ಕಾಲಮಾನ | ಇರಾನ್‌ ಮೇಲಿನ ಇಸ್ರೇಲ್, ಅಮೆರಿಕ ಯುದ್ಧ- ಈ ಮೌನ ಭಾರತಕ್ಕೆ ಶೋಭೆಯಲ್ಲ

Date:

ಏಷ್ಯಾ ಖಂಡದಲ್ಲಿ ಗುರುತಿಸಲ್ಪಡುವ ದೇಶಗಳಲ್ಲಿ ಭಾರತವೂ ಒಂದು. ಈ ಪ್ರದೇಶದ ಪ್ರಗತಿ ಮತ್ತು ಶಾಂತಿಯ ವಿಷಯಗಳಿಗೆ ಸಂಬಂಧಿಸಿದಂತೆ ಅದಕ್ಕೆ ದೊಡ್ಡ ಜವಾಬ್ದಾರಿಯಿದೆ. ನಮ್ಮ ನೆರೆ ದೇಶಗಳು ಸೇರಿದಂತೆ ವಿಶ್ವದ ಇತರ ದೇಶಗಳೂ ನಮ್ಮ ನಡೆಗಳತ್ತ ಗಮನವನ್ನು ಹರಿಸುತ್ತಿರುತ್ತವೆ. ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯದ ವಿಷಯಗಳಲ್ಲಿ ರಾಜತಾಂತ್ರಿಕತೆಯದ್ದು ತಂತಿಯ ಮೇಲಿನ ನಡಿಗೆಯಾಗಿರುತ್ತದೆ. ಭಾರತದಂತಹ ದೊಡ್ಡ ದೇಶ ಮಧ್ಯಪ್ರವೇಶ ಮಾಡಬೇಕಾದ ಸಂದರ್ಭದಲ್ಲಿ ಮೌನಕ್ಕೆ ಶರಣಾಗುವುದು ಶೋಭಿಸುವುದಿಲ್ಲ!

ಇರಾನ್‌ನಿಂದ ಯಾವುದೇ ತೆರನಾದ ಆಕ್ರಮಣ ಇಸ್ರೇಲ್‌ ಮತ್ತು ಅಮೆರಿಕ ಮೇಲೆ ಜರುಗಲಿಲ್ಲ. ಆದಾಗ್ಯೂ ಫೆಬ್ರುವರಿ 28, 2026ರಂದು ಇರಾನ್‌ ಮೇಲೆ ಅಂತಾರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರುವ Rogue Statesಗಳಾದ ಇಸ್ರೇಲ್‌ ಮತ್ತು ಅಮೆರಿಕ ಏಕಾಏಕಿ ಯುದ್ಧವನ್ನು ಪ್ರಾರಂಭಿಸಿದವು. ಹಿಂದಿನ ದಿನ, ಅಂದರೆ ಫೆಬ್ರವರಿ 27ರಂದು ಇರಾನ್‌ ಮತ್ತು ಅಮೆರಿಕಾಗಳ ಸಂಧಾನ ಮಾತುಕತೆಗಳಲ್ಲಿ ಮುಖ್ಯ ಸಂಧಾನಕಾರರಾಗಿದ್ದ ಒಮನ್‌ ದೇಶದ ವಿದೇಶಾಂಗ ವ್ಯವಹಾರಗಳ ಮಂತ್ರಿ ಬದ್ರ್‌ ಅಲ್ಬುಸೈದಿ ಶಾಂತಿ ಸಂಧಾನ ತುಂಬ ಹತ್ತಿರದಲ್ಲಿದೆ ಎಂಬ ಹೇಳಿಕೆಯನ್ನು ನೀಡಿದ್ದರು. ಇರಾನ್‌ ತನಗೆ ಪರಮಾಣು ಬಾಂಬನ್ನು ತಯಾರಿಸುವ ಯಾವ ಉದ್ದೇಶವೂ ಇಲ್ಲ ಎಂದು ತಿಳಿಸಿದೆ ಎಂದಿದ್ದರು. ಇಂತಹ ಸಂಧಾನ ಸಭೆಗಳು ನಡೆಯುತ್ತಿರುವ ಮಧ್ಯದಲ್ಲೇ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ಮುಗಿಬಿದ್ದವು. 2025ರ ಜೂನ್‌ ತಿಂಗಳಲ್ಲಿ ಇವೇ ದೇಶಗಳನ್ನೊಳಗೊಂಡ 12 ದಿನಗಳ ಯುದ್ದವೂ ಸಹ ಸಂಧಾನ ಮಾತುಕತೆಗಳ ಸಂದರ್ಭದಲ್ಲೇ ಜರುಗಿತು ಎಂಬುದು ಗಮನೀಯ ವಿಷಯ.

ಈ ಬರಹ ಬರೆಯುತ್ತಿರುವ ಸಂದರ್ಭದಲ್ಲಿ ಮಧ್ಯಪ್ರಾಚ್ಯದಲ್ಲಿ ಜರುಗುತ್ತಿರುವ ಯುದ್ಧ 24ನೇ ದಿನಕ್ಕೆ ಕಾಲಿಟ್ಟಿದೆ. ಪಶ್ಚಿಮ ಏಷ್ಯಾ(ಮಧ್ಯಪ್ರಾಚ್ಯ)ದಲ್ಲಿ ಜರುಗುತ್ತಿರುವ ಈ ಯುದ್ಧ ಪ್ರಾರಂಭದ ದಿನದಿಂದಲೇ ಅಂತಾರಾಷ್ಟ್ರೀಯ ಆಯಾಮವನ್ನು ಪಡೆಯಿತು. ಇರಾನ್‌, ಕೊಲ್ಲಿ ಅರಬ್‌ ದೇಶಗಳಾದ ಸೌದಿ ಅರೇಬಿಯಾ, ಯುಎಇ, ಖಟಾರ್‌, ಬಹರೈನ್‌, ಕುವೈಟ್‌, ಒಮಾನ್ ದೇಶಗಳ ಅಮೆರಿಕದ ಮಿಲಿಟರಿ ನೆಲೆಗಳು, ಇಂಧನದ ಮೂಲಭೂತ ಸೌಲಭ್ಯಗಳು ಮತ್ತು ನಾಗರಿಕ ತಾಣಗಳ ಮೇಲೆ ಡ್ರೋನ್‌ ಮತ್ತು ಮಿಸೈಲ್‌ ಆಕ್ರಮಣವನ್ನು ಮಾಡಿತು. ಪ್ರಸ್ತುತ ವಿಶ್ವದ ಇಂಧನದ ಬಿಕ್ಕಟ್ಟಿನ ಪರಿಸ್ಥಿತಿಯ ಬಗೆಗಿನ ನಾನಾ ವ್ಯಾಖ್ಯಾನಗಳು ಮೀಡಿಯಾದಲ್ಲಿ ಓಡಾಡುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಯುದ್ಧ ಶುರುವಾಗುವ ಎರಡು ದಿನ ಮುನ್ನ ನಮ್ಮ ದೇಶದ ಪ್ರಧಾನಿ ಮೋದಿಯವರು ಇಸ್ರೇಲನ್ನು ಭೇಟಿ ಮಾಡಿ ಹಿಂದಿರುಗಿದರು. ಆ ಸಮಯದಲ್ಲಿ ಅವರು ಅಕ್ಟೋಬರ್‌ 7, 2023ರ ಇಸ್ರೇಲ್‌ ಮೇಲಿನ ಹಮಾಸ್‌ನ ಅಮಾನವೀಯ ಆಕ್ರಮಣ ಸಂಬಂಧಿಸಿದಂತೆ ಇಸ್ರೇಲ್‌ ಪರವಾಗಿ ಭಾರತ ಗಟ್ಟಿಯಾಗಿ ನಿಲ್ಲುವುದೆಂದು ಘೋಷಿಸಿದರು. ಆದರೆ, ಇಸ್ರೇಲ್‌ ಗಾಝಾದ ಮೇಲೆ ಜರುಗಿಸುತ್ತ ಬಂದಿರುವ ಮಾರಣ ಹೋಮ(ಸುಮಾರು 72,000 ಸಾವಿರಕ್ಕಿಂತಲೂ ಹೆಚ್ಚಿನ ಪ್ಯಾಲೆಸ್ತೀನರು ಹತ್ಯೆಯಾಗಿದ್ದಾರೆ) ಕುರಿತಂತೆ ಚಕಾರ ಎತ್ತಲಿಲ್ಲ! ಶಾಂತಿ ನೆಲಸಬೇಕೆಂಬ ಕರೆಯನ್ನು ನೀಡಲಿಲ್ಲ! ಇರಾನ್‌ ಮೇಲೆ ಇಸ್ರೇಲ್-ಅಮೆರಿಕ ಜಂಟಿ ಆಕ್ರಮಣವನ್ನು ಯಾವಾಗ ಬೇಕಾದರೂ ಮಾಡಬಹುದೆಂಬ ಆತಂಕವನ್ನು ಪಶ್ಚಿಮ ಏಷ್ಯಾದ ವಿಶೇಷಜ್ಞರು ವ್ಯಕ್ತಕಪಡಿಸುತ್ತಿದ್ದಾಗ ನಮ್ಮ ಪ್ರಧಾನಿ ಇಸ್ರೇಲಿಗೆ ಭೇಟಿ ನೀಡಿದ್ದು ಎಷ್ಟು ಸೂಕ್ತ? ಅದು ಎಂತಹ ಸಂದೇಶವನ್ನು ರವಾನಿಸುತ್ತದೆ? ಎಂಬುದರ ಬಗೆಗೆ ನಮ್ಮ ಸಾರ್ವಜನಿಕ ವಲಯದಲ್ಲಿ ಖಂಡನೆಗಳು ಕೇಳಿ ಬಂದವು ಮತ್ತು ಚರ್ಚೆಗಳು ಜರುಗಿದವು.

ಫೆಬ್ರವರಿ 28ರಂದು ಇರಾನಿನ ಪರಮೋಚ್ಚ ನಾಯಕ ಆಯತೊಲ್ಲ ಖಮೇನಿ ಮತ್ತು ಅವರು ಕುಟುಂಬದ ಕೆಲವು ಸದಸ್ಯರು ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಹತರಾದರು. ಅಲ್ಲದೆ ಒಂದು ಮೂಲದ ಅನ್ವಯ ಉನ್ನತ ಹಂತದ ಸುಮಾರು 40 ಇರಾನಿನ ಅಧಿಕಾರಿಗಳನ್ನು ಗುರಿಯಾಗಿಸಿ ಕೊಲ್ಲಲಾಯಿತು. ಖಮೇನಿ ಅವರ ಹತ್ಯೆಯ ಬಗೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸಂತಾಪಗಳನ್ನು ಕೂಡಲೇ ತಿಳಿಸಿದವು. ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಮಂತ್ರಿ ಸಹ ಇದೇ ರೀತಿ ಪ್ರತಿಕ್ರಿಯಿಸಿದರು. ಮಾಲ್ಡೀವ್ಸ್‌, ಅಮೆರಿಕ-ಇಸ್ರೇಲ್‌ಗಳ ಆಕ್ರಮಣವನ್ನು ಹಾಗೂ ಇರಾನಿನ ಪ್ರತಿಯಾಕ್ರಮಣಗಳನ್ನು ಖಂಡಿಸಿತು. ಅಂದರೆ, ಈ ಸಣ್ಣ ದೇಶಗಳು ಒಂದು ನಿಲುವನ್ನು ತೆಗೆದುಕೊಂಡವು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ಸರ್ಕಾರ ಐದು ದಿನಗಳ ತರುವಾಯ ತನ್ನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರನ್ನು ಇರಾನಿನ ರಾಯಭಾರಿ ಕಚೇರಿಗೆ ಸಂತಾಪಗಳನ್ನು ಸೂಚಿಸಲು ಕಳುಹಿಸಿತು!

ಮಾರ್ಚ್‌ 4, 2026ರಂದು ಇರಾನಿನ ಯುದ್ಧನೌಕೆ IRIS Dena ಮೇಲೆ ಶ್ರೀಲಂಕಾದ ಕರಾವಳಿಯ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಂತರ್ಗಾಮಿ ದಾಳಿಯನ್ನು ನಡೆಸಿ ಹಡಗನ್ನು ಮುಳುಗಿಸಿತು. ಸುಮಾರು 80ಕ್ಕೂ ಹೆಚ್ಚು ಯುವ ಇರಾನಿ ನಾವಿಕರು ಈ ಕಾರ್ಯಾಚರಣೆಯಲ್ಲಿ ಹತರಾದರು ಎಂದು ಮಾಧ್ಯಮದ ಒಂದು ವರದಿ ತಿಳಿಸುತ್ತದೆ. ಪರಿಹಾರ ಕಾರ್ಯದಲ್ಲಿ ಭಾರತದ ನೌಕಾಪಡೆ ಶ್ರೀಲಂಕಾದ ನೌಕಾಪಡೆಗೆ ಸಹಾಯ ಹಸ್ತವನ್ನು ಚಾಚಿತು. ಆದರೆ ಭಾರತದ ನೌಕಾಪಡೆ ಯುವ ಇರಾನಿ ನಾವಿಕರು ಗತಿಸಿದ್ದಕ್ಕೆ ಸಂತಾಪಗಳನ್ನು ಸೂಚಿಸಲಿಲ್ಲ! ಫೆಬ್ರವರಿ ತಿಂಗಳಲ್ಲಿ ವಿಶಾಖಪಟ್ಟಣದಲ್ಲಿ ಜರುಗಿದ ಭಾರತದ ನೌಕಾಪಡೆಯ ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂ(IFR) ಮತ್ತು ಬಹುರಾಷ್ಟ್ರೀಯ ಕಾರ್ಯಾಚರಣೆ ಮಿಲನ್‌ನಲ್ಲಿ ಈ ಯುದ್ಧನೌಕೆ ಭಾಗವಹಿಸಿತ್ತು. ಭಾರತಕ್ಕೆ ಸಂಬಂಧಿಸಿದಂತೆ ಇಂತಹ ಒಂದು ಜಲಂತರ್ಗಾಮಿ ದಾಳಿ ಎರಡನೇ ವಿಶ್ವ ಯುದ್ಧದ ತರುವಾಯ ಜರುಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ನಮ್ಮ ಸರ್ಕಾರ ಅಮೆರಿಕದ ಈ ಕೃತ್ಯದ ಬಗೆಗೆ ತುಟಿಪಿಟಿಕ್‌ ಎನ್ನಲಿಲ್ಲ!

ಸುಮಾರು 2.5 ಕೋಟಿಯಷ್ಟು ದಕ್ಷಿಣ ಏಷ್ಯಾದವರು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತೀಯರ ಸಂಖ್ಯೆ ಸುಮಾರು ಒಂದು ಕೋಟಿ. ಪಾಕಿಸ್ತಾನಿಯರು, ಬಾಂಗ್ಲಾದೇಶಿಯರು, ನೇಪಾಳಿಗಳು ಕ್ರಮವಾಗಿ 50ಲಕ್ಷ, 50-60ಲಕ್ಷ, 20ಲಕ್ಷದಷ್ಟು ಅಲ್ಲಿದ್ದಾರೆ. ಹಾಗೆಯೇ ದೊಡ್ಡ ಸಂಖ್ಯೆಯ ಸಿಂಹಳೀಯರು, ಮಾಲ್ದೀವಿಯರು, ಭೂತಾನಿಗಳು ಮತ್ತು ಅಫ್ಘಾನರು ಅಲ್ಲಿ ನಿವಾಸಿಗಳಾಗಿದ್ದಾರೆ. ಅಲ್ಲದೆ ಆ ಪ್ರಾಂತ್ಯದಲ್ಲಿ ಹಡಗುಗಳಲ್ಲಿ ಕೆಲಸ ಮಾಡುವವರ ಮಂದಿಯ ಪೈಕಿ ಭಾರತೀಯರು ಶೇ 15ರಷ್ಟಿದ್ದಾರೆ. ಈ ಯುದ್ಧದಿಂದ ಅವರೆಲ್ಲರೂ ಅಭದ್ರ ನಾಳೆಗಳನ್ನು ಎದುರಿಸುವ ಸ್ಥಿತಿ ಉದ್ಭವಿಸಿದೆ. ಈ ಗಹನ, ಸೂಕ್ಷ್ಮ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ದೇಶ ಇತ್ಯಾತ್ಮಕ ಕ್ರಮವನ್ನು ತೆಗೆದುಕೊಳ್ಳಬೇಕು.

ಯುಕ್ರೇನಿನ ಯುದ್ಧ ಮತ್ತು ಗಾಝಾದಲ್ಲಿ ಇಸ್ರೇಲಿನ ಅಮಾನವೀಯ ಕಾರ್ಯಾಚರಣೆಗಳ ಕುರಿತಂತೆ ಭಾರತದ ಮಧ್ಯಪ್ರವೇಶದ ಬಗೆಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಯುದ್ಧದ ಸಂದರ್ಭದಲ್ಲಿ ಯಾವ ಪಕ್ಷದ ಕಡೆಗೂ ವಾಲದೇ ತಟಸ್ಥರಾಗಿದ್ದರೂ, ಒಂದು ಖಚಿತ ನಿಲುವನ್ನು ಯಾವ ದೇಶ ಬೇಕಾದರೂ ತೆಗೆದುಕೊಳ್ಳಬಹುದು. ಹಿಂದೆ ಅಲಿಪ್ತ ದೇಶಗಳ ಚಳವಳಿಯ ನೇತೃತ್ವವನ್ನು ವಹಿಸಿದ್ದ ಭಾರತ, ಈಜಿಪ್ಟ್‌ ಮತ್ತು ಯುಗೋಸ್ಲಾವಿಯಾ, ಅಮೆರಿಕ ಮತ್ತು ಸೋವಿಯತ್‌ ಯೂನಿಯನ್‌ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಮೂರನೇ ಶಕ್ತಿಯಾಗಿ ವಿಶ್ವ ಶಾಂತಿಯ ನಿಟ್ಟಿನಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಿದ್ದವು.

ಏಷ್ಯಾ ಖಂಡದಲ್ಲಿ ಗುರುತಿಸಲ್ಪಡುವ ದೇಶಗಳಲ್ಲಿ ಭಾರತವೂ ಕೂಡ ಒಂದು. ಈ ಪ್ರದೇಶದ ಪ್ರಗತಿ ಮತ್ತು ಶಾಂತಿಯ ವಿಷಯಗಳಿಗೆ ಸಂಬಂಧಿಸಿದಂತೆ ಅದಕ್ಕೆ ದೊಡ್ಡ ಜವಾಬ್ದಾರಿಯಿದೆ. ನಮ್ಮ ನೆರೆ ದೇಶಗಳು ಸೇರಿದಂತೆ ಏಷ್ಯಾದ ಮತ್ತ್ ವಿಶ್ವದ ಇತರ ದೇಶಗಳೂ ನಮ್ಮ ಅನೇಕ ನಡೆಗಳತ್ತ ಗಮನವನ್ನು ಹರಿಸುತ್ತಿರುತ್ತವೆ. ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯದ ವಿಷಯಗಳಲ್ಲಿ ರಾಜತಾಂತ್ರಿಕತೆಯದ್ದು ತಂತಿಯ ಮೇಲಿನ ನಡಿಗೆಯಾಗಿರುತ್ತದೆ. ಭಾರತದಂತಹ ದೊಡ್ಡ ದೇಶ ಮಧ್ಯಪ್ರವೇಶ (ಹೇಳಿಕೆ ಇರಬಹುದು ಅಥವಾ ನಡೆಯಿರಬಹುದು) ಮಾಡಬೇಕಾದ ಸಂದರ್ಭದಲ್ಲಿ ಮೌನಕ್ಕೆ ಶರಣಾಗುವುದು ಶೋಭಿಸುವುದಿಲ್ಲ! ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಅಮೆರಿಕದ ಅಣತಿಯ ಬಗೆಗೆ ನಮ್ಮ ಸರ್ಕಾರದ ಸ್ಪಂದನವಂತೂ ನಿರಾಶಾದಾಯಕ!

ಈ ವರ್ಷ ನಮ್ಮ ದೇಶದ ಅಧ್ಯಕ್ಷತೆಯಲ್ಲಿ BRICS ಶೃಂಗಸಭೆ ಜರುಗಲಿದೆ. ಇರಾನ್‌, ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕೂಡ ಇದರ ಸದಸ್ಯ ದೇಶಗಳಾಗಿವೆ. ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ಈ ಸಭೆಯನ್ನು ಭಾರತ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಹಾಗೆಯೇ QUAD (ಭಾರತ, ಅಮೆರಿಕ, ಜಪಾನ್‌ ಮತ್ತು ಆಸ್ಟ್ರೇಲಿಯಗಳ ಸ್ಟ್ರಾಟೆಜಿಕ್‌ ಫೋರಂ- ಇದು ಇಂಡೋ-ಪೆಸಿಫಿಕ್‌ ಪ್ರದೇಶದ ಆರ್ಥಿಕ, ಭದ್ರತೆ ಮತ್ತು ಇತರ ವಿಷಯಗಳ ವೇದಿಕೆಯಾಗಿದೆ)ನ ಸಭೆ ಕೂಡ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ವೇದಿಕೆಯ ನಡಾವಳಿಗಳ ಬಗೆಗೆ ಅಪಸ್ವರಗಳಿವೆ ಹಾಗೂ ಇದು ಕ್ರಿಯಾಶೀಲವಾಗಿಲ್ಲ ಕೂಡ. ಕಳೆದ ಕೆಲವು ವರ್ಷಗಳಿಂದ ನಮ್ಮ ದೇಶದ ವಿದೇಶಾಂಗ ನೀತಿಗಳು ಸಮಾಧಾನಕರವಾಗಿಲ್ಲ ಎಂಬ ಕೂಗುಗಳು ಕೇಳಿ ಬಂದಿವೆ. ಹೀಗಾಗಿ ಅವು ಸುಧಾರಿಸುವುದೋ ಅಥವಾ ಇಲ್ಲವೋ ಎಂಬುದನ್ನು ಕಾಲವೇ ತಿಳಿಸುತ್ತದೆ.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....