ರಾಯಭಾರ | ಮಾರ್ಗದರ್ಶಕ ಮಂಡಳಿಯ ಕನವರಿಕೆಯಿಂದ ಭೂತದ ಬಾಯಿಯವರೆಗೆ…

Date:

ಬಹುಶಃ ಬಿಜೆಪಿ ನಾಯಕರಿಗೆ ಎಐಸಿಸಿಯ ಒಬಿಸಿ ಸಲಹಾ ಮಂಡಳಿಯು ತಮ್ಮ ಮಾರ್ಗದರ್ಶಕ ಮಂಡಳಿಯನ್ನು ನೆನಪಿಗೆ ತಂದಂತೆ ಕಾಣುತ್ತದೆ! ಅಡ್ವಾಣಿ, ಮುರಳಿ ಮನೋಹರ ಜೋಶಿಯಿಂದ ಹಿಡಿದು ಯಡಿಯೂರಪ್ಪನವರವರೆಗೆ ಹಿರಿಯ ನಾಯಕರಿಗೆ ಪಕ್ಷದ ಹೊರಗೆ ಹೋಗುವ ದಾರಿಯನ್ನು ಮಾರ್ಗದರ್ಶಕ ಮಂಡಳಿಯ ಮೂಲಕ ತೋರಲಾಗಿತ್ತು. ಅದರ ಅನುಭವದಲ್ಲಿಯೇ ಬಿಜೆಪಿ ನಾಯಕರು ಎಐಸಿಸಿಯ ಒಬಿಸಿ ಮಂಡಳಿಯ ಬಗ್ಗೆಯೂ ಮಾತನಾಡಿದಂತಿದೆ.

ಕಳೆದ ಕೆಲ ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು, ಅವುಗಳ ಸುತ್ತಲಿನ ಸಂಕಥನಗಳನ್ನು ಗಮನಿಸಿದಾಗ ಏನು ಚರ್ಚೆಯಾಯಿತು ಎನ್ನುವುದರಷ್ಟೇ ಪ್ರಮುಖವಾಗಿ ಏನು ಚರ್ಚೆಯಾಗಲಿಲ್ಲ ಅಥವಾ ಯಾವುದನ್ನು ಚರ್ಚೆಯಿಂದ ವಿಮುಖಗೊಳಿಸಲಾಯಿತು ಎನ್ನುವುದು ಸಹ ಮುಖ್ಯ.  

ಮೊದಲಿಗೆ, ಕಳೆದೆರಡು ದಿನಗಳ ಬೆಳವಣಿಗೆಗಳನ್ನು ಗಮನಿಸಿದರೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯು ಹಿಂದುಳಿದ ವರ್ಗಗಳ ಸಲಹಾ ಮಂಡಳಿಗೆ ಸದಸ್ಯರನ್ನಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೇಮಿಸಿದ್ದನ್ನು ಅವರು ಮುಖ್ಯಮಂತ್ರಿಯ ಗಾದಿಯಿಂದ ನಿರ್ಗಮಿಸುವುದರ ಮುನ್ಸೂಚನೆ, ದಿಕ್ಸೂಚಿ ಎಂದೆಲ್ಲಾ ವ್ಯಾಖ್ಯಾನಿಸಲಾಯಿತು. ಡಿಸಿಎಂ ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಕೊಡಿಸಲು ಹೈಕಮಾಂಡ್‌ ಪ್ರಯೋಗಿಸಿದ ಅಸ್ತ್ರ ಎಂದು ರಾಜ್ಯ ಬಿಜೆಪಿಯ ಅತಿರಥ ಮಹಾರಥ ನಾಯಕರು ವ್ಯಾಖ್ಯಾನಿಸಿದರು. ಇದು ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣದೆಡೆಗೆ ಸಾಗಿ ಹಾಕಲು ನೀಡಿರುವ  “ಬೋರ್ಡಿಂಗ್‌ ಪಾಸ್‌”, ಇನ್ನು ರಾಜೀನಾಮೆಯೊಂದೇ ಬಾಕಿ – ಇನ್ನು ಮುಂತಾಗಿ ಅವರರವರ ಮೂಗಿನ ನೇರಕ್ಕೆ ಬಿಜೆಪಿಯ ನಾಯಕರು ಈ ಬೆಳವಣಿಗೆಯನ್ನು ವ್ಯಾಖ್ಯಾನಿಸಿದರು. ಇದನ್ನೇ ಆಧರಿಸಿದ ಅತ್ಯುತ್ಸಾಹಿ ಮಾಧ್ಯಮಗಳು ಕೂಡ ಒಂದಕ್ಕೆರಡು ಸೇರಿಸಿ ತಮ್ಮನ್ನು ಕುಣಿಸುತ್ತಿರುವವರನ್ನು ಖುಷಿ ಪಡಿಸಲು ಸ್ಪರ್ಧೆ ನಡೆಸುವಂತೆ ವರದಿ ಮಾಡಿದವು.

ಮಾರ್ಗದರ್ಶಕ ಮಂಡಳಿಯ ಕನವರಿಕೆ

ಬಹುಶಃ ಬಿಜೆಪಿ ನಾಯಕರಿಗೆ ಎಐಸಿಸಿಯ ಒಬಿಸಿ ಸಲಹಾ ಮಂಡಳಿಯು ತಮ್ಮ ಮಾರ್ಗದರ್ಶಕ ಮಂಡಳಿಯನ್ನು ನೆನಪಿಗೆ ತಂದಂತೆ ಕಾಣುತ್ತದೆ! ಅಡ್ವಾಣಿ, ಮುರಳಿ ಮನೋಹರ ಜೋಶಿಯಿಂದ ಹಿಡಿದು ಯಡಿಯೂರಪ್ಪನವರವರೆಗೆ ಹಿರಿಯ ನಾಯಕಮಣಿಗಳಿಗೆ ಪಕ್ಷದ ಹೊರಗೆ ಹೋಗುವ ದಾರಿಯನ್ನು ಮಾರ್ಗದರ್ಶಕ ಮಂಡಳಿಯ ಮೂಲಕ ತೋರಲಾಗಿತ್ತು. ಅದರ ಅನುಭವದಲ್ಲಿಯೇ ಬಿಜೆಪಿ ನಾಯಕರು ಎಐಸಿಸಿಯ ಒಬಿಸಿ ಮಂಡಳಿಯ ಬಗ್ಗೆಯೂ ಮಾತನಾಡಿದಂತಿದೆ.

ಎಐಸಿಸಿ ರಚಿಸಿರುವ ಈ ಮಂಡಳಿಯು ವಿವಿಧ ರಾಜ್ಯಗಳಲ್ಲಿ, ವಿಶೇಷವಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಳೆದ ಕೆಲ ಸಾರ್ವತ್ರಿಕ ಚುನಾವಣೆಗಳಲ್ಲಿ ತನ್ನ ಮತ ಬುಟ್ಟಿಯಿಂದ ನಿರಂತರವಾಗಿ ಸೋರಿಕೆಯಾಗುತ್ತಿರುವ ಒಬಿಸಿ ಮತಗಳನ್ನು ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷವು ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ. ದೇಶಾದ್ಯಂತ ಜಾತಿ ಜನಗಣತಿಯ ಬೇಡಿಕೆ ಇರಿಸಿರುವ ಕಾಂಗ್ರೆಸ್‌ ಒಬಿಸಿ ಜನಸಂಖ್ಯೆಗೆ ಅನುಗುಣವಾಗಿ ಅದರ ಪ್ರಾತಿನಿಧ್ಯವನ್ನು ಸರ್ಕಾರದ ಹುದ್ದೆಗಳಲ್ಲಿಯೂ ಹೆಚ್ಚಿಸಬೇಕೆಂದು ಪ್ರಬಲವಾಗಿ ಧ್ವನಿ ಎತ್ತುತ್ತಿದೆ. ಮುಂದಿನ ದಿನಗಳಲ್ಲಿ ಒಬಿಸಿ ಮತಗಳೇ ನಿರ್ಣಾಯಕವಾಗಲಿರುವ ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳ ಚುನಾವಣೆಗಳಲ್ಲಿ ಮರಳಿ ಒಬಿಸಿ ಮತಗಳನ್ನು ತನ್ನೆಡೆಗೆ ಸೆಳೆಯುವ ನಿಟ್ಟಿನಲ್ಲಿ ಪಕ್ಷವು ಕಾರ್ಯತಂತ್ರವನ್ನು ರೂಪಿಸಬೇಕಿದೆ. ಒಬಿಸಿ ಸಮೂಹದ ವಿಶ್ವಾಸವನ್ನು ಗಳಿಸಬೇಕಿದೆ. ಈ ದಿಸೆಯಲ್ಲಿ ಎಐಸಿಸಿ ರಚಿಸಿರುವ ಸಲಹಾ ಸಮಿತಿಯು ರಾಜಕೀಯ ಮಹತ್ವ ಪಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಮುರಳಿ ಅಡ್ವಾಣಿ
ಮುರಳಿ ಮನೋಹರ ಜೋಶಿ, ಲಾಲ್‌ಕೃಷ್ಣ ಅಡ್ವಾಣಿ,

ವಿಶೇಷವಾಗಿ ಬಿಜೆಪಿಯು ಪ್ರಧಾನಿ ಮೋದಿಯವರನ್ನು ಹಿಂದುತ್ವವಾದಿ, ರಾಷ್ಟ್ರೀಯವಾದಿ ನಾಯಕ ಎಂದು ಮಾತ್ರವೇ ಅಲ್ಲದೆ, ಹಿಂದುಳಿದ ಸಮುದಾಯಗಳಿಂದ ಬಂದಿರುವ ಅಭೂತಪೂರ್ವ ನೇತಾರ ಎಂದೂ ಸ್ಥಳೀಯ ರಾಜಕಾರಣದ ಲೆಕ್ಕಾಚಾರಗಳಿಗೆ ಅನುಗುಣವಾಗಿ ಬೇರುಮಟ್ಟದಲ್ಲಿ ಬಿಂಬಿಸುತ್ತಾ ಬಂದಿದೆ. ಹಿಂದುಳಿದ ವರ್ಗಗಳು ಹಿಂದುತ್ವದೊಂದಿಗೆ ಮಿಳಿತಗೊಂಡರೆ ರಾಜಕೀಯವಾಗಿ ದೊರೆಯುವ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದೆ. ಹಾಗಾಗಿ, ಬಿಜೆಪಿಯ ಇಂತಹ ತಂತ್ರಗಾರಿಕೆಗಳಿಗೆ ಪ್ರಬಲ ಪ್ರತಿರೋಧವನ್ನು ಒಡ್ಡುವ ಕಾರಣದಿಂದ ಎಐಸಿಸಿಯ ಒಬಿಸಿ ಸಲಹಾ ಸಮಿತಿಯ ರಚನೆ ನಿರ್ಣಾಯಕವಾಗಿದೆ.

ಹಿಂದುಳಿದ ವರ್ಗಗಳ ನಾಯಕತ್ವದ ವಿಚಾರ ಬಂದಾಗ ಕರ್ನಾಟಕದ ಮಟ್ಟಿಗೆ ಪ್ರಶ್ನಾತೀತ ನಾಯಕರಾಗಿ ಯಶಸ್ವಿಯಾಗಿರುವ ಸಿದ್ದರಾಮಯ್ಯನವರ ವರ್ಚಸ್ಸನ್ನು ಬಳಸಿಕೊಳ್ಳುವ ಇರಾದೆ ಕಾಂಗ್ರೆಸ್‌ ಹೈಕಮಾಂಡ್‌ಗಿದೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರನ್ನು ಮುಂದಿರಿಸಿಕೊಂಡು ಒಬಿಸಿ ರಾಜಕೀಯ ಸಮೀಕರಣ ಮಾಡಿರುವಂತೆಯೇ ಇತರೆ ರಾಜ್ಯಗಳಲ್ಲಿಯೂ ಒಬಿಸಿ ರಾಜಕಾರಣ ಮಾಡುವ, ಒಬಿಸಿ ಹಿತಕಾಯುವ ಸಂದೇಶವನ್ನು ಪಕ್ಷ ನೀಡಲು ಬಯಸುತ್ತಿದೆ. ಹೀಗಿರುವಾಗ ಸಿದ್ದರಾಮಯ್ಯನವರನ್ನು ಕರ್ನಾಟಕದಲ್ಲಿ ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಪಕ್ಷಕ್ಕಿಲ್ಲ ಎನ್ನುವುದು ಸ್ಪಷ್ಟ. ಅಲ್ಲದೆ, ಜಾತಿಗಣತಿಯ ಬಗ್ಗೆ ತಮ್ಮದೇ ಪಕ್ಷದಲ್ಲಿ ಎದುರಾಗಿದ್ದ ಅಪಸ್ವರಗಳನ್ನು ಕೂಡ ಹೊಸದಾಗಿ, ನಿಖರವಾಗಿ ಜಾತಿಗಣತಿ ನಡೆಸುವ ಮೂಲಕವೇ ನಿವಾರಿಸಿಕೊಳ್ಳುವ ಪ್ರಯತ್ನಕ್ಕೆ ಹೈಕಮಾಂಡ್‌ ಮುಂದಾಗಿದ್ದನ್ನು ಇಲ್ಲಿ ಗಮನಿಸಬಹುದು.

ಜಾತ್ಯಾಧಾರಿತ ಸಾಮಾಜಿಕ ಆರ್ಥಿಕ ಗಣತಿಯ ವಿಚಾರವನ್ನು ಮೂಲೆಗೆ ಒತ್ತರಿಸುವಲ್ಲಿ ಕಾಂಗ್ರೆಸ್‌ನೊಳಗಿನ ಪ್ರಬಲ ಸಮುದಾಯಗಳ ನಾಯಕರು ಸದ್ಯಕ್ಕೆ ಯಶಸ್ವಿಯಾಗಿರುವ ಭ್ರಮೆಯಲ್ಲಿದ್ದಾರಾದರೂ ಇದು ಕೇವಲ ತಾತ್ಕಾಲಿಕ ಮಾತ್ರ. ಈ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ಗಣತಿಯ ನಿಖರ ಮಾಹಿತಿಯ ಮೂಲಕವೇ ಉತ್ತರ ನೀಡುವ ನಿರ್ಧಾರಕ್ಕೆ ಹೈಕಮಾಂಡ್‌ ಬಂದಿದೆ. ದೇಶದೆಲ್ಲೆಡೆ ಜಾತಿಗಣತಿಯ ವಿಚಾರವಾಗಿ ಸ್ಪಷ್ಟ ಅಭಿಪ್ರಾಯವನ್ನು ಪಕ್ಷ ರೂಪಿಸುತ್ತಿರುವ ಹೊತ್ತಿನಲ್ಲಿ ಸ್ಥಳೀಯ ಪ್ರಬಲ ಸಮುದಾಯಗಳ ನಾಯಕರು ಪಕ್ಷದ ಪ್ರಮುಖ ಕಾರ್ಯೋದ್ದೇಶಗಳಿಗೆ ಅಡ್ಡಗಾಲು ಹಾಕಿಕೊಂಡು ಕೂರುವ ಪ್ರವೃತ್ತಿಯ ಬಗ್ಗೆ ಹೈಕಮಾಂಡ್‌, ವಿಶೇಷವಾಗಿ ರಾಹುಲ್‌ ಗಾಂಧಿ ತೀವ್ರ ಅಸಮಾಧಾನ ಹೊಂದಿರುವುದು ಗುಟ್ಟಿನ ವಿಚಾರವೇನಲ್ಲ.    

ಆದರೆ, ಕಾಂಗ್ರೆಸ್‌ನೊಳಗೆ ನಡೆಯುವ ಯಾವುದೇ ಬೆಳವಣಿಗೆಯನ್ನೂ ರಾಜ್ಯದಲ್ಲಿ ಸಿಎಂ ಹುದ್ದೆ ಬದಲಾವಣೆಗೆ ತಳಕು ಹಾಕಿಯೇ ಬಿಂಬಿಸಬೇಕು ಎನ್ನುವ ಒಂದು ಅಂಶದ ಕಾರ್ಯಕ್ರಮವನ್ನು ಬಿಜೆಪಿಯ ರಾಜ್ಯ ನಾಯಕರು ಹಾಗೂ ಬಿಜೆಪಿಯ ಇಷ್ಟಾನಿಷ್ಟಗಳಿಗೆ ತಕ್ಕಂತೆ ತಲೆಯಾಡಿಸುವ ಬಹುತೇಕ ಮಾಧ್ಯಮಗಳು ಶ್ರದ್ಧೆಯಿಂದ ಮಾಡುತ್ತಿವೆ. ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರನ್ನು ಹೇಗಾದರೂ ಸರಿ ಕಟ್ಟಿಹಾಕಬೇಕು ಎಂದು ಬಯಸುವ ರಾಜ್ಯ ಕಾಂಗ್ರೆಸ್‌‌ನ ಒಂದು ಗುಂಪು ಸಹ ಇಂತಹ ಸುದ್ದಿಗಳಿಗೆ ತಿದಿ ಒತ್ತುತ್ತಾ, ಕೊಳಕ್ಕೆ ಕಲ್ಲೆಸೆಯುವ ಕೆಲಸ ಮಾಡುತ್ತಲೇ ಇದೆ. ಪಕ್ಷದ ಚೌಕಟ್ಟಿನೊಳಗೆ ಯಾವುದನ್ನು ಸಾಧಿಸಲು ಅಗುತ್ತಿಲ್ಲವೋ ಅದನ್ನು ಮಾಧ್ಯಮಗಳ ಗೋಡೆಯ ಮೇಲೆ ಬರೆದು ಆಸೆ ತೀರಿಸಿಕೊಳ್ಳುವ ಕೆಲಸವನ್ನು ಈ ಬಣ ಮಾಡುತ್ತಿದೆ.

ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರೊಬ್ಬರು ಹೈಕಮಾಂಡ್‌ ಮೂಲಕವಾಗಲಿ, ಶಾಸಕಾಂಗ ಪಕ್ಷದ ಸಭೆಯ ಮೂಲಕವಾಗಲಿ ಈಡೇರಿಸಿಕೊಳ್ಳಲಾಗದ ತಮ್ಮ ಬಯಕೆಯನ್ನು ದೈವಗಳ ಮುಂದೆ, ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಾ ಗೊಂದಲಗಳ ಕೇಂದ್ರ ಬಿಂದುವೇ ತಾವಾಗಲು ಹೊರಟಿರುವುದು ರಾಜ್ಯ ಕಾಂಗ್ರೆಸ್‌ ಪಾಲಿಗೆ ಬಗೆಹರಿಯದ ತಲೆಬೇನೆಯಾಗಿದೆ. ಇಷ್ಟು ದಿನದವರೆಗೆ ಇವರ ಆಸೆಗೆ ತಿದಿಯೊತ್ತುತ್ತಾ ಮೈಕಾಯಿಸಿಕೊಳ್ಳುತ್ತಿದ್ದವರಿಗೆ ಮುಂದಿನ ದಿನಗಳಲ್ಲಿ ಬೆಂಕಿ ಉಲ್ಬಣವಾದಾಗ ಮೊದಲಿಗೆ ಬೇಯುವವರು ತಾವೇ ಎನ್ನುವ ಸೂಚನೆ ಸಿಕ್ಕಿದಂತಿಲ್ಲ. ಈಗೀಗಂತೂ ರಾಜ್ಯಾಧ್ಯಕ್ಷರ ಈ ರಾಜಕೀಯ ವರಸೆಯಲ್ಲಿ, ತಂತ್ರಗಾರಿಕೆಯಾಗಲಿ, ಹುಂಬತನವಾಗಲಿ ಯಾವುದೊಂದೂ ಗೋಚರಿಸುತ್ತಿಲ್ಲ. ಬದಲಿಗೆ, ಭಗ್ನ ಹೃದಯಿಯೊಬ್ಬ ಕಾಣಿಸುತ್ತಿದ್ದಾನೆ. ಭಗ್ನ ಹೃದಯಿಗಳು ತಮ್ಮನ್ನು ಸಂತೈಸಿಕೊಳ್ಳುವ ಮಾರ್ಗವನ್ನು ತಾವೇ ಕಂಡುಕೊಳ್ಳಬೇಕು. ಜಗಕ್ಕೆ ಅವರನ್ನು ಸಂತೈಸುವುದು ಕಷ್ಟದ ಕೆಲಸ!  

ಭೂತದ ಬಾಯಿ ಬಿಡಿಸಬೇಕಿದೆ!

ರಾಜ್ಯ ರಾಜಕಾರಣದ ವಿಚಾರದಿಂದ ರಾಷ್ಟ್ರ ರಾಜಕಾರಣದೆಡೆಗೆ ಮುಖ ಮಾಡಿದರೆ ಕಳೆದ ಕೆಲ ದಿನಗಳಲ್ಲಿ ಪ್ರಮುಖವಾಗಿ ಸುದ್ದಿಯಲ್ಲಿದ್ದ ಸಂಗತಿಯೆಂದರೆ ರಾ‌ಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದ ಪೀಠಿಕೆಯಿಂದ  “ಸೆಕ್ಯುಲರ್” ಮತ್ತು “ಸೋಶಿಯಲಿಸ್ಟ್‌” ಪದಗಳನ್ನು ಕೈಬಿಡಬೇಕು ಎಂದು ಹೇಳಿದ ವಿಚಾರ. ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ಗೆ ಇರುವ “ಗೌರವ” ಅದನ್ನು ಬದಲಾಯಿಸಲಿಕ್ಕೆ ಅದು ತೋರುವ “ಉತ್ಸಾಹ” ಇದೆಲ್ಲವೂ ಕಾಲಕಾಲಕ್ಕೆ ಜಗಜ್ಜಾಹೀರು ಆಗಿರುವ, ಆಗುತ್ತಲೇ ಇರುವ ವಿಷಯಗಳು. ಸಂವಿಧಾನವನ್ನು, ತ್ರಿವರ್ಣ ಧ್ವಜವನ್ನು ಆರ್‌ಎಸ್‌ಎಸ್‌ ಹೇಗೆ ಆರಂಭದಿಂದಲೂ ಒಪ್ಪಿರಲಿಲ್ಲ, ಸಂವಿಧಾನದ ಜಾರಿಯನ್ನು ವಿರೋಧಿಸಿ ಅದು ಹೇಗೆ‌ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು, ಸಂವಿಧಾನದ ಪ್ರತಿಗಳನ್ನು ಸುಟ್ಟಿತ್ತು, ತ್ರಿವರ್ಣ ಧ್ವಜದ ಬಗ್ಗೆ ಹೇಗೆ ಅವಹೇಳನಕಾರಿಯಾಗಿ ಮಾತನಾಡಿತ್ತು ಎನ್ನುವುದೆಲ್ಲವೂ ಇತಿಹಾಸದಲ್ಲಿ ದಾಖಲಾಗಿರುವ ಸಂಗತಿಗಳು.

ಹೊಸಬಾಳೆ ೧೧೧೧

ಆರ್‌ಎಸ್‌ಎಸ್‌ ಸಂವಿಧಾನದ ವಿಚಾರವನ್ನು ಎತ್ತಿದಾಗ, ಕಾಂಗ್ರೆಸ್‌ ಸಹಿತ ಅನೇಕ ರಾಜಕೀಯ ಪಕ್ಷಗಳು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು, ಪ್ರಗತಿಪರರು, ಜಾತ್ಯತೀತವಾದಿಗಳು ದೊಡ್ಡ ದನಿಯಲ್ಲಿ ಅದನ್ನು ವಿರೋಧಿಸಿದರು. ಅಲ್ಲದೆ, ಹೇಗೆ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳು ಸಂವಿಧಾನದಲ್ಲಿ ಅಡಕವಾಗಿವೆ ಎನ್ನುವುದನ್ನು ಸಂವಿಧಾನದಲ್ಲಿನ ವಿವಿಧ ವಿಧಿಗಳನ್ನು ಉಲ್ಲೇಖಿಸುವ, ವಿವರಿಸುವ ಮೂಲಕ ಗೊತ್ತುಪಡಿಸಿದರು. ಇದರಿಂದ ಆರ್‌ಎಸ್‌ಎಸ್‌ಗಾಗಲಿ ಅಥವಾ ಸಂವಿಧಾನದ ಈ ಆಶಯಗಳಿಗೆ ವಿರುದ್ಧವಾದ ಧೋರಣೆ ಹೊಂದಿರುವ ಇನ್ನಾವುದೇ ಚಿಂತನೆಗಳನ್ನು ಆರಾಧಿಸುವ ಮನಸ್ಸುಗಳಿಗಾಗಲಿ ಎಷ್ಟು ಉಪಯೋಗವಾಯಿತೋ ಗೊತ್ತಿಲ್ಲ! ಆದರೆ, ಈ ಬಗೆಯ ಚರ್ಚೆಗಳಿಗೆ ಕುತೂಹಲಿಗಳಾಗಿ ಎದುರಾಗಿದ್ದವರಿಗೆ ಮಾತ್ರ ತಮ್ಮ ಮುಂದಿನ ಹಾದಿಯ ಬಗ್ಗೆ ಹೆಚ್ಚು ನಿಚ್ಚಳಗೊಳ್ಳಲು ಇದು ಅನುವು ಮಾಡಿಕೊಟ್ಟಿತು.

ಅದರೆ, ಈ ಇಡೀ ಅಂಕ ತಥಾಕಥಿತ ಕ್ರಿಯೆ-ಪ್ರತಿಕ್ರಿಯೆಯ ಸರಣಿಯಂತೆ ಕಂಡು ಬಂದಿತು. ಪ್ರತಿಕ್ರಿಯೆಯನ್ನು ಊಹಿಸಿಯೇ ಕೈಗೊಂಡ ಕ್ರಿಯೆಯಂತೆ, ಅದೇ ರೀತಿ, ಕ್ರಿಯೆಯನ್ನು ಎದುರಿಸಲೆಂದೇ ಸರ್ವಸನ್ನದ್ಧವಾಗಿದ್ದ ಪ್ರತಿಕ್ರಿಯೆಯಂತೆ ಭಾಸವಾಯಿತು. ಈ ಅಂಕದ ದೊಡ್ಡ ಕೊರತೆಯೆಂದರೆ, ಇದರೊಳಗಿನ ಕಾರ್ಯಕಾರಣ ಸಂಬಂಧವನ್ನು ಅನ್ವೇಷಿಸಲು ಪ್ರೇಕ್ಷಕರಾದವರಿಗೆ ಅನುವು ಮಾಡಿಕೊಡುವ ಪ್ರಯತ್ನ ಮಾಡದೇ ಹೋದದ್ದು. ಇಲ್ಲಿ ಬಳಸಿರುವ “ಪ್ರೇಕ್ಷಕ” ಎನ್ನುವ ಪದದ ಅರ್ಥ ಸಾಮಾನ್ಯ ಬಳಕೆಯಲ್ಲಿ ಬರುವ ವೀಕ್ಷಕ ಅಲ್ಲ, ಬದಲಿಗೆ ತತ್ವಶಾಸ್ತ್ರದಲ್ಲಿ ಬರುವಂತೆ “ಪ್ರಜ್ಞೆ”, “ಸಾಕ್ಷಿ” ಎನ್ನುವ ರೀತಿಯಲ್ಲಿ ಗ್ರಹಿಸೋಣ. ಅಂದರೆ, ಈ ಘಟನೆಯಲ್ಲಿ ಪ್ರೇಕ್ಷಕ ಸ್ಥಾನದಲ್ಲಿದ್ದವರು ಎಲ್ಲ ಬೆಳವಣಿಗೆಗಳಿಗೂ ಸಾಕ್ಷಿಯಾಗಿದ್ದ ಜನತೆ.

ಆರ್‌ಎಸ್‌ಎಸ್‌ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಮಾಜದಲ್ಲಿ ಒಡಕು ಮೂಡಿಸುವ ಹಾಗೂ ಬಲಪಂಥೀಯ ಚಿಂತನೆಗಳನ್ನು ಆಳಗೊಳಿಸುವಂಥ ವಿಷಯಗಳನ್ನು ಕೆದಕಿದಾಗಲೆಲ್ಲಾ ಅದಕ್ಕೆ ತೀವ್ರ ವಿರೋಧವನ್ನು ವಿವಿಧ ರಾಜಕೀಯ ಪಕ್ಷಗಳು, ಪ್ರಗತಿಪರರು ದಾಖಲಿಸುವುದೇನೋ ಸರಿ. ಅದರೆ, ಇದೇ ವೇಳೆ ಆರ್‌ಎಸ್‌ಎಸ್‌ ಸೇರಿದಂತೆ ಇಂತಹ ಚಿಂತನೆಗಳನ್ನು ಹೊಂದಿರುವ ವ್ಯಕ್ತಿ, ಸಂಘಟನೆಗಳ ಬಾಯಿಂದಲೇ ಅವರ ಮೂಲ ಉದ್ದೇಶವನ್ನು ಸ್ಪಷ್ಟವಾಗಿ ಜನರಿಗೆ ತಿಳಿಸುವಂತಹ ಕೆಲಸಕ್ಕೂ ಪ್ರಜ್ಞಾವಂತರು ಮುಂದಾಗಬೇಕು, ವಿಶೇಷವಾಗಿ ಮಾಧ್ಯಮಗಳು ಇಂತಹ ಕೆಲಸ ಮಾಡಬೇಕಿತ್ತು, ಮಾಡಲಿಲ್ಲ.

ಸೆಕ್ಯುಲರ್‌, ಸೋಶಿಯಲಿಸ್ಟ್‌ ಪದಗಳನ್ನು ಏಕೆ ತೆಗೆಯಬೇಕು ಎಂದು ಆರ್‌ಎಸ್‌ಎಸ್‌ ನಾಯಕರಾಗಲಿ, ಹಿಂದುತ್ವದ ಪ್ರಖರ ಚಿಂತಕರಾಗಲಿ ಜನರ ಮುಂದೆ ತಮ್ಮ ಹಸಿ ಹಸಿ ವಾದಗಳನ್ನು ಇರಿಸುವಂತೆ ಪ್ರೇರೇಪಿಸುವ, ಪ್ರಚೋದಿಸುವ ಕೆಲಸವನ್ನು ಹೊಸಬಾಳೆಯವರ ಹೇಳಿಕೆಯ ಹಿನ್ನೆಲೆಯಲ್ಲಿ ಮೇಲೆ ಹೇಳಿದ ಗುಂಪು ಮಾಡಬೇಕಿತ್ತು. ಆರ್‌ಎಸ್‌ಎಸ್‌ಗೆ ಇರುವ ತಕರಾರು ಕೇವಲ ಎರಡು ಪದಗಳ ಕುರಿತಾದದ್ದಲ್ಲ. ಬದಲಿಗೆ, ಅವುಗಳು ಪ್ರತಿನಿಧಿಸುವ ಬಹುತ್ವ, ಸಾಮಾಜಿಕ, ಆರ್ಥಿಕ ಒಳಗೊಳ್ಳುವಿಕೆಯ ಕುರಿತಾದದ್ದು. ಏಕ ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಆಳವಾದ ನಂಬಿಕೆ ಇರಿಸಿಕೊಂಡಿರುವ ಆರ್‌ಎಸ್‌ಎಸ್‌ ಬಹುತ್ವ, ವೈವಿಧ್ಯತೆ, ಸಾಮಾಜಿಕ, ಆರ್ಥಿಕ ಸಮಾನತೆ, ಮೀಸಲಾತಿಯಂತಹ ವಿಷಯಗಳ ಬಗ್ಗೆ ಸದಾ ಒಂದಿಲ್ಲೊಂದ ಬಗೆಯಲ್ಲಿ ಅಸಮಾಧಾನವನ್ನು ಹೊರಹಾಕುತ್ತಲೇ ಇರುತ್ತದೆ. ತನ್ನ ರಾಜಕೀಯ ಅಂಗವಾದ ಬಿಜೆಪಿಯ ಮುಖಾಂತರ ತನ್ನ ಗೌಪ್ಯ ಕಾರ್ಯಸೂಚಿಯನ್ನು ಆಡಳಿತಾತ್ಮಕವಾಗಿ ಜಾರಿಗೆ ತರುವಲ್ಲಿ ನಿರಂತರ ಹೊಂಚುಹಾಕುತ್ತಿರುತ್ತದೆ. ಇದಾಗಲೇ ಸಾಕಷ್ಟು ವಿಷಯಗಳಲ್ಲಿ ಅದು ಈ ನಿಟ್ಟಿನಲ್ಲಿ ಯಶಸ್ವಿಯೂ ಆಗಿದೆ. ಆದರೆ, ಅದು ಇದೆಲ್ಲವನ್ನೂ ಅದು ವ್ಯವಸ್ಥಿತವಾಗಿ ಮಾಡುತ್ತದೆ. ಒಬ್ಬರ ವಿರುದ್ಧ ಕತ್ತಿ ಮಸೆಯುವಾಗ ಉಳಿದವರನ್ನು ತನ್ನ ಬೆನ್ನಿಗೆ ಸೇರಿಸಿಕೊಳ್ಳುತ್ತದೆ, ಪ್ರಜಾಪ್ರಭುತ್ವ ನೀಡಿದ ಬಲದಿಂದಲೇ ಪ್ರಜಾಪ್ರಭುತ್ವವನ್ನು ಧಿಕ್ಕರಿಸುವ ಕೆಲಸವನ್ನು ಎಗ್ಗಿಲ್ಲದೆ ಮಾಡಲು ಹಾದಿಗಳನ್ನು ಹುಡುಕುತ್ತದೆ.

ಈ ಬಗೆಯ ವಿಚಾರಗಳನ್ನೆಲ್ಲಾ ಈ ಚಿಂತನೆಗಳನ್ನು ಪ್ರತಿನಿಧಿಸುವ ಮನಸ್ಸು, ಶಕ್ತಿಗಳ ಬಾಯಿಂದಲೇ ಹೊರಹಾಕಿಸಿದಾಗ ಮಾತ್ರವೇ ಅವುಗಳ ನೈಜ ಅಪಾಯದ ಬಗ್ಗೆ ಸಾಮಾನ್ಯ ಜನತೆಗೆ ನಿಚ್ಚಳವಾಗುವುದು. ಅದರಲ್ಲಿಯೂ ವಿಶೇಷವಾಗಿ ಈ ದೇಶದ  ಹಿಂದುಳಿದ, ದಮನಿತ ವರ್ಗಗಳಿಗೆ ತಮ್ಮೆದುರಿಗಿರುವ ಅಪಾಯ ಎಂತಹದ್ದು, ಯಾವಯಾವ  ಛದ್ಮ ವೇ‌ಷದಲ್ಲಿ ಅದು ತಮ್ಮೆದುರು ನಿಂತು, ತಮ್ಮನ್ನು ತುಳಿಯುತ್ತಲೇ ತಮ್ಮಿಂದ ಜೈಕಾರವನ್ನು ಹಾಕಿಸಿಕೊಳ್ಳುತ್ತಿರುತ್ತದೆ ಎನ್ನುವುದು ಅರಿವಾಗುವುದು. ಭೂತ ಬಾಯಿ ಬಿಟ್ಟಾಗಲೇ ಅದು ಉದುರಿಸುವ ಮುತ್ತಿನ ಮಣಿಗಳು, ಅದರ ಉದ್ದೇಶ ಏನು ಎಂದು ತಿಳಿಯುವುದು! ಅದು ಗೊತ್ತಾದಾಗ ಪ್ರತಿರೋಧ ತಾನಾಗಿಯೇ ಬೆಳೆಯುತ್ತದೆ.

?s=150&d=mp&r=g
ನಿಶಾನ್‌ ರಾಜ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...