ಹಿಡನ್‌ ಅಜೆಂಡಾ | ಸೆಕ್ಸ್‌ ಮತ್ತು ಪಾಲಿಟಿಕ್ಸ್‌ಗೂ ಏನು ಸಂಬಂಧ?

Date:

ಮಹಿಳೆಯರು ಸಂಪೂರ್ಣ ಸ್ವಾವಲಂಬನೆ ಪಡೆದರೆ, ಜಾತಿ ಎಂಬ ಇಡೀ ವ್ಯವಸ್ಥೆಯೇ ಕುಸಿದುಬೀಳುತ್ತೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಆರ್ಥಿಕ ಸ್ವಾವಲಂಬನೆಯು ಹೇಗೂ ಜಾತಿ ಎಂಬ ವ್ಯವಸ್ಥೆಗೆ ದೊಡ್ಡ ಪೆಟ್ಟು ಕೊಟ್ಟಿದೆ. ಅದರೊಂದಿಗೆ ಮಹಿಳೆಯರು ಸ್ವಾವಲಂಬಿಗಳಾಗುತ್ತಾ ಹೋದರೆ, ಅವರು ತಮ್ಮ ಆಯ್ಕೆಯನ್ನು ಚಲಾಯಿಸಲು ಪ್ರಾರಂಭಿಸಿದಾಗ, ನಾವು ಹೊಸ ನ್ಯಾಯಯುತ ಜಗತ್ತನ್ನೇ ಕಲ್ಪಿಸಿಕೊಳ್ಳಬಹುದು.

ಹಾಗೇ ಯೋಚಿಸಿ, ಸೆಕ್ಸ್‌ ಎಂಬ ಪದವು ನಿಮ್ಮ ಬಾಯಿಂದ ಕಡೆಯ ಬಾರಿ ಬಂದಿದ್ದು ಯಾವಾಗ? ತಕ್ಷಣವೇ ನೆನಪಾದರೆ, ನೀವು ಅದೃಷ್ಟವಂತರು. ಈ ಲೇಖನವನ್ನು ಓದುತ್ತಲೇ, ಸೆಕ್ಸ್‌ ಎಂಬ ಪದವನ್ನು ಗಟ್ಟಿಯಾಗಿ ಉಚ್ಛರಿಸುವ ಪ್ರಯತ್ನ ಮಾಡಿ. ಸುಲಭವಾಗಿ ಹೇಳಲು ಆಗುತ್ತಿದೆಯಾ? ಆಗುತ್ತಿಲ್ಲವೆಂದರೆ ಏಕೆ? ಸೆಕ್ಸ್‌ಗೂ ರಾಜಕೀಯಕ್ಕೂ ಏನು ಸಂಬಂಧ? ಸೆಕ್ಸ್‌ಗೂ ಜಾತಿಗೂ ಏನು ಸಂಬಂಧ? ಸೆಕ್ಸ್‌ಗೂ ಮತೀಯ ದ್ವೇಷಕ್ಕೂ ಏನು ಸಂಬಂಧ? ಸೆಕ್ಸ್‌ಗೂ ಶಿಕ್ಷಣಕ್ಕೂ ಏನು ಸಂಬಂಧ? ಸೆಕ್ಸ್‌ಗೂ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಪಾಲುದಾರಿಕೆಗೂ ಏನು ಸಂಬಂಧ? ಇವೆಲ್ಲವಕ್ಕೂ ನಿಜವಾಗಿಯೂ ಸಂಬಂಧವಿದೆಯಾ? ಖಂಡಿತ ಇದೆ. ಏನು ಸಂಬಂಧ ಎಂಬುದನ್ನು ನೋಡುವ ಪುಟ್ಟ ಪ್ರಯತ್ನ. ಒಂದು ಸಾವಿರ ಪದಗಳ ಲೇಖನದಲ್ಲಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಖಂಡಿತ ಸಾಧ್ಯವಿಲ್ಲ, ಆದರೆ ಕೆಲವು ಸೂಕ್ತ ಪ್ರಶ್ನೆಗಳನ್ನು ಮಾತ್ರ ಹುಟ್ಟುಹಾಕಬಹುದು.

ಲೈಂಗಿಕ ವಿಷಯಗಳ ಬಗ್ಗೆ ನಾವು ಸಾಮಾನ್ಯವಾಗಿ ಮಾತನಾಡುವುದಿಲ್ಲ. ಅದನ್ನು ಮಾತನಾಡುವುದು ಪಡ್ಡೆ ಹುಡುಗರು ಅಥವಾ ಹುಡುಗಿಯರು ಎಂಬ ನಂಬಿಕೆಯಿದೆ. ಸೆಕ್ಸ್‌ ಬಗ್ಗೆ ಮಾತನಾಡುವುದೇ ಕೆಟ್ಟದ್ದು ಎಂಬ ಅಭಿಪ್ರಾಯಗಳೂ ಕಡಿಮೆಯೇನಲ್ಲ. ಇನ್ನೂ ಕೆಲವರು ಇದರ ಬಗ್ಗೆ ಮಾತನಾಡಿದಾಗ, ಯಾಕಿಷ್ಟು ಮಹತ್ವ ಕೊಡ್ತೀರಿ ಅದರ ಬಗ್ಗೆ, ಬೇರೆ ವಿಷಯಗಳು ಇಲ್ಲವಾ ಎಂತಲೂ ಕೇಳಿದ್ದಾರೆ. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸುವವರ ಸಂಖ್ಯೆಯೂ ದೊಡ್ಡದೇ.

ಇದಕ್ಕೆ ಮೊದಲ ಮತ್ತು ಸರಳ ಕಾರಣ: ಇದರ ಬಗ್ಗೆ ಮಾತನಾಡಿ ರೂಢಿ ಇಲ್ಲದೇ ಇರುವುದು. ಅದೂ ಗಂಭೀರವಾಗಿ ಮಾತನಾಡುವುದಂತೂ ನಮ್ಮ ಸಮಾಜದಲ್ಲಿ ವಿರಳ. ಹಾಗಾಗಿ ಅದರ ಬಗ್ಗೆ ಸರಳವಾಗಿ ಮಾತನಾಡುವುದು ಅನೇಕರಿಗೆ ಕಷ್ಟ. ಆದರೆ ತಮಗೇ ರೂಢಿ ಇಲ್ಲ, ಅದರ ಬಗ್ಗೆ ಮಾತನಾಡಲು ಹಿಂಜರಿಕೆ ಎಂಬುದನ್ನು ನಾವು ಒಪ್ಪಿಕೊಳ್ಳುವುದಿಲ್ಲ, ಅದಕ್ಕೆ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತೇವೆ. ಅಂದಹಾಗೆ, ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಈ ಪದಗಳನ್ನು ಗಟ್ಟಿಯಾಗಿ ಹೇಳುವ ಎಕ್ಸರ್‌ ಸೈಜ್‌ ಮಾಡಿಸಲಾಗುತ್ತದೆ. ಸೆಕ್ಸ್‌ ಎಂಬ ಪದವನ್ನು ಬಾಯಿಂದ ಹೊರಡಿಸುವುದು ಅನೇಕ ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಕಷ್ಟ ಎಂದಿರುವಾಗ ಸಾಮಾನ್ಯ ಜನರ ಪಾಡೇನು? ಹಾಗಾಗಿ, ಈ ಮೊದಲ ಕಾರಣವನ್ನೂ ಒಪ್ಪಿಕೊಳ್ಳುವ. ಇಲ್ಲಿ ಮಾತನಾಡದೇ ಇರುವುದರ ಹಿಂದೆ ಅಂಥ ಯಾವುದೇ ʻದುಷ್ಟʼ ಕಾರಣಗಳು ಇರುವುದಿಲ್ಲ.

askmen lead image

ಇನ್ನು ಯಾಕೆ ಮಾತನಾಡಬೇಕು ಎಂಬುದಕ್ಕೆ ಸರಳ ಉತ್ತರಗಳನ್ನು ಹುಡುಕುವ. ಮೊದಲನೆಯದಾಗಿ, ಹೌದು, ಇದೊಂದೇ ವಿಷಯದ ಬಗ್ಗೆ ಸದಾಕಾಲ ಮಾತನಾಡಬೇಕಿಲ್ಲ. ಇದಕ್ಕಿಂತ ಮಹತ್ವದ ವಿಷಯಗಳೂ ಇವೆ. ಆ ವಾದವನ್ನು ಒಪ್ಪಿಕೊಳ್ಳುವ. ಆದರೆ, ಮಾತನಾಡುವ ಅವಶ್ಯಕತೆ ಇದೆ. ಏಕೆಂದರೆ, ಮೊದಲನೆಯದಾಗಿ ಇದೂ ಒಂದು ಮಹತ್ವದ ವಿಷಯವೇ, ಇದರ ಬಗ್ಗೆ ಏಕಾಂತದಲ್ಲಿ ಅಷ್ಟೊಂದು ಚಿಂತಿಸುತ್ತೇವೆ ಎಂದಾಗ ಮಾತನಾಡುವುದು ಏಕೆ ಬೇಡ? ಹಾಗೂ ಸೆಕ್ಸ್‌ ಬಗ್ಗೆ ಮಾತನಾಡುವುದು ಆರೋಗ್ಯಕರವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಸಂಬಂಧಗಳಲ್ಲಿ, ಜೀವನದಲ್ಲಿ ಸೆಕ್ಸ್‌ ಎಂಬುದು ಅಷ್ಟೊಂದು ಮಹತ್ವದ ಪಾತ್ರವಾಗಿರುವಾಗ ಮಾತನಾಡದೇ ಇದ್ದರೆ ಅದೊಂದು ಸಮಸ್ಯೆಯಾಗಿ ಪರಿಣಮಿಸುತ್ತದೆ. ಆಯಾ ವ್ಯಕ್ತಿಗಳ ಬಯಕೆಗಳು, ಅವರು ಅನುಭವಿಸಿದ ಆಘಾತಗಳು, ತಪ್ಪು ಕಲ್ಪನೆಗಳು ಸಂಬಂಧಗಳ ಮೇಲೆ, ಒಟ್ಟಾರೆ ಜೀವನದ ಮೇಲೆ ಹಾಗೂ ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತಿರುತ್ತವೆ ಹಾಗಾಗಿ ಮಾತನಾಡುವುದು ಅವಶ್ಯಕ. ಅದರ ಬಗ್ಗೆ ಮಾತನಾಡುವುದು ನಮ್ಮನ್ನು ನಾವು ಅರಿತುಕೊಳ್ಳುವ ಒಂದು ಸಾಧನವಾಗಿಯೂ ಪರಿಣಮಿಸಬಹುದು.

ಇವು ಸರಳವಾದ ಕಾರಣಗಳು. ಆದರೆ ಇಷ್ಟೇ ಸರಳವಾಗಿದ್ದರೆ ಹೆಚ್ಚೆಚ್ಚು ಮಾತನಾಡಿ ವಿಷಯವನ್ನು ಅರಿತುಕೊಳ್ಳಬಹುದಿತ್ತು. ಇದರ ಹಿಂದೆ ಅತ್ಯಂತ ದುಷ್ಟ ಕಾರಣಗಳೂ ಇರುತ್ತವೆ. ಅವನ್ನು ನೋಡುವ ಪ್ರಯತ್ನ ಮಾಡುವ.

ಸೆಕ್ಸ್‌ ಕೇವಲ ಒಂದು ವೈಯಕ್ತಿಕ ವಿಷಯವಾಗಿರುವುದಿಲ್ಲ. ಸೆಕ್ಸ್‌ ಅನ್ನು ನಾವು ಹೇಗೆ ನೋಡುತ್ತೇವೆ ಎಂಬುದು ನಮ್ಮ ಸಮಾಜವನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿಂದೆ ಬಲಪಂಥದ ಬಗ್ಗೆ ಲೇಖನದಲ್ಲಿ ನೋಡಬಹುದಾದಂತೆ, ಸಮಾಜದಲ್ಲಿರುವ ಪ್ರಬಲ ಶಕ್ತಿಗಳು ಸದಾಕಾಲ ಹಲವಾರು ವರ್ಗಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತವೆ. ಅದು ಕೇವಲ ಸಾಮಾಜಿಕವಾಗಿ ಹಾಗೂ ಅರ್ಥಿಕವಾಗಿ ಅಷ್ಟೇ ಅಲ್ಲದೇ, ಜನಸಮೂಹದ ಮಾನಸಿಕತೆಯನ್ನೂ ನಿಯಂತ್ರಿಸುವ ಪ್ರಯತ್ನ ನಿರಂತರವಾಗಿರುತ್ತದೆ. ಒಂದು ವೇಳೆ ಜನರು ಆರ್ಥಿಕವಾಗಿ ಜನರು ಸ್ವಾವಲಂಬಿಗಳಾದರೆ ಈ ಪ್ರಬಲ ಶಕ್ತಿಗಳಿಗೆ ಬಿಟ್ಟಿ ಚಾಕರಿ ದೊರೆಯುವುದಿಲ್ಲ, ಆರ್ಥಿಕ ಸ್ವಾವಲಂಬನೆ ಬಂದ ಕೂಡಲೇ, ಈ ಪ್ರಬಲ ಶಕ್ತಿಗಳ ಕಂಟ್ರೋಲ್‌ ಹೊರಟುಹೋಗುತ್ತದೆ. ಅದೇ ರೀತಿಯಲ್ಲಿ ನಮ್ಮ ಮಾನಸಿಕತೆಯನ್ನು, ನಾವು ಸೆಕ್ಸ್‌ ಬಗ್ಗೆ ಮಾತನಾಡುವ ಬಗೆಯನ್ನೂ ಈ ಪ್ರಬಲ ಶಕ್ತಿಗಳು ನಿಯಂತ್ರಿಸುವ ಪ್ರಯತ್ನ ಮಾಡುತ್ತಿರುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Is Sex Healthy

ಸಮಾಜವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನ ಮಾಡುವ ಶಕ್ತಿಗಳ ಒಂದು ಮಹತ್ವದ ಅಂಶ; ಆ ಶಕ್ತಿಗಳಿಗೆ ಸದಾಕಾಲ ಕಾಡುವ ಇನ್‌ಸೆಕ್ಯುರಿಟಿ ಅಥವಾ ಅಭದ್ರತೆ ಜನರು ಸ್ವತಂತ್ರವಾಗಿ ಬಿಟ್ಟುಬಿಟ್ಟರೆ ಏನು ಮಾಡಿಬಿಡುತ್ತಾರೋ, ಸಮಾಜವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೋ, ತಮ್ಮ ನಿಯಂತ್ರಣ ತಪ್ಪುವುದರಿಂದ ತಮ್ಮ ಎಲ್ಲ ಶಕ್ತಿಯನ್ನು ಕಳೆದುಕೊಳ್ಳುವ ಭಯ. ಅರ್ಥಿಕ ವ್ಯವಸ್ಥೆಯನ್ನು ಇದನ್ನು ಸರಳವಾಗಿ ಅರ್ಥೈಸಿಕೊಳ್ಳಬಹುದು. ಕಾರ್ಮಿಕರಿಗೆ ಅತ್ಯಂತ ಕಡಿಮೆ ಸಂಬಳ ನೀಡಿ, ಅವರ ಹೆಚ್ಚಿನ ಅವಶ್ಯಕತೆಗಳಿಗೆ ತಮ್ಮಿಂದ ಸಾಲ ಪಡೆಯುವಂತೆ, ಅವರನ್ನು ಸಾಲಗಾರರನ್ನಾಗಿ, ಸಾಲದ ಪಾಪವನ್ನು ಹೊತ್ತಿಸಿ ಇಡೀ ಜನಸಮೂಹವನ್ನೇ ನಿಯಂತ್ರಣ ಮಾಡುವುದು. ಆರ್ಥಿಕ ಸ್ವಾವಲಂಬನೆ ಸಿಗಬಹುದಾದ ಸಾಧನಗಳನ್ನು, ಕಾರ್ಯಕ್ರಮಗಳನ್ನು ಬೇರೆ ಬೇರೆ ಕಾರಣ ನೀಡಿ ವಿರೋಧಿಸುವುದು ನಡೆಯುತ್ತಲೇ ಇರುತ್ತದೆ. ಅದೇ ರೀತಿ, ಈ ನಿಯಂತ್ರಿಸುವ ಪ್ರಯತ್ನ ಸಮಾಜದ ಬೇರೆ ಬೇರೆ ಆಯಾಮದಲ್ಲೂ ಇದ್ದೇ ಇರುತ್ತದೆ. ಆರ್ಥಿಕ ನಿಯಂತ್ರಣವು ವರ್ಗ ಮತ್ತು ಜಾತಿಯ ಸಂಬಂಧಿಸಿದ ವಿಷಯವಾಗಿರುವ, ವಿದ್ಯಮಾನವಾಗಿರುವ ಸಮಯದಲ್ಲಿಯೇ, ಇಡೀ ವಿಶ್ವದಲ್ಲಿ ತುಳಿತಕ್ಕೊಳಗಾಗಿರುವ ಇನ್ನೊಂದು ದೊಡ್ಡ ವರ್ಗವಾದ ಮಹಿಳೆಯರನ್ನು ನಿಯಂತ್ರಿಸುವುದಕ್ಕೆ ಜಾತಿಗೆ, ವರ್ಗಕ್ಕೆ, ಸಮಾಜದ ಸೈಕಾಲಜಿಗೆ ನಿಕಟವಾದ ಸಂಬಂಧವಿದೆ.

ಮಹಿಳೆಯರು ಸಂಪೂರ್ಣ ಸ್ವಾವಲಂಬನೆ ಪಡೆದರೆ, ಜಾತಿ ಎಂಬ ಇಡೀ ವ್ಯವಸ್ಥೆಯೇ ಕುಸಿದುಬೀಳುತ್ತೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ. ಆರ್ಥಿಕ ಸ್ವಾವಲಂಬನೆಯು ಹೇಗೂ ಜಾತಿ ಎಂಬ ವ್ಯವಸ್ಥೆಗೆ ದೊಡ್ಡ ಪೆಟ್ಟು ಕೊಟ್ಟಿದೆ. ಅದರೊಂದಿಗೆ ಮಹಿಳೆಯರು ಸ್ವಾವಲಂಬಿಗಳಾಗುತ್ತಾ ಹೋದರೆ, ಅವರು ತಮ್ಮ ಆಯ್ಕೆಯನ್ನು ಚಲಾಯಿಸಲು ಪ್ರಾರಂಭಿಸಿದಾಗ, ನಾವು ಹೊಸ ನ್ಯಾಯಯುತ ಜಗತ್ತನ್ನೇ ಕಲ್ಪಿಸಿಕೊಳ್ಳಬಹುದು. ಇಂಗ್ಲೀಷಿನಲ್ಲಿ ಇತ್ತೀಚಿಗೆ ಒಂದು ಪದ ಹೆಚ್ಚೆಚ್ಚು ಕೇಳಿಬರುತ್ತಿದೆ; intersectional feminism. (ಇಂತಹ ಪದಗಳನ್ನು ತುಂಬಾ ಕೇರ್‌ಫುಲ್ ಆಗಿ ಬಳಸಬೇಕು ಎಂಬುದು ನನ್ನ ಅನಿಸಿಕೆ. ಇಂತಹ ಕ್ಲಿಷ್ಟ ಮತ್ತು ಕೆಲವೇ ಜನರಿಗೆ ಅರ್ಥವಾಗುವಂತಹ ಪದಗಳನ್ನು ಬಳಿಸಿದ ತಕ್ಷಣ ನಾವು ಕೇಳುಗರ, ಓದುಗರ ದೊಡ್ಡ ಒಂದು ವರ್ಗವನ್ನು ಕಳೆದುಕೊಂಡುಬಿಡುತ್ತೇವೆ. ಇರಲಿ) ಮಹಿಳೆಯ ಮೇಲಿನ ಶೋಷಣೆಯು ಕೇವಲ ಒಂದೇ ತೆರನಾಗಿರುವುದಿಲ್ಲ. ಹಾಗೂ ಎಲ್ಲ ಮಹಿಳೆಯರ ಮೇಲೆ ಒಂದೇ ತೆರನಾದ ಶೋಷಣೆಯೂ ಆಗುತ್ತಿರುವುದಿಲ್ಲ. ಆಯಾ ಮಹಿಳೆಯರ ವರ್ಗ(ಆರ್ಥಿಕತೆ), ಸಮುದಾಯ, ಲೈಂಗಿಕತೆ, ಅವರ ಸಾಮರ್ಥ್ಯ, ಮುಂತಾದ ಅನೇಕ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗೂ ಪ್ರಬಲ ಶಕ್ತಿಗಳು ಮಹಿಳೆಯರನ್ನು, ಅವರ ಲೈಂಗಿಕತೆಯನ್ನು, ಅವರ ಆಯ್ಕೆ ಮಾಡುವ ಶಕ್ತಿಯನ್ನು ತಮಗೆ ಒಂದು ಸವಾಲು ಎಂತಲೇ ಭಾವಿಸುತ್ತವೆ. ಎಂತಹ ಸಾಮಾಜಿಕ, ಆರ್ಥಿಕ ಹಿಡಿತ ಹೊಂದಿದ್ದರೂ, ಮಹಿಳೆಯರ ಮೇಲೆ, ಅವರ ಆಯ್ಕೆ ಮಾಡುವ ಶಕ್ತಿಯ ಮೇಲೆ ಹಿಡಿತ ಹೊಂದಿಲ್ಲದೇ ಇದ್ದರೆ, ಆ ಹಿಡಿತ ಅಪೂರ್ಣವಾಗಿರುತ್ತದೆ. ಹಾಗೂ ಮಹಿಳೆಯರ ಸ್ವಾತಂತ್ರ್ಯಕ್ಕೆ ಹೇಗೆ ಆರ್ಥಿಕ ಸ್ವಾತಂತ್ರ್ಯ ಸ್ವಾವಲಂಬನೆ ಮುಖ್ಯವೋ, ಸೆಕ್ಸ್‌ ಬಗ್ಗೆ ಇರುವ ಚಿಂತನೆಯೂ, ಅದರ ಬಗ್ಗೆ ಮಾತನಾಡುವ, ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರವೂ ಮುಖ್ಯ.

ಮಹಿಳೆಯರೆಲ್ಲರೂ ಆರೋಗ್ಯಕರವಾಗಿ, ಮುಕ್ತವಾಗಿ ಸೆಕ್ಸ್‌ ಬಗ್ಗೆ ಮಾತನಾಡುವ ಸನ್ನಿವೇಶವನ್ನು ಊಹಿಸಿ ನೋಡಿ, ಈ ವಾಕ್ಯವನ್ನು ಓದಿಯೇ ಹೆಚ್ಚಿನ ಗಂಡಸರಿಗೆ, ಮಾನಸಿಕವಾಗಿ ಪುರಷಾಧಿಪತ್ಯದ ಅಡಿಯಲ್ಲಿ ಜೀವಿಸುತ್ತಿರುವ, ಯೋಚಿಸುತ್ತಿರುವ ಎಲ್ಲರಿಗೂ ಹೆದರಿಕೆ, ಇನ್ಸೆಕ್ಯುರಿಟಿ. ಅಭದ್ರತೆ ಉಂಟಾಗುವುದು ಸಹಜವೇ. ಆ ಕಾರಣಕ್ಕಾಗಿಯೇ, ಕೋಲಾರದ ಎಂಪಿಯಾಗಿದ್ದ ಎಸ್‌ ಮುನಿಸ್ವಾಮಿ ಒಬ್ಬ ಬಡ ಕುಟುಂಬದ ಮಹಿಳೆಯ ಮೇಲೆ ರೇಗಾಡಿದ್ದು. ಆ ಮಹಿಳೆಯ ಹಣೆಯ ಮೇಲೆ ಕುಂಕುಮ ಕಾಣಿಸದೇ ಇದ್ದ ಕಾರಣಕ್ಕೇ ಅವನಿಗೆ ಯಾಕೆ ಅಷ್ಟು ಸಿಟ್ಟು ಬಂತು. ಆ ವ್ಯಕ್ತಿಯೇನು ʻಸಂಸ್ಕಾರʼದ ವಿಷಯದ ಬಗ್ಗೆ ಯೋಚಿಸುತ್ತಿದ್ದನೆ? (ಸಂಸ್ಕಾರ ಎಂಬ ಪದವನ್ನು ಲಘುವಾಗಿ ಬಳಸಿದ್ದೇನೆ. ಸಂಸ್ಕಾರದ ಬಗ್ಗೆಯೇ ದೀರ್ಘ ಚರ್ಚೆ ಅಗತ್ಯವಿದೆ) ಮಹಿಳೆಯರ ಕುಂಕುಮ ಹಾಕದೇ ಇದ್ದರೆ ಸಿಟ್ಟುಮಾಡುವ, ಹಾಕಿಕೊಳ್ಳಬೇಕು ಎಂದು ತಾಕೀತು ಮಾಡುವ ಅಧಿಕಾರ ಅವನಿಗೆ ಯಾರು ಕೊಟ್ಟರು? ದೇಶದ ಸಂವಿಧಾನವಂತೂ ಕೊಟ್ಟಿಲ್ಲ, ಒಬ್ಬ ಎಂಪಿ ಎಂಬ ಕಾರಣಕ್ಕೂ ಸಿಕ್ಕಿಲ್ಲ. ಮತ್ಯಾಕೆ ಅವನು ಸಿಟ್ಟು ಮಾಡಿಕೊಂಡ? ಉತ್ತರ: ಭಯ. ಎಲ್ಲಿ ಬಿಟ್ಟುಹೋದಾರೋ ಎಂಬ ಭಯ, ಎಲ್ಲಿ ತಮಗೆ ಸರಿ ಅನ್ನಿಸಿದ ಹಾಗೆ ನಡೆದುಕೊಂಡಾರೋ ಎಂಬ ಭಯ, ಪುರುಷನಾಗಿ, ಪ್ರಬಲ ಶಕ್ತಿಯ ಭಾಗವಾಗಿ ತನ್ನೆಲ್ಲ ಶಕ್ತಿಯನ್ನು ಕಳೆದುಕೊಳ್ಳವ ಭಯ. ಅದರ ಮೂಲದಲ್ಲಿ ಲೈಂಗಿಕತೆ ಕೂಡ ಇದೆ. ಅದರ ಮೂಲದಲ್ಲಿಯೇ ಎಲ್ಲಿ ಮಹಿಳೆ ತನ್ನ ಲೈಂಗಿಕ ಆಯ್ಕೆಯನ್ನು ಚಲಾಯಿಸಿಬಿಟ್ಟರೆ ಎಂಬ ಅವ್ಯಕ್ತ ಭಯವಿದೆ.

sex educarion 1

ಲೈಂಗಿಕ ಶಿಕ್ಷಣ ಎಂದ ಕೂಡಲೇ ಬೆಚ್ಚಿಬೀಳುವ ಶಕ್ತಿಗಳಿಗೆ, ಮೊದಲನೆಯದಾಗಿ ಲೈಂಗಿಕ ಶಿಕ್ಷಣ ಎಂದರೇನು ಎಂಬುದು ಗೊತ್ತಿರುವುದಿಲ್ಲ. ಲೈಂಗಿಕ ಶಿಕ್ಷಣ ಕೊಟ್ಟ ಕೂಡಲೇ ಹೆಣ್ಣುಮಕ್ಕಳೆಲ್ಲರೂ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ ಎಂಬ ಭಯ. ಯಾರೋ ಎಲ್ಲೋ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಇವರಿಗೇನು ಎಂದು ಕೇಳಬಹುದು. ಆ ವಿಚಾರವೇ ಬೆಚ್ಚಿಬೀಳಿಸುವಂಥದ್ದು, ಅದೇ ತಮ್ಮ ನಿಯಂತ್ರಣವನ್ನು ಕಸಿದುಕೊಳ್ಳುವಂಥದ್ದು ಎಂಬುದು ಇವರಿಗೆ ತಿಳಿದಿದೆ. ಪ್ರಬಲ ಶಕ್ತಿಗಳಿಗೆ ಆರೋಗ್ಯಕರ ಸಮಾಜದ ಯಾವ ಪರಿಕಲ್ಪನೆಯೂ ಇರುವುದಿಲ್ಲ, ಈ ಶಕ್ತಿಗಳಿಗೆ ನ್ಯಾಯ ಎಂಬುದು ಅಪರಿಚಿತ ಪದ. ಯಾವ ʻಸಂಸ್ಕಾರʼದ, ಸಂಸ್ಕೃತಿಯ, ಪರಂಪರೆಯ ಆಳವಾದ ತಿಳಿವಳಿಕೆ ಇಲ್ಲದಿದ್ದರೂ, ಅವೆಲ್ಲವನ್ನೂ ಅವರು ನಿಯಂತ್ರಿಸುವುದಕ್ಕಷ್ಟೇ ಬಳಸುವುದು. ಈ ಭಯವೇ ತಾರತಮ್ಯವನ್ನು ಸೃಷ್ಟಿಸುತ್ತದೆ, ಈ ಭಯವೇ, ʻನಾವುʼ ಮತ್ತು ʻಅವರುʼ ಎಂಬ ಭಾವವನ್ನು ಸೃಷ್ಟಿಸುತ್ತದೆ, ʻನಮ್ಮದುʼ ಎಂಬುದನ್ನು ಮುಂದುವರೆಸಿಕೊಂಡು ಹೋಗಲಿ, ತಲೆಮಾರಿನಿಂದ ಬಂದ ಆಸ್ತಿಯನ್ನು ʻತಮ್ಮʼ ಬಳಿಯೇ ಉಳಿದುಕೊಳ್ಳಲಿ, ʻನಮ್ಮʼ ʻತಳಿʼ ಪರಿಶುದ್ಧವಾಗಿರಲಿ, ನಮ್ಮ ಆಳ್ವಿಕೆ ನಿರಂತರವಾಗಿರಲಿ ಎಂಬ ಶಕ್ತಿಯು ಇದನ್ನು ನಿಯಂತ್ರಿಸುತ್ತದೆ. ಹಾಗೂ ಇದು ಬಲಪಂಥದ ರಾಜಕೀಯದ ಮುಖ್ಯ ಲಕ್ಷಣವೂ ಹೌದು. ನಾವು ಈ ಮುಂಚೆ ಚರ್ಚಿಸಿದಂತೆ, ಬಲಪಂಥದ ರಾಜಕೀಯದ ಮೂಲಭೂತ ಅಂಶವು ಅದರ ಇನ್‌ಸೆಕ್ಯುರಿಟಿ/ಅಭದ್ರತೆ. ಅದರಲ್ಲಿ ಬಹುತೇಕ ಅಭದ್ರತೆಗಳು ಮಹಿಳೆಯ ಸ್ವಾತಂತ್ರ್ಯಕ್ಕೆ ಅಂಟಿಕೊಂಡಿರುತ್ತವೆ.

ದೇಶದಲ್ಲಿ ಆದ ದೊಡ್ಡ ಗಲಭೆಗಳನ್ನೇ ನೋಡಿ, ಎರಡು ಸಮುದಾಯಗಳ ನಡುವೆ ದ್ವೇಷ ಇದ್ದಾಗ, ಒಬ್ಬರನ್ನೊಬ್ಬರು ಕೊಲ್ಲುತ್ತಿರುವಾಗ ಅಲ್ಲಿರುವ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಏಕೆ ಆಯಿತು ಎಂಬ ಪ್ರಶ್ನೆ ಮೂಡಬೇಕಲ್ಲವೇ? ಇದು ಕೇವಲ ಇತ್ತೀಚಿನ ಬೆಳವಣಿಗೆ ಅಲ್ಲ, ಪುರಾತನ ಕಾಲದಿಂದಲೂ ಯುದ್ಧಗಳಾದಾಗ, ಯುದ್ಧದಲ್ಲಿ ಗೆದ್ದವರು ಸೋತವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದೆ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಮಹಿಳೆಯರ ಮೇಲಿನ ದೌರ್ಜನ್ಯ ಹೇಗೆ ಸೇಡಿನ, ಹಿಂಸೆಯ ಅಸ್ತ್ರವಾಯಿತು? ಹಾಗೂ ಇದನ್ನು ಕೇವಲ ಗಲಭೆಯಲ್ಲಿ ಪಾಲ್ಗೊಂಡವರ ವಿಷಯವಲ್ಲ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರ ವಿಷಯವಲ್ಲ; ಸಮಾಜವು ಸೆಕ್ಸ್‌ ಅನ್ನು ಹೇಗೆ ನೋಡುತ್ತದೆ ಎಂಬುದರ ಪರಿಣಾಮವಾಗಿಯೇ ಗಲಭೆಗಳಲ್ಲಿ ಅತ್ಯಾಚಾರವನ್ನೂ ಅಸ್ತ್ರವನ್ನಾಗಿಸಿಕೊಂಡಿದ್ದು.

GettyImages

ಇದಷ್ಟೇ ಅಲ್ಲ, ಒಂದು ವರದಿಯ ಪ್ರಕಾರ ಭಾರತದಲ್ಲಿ ಬಹುತೇಕ ಅರ್ಧದಷ್ಟು ಮಕ್ಕಳು ಒಂದಲ್ಲ ಒಂದು ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. (ಬೇರೆ ಬೇರೆ ವರದಿಗಳು ಬೇರೆಬೇರೆ ಅಂಕಿಅಂಶಗಳನ್ನು ನೀಡುತ್ತವೆ ಆದರೆ ಗಣನೀಯ ಪ್ರಮಾಣದಲ್ಲಿ ಮಕ್ಕಳ ಮೇಳೆ ಲೈಂಗಿಕ ದೌರ್ಜನ್ಯ ನಡೆಯುತ್ತೆ ಎಂಬುದು ನಿರ್ವಿವಾದ) ಅವರು ಒಂದು ವೇಳೆ ತಮ್ಮ ಟ್ರಾಮಾ ಬಗ್ಗೆ, ತಾವು ಅನುಭವಿಸಿದ ನೋವು, ಆಘಾತದ ಬಗ್ಗೆ ಮಾತನಾಡದೇ ಇದ್ದಲ್ಲಿ, ಯಾರೊಂದಿಗೂ ತೋಡಿಕೊಳ್ಳದೇ ಇದ್ದಲ್ಲಿ, ಆರೋಗ್ಯಕರ ಜೀವನವನ್ನು, ಆರೋಗ್ಯಕರ ಸಂಬಂಧವನ್ನು ನಡೆಸುವುದಾದರೂ ಹೇಗೆ?

ಸೆಕ್ಸ್‌ ಬಗ್ಗೆ ಮಾತನಾಡಲು ಇನ್ನೊಂದು ಕಾರಣ ನೋಡಿ. ಒಂದೆಡೆ ಮಕ್ಕಳ ಕೈಯಲ್ಲಿ ಸ್ಕ್ರೀನ್‌ ಕೊಟ್ಟು, ನಿಮಗೆ ಬೇಕಾದಷ್ಟು ಪಾರ್ನ್‌ ನೋಡಿ ಎಂದು ಅನುಕೂಲ ಮಾಡಿಕೊಟ್ಟಿದ್ದೇವೆ, ಇನ್ನೊಂದೆಡೆ ಸೆಕ್ಸ್‌ ಬಗ್ಗೆ ಒಂದು ಪದವನ್ನೂ ಮಾತನಾಡಕೂಡದು ಎಂದು ಎಚ್ಚರಿಕೆ ನೀಡಿದ್ದೇವೆ. ಇಂತಹ ಸಂದರ್ಭದಲ್ಲಿ ಅವರು ಸೆಕ್ಸ್‌ ಬಗ್ಗೆ ಸಕಾರಾತ್ಮಕವಾದ ಭಾವನೆ ಮೂಡಿಸಿಕೊಳ್ಳುವುದು ಎಷ್ಟು ಕಷ್ಟ ಎಂದು ಊಹಿಸಬಹುದು. ಅದು ಯಾವ ರೀತಿಯಲ್ಲಿ ಇಡೀ ಸಮಾಜದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಿದ ತಜ್ಞರೇ ಹೇಳಬಹುದು.

ಸೆಕ್ಸ್‌ ಬಗ್ಗೆ ಮಾತನಾಡದೇ ಇರುವಾಗ, ನಮ್ಮೊಳಗಿನ ಅಸೂಯೆ, ನೈಸರ್ಗಿಕವಾದ ದೈಹಿಕ ಬಯಕೆ ಮುಂತಾದವೆಲ್ಲ ನಕಾರಾತ್ಮಕ ತಿರುವು ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಸೆಕ್ಸ್‌ ಎಂದರೇ ಕೆಟ್ಟದ್ದು ಎಂದು ಅನ್ನಿಸಿದರೆ, ಪುರುಷರು ಮಹಿಳೆಯರನ್ನು ದ್ವೇಷಿಸುವ ಹಾಗೂ ಮಹಿಳೆಯರು ಪುರುಷರನ್ನು ದ್ವೇಷಿಸುವ ವಾತಾವರಣ ಸೃಷ್ಟಿಯಾಗಬಹುದು. ಮಹಿಳಾ ದ್ವೇಷವನ್ನು ನಾವು ಬೇರೆ ಬೇರೆ ರೀತಿಯಲ್ಲಿ ನೋಡುತ್ತಲೇ ಇರುತ್ತೇವೆ. ಮಹಿಳೆಯು ʻಸಮಾಜʼವು ನಿಗದಿಪಡಿಸಿದ ವರ್ತನೆಯಿಂದ ಒಂದು ಚೂರು ಆಚೀಚೆ ವರ್ತಿಸಿದರೂ, ಅವಳನ್ನು ಬೇರೆಬೇರೆ ಹೆಸರಿನಿಂದ ಕರೆಯುವ ರೂಢಿ ನಮ್ಮಲ್ಲಿದೆ. ಆ ಮಹಿಳಾ ದ್ವೇಷ ಪುರುಷರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ತನ್ನ ಆಯ್ಕೆಯನ್ನು ತನ್ನ ವಿವೇಚನೆಯಿಂದ ಬಳಸುವ ಪ್ರತಿಯೊಬ್ಬ ಮಹಿಳೆಯೂ ಪಿತೃಪ್ರಧಾನ ವ್ಯವಸ್ಥೆಗೆ ಸವಾಲಾಗೇ ಪರಿಣಮಿಸುತ್ತಾಳೆ. ಹಾಗಾಗಿಯೇ, ಶಕ್ತಿ ಯೋಜನೆ ಜಾರಿಯಾದ ಕೂಡಲೇ ಮಹಿಳೆಯರನ್ನು, ಯೋಜನೆಯನ್ನು ಜರಿಯಲು ಪ್ರಾರಂಭಿಸಿದವು. ಈ ಇನ್‌ಸೆಕ್ಯೂರಿಟಿ ಅಂದರೆ ಅವ್ಯಕ್ತ ಅಭದ್ರತೆಯಿಂದ ಬಳಲುತ್ತಿರುವ ಪ್ರಬಲ ಶಕ್ತಿಗಳು.

ಇದನ್ನೂ ಓದಿ ಶಕ್ತಿ ಯೋಜನೆಗೆ 2 ವರ್ಷ: 474.82 ಕೋಟಿ ಮಹಿಳೆಯರ ಉಚಿತ ಪ್ರಯಾಣ

ಮಹಿಳೆಯರು ಹಾಗೂ ಸಮಾಜದ ಎಲ್ಲ ಜನರು ಸೆಕ್ಸ್‌ ಬಗ್ಗೆ ಮಾತನಾಡದಂತೆ ತಡೆಯುವ, ಜನರು ತಮ್ಮ ವಿವೇಕವನ್ನು ಬಳಸದಂತೇ ತಡೆಯುವ ಶಕ್ತಿಗಳು ಕೆಲಸ ಮಾಡುತ್ತಲೇ ಇರುತ್ತವೆ, ಅವನ್ನು ಹಿಮ್ಮೆಟ್ಟಿಸಬೇಕೆಂದರೆ, ನಾವು ಮಾತನಾಡಬೇಕಾಗುತ್ತದೆ. ಸೆಕ್ಸ್‌ ಬಗ್ಗೆ ಆರೋಗ್ಯಕರವಾದ ಚರ್ಚೆ ಹೆಚ್ಚಿಸಬೇಕಾಗುತ್ತದೆ.

ಅಂದ ಹಾಗೆ, ಕಳೆದ ದಶಕದಲ್ಲಿ ಪರಿಸ್ಥಿತಿ ಒಂದಿಷ್ಟು ಬದಲಾಯಿಸಿದೆ. ಕೈಯಲ್ಲಿ ಸ್ಮಾರ್ಟ್‌ಫೋನ್‌ ಬಂದಿದ್ದರಿಂದ, ಇಂಟರ್‌ನೆಟ್‌ ಸೌಲಭ್ಯ ಸಿಕ್ಕಿದ್ದರಿಂದ ಮಾಹಿತಿಯ ಕೊರತೆಯೇನೂ, ಸೆಕ್ಸ್‌ ಬಗ್ಗೆ ತಪ್ಪು, ದೋಷಪೂರಿತ ಮಾಹಿತಿಯೊಂದಿಗೆ ಆರೋಗ್ಯಕರ ಚರ್ಚೆಯೂ ಹೇರಳವಾಗಿ ಕಾಣಸಿಗುತ್ತದೆ. ಅನೇಕ ಮನಃಶಾಸ್ತ್ರಜ್ಞರು ಇದರ ಬಗ್ಗೆ ಚರ್ಚಿಸುತ್ತಿದ್ದಾರೆ. ಆ ಆರೋಗ್ಯಕರ ಚರ್ಚೆಗಳನ್ನು ಗುರುತಿಸುವುದು, ಹುಟ್ಟುಹಾಕುವುದು ಕರ್ತವ್ಯ. ಯಾರೆಲ್ಲ ಈ ಚರ್ಚೆಗಳನ್ನು ವಿರೋಧಿಸುತ್ತಾರೋ, ಅವರು ಸಮಾಜವನ್ನು ಹಿಂದಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅರಿಯೋಣ. ಚೂರು ಧೈರ್ಯ ತೋರಿಸೋಣ.

WhatsApp Image 2023 05 02 at 1.02.32 PM
ರಾಜಶೇಖರ್‌ ಅಕ್ಕಿ
+ posts

ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

ಪೋಸ್ಟ್ ಹಂಚಿಕೊಳ್ಳಿ:

ರಾಜಶೇಖರ್‌ ಅಕ್ಕಿ
ರಾಜಶೇಖರ್‌ ಅಕ್ಕಿ
ಸಾಮಾಜಿಕ ಕಾರ್ಯಕರ್ತ. ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ʼಜಾಗೃತ ಕರ್ನಾಟಕʼದ ಸಕ್ರಿಯ ಸದಸ್ಯ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...