ಇಂದಿಗೆ (ಅ.24) ನವರಾತ್ರಿ ಮುಕ್ತಾಯಗೊಳ್ಳಲಿದೆ. ಇಡೀ ನವರಾತ್ರಿ – ಶಕ್ತಿದೇವತೆ ಎನಿಸಿಕೊಂಡ ಚಾಮುಂಡಿಯನ್ನು ನಾನಾ ಬಗೆಯಲ್ಲಿ ಆರಾಧಿಸುವ ಭಕ್ತಿ ಸಂಭ್ರಮ. ಈ ಹಿನ್ನೆಲೆಯಲ್ಲಿ, ಚಾಮುಂಡಿ ಮತ್ತು ನಂಜನಗೂಡಿನ ನಂಜುಂಡೇಶ್ವರನ ಜನಪದ ಪ್ರೇಮಕತೆ ಇಲ್ಲುಂಟು…
(ಆಡಿಯೊ ಸಂಪೂರ್ಣ ಸಿಗದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ ಕೇಳಬಹುದು: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ತಿಂಗಾ ತಿಂಗಳಿಗು ಚಂದ ನಂಜನಗೂಡು
ಗಂಧ ತುಂಬೈತೆ ಗುಡಿಗೆಲ್ಲ-
ಗಂಧ ತುಂಬೈತೆ ಗುಡಿಗೆಲ್ಲ ನಂಜುಂಡು-
ಶರಣ ನಂಜುಂಡು ನೆಲಗೊಂಡು-
ಜಂಗಮ ನಂಜುಂಡು ನೆಲಗೊಂಡು….
ಆವಾಗಲೀಗ,
ಆ
ಬೆಳದಿಂಗಳ ಬೆಟ್ಟದಲ್ಲಿ
ಬೆಳ್ಳಕ್ಕಿ ಬೆದರಾವೆ, ಹಾಲಕ್ಕಿ ಹಾಡುತಾವೆ, ಬೆಟ್ಟದ ಮ್ಯಾಗೆ ಕಟ್ಟಾಣಿ ಚಾಮಾಯಿ ಪಡುಗಲ ಕೋಣೆಯೊಳಗೆ ಅಪರಂಜಿ ಮಂಡೇಯ ವದರಿ ಕೂತವಳೆ.
ಆ
ಆಗ, ನೀರಿಲ್ಲದ ತಳದಲ್ಲಿ ಬೆಳೆದ ನೀರಂಜಿ ವನದ ಮ್ಯಾಗೆ ಕರಗುವ ಮೇಘಗಳು: ಧರೆಯೀಗ ಹಸಿರು ನೆಲಹಾಸು!
ಆ
ಅಲ್ಲಿ, ಇಬ್ಬನಿ ಹನಿಗಳು, ನೀರಂಜಿಯ ಚೂಪಾದ ಎಲೆಮೊನೆಗಳಿಂದ ತೊಟ್ಟಿಕ್ಕುತ್ತಿರಲು, ನೆಲದಿಂದ ಕಡು ಮೋಹವೀಗ ಮೇಲೆದ್ದು, ಬಯಲಲ್ಲಿ ಬರೆತು, ಸುಖಿಸುವ ಸಂಭ್ರಮದ ತಂಗಾಳಿಯಾಗಿ ದೇವಿಯ ಮೈಯ ಮುತ್ತಿವೆ.
ಈ
ಪರಿಯ ಪ್ರೇಮ ಸುಮದಲಿ ಘಮಿಸುತ ಸುಡು-
ಸುಡು ವಿರಹದ ಬೇಗೆಯಲಿ ಬೆಂದು ಹೋದ- ಚಾಮ ಚೆಲುವೆಯು, ಪ್ರೇಮ ಮಜ್ಜನ ಬಯಸುತಿರೆ…
ಆ
ಆವಾಗಲೀಗ, ಕೆನ್ನೆದಾವರೆಗಳನು ನಯನಗಳವರೆವಿಗೂ ಸುಕೋಮಲ ಕಮಲದಳಗಳಿಂದ ಮುಚ್ಚುತ್ತಾ, ಯಾರನ್ನಾದರೂ ನೆನೆಯುತ್ತಿದ್ದಾಳೆ ಅಂದರೆ…
‘ಚಿಕ್ಕ ಪ್ರಾಯದವನ, ಹೆಚ್ಚುಳ್ಳ ಪ್ರೇಮದವನ, ನಂಜನಗೂಡಿನ ನಡುಗಾಡ ನಂಜುಂಡನ’ ತಂದನ ತಾನನ… ತಂದನ ತಾನನ ತಂದನ ತಂದೇನಾನ…
ಈ
ಈವಾಗಲೀಗ
ಇನ್ನೆರೆಡು ದಿನದಲ್ಲಿ ಬರುತ್ತೀನಿ ಅಂತ ಹುಣ್ಣಿಮೆ ಜಾತ್ರೆಗೆ ಹೋದಂವ ತಿಂಗಳಾದ್ರು ಬಂದಿಲ್ಲ. ಏನಾಯ್ತೋ ಎಂಥಾಯ್ತೋ ಕಾಣೆನಲ್ಲ ಎಂದು ದುಗುಡ ಮಾಡುತ್ತ… ತನ್ನ ತಂಗಿ ಉತ್ತನಳ್ಳಿ ಉರುಕಾತಿಯ ಪ್ರೇಮದಲ್ಲಿ ಕೂಗುತ್ತಾಳೆ.
ಅಕ್ಕ ಕೂಗಿದ ಕೂಗ ಚಿಕ್ಕವಳು ಕೇಳವಳೆ. ಯಾಕ ಇವತ್ತು ಅಕ್ಕ ಚಾಮುಂಡಿ ಎಂದೂ ಇಲ್ದಂಗೆ ಈಪಾಟಿ ಕೂಗ್ತಾ ಅವ್ಳಲ್ಲ. ಒಂದ್ ಕುರಿ ಕೂದಾಗ ಕರಿಲಿಲ, ಮರಿ ಕೂದಾಗ ಕರಿಲಿಲ, ಕೋಳಿ ಕೂದಾಗ ಕರಿಲಿಲ್ಲ, ಒಂದ್ ಹೆಚ್ಗ ಮಾಡ್ದಾಗ ಕರಿಲಿಲ, ಹಬ್ಬ ಮಾಡ್ದಾಗ ಕರಿಲಿಲ್ಲ. ಇವತ್ತು ಇಷ್ಟೊಂದು ಆತ್ರುವಾಗಿ ಯಾಕಾದರೂ ಕೂಗುತವಳೆ ಎಂದೆನುತ ಚಿಕ್ಕವಳು ಉರುಕಾತಿ ಬರಬರನೆ ಬೆಟ್ಟ ಹತ್ತಿ ಬಂದವಳೆ.
ಬಂದುದೆ, ಅಕ್ಕ ಚಾಮುಂಡಿ ತಾನು ಕೂಗಿದ ಕೂಗಿನ ವರ್ತಮಾನ ತಿಳಿವೋಳ್ದು. ನೀನು ಈ ನಡು ರಾತ್ರಿಯಲಿ ಕೂಗಲು ಕಾರಣವಾದರೂ ಏನು ಎನ್ನಲಾಗಿ…
ಒಳರೋಗದ ಗಂಡ, ಗರಳಪುರಿ ವಾಸ, ಹುಣ್ಣಿಮೆ ಜಾತ್ರೆಗೆ ಹೋಗಿದ್ ಬತ್ತಿನಿ ಅಂತ ಹೋದಂತಹ ನಿಮ್ಮ ಭಾವ ನಂಜುಂಡ ಇನ್ನೂ ಬಂದಿಲ್ಲ. ಹೋಗಿ ಕೂಗಿ ಬಾರವ್ವ ನಿಮ್ಮ ಭಾವ ಕಪನಯ್ಯ ನಂಜುಂಡು ಲಿಂಗನ- ಎಂದು ನಿವೇದಿಸಲಾಗಿ…
ಅಕ್ಕ ಇದೇನ್ ಇಂಥಾ ಮಾತ್ ಹೇಳ್ತಿದಿಯ? ಭಾವ ಅಂದರೆ ಏನು? ನಾದನಿ ಅಂದರೆ ಏನು? ನಂಜನಗೂಡಲ್ಲಿ ಇರುವ ನಂಜುಂಡುಲಿಂಗಯ್ಯನವರು, ಅವರೊಂದು ಜಾತಿಯವರು, ನಾವೊಂದು ಜಾತಿಯವರು, ಲಿಂಗ ಕಟ್ದವರು ಅವರು, ಜಂಗ ಧರಸವರು ಅವರು, ಶುದ್ದ ಶಿವಭಕ್ತರು ಅವರು, ನಾವು ನೋಡುದ್ರೆ ಅಕ್ಕ ಕೋಣ ಕುರಿಯನ್ನೆ ತಿನ್ನ ಕೆಟ್ಟ ರಕ್ಕಸರು ನಾವು…
ತಂದನ ತಾನನ ತಂದನ್ನ ತಾನನ ತಂದನ ತಂದೆನಾನ….
ಅವನಂಗೆ ಭಾವನಾದ ನಾನೆಂಗೆ ನಾದನಿಯಾದೆ ತಂದನ ತಾನನ…
ಈವಾಗಲೀಗ,
ಮದುವೆ ಆದದ ನಾ ಕಾಣೆ, ಕುಲದವರು ಕೂಡಿದದ ನಾ ಕಾಣೆ, ಮತದವರು ಸೇರಿದ್ದ ನಾ ಕಾಣೆ, ಚಪ್ಪರ ಹಾಕದದ ನಾ ಕಾಣೆ, ಮಂಡೇಯ ಕಟ್ಟಿ ಒಳ್ಳೆ ಧಾರ ಊದದ ನಾ ಕಾಣೆ.. ಅದೇಗೆ ಅವನು ನನಗೆ ಭಾವನಾದನು? ನಾನೇಗೆ ಅವನಿಗೆ ನಾದಿನಿ ಆಯ್ತಿನಿ ಹೇಳು! ಅದೇನೋ ಹೇಳದ್ನ ವಸಿ ಬುಡ್ಸಿ ಹೇಳು… ನಂಗ ಯ್ಯೋನು ಅರ್ಥ ಆಯ್ತಿಲ್ಲ ಎನ್ನುವಾಗ…
ಯ್ಯೋಳ್ತಿನಿ ಕ್ಯೋಳು ಚಿಕ್ಕವಳೆ… ನಾನು ನಮ್ಮ ಶತ್ರು ಮಹಿಸನನ್ನು ಕೊಂದು ಭಾರೀ ಗಾತ್ರದ ಆಯುಧ ಹಿಡ್ಕಂಡು ಮೈಕೈಗೆಲ್ಲ ಮೆತ್ಕಂಡಿದ್ದ ರ್ಕತವ ತೊಳೆದು ಶುದ್ಧ ಆಗವ ಅಂತ ಕಪನಿ ಹೊಳೆಗ ಹೋಗಿ… ಮೊಗ್ಗಿನ ರವುಕೆ ಕಳೆದು ನಡುಗಾಡಲ್ಲಿ ಮಡಗಿ, ಭಾರೀ ಗಾತ್ರದ ಕೈಯಿನಿ ಬಳೆಗಳ ತಗೆದು, ನಡಿನ ಚಿನ್ನದ ಡಾಬ ತಗೆದು, ಹಣೆಯಲ್ಲಿದ್ದ ವಜ್ರದ ಪದಕ ತಗೆದು ಹೊಳ ದಂಡೇಲಿ ಮಡಗಿ, ಏಳು ಸುತ್ತಿನ ಸ್ಯಾಲವ ನರಿಗೆ ತೆಗೆದು ಹೊಳೆ ದಂಡೆಯ ನೀರಂಜಿ ಬುಡಕ್ಕೆ ಕಟ್ಟಿ ಮೆಲ್ಲ ಮೆಲ್ಲನೆ ಕಪನಿ ಹೊಳೆಯ ಒಳಗೆ ಇಳಿದು ಆಯುಧವ ತೊಳಕಂಡು, ರಕ್ತವ ವರಸಿಕೊಂಡು, ಮೊಕವನ್ನೇ ತೊಳೆದೇನು, ಕೈ ಕಾಲ ಉಜ್ಜಿಕೊಂಡದೆ-
ಈಗಲಾದರೂವಿ,
ಕೆಂಪಾನಿ ಹೊಳೆ ಬಿಟ್ಟು, ದಡಕ್ಕೆ ಬಂದು ಏಳು ಮಾರು ಸ್ಯಾಲವ ಸುತ್ತುಕೊಂಡು ನರಿಗೆ ಹಾಕಿ ಸಿಕ್ಕಿಕೊಂಡು, ಮಂಡೇ ಸಿಕ್ಕು ಹೊಡೆಯುವಾಗ ಹಿಂದ್ಲಿಂದ ಬಂದನವನು, ಚಿಕ್ಕ ಪ್ರಾಯದವನು, ಅಂದುಳ್ಳ ಮೊಗದವನು, ಚಂದುಳ್ಳ ಮಾತಿನವನು, ಕುಡಿಮೀಸೆ ಚೆಲುವಿನವನು, ಕೆಂಪರಾಜದೊರೆ ಮಗನು!
ಬಂದುದೆ,
“ಯಾವ ರಾಜನ ಮಗಳು, ಯಾವ ಮಂತ್ರಿಯ ಮಗಳೊ ನೀನು?” ಎಂದು ನನ್ನ ಮುಂಗೈ ಹಿಡಕಂಡ.
ಹೇ ಬುಡ ಕೈಯ ಎಂದೆನುತ, “ಯಾರಯ್ಯ ನೀನು?” ಎಂದೆ.
ಅದಕ್ಕವನು ಹೇಳ್ದ, “ನಾನು ನಂಜನಗೂಡಿಗೆ ಅಧಿಕವಾದ ಜಂಗಮನು. ಕೆಂಪರಾಜದೊರೆ ಮಗನು…”
“ನೀನ್ಯಾರೂ ಹೇಳು, ಇಲ್ಲೇನಿಕ್ ಬಂದಿದಯ್, ಈ ಸಕ್ಕಂ ಸರಿರಾತ್ರಿವಳಗೆ ಒಬ್ಬಳೆ ಏನು ಮಾಡುತ್ತಿದ್ದಿಯೇ ಎಂಬುದಾಗಿ ಕ್ಯೋಳಲು…”
“ನಾನು ಮಾವೂರು ಲಿಂಗಯ್ಯನ ಮಗಳು ಮಾಯ್ಕಾತಿ ಚಾಮಾಯಿ, ನಮ್ಮ ಜನಗಳಿಗೆ ತೊಂದರೆ ಕೊಡುತ್ತಿದ್ದ ನಮ್ಮ ಶತ್ರು ಮಹಿಸನನ್ನು ಕೊಂದು ಶುದ್ದ ಆಗಣ ಅಂತ ಕಪನಿ ಹೊಳಗ ಬಂದಿನಿ,” ಎಂದು ಹೇಳಿದೆ.
ಅದಕ್ಕವನು, “ಹೋ… ಮಾವೂರ ಲಿಂಗಯ್ಯನ ಮಗಳ? ಆಗದರೆ ನೀನು ನನಗೆ ಮಾವಯ್ಯನ ಮಗಳೆ ನೀನು. ನನಗೆ ನೀನು ಸಲ್ಲಬೇಕು, ನಿನಗೆ ನಾನು ಸಲ್ಲಬೇಕು,” ಅಂತ್ಹೇಳಿ…
ಅವನ ಕೈನ ಇಳ್ಯ ತಗೆದು ನನ ಕೈಗೆ ಕೊಟ್ಟ ತಂಗಿ, ನನ್ನ ಕೈನ ಇಳ್ಯ ತಗೆದು ಅವನಿಗೆ ಕೊಟ್ಟೆ ತಂಗಿ. ಹಿಂಗೆ ನನ್ನ ವಾಲಿಸಿಕೊಂಡನಮ್ಮ ಕಳ್ಳ ನಂಜುಂಡ ಲಿಂಗಯ್ಯ…
ಕೇಳವ್ವ ತಂಗಿ ಆ ಅಮವಾಸ್ಯೆ ಕತ್ತಲೊಳಗೆ ಕಲ್ಲು ನೀರು ಕರಗುವ ವೇಳೆಯಲ್ಲಿ ನನ್ನ ರೂಪು-ಲಾವಣ್ಯವ ನೋಡಿ ಕಳ್ಳ ನಂಜುಂಡ ನಿಮ್ಮ ಭಾವ ನನ್ನ ಒಲಿಸಿಕೊಂಡನಮ್ಮ;
ಇದಕ್ಕೆ ಯಾರು ಸಾಕ್ಷಿ ಅಂದರೆ…
ಆಕಾಶ ಮೇಲಾಣಿ, ಭೂಮಿ ತಾಯಿ ಸಾಕ್ಷಿ ತಂಗ್ಯಮ್ಮ…
“ನಾನು ಶರಣ ಆಗಿ ಈ ನಡುಗಾಡಿಗೆ ಬಂದು ನೆಲಸೋಕು ಮುಂಚೆ ನಾನು ಕೂಡ ನಿಮ್ಮವ್ನೇ ಆಗಿದ್ದಿ, ನೀನೇನು ನನಗೆ ಕಾಡಲ್ಲ, ನಾನೇನೂ ನಿನಗೆ ಕಾಡಲ್ಲ. ನಾವಿಬ್ರೂ ಒಂದೇ ಮನ ಒಂದೇ ಜನ. ನೀನ್ ತಿಂತಿದ್ದ ನಾನು ತಿಂತಿದ್ದಿ. ನಾನು ತಿನ್ನದ ನೀವು ತಿಂದಿದಿರಿ,” ಅಂತ ಹೇಳಿದ್ನಮ್ಮ ನಿಮ್ಮ ಭಾವ. ಅದಕ್ಕ ನಾನೂ ಅವನು ಮದುವೆ ಮಾಡ್ಕಂಡು ಬೆಟ್ಟದ ಅರಮನುಗ ಬಂದು ನಾಕಾರ ದಿನ ಕಾಲ ಕಳೆದ ಮ್ಯಾಲ, “ಹುಣ್ಣುಮ ಜಾತ್ರುಗ ಹೋಗಿದ್ ಬತ್ತಿನಿ,” ಅಂದವ ಇನ್ನೂ ಬಂದಿಲ್ಲ. ವಸಿ ಹೋಗಿ ಕೂಗಿ ಬಾರವ್ವ ತಂಗಿ!
ಅಕ್ಕ ಅಂಗರ ಭಾವ ನಮ್ಮವ್ನಿಯ!
ನಾನು ಈಗ್ಲೇ ಹೋಗಿ ಕರ್ಕ ಬತ್ತಿನಿ-
ಭಾವ ಯಾವ್ ದಿಕ್ಕೆ ಹೋದ್ನ ಅಕ್ಕ-
ಎಲ್ಲಿದ್ದನ್ನಕ್ಕ ಭಾವ ಎಂಬುದಾಗಿ ತಂಗಿ ಉತ್ತನಳ್ಳಿ ಉರುಕಾತಿ ಉಸಿರೆಳೆಯಲು…
ಆ ನಡುಗಾಡು ಎಲ್ಲದ ಅಂದ್ರ ತಂಗಿ…
ಎಡಗಾಡೆ ಕಪನಿ ಹೊಳೆ, ಬಲಗಾಡ ಭಾರೀಗುಂಡ್ಲ, ಹಿಂದಕ್ಕೆ ಚಾಮಲಾಪುರ, ಮುಂದಕ್ಕೆ ಗೋಳೂರು ತೋಟ! ಅಷ್ಟೇ ಅಲ್ಲ ತಂಗಿ, ಮುಂದಕ್ಕ ಸವರ್ಣವತಿ ಅಡ್ಡಾಳ ಹರಿತುದ ಈ ಮೂರು ಬಂದು ಕೂಡ ದಡದ ಮೇಲೆ ನಡುಗಾಡ ನಂಜುಂಡನಾಗಿ ನೂರಾರು ಶರಣರ ಕಟಕಂಡು ಮೆರೆತವನೆ ಒಳರೋಗದ ಗಂಡ ವಿಷಂಪ್ರಾಜಿ ಒಡೆಯ ನಿಮ್ಮ ಭಾವ ಕಪನಯ್ಯ!
ಹೋಗಿ ಕರತಾರವ್ವ ಎನ್ನಲು… ಆರು ಮೂರು ಒಂಭತ್ತು ದಾಪಿಗೆ ನಡುಗಾಡಿಗೆ ಉರುಕಾತಿ ಬಂದವಳೆ…
ಉರುಕಾತಿ ಬಂದದ ವಿಷ್ಯ ತಿಳಿದ ನಂಜುಂಡ ಆಡಬಾರದ ಆಟ ಆಡಿ, ಕಂಡ ಕಂಡ ದೇವರ ಕೈ ಮುಗಿದು ಚಾಮುಂಡಿ ಬಳಿಗೆ ಹೋಗಲು ಎಷ್ಟೇ ಪ್ರಯತ್ನಿಸಿದರೂ ಆಗದೆ, ಕೊನೆಗೆ ತನ್ನ ಕಾವಲು ಕಾಯುತ್ತಿದ್ದ ಬಾಮೈದ ಸರ್ಪರಾಜನಿಗೆ ಎರಡು ಮಡಗಿ ಚಾಮುಂಡಿ ಬೆಟ್ಟದರಮನೆಗೆ ನಂಜುಂಡ ಬರುತ್ತಾನೆ.
ತನ್ನ ಮೂರನೇ ಮಡದಿ ಚಾಮುಂಡಿಯೊಂದಿಗೆ ಸುಖವಾಗಿ ಕಾಲ ಕಳೆದು ತಿರುಗಿ ಗರಳಪುರಿಗೆ ಒಬ್ಬಂಟಿಯಾಗಿ ಹಿಂದಿರುಗಲು:
ಕಲ್ಲು ಕಡಿಕಡಿ ಕಗ್ಗಲ್ಲೆ ಪುಡಿಪುಡಿ
ನಗ್ಗಾಲ ಮುಳ್ಳ ನರಿನರಿ ನಂಜನಗೂಡ
ಅಗ್ರಾರ್ದ ತೇರು ಹರುದಾವೊ
ತೇರು ಹರುದಾವೆ ತಾನದಲಿ ನಿಂತಾವೆ
ಯಾರು ಆರತಿಯ ತರುಲಿಲ್ವೆ ನಂಜಯ್ಯ
ದೇವೀರಮ್ಮಾರೂತಿ ಹಿಡಿದವಳೆ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ




