ಆಧುನಿಕತೆ ನುಸುಳದೇ ಇದ್ದ ಕಾಲದಲ್ಲಿಯೇ ಕೆಳವರ್ಗದವರಲ್ಲಿ ಸೀರುಡಿಕೆ, ಕೂಡಿಕೆ, ಕೂಡಾವಳಿ, ಉಡಕಿ ಮೂಲಕ ವಿಧವಾ ವಿವಾಹಕ್ಕೆ ಅವಕಾಶವಿತ್ತು. ಆದರೆ ಮೇಲ್ವರ್ಗದ ಮಹಿಳೆಯರಿಗೆ ಈ ಅವಕಾಶವೂ ಇದ್ದಿಲ್ಲ. ವಿವಾಹ, ಕುಟುಂಬಗಳೆಂಬ ಸಾಮಾಜಿಕ ಸಂಸ್ಥೆಗಳನ್ನು ಪುರುಷಪ್ರಧಾನ ಪಾಳೇಗಾರಿ ಮೌಲ್ಯಗಳೇ ಹುಟ್ಟುಹಾಕಿವೆ. ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ವಿವಾಹ ಸಂಸ್ಥೆಯನ್ನು ಬಲವಾಗಿ ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ಚಿಂತಕರು.
ಡಿಸೆಂಬರ್ 1, 2025 ರಂದು ಖ್ಯಾತ ಅಭಿನೇತ್ರಿ, ಸಂಸದೆ ಜಯಾಬಚ್ಚನ್ ಮುಂಬೈಯಲ್ಲಿ ಬರ್ಖಾ ದತ್ತ ನಡೆಸಿಕೊಟ್ಟ “ವೀ ದ ವುಮನ್ ಏಷ್ಯಾ” ಕಾರ್ಯಕ್ರಮದಲ್ಲಿ ವಿವಾಹದ ಬಗ್ಗೆ ನೀಡಿದ ಹೇಳಿಕೆಯು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದೆ. ಬರ್ಖಾ ಕೇಳುತ್ತಿದ್ದ ಪ್ರಶ್ನೆಗಳ ಹಿನ್ನೆಲೆಯಲ್ಲಿ ಜಯಾ ತಮ್ಮ ಮೊಮ್ಮಗಳು ನವ್ಯಾಗೆ ಈಗ 28 ವರ್ಷ. ಆದರೆ ನವ್ಯಾ ಮದುವೆಯಾಗುವುದು ನನಗೆ ಇಷ್ಟವಿಲ್ಲ” ಎನ್ನುತ್ತಾರೆ. ಮುಂದುವರಿದು ವಿವಾಹ ಮಹತ್ವದ ಕುರಿತು ಪ್ರಶ್ನೆ ಕೇಳಿದಾಗ ”ಜಸ್ಟ್ ಎಂಜಾಯ್ ಯುವರ್ ಲೈಫ್” ಎಂದು ಹೇಳುತ್ತಾರೆ. ಈ ಮಾತು ಸಾಕಷ್ಟು ಬಿರುಗಾಳಿಯನ್ನೇ ಎಬ್ಬಿಸಿದೆ.
ಪ್ರೇಕ್ಷಕರಲ್ಲಿ ಒಬ್ಬ ಯುವತಿ- ಇಂದಿನ ಹೊಸ ತಾಯಂದಿರಿಗೆ ನೀವು ಏನು ಹೇಳಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ “ಈಗಿನ ಹುಡುಗ-ಹುಡುಗಿಯರು ಅವರ ಅಜ್ಜ-ಅಜ್ಜಿಗಿಂತ ಹೆಚ್ಚು ಜಾಣರಾಗಿರುತ್ತಾರೆ ಎಂದು ಹೇಳಿದ್ದಾರೆ. ಮಕ್ಕಳನ್ನು ಹೇಗೆ ಬೆಳೆಸಬೇಕೆನ್ನುವ ಸಲಹೆಯನ್ನು ನಾವು ಅವರಿಗೆ ನೀಡಲು ಸಾಧ್ಯ ಇಲ್ಲ ಯಾಕೆಂದರೆ ನಾವು ಹಳೆಯ ಕಾಲದವರು” ಎನ್ನುತ್ತಾರೆ. ಈ ಮಾತನ್ನು ವೈಯಕ್ತಿಕವಾಗಿ ನಾನೂ ಒಪ್ಪುತ್ತೇನೆ. ಈಗ ಯಾರಿಗೂ ಯಾರ ಸಲಹೆ ಬೇಕಿಲ್ಲ. ಎಲ್ಲರೂ ಎಲ್ಲಾ ಬಲ್ಲವರೇ, ಹಿಂದಿನವರಿಗಿಂತ ತಾವು ಹೆಚ್ಚು ತಿಳಿದಿದ್ದೇವೆ ಎನ್ನುವವರೇ. ತಂದೆ ತಾಯಿ ಅಜ್ಜ ಅಜ್ಜಿಯರು ಬೇಬಿ ಸಿಟ್ಟಿಂಗ್‍ಗಷ್ಟೇ ಸೀಮಿತರು.
ವಿವಾಹ ಸಂಸ್ಥೆ ಮಾನವ ಸಮಾಜದ ಮೂಲಭೂತ ಅಡಿಪಾಯವಾಗಿದೆ. ಇದು ಇಬ್ಬರು ವ್ಯಕ್ತಿಗಳ ನಡುವಿನ ದೈಹಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಂಬಂಧವನ್ನು ಕಾನೂನುಬದ್ಧವಾಗಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಗುರುತಿಸುತ್ತದೆ ಎನ್ನುತ್ತಾರೆ. ಆದರೆ ಈಗ ಬಹುತೇಕ ಯುವವರ್ಗ ಮದುವೆಯೇ ಬೇಡ, ಮಕ್ಕಳೂ ಬೇಡ, ಮದುವೆಯೇ ಅಂತಿಮ ಎಂದೇಕೆ ಆಗಬೇಕು?” ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಾ ಬಚ್ಚನ್ ಹೇಳಿದ ವಿಷಯಗಳು ಕೇವಲ ಅವರ ವೈಯಕ್ತಿಕ ಅಭಿಪ್ರಾಯವಾಗಿ ಉಳಿಯುವ ಬದಲು ವರ್ತಮಾನದಲ್ಲಿ ಆಧುನಿಕ ಸಮಾಜದಲ್ಲಿ ಸಂಬಂಧಗಳ ಮಹತ್ವ, ಮಹಿಳಾ ಸ್ವಾತಂತ್ರ್ಯ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರಶ್ನಿಸುವಂತಿದೆ. ಎಲ್ಲೋ ಒಂದು ಕಡೆ ತನ್ನ ಮೌಲಿಕ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ವಿವಾಹಸಂಸ್ಥೆಯನ್ನು ಕುರಿತೂ ಯುವವರ್ಗ ಹಾಗೂ ಮಹಿಳೆಯರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಮೂವತ್ತರ ದಶಕದ ಆಚೆಯೀಚೆಗಿನ ನಮ್ಮ ತಾಯಂದಿರ ಕಾಲ, ಅರವತ್ತು ಎಪ್ಪತ್ತರ ದಶಕದಲ್ಲಿ ಹುಟ್ಟಿದ ನಮ್ಮ ಕಾಲ, ಈಗ ನಮ್ಮ ಮಕ್ಕಳ ಹಾಗೂ ಈಗಿನ ಮೊಮ್ಮಕ್ಕಳ ಕಾಲಘಟ್ಟದ ತಲೆಮಾರುಗಳಷ್ಟು ಅಂತರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಾಲ ಬದಲಾದಂತೆ ಮನುಷ್ಯನ ಬದುಕಿನ ಸ್ತರ ಮತ್ತು ಮೌಲ್ಯಗಳೂ ನವ ಜಾಗತೀಕರಣದ ಕವಣೆ ಬೀಸಿನಿಂದ ತಪ್ಪಿಸಿಕೊಳ್ಳಲಾಗದೇ ಕಾಲಪ್ರವಾಹದೊಂದಿಗೆ ಕೊಚ್ಚಿಹೋಗುತ್ತಿದೆ ಮತ್ತು ಹೀಗೆ ಸಾಗುತ್ತಿರುವುದೇ ಜೀವನ ಎಂದು ವ್ಯಾಖ್ಯಾನಿಸಬಹುದೇನೋ.
ನಮ್ಮ ಪಂಜಾಬಿ ಸಂಬಂಧಿಕರ ಕುಟುಂಬಗಳಲ್ಲಿ ನಡೆದ ಹಾಗೂ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಸಮಾಜವೂ ಆಧುನಿಕ ಕಾಲದ ಎಲ್ಲ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಲೇ ತನ್ನನ್ನು ನವೀಕರಿಸಿಕೊಳ್ಳುತ್ತ ಚಲನಶೀಲವಾಗಿರುವುದನ್ನು ಕಾಣುತ್ತೇನೆ. ಕನಿಷ್ಠ ಒಂದು ಮೂರು ಕುಟುಂಬಗಳಲ್ಲಿ ಹೊಸದಾಗಿ ಮದುವೆಯಾದ ಮದುಮಗಳು ಒಂದಿಲ್ಲಾ ಒಂದು ಕಾರಣದಿಂದ ಬಾಳಲಾಗದೇ ಮನೆಬಿಟ್ಟು ಹೋಗಿರುವರು. ಮೊದಲ ನೋಟದಲ್ಲಿ ಪ್ರೀತಿಯಾಗಿ ಆ ಪ್ರೀತಿಯ ಆವೇಶ ಕಡಿಮೆಯಾದ ನಂತರ ಬದುಕಿನ ವಾಸ್ತವತೆ ಎದುರಾದಾಗ ಯುವತಿಯರು ಆ ಸಂಬಂಧವನ್ನು ತೊರೆದು ಬೇರೆಯಾದದ್ದನ್ನು ಕಂಡು ಮೊದ ಮೊದಲು ಇದೆಲ್ಲ ಇಷ್ಟು ಸುಲಭವೇ? ಎಂದು ಅಚ್ಚರಿಪಟ್ಟಿದ್ದೆ.

ಪ್ರವಾಸದಲ್ಲಿ ಪರಿಚಿತವಾದ ಹಿಮಾಚಲದ ಯುವತಿ ಈ ಪಂಜಾಬಿ ಯುವಕನನ್ನು ಆರ್ಯ ಸಮಾಜದಲ್ಲಿ ಮದುವೆಯಾಗಿ ಇಲ್ಲಿ ಬಂದಳು. ಹುಡುಗನ ಮನೆಯವರು ಶ್ರೀಮಂತರಲ್ಲ. ಹುಡುಗನಿಗೆ ಸರಿಯಾದ ಕೆಲಸವೂ ಇದ್ದಿಲ್ಲ. ಆಕೆ ಓದಬೇಕೆಂದಳು, ಸಿವಿಲ್ ಸರ್ವಿಸ್ ಗೆ ಸಿದ್ಧತೆಮಾದಬೇಕು ಎಂದಳು. ಹುಡುಗನ ಮನೆಯವರು ಸೊಸೆಯಿಂದಲಾದರೂ ಮಗನ ಬದುಕು ಹಸನಾದೀತೆಂದು ಕಷ್ಟಪಟ್ಟು ಓದಿಸತೊಡಗಿದರು. ಮನೆಯಲ್ಲಿ ಓದಲಾಗದು ಎಂದು ಮುಖರ್ಜಿ ನಗರದ ಕೋಚಿಂಗ್ ಸೆಂಟರಿನ ಹತ್ತಿರದ ಪಿಜೀ ಸೇರಿದಳು. ಆಗಲೇ ಮದುವೆಯ ಹುರುಪು ಕಳೆದು ಮದುವೆ ಬಂಧನವೆನಿಸತೊಡಗಿತು ಆಕೆಗೆ. ಬಹುಶಃ ಆಕೆ ಕಟ್ಟಿಕೊಂಡ ಕನಸಿನಂತಿರಲಿಲ್ಲ ಅವಳ ವಿವಾಹಿತ ಬದುಕು. ಒಂದಿನ ಮನೆ ತೊರೆದು ಹೋದಳು. ಆಕೆ ಕೊಟ್ಟ ಕಾರಣ “ಹುಡುಗನಿಗೆ ಒಳ್ಳೆಯ ಕೆಲಸವಿಲ್ಲ. ಹಣವಿಲ್ಲ. ಒಳ್ಳೆಯ ಮನೆಯಿಲ್ಲ. ನನಗಿಲ್ಲಿ ಯಾವ ಭವಿಷ್ಯವೂ ಕಾಣುತ್ತಿಲ್ಲ” ಎಂದು. ನಂತರ ಜನರೆಂದರು– ’ಆಕೆಗೆ ಇನ್ನೊಬ್ಬನೊಂದಿಗೆ ಪ್ರೇಮವುಂಟಾಗಿತ್ತು. ಅದಕ್ಕೇ ಈ ನೆಪ, ಅವನೊಂದಿಗೆ ಹೋದಳು’ ಎಂದು.
ಇನ್ನೊಂದು ಕುಟುಂಬದಲ್ಲೂ ಇಂತಹದ್ದೇ ಕತೆ. ಕಾರಣ ಬೇರೆ. ದೊಡ್ದ ಶ್ರೀಮಂತ ಕುಟುಂಬ. ಮದುವೆಯಾಗಿ ಬಂದವಳಿಗೆ ತಾನು ಹಾಗಿರಬೇಕು, ಹೀಗಿರಬೇಕು ಎಂಬ ಕನಸುಗಳು. ಅತ್ತೆ ಅವಳಿಗೆ ಇಂತಹ ಕಿರಿದಾದ ಬಟ್ಟೆ ತೊಡಬೇಡ, ಎದುರುತ್ತರ ಕೊಡಬೇಡ, ಒಬ್ಬಳೇ ಹೊರಗಡೆ ಅತ್ತ ಇತ್ತ ಹೋಗಬೇಡ, ಹೀಗಿರು ಹಾಗಿರು ಎಂದು ಹೇಳುತ್ತಿದ್ದುದು ಕಿರಿಕಿರಿಯೆನಿಸಿ ಇಂತಹ ಕಿರಿಕಿರಿಯಲ್ಲಿ ತಾನಿರಲಾರೆ ಎಂದು ಮನೆ ತೊರೆದು ಹೋದಳು. ಇನ್ನೊಬ್ಬ ಯುವತಿಗೆ, “ಮನೆಯಲ್ಲಿ ಮನೆಗೆಲಸ ಮಾಡಿಸುತ್ತಾರೆ, ಕೆಲಸದವರನ್ನು ಇಟ್ಟಿಲ್ಲ, ತಾನೇನು ಮನೆಗೆಲಸದವಳೇ ಇವರ ಮನೆಯಲ್ಲಿ ಕೆಲಸಮಾಡಿಕೊಂಡಿರಲು?” ಎಂದು ಮನೆತೊರೆದು ಹೋದಳು.
ಇನ್ನೊಬ್ಬ ಯುವ ದಂಪತಿಗಳು ತಮ್ಮ ಹತ್ತು ವರ್ಷದ ಪ್ರೇಮದ ಕತೆಯನ್ನು, ಕಾಲೇಜಿನ ದಿನಗಳಲ್ಲಿ ಆ ಹುಡುಗಿಗಾಗಿ ಹುಡುಗ ಅನೇಕ ಪುಂಡರನ್ನು ಚಚ್ಚಿದ್ದು, ಇನ್ಯಾರನ್ನೋ ಮನೆಯಿಂದ ಹೊರದಬ್ಬಿದ್ದು ಇತ್ಯಾದಿ ರೋಚಕ ಕತೆಯನ್ನು ಹೇಳುತ್ತಿದ್ದವರೇ ಒಂದಿನ ಬೇರೆಯಾದರು. ಯಾರಿಗೂ ನಂಬಲಾಗಲಿಲ್ಲ. ಯಾವುದೊ ಒಂದು ವಿಷಯಕ್ಕೆ ಹುಡುಗ ಆಕೆಯ ಕೆನ್ನೆಗೆ ಹೊಡೆದನಂತೆ. ಅದೇ ಕಾರಣಕ್ಕೆ ಆಕೆ ಮನೆ ತೊರೆದು ಹೋದಳು ಪುನಃ ಇವರಿಬ್ಬರೂ ಒಂದಾಗಲೇ ಇಲ್ಲ. ಈ ಹುಡುಗ ನನ್ನ ಮಗನ ಸ್ಕೂಲ ಗೆಳೆಯ. ನಾನೂ ಒಂದನೇ ತರಗತಿಯಿಂದ ಅವರನ್ನು ಕಂಡವಳು. ಹತ್ತಿರದ ಎಳೆಯರ ಜೀವನದಲ್ಲಿ ಇಂತಹ ಘಟನೆ ನಡೆದಾಗ ಆಧುನಿಕತೆಯನ್ನು ಒಪ್ಪುತ್ತ ಪ್ರೇಮವನ್ನು ಎತ್ತರದಲ್ಲಿಟ್ಟು ನೋಡುವವಳಾದ ನಾನು ಸಣ್ಣ ಪುಟ್ಟ ಕಾರಣಕ್ಕೆ ಅವರ ಬಾಳು ಮೂರಾಬಟ್ಟೆ ಆಗಬಾರದಲ್ಲ ಎಂದು ಬುದ್ಧಿ ಹೇಳಲು ಪ್ರಯತ್ನಿಸಿದ್ದೆ. “ಆತ ಹೊಡೆದದ್ದು ತಪ್ಪು ಆದರೆ ಇನ್ನೊಂದು ಚಾನ್ಸ್ ಕೊಡಬೇಕಾದ್ದೂ ನಿನ್ನ ಕರ್ತವ್ಯ” ಎಂತೆಂತಹ ಅಪರಾಧಿಗಳಿಗೂ ಸುಧಾರಿಸುವ, ತಿದ್ದಿಕೊಳ್ಳುವ ಅವಕಾಶವನ್ನು ಕೊಡುತ್ತಾರಲ್ಲವೇ? ಕ್ಷಮಿಸಿಬಿಡು ಒಮ್ಮೆ” ಎಂದರೂ ಆಕೆ ಕೇಳಿಸಿಕೊಳ್ಳಲಿಲ್ಲ.
ಇಂತಹ ನೂರಾರು ಘಟನೆಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿವೆ. ಎಷ್ಟು ಸುಲಭವಾಗಿ ಈ ತಲೆಮಾರಿನವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಕಾಲದಲ್ಲಿ ಹೀಗೆ ಯೋಚಿಸಲೂ ಭಯವಾಗುತ್ತಿತ್ತು. ನಮ್ಮ ತಲೆಮಾರಿನ ಯೋಚನೆಗಳು, ಆದರ್ಶಗಳು, ಸಿದ್ಧಾಂತಗಳು ಇಂದಿನವರಿಗೆ ನಗೆಯ ವಿಷಯಗಳಾಗಬಹುದು. ವಿವಾಹ ಸಂಸ್ಥೆಯ ಚೌಕಟ್ಟಿನಲ್ಲಿಈ ಹೊತ್ತು ಬದುಕುತ್ತಿರುವವರೆಂದರೆ ನಮ್ಮ ಹಿಂದಿನ ಹಾಗೂ ನಮ್ಮ ಪೀಳಿಗೆಯಷ್ಟೇ ಎಂದು ಮುಂದೊಮ್ಮೆ ಹೇಳುವ ಪರಿಸ್ಥಿತಿ ಬರಬಹುದು. ಹಾಗಿದೆ ಇವತ್ತಿನ ಯುವ ಜನಾಂಗ. ಯಾರೂ ಮನೆಯ ಕೆಲಸ (ಅಡುಗೆ, ಇತ್ಯಾದಿ) ಮಾಡಲು ಇಷ್ಟಪಡುವುದಿಲ್ಲವಂತೆ. ಯಾಕೆಂದರೆ ಅವರಿಗೆ ಉದ್ಯೋಗದಲ್ಲಿನ ಒತ್ತಡ ಅಷ್ಟಿರುತ್ತದೆ. ಅದರ ಮೇಲೆ ಮನೆ ಕೆಲಸ ಮಾಡು, ಅಡುಗೆ ಮಾಡು” ಎನ್ನುವಷ್ಟು ಪುರಸೊತ್ತಾಗಲಿ, ತಾಳ್ಮೆಯಾಗಲಿ ಇರುವುದಿಲ್ಲವಂತೆ. ಹೊಂದಾಣಿಕೆಯನ್ನು ಮಾಡಿಕೊಳ್ಳುವಷ್ಟು ಮಾಡಿಕೊಳ್ಳುತ್ತೇವೆ ಇತರರ ಉಪದೇಶ ಬೇಕಿಲ್ಲ. ಅಷ್ಟಕ್ಕೂ ನಾವು ಗಳಿಸುವುದಾದರೂ ಯಾತಕ್ಕೆ. ನಮ್ಮ ಸುಖ ಸೌಕರ್ಯಗಳಿಗೆ ಒದಗದಿದ್ದರೆ ಇಷ್ಟು ಕಷ್ಟಪಡುವುದ್ಯಾಕೆ? ಇದು ಇಂದಿನವರ ತರ್ಕ.

ಇವೆಲ್ಲಾ ಘಟನೆಗಳು ಕಣ್ಣಮುಂದಿನ ಘಟನೆಗಳೇ. ತಲೆ ಮೇಲೆ ಸುತ್ತಿಗೆಯಿಂದ ಕುಟ್ಟಿದಂತೆ ಒಮ್ಮೆಗೆ ಎದುರಾದ ಬದಲಾವಣೆ, ಹಠಾತ್ತಾಗಿ ಮಕ್ಕಳ ಬದುಕಿನಲ್ಲಿ ಎರಗಿ ಬಂದ ಆಘಾತಗಳನ್ನು ಆಯಾ ಕುಟುಂಬಗಳು ಹೇಗೆ ಎದುರಿಸಿರಬಹುದು ಎಂಬ ಯೋಚನೆ ಕಾಡುತ್ತದೆ. ಇದಕ್ಕೆ ಹೊರತಾಗಿ ಹೊಂದಾಣಿಕೆಯಾಗದ ದಂಪತಿಗಳು ವಿಚ್ಚೇದನ ಪಡೆದುಕೊಂಡೋ ಪಡೆದುಕೊಳ್ಳದೆಯೋ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತ ಮಕ್ಕಳನ್ನು ನೋಡಿಕೊಳ್ಳುತ್ತ ಬದುಕುವವರೂ ಇದ್ದಾರೆ. ವಿಷಮ ದಾಂಪತ್ಯದಲ್ಲಿದ್ದು ಏನೂ ಮಾಡಲಾಗದವರು ಹಲ್ಲುಮುಡಿ ಕಚ್ಚಿಕೊಂಡು ಇದ್ದಷ್ಟು ದಿನ ಬದುಕುವುದೇ ತಮ್ಮ ಕರ್ಮ ಎಂದು ತಮಗೇ ಸಮಾಧಾನ ಹೇಳಿಕೊಂಡು ಬದುಕುತ್ತಿರುವವರೂ ಉಂಟು.
ಖ್ಯಾತ ಲೇಖಕ, ಅಂಕಣಕಾರ ಕುಶ್ವಂತ್ ಸಿಂಗ್ ಅವರ ಬದುಕಿನ ಬಗ್ಗೆ ಎಲ್ಲೋ ಓದಿದ್ದೇನೆ. ಅವರ ಪತ್ನಿಯೊಂದಿಗಿನ ಅವರ ಸಂಬಂಧ ಅಷ್ಟೊಂದು ಮಧುರವಾಗಿರಲಿಲ್ಲವಂತೆ. ಆದರೂ ಅವರಿಬ್ಬರೂ ಒಂದೇ ಸೂರಿನಡಿ ಅವರವರ ಸ್ವಾತಂತ್ರ್ಯವನ್ನು , ಅಸ್ತಿತ್ವವನ್ನು ಗೌರವಿಸುತ್ತ ಘನತೆಯಿಂದ ಬಾಳಿದ್ದರು. ಇನ್ನು ಅಮೃತಾ ಪ್ರೀತಮ್ ಬಗ್ಗೆ ಯಾರಿಗೆ ಗೊತ್ತಿಲ್ಲ? ಪತಿ ಪ್ರೀತಮ್ ಸಿಂಗ್ ಅವರಿಂದ ದೂರಾದರೂ ಕೊನೆಗಾಲದಲ್ಲಿ ಅವರು ಅನಾರೋಗ್ಯದಲ್ಲಿ ಇರುವಾಗ ಪ್ರೀತಮ್ ಅವರನ್ನು ತನ್ನ ಮನೆಗೆ ಕರೆತಂದು ಅಮೃತಾ – ಇಮರೋಜ್ ಇಬ್ಬರೂ ಅವರನ್ನು ನೋಡಿಕೊಳ್ಳುತ್ತಾರೆ. ಆಕೆ ಇಮರೋಜ್ ಜೊತೆಗೆ ಒಟ್ಟಿಗೆ ಬದುಕುತ್ತಿದ್ದಾಗ್ಯೂ ಪತಿ ಪ್ರೀತಮ್ ಸಿಂಗ್ ಯಾವ ರೀತಿಯಿಂದಲೂ ಆಕೆಯನ್ನು ಹೀಯಾಳಿಸದೇ, ಅವಮಾನಿಸದೇ ಘನತೆಯಿಂದ ನಡೆದುಕೊಂಡಿದ್ದಾರೆ. ಇಂತಹ ದೇವತೆಯಂತಹ ಮನುಷ್ಯರೂ ಈ ಭೂಮಿಯಲ್ಲಿ ಆಗಿಹೋಗಿದ್ದಾರೆ ಎಂಬುದಷ್ಟೇ ಸತ್ಯ. ʼಅಲೆಮಾರಿಯೊಬ್ಬಳ ಆತ್ಮವೃತ್ತಾಂತ (ಖಾನಾಬದೋಶ್)ʼದ ಡಾ. ಅಜೀತ್ ಕೌರ್ ಅವರ ಬದುಕೂ ನಮ್ಮ ಕಣ್ಣಲ್ಲಿ ನೀರು ತರಿಸುತ್ತದೆ. ಗಂಡನ ದೌರ್ಜನ್ಯ, ಪ್ರೇಮಿಯ ವಂಚನೆ ಹೀಗೆ ಬದುಕಿನುದ್ದಕ್ಕೂ ಬರೀ ಕಷ್ಟವನ್ನೇ ಉಂಡ ಅಜೀತ್ ಕೌರ್ ಕೂಡ ಆತ್ಮಸ್ಥೈರ್ಯವುಳ್ಳ ಅತ್ಯಂತ ಗಟ್ಟಿ ಮಹಿಳೆ. ತಮ್ಮ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ದಾರುಣವಾದ ಬೆಂಕಿ ಅಪಘಾತದಲ್ಲಿ ಕಳೆದುಕೊಂಡು, ಉಳಿದ ಒಬ್ಬ ಮಗಳೊಂದಿಗೆ ಒಬ್ಬರೇ ಬದುಕು ಕಟ್ಟಿಕೊಂಡರು. ಈಗ ನನ್ನಷ್ಟೇ ವಯಸ್ಸಿನ ಅವರ ಮಗಳು ಮದುವೆಯಾಗದೇ ತಾಯಿಯೊಂದಿಗೆ ತಮ್ಮ ಕಲೆ ಬರವಣೆಗೆಯಲ್ಲಿ ಸಂತೃಪ್ತವಾದ ಬದುಕನ್ನು ಬಾಳುತ್ತಿರುವರು.
ಈ ಎಲ್ಲಾ ಸಾಮಾಜಿಕ ಸನ್ನಿವೇಶದ ಹಿನ್ನೆಲೆಯಲ್ಲಿ ನಿಂತು ನೋಡಿದಾಗ ಜಯಾ ಬಚ್ಚನ್ ಹೇಳಿದ್ದರಲ್ಲಿ ಯಾವ ತಪ್ಪೂ ಇಲ್ಲ. ಮೊಮ್ಮಕ್ಕಳು ಮದುವೆಯಾಗುವುದನ್ನು ತಮ್ಮ ಬದುಕು ಕಟ್ಟಿಕೊಳ್ಳುವುದನ್ನು ಯಾವ ತಾಯಿ ಅಜ್ಜಿ ಬಯಸುವುದಿಲ್ಲ? ಒಂದುವೇಳೆ ಅವರು ಹಾಗೆ ಹೇಳಿದ್ದರೆ ಅವನ ಜೀವನಾನುಭದ ಮಾತುಗಳಿರಬಹುದು. ಎಲ್ಲರಿಗೂ ಅವರವರ ಅನುಭವಗಳ ಭಂಡಾರವೇ ಇರುತ್ತದೆ. ಒಂದೆಡೆ ಜಯಾ ಬಚ್ಚನ್ ಹೇಳುತ್ತಾರೆ ಶ್ವೇತಾಳ ಮದುವೆಯಾದಾಗ ಆಕೆ ಬಹಳ ದುಃಖಿಸಿದ್ದರೆಂದು. ತಾಯಿಗೆ ಹೆಣ್ಣುಮಕ್ಕಳೊಂದಿಗೆ ಇರುವ ಭಾವನಾತ್ಮಕ, ಅಂತಃಕರಣದ ಸಂಬಂಧ ಬಹುಶಃ ಗಂಡುಮಕ್ಕಳೊಂದಿಗೆ ಅವರು ಬೆಳೆದಂತೆ ಸಾಧ್ಯವಾಗುವುದಿಲ್ಲವೇನೋ. ʼಅಮ್ಮ ಅಮ್ಮ’ ಎಂದು ಹಿಂದಿಂದೆ ಸುತ್ತುವ ಮಗ ಕಿಶೋರಾವಸ್ಥೆಗೆ ಬರುವಾಗ ಅಪರಿಚಿತನಂತೆ ದೂರವಾಗತೊಡಗುತ್ತಾನೆ. ಜಯಾ ಬಚ್ಚನ್ ಅವರಿಗೂ ಏಕಾಂಗಿತನ ಕಾಡಿರಬಹುದು. ಶ್ವೇತಾ ನಂದಾ ಪತಿಯನ್ನು ತೊರೆದು ತಾಯಿಯ ಮನೆಯಲ್ಲಿಯೇ ಸುಮಾರು ವರ್ಷಗಳಿಂದ ಇದ್ದಾರೆ. ಇದೆಲ್ಲಾ ಅನುಭವಗಳು, ಎಲ್ಲವನ್ನೂ ಹೇಳಲಾಗದ ಸಂಕಟಗಳು, ಕಟು ವಾಸ್ತವಗಳು ಅವರನ್ನು ಗಡುಸಾಗಿಸಿವೆ ಎನಿಸುತ್ತದೆ. ಕಬ್ಬಿಣವನ್ನು ಬೆಂಕಿಯಲ್ಲಿ ಕಾಸಿ ಬಡಿದು ಬಡಿದು ಒಂದು ಆಕಾರಕ್ಕೆ ತರುವ ಲೋಹಾರನಂತೆ ಮನಸ್ಸು ಬುದ್ಧಿಯ ಮೇಲೆ ಆದ ಆಘಾತಗಳು ಮನುಷ್ಯನನ್ನು ಕಠಿಣವಾಗಿಸುತ್ತವೆಯೋ ಏನೋ. ಆಕೆಯ ಕೆಲ ಮಾತುಗಳು ಅತ್ಯಂತ ಕಟುವಾಗಿದ್ದವು. ಕೆಲವು ಒಪ್ಪುವಂತಿದ್ದವು. ಆಕೆಯೇ ಹೇಳುವಂತೆ ನನ್ನ ಅನುಭವ ತುಂಬಾ ಬದಲಾಗಿವೆ ಮತ್ತು ಇಂದು ಚಿಕ್ಕ ಮಕ್ಕಳು ತುಂಬಾ ಬುದ್ಧಿವಂತರು, ಅವರು ನಿಮ್ಮನ್ನು ಮೀರಿಸುತ್ತಾರೆ.” ಮದುವೆಯ ಕಾನೂನುಬದ್ಧತೆಯು ಸಂಬಂಧವನ್ನು ವ್ಯಾಖ್ಯಾನಿಸಬೇಕಾಗಿಲ್ಲ ಎಂದು ಅವರು ಹೇಳುತ್ತಾರೆ.
ಅವರ ಹೇಳಿಕೆಯನ್ನು ಪ್ರಗತಿಪರರು ಪ್ರಶಂಸಿಸುತ್ತಿದ್ದರೆ ಮೂಲಭೂತವಾದಿಗಳು ಕೆಂಗಣ್ಣಾಗಿದ್ದಾರೆ. ಯುವತಿಯರು ಮತ್ತು ಫೆಮಿನಿಸ್ಟ್‌ಗಳು ಇದನ್ನು “ಮಹಿಳಾ ಸ್ವಾತಂತ್ರ್ಯದ ಸಲಹೆ” ಎಂದು ಸ್ವಾಗತಿಸಿದ್ದಾರೆ. ಈಗಾಗಲೇ ಮದುವೆಯೇ ಬೇಡ ಎನ್ನುತ್ತಿರುವವರ ಸಂಖ್ಯೆ ತುಂಬಾ ದೊಡ್ಡದಿದೆ. ಯುವ ಜನಾಂಗ ಅದರಲ್ಲೂ ಕಾಲೇಜು ವಿದ್ಯಾರ್ಥಿನಿಯರಿಂದ ಬಂದಿರುವ ಪ್ರತಿಕ್ರಿಯೆಗಳಲ್ಲಿ, “ಇದು ಸಮಾಜದ ಒತ್ತಡಗಳಿಂದ ಮುಕ್ತರಾಗಲು ಪ್ರೇರಣೆ” ಎಂದು ಹೇಳಲಾಗಿದೆ. ಇದು ಲೈವ್-ಇನ್ ಸಂಬಂಧಗಳನ್ನು ಮತ್ತು ವೈಯಕ್ತಿಕ ಆಯ್ಕೆಯನ್ನು ಎತ್ತಿಹಿಡಿಯುತ್ತದೆ ಎಂದು ಕೆಲವರು ಸ್ವೀಕರಿಸಿದ್ದಾರೆ.

ಹಾಗೆ ನೋಡಿದರೆ ಜಾಗತಿಕ ಉದಾರೀಕರಣದಲ್ಲಿ ಲಕ್ಷಾಂತರ ಬಹುರಾಷ್ಟ್ರೀಯ ಕಾರ್ಪೋರೇಟ್ ಉದ್ಯಮ ಹಾಗೂ ಉದ್ಯೋಗಾವಕಾಶಗಳು ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಿದರೂ ಮಹಿಳಾ ವಿಮೋಚನೆ, ಸಬಲೀಕರಣದಲ್ಲಿ ಇದುವರೆಗೂ ಯಾವ ಪವಾಡವೂ ಅಗಲಿಲ್ಲ. ಪರಸ್ಪರ ಪ್ರೀತಿಸಿ ಮದುವೆಯಾದವರಲ್ಲೂ ಹೊಂದಾಣಿಕೆ ಸಾಮರಸ್ಯದ ಕೊರತೆಯಿಂದ ಬದುಕು ನರಕವಾಗಿರುವುದನ್ನು ಕಾಣುತ್ತೇವೆ. ಪ್ರೇಮರಹಿತ ಮದುವೆಯಲ್ಲಿ ನರಳುವುದಕ್ಕಿಂತ ಕಳಚಿಕೊಳ್ಳುವುದೇ ಲೇಸು. ಆದರೆ ಆ ಧೈರ್ಯದ ಹೆಜ್ಜೆಗೂ ಪುರುಷ ವ್ಯವಸ್ಥೆ ಸರಪಳಿ ಹಾಕಿಡುತ್ತದೆ. ಆಕೆ ಬದುಕಿರುವವರೆಗೂ ಅವನ ಆಸ್ತಿ ಆಗಿ ಬಿದ್ದಿರಬೇಕಷ್ಟೆ.
ವೈಧವ್ಯವೆಂಬುದು ಮಹಿಳಾ ಶೋಷಣೆಯ ಅತ್ಯಂತ ಕ್ರೂರವಾದ ಘಟ್ಟ. ಆಧುನಿಕತೆ ನುಸುಳದೇ ಇದ್ದ ಕಾಲದಲ್ಲಿಯೇ ಕೆಳವರ್ಗದವರಲ್ಲಿ ಸೀರುಡಿಕೆ, ಕೂಡಿಕೆ, ಕೂಡಾವಳಿ, ಉಡಕಿ ಮೂಲಕ ವಿಧವಾ ವಿವಾಹಕ್ಕೆ ಅವಕಾಶವಿತ್ತು. ಆದರೆ ಮೇಲ್ವರ್ಗದ ಮಹಿಳೆಯರಿಗೆ ಈ ಅವಕಾಶವೂ ಇದ್ದಿಲ್ಲ. ವಿವಾಹ, ಕುಟುಂಬಗಳೆಂಬ ಸಾಮಾಜಿಕ ಸಂಸ್ಥೆಗಳನ್ನು ಪುರುಷಪ್ರಧಾನ ಪಾಳೇಗಾರಿ ಮೌಲ್ಯಗಳೇ ಹುಟ್ಟುಹಾಕಿವೆ. ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ವಿವಾಹ ಸಂಸ್ಥೆಯನ್ನು ಬಲವಾಗಿ ಬಳಸಿಕೊಳ್ಳಲಾಗಿದೆ ಎನ್ನುತ್ತಾರೆ ಚಿಂತಕರು.
ಈಗ ಜಯಾ ಬಚ್ಚನ್ ಅವರ ಹೇಳಿಕೆಯ ಬಗ್ಗೆ ಸಾಂಪ್ರದಾಯಿಕ ಮೌಲ್ಯಗಳ ಪ್ರತಿಪಾದಕರು ಇದನ್ನು “ಭಾರತೀಯ ಕುಟುಂಬ ವ್ಯವಸ್ಥೆಯನ್ನು ದುರ್ಬಲಗೊಳಿಸುವ” ಕಳಪೆ ಯೋಚನೆ ಎಂದು ಟೀಕಿಸಿದ್ದಾರೆ. ಕೆಲವರು ಇದು ಎಲೈಟ್ ಕಲ್ಪನೆ ಎಂದಿದ್ದಾರೆ. ಅಂತೂ ಸಾರ್ವಜನಿಕ ವಾದ ವಿವಾದಗಳು ಏನೇ ಇರಲಿ ಮದುವೆ ಎಂಬುದು ದಿಲ್ಲಿಯಲ್ಲಿ ಪ್ರಚಲಿತವಿರುವ ಒಂದು ನುಡಿಗಟ್ಟಿನಂತೆ“ ಅದು ಸಿಹಿಯಾದ ಲಡ್ಡುವಿದ್ದಂತೆ; ತಿಂದರೂ ಕಷ್ಟ ತಿನ್ನದಿದ್ದರೂ ಕಷ್ಟ. ಯಾವುದೇ ಸಂಬಂಧವಿರಲಿ ಅಲ್ಲಿ ಸವಾಲುಗಳಿದ್ದೇ ಇರುತ್ತವೆ. ಇದೇ ನೆಪದಲ್ಲಿ ಆಧುನಿಕ ಜೀವನ ಮೌಲ್ಯಗಳು ವೇಗವಾಗಿ ಬದಲಾಗುತ್ತಿರುವ ಹೊತ್ತಿನಲ್ಲಿ ವಿವಾಹ ಸಂಸ್ಥೆಯ ಬಗ್ಗೆ ಆರೋಗ್ಯಕರವಾದ ಚರ್ಚೆಗಳಾದರೆ, ಸಂವಾದಗಳಾದರೆ ಒಳ್ಳೆಯದೇ ಅಲ್ಲವೇ?

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ




