ಮೈಸೂರಿಗೆ ಬಂದ ಮೊದಲ ಒಂದೂವರೆ-ಎರಡು ವರ್ಷ ನಾನು ಬಹಳ ದೈವಭಕ್ತನಾಗಿದ್ದೆ. ದಿನವೂ ಬೆಳಿಗ್ಗೆ
ಸಂಜೆ ಸಂಧ್ಯಾವಂದನೆ ಮಾಡುತ್ತಿದ್ದೆ, ರಾಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದು ಬರುತ್ತಿದ್ದೆ.
ಈಜುಕೊಳಕ್ಕೆ ಹೋದಾಗ ಜನಿವಾರ ತೇಲಿ ಹೋಗದಂತೆ ಬಹಳ ಜಾಗರೂಕನಾಗಿರುತ್ತಿದ್ದೆ! ಆದರೆ ಕ್ರಮೇಣ ನನ್ನ
ದೈವಭಕ್ತಿ ಕ್ಷೀಣಿಸತೊಡಗಿ ಕೊನೆಗೆ ಪೂರ್ತಿ ಕರಗಿಯೇ ಹೋಯಿತು.
ʻಬೇಡವಾಗಿದ್ದʼ ಬಿಎಸ್ಸಿಗೆ ಸೇರ್ಪಡೆ; ವಿಜ್ಞಾನ ಸಬ್ಜೆಕ್ಟ್‌ಗಳಲ್ಲಿ ನಿರಾಸಕ್ತಿ; ʻಬಿಡುಗಡೆʼಗಾಗಿ ಮಹಾರಾಷ್ಟ್ರಕ್ಕೆ
ಪರಾರಿ!
[ನಾನು 1969ರ ಜುಲೈ 19ರಂದು ಮೊದಲ ವರ್ಷದ ಬಿಎಸ್ಸಿಗೆ ಸೇರಲೆಂದು ಮೈಸೂರಿಗೆ ಕಾಲಿಟ್ಟಿದ್ದೆ (17 ವರ್ಷ ತುಂಬಿ 18ಕ್ಕೆ ಕಾಲಿಡಲು ನಾಲ್ಕು ದಿನ ಬಾಕಿಯಿತ್ತು). ಸರಿಯಾಗಿ 12 ವರ್ಷಗಳ ನಂತರ 1981ರ ಜುಲೈ 6ರಂದು ಹೇಮಾ, ನಾನು ಮೈಸೂರು ಬಿಟ್ಟು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಪ್ಯಾಕಪ್ ಆದೆವು. 12 ವರ್ಷ ಮೈಸೂರು ನನ್ನ ಮನೆಯಾಗಿತ್ತು. ಈ ಅವಧಿಯಲ್ಲಿ ನನ್ನ ವಿದ್ಯಾಭ್ಯಾಸ, ನೌಕರಿ, ʻಕ್ರಾಂತಿಕಾರಿʼ ರಾಜಕೀಯ ಚಟುವಟಿಕೆ ಎಲ್ಲ ಸೇರಿದಂತೆ ಅನೇಕ ಘಟನೆಗಳು ನಡೆದಿವೆ, ಅನೇಕ ಸಿಹಿಕಹಿ ನೆನಪುಗಳಿವೆ. ನೆನಪಿನಲ್ಲಿ ಉಳಿದಿರುವ ಕೆಲವನ್ನು ಆಯ್ದು ಹಂಚಿಕೊಳ್ತೀನಿ.]
ನನ್ನ ಇಬ್ಬರು ಅಣ್ಣಂದಿರಲ್ಲಿ ಮೊದಲನೆಯವರು ಮಹಾಬಲ ರಾವ್. ಅವರು ಅದೇ ಮೇ ತಿಂಗಳಲ್ಲಿ ಮದುವೆಯಾಗಿ ಮೈಸೂರಿನ ವಿದ್ಯಾರಣ್ಯಪುರದಲ್ಲಿ ಮನೆ ಮಾಡಿದ್ದರು. ಸಿಂಗಲ್ ಬೆಡ್ ರೂಮ್ ಮನೆ ಬಾಡಿಗೆ ಎಷ್ಟು ಗೊತ್ತಾ? 42 ರೂಪಾಯಿ! ಓನರ್ 45 ರೂ. ಹೇಳಿದರಂತೆ, ಮನೆ ಹುಡುಕಿದ ನಮ್ಮಣ್ಣನ ಸಹೋದ್ಯೋಗಿಗಳು 42ಕ್ಕೆ ನಿಗದಿ ಮಾಡಿದ್ದರು. ಆಗಿನ್ನೂ ಒಂದು ತಿಂಗಳ ಬಾಡಿಗೆ ಮಾತ್ರ ಅಡ್ವಾನ್ಸ್; ಈಗಿನಂತೆ 10-15-20 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಕಿತ್ತುಕೊಳ್ಳುವ ರೂಢಿ ಬಂದಿರಲಿಲ್ಲ. ಬ್ರಾಹ್ಮಣರ ವಠಾರದ ಮನೆ; ಮನೆಯೊಡೆಯರೂ ಅದರಲ್ಲೇ ಇದ್ದರು, ಅವರ ವೃದ್ಧ ತಾಯ್ತಂದೆಯರೂ ಅದರಲ್ಲೇ ಒಂದು ರೂಮಿಗೆ ಬಾಡಿಗೆ ಕೊಟ್ಟುಕೊಂಡು, ಒಟ್ಟು ಸಂಸಾರದಂತೆಯೇ ಇದ್ದರು. ಅವಲ್ಲದೆ ನಮ್ಮದೂ ಸೇರಿ ಮೂರು ಬಾಡಿಗೆ ಮನೆಗಳಿದ್ದವು. ಎಲ್ಲರೂ ಬ್ರಾಹ್ಮಣರೇ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಬಹುಪಾಲು ಬ್ರಾಹ್ಮಣರೇ ಇದ್ದಂತಹ ಓಣಿಯಾಗಿತ್ತು. ಅದರಲ್ಲೇ ಒಂದು ಚಿಕ್ಕ ದೇವಸ್ಥಾನವಿತ್ತು. ಹತ್ತಿರದಲ್ಲೇ ಸ್ವಲ್ಪ ದೊಡ್ಡದಾದ ರಾಮಲಿಂಗೇಶ್ವರ ದೇವಸ್ಥಾನವಿತ್ತು. ಅಂದಿಗೆ ಮೈಸೂರಿನಲ್ಲಿ ಚಾಮುಂಡಿಪುರಂ ನಂತರ ವಿದ್ಯಾರಣ್ಯಪುರವೇ ದಕ್ಷಿಣದ ತುದಿ; ಅದರಿಂದ ಮುಂದೆ ಎಡಕ್ಕೆ ಎಲೆ ತೋಟಗಳು, ಮತ್ತೂ ಮುಂದಕ್ಕೆ ಚಾಮುಂಡಿ ಬೆಟ್ಟದ ತಪ್ಪಲು ಮತ್ತು ಬೆಟ್ಟ. ಬಲಕ್ಕೆ ಮೈಸೂರು ಸೌತ್ ಎಂಬ ಹೆಸರಿನಲ್ಲಿ ವಿಸ್ತರಣೆಯಾಗಲು ಶುರುವಾಗಿತ್ತು. ನಂತರ ಅದಕ್ಕೆ ವಿಶ್ವೇಶ್ವರ ನಗರ ಅಂತ ಹೆಸರಾಯಿತು ಅಂತ ನೆನಪು.
ಮೈಸೂರಿಗೆ ಬಂದ ಮೊದಲ ಒಂದೂವರೆ-ಎರಡು ವರ್ಷ ನಾನು ಬಹಳ ದೈವಭಕ್ತನಾಗಿದ್ದೆ. ದಿನವೂ ಬೆಳಿಗ್ಗೆ ಸಂಜೆ ಸಂಧ್ಯಾವಂದನೆ ಮಾಡುತ್ತಿದ್ದೆ, ರಾಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದು ಬರುತ್ತಿದ್ದೆ. ಈಜುಕೊಳಕ್ಕೆ ಹೋದಾಗ ಜನಿವಾರ ತೇಲಿ ಹೋಗದಂತೆ ಬಹಳ ಜಾಗರೂಕನಾಗಿರುತ್ತಿದ್ದೆ! ಆದರೆ ಕ್ರಮೇಣ ನನ್ನ ದೈವಭಕ್ತಿ ಕ್ಷೀಣಿಸತೊಡಗಿ ಕೊನೆಗೆ ಪೂರ್ತಿ ಕರಗಿಯೇ ಹೋಯಿತು. ಅದಕ್ಕೆ ಕಾರಣ: 17-18-19ರ ಬೆಳೆಯುವ ಆ ಹದಿವಯಸ್ಸಿನಲ್ಲಿ ಹಸಿವು ನನ್ನನ್ನು ವಿಪರೀತ ಬಾಧಿಸುತ್ತಿತ್ತು. ಸುಮಾರು ನಾಲ್ಕು ಕಿಲೋಮೀಟರ್ ದೂರದ ಯುವರಾಜಾ ಕಾಲೇಜಿಗೆ ಬೆಳಿಗ್ಗೆ ಸಂಜೆ ನಡೆದೇ ಹೋಗಿಬರಬೇಕಿತ್ತು. ಸಿರಿಮನೆಯನ್ನು ಆಗ ಕಾಡುತ್ತಿದ್ದ ತೀವ್ರ ಬಡತನದಿಂದಾಗಿ, ಬಹಳೇ ಅಗ್ಗವಾಗಿದ್ದ ಸಿಟಿ ಬಸ್ಸಿನ ತಿಂಗಳ ಪಾಸ್ ತೆಗೆದುಕೊಳ್ಳಲಾಗಲಿ, ೪೦-೪೫ ರೂಪಾಯಿಗೆ ಸಿಗುತ್ತಿದ್ದ ಸೆಕೆಂಡ್ ಹ್ಯಾಂಡ್ ಸೈಕಲ್ ತೆಗೆದುಕೊಳ್ಳಲಾಗಲಿ ಹಣವಿರಲಿಲ್ಲ. ಹೀಗಾಗಿ ಅಸಹನೀಯವಾದ ಹಸಿವಿನಲ್ಲೇ ದಿನ ದೂಡಬೇಕಾಗಿತ್ತು. ಎರಡನೇದಾಗಿ, ನಮ್ಮ ಪಕ್ಕದ ಮುರುಕು ವಠಾರದಲ್ಲಿ ವಾಸವಿದ್ದ ಕೂಲಿಕಾರರ ಕುಟುಂಬದಲ್ಲಿ ಗಂಡ ಕುಡಿದು ಬಂದು ದಿನವೂ ಹೆಂಡತಿಗೆ ಬಡಿಯುತ್ತಿದ್ದ. ಆಕೆಯ ಆರ್ತನಾದ ಸಹಿಸಲು ಅಸಾಧ್ಯವಾಗಿತ್ತು. ʻನಾನೂ ಒಳ್ಳೆಯ ದೈವಭಕ್ತ; ಆ ಮಹಿಳೆಯೂ ಸಹಜವಾಗಿ ʻದೇವ್ರೇ!ʼ ಅಂತ ಕೈ ಮುಗಿಯುವಾಕೆಯೇ. ಆದರೆ ದೇವರು ಇರುವುದು ಹೌದಾಗಿದ್ದಲ್ಲಿ ದೇವರಿಗೆ ನಮ್ಮ ಪ್ರತಿದಿನದ ಪ್ರತಿ ಕ್ಷಣದ ಸಂಕಟ ಯಾಕೆ ಕಾಣುವುದಿಲ್ಲ? ಯಾಕೆ ಅರ್ಥವಾಗುವುದಿಲ್ಲ?ʼ ಎಂಬ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡತೊಡಗಿ, ಕ್ರಮೇಣ ನಾನು ನಾಸ್ತಿಕನಾದೆ. ಸಂಧ್ಯಾವಂದನೆ, ದೇವಸ್ಥಾನದ ಭೇಟಿ, ಜನಿವಾರ ಎಲ್ಲ ಹಾರಿಹೋದವು.

ಅಲ್ಲಿಂದ ಇಲ್ಲೀವರೆಗೂ ನಾನು ದೇವರಿಗಾಗಿ ಯಾವತ್ತೂ ದೇವಸ್ಥಾನಗಳಿಗೆ ಹೋಗಿಲ್ಲ. ಪ್ರವಾಸಗಳ ಸಮಯದಲ್ಲಿ ಅದ್ಭುತ ಕಲಾಕೃತಿಗಳಾಗಿ ದೇಗುಲಗಳನ್ನು ನೋಡಿದೀನಿ. ಬೇರೆಯವರ ಜೊತೆ ಇದ್ದಾಗ ದೇವಸ್ಥಾನಗಳಿಗೆ ಹೋಗಬೇಕಾಗಿ ಬಂದರೆ ಹೋಗಿದೀನಿ, ಅವರುಗಳ ಸಮಾಧಾನಕ್ಕಾಗಿ ಕೈ ಮುಗಿದಂತೆ, ಆರತಿ-ತೀರ್ಥ-ಪ್ರಸಾದಗಳನ್ನು ತೆಗೆದುಕೊಂಡಂತೆ ಮಾಡಿದೀನಿ. ಆದರೆ ʻದೇವರಿದಾರೆ, ಮನುಷ್ಯರಿಗೆ ಕಷ್ಟ ಕೊಡ್ತಾರೆ ಅಥವಾ ಮನುಷ್ಯರ ಕಷ್ಟ ಪರಿಹಾರ ಮಾಡ್ತಾರೆʼ, ಸ್ವರ್ಗ-ನರಕ, ಪೂರ್ವ ಜನ್ಮ – ಪುನರ್ಜನ್ಮ – ಮುಕ್ತಿ … ಈ ಯಾವುದರಲ್ಲೂ ಎಳ್ಳಷ್ಟೂ ನಂಬಿಕೆಯಿಲ್ಲ, ಭಯವೂ ಇಲ್ಲ. ಒಮ್ಮೊಮ್ಮೆ ಅಭ್ಯಾಸ ಬಲದಿಂದ ʻಅಯ್ಯೋ ಶಿವನೆ!…ʼ ಅಂತಲೋ, ʻದೇವರಿಗೆ ಗೊತ್ತು…ʼ ಅಂತಲೋ ಉದ್ಗಾರ ಕೂಡ ಮಾಡಬಹುದು. ಆದರೆ ಅದ್ಯಾವುದೂ ದೇವರ ಮೇಲಿನ ನಂಬಿಕೆ, ಭಕ್ತಿ ಅಥವಾ ಭಯದಿಂದಲ್ಲ.
ಹಾಗೆಯೇ ನಾನು ಆರೆಸ್ಸೆಸ್ನ ಅತ್ಯಂತ ನಿಷ್ಠಾವಂತ ʻಸ್ವಯಂಸೇವಕʼನಾಗಿದ್ದವನು, ಶ್ರಿಂಗೇರಿ, ಉಡುಪಿಗಳಲ್ಲಿ ಮಾತ್ರವಲ್ಲದೆ, ಮೈಸೂರಿಗೆ ಬಂದಮೇಲೂ ತಪ್ಪದೆ ದಿನವೂ ʻಶಾಖೆʼಗೆ ಹೋಗುತ್ತಿದ್ದವನು. ಅದರ ಕುರಿತು ಕೂಡ ಸಕಾರಣವಾದ ತೀವ್ರ ಭ್ರಮನಿರಸನವುಂಟಾಗಿ, ಅದರಿಂದಲೂ ದೂರಾದೆ. (ಇದರ ವಿವರಗಳನ್ನೂ, ನಂತರದ ನನ್ನ ಪಯಣವನ್ನೂ ʻನನ್ನ ಆರೆಸ್ಸೆಸ್ ದಿನಗಳುʼ, ʻಆರೆಸ್ಸೆಸ್ ನಂತರದ ನನ್ನ ಪಯಣʼ ಬರಹಗಳಲ್ಲಿ ದಾಖಲಿಸಿದೀನಿ.)
ನಮ್ಮಣ್ಣ ಮೈಸೂರಿನ ಡಿವಿಜನಲ್ ಇಂಜಿನಿಯರ್ ಟೆಲಿಗ್ರಾಫ್ಸ್ ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ಇಲಾಖೆಯಲ್ಲಿ ಇದು ಮೂರನೇ ದರ್ಜೆ; ಮೊದಲಿನೆರಡು ಗೆಜೆಟೆಡ್ ದರ್ಜೆಗಳು. ಈಗ ʻಸಿ-ದರ್ಜೆʼ ಎಂದು ಕರೆಯಲಾಗುವ ಅದು ರಾಜ್ಯ ಸರ್ಕಾರದ ʻಪ್ರಥಮ ದರ್ಜೆ ಗುಮಾಸ್ತರʼ ಹುದ್ದೆಗೆ ಸರಿಸಮನಾದುದು. ಆಗ ಅಂಚೆ ಮತ್ತು ತಂತಿ ಇಲಾಖೆಗಳು ಒಂದೇ ಆಗಿದ್ದವು; ಎರಡು ಪ್ರತ್ಯೇಕ ಇಲಾಖೆಗಳಾಗಿ ವಿಭಜನೆಯಾಗಿರಲಿಲ್ಲ. ರಾಜ್ಯಾದ್ಯಂತ ಟೆಲಿಗ್ರಾಫ್ ಮತ್ತು ಟೆಲಿಫೋನ್ ಸೇವೆಗಳ ನಿರ್ಮಾಣ ಮತ್ತು ನಿರ್ವಹಣೆ ಟೆಲಿಗ್ರಾಫ್ ಇಲಾಖೆಗೆ ಸೇರಿದ್ದಾಗಿತ್ತು. ಇಡೀ ರಾಜ್ಯಕ್ಕೆ ಒಂದೇ ಆಗಿ ಬೆಂಗಳೂರಿನಲ್ಲಿದ್ದ ಅದರ ಕೇಂದ್ರ ಕಚೇರಿಯನ್ನು 1967-68ರಲ್ಲಿ ಐದು ವಿಭಾಗಗಳನ್ನಾಗಿ ವಿಭಜಿಸಲಾಗಿತ್ತು; ಅದರ ಒಂದು ವಿಭಾಗ ಮೈಸೂರಿನಲ್ಲಿ ಕಾರ್ಯಾರಂಭ ಮಾಡಿತ್ತು, ನಮ್ಮಣ್ಣನಿಗೂ ಅಲ್ಲಿಗೆ ವರ್ಗವಾಗಿತ್ತು. ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಈ ವಿಭಾಗದ ವ್ಯಾಪ್ತಿಯಲ್ಲಿದ್ದವು. ಮೈಸೂರಿನ ನಜರ್‌ಬಾದ್ ಪ್ರವೇಶದಲ್ಲಿನ ಹಾರ್ಡಿಂಜ್ (ʻಆರ್‌ಗೇಟ್ʼ) ಸರ್ಕಲ್ ಬಳಿ ಹೊಸದಾಗಿ ನಿರ್ಮಾಣವಾಗಿದ್ದ ಸ್ವಂತ ಭವ್ಯ ಕಟ್ಟಡದಲ್ಲಿ ಇಡೀ ಟೆಲಿಫೋನ್ ಇಲಾಖೆ ಕಾರ್ಯ ನಿರ್ವಹಿಸುತ್ತಿತ್ತು. ಇದೊಂದು ಮಹಾ ʻಕಂಜೂಸ್ʼ ಇಲಾಖೆಯಾಗಿತ್ತು! ಬಹಳಾ ಕಡಿಮೆ ಸಂಬಳ ಮತ್ತು ಭತ್ಯೆಗಳು. ಬ್ಯಾಂಕ್ ಮತ್ತು ಎಲ್‌ಐಸಿಯಲ್ಲಿನ ಅದಕ್ಕೆ ಸರಿಸಮಾನ ಹುದ್ದೆಗಳವರಿಗೆ ಇಲ್ಲಿಗಿಂತಲೂ 40ರಿಂದ 50% ಹೆಚ್ಚು ಸಂಬಳ ಭತ್ಯೆ ಇದ್ದವು. ಆರಂಭದಿಂದಲೂ ಅಂಚೆ-ತಂತಿ ಇಲಾಖೆಯನ್ನು ಬೆಳೆಸಿದ್ದು ಉತ್ತರ ಭಾರತದ ಮತ್ತು ತಮಿಳುನಾಡಿನ ಅಧಿಕಾರಶಾಹಿ ವರ್ಗ (ಬಹುತೇಕ ಬ್ರಾಹ್ಮಣರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ)
1969ರಲ್ಲೋ 70ರಲ್ಲೋ ಕೇಂದ್ರ ಸರ್ಕಾರದ ಉದ್ಯೋಗಿಗಳ ಮೂರನೇ ವೇತನ ಆಯೋಗ ತನ್ನ ವರದಿ ಕೊಟ್ಟಿತ್ತು. ಅದರ ಶಿಫಾರಸುಗಳ ಪ್ರಕಾರ ಸಿಬ್ಬಂದಿಗಳ ಸಂಬಳ ಭತ್ಯೆಗಳ ಶ್ರೇಣಿ(ಸ್ಕೇಲ್)ಗಳು ನಿರ್ಣಯವಾಗಿದ್ದವು. ಮೂರನೇ ದರ್ಜೆ ನೌಕರರ ಸ್ಕೇಲ್ ಹೀಗಿತ್ತು: 260-8-300-10-360-12-480! ಅಂದರೆ ಆರಂಭಿಕ ಮೂಲ ವೇತನ 260 ರೂ., ಅದಕ್ಕೆ ಪ್ರತಿ ವರ್ಷದ ಹೆಚ್ಚಳ (ಇನ್‌ಕ್ರಿಮೆಂಟ್) 8ರೂ., 300 ರೂ. ತಲುಪಿದ ನಂತರ ವರ್ಷಕ್ಕೆ 10 ರೂ. ಹೆಚ್ಚಳದಂತೆ 360 ರೂ. ತಲುಪಿದ ನಂತರ ವಾರ್ಷಿಕ 12 ರೂ.ಗಳಂತೆ 480 ರೂಪಾಯಿ. ಅಂದರೆ, 21 ವರ್ಷಗಳಲ್ಲಿ ಸ್ಕೇಲಿನ ಕೊನೆ ಮುಟ್ಟುತ್ತಿತ್ತು. ಅಷ್ಟರಲ್ಲೇನಾದರೂ ಪುನಃ ವೇತನ ಪರಿಷ್ಕರಣೆ ಆದಲ್ಲಿ ಹೆಚ್ಚಳವಾಗಬೇಕು, ಇಲ್ಲವಾದರೆ ಇಲ್ಲ. ಈ ಮೂಲ ವೇತನಕ್ಕೆ ತುಟ್ಟಿಭತ್ಯ, ಮನೆ ಬಾಡಿಗೆ ಭತ್ಯ, ದೊಡ್ಡ ನಗರಗಳಲ್ಲಿ ನಗರ ಪರಿಹಾರ ಭತ್ಯ (ಸಿಟಿ ಕಾಂಪೆನ್ಸೇಶನ್ ಅಲೋಯೆನ್ಸ್) ಇವು ಸೇರುತ್ತಿದ್ದವು. ವೇತನ ಆಯೋಗ ಶಿಫಾರಸು ಕೊಡುವವರೆಗಿನ ಅವಧಿಯಲ್ಲಿ ಎಷ್ಟು ತುಟ್ಟಿಭತ್ಯ ನೀಡಲಾಗಿತ್ತೋ ಅದನ್ನೆಲ್ಲ ಸೇರಿಸಿಯೇ ಮೂಲ ವೇತನ ನಿಗದಿಯಾಗಿತ್ತು. ಬ್ಯಾಂಕು ಮತ್ತು ಎಲ್‌ಐಸಿಗಳಲ್ಲಿ ತುಟ್ಟಿಭತ್ಯ ಲೆಕ್ಕ ಹಾಕುವಾಗ ಜೀವನ ವೆಚ್ಚ ಸೂಚ್ಯಂಕದ ಪ್ರತಿ ಪಾಯಿಂಟ್ ಹೆಚ್ಚಳಕ್ಕೆ ಇಷ್ಟು ತುಟ್ಟಿಭತ್ಯ ಅಂತ ಲೆಕ್ಕ ಹಾಕಲಾಗುತ್ತಿತ್ತು, ಮತ್ತು ಅದನ್ನು ಹಾಗೆ ಹೆಚ್ಚಳವಾದ ದಿನದಿಂದ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದಲ್ಲಿ ಇದನ್ನು, ಮೂರೋ ಆರೋ ದಿಂಗಳಿನಂಥ ಯಾವುದೋ ಒಂದು ನಿಗದಿತ ಅವಧಿಯಲ್ಲಿ ಒಂದು ನಿಗದಿತ ಪ್ರಮಾಣ ಅಥವಾ ಸಂಖ್ಯೆಯನ್ನು ಆ ಸೂಚ್ಯಂಕ ದಾಟಿದಾಗ ಒಂದು ಪಾಯಿಂಟ್ ಎಂದು ಲೆಕ್ಕ ಹಾಕಿ, ಒಂದು ಪಾಯಿಂಟಿಗೆ ಒಂದೋ ಎರಡೋ ರೂ. ತುಟ್ಟಿಭತ್ಯ ಸೇರಿಸಲಾಗುತ್ತಿತ್ತು. ಹೀಗಾಗಿ ನಾನು 1973ರ ಜುಲೈಯಲ್ಲಿ ಇದೇ ಸ್ಕೇಲಿನಲ್ಲಿ ಕೆಲಸಕ್ಕೆ ಸೇರಿದಾಗಲೂ ನನ್ನ ಸಂಬಳ ಇದ್ದದ್ದು 262 ರೂ. 50 ಪೈಸೆ! (ಅಂದರೆ ಬಹುಶಃ ಯಾವುದೇ ತುಟ್ಟಿಭತ್ಯ ಸೇರಿರಲಿಲ್ಲ) ನಾಲ್ಕನೇ ದರ್ಜೆ (ಈಗಿನ ʻಡಿʼ ದರ್ಜೆ) ನೌಕರರಿಗೆ ಇನ್ನೂ ಕಡಿಮೆ ವೇತನ. 196-340ತ್ತೋ ಏನೋ. ಮೇಲಧಿಕಾರಿಗಳ ಸಂಬಳ ಕೂಡ ಭಾರೀ ಹೆಚ್ಚು ಅಂತೇನಲ್ಲ. ಆದರೆ ಇದಕ್ಕೆಲ್ಲ ಹೋಲಿಸಿದರೆ ಎಷ್ಟೋ ಮೇಲು. ಇದನ್ನೆಲ್ಲ ಇಷ್ಟು ವಿವರವಾಗಿ ಯಾಕೆ ಹೇಳ್ತಿದೀನಿ ಅಂದರೆ, ಕೆಲಸಗಾರರಿಗೆ ಹೆಚ್ಚು (ಕೈತುಂಬ-ಹೊಟ್ಟೆತುಂಬ) ಸಂಬಳ ಕೊಡಬಾರದು ಎನ್ನುವ ಮಾಲೀಕ ವರ್ಗದ ಫ್ಯೂಡಲ್ ಚಿಂತನೆ ಸರ್ಕಾರಿ ಯಂತ್ರಾಂಗದಲ್ಲೂ ಹ್ಯಾಗೆ ಕೆಲಸ ಮಾಡುತ್ತಿತ್ತು ಎಂಬುದನ್ನು ಸೂಚಿಸುವುದಕ್ಕೆ.

ವೇತನ ಆಯೋಗದ ಶಿಫಾರಸಿನಲ್ಲಿ ಇನ್ನೂ ಒಂದು ಆಸಕ್ತಿದಾಯಕ ವಿದ್ಯಮಾನವಿತ್ತು. ಎಲ್ಲಾ ದೇಶಗಳಲ್ಲೂ ದುಡಿವ ಜನರ ವೇತನ-ಭತ್ಯ-ಜೀವನ ಪರಿಸ್ಥಿತಿ ಮುಂತಾದವುಗಳ ಉಸ್ತುವಾರಿ ನೋಡಿಕೊಳ್ಳಲು ಅಂತರರಾಷ್ಟ್ರೀಯ ಶ್ರಮಜೀವಿ ಸಂಘಟನೆ – ಇಂಟರ್‌ನ್ಯಾಶನಲ್ ಲೇಬರ್ ಆರ್ಗನೈಸೇಶನ್: ಐಎಲ್‌ಓ – ಅಂತೊಂದು ಸಂಸ್ಥೆಯಿದೆ. ಅದು ದುಡಿವ ಜನರ ವೇತನ ಭತ್ಯ ಮುಂತಾದವುಗಳನ್ನು ಲೆಕ್ಕ ಹಾಕುವುದಕ್ಕೆ ಹಲವು ಮಾನದಂಡಗಳನ್ನು ನಿಗದಿಪಡಿಸಿದೆ. ಆಹಾರಕ್ಕಿಷ್ಟು – ಅಂದರೆ ಪ್ರೋಟೀನ್ಸ್, ಖನಿಜಾಂಶಗಳು, ವಿಟಮಿನ್‌ಗಳು ಮುಂತಾದ ಪ್ರತಿಯೊಂದಕ್ಕೂ ಕ್ಯಾಲೊರಿಗಳ ಲೆಕ್ಕದಲ್ಲಿ ಇಷ್ಟಿಷ್ಟು, ಸಾಂಸಾರಿಕ ಜವಾಬ್ದಾರಿಗಳಿಗಿಷ್ಟು, ಮನರಂಜನೆ ಬಾಬತ್ತಿಗಿಷ್ಟು, ಆಸ್ಪತ್ರೆ-ಶುಶ್ರೂಷೆಗಳಿಗಿಷ್ಟು … ಹೀಗೆ. ಅದರ ಪ್ರಕಾರವೇ ನಿವ್ವಳ ವೇತನ, ಭತ್ಯ, ತುಟ್ಟಿಭತ್ಯ ಮುಂತಾದುವನ್ನು ಲೆಕ್ಕ ಹಾಕಿ ನೀಡಬೇಕು. ನಮ್ಮ ಮೂರನೇ ವೇತನ ಆಯೋಗ ಏನು ಮಾಡಿತ್ತಪ್ಪಾ ಅಂದರೆ, ಆ ಪ್ರಕಾರವೇ ಲೆಕ್ಕ ಹಾಕಿ, ಭಾರತದಲ್ಲಿ ನಿವ್ವಳ ವೇತನ 316 ರೂ. ಇರಬೇಕಿದೆ ಎಂದು ಒಪ್ಪಿಕೊಳ್ಳುತ್ತಾ, “ಆದರೆ ಭಾರತದಲ್ಲಿ ಯಾರೂ ಐಎಲ್‌ಓ ನಿಗದಿತ ಪ್ರಮಾಣದಲ್ಲಿ ಆಹಾರವನ್ನು, ಅಂದರೆ ಎಣ್ಣೆ, ಬೇಳೆಕಾಳುಗಳು, ಹಣ್ಣುಹಂಪಲು, ಮೊಟ್ಟೆ-ಮಾಂಸ-ಮೀನು ಮುಂತಾದ್ದೆಲ್ಲವನ್ನೂ ಸೇವಿಸುತ್ತಿಲ್ಲ; ಭಾರತೀಯರ ಆಹಾರ ಕ್ರಮದ ಪ್ರಕಾರ 196 ರೂ. ನಿವ್ವಳ ವೇತನ ಸಾಕು” ಎಂದು ಶಿಫಾರಸು ಮಾಡಿತ್ತು!! ʻಡಿʼ ದರ್ಜೆ ನೌಕರರಿಗೆ ನಿಗದಿಯಾಗಿದ್ದು ಇದೇ ಮೊತ್ತ.
ಇಂತಹ ಘನಂದಾರಿ ಸಂಬಳದಾರರು ಆಗ ಖರೀದಿ ಮಾಡಬಹುದಾದ ಟೂ ವ್ಹೀಲರ್ ಎಂದರೆ ಒಂದು ಸೆಕೆಂಡ್ ಹ್ಯಾಂಡ್ ಸೈಕಲ್ ಮಾತ್ರ. ಎಲ್ಲರಂತೆ ನಮ್ಮಣ್ಣನೂ ಸೈಕಲ್‌ನಲ್ಲೇ ವಿದ್ಯಾರಣ್ಯಪುರದಿಂದ ಟೆಲಿಫೋನ್ ಕಚೇರಿಗೆ ಹೋಗಿಬರುತ್ತಿದ್ದರು. ಹತ್ಹತ್ತು ಪೈಸೆಗೂ ಲೆಕ್ಕಾಚಾರ ಹಾಕಿ ಖರ್ಚು ಮಾಡಿದರಷ್ಟೇ ಹಾಗೂಹೀಗೂ ಸಂಸಾರ ತೂಗಿಸಲು ಆಗುತ್ತಿತ್ತು. ಅಂಥದ್ದರಲ್ಲೂ ಅವರು ಮೊದಲ ವರ್ಷ ನನ್ನ ಲೆಕ್ಕದಲ್ಲಿ ಮನೆಯಿಂದ ಏನೂ ಹಣ ತೆಗೆದುಕೊಳ್ಳಲಿಲ್ಲ, ಉಚಿತವಾಗಿ ಊಟ ವಸತಿ ನೀಡಿದರು. ಎರಡನೇ ವರ್ಷ ಮಾತ್ರ (1970-71ರಲ್ಲಿ) ಮನೆಯಿಂದ ತಿಂಗಳಿಗೆ 40 ರೂ. ಕಳಿಸುತ್ತಿದ್ದರು. ಆ ವರ್ಷ ನಮ್ಮ ಚಿಕ್ಕಪ್ಪನ ಮಗ ಕೃಷ್ಣಮೂರ್ತಿಯೂ ಬಂದು ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ.ಗೆ ಸೇರಿಕೊಂಡು ನಮ್ಮಣ್ಣನ ಮನೆಯಲ್ಲೇ ನಿಂತ. ಅವನ ಲೆಕ್ಕದಲ್ಲಿ ಮನೆಯಿಂದ 70 ರೂ. ಕಳಿಸುತ್ತಿದ್ದರು ಅಷ್ಟೇ. ಹಾಗೂಹೀಗೂ ನಾನು 1969-70ರಲ್ಲಿ ಮೊದಲ ವರ್ಷದ ಬಿಎಸ್ಸಿ ಮುಗಿಸಿ 70-71ರಲ್ಲಿ ಬಿಎಸ್ಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದೆ. ಈ ಬಿಎಸ್ಸಿ ಕುರಿತು ಸ್ವಲ್ಪ ಹೇಳಬೇಕು.
ಟೆಲಿಫೋನ್ ಇಲಾಖೆಯಲ್ಲಿ ಆಗ ಇಂಜಿನಿಯರಿಂಗ್ ಸೂಪರ್‌ವೈಸರ್ (ಇಎಸ್) ಎಂಬುದೊಂದು ಕೇಡರ್ ಇತ್ತು. ನಂತರ ಇದಕ್ಕೆ ಜೂನಿಯರ್ ಇಂಜಿನಿಯರ್ ಎಂದು ಮರು ನಾಮಕರಣ ಮಾಡಲಾಗಿದೆ. ಈ ಹುದ್ದೆ ಮೂರನೇ (ʻಸಿʼ) ದರ್ಜೆಯದೇ ಆದರೂ ಇದರ ವೇತನ ಶ್ರೇಣಿ ರೂ. 425ರಿಂದ ಆರಂಭವಾಗಿ 800ಕ್ಕೋ 900ಕ್ಕೋ ಮುಟ್ಟುತ್ತಿತ್ತು. ಒಬ್ಬೊಬ್ಬ ಇಎಸ್ ಕೈಕೆಳಗೆ 20-30 ನೌಕರರು ಇರುತ್ತಿದ್ದರು; ಸಣ್ಣ ಟೆಲಿಫೋನ್ ಎಕ್ಸ್‌ಚೇಂಜ್‌ಗಳು ಇಡಿಯಾಗಿ ಇಎಸ್ ಉಸ್ತುವಾರಿಯಲ್ಲಿ ಇರುತ್ತಿದ್ದವು. ಅಲ್ಲದೆ ಇದರಿಂದ ಮುಂದಕ್ಕೆ ಗೆಜೆಟೆಡ್ ಹುದ್ದೆಯಾದ ಅಸಿಸ್ಟೆಂಟ್ ಇಂಜಿನಿಯರ್‌ಗೆ ಬಡ್ತಿ ಸಿಗುತ್ತಿತ್ತು. ಮತ್ತೂ ಮುಂದಕ್ಕೆ ಡೈರೆಕ್ಟರ್ ಆಫ್ ಟೆಲಿಕಾಂ, ಜನರಲ್ ಮ್ಯಾನೇಜರ್ ಟೆಲಿಕಾಂ … ಈ ರೀತಿಯ ಸೀನಿಯರ್ ಕ್ಲಾಸ್ ಒನ್‌ನಂತಹ ಅತ್ಯುನ್ನತ ಹುದ್ದೆಗಳವರೆಗೂ ಮೇಲೇರುವ ಅವಕಾಶ ತೆರೆದುಕೊಳ್ಳುತ್ತಿತ್ತು. ಇನ್ನೂ ಮುಖ್ಯವಾಗಿ, ಇಎಸ್ ಹುದ್ದೆಗೆ ಸೇರಲು ಇಂಜಿನಿಯರಿಂಗ್ ಪದವಿಯ ಅಗತ್ಯ ಇರಲಿಲ್ಲ; ಬಿಎಸ್ಸಿ ಮ್ಯಾಥಮ್ಯಾಟಿಕ್ಸ್ ಮತ್ತು ಫಿಸಿಕ್ಸ್‌ಗಳಲ್ಲಿ ಶೇ. 60ಕ್ಕಿಂತ ಮೇಲೆ 70ರೊಳಗೆ ತೆಗೆದರೆ ಆಯ್ಕೆಯ ಸಾಧ್ಯತೆ ಇರುತ್ತಿತ್ತು. ಆಯ್ಕೆ ಆಗಬೇಕಾದ ಹುದ್ದೆಗಳ ಸಂಖ್ಯೆ ಜಾಸ್ತಿ ಇದ್ದ ವರ್ಷದಲ್ಲಂತೂ ಜಸ್ಟ್ ಫಸ್ಟ್ ಕ್ಲಾಸ್‌ನಲ್ಲಿ ಪಾಸಾದವರು ಸಹ (60%ಗಿಂತ ಸ್ವಲ್ಪವೇ ಹೆಚ್ಚು ತೆಗೆದವರೂ) ಆಯ್ಕೆ ಆಗಿದ್ದ ಉದಾಹರಣೆಗಳಿದ್ದವು. ಮುಂದಿನ ಉನ್ನತ ಹುದ್ದೆಗಳ ಮಾತು ಹಾಗಿರಲಿ, ಇಎಸ್ ಹುದ್ದೆ ಎನ್ನುವುದೇ, ಇಂಜಿನಿಯರಿಂಗ್ ಪದವಿ ಮಾಡಲು ಸಾಧ್ಯವಿಲ್ಲದ ಮಧ್ಯಮ ವರ್ಗದ ಸಾಮಾನ್ಯ ವ್ಯಕ್ತಿಯೊಬ್ಬ ಕಾಣಬಹುದಾಗಿದ್ದ ಬಹುದೊಡ್ಡ ಕನಸಾಗಿತ್ತು. ಹಾಗಾಗಿ ನಮ್ಮಣ್ಣನಿಗೆ, ತಾನಂತೂ ಎಸ್ಸೆಸ್ಸೆಲ್ಸಿಗಿಂತ ಮುಂದೆ ಓದಲಾಗಲಿಲ್ಲ, ಡಿಗ್ರಿ ಓದುವ ಅವಕಾಶ ಹೊಂದಿರುವ ನಾನಾದರೂ ಆ ಹುದ್ದೆ ಗಳಿಸಬೇಕು ಎಂಬ ಕನಸಿತ್ತು.
ಇತ್ತ, ಎಸ್ಸೆಸ್ಸೆಲ್ಸಿ ವರೆಗೂ ನಾನು ಎಲ್ಲ ಸಬ್ಜೆಕ್ಟ್‌ಗಳಲ್ಲೂ ತರಗತಿಯ ʻಟಾಪರ್ʼ ಆಗಿದ್ದರೂ, ಅಷ್ಟೊತ್ತಿಗೆ ಭಾಷೆಗಳ ಕಡೆ ನನ್ನ ಆಸಕ್ತಿ ಹೊರಳಿತ್ತು; ವಿಶೇಷವಾಗಿ ಸಂಸ್ಕೃತ ಮತ್ತು ಇಂಗ್ಲಿಷ್ ಕಲಿಯಬೇಕು ಎಂಬುದು ನನ್ನ ಆಸೆಯಾಗಿತ್ತು (ಕನ್ನಡ ಹ್ಯಾಗೂ ಚೆನ್ನಾಗೇ ಬರುತ್ತಿತ್ತು). ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಸ್ಸೆಸ್ಸೆಲ್ಸಿಯ ನಂತರ ಶ್ರಿಂಗೇರಿ ಮಠದ ʻಪಾಠಶಾಲೆʼಗೆ ಸೇರಬೇಕು ಅಂತ ಅಂದುಕೊಂಡಿದ್ದೆ! ಅದು ವೇದ ಮಂತ್ರಗಳನ್ನೂ, ಸಂಸ್ಕೃತ ಸಾಹಿತ್ಯವನ್ನೂ ಕಲಿಸುವ ಸಂಸ್ಕೃತ ವಿದ್ಯಾಪೀಠವಾಗಿತ್ತು. ಅಲ್ಲಿ ವೇದ ಮಂತ್ರಗಳನ್ನು ಕಲಿತವರು ಪುರೋಹಿತರಾಗಬಹುದಿತ್ತು, ಸಾಹಿತ್ಯ ಕಲಿತವರು ಮುಂದೆ ಸಂಸ್ಕೃತ ಎಂಎ ಇತ್ಯಾದಿ ಮಾಡಿ ಕಾಲೇಜು ಉಪನ್ಯಾಸಕರೋ, ಸಂಶೋಧಕರೋ ಆಗಬಹುದಿತ್ತು. ಆದರೆ ನನ್ನ ಅಣ್ಣಂದಿರು ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಹೀಗೆ ನನಗೆ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಕಡಿಮೆಯಾಗಿದ್ದರಿಂದಾಗಿ ಪಿಯೂಸಿಯಲ್ಲಿ ನಾನು ಜಸ್ಟ್ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದೆ. ಹೋಗಲಿ, ಪಿಯೂಸಿಯ ನಂತರವಾದರೂ ಇಂಗ್ಲೀಷ್, ಸಂಸ್ಕೃತ ತಗೊಂಡು ಬಿಎಗೆ ಸೇರೋಣ ಎಂದರೆ ನಮ್ಮಣ್ಣನ ಹೊಂಗನಸಿನಿಂದಾಗಿ ಅದಕ್ಕೂ ಅವಕಾಶ ಸಿಗಲಿಲ್ಲ; ಬಿಎಸ್ಸಿಗೆ ಸೇರಲೇಬೇಕಾಯಿತು. ಪಾಪ, ನಮ್ಮಣ್ಣನೇ ಆಸ್ಥೆ ವಹಿಸಿ, ಪರಿಚಿತರೊಬ್ಬರ ನೆರವಿನಿಂದ ಯುವರಾಜಾ ಕಾಲೇಜಿನಲ್ಲಿ ಫಿಸಿಕ್ಸ್-ಕೆಮಿಸ್ಟ್ರಿ-ಮ್ಯಾಥ್ಸ್ ಕಾಂಬಿನೇಶನ್ನಿನಲ್ಲಿ ಸೀಟು ಕೊಡಿಸಿ, 1969ರ ಜುಲೈ ತಿಂಗಳ ಒಂದು ದಿನ ಕಾಲೇಜಿಗೂ ಕರೆದೊಯ್ದು ಅಡ್ಮಿಶನ್ ಮಾಡಿಸಿ ಬಂದರು.
ಹೀಗೆ ಸಬ್ಜೆಕ್ಟ್‌ಗಳಲ್ಲಿ ಆಸಕ್ತಿ ಇಲ್ಲದ್ದೊಂದು ಕಡೆ; ಮೇಲೆ ವಿವರಿಸಿದಂತೆ, ಮೂರು ಹೊತ್ತೂ ಬೆನ್ನು ಬಿಡದ ಹಸಿವಿನ ಕಾಟವೊಂದು ಕಡೆ. ಪರಿಣಾಮವಾಗಿ ನಾನು ಒಟ್ಟಾರೆ ಓದಿನಲ್ಲೇ ಆಸಕ್ತಿ ಕಳೆದುಕೊಂಡೆ. ಕಾಲೇಜೇ ಬೇಡ ಅನ್ನಿಸುತ್ತಿತ್ತು. ಆಗ ಅಂಚೆ-ತಂತಿ ಇಲಾಖೆಯಲ್ಲಿ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಆಧಾರದಲ್ಲಿ ನೇಮಕಾತಿ ನಡೆಯುತ್ತಿತ್ತು. ನನ್ನ ಮಾರ್ಕ್ಸೂ ಚೆನ್ನಾಗಿತ್ತು, ಅರ್ಜಿ ಹಾಕಿದ್ದರೆ ಖಂಡಿತ ಆಯ್ಕೆ ಆಗುತ್ತಿದ್ದೆ. ಆದರೆ ಇಎಸ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ನಮ್ಮಣ್ಣ ಬೇಡವೆಂದರು. ಹೀಗಾಗಿ, ಕಾಲೇಜಿನಲ್ಲಿ ಎಲ್ಲ ಪ್ರೊಫೆಸರ್‌ಗಳ ತರಗತಿಯಲ್ಲೂ ನಿದ್ದೆ ಹೊಡೆಯುತ್ತಿದ್ದೆ. ಎಷ್ಟೆಂದರೆ, ತುಂಬ ಹೃದಯವಂತರಾದರೂ ಒಂದು ರೀತಿ ʻಟೆರರ್ʼ ಅನ್ನಿಸುತ್ತಿದ್ದ, ಆದರೆ ಅಷ್ಟೇ ಉತ್ತಮ ಪ್ರೊಫೆಸರ್‌ಗಳಾಗಿದ್ದ ಕೆಮಿಸ್ಟ್ರಿಯ ಅಜೀಜ್ ಅವರ ತರಗತಿಯಲ್ಲಿ; ನಿದ್ದೆ ಮಾಡುವವರನ್ನು ನಯವಾಗಿ ತಮಾಷೆ ಮಾಡಿ ನಾಚಿಕೆ ಉಂಟುಮಾಡಿಸುತ್ತಿದ್ದ ಫಿಸಿಕ್ಸ್‌ನ ನಾಗರಾಜ ಶೆಟ್ಟಿಯವರ ತರಗತಿಯಲ್ಲಿ ಕೂಡ ಅವರ ಕಣ್ಣು ತಪ್ಪಿಸಿ ಹ್ಯಾಗೋ ನಿದ್ದೆ ಹೊಡೆದುಬಿಡುತ್ತಿದ್ದೆ. ಎ. ರಂಗಣ್ಣ, ಕೆ. ಶ್ರೀನಿವಾಸನ್, ಸನ್ನದ್, ಪುಟ್ಟರಂಗಪ್ಪ, ಬೂತಪ್ಪ ಅವರಂತಹ ಶ್ರೇಷ್ಠ ಪ್ರೊಫೆಸರ್‌ಗಳನ್ನೂ ಬಿಡಲಿಲ್ಲ ನಾನು! ಆದರೆ ಕಡ್ಡಾಯ ಭಾಷೆಗಳಾದ ಇಂಗ್ಲಿಷ್ ಮತ್ತು ಸಂಸ್ಕೃತ ತರಗತಿಗಳಲ್ಲಿ ಮಾತ್ರ ಸಖತ್ ಅಲರ್ಟ್ ಆಗಿರುತ್ತಿದ್ದೆ. ಆರ್ಗ್ಯಾನಿಕ್ ಕೆಮಿಸ್ಟ್ರಿ, ಅನಾಲಿಟಿಕಲ್ ಜ್ಯಾಮಿಟ್ರಿ, ಕ್ಯಾಲ್ಕ್ಯುಲಸ್ ಈ ಮೂರು ವಿಷಯಗಳಲ್ಲಿ ಒಂದಕ್ಷರ ಕೂಡ ನನ್ನ ತಲೆಗೆ ಹತ್ತಲಿಲ್ಲ. ನಾನು ಹತ್ತಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಮ್ಯಾಥ್ಸ್‌ನಲ್ಲಿ ಆಲ್ಜೀಬ್ರ ಮತ್ತು ಟ್ರಿಗನೋಮೀಟ್ರಿ, ಕೆಮಿಸ್ಟ್ರಿಯಲ್ಲಿ ಇನಾರ್ಗ್ಯಾನಿಕ್ ಮತ್ತು ಫಿಸಿಕಲ್ ಕೆಮಿಸ್ಟ್ರಿ, ಹಾಗೂ ಫಿಸಿಕ್ಸ್‌ನ ಸಬ್ಜೆಕ್ಟ್‌ಗಳು ತಕ್ಕಮಟ್ಟಿಗೆ ತಲೆಯೊಳಕ್ಕೆ ಇಳಿದವು. ಆಲ್ಜೀಬ್ರ ಮತ್ತು ಟ್ರಿಗನೋಮೀಟ್ರಿ ನನ್ನ ಇಷ್ಟದ ಸಬ್ಜೆಕ್ಟ್‌ಗಳೇ ಆಗಿಬಿಟ್ಟವು. ಮೊದಲಿನಿಂದ ಓದಿನಲ್ಲಿ ಮುಂದಿದ್ದ ಜಾಯಮಾನದಿಂದಾಗಿಯೋ ಎಂಬಂತೆ ಜಸ್ಟ್ ಸೆಕೆಂಡ್ ಕ್ಲಾಸ್‌ಗೆ ಸಾಕಾಗುವಷ್ಟು ಮಟ್ಟವಂತೂ ಇತ್ತು. ಇಂಜಿನಿಯರಿಂಗ್ ಸೂಪರ್‌ವೈಸರ್ ಹುದ್ದೆಯ ಸಾಧ್ಯತೆ ಮಾತ್ರ ಗಾಳಿಯಲ್ಲಿ ತೇಲಿಹೋಯಿತು.
ಹೀಗೆ ನನ್ನ ʻಪ್ರಾಣ ಹಿಂಡುತ್ತಿದ್ದʼ ಕಾಲೇಜು ಮತ್ತು ಸಬ್ಜೆಕ್ಟ್‌ಗಳಿಂದ ಬಿಡುಗಡೆ ಪಡೆಯಲೇಬೇಕೆಂದು ದೃಢ ನಿರ್ಧಾರ ಮಾಡಿದೆ! ಆ ಕಾಲಘಟ್ಟದಲ್ಲಿ ಮಹಾರಾಷ್ಟ್ರ ಸರ್ಕಾರ ವ್ಯಾಪಕವಾಗಿ ಅಣೆಕಟ್ಟಿನ ನೀರಾವರಿ ಯೋಜನೆಗಳನ್ನು ಕೈಗೊಂಡಿತ್ತು. ಅಲ್ಲಿ ನಮ್ಮಣ್ಣನ ಸಹಪಾಠಿ ಸುಬ್ರಮಣ್ಯ ಎಂಬವರು ಇಂಜಿನಿಯರಿಂಗ್ ಸೂಪರ್‌ವೈಸರ್ ಆಗಿದ್ದರು. ಅವರ ತಮ್ಮ ಕೃಷ್ಣಮೂರ್ತಿ ಎನ್ನುವವರು ನನ್ನ ಎರಡನೇ ಅಣ್ಣನಾದ ಸುಬ್ಬಣ್ಣನ ಸಹಪಾಠಿ. ಊರಿನಲ್ಲಿ ಪೋಲಿ ಬಿದ್ದುಹೋಗ್ತಿದಾನೆ ಅಂತ ಅವರನ್ನು ಅವರಣ್ಣ ಮಹಾರಾಷ್ಟ್ರಕ್ಕೆ ಕರೆದೊಯ್ದು ತಮ್ಮ ಇಲಾಖೆಯಲ್ಲೇ ಪೀಸ್ ವರ್ಕ್ ಕಾಂಟ್ರಾಕ್ಟ್‌ಗಳನ್ನು ಕೊಡಿಸಿ ತನ್ನೊಂದಿಗೆ ಇರಿಸಿಕೊಂಡಿದ್ದರು. 1970ರಲ್ಲಿ ಸುಬ್ಬಣ್ಣನೂ ಅವರ ಜೊತೆ ಹೋಗಿ ಸೇರಿಕೊಂಡಿದ್ದ, ತಾನೂ ಕಂಟ್ರಾಕ್ಟ್ ಮಾಡಿ ಒಂದಿಷ್ಟು ಹಣ ಗಳಿಸಿಕೊಂಡು ಬರ್ತೀನಿ ಅಂತ. ಅವನು ಇದ್ದ ಊರು ನಾಗಪುರದ ಬಳಿಯೆಂದೂ, ವಿಳಾಸ: ʻಸಾಕೋಲಿ, ಚಂದ್ರಪುರ ಜಿಲ್ಲೆ, ಮಹಾರಾಷ್ಟ್ರʼ ಎಂದೂ ಗೊತ್ತಿತ್ತು. ವಾಸ್ತವವಾಗಿ ಅದು ನಾಗಪುರಕ್ಕೆ ಹತ್ತಿರದಲ್ಲೇನೂ ಇರಲಿಲ್ಲ; ಒಂದು ಗೊತ್ತಿರುವ ಲ್ಯಾಂಡ್‌ಮಾರ್ಕ್ ಎಂಬಂತೆ ನಾಗಪುರದ ಹೆಸರು ಹೇಳಿದ್ದರು ಅಷ್ಟೆ. ನಾನು ಕಾಲೇಜು, ವಿಜ್ಞಾನದ ಸಬ್ಜೆಕ್ಟ್‌ಗಳ ಜಂಜಾಟದಿಂದ ತಪ್ಪಿಸಿಕೊಳ್ಳಬೇಕು ಎಂದುಕೊಂಡಿದ್ದೆನಲ್ಲ; ಅದಕ್ಕೋಸ್ಕರ ಮನೆಯಲ್ಲಿ ಹೇಳದೆ, ಸುಬ್ಬಣ್ಣ ಇದ್ದಲ್ಲಿಗೇ ಹೋಗಿ ಅವನಿಗೆ ಸಹಾಯಕನಾಗಿ ಇದ್ದುಬಿಡಲು ನಿರ್ಧರಿಸಿದೆ. ಅದಕ್ಕಾಗಿ ಒಂದಷ್ಟು ʻಯೋಜನೆʼಯನ್ನೂ ರೂಪಿಸಿಕೊಂಡೆ. ಒಂದು ʻಸೂಕ್ತ ದಿನʼ ನೋಡಿ ಪರಾರಿಯೂ ಆಗಿಬಿಟ್ಟೆ!
(ಮುಂದುವರಿಯುವುದು.)

ಸಿರಿಮನೆ ನಾಗರಾಜ್
ಲೇಖಕರು, ಸಾಮಾಜಿಕ ಹೋರಾಟಗಾರರು




