ಇದೀಗ ಗ್ರಾಮಗಳಲ್ಲಿ ಕಸದ ತಿಪ್ಪೆಗಳ ಸಂಖ್ಯೆ ಮತ್ತು ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಸಿಗುವುದು ದುರ್ಲಭವಾಗುತ್ತಿದೆ. ಪರ್ಯಾಯವಾಗಿ ಎರೆಹುಳ ಗೊಬ್ಬರ ತಯಾರಿಕೆ ಮತ್ತು ಬಳಕೆಯನ್ನು ಎಲ್ಲೆಡೆ ಉತ್ತೇಜಿಸಬೇಕಿದೆ.
ರಸಗೊಬ್ಬರಗಳ ಮಿತಿಮೀರಿದ ಬಳಕೆಯಿಂದ ಆಹಾರ ಪದಾರ್ಥಗಳು, ನೀರು ಮತ್ತು ಮಣ್ಣು ಹೆಚ್ಚಿನ ಪ್ರಮಾಣದ ನೈಟ್ರೇಟ್‍ನಿಂದ ಕಲುಷಿತಗೊಳ್ಳುತ್ತಿವೆ. ನೈಟ್ರೇಟ್‍ಯುಕ್ತ ದವಸಧಾನ್ಯ, ತರಕಾರಿ ಮತ್ತು ಸೊಪ್ಪನ್ನು ತಿನ್ನುವುದರಿಂದ ಮತ್ತು ನೀರನ್ನು ಕುಡಿಯುವುದರಿಂದ ನೈಟ್ರೇಟ್ ರಾಸಾಯನಿಕವು ನಮ್ಮ ರಕ್ತದ ಹಿಮೋಗ್ಲೋಬಿನ್‍ನಲ್ಲಿರುವ ಫೆರ್ರಸ್ ಅನ್ನು ಉತ್ಕರ್ಷಣಗೊಳಿಸಿ ಫೆರ್ರಿಕ್ ರೂಪಕ್ಕೆ ತಂದು ಮೆಟ್‍ಹಿಮೋಗ್ಲೋಬಿನ್ ತಯಾರಾಗುವಂತೆ ಮಾಡುತ್ತದೆ. ಮೆಟ್‍ಹಿಮೋಗ್ಲೋಬಿನ್ ಅನ್ನು ಹೊಂದಿರುವ ರಕ್ತದಲ್ಲಿ ಆಮ್ಲಜನಕವನ್ನು ದೇಹದ ವಿವಿಧ ಕೋಶಗಳಿಗೆ ಕೊಂಡೊಯ್ಯುವ ಸಾಮರ್ಥ್ಯವು ಕುಗ್ಗುತ್ತದೆ. ಆಗ ನಿಶ್ಯಕ್ತಿ ಮತ್ತಿತರ ಆರೋಗ್ಯ ಸಮಸ್ಯೆಗಳು ತಲೆದೋರುತ್ತವೆ.
ಜೊತೆಗೆ ಭೂಮಿ ಬರಡಾಗುತ್ತಿದೆ. ಭೂಮಿಯನ್ನು ಫಲವತ್ತಾಗಿ ಮಾಡಬೇಕಿದೆ. ಗ್ರಾಮಗಳಲ್ಲಿ ಕಸದ ತಿಪ್ಪೆಗಳು ಕಣ್ಮರೆಯಾಗುತ್ತಿವೆ. ಊರುಗಳು ಶುರುವಾಗುತ್ತಿದ್ದುದೇ ಮನೆ ಮತ್ತು ಕಸದ ತಿಪ್ಪೆಗಳ ನಿರ್ಮಾಣದಿಂದ. ಆಂಡಯ್ಯ ಕವಿಯು ತನ್ನ ‘ಕಬ್ಬಿಗರ ಕಾವ’ದಲ್ಲಿ ‘ಕಾಲೂರ್ಗಳಿಂ’ ಎಂಬ ಪದವನ್ನು ಬಳಸುತ್ತಾರೆ. ‘ಕಾಲೂರ್ಗಳಿಂ’ ಎಂದರೆ ಮನುಷ್ಯ ಕಾಲೂರಿ ನೆಲೆ ನಿಂತ ಸ್ಥಳಗಳೇ ಗ್ರಾಮಗಳಾದವು, ಗ್ರಾಮಗಳಲ್ಲಿ ಕಸದ ತಿಪ್ಪೆಗಳಾದವು.
ಇದೀಗ ಗ್ರಾಮಗಳಲ್ಲಿ ಕಸದ ತಿಪ್ಪೆಗಳ ಸಂಖ್ಯೆ ಮತ್ತು ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಸಿಗುವುದು ದುರ್ಲಭವಾಗುತ್ತಿದೆ. ಪರ್ಯಾಯವಾಗಿ ಎರೆಹುಳ ಗೊಬ್ಬರ ತಯಾರಿಕೆ ಮತ್ತು ಬಳಕೆಯನ್ನು ಎಲ್ಲೆಡೆ ಉತ್ತೇಜಿಸಬೇಕಿದೆ.
ಎರೆಹುಳುಗಳ ಪ್ರಬೇಧಗಳು
ಎರೆಹುಳುಗಳಲ್ಲಿ ಸುಮಾರು 2000 ಪ್ರಬೇಧಗಳಿವೆ. ಯೂಡ್ರಿಲಸ್ ಯೂಜೀನೆ (Eudrilus euginae), ಐಸೀನಿಯಾ ಫೀಟಿಡಾ (Eisinea foetida), ಪೆರಿಯೋನಿಕ್ಸ್ ಎಕ್ಸ್ಕವೇಟಸ್ (Perionyx excavatus) ಇವು ಮುಖ್ಯವಾದ ಪ್ರಬೇಧಗಳು. ಕಸವನ್ನು ರಸದ ಗೊಬ್ಬರವಾಗಿ ಪರಿವರ್ತಿಸುವ ಕ್ಷಮತೆ ಇವುಗಳಿಗಿವೆ. ಯೂಡ್ರಿಲಸ್ ಯೂಜೀನ್ ಎನ್ನುವುದು ಆಫ್ರಿಕಾದ ಪ್ರಬೇಧ. ಅದು ರಾತ್ರಿ ಹೊತ್ತಿನಲ್ಲಿ ಕ್ರಿಯಾತ್ಮಕವಾಗಿರುವುದರಿಂದ ಅದನ್ನು ರಾತ್ರಿ ತೆವಳಿನ ಎರೆಹುಳು (Night crawler) ಎಂದು ಕರೆಯಲಾಗಿದೆ. ಐಸೀನಿಯಾ ಫೀಟಿಡಾ ಗಾತ್ರದಲ್ಲಿ ಚಿಕ್ಕದಾಗಿದ್ದು ‘ಗೊಬ್ಬರದ ಹುಳು’ ಎಂದು ಕರೆಯಲಾಗಿದೆ. ಎರೆಹುಳುಗಳ ಪ್ರಸ್ತುತ ದರವು ಒಂದು ಕಿಲೋಗ್ರಾಂಗೆ ರೂ. 850ರಿಂದ 900. ಒಂದು ಕಿಲೋಗ್ರಾಂನಲ್ಲಿ 1800ರಿಂದ 2000 ಹುಳುಗಳಿರುತ್ತವೆ. ಈಗಾಗಲೇ ಎರೆಹುಳು ಗೊಬ್ಬರ ತಯಾರಿಸುತ್ತಿರುವವರ ಬಳಿ ಎರೆಹುಳುಗಳು ಮಾರಾಟಕ್ಕಿರುತ್ತವೆ.
ಎರೆಹುಳುಗಳಲ್ಲಿ ಸಂತಾನೋತ್ಪತ್ತಿ
ಎರೆಹುಳುಗಳು ದ್ವಿಲಿಂಗಿಗಳು (Hermophrodites). ಅವು ಮೊಟ್ಟೆ ಇಡುತ್ತವೆ. ಮೊಟ್ಟೆಗಳು ನಿಂಬೆ ಹಣ್ಣಿನ ಆಕಾರದಲ್ಲಿ 70ರಿಂದ 80 ಮೈಕ್ರೋಮೀಟರ್ ಉದ್ದ ಮತ್ತು 30ರಿಂದ 40 ಮೈಕ್ರೋಮೀಟರ್ ಅಗಲವಿರುವುದರಿಂದ ಅನುಭವಸ್ಥರು ಬರಿಗಣ್ಣಿನಿಂದ ಗುರುತಿಸಲು ಸಾಧ್ಯ. ಮೊಟ್ಟೆಗಳೊಡೆದು ಮರಿಯಾಗುತ್ತವೆ. ಒಂದು ಮೊಟ್ಟೆಯಿಂದ ಎರಡು ಅಥವಾ ಮೂರು ಮರಿಗಳು ಹೊರಬರುತ್ತವೆ. ಗೊಬ್ಬರ ಉತ್ಪಾದನೆಯ ಜೊತೆ ಜೊತೆಗೆ ಎರೆಹುಳುಗಳ ಉತ್ಪಾದನೆಯೂ ಸಾಗುತ್ತದೆ. ಗೊಬ್ಬರ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಮತ್ತೊಬ್ಬ ರೈತರಿಗೆ ಎರೆಹುಳುಗಳನ್ನು ಮಾರಾಟ ಮಾಡಬಹುದು. ಅದರಿಂದ ಹೆಚ್ಚಿನ ಲಾಭವಾಗುತ್ತದೆ.

ವರ್ಮಿಕಾಸ್ಟ್
ಎರೆಹುಳುಗಳು ತ್ಯಾಜ್ಯ ವಸ್ತುಗಳನ್ನು ತಿಂದು ವಿಸರ್ಜಿಸುವ ಹಿಕ್ಕೆಯನ್ನು ವರ್ಮಿಕಾಸ್ಟ್ (vermicast) ಎಂತಲೂ, ವರ್ಮಿಕಾಸ್ಟ್ ತಯಾರಿಕೆಯ ವಿಧಾನವನ್ನು ವರ್ಮಿಕಾಂಪೋಸ್ಟಿಂಗ್ (vermicomposting)ಎಂತಲೂ ಕರೆಯಲಾಗಿದೆ. ಎರೆಹುಳ ಗೊಬ್ಬರವೆಂದರೆ ವರ್ಮಿಕಾಂಪೋಸ್ಟ್. ಅದು ವರ್ಮಿಕಾಸ್ಟ್ ಮತ್ತು ಇತರೆ ಕೊಳೆತ ಸಾವಯವ ವಸ್ತುಗಳ ಮಿಶ್ರಣ. ಅದರಲ್ಲಿ ಹೆಚ್ಚು ಪೋಷಕಾಂಶಗಳಿರುತ್ತವೆ. ಎರೆಹುಳುಗಳು ತಿಂದ ಪ್ರತಿ ಎರಡು ಗ್ರಾಮ್ ಆಹಾರದಿಂದ ಒಂದು ಗ್ರಾಮ್ ವರ್ಮಿಕಾಸ್ಟ್ ತಯಾರಾಗುತ್ತದೆ.
ತೊಟ್ಟಿಗಳ ನಿರ್ಮಾಣ
ಎರೆಹುಳ ಗೊಬ್ಬರ ಉತ್ಪಾದನೆಗೆ ಅನುಕೂಲಕ್ಕೆ ತಕ್ಕಂತೆ ಹಲವಾರು ತೊಟ್ಟಿ ಅಥವಾ ಗುಂಡಿಗಳನ್ನು ಕಟ್ಟಿಸಿಕೊಳ್ಳಬಹುದು. ಒಂದಾದ ಮೇಲೆ ಒಂದರಂತೆ ತೊಟ್ಟಿಯನ್ನು ತುಂಬುತ್ತಾ ಎಲ್ಲಾ ಕಾಲದಲ್ಲಿಯೂ ಎರೆಹುಳು ಗೊಬ್ಬರ ಲಭ್ಯವಾಗುವಂತೆ ಮಾಡಿಕೊಳ್ಳಲು ಹಲವು ತೊಟ್ಟಿಗಳಿದ್ದರೆ ಚೆನ್ನ.
ತೊಟ್ಟಿಯ ಅಗಲ 3 ಅಡಿ, ಎತ್ತರ 2 ಅಡಿ, ಉದ್ದ 15ರಿಂದ 20 ಅಡಿ ಇರಲಿ. ಸುಮಾರು 75ರಿಂದ 90ದಿನಗಳಲ್ಲಿ ಎರೆಹುಳು ಗೊಬ್ಬರ ಉತ್ಪತ್ತಿಯಾಗುತ್ತದೆ. ಅಡಿಕೆ ಹೊಟ್ಟು, ತೆಂಗಿನ ಗರಿ, ತೆಂಗಿನ ಕಾಯಿಯ ಸಿಪ್ಪೆ ಅಂತಹ ಹೆಚ್ಚು ನಾರುಯುಕ್ತ ವಸ್ತುಗಳಾದರೆ 110ರಿಂದ 120 ದಿನಗಳು ಬೇಕು.

ಎರೆಹುಳ ಗೊಬ್ಬರ ತಯಾರಿಕೆಗೆ ಬಳಸುವ ತ್ಯಾಜ್ಯ ವಸ್ತುಗಳು
ತ್ಯಾಜ್ಯ ವಸ್ತುಗಳನ್ನು ಮತ್ತು ಬೆಳೆಯುಳಿಕೆಗಳನ್ನು ಎರೆಹುಳಗಳ ಗುಂಡಿಗೆ ತುಂಬಲು ಬಳಸಬೇಕು. ಅಂತಹ ಹಲವು ವಸ್ತುಗಳೆಂದರೆ ಪ್ರಾಣಿಗಳ ಸಗಣಿ, ಕೃಷಿ ತ್ಯಾಜ್ಯಗಳು, ಕಳೆಗಳು, ಹುಲ್ಲುಗಳು, ಆಹಾರ ತ್ಯಾಜ್ಯಗಳು, ಅಡಿಗೆ ಮನೆ ತ್ಯಾಜ್ಯ, ರೇಷ್ಮೆ ಕೃಷಿ ತ್ಯಾಜ್ಯ, ಮಾರುಕಟ್ಟೆಗಳ ಕಾಯಿಪಲ್ಯ ತ್ಯಾಜ್ಯ ಮತ್ತು ಹಣ್ಣು ಹಂಪಲುಗಳ ತ್ಯಾಜ್ಯ ಮುಂತಾದವು. ತ್ಯಾಜ್ಯ ಪದಾರ್ಥಗಳಲ್ಲಿ ಕನಿಷ್ಠ ಶೇ. 40ರಿಂದ 50 ತೇವಾಂಶವಿರಬೇಕು.
ಎರೆಹುಳುಗಳು ಗಿಡಮೂಲದ ತ್ಯಾಜ್ಯ ವಸ್ತುಗಳನ್ನು ತಿಂದು ಅವುಗಳಲ್ಲಿರುವ ನಾರಿನ ಅಂಶಗಳಾದ ಲಿಗ್ನಿನ್, ಹೆಮಿಸೆಲ್ಲುಲೋಸ್, ಸೆಲ್ಲುಲೋಸ್ ಅನ್ನು ಜೀರ್ಣಕ್ರಿಯೆಗೊಳಪಡಿಸಿ ತುಂಡು ಮಾಡುತ್ತವೆ. ಪ್ರೊಟೀನ್ ಅಥವಾ ಸಸಾರಜನಕ ಮತ್ತು ಪಿಷ್ಟ ಪದಾರ್ಥಗಳನ್ನು ಪಚನಕ್ರಿಯೆಗೊಳಪಡಿಸಿ ಸರಳ ರೂಪಕ್ಕೆ ತರುತ್ತವೆ.
ಬೆಳೆಯುಳಿಕೆಗಳು, ಕಳೆಗಳು, ಮರದ ಎಲೆಗಳಂತಹ ತ್ಯಾಜ್ಯ ವಸ್ತುಗಳನ್ನು ಎರೆಹುಳಗಳ ಗುಂಡಿಗೆ ತುಂಬಲು ಬಳಸಬೇಕು. ಹಸಿರು ಎಲೆಗಳಲ್ಲಿ ಸಾರಜನಕವಿರುತ್ತದೆ. ಸಾರಜನಕವು ಎರೆಹುಳುಗಳ ಸಂತಾನಾಭಿವೃದ್ಧಿಗೆ, ಸಂಖ್ಯಾವೃದ್ಧಿಗೆ ಅಗತ್ಯ. ಬಾಳೆ ಎಲೆಗಳಲ್ಲಿ ಹೆಚ್ಚು ಸಾರಜನಕವಿರುತ್ತದೆ.
ಬಾಳೆ ತೋಟ ಇರುವವರು ಬೇಡವಾದ ಬಾಳೆ ಕಂದುಗಳನ್ನು ಕತ್ತರಿಸಿ ಬಿಸಾಡುವುದಕ್ಕಿಂತಲೂ ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಸಾರಜನಕವಿರುವುದರಿಂದ ಎರೆಹುಳ ಗೊಬ್ಬರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು. ಕೆಲವು ಸಸ್ಯಮೂಲ ವಸ್ತುಗಳಲ್ಲಿ ಇಂಗಾಲ ಅಥವಾ ಕಾರ್ಬನ್ ಪ್ರಮಾಣ ಹೆಚ್ಚಿರುತ್ತದೆ. ಅಂತಹ ವಸ್ತುಗಳು ಎರೆ ಗೊಬ್ಬರ ತಯಾರಿಕೆಗೆ ಹೆಚ್ಚು ಸೂಕ್ತವಲ್ಲ. ಯಾಕೆಂದರೆ, ಅವುಗಳಲ್ಲಿ ಇಂಗಾಲ ಮತ್ತು ಸಾರಜನಕದ ಅನುಪಾತವು ವಿಶಾಲವಾಗಿರುತ್ತದೆ. ಅಂತಹ ವಸ್ತುಗಳೆಂದರೆ ತೆಂಗಿನ ಎಲೆಗಳು, ತೇಗ ಮರದ ಎಲೆಗಳು, ಅಡಿಕೆ ಸಿಪ್ಪೆ, ಜಾಲಿ ಮರದ ಎಲೆಗಳು ಇತ್ಯಾದಿ.
ಪದರ ಪದರವಾಗಿ ಗುಂಡಿ ತುಂಬಿಸಿ
ಪದರ ಪದರವಾಗಿ ಗುಂಡಿ ತುಂಬಿಸುವಾಗ ಹೆಚ್ಚು ನಾರಿನ ಅಂಶಗಳಿರುವ ತ್ಯಾಜ್ಯಗಳಾದ ತೆಂಗಿನ ಚಿಪ್ಪು, ತೆಂಗಿನ ಎಲೆ, ಬಾಳೆ ದಿಂಡು ಅಂತಹ ವಸ್ತುಗಳನ್ನು ತಳಪದರವಾಗಿ ಅದರ ಮೇಲೆ ಕ್ರಮವಾಗಿ ಸಗಣಿ ಬಗ್ಗಡದ ತೆಳುಪದರ, ಅದರ ಮೇಲೆ ಮೊದಲೇ ಭಾಗಶಃ ಕೊಳೆಸಿದ ತ್ಯಾಜ್ಯಗಳು, ನಂತರ ಮತ್ತೊಂದು ಸಗಣಿ ಬಗ್ಗಡದ ತೆಳುಪದರ, ನಂತರ ತರಗೆಲೆ ಪದರ, ಮತ್ತೆ ಸಗಣಿ ಬಗ್ಗಡದ ತೆಳುಪದರ, ಅದರ ಮೇಲೆ ತರಕಾರಿ ಉಳಿಕೆಯ ತ್ಯಾಜ್ಯಗಳು, ಮತ್ತೆ ಸಗಣಿ ಬಗ್ಗಡದ ತೆಳುಪದರ.
ಹೀಗೆ ಹಲವು ಪದರಗಳಾದ ಮೇಲೆ ಎರೆಹುಳುಗಳನ್ನು ತೊಟ್ಟಿಯಲ್ಲಿ ಮೇಲ್ಪದರವಾಗಿ ಬಿಡಬೇಕು. ಅದರ ಮೇಲೆ ನೆರಳಿನಂತೆ ಹುಲ್ಲು ಹಾಸನ್ನು ಹೊದಿಸಬೇಕು. ಎರೆಹುಳುಗಳು ತ್ಯಾಜ್ಯಗಳನ್ನು ತಿನ್ನುತ್ತಾ ಒಂದೊಂದೇ ಪದರಗಳ ಮೂಲಕ ಕೆಳಗಿಳಿಯುತ್ತಾ ಹೋಗುತ್ತವೆ. ಅವುಗಳ ಚಲನೆ ಕೆಳಮುಖವಾಗಿ ಸುಮಾರು ಎರಡು ಅಡಿ ಇರುತ್ತದೆ. ಅಂತಹ ಚಲನೆಯಲ್ಲಿ ಪದರಗಳ ತ್ಯಾಜ್ಯಗಳನ್ನು ತಿನ್ನುತ್ತಾ ಹಿಕ್ಕೆ ಹಾಕುತ್ತಾ ಸಾಗುತ್ತವೆ. ಸುಮಾರು 75ರಿಂದ 90 ದಿನಗಳಲ್ಲಿ ಈ ಕ್ರಿಯೆ ಸಾಗುತ್ತದೆ. ಗಟ್ಟಿ ಪದಾರ್ಥಗಳನ್ನು ಕೆಲ ಪದರಗಳಲ್ಲಿ ತುಂಬಿದ್ದರೆ 110ರಿಂದ 120 ದಿನಗಳಾಗಬಹುದು. ಎರೆಹುಳುಗಳ ಹಿಕ್ಕೆಯೇ ವರ್ಮಿಕಾಸ್ಟ್. ಹೀಗೆ ಗೊಬ್ಬರ ತಯಾರಿಕೆಯ ಅವಧಿ ಮುಗಿದ ಮೇಲೆ ಗೊಬ್ಬರದಿಂದ ಎರೆಹುಳುಗಳನ್ನು ಬೇರ್ಪಡಿಸಿಕೊಂಡು ಮತ್ತೆ ಮುಂದಿನ ಸರತಿಗೆ ಅವುಗಳನ್ನು ಬಳಸಿಕೊಳ್ಳಬೇಕು. ಜರಡಿ ಹಿಡಿದು ಎರೆಹುಳುಗಳ ಗೊಬ್ಬರವನ್ನು ಬೇರ್ಪಡಿಸಿಕೊಳ್ಳಬೇಕು. ಜರಡಿ ಹಿಡಿದಾಗ ವರ್ಮಿಕಾಸ್ಟ್ ಮತ್ತು ಕೊಳೆತ ಗೊಬ್ಬರದ ಪುಡಿಯು ಕೆಳಗುದುರುತ್ತದೆ. ಅಂತಹ ಮಿಶ್ರಣದ ಹೆಸರು ವರ್ಮಿಕಾಂಪೋಸ್ಟ್. ಅದೇ ಎರೆಹುಳು ಗೊಬ್ಬರ.

ಸಗಣಿ ಅತ್ಯಗತ್ಯ
ವರ್ಮಿಕಾಸ್ಟ್ ತಯಾರಿಕೆಯಲ್ಲಿ ಸಗಣಿ ಬಳಕೆ ಅಗತ್ಯವಾಗಿ ಬೇಕೇ ಬೇಕು. ಸಗಣಿಯು ಎರೆಹುಳುಗಳ ಸಂಖ್ಯಾವೃದ್ಧಿಗೆ ಅಗತ್ಯ. ಕನಿಷ್ಟ ಶೇ. 10ರಿಂದ 15ರಷ್ಟು ಸಗಣಿ ಬಗ್ಗಡವನ್ನು ಬಳಸಬೇಕು. ಅದಕ್ಕಿಂತ ಹೆಚ್ಚು ಬಳಸಿದಷ್ಟೂ ಹೆಚ್ಚೆಚ್ಚು ಎರೆಹುಳುಗಳ ಸಂಖ್ಯಾವೃದ್ಧಿಯಾಗುತ್ತದೆ. ಕೋಟ್ಯಾಂತರ ಸಂಖ್ಯೆಯಲ್ಲಿ ಸೂಕ್ಷ್ಮಜೀವಿಗಳಾದ ಬ್ಯಾಕ್ಟೀರಿಯಾ, ಪ್ರೋಟೋಜೋವಾ ಮತ್ತು ಶಿಲೀಂಧ್ರಗಳು ಸಗಣಿಯಲ್ಲಿರುತ್ತವೆ.
ಸಗಣಿ ಇಲ್ಲದೆ ಇದ್ದರೆ ಮಣ್ಣನ್ನು ಬಳಸಬಹುದು. ಮಣ್ಣಿನ ಸೂಕ್ಷ್ಮಜೀವಿಗಳು ಹಸಿರೆಲೆಗಳನ್ನು ಬಳಸಿಕೊಂಡು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಅಂತಹ ಸೂಕ್ಷ್ಮಜೀವಿಗಳಲ್ಲಿ ಪ್ರಯೋಜನಕಾರಿಯಾದ ಸಾರಜನಕ ಫಿಕ್ಸರ್ಸ್, ಫಾಸ್ಪೇಟ್ ಕರಗಿಸುವ ಪ್ರಬೇಧಗಳಿರುತ್ತವೆ. ಮಣ್ಣಿನ ಆಕ್ಟಿನೋಮೈಸೀಟ್ಸ್ ಬ್ಯಾಕ್ಟೀರಿಯಾಗಳು ಎರೆಹುಳುಗಳಿಗೆ ಪೋಷಕಾಂಶಗಳ ಹೀರಿಕೆಗೆ ಸಹಾಯ ಮಾಡುತ್ತವೆ. ಅಷ್ಟಲ್ಲದೆ, ಮಣ್ಣಿನಲ್ಲಿರುವ ರೈಜೋಬ್ಯಾಕ್ಟೀರಿಯಾಗಳು ಸಸಿ ಬೆಳವಣಿಗೆಗೆ ಸಹಕಾರಿ.
ಎರೆಹುಳುಗಳ ಶತ್ರುಗಳು
ಇಲಿಗಳು ಮತ್ತು ಹೆಗ್ಗಣಗಳು ಎರೆಹುಳುಗಳ ಶತ್ರುಗಳು. ಅವು ಎರೆಹುಳುಗಳನ್ನು ತಿನ್ನುತ್ತವೆ. ಕಾಗೆ ಮತ್ತಿತರ ಪಕ್ಷಿಗಳು ಎರೆಹುಳುಗಳಿಗೆ ಮುಗಿಬೀಳುತ್ತವೆ. ಕೆಂಪು ಇರುವೆಗಳು ಎರೆಹುಳುಗಳನ್ನು ಕಚ್ಚಿ ಕತ್ತರಿಸುತ್ತವೆ. ಎರೆಹುಳಗಳನ್ನು ಕಾಪಾಡಲು ಇಂತಹ ಶತ್ರುಗಳನ್ನು ನಿಗ್ರಹಿಸಬೇಕು.
ನೆರಳಿನಲ್ಲಿ ಎರೆಹುಳು ಗೊಬ್ಬರ ತಯಾರಿಕೆ
ಎರೆಹುಳು ಗೊಬ್ಬರ ತಯಾರಿಕೆಗೆ ನೆರಳು ಬೇಕೇಬೇಕು. ಎರೆಹುಳುಗಳು ನೆರಳುಪ್ರಿಯ ಪ್ರಾಣಿಗಳು. ನೈಸರ್ಗಿಕವಾಗಿರುವ ಮರದ ನೆರಳಿನಡಿ ಎರೆಹುಳು ಗೊಬ್ಬರಕ್ಕಾಗಿ ತೊಟ್ಟಿಗಳನ್ನು ನಿರ್ಮಿಸಬೇಕು. ಕೃತಕ ನೆರಳು ಸೃಷ್ಟಿಸಲು ತೊಟ್ಟಿಗಳ ಮೇಲೆ ಏಳೆಂಟು ಅಡಿಗಳ ಎತ್ತರದಲ್ಲಿ ಚಪ್ಪರದ ಹೊದಿಕೆ ಅಥವಾ ತಗಡಿನ ಚಾವಣಿ ನಿರ್ಮಿಸಬೇಕು.
ಎರೆಹುಳ ಗೊಬ್ಬರದಲ್ಲಿರುವ ಪೋಷಕಾಂಶಗಳು
ಎರೆಹುಳ ಗೊಬ್ಬರ ಸಾವಯವ ಗೊಬ್ಬರ. ಅದರಲ್ಲಿ ಮುಖ್ಯ ಪೋಷಕಾಂಶಗಳಾದ ಸಾರಜನಕ (1.10%), ರಂಜಕ (0.86%), ಪೊಟ್ಯಾಷ್ (0.98%) ಲಘು ಪೋಷಕಾಂಶಗಳಾದ ಕಬ್ಬಿಣ, ಸತು, ತಾಮ್ರ, ಸುಣ್ಣ, ಮೆಗ್ನೀಶಿಯಂ ಮತ್ತು ಗಂಧಕದ ಅಂಶಗಳಿರುತ್ತವೆ. ಅವುಗಳ ಸಾಂದ್ರತೆಯು ವಿವಿಧ ಬೆಳೆಯುಳಿಕೆಗಳ ಬಳಕೆಯ ಮೇಲೆ ಅವಲಂಬಿತವಾಗಿರುತ್ತವೆ. ತೆಂಗಿನ ಸಿಪ್ಪೆ, ಬಾಳೆಗಿಡದ ದಿಂಡು, ದ್ವಿದಳ ಧಾನ್ಯಗಳ ಬೆಳೆಯುಳಿಕೆ, ಹುಲ್ಲು ಹೀಗೆ ಬೇರೆ ಬೇರೆ ವಸ್ತುಗಳ ಬಳಕೆಯನ್ನು ಅವಲಂಬಿಸಿದೆ.

ಪರಿಸರ ಸಂರಕ್ಷಣೆಗಾಗಿ ಎರೆಹುಳು ಗೊಬ್ಬರ
ಬೆಳೆಯುಳಿಕೆಗಳನ್ನು ಸುಡದೆ ಎರೆಹುಳ ಗೊಬ್ಬರ ತಯಾರಿಸಲು ಬಳಸಬೇಕು. ಉತ್ತಮ ಪರಿಸರಕ್ಕಾಗಿ ಎಲ್ಲರೂ ತಮ್ಮದೇ ಆದ ಕೊಡುಗೆ ನೀಡಬೇಕು. ಪರಿಸರ ಸಂರಕ್ಷಣೆಯ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಸಾವಯವ ಕೃಷಿ ಪದ್ದತಿಯಲ್ಲಿ ತಕ್ಕಮಟ್ಟಿಗೆ ಎರೆಹುಳ ಗೊಬ್ಬರವನ್ನು ಬಳಸಬೇಕಿದೆ.
ಎರೆಹುಳ ಗೊಬ್ಬರದ ದರ
ಎರೆಹುಳ ಗೊಬ್ಬರದ ದರವು ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೇಜಿಗೆ ರೂ. 13. ಕೆಲವು ಜಿಲ್ಲೆಗಳಲ್ಲಿ ಒಂದು ಕೇಜಿಗೆ ರೂ. 10ರಿಂದ 13ರವರೆಗಿದೆ. ಇಪ್ಪತೈದು ಕೇಜಿಗಳ ಎರೆಹುಳ ಗೊಬ್ಬರ ಮೂಟೆಯ ಬೆಲೆ ರೂ. 345. ಅದರಲ್ಲಿ ಚೀಲದ ಬೆಲೆಯಾಗಿ ರೂ. 20 ಸೇರಿದೆ. ಜೊತೆಗೆ 10 ಕೇಜಿ ಮೂಟೆಯೂ ಲಭ್ಯ. 10 ಕೆಜಿಯನ್ನು ಮನೆಯ ಮೇಲಿನ ತಾರಸಿ ತೋಟಕ್ಕೆ ಹೊತ್ತೊಯ್ಯಲು ಸುಲಭ. ತಾರಸಿ ತೋಟದವರಿಂದ 5 ಕೇಜಿ ಮೂಟೆಗೆ ಬೇಡಿಕೆ ಬರುತ್ತಿದೆ. ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನ ಮೂಲಕ ಎರೆಹುಳು ಬಳಕೆಯ ಪ್ರಚಾರ ನಡೆದಿದೆ.
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಒಳಗಡೆಯಿರುವ ವಲಯ ಸಂಶೋಧನಾ ಕೇಂದ್ರದಲ್ಲಿ ಎರೆಹುಳ ಗೊಬ್ಬರ ಮಾರಾಟಕ್ಕಿದೆ. ತಾರಸಿ ತೋಟದಲ್ಲಿ ಪ್ರತಿ 15 ದಿನಕ್ಕೊಮ್ಮೆ ಎರೆಹುಳ ಗೊಬ್ಬರ ನೀಡಬೇಕು. ಆಗ ಗಿಡಗಳಿಗೆ ನಿರಂತರ ಪೋಷಕಾಂಶಗಳು ಲಭ್ಯ. ಎರೆಹುಳ ಗೊಬ್ಬರದಲ್ಲಿಯೂ ಎನ್. ಪಿ. ಕೆ. ಆದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಸಿಗುತ್ತವೆ. ಹಾಗೆಯೇ ಲಘು ಪೋಷಕಾಂಶಗಳಾದ ಕಬ್ಬಿಣ, ಸತು, ತಾಮ್ರ ಮತ್ತಿತರ ಅಂಶಗಳೂ ಇರುತ್ತವೆ. ಇವೆಲ್ಲಾ ಸಸ್ಯಗಳ ಬೆಳವಣಿಗೆಗೆ ಅತ್ಯಗತ್ಯ.
ಆರ್ಥಿಕ ಬೆಳೆಗಳಿಗೆ ಎರೆಹುಳು ಗೊಬ್ಬರ
ಆರ್ಥಿಕ ಬೆಳೆಗಳಿಗೆ ಎರೆಹುಳ ಗೊಬ್ಬರವು ಸೂಕ್ತವಾದದ್ದು. ಟೊಮ್ಯಾಟೊ, ಬದನೆಕಾಯಿ, ಕೋಸು, ಹೂಕೋಸು, ಆಲೂಗಡ್ಡೆ ಮತ್ತು ಮೆಣಸಿನಕಾಯಿ ಬೆಳೆಗಳಿಗೆ ಬಿತ್ತನೆಯ 30 ದಿನಗಳ ನಂತರ ಅಥವಾ ಹೂ ಬಿಡುವ ಸಂದರ್ಭದಲ್ಲಿ ಎರೆಹುಳು ಗೊಬ್ಬರ ನೀಡಬಹುದು. ಒಂದು ಹೆಕ್ಟೇರಿಗೆ 2000ದಿಂದ 3000 ಕೇಜಿ ಗೊಬ್ಬರ ಬೇಕು.
ನಗರಗಳಲ್ಲಿ ಹವ್ಯಾಸಕ್ಕಾಗಿ ಮನೆಯ ಮೇಲೆ ತಾರಸಿ ತೋಟ ಮಾಡಿ ತರಕಾರಿ, ಸೊಪ್ಪು, ಹೂಗಳನ್ನು, ಔಷಧೀಯ ಸಸ್ಯಗಳನ್ನು ಬೆಳೆಯುವವರು ಎರೆಹುಳು ಗೊಬ್ಬರವನ್ನು ಈಗಾಗಲೇ ಬಳಸುತ್ತಿದ್ದಾರೆ. ಹಿತ್ತಲ ತೋಟ, ಕೈ ತೋಟ ಮಾಡುವವರಿಗೂ ಎರೆಹುಳ ಗೊಬ್ಬರ ಅನುಕೂಲಕರ.
ಬದುಕಿಗೆ ಆಸರೆಯಾಗಿ ಎರೆಹುಳ ಗೊಬ್ಬರ ತಯಾರಿಕೆ
ಕೆಲವು ರೈತರಿಗೆ ಎರೆಹುಳು ಗೊಬ್ಬರದ ಉತ್ಪಾದನೆಯು ಉದ್ಯಮವಾಗಿದೆ. ಕೆಲವರು ಎರೆಹುಳು ಗೊಬ್ಬರ ತಯಾರಿಕೆಯ ಉದ್ದಿಮೆದಾರರು ಎಂದು ಘೋಷಿಸಿಕೊಂಡಿದ್ದಾರೆ. ಅಂತಹ ಕಸುಬಿನಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಆಸಕ್ತ ರಿಯಲ್ ಎಸ್ಟೇಟ್ ಉದ್ಯಮಿಗಳು, ವಕೀಲರು, ವ್ಯಾಪಾರಸ್ಥರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎಂಜಿನಿಯರುಗಳು ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಉದ್ದಿಮೆದಾರರಾಗಲು ಉತ್ಸುಕತೆ ತೋರುತ್ತಿದ್ದಾರೆ. ಈಗಾಗಲೇ ಉದ್ದಿಮೆದಾರರಾಗಿರುವವರು ಇತರರಿಗೆ ಪ್ರೇರಣೆ ನೀಡಲು ಸಾಮಾಜಿಕ ಜಾಲ ತಾಣವಾದ ‘ಯೂ ಟ್ಯೂಬ್’ನಲ್ಲಿ ತಮ್ಮ ಅನುಭವದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತರಬೇತಿ ಪಡೆದು ಎರೆಹುಳ ಗೊಬ್ಬರದ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ ರಾಷ್ಟ್ರೀಯ ಶ್ರೇಯಾಂಕ ಪಟ್ಟಿ 2025- ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾನಮಾನ
ಅನುದಾನದ ಯೋಜನೆಗಳ
ಸಾವಯವ ಗ್ರಾಮ ಯೋಜನೆಯಲ್ಲಿ ತೊಟ್ಟಿ ಮಾಡಲು ರೂ. 15,000ರಿಂದ 20,000 ಅನುದಾನವಿದೆ. ಸಾವಯವ ಸಿರಿ ಯೋಜನೆಯೂ ಇದೆ. ತೊಟ್ಟಿ ಮಾಡಿಕೊಳ್ಳಲು ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನೆಯಲ್ಲಿ ನೆರವಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಲ್ಲಿ ಹಾಗೂ ಪ್ರಧಾನ ಮಂತ್ರಿ ಕೃಷಿ ವಿಕಾಸ ಯೋಜನೆಯಲ್ಲಿಯೂ ಅನುದಾನವಿದೆ. ಗ್ರಾಮ ಪಂಚಾಯತಿ ಸಭೆಗಳಲ್ಲಿ ಎರೆಹುಳ ಗೊಬ್ಬರ ತಯಾರಿಕೆಯನ್ನು ಪ್ರತಿ ಹಳ್ಳಿಯಲ್ಲಿಯೂ ಮಾಡಿಕೊಳ್ಳುವಂತೆ ಚರ್ಚಿಸಿ ಸಲಹೆ ನೀಡಬೇಕಿದೆ. ವಿವಿಧ ಸ್ವಸಹಾಯ ಗುಂಪುಗಳ ಸಹಕಾರವೂ ಬೇಕಿದೆ.
(ಪೂರಕ ಮಾಹಿತಿ: ಡಾ. ಬೋರಯ್ಯ, ಬಿ., ಪ್ರಾಧ್ಯಾಪಕರು, ಸಾವಯವ ಕೃಷಿ ಸಂಶೋಧನಾ ಸಂಸ್ಥೆ, ಜಿಕೆವಿಕೆ, ಬೆಂಗಳೂರು – 560 065 ಮತ್ತು ಡಾ. ಎ. ಎಸ್. ಪವನ್, ಸಹಾಯಕ ಪ್ರಾಧ್ಯಾಪಕರು, ಬೇಸಾಯ ವಿಜ್ಞಾನ ವಿಭಾಗ, ಕೃಷಿ ಮಹಾವಿದ್ಯಾಲಯ, ಜಿಕೆವಿಕೆ, ಬೆಂಗಳೂರು).

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ




