ಕೃಷಿರಂಗ | ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ ಜಿಕೆವಿಕೆ ʼಬಿತ್ತನೆ ಬೀಜ ಪ್ರಯೋಗಾಲಯʼ

Date:

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಕಾಲೇಜಿನ ಸಸ್ಯರೋಗ ವಿಜ್ಞಾನ ವಿಭಾಗದಲ್ಲಿ 2022ರಲ್ಲಿ ಸ್ಥಾಪಿಸಲಾದ ‘ಬೀಜ ಆರೋಗ್ಯ ತಪಾಸಣಾ ಪ್ರಯೋಗಾಲಯ’ವು ಬಿತ್ತನೆ ಬೀಜಗಳ ಕುರಿತು ಆಣ್ವಿಕ ಮಟ್ಟದಲ್ಲಿ ಸಂಶೋಧನೆ ನಡೆಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಿಜ್ಞಾನಿಗಳ ಗಮನ ಸೆಳೆದಿದೆ.

‘ಬೆಳೆಯುವ ಪೈರು ಮೊಳಕೆಯಲ್ಲಿ’ ಎಂಬ ಗಾದೆಯಿದೆ. ಇದನ್ನೇ ಆಧುನಿಕತೆಗೆ ತಕ್ಕಂತೆ ಬದಲಾಯಿಸಿದರೆ, ‘ಬೆಳೆಯುವ ಪೈರು ಬೀಜದಲ್ಲಿ’ ಅಥವಾ ಮತ್ತೂ ಮುಂದುವರೆದು ‘ಬೆಳೆಯುವ ಪೈರು ಬೀಜದ ವಂಶವಾಹಿಯಲ್ಲಿ’ ಎಂದು ವಿಶ್ಲೇಷಿಸಬೇಕಾದ ಕಾಲವಿದು. 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಕಾಲೇಜಿನ ಸಸ್ಯರೋಗ ವಿಜ್ಞಾನ ವಿಭಾಗದಲ್ಲಿ 2022ರಲ್ಲಿ ಸ್ಥಾಪಿಸಲಾದ ‘ಬೀಜ ಆರೋಗ್ಯ ತಪಾಸಣಾ ಪ್ರಯೋಗಾಲಯ’ವು ಬಿತ್ತನೆ ಬೀಜಗಳ ಕುರಿತು ಆಣ್ವಿಕ ಮಟ್ಟದಲ್ಲಿ ಸಂಶೋಧನೆ ನಡೆಸಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಿಜ್ಞಾನಿಗಳ ಗಮನ ಸೆಳೆದಿದೆ. ರೈತ ಸಮುದಾಯಕ್ಕೆ ಮಹದುಪಕಾರವನ್ನು ಮಾಡುವ ದಿಕ್ಕಿನಲ್ಲಿ ಶ್ರಮಿಸುತ್ತಿದೆ. ಶೈಕ್ಷಣಿಕ ವಲಯ ಮತ್ತು ಕಂಪನಿಗಳನ್ನು ಬೆಸೆಯುವ ಕೆಲಸವೂ ಸಾಗಿದೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಷ್ಟ್ರೀಯ ಮಾನ್ಯತೆಯ ಪ್ರಯೋಗಾಲಯ

ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳಿಗಾಗಿ ರಾಷ್ಟ್ರೀಯ ಮಾನ್ಯತೆ ಮಂಡಳಿ (National Accreditation Board for Testing and Calibration Laboratories: NABL) ಯು ಇಲ್ಲಿಯ ಬೀಜ ಆರೋಗ್ಯ ತಪಾಸಣಾ ಕೇಂದ್ರಕ್ಕೆ ಮಾನ್ಯತೆ ನೀಡಿದೆ. ರಾಷ್ಟ್ರ ಮಟ್ಟದಲ್ಲಿ ಇಂತಹ ಬೀಜ ಆರೋಗ್ಯ ಪ್ರಯೋಗಾಲಯಕ್ಕೆ ಸಿಕ್ಕ ಮೊಟ್ಟಮೊದಲ ಹಾಗೂ ಏಕೈಕ ಮಾನ್ಯತೆಯ ಪ್ರಯೋಗಾಲಯ ನಮ್ಮ ವಿವಿಯದ್ದಾಗಿದೆ ಎನ್ನುತ್ತಾರೆ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಎಂ. ಕೆ. ಪ್ರಸನ್ನಕುಮಾರ್‌.

ಬಿತ್ತನೆ ಬೀಜ ತಯಾರಿಕಾ ಕಂಪನಿಗಳು ಇವರ ಗ್ರಾಹಕರು. ರೈತರ ಹೊಲ – ತೋಟಗಳಲ್ಲಿ ಉತ್ಪಾದಿಸಿದ ಬಿತ್ತನೆ ಬೀಜಗಳ ಮಾದರಿಗಳು ಪರೀಕ್ಷೆಗಾಗಿ ಈ ಪ್ರಯೋಗಾಲಯಕ್ಕೆ ಬರುತ್ತವೆ. ಬೀಜ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತದೆ. ವೈರಸ್, ಬ್ಯಾಕ್ಟೀರಿಯಾ, ಶಿಲೀಂದ್ರಗಳ ಸೋಂಕು ಮತ್ತು ಕೀಟಬಾಧೆ ಮುಂತಾದುವನ್ನು ಪರೀಕ್ಷಿಸಲಾಗುತ್ತದೆ. ಪ್ರತಿ ಪರೀಕ್ಷೆಗಾಗಿ ನಿಗದಿಪಡಿಸಿದ ದರಗಳಿವೆ. ಅದರಿಂದ ಪರೀಕ್ಷಾ ಶುಲ್ಕವಾಗಿ ವಿವಿಗೆ ವಾರ್ಷಿಕ 70ರಿಂದ 80 ಲಕ್ಷ ರೂಪಾಯಿಗಳಷ್ಟು ಆದಾಯವಿದೆ. 

ಅತಿ ಮುಖ್ಯವಾಗಿ ಬೀಜೋತ್ಪಾದನೆ ಮಾಡುವ ರೈತರಿಗೆ ಗ್ಯಾರಂಟಿ ಆದಾಯವಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬೀಜ ಮಾರಾಟ ಕಂಪನಿಗಳಾದ ಬೇಯರ್, ಸಿಂಜೆಂಟಾ, ನನ್‍ಹೆಮ್ಸ್, ನಾಮಧಾರಿ ಸೀಡ್ಸ್, ಪಯೋನೀರ್ ಕರ್ಟೋವಾ, ಸಕತಾ ಸೀಡ್ ಇಂಡಿಯಾ, ಎಚ್‍ಎಮ್ ಕ್ಲಾಸ್, ಬಾಸ್ಫ್ ಮುಂತಾದವರು ರೈತರ ತೋಟ ಮತ್ತು ಹೊಲಗಳಲ್ಲಿ ಒಪ್ಪಂದದ ಮೇರೆಗೆ ಬೀಜಗಳನ್ನು ಉತ್ಪಾದಿಸಿ ರೈತರಿಗೆ ಖಚಿತ ಆದಾಯ ಬರುವಂತೆ ಮಾಡುತ್ತಿದ್ದಾರೆ. ಕಂಪನಿಗಳವರು ಅಂತಹ ಬೀಜದ ಮಾದರಿಗಳನ್ನು ಜಿಕೆವಿಕೆಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ನೀಡುತ್ತಾರೆ. ಕೆಲವೊಮ್ಮೆ ಸಸ್ಯಗಳೂ ಕೂಡ ಹಲವು ರೀತಿಯ ಪರೀಕ್ಷೆಗೆ ಒಳಗಾಗುತ್ತವೆ. ಪ್ರಯೋಗಾಲಯವು ಪ್ರಮಾಣ ಪತ್ರವನ್ನು ನೀಡುತ್ತದೆ. ಅಂತಹ ಪ್ರಮಾಣ ಪತ್ರವು ಬೀಜಗಳ ರಫ್ತಿಗೆ ಅತ್ಯಗತ್ಯ.

ಅಂತರರಾಷ್ಟ್ರೀಯ ಕಾರ್ಯವಿಧಾನದಂತೆ ಬಿತ್ತನೆ ಬೀಜಗಳ ಪರೀಕ್ಷೆ

ಅಂತರರಾಷ್ಟ್ರೀಯ ಬೀಜ ಪರೀಕ್ಷಾ ಸಂಘ (International Seed Testing Association: ISTA)ವು ರೂಪಿಸಿರುವ ಕಾರ್ಯವಿಧಾನದಂತೆ ಬಿತ್ತನೆ ಬೀಜಗಳ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ಅಗತ್ಯವಿರುವ ಎಲ್ಲಾ ರೀತಿಯ ಅತ್ಯಾಧುನಿಕ ಉಪಕರಣಗಳು ಜಿಕೆವಿಕೆಯ ಕೃಷಿ ಕಾಲೇಜಿನ ಸಸ್ಯರೋಗ ವಿಜ್ಞಾನ ವಿಭಾಗದ ಪ್ರಯೋಗಾಲಯದಲ್ಲಿವೆ.

ಕೃಷಿ ಮಂತ್ರಾಲಯದ ಅನುಮೋದನೆ

ನಮ್ಮ ರಾಜ್ಯದಲ್ಲಿ ರೈತರ ಹೊಲ, ತೋಟ, ಗದ್ದೆಗಳಲ್ಲಿ ಉತ್ಪಾದಿಸಿದ ಬೀಜಗಳು ಹಲವು ಯೂರೋಪ್ ದೇಶಗಳು, ಅಮೆರಿಕಾ, ಬ್ರೆಜಿಲ್, ಆಗ್ನೇಯ ಏಶಿಯಾದ ದೇಶಗಳಿಗೆ ರಫ್ತಾಗುತ್ತಿವೆ. ರೈತರು ಅಂತಹ ಬೀಜೋತ್ಪಾದನೆಯ ಕೌಶಲ್ಯಗಳಾದ ಸಸ್ಯಗಳನ್ನು ಕೃತಕವಾಗಿ ಪರಾಗಸ್ಪರ್ಶಕ್ಕೊಳಪಡಿಸುವ ತರಬೇತಿ ಪಡೆದವರಾಗಿದ್ದಾರೆ. ನಮ್ಮ ದೇಶದ ಕೃಷಿ ಇಲಾಖೆಯ ಕ್ವಾರಂಟೈನ್ ವಿಭಾಗವು ಜಿಕೆವಿಕೆಯ ಸಸ್ಯರೋಗ ವಿಜ್ಞಾನ ವಿಭಾಗವು ಕೊಟ್ಟ ಬೀಜ ಆರೋಗ್ಯ ಪ್ರಮಾಣ ಪತ್ರಕ್ಕೊಂದು ಪ್ರತ್ಯೇಕ ‘ಫೈಟೋಸ್ಯಾನಿಟರಿ ಪ್ರಮಾಣ ಪತ್ರ’ವನ್ನು ಲಗತ್ತಿಸಿ ರಫ್ತಿಗೆ ಅನುವು ಮಾಡಿಕೊಡುತ್ತದೆ. ಬೀಜೋತ್ಪಾದನೆಯಲ್ಲಿ ನಮ್ಮ ದೇಶವು ಚೀನಾವನ್ನು ಹಿಂದಿಕ್ಕಿದೆ ಎಂಬ ಮಾತಿದೆ.  

ಫೈಟೋಸ್ಯಾನಿಟರಿ ಪ್ರಮಾಣ ಪತ್ರವು ಬಿತ್ತನೆ ಬೀಜಗಳಿಗೆ ಯಾವುದೇ ತೆರನಾದ ಸೋಂಕು ಇಲ್ಲದಿರುವುದನ್ನು ದೃಢಪಡಿಸುತ್ತದೆ. ದೇಶದೇಶಗಳ ಮಧ್ಯೆ ಬಿತ್ತನೆ ಬೀಜಗಳ ವ್ಯಾಪಾರಕ್ಕೆ ಇಂತಹ ಪ್ರಮಾಣ ಪತ್ರ ಬೇಕು. ಬಿತ್ತನೆ ಬೀಜಗಳ ರಫ್ತಿನಿಂದ ದೇಶದ ಆರ್ಥಿಕ ಪರಿಸ್ಥಿತಿಗೆ ಕೊಂಚ ಕೊಡುಗೆಯಿದೆ. ಕಡೂರು, ಕೊಪ್ಪಳ, ಹರಪನಹಳ್ಳಿ, ರಾಣಿಬೆನ್ನೂರು ಮತ್ತು ಸಿರಾ ಭಾಗಗಳಲ್ಲಿ ರೈತರು ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಿತ್ತನೆ ಬೀಜ ಉತ್ಪಾದನೆ ಮಾಡಿ ಖಚಿತ ಆದಾಯವನ್ನು ಗಳಿಸುತ್ತಿದ್ದಾರೆ. ಇದೊಂದು ರೈತಸ್ನೇಹಿ ಯೋಜನೆ.

ಸಾಮಾನ್ಯವಾಗಿ ಮುಸುಕಿನ ಜೋಳ, ಟೊಮ್ಯಾಟೋ, ಮೆಣಿಸಿನಕಾಯಿ, ಕಲ್ಲಂಗಡಿ, ಕುಂಬಳಕಾಯಿ, ಸೌತೆಕಾಯಿ, ಹಾಗಲಕಾಯಿ, ಹಿರೇಕಾಯಿ, ಸೋರೆಕಾಯಿ, ಪಡುವಲಕಾಯಿ, ಕರಬೂಜ ಮುಂತಾದವುಗಳ ಬೀಜೋತ್ಪಾದನೆಯನ್ನು ರೈತರು ಮಾಡುತ್ತಿದ್ದಾರೆ. ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಎಂಬ ಕೃತಿಯಲ್ಲಿ ಬಿ.ಜಿ.ಎಲ್. ಸ್ವಾಮಿಯವರು ಮೂಲತಃ ದಕ್ಷಿಣ ಅಮೆರಿಕದಿಂದ ಬಂದ ತರಕಾರಿಗಳ ವಿವಿಧ ತಳಿಗಳು ನಮ್ಮ ಹೊಟ್ಟೆ ಸೇರುತ್ತಿವೆ ಎಂದಿದ್ದಾರೆ. ಆದರ ಜಾಡಿನಲ್ಲಿ ನಾವಿಂದು ಯೋಚಿಸಿದರೆ, ನಮ್ಮ ರಾಜ್ಯದಲ್ಲಿ ಉತ್ಪತ್ತಿಯಾಗುತ್ತಿರುವ ಹಲವು ತರಕಾರಿ, ದವಸ ಧಾನ್ಯಗಳ ಬೀಜಗಳು ಬೆಳೆಯಾಗಿ, ಆಹಾರವಾಗಿ ವಿಶ್ವದ ಎಲ್ಲರ ಹೊಟ್ಟೆ ಸೇರುವಂತಾಗುತ್ತಿವೆ ಎಂಬುದು ಸೋಜಿಗವೇ ಸರಿ. 

ಗಮನ ಸೆಳೆಯುವ ಸಂಶೋಧನೆಗಳು 

ಬೀಜ ಆರೋಗ್ಯ ಪರೀಕ್ಷಾ ಪ್ರಯೋಗಾಲಯವು ತನ್ನ ಸಂಶೋಧನೆಯ ಹಾದಿಯಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಿದೆ. ಪ್ರಯೋಗಾಲಯದ ಸಂಶೋಧಕರಾದ ಡಾ. ಪ್ರಸನ್ನಕುಮಾರ್‌ ಅವರು ಅಂತಹ ಒಳನೋಟಗಳನ್ನು ಹೀಗೆ ವಿವರಿಸಿದರು.

1. ಮುಸುಕಿನ ಜೋಳದ ದಂಟಿಗೆ ಬರುವ ‘ಸ್ಟಾಕ್ ರಾಟ್’ ಎಂಬ ರೋಗಕ್ಕೆ ಇಲ್ಲಿಯವರೆಗೆ ಫ್ಯುಸೇರಿಯಮ್ ವರ್ಟಿಸಿಲ್ಲಾಯ್ಡಸ್ ಎಂಬ ಶಿಲೀಂಧ್ರ ಕಾರಣವೆಂದು ತಿಳಿಯಲಾಗಿತ್ತು. ಆದರೆ ನಮ್ಮ ಪ್ರಯೋಗಾಲಯದ ಸಂಶೋಧನೆಯ ಪ್ರಕಾರ ಸಾರ್ಕೋಕ್ಲಾಡಿಯಮ್ ಜಿಯೇ ಎಂಬ ಶಿಲೀಂಧ್ರವು ಮೊದಲು ಸೋಂಕು ಉಂಟುಮಾಡಿದ ನಂತರ ಫ್ಯುಸೇರಿಯಮ್ ವರ್ಟಿಸಿಲ್ಲಾಯ್ಡಸ್ ಸೋಂಕು ತಗಲುತ್ತದೆ.

1

2. ಸೂಬಾಬುಲ್ ಎಂಬ ಮೇವು ಮರಕ್ಕೆ ಉಂಟಾಗುವ ‘ವಿಲ್ಟ್’ ರೋಗಕ್ಕೆ ಫ್ಯುಸೇರಿಯಮ್ ಫಾಲ್ಸಿಫಾರ್ಮೆ ಎಂಬ ಶಿಲೀಂಧ್ರ ಕಾರಣವೆಂದು ನಮ್ಮ ಪ್ರಯೋಗಾಲಯದಲ್ಲಿ ಮೊಟ್ಟಮೊದಲಿಗೆ ಕಂಡುಹಿಡಿದಿದ್ದೇವೆ. (ಅಂದಹಾಗೆ, ಕೂಬಾಬುಲ್ ಮರಕ್ಕೆ ಸೂಬಾಬುಲ್ ಎಂದು 1980ರ ದಶಕದಲ್ಲಿ ಹೆಸರಿಸಿದವರು ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರು).

3. ಕ್ಯಾರೆಟ್ ಕೊಳೆತು ಹೋಗುವ ‘ಸಾಫ್ಟ್ ರಾಟ್’ ಎಂಬ ರೋಗಕ್ಕೆ ಪೆಕ್ಟೋಬ್ಯಾಕ್ಟೀರಿಯಮ್ ಕಾರಣವೆಂದು ತಿಳಿಯಲಾಗಿತ್ತು. ಆದರೆ, ನಮ್ಮ ಸಂಶೋಧನೆಗಳ ಪ್ರಕಾರ ಮಾನವ ಮತ್ತು ಪ್ರಾಣಿಗಳಲ್ಲಿ ನ್ಯುಮೋನಿಯಾ ಮತ್ತಿತರ ಕಾಯಿಲೆಗಳಿಗೆ ಕಾರಣವಾಗುವ ಕ್ಲೆಬ್ಸಿಯೆಲ್ಲಾ ನ್ಯುಮೋನಿಯೇ ಎಂಬ ಬ್ಯಾಕ್ಟೀರಿಯಾ ಕಾರಣವೆಂದು 2021-22ರಲ್ಲಿ ಕಂಡುಕೊಂಡಿದ್ದೇವೆ. ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹರಿಯುವ ಕೊಳಚೆ ನೀರಿಗೆ ಬೆರೆಯುವ ವೈದ್ಯಕೀಯ ತ್ಯಾಜ್ಯವು ಈ ಸೋಂಕಿಗೆ ಕಾರಣವಿರಬಹುದು ಎಂಬ ಊಹೆ ನಮ್ಮದು. ಕ್ಲೆಬ್ಸಿಯೆಲ್ಲಾ ನ್ಯುಮೋನಿಯೇದಿಂದ ಕ್ಲೆಬ್ಸಿಯೆಲ್ಲಾ ವ್ಯಾರಿಕೋಲಾ ಎಂಬ ಮತ್ತೊಂದು  ಬ್ಯಾಕ್ಟೀರಿಯಾಗೆ ಸಮತಳವಾಗಿ ಹರಿದುಬರುವ ಜೀನ್ ವರ್ಗಾವಣೆಯು (Gene Transfer) ಕ್ಯಾರೆಟ್‍ನ ‘ಸಾಫ್ಟ್ ರಾಟ್’ಗೆ ಕಾರಣವಿರಬಹುದಾಗಿದೆ.

2

4. ಸಿರಿಧಾನ್ಯವಾದ ಸಾಮೆಯ ಜೀನೋಮ್‍ನ ಗುಣಲಕ್ಷಣಗಳನ್ನು ಕೆನಡಾದ ಸಸ್ಕಟ್‍ಚೇವನ್ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ರಾಜು ಸೋಲನಾಯಕನಹಳ್ಳಿ ಮತ್ತು ಸತೀಶ್ ಕಾಗಲೆ ಅವರ ಜೊತೆಗೂಡಿದ ಸಂಶೋಧನೆಯಿಂದ ಕಂಡುಕೊಂಡಿದ್ದೇವೆ.

5. ಮಾಲೆಕ್ಯುಲಾರ್ ಬಯಾಲಜಿ ಅಥವಾ ಬಯೋಟೆಕ್ನಾಲಜಿಯ ಕಾಲವಿದು. ರೋಗನಿರ್ಣಯಕ್ಕಾಗಿ ಆಣ್ವಿಕ (ಮಾಲೆಕ್ಯುಲಾರ್) ಮಟ್ಟದಲ್ಲಿ ಹೊಸ ವಿಧಾನಗಳ ಹುಡುಕಾಟದಲ್ಲಿದ್ದೇವೆ. ಅವುಗಳು ಫಲ ಕೊಟ್ಟರೆ ಇನ್ನೊಂದಿಷ್ಟು ಸಸ್ಯ ರೋಗಗಳ ಮೂಲಗಳನ್ನು ಕರಾರುವಾಕ್ಕಾಗಿ ಪತ್ತೆ ಹಚ್ಚಬಹುದು. ಇದರಿಂದ ರೈತ ಸಮುದಾಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ.

ಹೀಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್. ವಿ. ಸುರೇಶ್‍ರವರ ನಿರ್ದೇಶನದ ಮೇರೆಗೆ ಡಾ. ಪ್ರಸನ್ನಕುಮರ್‌ ಅವರು ತಮ್ಮ ಪ್ರಯೋಗಾಲಯದ ಪರೀಕ್ಷೆಗಳು ಮತ್ತು ಸಂಶೋಧನೆಗಳ ವಿವರಗಳನ್ನು ಅತ್ಯಂತ ಆತ್ಮೀಯತೆಯಿಂದ ನೀಡುತ್ತಾ ಹೋದರು. ನಾನು ಮತ್ತು ಡಾ. ಪ್ರಸನ್ನಕುಮಾರ್‌ ಅವರು ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗವು 2023ರಲ್ಲಿ ರಚಿಸಿದ ಕೃಷಿ ಶಿಕ್ಷಣದ ಕಾರ್ಯಪಡೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದಾಗ ಸ್ನೇಹ ಬೆಳೆದಿತ್ತು. ಅವರ ಪ್ರಯೋಗಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೀಜ ಉತ್ಪಾದನೆ ಮತ್ತು ಮಾರುಕಟ್ಟೆ ಕಂಪನಿಗಳಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ.   

ಪ್ರಯೋಗಾಲಯದಿಂದ ವಿಶ್ವ ದರ್ಜೆಯ ಸಂಶೋಧನಾ ಪ್ರಕಟಣೆಗಳು

ಬೀಜ ಆರೋಗ್ಯ ತಪಾಸಣೆ ಮಾಡುತ್ತಿರುವ ಜಿಕೆವಿಕೆಯ ಪ್ರಯೋಗಾಲಯದ ವಿಜ್ಞಾನಿಗಳ ಸಂಶೋಧನಾ ಲೇಖನಗಳು ವಿಶ್ವ ದರ್ಜೆಯ ಜರ್ನಲ್‍ಗಳಲ್ಲಿ ಪ್ರಕಟವಾಗುತ್ತಿವೆ. ‘ನೇಚರ್’ ಅಥವಾ ಅದರ ಸಮೂಹ ಪತ್ರಿಕೆಗಳಲ್ಲೊಂದು ಲೇಖನ ಪ್ರಕಟವಾಗುವುದು ಯಾವುದೇ ವಿಜ್ಞಾನಿಯ ಜೀವಮಾನದ ಆಸೆ ಮತ್ತು ಪ್ರತಿಷ್ಟೆ. ಅಂತಹುದೊಂದು ಆಸೆಯ ಈಡೇರಿಕೆಗಾಗಿ ಡಾ. ಪ್ರಸನ್ನಕುಮಾರ್ ಮತ್ತವರ ತಂಡ ‘ನೇಚರ್ ಕಮ್ಮುನಿಕೇಷನ್ಸ್’ನಲ್ಲೊಂದು ಲೇಖನ ಪ್ರಕಟಿಸಿದೆ.

ಉತ್ತಮ ಇಂಪ್ಯಾಕ್ಟ್ ಫ್ಯಾಕ್ಟರ್ ಹೊಂದಿರುವ ಜರ್ನಲ್‍ಗಳಲ್ಲಿ ಪ್ರಯೋಗಾಲಯದ ಲೇಖನಗಳು ಪ್ರಕಟವಾಗುತ್ತಿವೆ. ಪ್ಲಾಂಟ್ ಮಾಲೆಕ್ಯುಲಾರ್ ಬಯಾಲಜಿ, ಪ್ಲಾಂಟ್ ಸ್ಟ್ರೆಸ್, ಮೈಕ್ರೋಬಯಾಲಾಜಿಕಲ್ ರೀಸರ್ಚ್, ದಿ ಪ್ಲಾಂಟ್ ಜರ್ನಲ್, ಫಿಶಿಯಲಾಜಿಕಲ್ ಅಂಡ್ ಮಾಲೆಕ್ಯುಲಾರ್ ಪ್ಲಾಂಟ್ ಪೆಥಾಲಜಿ ಮತ್ತು ಪ್ಲಾಂಟ್ ಪೆಥಾಲಜಿಯಂತಹ ಪ್ರತಿಷ್ಟಿತ ಜರ್ನಲ್‍ಗಳಲ್ಲಿ ಸಂಶೋಧನಾ ಲೇಖನಗಳು ಪ್ರಕಟಗೊಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿವೆ. ಇಂತಹ ಸಂಶೋಧನೆ ಮತ್ತು ಲೇಖನಗಳ ಜ್ಞಾನವು ಕೃಷಿ ವಿಜ್ಞಾನಿಗಳಿಗಷ್ಟೇ ಅಲ್ಲದೆ ಸಾಂಪ್ರದಾಯಕ ವಿಶ್ವವಿದ್ಯಾಲಯಗಳ ಸಸ್ಯ ವಿಜ್ಞಾನ, ಬಯೋಟೆಕ್ನಾಲಜಿ, ಮಾಲೆಕ್ಯಲಾರ್ ಬಯಾಲಜಿಯಂತಹ ವಿಷಯ ತಜ್ಞರಿಗೂ, ಶಿಕ್ಷಕರಿಗೂ, ಸಂಶೋಧಕರಿಗೂ ಅತ್ಯಗತ್ಯ.

ಅವರ ವಿಶ್ವ ದರ್ಜೆಯ ಸಂಶೋಧನಾ ಪ್ರಕಟಣೆಗಳನ್ನು ಜಿಕೆವಿಕೆಯ ಗ್ರಂಥಾಲಯದಲ್ಲಿ ಪ್ರದರ್ಶನಕ್ಕಿಟ್ಟಿರುವುದೊಂದು ವಿಶೇಷ. ಅದು ವಿದ್ಯಾರ್ಥಿಗಳ ಗಮನ ಸೆಳೆದು ಪ್ರತಿಭಾವಂತರನ್ನು ರೂಪಿಸುವಲ್ಲಿ ಸಹಕಾರಿಯಾಗಲಿದೆ. 

ಪ್ರತಿಷ್ಟಿತ ವಿಭಾಗ – ಪ್ರಸಿದ್ಧ ವ್ಯಕ್ತಿಗಳು

ಜಿಕೆವಿಕೆಯ ಕೃಷಿ ಕಾಲೇಜಿನ ಸಸ್ಯ ರೋಗ ವಿಜ್ಞಾನ (ಪ್ಲಾಂಟ್ ಪೆಥಾಲಜಿ) ವಿಭಾಗವು ಒಂದು ಪ್ರತಿಷ್ಟಿತ ವಿಭಾಗವಾಗಿ ರೂಪುಗೊಂಡಿದೆ. ಅಲ್ಲಿ ಸೇವೆ ಸಲ್ಲಿಸಿದ ಹಲವು ಹಿರಿಯ ಪ್ರಾಧ್ಯಾಪಕರು ಶೈಕ್ಷಣಿಕ ವಾತಾವರಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಿಗೆ ಉತ್ತಮ ಬುನಾದಿಯನ್ನು ಹಾಕಿ ಕೊಟ್ಟಿದ್ದಾರೆ. ವೈರಾಲಜಿ ಸಂಶೋಧನೆಯ ಡಾ. ವಿ. ಮುನಿಯಪ್ಪ, ನೆಮಟಾಲಜಿ ಸಂಶೋಧನೆಯ ಡಾ. ಕೆ. ಕೃಷ್ಣಪ್ಪರವರನ್ನು ವಿವಿಯ ಎಲ್ಲರೂ ಇಂದಿಗೂ ನೆನೆಯುತ್ತಾರೆ.

3

ಕೋವಿಡ್ 19 ಕಾಯಿಲೆಗೆ ಕೊವ್ಯಾಕ್ಸಿನ್ (Covaxin) ಲಸಿಕೆ ಉತ್ಪಾದಿಸಿದ ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿಯ ಸಹ-ಸಂಸ್ಥಾಪಕರಾದ ಡಾ. ಕೃಷ್ಣ ಎಲ್ಲರವರು ಇದೇ ವಿಭಾಗದಲ್ಲಿ ಮಾಸ್ಟರ್ಸ್ ಪದವಿ ಪಡೆದವರು ಎಂಬ ಹೆಗ್ಗಳಿಕೆಯಿದೆ.

ಕೊನೆಯ ಮಾತು

ಕೆನಡಾ ದೇಶದವರಾದ ಡಾ. ಅಡಾಲ್ಪ್ ಲೆಹ್ಮನ್‍ರವರು ಮೈಸೂರು ಸಂಸ್ಥಾನದ ಕೃಷಿ ರಾಸಾಯನಿಕ ತಜ್ಞರಾಗಿ 1899ರಲ್ಲಿ ನೇಮಕಗೊಂಡು ಹಲವಾರು ಕಾರ್ಯಭಾರಗಳನ್ನು ನೆರವೇರಿಸಿದರು. ಅವರದೇ ಮಾತಿನಲ್ಲಿ ಹೇಳುವುದಾದರೆ ಕೃಷಿ ರಾಸಾಯನಿಕ ತಜ್ಞರ ಹುದ್ದೆಯ ಜೊತೆಗೆ ಕೃಷಿ ಕೀಟಗಳ ಹತೋಟಿ, ಶಿಲೀಂಧ್ರ ರೋಗಗಳ ಹತೋಟಿಗೆ ಶ್ರಮಿಸಿ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಿಂದ ಸೈ ಎನಿಸಿಕೊಂಡರು. ಹೆಬ್ಬಾಳದಲ್ಲಿ ಕೃಷಿ ಪ್ರಾಯೋಗಿಕ ಕ್ಷೇತ್ರ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಲೆಹ್ಮನ್‍ರವರು ತಮ್ಮ ಸೇವೆಯ ನಂತರ ಡಾ. ಲೆಸ್ಲಿ ಸಿ. ಕೋಲ್ಮನ್‍ರವರನ್ನು ಮೈಸೂರು ಸಂಸ್ಥಾನದಲ್ಲಿ ಕೃಷಿ ಕೀಟ ಮತ್ತು ಶಿಲೀಂಧ್ರ ರೋಗಗಳ ತಜ್ಞರನ್ನಾಗಿ ನೇಮಿಸಿಕೊಳ್ಳಲು ಶಿಫಾರಸ್ಸು ಮಾಡಿದರು. 

ಹಾಗೆ ನೇಮಕಗೊಂಡ ಕೆನಡಾ ದೇಶದವರಾದ ಡಾ. ಲೆಸ್ಲಿ ಸಿ. ಕೋಲ್ಮನ್‍ರವರು 1908ರಲ್ಲಿ ಮೈಸೂರು ಸಂಸ್ಥಾನಕ್ಕೆ ಆಗಮಿಸಿ 1934ರವರೆಗೆ ಸುಮಾರು 26 ವರ್ಷಗಳ ಕಾಲ ಕೃಷಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಕೃಷಿ ಇಲಾಖೆಯ ನಿರ್ದೇಶಕರಾಗಿ, ಹೆಬ್ಬಾಳದ ಕೃಷಿ ಶಾಲೆಯ ಪ್ರಾಂಶುಪಾಲರಾಗಿ ಅಗಾದವಾದ ಕೊಡುಗೆ ನೀಡಿದರು. ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸುತ್ತಿದ್ದ ಪಶುವೈದ್ಯಕೀಯ ಇಲಾಖೆ, ಜಾನುವಾರು ಇಲಾಖೆ ಹಾಗೂ ಅಮೃತ್ ಮಹಲ್ ಇಲಾಖೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

ಡಾ. ಲೆಹ್ಮನ್ ಮತ್ತು ಡಾ. ಕೋಲ್ಮನ್‍ರವರ ಕರ್ಮಭೂಮಿಯಾದ ಹೆಬ್ಬಾಳ ಕೃಷಿ ಕ್ಷೇತ್ರ ಮತ್ತು ಹೆಬ್ಬಾಳದ ಕೃಷಿ ಶಾಲೆಯು ಬೆಳದು ಹೆಮ್ಮರವಾಗಿ ಕೃಷಿ ಕಾಲೇಜಾಗಿ, ಕೃಷಿ ವಿಶ್ವವಿದ್ಯಾಲಯವಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಉತ್ತಮೋತ್ತಮ ಅಧಿಕಾರಿಗಳು, ಶಿಕ್ಷಕರು, ಸಂಶೋಧಕರು, ವಿಸ್ತರಣಾ ಮುಂದಾಳುಗಳು ದಕ್ಕಿದರು. ಅಲ್ಲೊಂದು ದೊಡ್ಡ ಚಿಂತಕರ ಚಾವಡಿಯೇ ಸದಾ ಇರುತ್ತಿತ್ತು. ಸದಾ ದೇಶ, ವಿದೇಶಗಳ ಸಂಶೋಧನೆಗಳ ಚರ್ಚೆಯಾಗುತ್ತಿತ್ತು. ಅಂತಹ ಪರಂಪರೆಯ ಕೊಂಡಿಯನ್ನು ಇಂದಿಗೂ ಕಾಯ್ದುಕೊಳ್ಳಲಾಗಿದೆ ಎಂಬುದು ಸಂತೋಷಕರ ವಿಷಯ. ಶೈಕ್ಷಣಿಕ ವಾತಾವರಣದ ಉತ್ತಮ ಪರಂಪರೆಯನ್ನು ಕಾಯ್ದುಕೊಂಡರೆ ದೇಶ, ಭಾಷೆ, ಜನಾಂಗಗಳನ್ನು ಕಟ್ಟಬಹುದಾಗಿದೆ. 

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...