ಕುದಿಕಡಲು | ಸಂಘಪರಿವಾರದಿಂದ ಕೊಲ್ಲಲಾಗದ ಗಾಂಧಿ

Date:

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಇತ್ತೀಚೆಗೆ ವರ್ಷಗಳಲ್ಲಿ ಬಹಳ ಬಿರುಸಾಗಿಯೇ ಗಾಂಧೀಜಿಯವರ ಮೇಲೆ ಎರಗುತ್ತಿರುವುದು ಕೂಡಾ ಸತ್ಯ. ಗಾಂಧಿ ಇಲ್ಲದ ಭಾರತವನ್ನು, ಗಾಂಧೀ ವಿಚಾರಗಳಿಲ್ಲದ ಹಿಂದೂ ರಾಷ್ಟ್ರವನ್ನು ಕಟ್ಟಲು ಪ್ರಯತ್ನಿಸುತ್ತಿರುವುದು ಬಹಳ ದಟ್ಟವಾಗಿಯೇ ಕಾಣಿಸುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಈ ಸಂಘಟನೆಗಳು ಗಾಂಧೀಜಿಯನ್ನು ನಿತ್ಯವೂ ಕೊಲೆ ಮಾಡಲು ನೋಡುತ್ತಿವೆ. 

ಗಾಂಧಿ ಆತ್ಮಕಥೆಯನ್ನು ಬರೆದು ನೂರು ವರ್ಷಗಳಾಗಿವೆ. ಗಾಂಧೀ ವ್ಯಕ್ತಿತ್ವವನ್ನೇ ಅಳಿಸಿಹಾಕಿಬಿಡಬೇಕೆಂದು ಪಣ ತೊಟ್ಟಿರುವ RSS ಹುಟ್ಟಿಯೂ ನೂರು ವರ್ಷಗಳಾಗಿರುವುದು ಕಾಕತಾಳೀಯವಾದರೂ, ಬಹು ದೊಡ್ಡ ವ್ಯಂಗ್ಯದಂತೆಯೂ ಕಾಣಿಸುತ್ತದೆ. ಗಾಂಧೀಜಿ ಅಹಿಂಸೆಯನ್ನು ತಮ್ಮ ಜೀವನದ ಪರಮ ಮೌಲ್ಯ ಎಂದು ತಿಳಿದಿದ್ದರೆ, ಆರೆಸ್ಸೆಸ್‌ನ ಪರಮ ಮೌಲ್ಯ ಹಿಂಸೆಯೇ. ಗಾಂಧೀಜಿ ತಮ್ಮ ಇಡೀ ಬದುಕಿನಲ್ಲಿ ಸೆಣಸಿದ್ದು ಸತ್ಯದ ಹುಡುಕಾಟಕ್ಕಾಗಿ. ಸತ್ಯದ ಮುಂದೆ ಇನ್ನೊಂದು ಮೌಲ್ಯ ಇಲ್ಲ ಎಂಬುದು ಅವರ ಗಾಢ ನಂಬಿಕೆಯಾಗಿತ್ತು. ಆರೆಸ್ಸೆಸ್‌ ಸುಳ್ಳಿನ ಹಾಸಿಗೆಯ ಮೇಲೆಯೇ ಮಲಗಿದೆ. ಒಂದು ಸತ್ಯಾನ್ವೇಷಣೆಯ ಹೆದ್ದಾರಿ; ಇನ್ನೊಂದು ಸುಳ್ಳಿನ ಭ್ರಮಾಧೀನ ದಾರಿ. ಸಾಮಾನ್ಯ ಜನ ಮುಗ್ಧರು, ಪ್ರಾಮಾಣಿಕರು. ಅವರ ವಿವೇಕ ಸದಾ ಸತ್ಯದ ಕಡೆಗೇ ತುಡಿಯುವಂಥಾದ್ದು. ಈ ನಂಬಿಕೆ ಅಖಂಡವಾಗಿರುವ ಕಾರಣದಿಂದಲೇ ಗಾಂಧೀಜಿಯವರನ್ನು ಜನತೆಯ ಮನಸ್ಸಿನಿಂದ ಅಳಿಸಿಹಾಕಲು ಸಾಧ್ಯವಾಗಿಲ್ಲ.

ತಮ್ಮ ಆತ್ಮಕಥೆಯನ್ನು ಗಾಂಧೀಜಿ ಬರೆಯಲು 1921ರಿಂದಲೇ ಆರಂಭಿಸಿದರೂ, ಅವರ ಹೋರಾಟ, ರಾಜಕೀಯ ಕೆಲಸಗಳ ಒತ್ತಡ ಕಾರಣವಾಗಿ ಅವರು ಅದನ್ನು ಮುಂದುವರಿಸಲು ಆಗಲಿಲ್ಲ. ಮತ್ತೆ ಕೈಗೆತ್ತಿಕೊಂಡದ್ದು 1925ರಿಂದ. ಬರೆದಂತೆಲ್ಲ ಅದು ಕಂತು ಕಂತಾಗಿ ʼನವಜೀವನʼದಲ್ಲಿ ಪ್ರಕಟವಾಗುತ್ತ ಹೋಗಿ 1929ರಲ್ಲಿ ಮುಕ್ತಾಯಗೊಂಡಿತು. ಒಟ್ಟು 166ಕಂತುಗಳಲ್ಲಿ ಈ ಆತ್ಮಕತೆ ಪ್ರಕಟವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಾಂಧೀಜಿಯವರ ಬದುಕು, ಬಾಲ್ಯ ಇತ್ಯಾದಿ ಅಂಶಗಳನ್ನು ಒಳಗೊಂಡ ಆತ್ಮಕಥೆ ಬರೆಯಲು ಜೊತೆಗಾರರು ಒತ್ತಾಯಿಸಿದಾಗ ಗಾಂಧೀಜಿಯವರ ವಯಸ್ಸು 56. ಆತ್ಮಕಥೆಯನ್ನು ಬರೆಯಲು ಅವರು ನಿರಾಕರಿಸಿದರು. ಆದರೆ ತಾವು ಸತ್ಯದೊಂದಿಗೆ ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ನಡೆಸಿದ ಪ್ರಯೋಗಗಳ ಬಗ್ಗೆ ಬರೆಯಲು ಉತ್ಸುಕರಾದರು. ಹೀಗಾಗಿಯೇ ಕಂತು ಕಂತುಗಳಲ್ಲಿ ಅವರು ಬರೆದರು. ʼಆತ್ಮಕಥೆʼ ಅಥವಾ ʼನನ್ನ ಸತ್ಯಾನ್ವೇಷಣೆʼ ಎಂದು ಹೆಸರಿಟ್ಟದ್ದರ ಹಿಂದೆ ಅವರ ಸತ್ಯದ ಬಗೆಗಿನ ಅಖಂಡ ವಿಶ್ವಾಸ ಮತ್ತು ಪ್ರೀತಿ, ಹಾಗೆಯೇ ಸತ್ಯದೊಂದಿಗೆ ಅವರು ನಡೆಸಿದ ಪ್ರಯೋಗಗಳು ಇವೆ.

ಮುಂದೆ ʼಇಂಡಿಯನ್‌ ಒಪಿನಿಯನ್‌ʼನಲ್ಲಿ ಇದು ಮತ್ತೆ ಮುದ್ರಣಗೊಂಡಿತು. ಅಮೆರಿಕದ ʼಯುನಿಟಿʼ ಪತ್ರಿಕೆಯಲ್ಲಿಯೂ ಇದರ ಮುದ್ರಣವಾಯಿತು. ಈ ಆತ್ಮಕಥೆ ಇಂಗ್ಲಿಷ್‌ನಲ್ಲಿ ಎರಡು ಸಂಪುಟಗಳಲ್ಲಿ ಹೊರಬಂತು.

20ನೇ ಶತಮಾನದಲ್ಲಿ, ಅತಿ ಹೆಚ್ಚು ಮಾರಾಟವಾದ 100 ಪುಸ್ತಕಗಳಲ್ಲಿ ಗಾಂಧೀಜಿಯವರ ಈ ಆತ್ಮಕಥೆಯೂ ಸೇರಿತು. ಭಾರತೀಯ ಭಾಷೆಗಳಲ್ಲದೆ ಜಗತ್ತಿನ ಅನೇಕ ಭಾಷೆಗಳಿಗೆ ತರ್ಜುಮೆಗೊಂಡ ಈ ಕೃತಿಯ ಮುದ್ರಣಗಳು ಮತ್ತು ಪ್ರತಿಗಳು ಲೆಕ್ಕಕ್ಕೇ ಸಿಕ್ಕದಷ್ಟು ದೊಡ್ಡ ಸಂಖ್ಯೆಯಲ್ಲಿವೆ. ಇದನ್ನೊಂದು ಸಾಹಿತ್ಯ ಕೃತಿಯಾಗಿ ಓದುವವರು, ಆಧ್ಯಾತ್ಮಿಕ ಕೃತಿಯಾಗಿ ಪರಿಗಣಿಸುವವರು, ಬದುಕಿನ ಮಾರ್ಗದರ್ಶಿಯಾಗಿ ಓದುವವರು, ಕೇವಲ ಜೀವನ ಚರಿತ್ರೆಯಾಗಿ ಓದುವವರು ಜಗತ್ತಿನಾದ್ಯಂತ ಸಿಗುತ್ತಾರೆ. ಈ ಕೃತಿಯ ಪ್ರಭಾವ ಕೂಡಾ ಬಹುದೊಡ್ಡದು.

Mahatma Gandhi Kasturaba

ನೂರು ವರ್ಷ ಎಂಬುದು ಸುದೀರ್ಘ ಕಾಲಮಾನ. ಸುಮಾರು ಮೂರು ತಲೆಮಾರುಗಳ ಕಾಲಾವಧಿ. ಇಷ್ಟೊಂದು ಕಾಲಾವಧಿಯಲ್ಲಿಯೂ ಗಾಂಧಿಜೀಯ ವ್ಯಕ್ತಿತ್ವದ ಸೆಳೆತ ಕಡಿಮೆಯಾದಂತೆ ತೋರುವುದಿಲ್ಲ. ಹೊಸ ತಲೆಮಾರು ಗಾಂಧೀಜಿಯ ಚಿಂತನೆಗೆ, ವಿಚಾರಗಳಿಗೆ, ಅವರು ನಡೆಸಿದ ಬದುಕಿನ ಪ್ರಯೋಗಗಳಿಗೆ, ಸತ್ಯದ ಹಾದಿಗೆ ಮತ್ತೆ ಮತ್ತೆ ಎಡತಾಕುವುದನ್ನು ಕಾಣಬಹುದಾಗಿದೆ.

ಹಾಗೆಂದು ಗಾಂಧೀಜಿಯವರನ್ನು, ಅವರ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸುವವರು, ಟೀಕಿಸುವವರು ಇಲ್ಲವೆಂದಲ್ಲ. ಅಂಥ ಪ್ರಯತ್ನಗಳ ನಡುವೆಯೂ ಗಾಂಧೀಜಿ ಬೆಳೆಯುತ್ತಲೇ ಇದ್ದಾರೆ ಎಂಬುದು ಸೋಜಿಗ. ಇದು ಜಾಗತಿಕ ಮಟ್ಟದ ಸತ್ಯವೂ ಹೌದು.

ಆದರೆ ಆರೆಸ್ಸೆಸ್ ಮತ್ತು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಇತ್ತಿಚಿನ ವರ್ಷಗಳಲ್ಲಿ ಬಹಳ ಬಿರುಸಾಗಿಯೇ ಗಾಂಧೀಜಿಯವರ ಮೇಲೆ ಎರಗುತ್ತಿರುವುದು ಕೂಡಾ ಸತ್ಯ. ಗಾಂಧಿ ಇಲ್ಲದ ಭಾರತವನ್ನು, ಗಾಂಧೀ ವಿಚಾರಗಳಿಲ್ಲದ ಹಿಂದೂ ರಾಷ್ಟ್ರವನ್ನು ಕಟ್ಟಲು ಈ ಸಂಘಟನೆಗಳು ಪ್ರಯತ್ನಿಸುತ್ತಿರುವುದು ಬಹಳ ದಟ್ಟವಾಗಿಯೇ ಕಾಣಿಸುತ್ತಿದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಈ ಸಂಘಟನೆಗಳು ಗಾಂಧೀಜಿಯನ್ನು ನಿತ್ಯವೂ ಕೊಲೆ ಮಾಡಲು ನೋಡುತ್ತಿವೆ. ಆದರೆ ಅದು ಸಾಧ್ಯವಾಗದೆ, ಗಾಂಧೀಜಿ ಮತ್ತೆ ಮತ್ತೆ ಪುಟಿದೇಳುತ್ತ ತಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ ಎಂಬುದು ಸತ್ಯ.

ಕಟ್ಟುಕಥೆಗಳು, ಸುಳ್ಳುಗಳು, ಕಲ್ಪಿತ ವಿಚಾರಗಳು, ನಿರ್ದಿಷ್ಟ ಸಂದರ್ಭ ಸನ್ನಿವೇಶಗಳಿಂದ ಕತ್ತರಿಸಿ ವಿಕೃತಿಯನ್ನು ರೂಪಿಸಿ ಹೆಣೆದ ಸಂಗತಿಗಳು ಹೀಗೆ ನೂರಾರು. ಇದನ್ನೆಲ್ಲ ನೋಡಿ ಗಾಂಧೀಜಿ ತಮ್ಮ ಬೊಚ್ಚು ಬಾಯಲ್ಲಿ ನಗುತ್ತಿರಬಹುದು.

ಗಾಂಧೀಜಿ ನಿತ್ಯವೂ ಮೇಕೆಯ ಹಾಲನ್ನು ಕುಡಿಯುತ್ತಿದ್ದರು. ಇಂಥದೊಂದು ಮಾಹಿತಿಯನ್ನು ಹೇಗೆ ತಿರುಚಬಹುದು, ಹೇಗೆ ವಿಕೃತಿಗೊಳಿಸಬಹುದು ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆರೆಸ್ಸೆಸ್‌ ಪ್ರತಿಭೆಗಳು ಹರಿಯಬಿಟ್ಟಿರುವ ಕತೆಯನ್ನು ನೋಡಿ:

ಗಾಂಧೀಜಿಯವರು ಎಲ್ಲಿಯೇ ಹೋಗಲಿ (ಪಂಜಾಬ್‌ನಿಂದ ಪಾಂಡಿಚೆರಿಗೆ, ಲಡಾಕ್‌ನಿಂದ ಲಂಡನ್‌ಗೆ) ಈ ಮೇಕೆಯನ್ನು (ಇದಕ್ಕೆ ನಿರ್ಮಲಾ ಎಂದು ಹೆಸರಿಟ್ಟಿದ್ದಾರೆ) ಜೊತೆಯಲ್ಲಿ ಕರೆದೊಯ್ಯುತ್ತಿದ್ದರು. ಈ ನಿರ್ಮಲಾ ದಿನಕ್ಕೆ ನಾಲ್ಕು ಕೆ ಜಿ ಹುಲ್ಲು ತಿನ್ನುತ್ತಿದ್ದಳು. ಈ ಹುಲ್ಲನ್ನು ಜೋಡಿಸುವುದು ಮತ್ತು ಗಾಂಧೀಜಿ ಹೋದ ಕಡೆಗೆಲ್ಲ ನಿರ್ಮಲಾಳನ್ನು ಸಾಗಿಸುವುದು ವ್ಯವಸ್ಥಾಪಕರಿಗೆ ದೊಡ್ಡ ಸವಾಲಾಗುತ್ತಿತ್ತು… ಇತ್ಯಾದಿ.

ಆ ಕಾಲದಲ್ಲಿ ಭಾರತೀಯರು ಕಾಣದ, ಬ್ರಿಟಿಷ್‌ ಮೂಲದ, ದುಬಾರಿಯಾದ ಲಕ್ಸ್ ಸೋಪಿನಲ್ಲಿ ನಿರ್ಮಲಾ ಸ್ನಾನ ನಿತ್ಯವೂ ನಡೆಯುತ್ತಿತ್ತು.

ಭಾರತೀಯರಲ್ಲಿ ನೂರರಲ್ಲಿ 80 ಜನರಿಗೆ ಸೋಪು ಎಂದರೇನು ಎಂದು ತಿಳಿಯದ ಕಾಲದಲ್ಲಿ ಭಾರತದಲ್ಲಿ ಲಕ್ಸ್‌ ಸೋಪನ್ನು ಮೊದಲು ಬಳಸಿದ್ದು ಈ ನಿರ್ಮಲಾ. ನಿರ್ಮಲಾಳ ಒಂದು ದಿನದ ಭೋಜನದ ಖರ್ಚು, ಒಂದು ಶಾಲೆಯ ಮುಖ್ಯ ಶಿಕ್ಷಕರ ಒಂದು ತಿಂಗಳ ವೇತನಕ್ಕೆ ಸಮವಾಗಿರುತ್ತಿತ್ತು. ಈ ನಿರ್ಮಲಾ ಸ್ಮಾರಕಗಳು ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಇವೆ. ….ʼನಿರ್ಮಲಾ ಅಮರ್‌ ರಹೆ,ʼ ʼಲಕ್ಸ್‌ ಸೋಪ್‌ ಅಮರ್‌ ರಹೆʼ ಇತ್ಯಾದಿ ‌

ಇನ್ನೊಂದು ಕತೆ: ಗಾಂಧೀಜಿಯನ್ನು ಬ್ರಿಟಿಷರು ಬಂಧಿಸಿದಾಗ ಆಘಾ ಖಾನ್‌ ಅರಮನೆಯಲ್ಲಿಡಲಾಗಿತ್ತು (ಇದು ಸೆರೆಮನೆ)  ತುಂಬ ಸರಳವಾಗಿ ಬದುಕುವ ಮಾತನ್ನು ಆಡುತ್ತಿದ್ದ ಗಾಂಧಿ ನಿತ್ಯವೂ ಹತ್ತು ಅಡಿ ಅಗಲ ಮತ್ತು ಹತ್ತು ಅಡಿ ಉದ್ದದ ಅಮೃತಶಿಲೆಯಲ್ಲಿ ಮಾಡಿದ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದರು…

ಮತ್ತೊಂದು: ಕಸ್ತೂರ ಬಾ ಅವರಿಗೆ ನಿಮೋನಿಯಾ ಆದಾಗ ಪೆನ್ಸಿಲಿನ್‌ ಇಂಜೆಕ್ಷನ್‌ ಕೊಡಲು ಗಾಂಧಿ ಒಪ್ಪಲಿಲ್ಲ. ಅದು ವಿದೇಶದ್ದು ಎಂಬ ಕಾರಣಕ್ಕೆ. ಪ್ರಾರ್ಥನೆಯಿಂದಲೇ ನಿಮೋನಿಯಾ ಹೋಗುತ್ತದೆ ಎಂದು ಹೇಳಿ ಗಾಂಧಿ ಕಸ್ತೂರಬಾ ಅವರಿಗೆ ಇಂಜೆಕ್ಷನ್‌ ಕೊಡದೆ ಸಾಯಿಸಿದರು. ಈ ಸಾವಿನಿಂದ ಒಂದಿಷ್ಟೂ ವಿಚಲಿತಗೊಳ್ಳದ ಗಾಂಧಿ ಅಮೆರಿಕ ಮೂಲದ ಸ್ಟುಡಿಬೆಕರ್‌ ಪ್ರೆಸಿಡೆಂಟ್‌ ಕಾರು ಹತ್ತಿ ಮತ್ತೆ ಸ್ವಾತಂತ್ರ್ಯ ಚಳವಳಿಗೆ ಹೊರಟೇಬಿಟ್ಟರು. ಗಾಂಧೀ ಅವರ ಸೊಂಟದಲ್ಲಿ ನೇತಾಡುತ್ತಿದ್ದುದು ದುಬಾರಿ ಬೆಲೆಯ ವಿದೇಶಿ ಗಡಿಯಾರ.

ಹೀಗೆ, ಇನ್ನೆಷ್ಟೊ ಆರ್‌ ಎಸ್‌ ಎಸ್‌ ಸ್ಪರ್ಶದ ಕಥೆಗಳು. ಇದು ಆರ್‌ ಎಸ್‌ ಎಸ್‌ ನಡೆಸಿರುವ ಸತ್ಯಶೋಧ.

golwalkar

ಈ ದ್ವೇಷ ಯಾಕೆ? ಇದರ ಮೂಲ ಎಲ್ಲಿಯದು?

1947ರಲ್ಲಿ ಆರೆಸ್ಸೆಸ್‌ ನೇತಾರ ಗೋಲ್ವಾಲ್ಕರ್‌ ತಮ್ಮ ಹಿಂಬಾಲಕರಿಗೆ ಪಾಠ ಮಾಡಿದ್ದರು: ʼಗಾಂಧೀ ಹಿಂದೂಗಳಿಗೆ ನಿಷ್ಠರಾಗಿಲ್ಲ.ʼ ಆರೆಸ್ಸೆಸ್‌ ಹುಟ್ಟಿದ್ದೇ ಹಿಂದೂರಾಷ್ಟ್ರ ನಿರ್ಮಾಣದ ಗುರಿ ಇಟ್ಟುಕೊಂಡು. ಹಿಂದೂರಾಷ್ಟ್ರದ ಪರಿಕಲ್ಪನೆ ಹಿಟ್ಲರ್‌ ಚಿಂತನೆಗೆ ಹತ್ತಿರವಾದದ್ದು. ಹಿಟ್ಲರ್‌ನಂತೆಯೇ ಆರೆಸ್ಸೆಸ್‌ ತನ್ನ ಗುರಿಸಾಧನೆಗೆ ಹಿಂಸೆಯನ್ನು ಬಳಸುವುದು ಅನಿವಾರ್ಯ ಎಂದು ದೃಢವಾಗಿ ನಂಬಿತ್ತು. ಆರ್‌ ಎಸ್‌ ಎಸ್‌ ಸಿದ್ಧಾಂತವನ್ನು ರೂಪಿಸಿದ ಗೋಲ್ವಾಲ್ಕರ್‌ (ಗುರೂಜಿ ಎಂದು ಆರೆಸ್ಸೆಸ್‌ ನವರು ಗೌರವಿಸಿದ್ದಾರೆ) ಹಿಂದೂಧರ್ಮವನ್ನು ರಾಷ್ಟ್ರಧರ್ಮವಾಗಿಸುವ ಸಂಕಲ್ಪ ಮಾಡಿದ್ದರು. ಅಷ್ಟೇ ಅಲ್ಲ ಹಿಂದೂರಾಷ್ಟ್ರವಾಗಿಯೂ ಮಾಡುವ ಬಯಕೆ ಹಿಂದೂಮಹಾಸಭಾದ ನಾಯಕ ಸಾವರ್ಕರ್‌ ಮತ್ತು ಗೋಲ್ವಾಲ್ಕರ್‌ ಇಬ್ಬರದೂ ಆಗಿತ್ತು. ಮುಸ್ಲಿಮರನ್ನು ಹೊರಗಿನವರೆಂದು ಭಾವಿಸಿ ಅವರನ್ನು ಈ ರಾಷ್ಟ್ರದಿಂದ ಓಡಿಸುವುದಕ್ಕಾಗಿ ಆರ್‌ಎಸ್‌ಎಸ್‌ ಪಣತೊಡಬೇಕೆಂದು ಗೋಲ್ವಾಲ್ಕರ್‌ ಹೇಳುತ್ತಿದ್ದರು.

1945ರಲ್ಲಿ ಒಂದು ವ್ಯಂಗ್ಯಚಿತ್ರ ಪ್ರಕಟವಾಗಿತ್ತು. ಅಲ್ಲಿ ಗಾಂಧಿಯನ್ನು ದಶಕಂಠ ರಾವಣನಿಗೆ ಹೋಲಿಸಲಾಗಿತ್ತು. ಒಂದು ಬಾಣ ಈ ರಾವಣನಿಗೆ ಗುರಿ ಇಟ್ಟಿತ್ತು. ಇದನ್ನು ಆರೆಸ್ಸೆಸ್‌ ಎಲ್ಲೆಲ್ಲಿಗೊ ಮುಟ್ಟಿಸಲು ಬಹಳ ಬೆವರು ಹರಿಸಿತು.

ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ ಧ್ಯೇಯ ಮತ್ತು ಗುರಿಗಳು ಒಂದೇ. ಹಿಂಸೆ ಮತ್ತು ಆಯುಧ ಬಳಕೆಯಲ್ಲಿ ಈ ಸಂಘಟನೆಗಳು ನಂಬಿಕೆ.

ಗಾಂಧೀಜಿಯವರ ಪ್ರಬಲ ನಂಬಿಕೆ ಅಹಿಂಸೆ ಮತ್ತು ಸತ್ಯದಲ್ಲಿ. ಅಹಿಂಸೆಯಿಂದಲೇ ಸ್ವರಾಜ್ಯವನ್ನು ಪಡೆದು ಅವರು ಜಗತ್ತಿಗೆ ಅಹಿಂಸೆಯ ಶಕ್ತಿಯನ್ನು ತೋರಿಸಿಕೊಟ್ಟರು, ಅವರ ಆದರ್ಶ- ರಾಮರಾಜ್ಯ. ಅಲ್ಲಿ ಧಾರ್ಮಿಕ ಸಾಮರಸ್ಯ, ಸರ್ವಧರ್ಮ ಸಮಭಾವ ತತ್ವಕ್ಕೆ ಮನ್ನಣೆ. ಸಹಬಾಳ್ವೆ ಈ ರಾಮರಾಜ್ಯದ ಉಸಿರು.

ಇದು ಗೋಲ್ವಾಲ್ಕರ್‌ ಮತ್ತು ಸಾವರ್ಕರ್‌ ಅವರ ಪಾಲಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿತ್ತು. ಮುಸ್ಲಿಮರ ಪರವಾಗಿ ನಿಲ್ಲುತ್ತಿದ್ದ ಗಾಂಧಿ, ಮುಸ್ಲಿಮರನ್ನು ಓಲೈಸುತ್ತಿದ್ದಾರೆಂದು ಈ ಹಿಂದೂ ನಾಯಕರು ಹೇಳುತ್ತಿದ್ದರು. ಗಾಂಧಿಯನ್ನು ಮುಗಿಸುವ ಮಾತುಗಳನ್ನೂ ಪರೋಕ್ಷವಾಗಿ ಆಡುತ್ತಿದ್ದರು. ಜನಾಂಗದ ಮಾತು, ಪರಿಶುದ್ಧತೆಯ ಭ್ರಮೆ, ಬಹುತ್ವವನ್ನು ಎಂದೂ ಒಪ್ಪದೆ ಹಿಂದೂರಾಷ್ಟ್ರ ನಿರ್ಮಾಣಕ್ಕೆ ತುಡಿಯುತ್ತಿದ್ದ ಈ ಹಿಂದೂ ನಾಯಕರು ಸಹಜವಾಗಿಯೇ ಹಿಂಸೆಯನ್ನು ತಮ್ಮ ಗುರಿ ಸಾಧನೆಯ ಮಾರ್ಗವೆಂದು ಒಪ್ಪಿದ್ದರು.

ಇವತ್ತಿಗೂ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಆಡುತ್ತಿರುವ ಮಾತುಗಳನ್ನು ಗಮನಿಸಿ: ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ.

ಭಾರತ ನಿಂತಿರುವುದೇ ಬಹುತ್ವದ ಪ್ರತಿರೂಪವಾಗಿ. ಇಲ್ಲಿ ಬಣ್ಣಗಳು, ಭಾಷೆಗಳು, ಸಂಸ್ಕೃತಿಗಳು ಎಲ್ಲವೂ ಬೇರೆ ಬೇರೆಯಾದರೂ, ಒಂದು ರಾಷ್ಟ್ರವಾಗಿ ಉಸಿರಾಡುತ್ತಿದೆ.

ಬಹಳ ಮುಖ್ಯವಾಗಿ ಹಿಂದೂರಾಷ್ಟ್ರ ಕನಸುವ ನಾಯಕರಾಗಲಿ, ಸಂಘಟನೆಗಳಾಗಲಿ ಸತ್ಯಕ್ಕೆ ಎದುರಾಗಲು ತಯಾರಿಲ್ಲ. ಗಾಂಧೀಜಿಯ ಕೊಲೆಯಲ್ಲಿ ಗೋಲ್ವಾಲ್ಕರ್‌ ಪಾತ್ರ ಇತ್ತೆಂಬುದಕ್ಕೆ ಅನೇಕ ಪ್ರಮುಖರ ಹೇಳಿಕೆಗಳಿವೆ. ಆದರೆ, ತನಿಖಾ ಆಯೋಗಕ್ಕೆ ಸಮರ್ಥ ಸಾಕ್ಷಿಗಳು ದೊರೆಯದ ಕಾರಣ ಗೋಲ್ವಾಲ್ಕರ್‌ ಪಾರಾಗಿ, ಆರ್‌ಎಸ್‌ಎಸ್‌ ಕಾರ್ಯಕರ್ತ ಗೋಡ್ಸೆ ಮಾತ್ರ ಶಿಕ್ಷೆಯನ್ನು ಅನುಭವಿಸಬೇಕಾಯಿತು.

ʼಆರ್‌ಎಸ್‌ಎಸ್‌ ಕೋಮು ವಿಷವನ್ನು ತುಂಬಿಕೊಂಡಿದೆʼ ಎಂದು ಗೋಲ್ವಾಲ್ಕರ್‌ಗೆ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ (ಆಗಿನ ಗೃಹಮಂತ್ರಿ) ಪತ್ರ ಬರೆದಿದ್ದರು. ಅಂದಿನಿಂದ ಇಂದಿನವರೆಗೂ ಆರ್‌ಎಸ್‌ಎಸ್‌ ಬದಲಾಗಿಯೇ ಇಲ್ಲ. ಅದರಲ್ಲಿನ ಕೋಮುವಿಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಸತ್ಯವನ್ನು ಎದುರಿಸಲು, ಸತ್ಯದಲ್ಲಿ ನಂಬಿಕೆ ಇಡಲು ಅಪಾರ ಧೈರ್ಯ ಬೇಕು. ಆ ಧೈರ್ಯ ಇಲ್ಲದ ಆರ್‌ಎಸ್‌ಎಸ್‌ ಸುಳ್ಳಿನ ಬಲೆ ಹೆಣೆಯುತ್ತ ಗಾಂಧೀಜಿಗೆ ಮಸಿ ಬಳಿಯಲು ಹಲವು ದಾರಿಗಳನ್ನು ಹುಡುಕುತ್ತಲೇ ಇದೆ. ಹಾಗಾಗಿಯೇ ಇಂಥ ಕಟ್ಟುಕತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಮಾಧ್ಯಮಗಳ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಟ್ಟಿಗೆದ್ದದ್ದು ಏಕೆ?

ಇವರು ಹೇಳುವಂತೆ ಗಾಂಧೀಜಿ ಠಕ್ಕಿನ ಮನುಷ್ಯನಾಗಿದ್ದರೆ, ಗಾಂಧೀ ತತ್ವಗಳು ಇಷ್ಟು ವರ್ಷ ಜನರ ನಡುವೆ ಉಳಿಯುತ್ತಲೇ ಇರಲಿಲ್ಲ. ಗಾಂಧೀಜಿಯ ನೆನಪೂ ಇರುತ್ತಿರಲಿಲ್ಲ. ಗಾಂಧೀಜಿಯವರೊಂದಿಗೆ ಕೆಲಸ ಮಾಡಿದ, ಅವರ ಆಶ್ರಮದಲ್ಲಿ ಸಹಬಾಳ್ವೆ ನಡೆಸಿದ ಆ ತಲೆಮಾರಿನವರು, ಅವರಿಗಿಂತ ಕಿರಿಯರು ಗಾಂಧೀಜಿಯವರ ಸರಳ, ನೇರ, ಸತ್ಯದ ಮಾರ್ಗವನ್ನು ಒಪ್ಪಿಕೊಂಡು, ಅದನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಹಾಗೆಯೇ ಬದುಕಲು ಇಡೀ ಜೀವನದುದ್ದಕ್ಕೂ ಶ್ರಮಿಸಿದರು. ಅದು ಮುಂದಿನ, ಅದರ ಮುಂದಿನ ತಲೆಮಾರುಗಳಿಗೂ ಚಾಚಿಕೊಂಡಿತು. ಇವತ್ತಿಗೂ ಗಾಂಧೀಜಿಯ ತತ್ವಗಳಲ್ಲಿ ನಂಬಿಕೆ ಇಟ್ಟಿರುವವರು ಸಣ್ಣ ಸಂಖ್ಯೆಯಲ್ಲಾದರೂ ಕಾಣಸಿಗುತ್ತಾರೆ. ಎಷ್ಟೋ ಸಂಸ್ಥೆಗಳೂ ಜೀವಂತವಾಗಿವೆ. ಭಾರತದ ಆಚೆಗೂ, ಜಗತ್ತಿನಾದ್ಯಂತ ಗಾಂಧೀಜಿ ಆದರ್ಶ ಪುರುಷರೇ. ಇದು ಠಕ್ಕಿನ ಮಾರ್ಗವಾಗಿದ್ದರೆ ಎಂದೋ ಗಾಂಧಿ ಬಿದ್ದುಹೋಗುತ್ತಿದ್ದರು.

ಗಾಂಧೀಜಿಗೆ ಮಸಿ ಬಳಿಯುವುದೆಂದರೆ ಸತ್ಯಕ್ಕೆ ಮಸಿಬಳಿಯುವುದು; ಅಹಿಂಸೆಗೆ ಮಸಿ ಬಳಿಯುವುದು ಮತ್ತು ಗಾಂಧೀಜಿಯ ಪ್ರಧಾನ ತತ್ವಗಳಾದ ಸಹಬಾಳ್ವೆ, ಬಹುತ್ವದ ಭಾರತ, ಬಹು ಭಾಷೆ, ಬಹು ಸಂಸ್ಕೃತಿಗಳು ಒಗ್ಗೂಡಿದ ರಾಷ್ಟ್ರಕ್ಕೆ ಮಸಿ ಬಳಿಯುವುದು.
ಇದು ಸಾಧ್ಯವೇ? ಮಸಿಬಳಿಯಲು ಹೊರಟಿರುವ ಮನಸ್ಸುಗಳು ಒಮ್ಮೆ ಚಿಂತಿಸಬೇಕು.

G P Basavaraj
ಜಿ ಪಿ ಬಸವರಾಜು
+ posts

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಜಿ ಪಿ ಬಸವರಾಜು
ಜಿ ಪಿ ಬಸವರಾಜು

ಹಿರಿಯ ಪತ್ರಕರ್ತ, ಸಾಹಿತಿ. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲ.  ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ ಪ್ರಮುಖ ಕೃತಿಗಳು. ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...