ಲಿ ಅನೇಕ ಬಣ್ಣಗಳ ಜಾತಿ ಮತ ಸಂಪ್ರದಾಯಗಳಿವೆ. ಒಂದು ಎಳೆ ಕೆಟ್ಟರೂ ಅಳಿಸಿಹೋದರೂ ರಂಗೋಲಿ ಹಾಳಾಗುತ್ತದೆ. ಬಂದೂಕಿನ ನಳಿಗೆಯಲ್ಲಿ ಗುಬ್ಬಿ ಗೂಡು ಕಟ್ಟಲಿ ಎಂದಿದ್ದರು ಕವಿ ರಂಜಾನ್ ದರ್ಗಾ. ಕ್ರೌರ್ಯ, ಅಮಾನವೀಯತೆ. ಅನ್ಯಾಯಗಳೇ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ ಮಾನವೀಯತೆಯೇ ಮಂತ್ರವಾಗಲಿ, ಬಹುತ್ವದ ಸುಂದರ ರಂಗೋಲಿಯನ್ನು ಹಾಳು ಮಾಡಲು ಯಾರೂ ಪ್ರಯತ್ನಿಸದಿರಲಿ ಎಂಬುದೇ ಇಂದಿನ ಆಶಯ!

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...