ಬ್ರಿಟಿಷರ ಆಳ್ವಿಕೆ ಕೊನೆಗಂಡು ದೇಶ ಸ್ವತಂತ್ರವಾಗುವ ಸಂದರ್ಭ. 1947ರ ಜುಲೈ 8ರಂದು ಬೀನಾದಿ ತಮ್ಮ ಈ ಆತ್ಮಕಥನವನ್ನು ಬರೆಯಲು ಆರಂಭಿಸುತ್ತಾರೆ. ಆಗಸ್ಟ್ 10ರಂದು ಈ ಬರವಣಿಗೆಯನ್ನು ಮುಗಿಸುತ್ತಾರೆ. ಆಗ ಅವರ ವಯಸ್ಸು ಕೇವಲ ಮೂವತ್ತಾರು ವರ್ಷಗಳು ಅಷ್ಟೇ. ಅದರಲ್ಲಿ ಹತ್ತು ವರ್ಷಗಳ ಸೆರೆಮನೆ ವಾಸ. ಆ ಶೃಂಖಲೆಯ ಝೇಂಕಾರವನ್ನು ನೆನಪಿಸಿಕೊಳ್ಳುತ್ತಾ ತನ್ನ ಬದುಕಿನ ಅನುಭವದ ಕೆಲವು ಪದರಗಳನ್ನು ಇಲ್ಲಿ ಬಿಚ್ಚಿಡುತ್ತಾರೆ.
ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಸಾಗರಕ್ಕೆ ಸಾವಿರಾರು ತೊರೆಗಳು. ಈ ಗಂಗಾ ಪ್ರವಾಹದಲ್ಲಿ ವಿಜೃಂಭಿಸಿದ ಸ್ತ್ರೀಶಕ್ತಿಗಳು ಹಲವಾರು. ಇಂತಹ ಪ್ರಜ್ವಲಿಸುವ ಸ್ತ್ರೀರತ್ನಗಳಲ್ಲಿ 1911ರಲ್ಲಿ ಕಲ್ಕತ್ತೆಯಲ್ಲಿ ಜನಿಸಿದ ಬೀನಾ ದಾಸ್ ಒಬ್ಬರು. ಅವರ ಸಮಕಾಲೀನರಿಂದ ‘ಅಗ್ನಿ ಕನ್ಯೆ’ ಎಂದೇ ಕರೆಸಿಕೊಂಡ ಬೀನಾದಾಸ್ ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಒಂದು ಅಳಿಸಲಾಗದ ಹೆಸರು. ಬ್ರಿಟಿಷ್ ವೃತ್ತಪತ್ರಿಕೆಗಳು ಅವಳ ಸಾಹಸವನ್ನು ವರ್ಣಿಸಿ ಅವಳನ್ನು ‘ಭಾರತದ ಜೋನ್ ಆಫ್ ಆರ್ಕ್’ ಎಂದು ಕರೆದವು. ತನ್ನೆಲ್ಲ ಹೋರಾಟದ ಅನುಭವವನ್ನು ಈ ಕ್ರಾಂತಿಕನ್ಯೆ “ಶೃಂಖಲ್ ಝಂಕಾರ್” ಎಂಬ ತನ್ನ ಆತ್ಮಚರಿತ್ರೆಯಲ್ಲಿ ನಿವೇದಿಸಿಕೊಂಡಿದ್ದಾಳೆ.
ಬ್ರಹ್ಮಸಮಾಜದ ನೇತಾರ ಮತ್ತು ಸುಭಾಷ್‍ಚಂದ್ರ ಬೋಸ್‍ರ ಗುರುಗಳಾಗಿದ್ದ ಬೇಣಿ ಮಾಧವದಾಸ್‍ರ ಮಗಳು ಬೀನಾದಾಸ್. ಅವರ ತಾಯಿ ಸರಳಾದೇವಿ ಕೂಡ ಸತ್ಯ ಮತ್ತು ಸೇವೆಯ ಆದರ್ಶಗಳ ಖನಿಯಾಗಿ ಕುಟುಂಬದ ವೈವಿಧ್ಯಮಯ ಕರ್ತವ್ಯಗಳನ್ನು ನಡೆಸುವುದರ ಜೊತೆಗೆ ನೊಂದ ಮಹಿಳೆಯರಿಗೆ ಸೂರು ಕಲ್ಪಿಸುವ ಉದಾತ್ತ ಕಾಯಕದಲ್ಲಿ ತೊಡಗಿಕೊಂಡವರು. ಇಂಥ ತಾಯ್ತಂದೆಯರ ಮಗಳಾದ ಬೀನಾದಾಸ್ ಕಲ್ಕತ್ತೆಯ ಕ್ರಾಂತಿಕಾರಿ ಗುಂಪಿಗೆ ಸೇರುತ್ತಾಳೆ. 1932ರಲ್ಲಿ ಬಂಗಾಲದ ಗವರ್ನರ್ ಆಗಿದ್ದ ಸ್ಟಾನ್ಲೇ ಜಾಕ್ಸನ್ ಕಲ್ಕತ್ತಾ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಲು ಬಂದಾಗ ಬೀನಾದಾಸ್ ಅವರತ್ತ ಐದು ಗುಂಡುಗಳನ್ನು ಹಾರಿಸಿ ವಸಾಹತುಶಾಹಿಯ ವಿರುದ್ಧ ತನ್ನ ಪ್ರತಿಭಟನೆಯನ್ನು ತೋರಿಸಿದಳು. ಅವಳು ಹಾರಿಸಿದ ಗುಂಡು ವಿಫಲವಾದದ್ದಲ್ಲದೆ ಪೊಲೀಸರ ಕೈಗೆ ಸಿಕ್ಕು ಅವಳು ಏಳು ವರ್ಷಗಳ ಸೆರೆಮನೆವಾಸ ಅನುಭವಿಸಬೇಕಾಯಿತು. ನಂತರ ಹೊರಗೆ ಬಂದ ಮೇಲೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಾರಣದಿಂದಾಗಿ ಅನುಭವಿಸಿದ್ದು ಮೂರು ವರ್ಷಗಳ ಸೆರೆಮನೆ ವಾಸ.
ಬೀನಾ ತನ್ನ ರಾಜಕೀಯ ಜೀವನದಲ್ಲಿ ಇಬ್ಬರನ್ನು ಆದರ್ಶ ಮೂರ್ತಿಗಳಾಗಿ ಕಾಣುತ್ತಾರೆ. ಒಬ್ಬರು ಮಹಾತ್ಮ ಗಾಂಧಿಯವರಾದರೆ, ಮತ್ತೊಬ್ಬರು ಸುಭಾಷ್ ಚಂದ್ರ ಬೋಸ್. ವಿದೇಶಿ ಆಳ್ವಿಕೆಯನ್ನು ಪ್ರತಿಭಟಿಸಲು ಮಹಾತ್ಮ ಗಾಂಧಿಯವರು ಆರಂಭಿಸಿದ ಅಸಹಕಾರ ಚಳವಳಿಯು ದೇಶವಿಡೀ ಹಬ್ಬಿದ್ದು ಅದು ಬೀನಾ ದಾಸ್ ಅವರ ಕುಟುಂಬವನ್ನು ಹೊಕ್ಕಿತ್ತು. ಬೀನಾಳ ಅಣ್ಣ ನಿರ್ಮಲ ಚಂದ್ರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ಸೇರಿದ್ದ. ಹೀಗಾಗಿ ಖಾದಿ ಮತ್ತು ಚರಕ ಅವರ ಮನೆಯನ್ನು ಖಾಯಂ ಆಗಿ ಪ್ರವೇಶಿಸಿದ್ದವು. ಇಂತಹ ಆದರ್ಶ ಕುಟುಂಬದಲ್ಲಿ ಜನಿಸಿದ ಬೀನಾಳಿಗೆ ಮನೆಯಲ್ಲಿ ಉತ್ಸಾಹಿ ವಾತಾವರಣವಿತ್ತು. ಆರಂಭದಲ್ಲಿ ಆಕೆ ಕಾಂಗ್ರೆಸ್ ಕಾರ್ಯಕರ್ತಳಾಗಿ ಮತ್ತು ಸಮಾಜಸೇವಕಿಯಾಗಿ ಗಾಂಧಿ ಪ್ರತಿಪಾದಿಸಿದ ಅಹಿಂಸಾ ಚಳವಳಿಯಲ್ಲಿ ತೊಡಗಿಕೊಂಡರು. ನಂತರ ಕ್ರಮೇಣ ಅವರ ದೃಷ್ಟಿಕೋನದಲ್ಲಿ ಬದಲಾವಣೆಯಾಗುತ್ತಿದ್ದಂತೆ ಸಶಸ್ತ್ರಕ್ರಾಂತಿಯ ಆದರ್ಶಗಳಿಗೆ ಮನಸೋತು ಕ್ರಾಂತಿಕಾರಿ ಹಾದಿಯನ್ನು ತುಳಿಯುತ್ತಾರೆ. ಬೀನಾ ದಾಸ್ ಅವರ ತಂದೆ ಬೇಣಿ ಮಾಧವ ದಾಸ್ ಅವರು ಅಂದಿನ ಪೀಳಿಗೆಯ ನಿಷ್ಠಾವಂತ ವಿದ್ವಾಂಸರು ಮತ್ತು ಶಿಕ್ಷಣ ತಜ್ಞರು ಆಗಿದ್ದರು. ಬ್ರಹ್ಮ ಸಮಾಜಿಯೂ ಆಗಿದ್ದ ಅವರು ತಮ್ಮ ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಉದ್ದೀಪನಗೊಳಿಸುವುದು ಯಾವಾಗಲೂ ಅವರ ಗುರಿಯಾಗಿತ್ತು. ಶಾಲೆಯಲ್ಲಿ ಅವರ ವಿದ್ಯಾರ್ಥಿಗಳ ಪೈಕಿ ಸುಭಾಷ್ ಚಂದ್ರ ಬೋಸರು ಅವರಿಗೆ ಅತ್ಯಂತ ಆಪ್ತರು. ಹೀಗಾಗಿ ಸುಭಾಷ್ ಚಂದ್ರರ ತತ್ವ ಮತ್ತು ಸಾಮಿಪ್ಯ ಎರಡೂ ಬೀನಾ ದಾಸರಿಗೆ ನಿಕಟವಾಗಿ ದೊರಕುವುದು ಸಾಧ್ಯವಾಯಿತು. ಯಾವುದೇ ವ್ಯಕ್ತಿಯು ತನ್ನ ಜೀವನದ ಧ್ಯೇಯವನ್ನು ಸಾಧಿಸಬೇಕಾದರೆ, ಗುರಿಯಿಟ್ಟದ್ದನ್ನು ಪಡೆಯಲೇಬೇಕೆಂಬ ಅದಮ್ಯ ಹಂಬಲವನ್ನು ತನ್ನೊಳಗೆ ಬೆಳೆಸಿಕೊಳ್ಳಬೇಕು, ಎಂಬ ಸುಭಾಷರ ಮಾತನ್ನು ಬೀನಾ ಗಂಭೀರವಾಗಿ ತೆಗೆದುಕೊಂಡಿದ್ದರು. ಆದ್ದರಿಂದಲೇ ಬೀನಾಗೆ ಅವರ ಯೌವನದಲ್ಲೇ ಎಲ್ಲ ಹಿಂಜರಿಕೆಯನ್ನು ಕಳಚಿಬಿಟ್ಟು ಬದುಕಿನಲ್ಲಿ ದಿಟ್ಟವಾದ ಹೊಸ ಮಾರ್ಗಕ್ಕೆ ಸ್ಪಂದಿಸುವುದು ಸಾಧ್ಯವಾಯಿತು. ಶಸ್ತ್ರಾಸ್ತ್ರ ಹೋರಾಟದಿಂದ ಆರಂಭಿಸಿದ ಅವಳ ಜೀವನ ಪಯಣ ಗಲಭೆಯೆದ್ದ ನೌಖಾಲಿಯಲ್ಲಿ ಗಾಂಧಿಯವರೊಂದಿಗೆ ಪಾದಯಾತ್ರೆ ಕೈಗೊಳ್ಳುವ ಕಾಂಗ್ರೆಸ್ ನೇತಾರಳಾಗುವವರೆಗೆ ಸಾಗುತ್ತದೆ. “ಶೃಂಖಲ್ ಝಂಕಾರ್” ಅವಳೊಬ್ಬಳ ಕತೆ ಮಾತ್ರವಾಗದೆ, ಆ ಕಾಲದ ಹೋರಾಟದ ಹಲವು ಮುಖಗಳನ್ನು ತೆರೆದಿಡುತ್ತದೆ.

ಬ್ರಿಟಿಷರ ಆಳ್ವಿಕೆ ಕೊನೆಗೊಂಡು ದೇಶ ಸ್ವತಂತ್ರವಾಗುವ ಸಂದರ್ಭ. 1947ರ ಜುಲೈ 8ರಂದು ಬೀನಾದಿ ತಮ್ಮ ಈ ಆತ್ಮಕಥನವನ್ನು ಬರೆಯಲು ಆರಂಭಿಸುತ್ತಾರೆ. ಆಗಸ್ಟ್ 10ರಂದು ಈ ಬರವಣಿಗೆಯನ್ನು ಮುಗಿಸುತ್ತಾರೆ. ಆಗ ಅವರ ವಯಸ್ಸು ಕೇವಲ ಮೂವತ್ತಾರು ವರ್ಷಗಳು ಅಷ್ಟೇ. ಅದರಲ್ಲಿ ಹತ್ತು ವರ್ಷಗಳ ಸೆರೆಮನೆ ವಾಸ. ಆ ಶೃಂಖಲೆಯ ಝೇಂಕಾರವನ್ನು ನೆನಪಿಸಿಕೊಳ್ಳುತ್ತಾ ತನ್ನ ಬದುಕಿನ ಅನುಭವದ ಕೆಲವು ಪದರಗಳನ್ನು ಇಲ್ಲಿ ಬಿಚ್ಚಿಡುತ್ತಾರೆ. ಈ ಅಲ್ಪಾವಧಿಯಲ್ಲಿಯೇ ಅವರು ದೇಶದ ಚರಿತ್ರೆಯಲ್ಲಿ ಖ್ಯಾತರಾದ ಹಲವಾರು ಮಂದಿಯನ್ನು ಭೇಟಿಯಾಗಿರುತ್ತಾರೆ. ಅವಳ ತಂದೆಯ ಶಿಷ್ಯರಾದ ಸುಭಾಷ್ ಚಂದ್ರಬೋಸ್, ಮಹಾತ್ಮ ಗಾಂಧಿ, ಅರುಣಾ ಅಸಫ್ ಆಲಿ, ಸುಚೇತಾ, ಮೀನು ಮಸಾನಿ… ಹೀಗೆ ಇನ್ನು ಹಲವರು. ಅವರೆಲ್ಲರೊಡನೆ ತಮ್ಮ ಅನುಭವವನ್ನು ಕುರಿತು ತಮ್ಮ ಆತ್ಮಕತೆಯಲ್ಲಿ ಬರೆಯುತ್ತಾರೆ.
ಗಾಂಧೀಜಿ ಮತ್ತು ಬೀನಾ ಅವರ ಭೇಟಿಯ ಚಿತ್ರಣ
ಬೀನಾ ದಿ ಆಲಿಪುರ್ ಸೆಂಟ್ರಲ್ ಜೈಲಿನಲ್ಲಿದ್ದಾಗ ಗಾಂಧೀಜಿಯವರು ಅವಳನ್ನು ಭೇಟಿಯಾಗುತ್ತಾರೆ. ಅವರು ಭೇಟಿಯಾಗಲು ಬರುತ್ತಾರೆ ಎಂದಾಗ ಬೀನಾಗೆ ಸ್ವಲ್ಪ ಹೆದರಿಕೆಯಾಗಿರುತ್ತದೆ. ಅಹಿಂಸೆಯ ಪ್ರತಿಪಾದಕರಾದ ಗಾಂಧಿ ತಮ್ಮ ಶಸ್ತ್ರಾಸ್ತ್ರ ಹೋರಾಟವನ್ನು ಕುರಿತು ಏನು ಹೇಳುವರೋ ಎಂಬ ಆತಂಕ. ಗಾಂಧಿ ಬೀನಾರ ಮುಖವನ್ನು ನೋಡಿದೊಡನೆ “ನೀವು ನನ್ನ ಬಳಿ ನೇರವಾದ ಮಾತುಗಳನ್ನಾಡಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಇದು ವಾಗ್ವಾದದ ಸಮಯವಲ್ಲ. ನೀವು ಒಮ್ಮೆ ಹೊರಗೆ ಬನ್ನಿ. ನಂತರ ನಾವು ಭೇಟಿಯಾಗಿ ಚರ್ಚಿಸೋಣ” ಎನ್ನುತ್ತಾರೆ. ಆಗ ಮಹದೇವ ದೇಸಾಯಿಯವರು “ನೀವು ಮಹಾತ್ಮ ಗಾಂಧಿಯವರ ಆಲೋಚನೆಗಳನ್ನು ಬದಲಿಸಬಹುದು” ಎಂದು ತಮಾಷೆ ಮಾಡುತ್ತಾರೆ. ಅದಕ್ಕೆ ಬೀನಾ ಉತ್ತರಿಸುತ್ತಾ, “ನಮಗೇನೂ ಗಾಂಧೀಜಿಯ ವಿಚಾರಗಳನ್ನು ಬದಲಿಸುವ ಆಸೆಯಿಲ್ಲ. ಮಹಾತ್ಮಾಜಿ, ನೀವು ನಮ್ಮದನ್ನು ಬದಲಾಯಿಸುವಿರಾ?” ಎಂದು ಕೇಳಿದಾಗ, ಗಾಂಧೀಜಿಯವರು ನಗುತ್ತಾ “ನಿಮಗೆ ಗೊತ್ತಿಲ್ಲವೆ, ನಾನೆಂದೂ ನನ್ನ ಆಸೆಯನ್ನು ಕೈಬಿಡುವವನೇ ಅಲ್ಲ” ಹಾಗೆಯೇ 1942ರಲ್ಲಿ ಪುಣೆಯ ಆರೋಗ್ಯಧಾಮದಲ್ಲಿ ಗಾಂಧೀಜಿಯವರು ವಿಶ್ರಾಂತಿ ಪಡೆಯುತ್ತಿದ್ದಾಗ ಬೀನಾ ಅಲ್ಲಿಗೆ ಹೋಗಿ ಅವರನ್ನು ಭೇಟಿಯಾಗುತ್ತಾರೆ.
ಆದರೆ, ಜೈಲಿನಿಂದ ಹೊರಬಂದ ಮೇಲೆ ಬೀನಾದಾಸ್ ಗಾಂಧಿ ಮಾರ್ಗವನ್ನು ಅನುಸರಿಸಿ ಸಾರ್ವಜನಿಕ ರಂಗದಲ್ಲಿ ಕ್ರಿಯಾಶೀಲರಾದದ್ದನ್ನು ನೋಡುತ್ತೇವೆ. ಸ್ವಾತಂತ್ರ್ಯಾನಂತರ ಭಾರತವೆಂಬ ವಿಶಾಲ ನಾಡನ್ನು ಪುನರ್ನಿರ್ಮಾಣ ಮಾಡಬೇಕಾದ ಸಂದರ್ಭದಲ್ಲಿ ಇರುವ ಬಡತನ, ಅನಕ್ಷರತೆ, ಜಾತೀಯತೆ ಮತ್ತು ಕೋಮು ವೈಷಮ್ಯದಂತಹ ಮೂಲಭೂತ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಎಂಬುದರ ಚಿಂತೆಯಲ್ಲಿ ಬೀನಾದಾಸ್ ತೊಡಗುತ್ತಾರೆ. ಸೆರೆಮನೆವಾಸದಿಂದ ಹೊರಬಂದ ನಂತರ ಕಾಂಗ್ರೆಸ್ ಕಾರ್ಯಕರ್ತಳಾಗಿ ಕೆಲಸ ಮಾಡುತ್ತಿದ್ದಾಗ ಬೀನಾ ಬಂಗಾಲದ ಚರಿತ್ರಾರ್ಹ ಧರಮ್ ತಲ ಸತ್ಯಾಗ್ರಹದಲ್ಲಿ ನಿದ್ರೆಗಳಿಲ್ಲದ ಹಲವಾರು ರಾತ್ರಿಗಳನ್ನು ಕಳೆಯುತ್ತಾರೆ. ಹಾಗೆಯೇ ಅಮೃತ್ ಬಜಾರ್ ಪತ್ರಿಕೆಯ ಶೋಷಿತ ಕಾರ್ಮಿಕರು ನಡೆಸುತ್ತಿದ್ದ ಮುಷ್ಕರದ ನೇತೃತ್ವ ವಹಿಸಿ, ಅದನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಗಲಭೆಯೆದ್ದ ನೌಖಾಲಿಯಲ್ಲಿ ಗಾಂಧಿಯವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪರಿಹಾರ ಕಾರ್ಯಗಳಿಗಾಗಿ ದುಡಿಯುತ್ತಾರೆ. ಶಾಲೆಗಳಿಲ್ಲದ ಹಳ್ಳಿಗಳಿಗೆ ಹೋಗಿ ಅಲ್ಲಿ ಶಾಲೆಗಳನ್ನು ಆರಂಭಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಕೊನೆಗೆ, ಸ್ವಾತಂತ್ರ್ಯ ಬಂದ ನಂತರ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯ ಕ್ಷೇತ್ರಕ್ಕೆ ಸೆಳೆಯಲ್ಪಟ್ಟು, ಅವರ ಪಕ್ಷದ ನಿರ್ದೇಶನದ ಮೇರೆಗೆ ಶಾಸಕಾಂಗ ಸಭೆಯ ಸದಸ್ಯರಾಗಿ ಚುನಾಯಿತರಾಗುತ್ತಾರೆ. ಆಗ ಸಮಕಾಲೀನ ರಾಜಕೀಯದಲ್ಲಿ ವ್ಯಾಪಿಸಿದ್ದ ಬದಲಾವಣೆಯನ್ನು ಕಂಡು ಅತ್ಯಂತ ವೇದನೆಗೊಳಗಾಗುತ್ತಾರೆ. ಆತ್ಮಾರ್ಪಣೆಯ ಆದರ್ಶದ ರಾಜಕೀಯವನ್ನು ತಕ್ಷಣವೇ ಅಧಿಕಾರದ ರಾಜಕೀಯವು ಆವರಿಸಿರುವುದನ್ನು ಕಾಣುತ್ತಾರೆ. ಅಸಂಖ್ಯ ಅನುಯಾಯಿಗಳಿದ್ದು ಹೇಗೆ ಗಾಂಧೀಜಿಯವರು ಒಂಟಿಯಾದರೋ ಹಾಗೆಯೇ ಬೀನಾ ಕೂಡ ಸಾಮಾಜಿಕ ಮೌಲ್ಯಗಳ ಪಲ್ಲಟದೊಡನೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಒಂಟಿಯಾಗುತ್ತಾರೆ.

ಬೀನಾದಾಸ್ ತಮ್ಮ ಆತ್ಮಕಥಾನಕವನ್ನು ತಾನು ಏಕೆ ಬರೆದೆ ಎಂದು ಪ್ರಶ್ನಿಸಿಕೊಳ್ಳುತ್ತಾ ಕೊನೆಯಲ್ಲಿ ಹೀಗೆ ಬರೆಯುತ್ತಾರೆ: “ಇದನ್ನು ಬರೆಯಲು ಆರಂಭಿಸಿದಾಗ ನಾನು ಏನು ಹೇಳಬೇಕೆಂದಿದ್ದೆ, ಎಂಬುದರ ಬಗ್ಗೆ ನನಗೆ ತಿಳಿಯದು. ನನ್ನ ಕಾರ್ಯಕ್ಷೇತ್ರಕ್ಕೆ ವಿದಾಯ ಹೇಳಬಯಸಿದ್ದನೇ? ನಿಜವಾಗಿಯೂ ಕೆಲವೊಮ್ಮೆ ನನ್ನ ಮನಸ್ಸು ಮತ್ತು ಶರೀರವು ಆಯಾಸದಿಂದ ಬಳಲಿ ಬೆಂಡಾಗಿ ಸೋತುಹೋಗುತ್ತದೆ. ನನ್ನ ಜೀವನ ರಥದ ಚಕ್ರಗಳ ಅವಿರತ ಚಲನೆಗೆ ಇತಿಶ್ರೀ ಹಾಡಬೇಕೆಂದಿದ್ದೇನೆ ಎಂದು ಪ್ರಶ್ನಿಸಿಕೊಳ್ಳುತ್ತಾರೆ. ಈ ಕೃತಿಯು ಆರಂಭವಾಗುವುದೇ ಭಾರತದ ಶೃಂಖಲೆಯು ಕಳಚಿ ದೇಶವು ಸ್ವತಂತ್ರವಾಗಲಿರುವ ಒಂದು ತಿಂಗಳ ಮುಂಚೆ. ಆಗ ಬೀನಾ ಅವರಿಗೆ ಮೂವತ್ತಾರು ವರ್ಷ ವಯಸ್ಸು. ಒಂದು ಫ್ಲಾಷ್ ಬ್ಯಾಕ್ ತಂತ್ರದಲ್ಲಿ ಹಿಂದಕ್ಕೆ ಹೋಗಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ತೊಡಿಸಿಕೊಂಡ ಶೃಂಖಲೆಯ ಝೇಂಕಾರದ ನಾದದ ವಿವಿಧ ಪದರಗಳನ್ನು ಬಿಚ್ಚಿಡುವ ಮತ್ತು ಅವರ ಬಾಲ್ಯದ ಆದರ್ಶಮಯ ಪರಿಸರದ ಸುಂದರ ಚಿತ್ರವನ್ನು ಕೊಡುತ್ತಾರೆ.
ದೇಶ ಸ್ವತಂತ್ರಗೊಂಡ ಸಂದರ್ಭವನ್ನು ಕಾವ್ಯಾತ್ಮಕವಾದ ಅವರ ಭಾಷೆಯಲ್ಲಿ ಗಮನಿಸೋಣ: “ಆಗಸ್ಟ್ ಹದಿನೈದು ಇನ್ನೇನು ಹತ್ತಿರಕ್ಕೆ ಬರುತ್ತಿದೆ. ಹತಾಶೆ ತುಂಬಿದ ಮನಸ್ಸು, ಖಿನ್ನತೆಯಿಂದ ಭಾರವಾದ ಹೃದಯ, ದೊಡ್ಡದಾಗುತ್ತಿರುವ ಸಂಶಯದ ಕಾರ್ಮೋಡಗಳು, ಅಂತೂ ಕೊನೆಗೆ ನಾವು ಸ್ವತಂತ್ರರಾಗುತ್ತಿದ್ದೇವೆ, ಕನಸಾಗಿದ್ದುದು ಇಂದು ನನಸಾಗುತ್ತಿದೆ ಎಂಬ ಸಂಗತಿ ನೆನೆದಾಗ ಮಿಂಚಿನಂತೆ ಎದೆ ಝಲ್ಲೆನಿಸುತ್ತದೆ… ಸ್ವತಂತ್ರಗೊಂಡರೂ ವಿಮೋಚನೆಯ ಸೂರ್ಯ ಉದಯಿಸಿದರೂ ಏಕೆ ದೇಶ ಇನ್ನೂ ಪ್ರಕಾಶಮಾನವಾಗಿಲ್ಲ? ನಮ್ಮ ಕನಸಿನ ಸ್ವಾತಂತ್ರ್ಯ ಇದೇನಾ? ದೇಶ ವಿಭಜನೆಯಿಂದ ಭಗ್ನಗೊಂಡ ಕನಸು, ಬಂಧುಗಳ ಹತ್ಯೆ, ರಕ್ತದೋಕುಳಿಯ ಕ್ರೂರ ಆಟ, ಸಣ್ಣ ಸ್ವಾರ್ಥದ ಆಮಿಷ? ಇದೆಲ್ಲದರ ನಡುವೆ ದಾಸ್ಯದಿಂದ ಮುಕ್ತವಾಗುತ್ತಿರುವ ನಮ್ಮ ತಾಯಿನಾಡು, ಕತ್ತಲೆಯ ಮಬ್ಬಿನಿಂದ ಹೊರಬಂದು ಶುಭ್ರಳಾಗುತ್ತಿರುವಾಗ ನಮ್ಮ ಮಾತೃಭೂಮಿಯನ್ನು ಮರೆಯಲು ಇಚ್ಛಿಸುವುದಿಲ್ಲ.
ಈ ಸ್ವಾತಂತ್ರ್ಯದ ಬೆಳಕಿನಲ್ಲಿ, ಮುಸ್ಸಂಜೆಯ ಬೆಳಕಿನ ನೆರಳಿನಲ್ಲಿ ಒಂದು ಕ್ಷಣ ಚಿಂತಿಸಲು ಬಯಸುವೆ. ಮಂದಪ್ರಕಾಶದ ಮುಂಜಾವಿನ ಬೆಳಕಿನಲ್ಲಿ ನನ್ನ ಬಾಳಪುಟಗಳನ್ನು ತಿರುವಿ ಹಾಕುತ್ತಾ ಅದನ್ನು ಮೌಲ್ಯಮಾಪನಕ್ಕೊಡ್ಡುತ್ತೇನೆ. ಹೊಸಯುಗವೊಂದು ತಕ್ಷಣವೇ ಆವಿರ್ಭವಿಸಲಿದೆ. ನಾವೆಲ್ಲ ಅದನ್ನು ಸ್ವಾಗತಿಸಲು ಸಿದ್ಧರಿರೋಣ. ಒಂದು ಕ್ಷಣ ಬಿಡುವು ತೆಗೆದುಕೊಂಡು ಕಳೆದುಹೋಗುತ್ತಿರುವ ದಿನಗಳ ಬಗ್ಗೆ ಯೋಚಿಸಲು ಬಯಸುವೆ. ನನ್ನ ಆ ಕಾಲದ ಸಂಗೀತದ ಲಯವನ್ನು ಈ ಪುಟಗಳಲ್ಲಿ ಹಿಡಿದಿಡಲು ಪ್ರಯತ್ನಿಸುವೆ. ಭೂತಕಾಲವು ತಕ್ಷಣವೇ ಮರೆವಿಗೆ ಜಾರುತ್ತದೆಂಬುದು ನನಗೆ ಗೊತ್ತು. ಅಂದಿನ ನೋವಿನ ದಿನಗಳ ನೆನಪುಗಳು ಇಂದಿನ ಜ್ವಲಂತ ಸಮಸ್ಯೆಗಳ ನಡುವಿನಲ್ಲಿ ಕಳೆದೇ ಹೋಗುತ್ತದೆ. ಆದರೂ ಭೂತಕಾಲದ ಹೃದಯಸ್ಪರ್ಶಿ ಸಂಗೀತವು ಹೊಸ ಭಾರತದ ವೈಭವಯುತ ಬೆಳಗಿನಲ್ಲಿ ಅಸಮ್ಮತಿಯ ಭಾಷ್ಯವನ್ನೇನೂ ಬರೆಯುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಯಾತ್ರಿಕರು ಒಂದು ಕ್ಷಣ ನಿಂತು ಕಳೆದುಹೋದ ವಿಷಾದಮಯ ದಿನಗಳತ್ತ ಪರಿಶುದ್ಧ ಮನಸ್ಸಿನಿಂದ ಹಿಂತಿರುಗಿ ನೋಡಲಿ.
ಇದನ್ನೂ ಓದಿ ಭೂಮ್ತಾಯಿ | ನೀವರಿಯದ ಸಂಗತಿ: ಗರ್ಭಿಣಿ- ನವಜಾತ ಶಿಶುಗಳಿಗೆ ಕಂಟಕವಾಗುತ್ತಿರುವ ಹವಾಮಾನ ಬದಲಾವಣೆ
ಮಾನವ ಕುಲದ ದುಃಖ-ದುಮ್ಮಾನಗಳನ್ನು ಕೇಳುತ್ತಲೇ ನಾನು ನನ್ನ ಜೀವನ ಯಾತ್ರೆಯನ್ನು ಆರಂಭಿಸಿದೆ. ಮನುಷ್ಯನ ಸಂಕಟಗಳಿಗೆ ಕೊನೆಯೇ ಇಲ್ಲವಾಗಿದೆ. ನಮ್ಮ ಸುತ್ತಲೂ ಹಸಿವಿನ ಆಕ್ರಂದನ, ವಂಚಿತರ ನೋವುಗಳು ಸದಾ ಮೊರೆಯುತ್ತಲೇ ಇವೆ. ವಿರಮಿಸಲು ಸಮಯ ಇನ್ನೂ ದೂರವಿದೆ. ವಿರಾಮದ ಬಗ್ಗೆ ಸದ್ಯಕ್ಕೆ ಯೋಚಿಸುವಂತಿಲ್ಲ. ಇಂದು ನನ್ನ ಪ್ರಾರ್ಥನೆ ಒಂದೇ- ಸಂಕಷ್ಟಕ್ಕೆ ಸಿಲುಕಿರುವ ಮನುಕುಲದ ಹಿತಕ್ಕಾಗಿ ಸಕ್ರಿಯವಾಗಿ ಉಳಿಯುವುದು. ನಿಷ್ಕ್ರಿಯೆಯ ಉಸುಕಿನಲ್ಲಿ ಸಿಕ್ಕಿ ಕಳೆದುಹೋಗದಿರುವುದು, ನನ್ನ ಜೀವನದ ಕೊನೆಯವರೆಗೂ ಕವಿ ರವೀಂದ್ರನಾಥರ ನುಡಿಯನ್ನು ನುಡಿಯುವಷ್ಟು ಶಕ್ತಿ ಉಳಿದಿರಲೆಂದು ಆಶಿಸುತ್ತೇನೆ.
ನಿರಂತರ ಚಟುವಟಿಕೆಯಿಂದ ದಣಿವಾಗಿದ್ದರೂ
ಕೂರಲಾರೆನು ನಾನು ಶಾಂತಳಾಗಿ
ಮುಗಿಲು ಮುಟ್ಟುವ ಮನುಕುಲದ ಆಕ್ರಂದನ
ಎಂದು ನಿಲ್ಲುವುದೊ
ಅನಾಚಾರಿಗಳ ಖಡ್ಗವು
ತನ್ನ ಕ್ರೂರ ಕಾದಾಟವನ್ನು ಎಂದು ಕೊನೆಗೊಳಿಸುವುದೊ
ನನಗಿಲ್ಲ ವಿರಾಮ ಅಲ್ಲಿಯ ತನಕ
ಹೊಸ ಸಂವತ್ಸರದ ಇಪ್ಪತ್ತೈದು ವರ್ಷಗಳನ್ನು ಕಳೆದ ಮೇಲೂ ಭಾರತದ ಪರಿಸ್ಥಿತಿ ಹೀಗೆ ಇದೆ ಅಥವಾ ಇನ್ನೂ ಹದಗೆಟ್ಟಿದೆ – ಎಂಬುದನ್ನು ಇಂದು ಚಿಂತಿಸುವಾಗ ಈ ಆತ್ಮಚರಿತ್ರೆಯ ಸಂದೇಶ ಇಂದಿಗೂ ಸಕಾಲಿಕವಾಗಿದೆ ಎಂದೆನಿಸದೇ ಇರದು.
ಇದನ್ನೂ ಓದಿ ಒಳದನಿ | ವಿದ್ಯಾವಂತ ವೇಶ್ಯೆಯೊಬ್ಬಳ ಆತ್ಮಕಥೆ
ಒಳದನಿ | ಕವಯಿತ್ರಿ ಲಕ್ಷ್ಮೀಬಾಯಿ ತಿಲಕರ ‘ಸ್ಮೃತಿ ಚಿತ್ರೆ’
ಒಳದನಿ | ಭಾರತದ ಮೊದಲ ಮಹಿಳಾ ಆತ್ಮಚರಿತ್ರೆ ‘ಅಮಾರ್ ಜಿಬನ್’

ಡಾ.ಎನ್. ಗಾಯತ್ರಿ
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. ಮಹಿಳಾ ಪರ ಚಿಂತಕಿಯಾಗಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು, ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು: 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ಜೋಲಿಯೂ ಕ್ಯೂರಿ (ಅನುವಾದ), ಭಗತ್‌ಸಿಂಗ್ ಮತ್ತು ಅವನ ಸಂಗಾತಿಗಳು (ವ್ಯಕ್ತಿ ಚಿತ್ರ), ನಾನೇಕ ನಾಸ್ತಿಕ (ಅನುವಾದ), ತ್ರಿವೇಣಿಯವರ ಬಗ್ಗೆ ಬರೆದ ಲೇಖನಗಳ ಸಂಗ್ರಹ (ಸಂಪಾದಿತ).




