ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ ಒಂದು ವಿಚಿತ್ರ ವಿರೋಧಾಭಾಸ ಇದೆ. ಒಂದೆಡೆ ಜಗತ್ತು ಮಹಿಳಾ ದಿನವನ್ನು ಆಚರಿಸುತ್ತದೆ. ಮತ್ತೊಂದೆಡೆ ಅದೇ ಜಗತ್ತು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಹಿಂಸೆಯನ್ನು ತಡೆಯಲು ವಿಫಲವಾಗುತ್ತದೆ. ಮಹಿಳೆಯರ ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ವಿರೋಧಿಸುವ ಯಾವ ದೊಡ್ಡ ಚಳವಳಿಗಳನ್ನೂ ಇತಿಹಾಸದಲ್ಲಿ ನಾವು ಕಾಣುವುದಿಲ್ಲ.
ಪ್ರತಿ ವರ್ಷ ಮಾರ್ಚ್ 8 ಬಂದಾಗ ಈ ಯಾಂತ್ರಿಕ ಜಗತ್ತು ಅಚ್ಚರಿಯೆಂಬಂತೆ ಮಹಿಳೆಯರನ್ನು ನೆನಪಿಸಿಕೊಳ್ಳುತ್ತದೆ. ಹೂಗುಚ್ಛಗಳನ್ನು ನೀಡಲಾಗುತ್ತವೆ. ಶುಭಾಶಯ ಸಂದೇಶಗಳು ವಾಟ್ಸಪ್, ಎಸ್ಸೆಮ್ಮೆಸ್ಸುಗಳಲ್ಲಿ ಹರಡುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ “ಮಹಿಳಾ ಸಬಲೀಕರಣ”ದ ಘೋಷಣೆಗಳು ಕೇಳಿಸುತ್ತವೆ. ಕಚೇರಿಗಳಲ್ಲಿ ಈ ಒಂದು ದಿನ ಕಳೆದರಾಯ್ತು ಪುನಃ ಅದೇ ಶೋಷಣೆ, ಅಸಮಾನತೆ, ಅದೇ ಲೈಂಗಿಕ ಕಿರುಕುಳ ಮುಂದುವರಿಯುತ್ತವೆ. ಕಚೇರಿಗಳಲ್ಲಷ್ಟೇ ಅಲ್ಲ ಕೆಲವು ಕುಟುಂಬಗಳಲ್ಲೂ ಕೆಲವು ಮನೆಗಳಲ್ಲಿನ ಬಹಳ ಪ್ರಗತಿಪರ ಗಂಡಸರೂ ಮನೆಯಲ್ಲಿನ ಮಹಿಳೆಯರಿಗೆ “ಶುಭಾಶಯ” ಹೇಳಿದರೆಲ್ಲಿ ತಮ್ಮ ಕಿರೀಟ ಬಿದ್ದುಹೋಗಬಹುದೋ ಎಂದು ಜಾಣ ಮೌನವಹಿಸುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ಅದಕ್ಕೇನೂ ವಿಶೇಷ ಅರ್ಥವಿರುವುದಿಲ್ಲ.
ಅದೇ ಅಡುಗೆಮನೆ, ಅವೇ ಮಕ್ಕಳ ಲಾಲನೆ ಪಾಲನೆ, ಅದೇ ಜವಾಬ್ದಾರಿಗಳು, ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಕೊಟ್ಟ ಮನೆಗೆ ಸೊಸೆಯಾಗಿ ಹೀಗೆ ನಿರಂತರವಾಗಿ ಸಾಯುವ ತನಕ ದುಡಿಯುವುದೇ ಅವಳ ಕಾಯಕ. ಅದು ಬೆಲೆಗಟ್ಟದ ದುಡಿಮೆ. ತಾವೇ ಎಲ್ಲ ಬಲ್ಲವರು ಎಂಬ ರೀತಿ ’ಮೀಸೆ ತಿರುವಿ’ ನಡೆಯುವ ಗಂಡಸರಿಂದ ಬೈಸಿಕೊಳ್ಳು, ಅವಮಾನಿಸಿಕೊಳ್ಳು, ಟೀಕೆಗೆ ಗುರಿಯಾಗು… ಹೀಗೆ ಶೋಷಣೆಯ ನಾನಾ ರೂಪಗಳು ಬದಲಾಗದೇ ಮುಂದುವರಿದುಕೊಂಡು ಬರುತ್ತವೆ. ಇದು ಎಲ್ಲಾ ವರ್ಗದ, ಎಲ್ಲಾ ಸ್ತರದ ಮಹಿಳೆಯರಿಗೂ ಅನ್ವಯಿಸುವಂತಹದ್ದು. ಮಹಿಳೆ ಆರ್ಥಿಕವಾಗಿ ಸಬಲಳಾಗಿದ್ದರಂತೂ ಮುಗೀತು. ಮನೆಯಲ್ಲಿನ ಗಂಡಸರು ಹಣದ ವಹಿವಾಟಿನಲ್ಲಿ, ಚರ್ಚೆಯನ್ನು ಆಕೆಯನ್ನು ಹೊರಗಿಡುವವರಿದ್ದಾರೆ. ಯಾಕೆಂದರೆ, ಅದು ಅವರಿಗೆ ಸೇರಿದ ಕ್ಷೇತ್ರ. ಅಲ್ಲಿ ಅವಳಿಗೆ ಸ್ಥಾನವಿಲ್ಲ. ಹೆಂಡತಿಯ ಸಂಬಳವನ್ನು ಇಸಿದುಕೊಂಡು ಮನೆಗೆ ಸಾಮಾನು ತಂದುಹಾಕುತ್ತೇವೆ ಎನ್ನುವ ಗಂಡಸರು ತಮ್ಮ ಸಂಬಳದ ವಿವರವನ್ನೂ ಹೆಂಡತಿಯಿಂದ ಬಚ್ಚಿಡುವವರಿದ್ದಾರೆ. ಒಟ್ಟಿನಲ್ಲಿ ಆಕೆ ಕೈಯೊಡ್ಡಿ ಅವನ ಮುಂದೆ ನಿಂತುಕೊಳ್ಳಬೇಕು. ಆತ ಕೈಯೆತ್ತಿ ಕೊಟ್ಟು ಮೀಸೆ ತಿರುವಬೇಕು. ಇದರಲ್ಲಿ ಈ ಕೆಟಗರಿಗೆ ಸೇರದ ಮಹಿಳೆಯರೂ, ಪುರುಷರೂ ಇರಬಹುದು, ಕ್ಷಮಿಸಿ.
ಆದರೆ, ಇದೆಲ್ಲದರ ಮಧ್ಯೆ ಮತ್ತೆ ಮತ್ತೆ ಒಂದು ಕಟುವಾದ ವಿಚಾರವೊಂದು ಮೌನವಾಗಿ ನಿಂತಿರುತ್ತದೆ. ಈ ಲೋಕದಲ್ಲಿ ಯುದ್ಧದ ಹೆಸರಿನಲ್ಲಿ ಉಕ್ರೇನ್, ಇರಾನ್, ಬೋಸ್ನಿಯಾ, ಗಾಜಾ, ಹಮಾಸ್ ಹೀಗೆ ಲಕ್ಷಾಂತರ ಮಹಿಳೆಯರು ಮಕ್ಕಳು ಮಣ್ಣಾಗಿ ಹೋಗಿರುವಾಗ, ಜಾಫ್ರೀ ಎಫ್ಸ್ಟೀನ್ ನಂತಹ ಲೈಂಗಿಕ ಅಪರಾಧಿ, ಕೋಟ್ಯಾಧೀಶನ ವಿಕೃತಿಗೆ ಬಲಿಯಾದ ಸಾವಿರಾರು ಮಕ್ಕಳು, ಕಿಶೋರಿಯರು, ಯುವತಿಯರು ಬಲಿಯಾಗಿರುವಾಗ, ನಮ್ಮ ದೇಶದಲ್ಲಿಯೇ ದಿನಕ್ಕೊಂದು ಹೊಸ ಹೊಸ ಎದೆ ನಡುಗಿಸುವ ಲೈಂಗಿಕ ಕಿರುಕುಳ, ಕೊಲೆ, ಹಿಂಸೆ, ಭೀಭತ್ಸ ಘಟನೆಗಳ ವಿವರ ಹೊರಬರುತ್ತಿರುವ ಸಮಯದಲ್ಲಿ, ಈ ಭೂಮಿಯ ಮೇಲೆ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿರದ ಜಗತ್ತಿನಲ್ಲಿ ಈ ಮಹಿಳಾ ದಿನಕ್ಕೆ ಏನಾದರೂ ಅರ್ಥವಿದೆಯೇ?
ಈ ಪ್ರಶ್ನೆ ಕೇವಲ ಒಂದು ಪ್ರಶ್ನೆಯಲ್ಲ. ನಮ್ಮ ಸಮಾಜ ಮಾಡಿಕೊಳ್ಳಬಹುದಾದ ನೈತಿಕ ಆತ್ಮಾವಲೋಕನವಾಗಿದೆ. ಕೇವಲ ಒಂದು ದಿನದ ಆಚರಣೆ, ಸಮಾನತೆಯ ಭಾಷಣಗಳು ಹೂಗುಚ್ಛಗಳ ಕೊಡಕೊಳ್ಳುವಿಕೆಯ ಹೊಳಪಿನಲ್ಲಿ ಮಹಿಳೆಯರ ಹೋರಾಟವನ್ನು ಮರೆಯುವಂತಿಲ್ಲ. ಅಂತಾರಾಷ್ಟ್ರೀಯ ಮಹಿಳಾ ದಿನದ ಮೂಲ ಇತಿಹಾಸ ಇಂತಹ ಸಂಭ್ರಮಾಚರಣೆಗಳಿಂದ ಹುಟ್ಟಿಲ್ಲ. ಅದು ಕಾರ್ಖಾನೆಗಳ ಹೊಗೆ ಮತ್ತು ಬೆವರಿನ ನಡುವೆ ಹುಟ್ಟಿದೆ. ಕಡಿಮೆ ವೇತನ, ದೀರ್ಘ ಕೆಲಸದ ಗಂಟೆಗಳು, ಶೋಷಣೆ, ಸಮಾನತೆ ಮತ್ತು ಮಾನವೀಯ ಗೌರವಕ್ಕಾಗಿ ಹೋರಾಡಿದ ಕಾರ್ಮಿಕ ಮಹಿಳೆಯರ ಹೋರಾಟದ ಫಲವಾಗಿ ಈ ದಿನ ಹುಟ್ಟಿತು. ಅಂದರೆ ಮಹಿಳಾ ದಿನವು ಮೂಲತಃ ಸಂಘರ್ಷದ ದಿನ. ಆದರೆ ಕಾಲಕ್ರಮೇಣ ಸಮಾಜ ಈ ದಿನದ ರಾಜಕೀಯ ಅರ್ಥವನ್ನು ಕಿತ್ತುಹಾಕಿ ಅದನ್ನು ಒಂದು ಸಾಂಕೇತಿಕ ಹಬ್ಬವಾಗಿ ಪರಿವರ್ತಿಸಿತು. ಆದರೆ ಇಂದಿನ ಜಗತ್ತು ಈ ದಿನದ “ಹೋರಾಟದ ಕಿಡಿಯನ್ನು” ನಿಧಾನವಾಗಿ ವ್ಯವಸ್ಥಿತವಾಗಿ ಸುಂದರವಾದ ಆಕರ್ಷಕವಾದ ಮಾಲ್ ಸಂಸ್ಕೃತಿ, ನವ ನಾಗರಿಕತೆಯ ಹೂಗುಚ್ಛಗಳು ಹಾಗೂ ಶುಭಾಶಯಗಳ ಅಡಿಯಲ್ಲಿ ಹೂತುಹಾಕಿವೆ.

“ಮಹಿಳೆಯ ದೇಹವೆಂಬುದು ಪಿತೃಪ್ರಭುತ್ವದ ಯುದ್ಧಭೂಮಿ” ಎಂಬ ಸ್ತ್ರೀವಾದಿ ಚಿಂತನೆ ನಮಗೆ ಒಂದು ಕಟು ಸತ್ಯವನ್ನು ಮರೆಯದಂತೆ ಈ ಜಗತ್ತು ನಡೆದುಕೊಳ್ಳುತ್ತಿದೆ. ಮಹಿಳೆಯರ ಮೇಲೆ ನಡೆಯುವ ಹಿಂಸೆ ಕೇವಲ ವೈಯಕ್ತಿಕ ಅಪರಾಧಗಳ ಸರಣಿಯಲ್ಲ. ಅದು ಒಂದು ಸಾಮಾಜಿಕ ವ್ಯವಸ್ಥೆಯ ಫಲಿತಾಂಶ. ಈ ವ್ಯವಸ್ಥೆಯನ್ನು ನಾವು ಪುರುಷಾಧಿಪತ್ಯ, ಪಿತೃಸತ್ತೆ ಅಥವಾ ಪಿತೃಪ್ರಧಾನ ವ್ಯವಸ್ಥೆ ಎಂದು ಕರೆಯುತ್ತೇವೆ. ಮಹಿಳೆಯರನ್ನು ವಸ್ತುವಿನಂತೆ ನೋಡುವುದು ಸಾಮಾನ್ಯವಾಗುತ್ತದೆ. ಈ ಕಾರಣದಿಂದಲೇ ಅನೇಕ ಬಾರಿ ಅಪರಾಧಿಗಳು ದಂಡನೆಗೆ ಒಳಗಾಗುವುದಿಲ್ಲ. ಹಣ, ಅಧಿಕಾರ ಮತ್ತು ರಾಜಕೀಯ ಸಂಪರ್ಕಗಳು ಅಪರಾಧಿಗಳ ಸುತ್ತ ರಕ್ಷಣೆಯ ಗೋಡೆಯಾಗಿ ನಿಂತುಕೊಳ್ಳುತ್ತವೆ. ಸಮಾಜ ಕೆಲವೊಮ್ಮೆ ಅಪರಾಧಿಯನ್ನು ಖಂಡಿಸುತ್ತದೆ; ಆದರೆ ಅಪರಾಧವನ್ನು ಹುಟ್ಟುಹಾಕುವ ವ್ಯವಸ್ಥೆಯನ್ನು ಪ್ರಶ್ನಿಸಲು ಹಿಂದೇಟು ಹಾಕುತ್ತದೆ.
ಫ್ರೆಂಚ್ ತತ್ವಜ್ಞಾನಿ ಸಿಮೋನ್ ದ ಬುವಾರ್ ಒಂದು ಪ್ರಸಿದ್ಧ ವಾಕ್ಯದಲ್ಲಿ ಹೇಳುತ್ತಾರೆ: “ಹೆಣ್ಣು ಮಹಿಳೆ ಆಗಿ ಹುಟ್ಟುವುದಿಲ್ಲ; ಸಮಾಜವೇ ಅವಳನ್ನು ಮಹಿಳೆಯನ್ನಾಗಿ ಮಾಡುತ್ತದೆ” ಅಂದರೆ ಮಹಿಳೆಯ ಸ್ಥಾನವನ್ನು ಸಮಾಜವೇ ರೂಪಿಸುತ್ತದೆ. ಅದೇ ಸಮಾಜ ಅವಳ ಸ್ವಾತಂತ್ರ್ಯವನ್ನು ಸೀಮಿತಗೊಳಿಸುತ್ತದೆ. ಈ ವಿಧವಾದ ಸಮಾಜ ರಚನೆಯಿಂದಾಗಿಯೇ ಮಹಿಳೆಯ ದೇಹ ಪುರುಷಾಧಿಪತ್ಯದ ನಿಯಂತ್ರಣದ ಸ್ಥಳವಾಗುತ್ತದೆ. ಯುದ್ಧದ ಸಂದರ್ಭದಲ್ಲಂತೂ ಈ ನಿಯಂತ್ರಣ ಮತ್ತು ಕ್ರೂರತೆ ಇನ್ನಷ್ಟು ಢಾಳಾಗುತ್ತದೆ.
ಇತಿಹಾಸವನ್ನು ತೆರೆದು ನೋಡಿದರೆ ಯುದ್ಧಗಳಲ್ಲಿ ಸಾವನ್ನಪ್ಪುವವರಲ್ಲಿ ಬಹುಪಾಲು ಅಲ್ಲಿನ ನಾಗರಿಕರು. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು. ಶಾಲೆಗಳ ಮೇಲೆ ಬಾಂಬ್ ದಾಳಿ. ಆಸ್ಪತ್ರೆಗಳ ಮೇಲೆ ದಾಳಿ. ವಸತಿ ಪ್ರದೇಶಗಳ ಮೇಲಿನ ಬಾಂಬ್ ದಾಳಿಗಳು, ಸ್ಥಳಾಂತರ, ಆಹಾರದ ಕೊರತೆ, ವೈದ್ಯಕೀಯ ಸೇವೆಗಳ ಅಭಾವ—ಇವೆಲ್ಲವೂ ಮಹಿಳೆಯರು ಮತ್ತು ಮಕ್ಕಳ ಬದುಕನ್ನು ನಾಶಮಾಡುತ್ತವೆ. ಅನೇಕ ಯುದ್ಧಗಳಲ್ಲಿ ಲೈಂಗಿಕ ಹಿಂಸೆಯನ್ನು ನೇರವಾಗಿ ಒಂದು ಯುದ್ಧತಂತ್ರದಂತೆ ಬಳಸಲಾಗಿದೆ. ಮಹಿಳೆಯರ ದೇಹವನ್ನು ಒಂದು ಸಮುದಾಯವನ್ನು ಅವಮಾನಿಸಲು ಅಥವಾ ಮುರಿಯಲು ಬಳಸಲಾಗಿದೆ. ಇವೆಲ್ಲವೂ ಯುದ್ಧದ ಪಾರ್ಶ್ವ ಪರಿಣಾಮವಲ್ಲ; ಅವು ಮಾನವೀಯತೆಯ ಮೇಲೆ ಬೀಳುವ ಸಂಘಟಿತ ದಾಳಿಗಳು.
ಸ್ತ್ರೀವಾದಿ ಕವಿ ಆಡ್ರಿ ಲಾರ್ಡ್ ಒಂದು ಎಚ್ಚರಿಕೆಯನ್ನು ನೀಡುತ್ತಾರೆ: “ನಿಮ್ಮ ಮೌನವು ನಿಮ್ಮನ್ನು ರಕ್ಷಿಸುವುದಿಲ್ಲ” ಮೌನವು ಹಿಂಸೆಯನ್ನು ನಿಲ್ಲಿಸುವುದಿಲ್ಲ. ಅದು ಅದನ್ನು ಇನ್ನಷ್ಟು ಬಲಪಡಿಸುತ್ತದೆ. ಆದರೆ, ಸತ್ಯವೆಂದರೆ ಮಹಿಳೆಯರು ದನಿ ಎತ್ತುತ್ತಿಲ್ಲವೆಂದಲ್ಲ. ಅವಳ ದನಿಯನ್ನು ಹತ್ತಿಕ್ಕಲಾಗುತ್ತದೆ. ಅವಳ ಪ್ರತಿರೋಧದ ದನಿಯನ್ನು, ಕೂಗನ್ನು “ಅವಳ ದುರಹಂಕಾರ, ಸೊಕ್ಕು, ಅಳುಬುರುಕಿಯರ ರೋಧನೆ” ಎಂದೇ ಹಗುರವಾಗಿ ವ್ಯಾಖ್ಯಾನಿಸುತ್ತಾ ಇನ್ನಷ್ಟು ಪ್ರಪಾತಕ್ಕೆ ನೂಕುವುದೇ ಗಂಡಾಳಿಕೆಯ ಸ್ವರೂಪವಾಗಿದೆ.
ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ ಒಂದು ವಿಚಿತ್ರ ವಿರೋಧಾಭಾಸ ಇದೆ. ಒಂದೆಡೆ ಜಗತ್ತು ಮಹಿಳಾ ದಿನವನ್ನು ಆಚರಿಸುತ್ತದೆ. ಮತ್ತೊಂದೆಡೆ ಅದೇ ಜಗತ್ತು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಹಿಂಸೆಯನ್ನು ತಡೆಯಲು ವಿಫಲವಾಗುತ್ತದೆ. ಮಹಿಳೆಯರ ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ವಿರೋಧಿಸುವ ಯಾವ ದೊಡ್ಡ ಚಳವಳಿಗಳನ್ನು ಇತಿಹಾಸದಲ್ಲಿ ನಾವು ಕಾಣುವುದಿಲ್ಲ. ಎಲ್ಲಾ ಕ್ಷೇತ್ರದಲ್ಲಿಯೂ ಇಂದು ಮಹಿಳೆ ಇದ್ದಾಳೆ ಆದರೆ ಇದ್ದೂ ಇಲ್ಲದಂತೆ. ತನ್ನ ಹಕ್ಕುಗಳಿಗಾಗಿ, ತನ್ನ ಮಕ್ಕಳು, ತನ್ನ ಮನೆ, ತನ್ನ ಗೌರವಕ್ಕಾಗಿ ತಾನೇ ಹೋರಾಡಬೇಕು. ಆಕೆಯ ಹೋರಾಟ ಏನಿದ್ದರೂ ಸಮಾನತೆಗಾಗಿ, ಆತ್ಮಗೌರವಕ್ಕಾಗಿ ಇದೆಯೇ ಹೊರತು ಪುರುಷರ ವಿರೋಧಿಯಾಗಿ ಅಲ್ಲ. ಇದೇ ರೀತಿ ಸಮಾನತೆಯಿಂದ ಅವಳ ಹೆಜ್ಜೆಯಲ್ಲಿ ಹೆಜ್ಜೆ ಹಾಕಬಲ್ಲ, ಗೌರವಿಸುವ ಅವಳ ಹಕ್ಕುಗಳಿಗಾಗಿ ದನಿ ಎತ್ತಬಲ್ಲ, ಹೋರಾಡಬಲ್ಲ ಹೆಂಗರುಳಿನ ಪುರುಷ ವರ್ಗವೂ ಇದೆ. ಮಾತಿನಲ್ಲಿ ಗೌರವ, ಸಮಾಜದ ಉನ್ನತ ಸ್ಥಾನಮಾನಗಳನ್ನು ಹೊಂದಿರುವ ಮಹಿಳೆಯರೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಅಸಮಾನತೆಯನ್ನು ಅನುಭವಿಸುತ್ತಿರುತ್ತಾರೆ. ವಾಸಿಸುವ ಮನೆಯೂ ಅವಳದಲ್ಲ, ತಾನೇ ಕೈಯ್ಯಾರೆ ಅಂದಗೊಳಿಸಿದ, ಪ್ರೀತಿ ವಾತ್ಸಲ್ಯವನ್ನು ತುಂಬಿದ ಮನೆಯಲ್ಲಿ ಅವಳದೆಂಬುವ ಒಂದು, ಖಾಸಗಿ ಜಾಗವೂ ಇರುವುದಿಲ್ಲ. ಕುಟುಂಬದ ಏಳಿಗೆಗಾಗಿ ಹಗಲಿರುಳೂ ಜೀವ ತೇಯುವ ಮಹಿಳೆ ಬಾಳುತ್ತಿರುತ್ತಾಳೆ. ಆಕೆ ಇರುತ್ತಾಳಷ್ಟೇ… ಇದ್ದೂ ಇಲ್ಲದಂತೆ! ಮಹಿಳೆಯರನ್ನು ಗೌರವಿಸುವುದಾಗಿ ಘೋಷಿಸುವ ಸಮಾಜವೇ, ಅವರ ಸುರಕ್ಷತೆ ಮತ್ತು ಸ್ವಾತಂತ್ರ್ಯವನ್ನು ಖಚಿತಪಡಿಸಲು ವಿಫಲವಾಗುತ್ತದೆ.
ಈ ವಿರೋಧಾಭಾಸವನ್ನು ಕವಿ ಕಿಶ್ವರ್ ನಾಹೀದ್ ತಮ್ಮ ಪ್ರಸಿದ್ಧ ಕವಿತೆಯಲ್ಲಿ ಪ್ರಶ್ನಿಸುತ್ತಾರೆ:
“ನಾವು ಪಾಪಿಣಿಯರು ಅಲ್ಲ; ಆದರೆ ನಮ್ಮನ್ನು ಪಾಪಿಣಿಯರೆಂದು ಘೋಷಿಸುವ ಸಮಾಜದ ಮುಂದೆ ನಾವು ನಿಲ್ಲುತ್ತೇವೆ”. ಈ ಸಾಲು ಮಹಿಳೆಯರ ಹೋರಾಟದ ತೀವ್ರತೆಯನ್ನು ಹೇಳುತ್ತದೆ.
ಭಾರತದ ಸಂದರ್ಭದಲ್ಲಿ ಇಲ್ಲಿನ ಇನ್ನೊಂದು ಕಟು ವಾಸ್ತವವೆಂದರೆ ಜಾತಿವ್ಯವಸ್ಥೆ. ಅದು ಮಹಿಳೆಯರನ್ನು ಎರಡನೇ ದರ್ಜೆಯ ನಾಗರಿಕಳನ್ನಾಗಿಸಿ ಕಟ್ಟ ಕಡೆಯ ಅಂಚಿಗೆ ತಳ್ಳಿದೆ. ಮೇಲ್ವರ್ಗದವರು ಯಾರು ಬೇಕಾದರೂ ಆಕೆಯನ್ನು ಉಪಭೋಗಿಸಬಹುದು. ಅದರಿಂದ ಅವರ ಜಾತಿ ಭ್ರಷ್ಟವಾಗುವುದಿಲ್ಲ. ಭಾರತದಲ್ಲಿ ಮಹಿಳೆಯರ ಪ್ರಶ್ನೆಯನ್ನು ಜಾತಿ ವ್ಯವಸ್ಥೆಯಿಂದ ಬೇರ್ಪಡಿಸಿ ಹಾಗೂ ದೇಹ ರಾಜಕಾರಣದಿಂದ ಬೇರ್ಪಡಿಸಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಬಹಳ ಹಿಂದೆಯೇ ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು.
“ಒಂದು ಸಮಾಜದ ಪ್ರಗತಿಯನ್ನು ಅದರ ಮಹಿಳೆಯರ ಪ್ರಗತಿಯಿಂದಲೇ ಅಳೆಯಬೇಕು” ಎನ್ನುತ್ತಿದ್ದರು. ಆದರೆ, ಜಾತಿ ವ್ಯವಸ್ಥೆಯು ತನ್ನನ್ನು ಉಳಿಸಿಕೊಳ್ಳಲು ಮಹಿಳೆಯರ ದೇಹವನ್ನು ನಿಯಂತ್ರಿಸತೊಡಗಿತು. ಮದುವೆಯ ನಿಯಮಗಳು, ಶುದ್ಧತೆಯ ಕಲ್ಪನೆ, ಕುಟುಂಬ ಗೌರವ—ಇವೆಲ್ಲವೂ ಮಹಿಳೆಯ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಸಾಧನಗಳಾಗಿವೆ. ಈ ಹಿನ್ನೆಲೆಯಲ್ಲಿ ದಲಿತ ಮಹಿಳೆಯರು ಅನುಭವಿಸುವ ಹಿಂಸೆ ಜಾತಿ ಮತ್ತು ಲಿಂಗತ್ವದ ಕ್ರೌರ್ಯವನ್ನು ತೋರಿಸುತ್ತದೆ. ಅಂದರೆ ಮಹಿಳೆಯರ ಮುಕ್ತಿ ಬಿಡುಗಡೆಯ ಕುರಿತು ಮಾತನಾಡಬೇಕಾದರೆ ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವುದು ಅನಿವಾರ್ಯವಾಗುತ್ತದೆ.
ಈ ಎಲ್ಲಾ ಪ್ರಶ್ನೆಗಳ ಜೊತೆ ಜೊತೆಗೆ ನಾವು ಎತ್ತಬೇಕಾದ ಇತರ ಪ್ರಮುಖ ಪ್ರಶ್ನೆಗಳೆಂದರೆ –
- ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತರಾಗಲು ಸಮಾಜ ಏನು ಮಾಡುತ್ತಿದೆ?
- ಯುದ್ಧಗಳಲ್ಲಿ ನಾಗರಿಕರನ್ನು ವಿಶೇಷವಾಗಿ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಲು ಜಗತ್ತು ಏಕೆ ವಿಫಲವಾಗುತ್ತದೆ ?
- ಅಧಿಕಾರ ಮತ್ತು ಹಣದ ಪ್ರಾಬಲ್ಯ ಹೊಂದಿದ ಅಪರಾಧಿಗಳನ್ನು ನ್ಯಾಯದ ಮುಂದೆ ತರಲು ವ್ಯವಸ್ಥೆ ಏಕೆ ದುರ್ಬಲವಾಗಿದೆ?
ಈ ಎಲ್ಲಾ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು ಆರೋಗ್ಯಕರ ಚರ್ಚೆಗಳು ನಡೆದಾಗ ಮಾತ್ರ ಮಹಿಳಾ ದಿನ ತನ್ನ ಅರ್ಥವನ್ನು ಪಡೆಯುತ್ತದೆ. ಕವಿ ಮಾಯಾ ಏಂಜಲೋ ತಮ್ಮ ಪ್ರಸಿದ್ಧ ಕವಿತೆಯಲ್ಲಿ ಬರೆಯುತ್ತಾರೆ:
“ನೀವು ನನ್ನನ್ನು ಕಟು ಮಾತುಗಳಿಂದ ಇರಿಯಬಹುದು, ತಿರುಚಿದ ಸುಳ್ಳುಗಳಿಂದ ಮಣ್ಣಂತೆ ಹೊಸಕಿ ತುಳಿಯಬಹುದು ನೀ ನನ್ನ, ಆದರೂ ಧೂಳ ಕಣವಾಗಿಯಾದರೂ ಮೇಲೇಳುತ್ತೇನೆ ನಾನು“- ಇದು ಶತಮಾನಗಳ ಹಿಂಸೆಯ ನಡುವೆಯೂ ಮಹಿಳೆಯರು ಮತ್ತೆ ಎದ್ದು ನಿಲ್ಲುವ ಇತಿಹಾಸ. ನಾವೆಲ್ಲ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ನಾವೆಲ್ಲಿದ್ದವೆಂದು ನಮ್ಮನ್ನೇ ಕೇಳಿಕೊಳ್ಳಬೇಕಿದೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




