ಕೃಷಿರಂಗ | ರೈತ ಸಂತೆಯೊಳಗೊಂದು ಸುತ್ತು

Date:

ವಾಟ್ಸಾಪ್‍ನಲ್ಲಿ UAS BANGALORE ಚಾನೆಲ್ ಅನ್ನು ವೀಕ್ಷಿಸಿ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ಎಲ್ಲರೂ ತಿಳಿಯಬಹುದಾಗಿದೆ. ಮುಂದಿನ ರೈತ ಸಂತೆಗಳಿಗೆ ಆಗಮಿಸಲಿಚ್ಚಿಸುವ ರೈತರು ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿಗೆ ಸಂಬಂಧಿಸಿದ ಕಾಲೇಜುಗಳ ಸಿಬ್ಬಂದಿ, ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ, ಇವುಗಳಲ್ಲಿ ಯಾವುದಾದರೊಂದನ್ನು ಸಂಪರ್ಕಿಸಿ ಭಾಗವಹಿಸಬಹುದಾಗಿದೆ.


ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲು ಹಲವು ಪ್ರಯತ್ನಗಳನ್ನು ನಿರಂತರವಾಗಿ ನಡೆಸುತ್ತಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಜಿಕೆವಿಕೆಯಲ್ಲಿ ಆಗಸ್ಟ್ 2024ರಿಂದ ತಿಂಗಳಿಗೊಮ್ಮೆ ರೈತ ಸಂತೆ ಏರ್ಪಡಿಸುತ್ತಿದೆ. ಇದೊಂದು ಹೊಸಬಗೆಯ ಕಲ್ಪನೆ. ಪ್ರತಿ ತಿಂಗಳ ಕೊನೆಯ ಶನಿವಾರದಂದು ರೈತ ಸಂತೆ ನಡೆಯುತ್ತಿದೆ. ಜಿಕೆವಿಕೆಯ ಸುತ್ತಮುತ್ತಲ ಹಲವು ಪ್ರದೇಶಗಳ ವಾಸಿಗಳು ರೈತ ಸಂತೆಯ ಗ್ರಾಹಕರು.

ಬೆಂಗಳೂರು ಕೃಷಿ ವಿವಿ ವ್ಯಾಪ್ತಿಯ ರೈತರು, ರೈತ ಮಹಿಳಾ ಸಂಘಗಳು, ಸ್ವಸಹಾಯ ಗುಂಪುಗಳು, ರೈತ ಉತ್ಪನ್ನ ಸಂಘಗಳು, ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಸಂಶೋಧನಾ ಕೇಂದ್ರಗಳು, ಸಾವಯವ ಕೃಷಿಕರು, ತಮ್ಮ ಉತ್ಪನ್ನಗಳನ್ನು ರೈತ ಸಂತೆಯಲ್ಲಿ ಮಾರಾಟ ಮಾಡಿ ಒಂದಷ್ಟು ಆದಾಯವನ್ನು ಗಳಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರು ರೈತರಿಗೆ ಸಹಾಯ ಮಾಡಲು ಅಲ್ಲಿಗೆ ಭೇಟಿಯಿತ್ತು ಖರೀದಿಸುತ್ತಿದ್ದಾರೆ.

ಡಿಸೆಂಬರ್ ತಿಂಗಳ ರೈತ ಸಂತೆ

ಡಿಸೆಂಬರ್ 2025ರ ಕೊನೆಯ ಶನಿವಾರದಂದು ನಡೆದ ರೈತ ಸಂತೆಯೊಳಗೊಂದು ಸುತ್ತುಹಾಕಿ ಸಂಗ್ರಹಿಸಿದ ವಿವರಗಳು ಇಲ್ಲಿವೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡಿನ ರೈತ ಉತ್ಪನ್ನ ಕಂಪನಿಯ ಜಯರಾಮ್‍ರವರು ಐದನೇ ಸಾರಿ ಕೃಷಿ ಸಂತೆಗೆ ಬಂದಿದ್ದರು. ಅವರ ಕಂಪನಿಯಲ್ಲಿ 1000 ರೈತ ಷೇರುದಾರರಿದ್ದಾರೆ. ರೈತರು ಬೆಳೆದ ಸಿರಿಧಾನ್ಯಗಳನ್ನು ಮಾರಾಟ ಮಾಡುತ್ತಿದ್ದರು. ಉತ್ಪನ್ನಗಳ ಮಾರಾಟದಿಂದ ಬಂದ ಲಾಭವನ್ನು ಒಂದು ವರ್ಷಕ್ಕೊಮ್ಮೆ ಅಥವಾ ಮೂರು ವರ್ಷಕ್ಕೊಮ್ಮೆ ಸದಸ್ಯರಿಗೆ ಡಿವಿಡೆಂಟ್ ರೂಪದಲ್ಲಿ ಹಂಚಲಾಗುತ್ತಿದೆ. ಈ ಸಂತೆಯಲ್ಲಿ ಹತ್ತು ಸಾವಿರ ರೂಪಾಯಿಗಳ ವ್ಯಾಪಾರ ಆಗಿದೆ.

Santhe Beedhi 01

ಗೌರಿಬಿದನೂರಿನ ಹರೀಶ್‍ರವರು ಐದನೇ ಸಾರಿ ಬಂದು ರಾಗಿ ಮತ್ತು ಕಡಲೆ ಮಾರುತ್ತಿದ್ದರು. ಜೊತೆಗೆ ವೆಲ್ವೆಟ್ ಬೀನ್ಸ್ ಬೀಜಗಳನ್ನು ಮಾರುತ್ತಿದ್ದರು. ಅವುಗಳನ್ನು ಬೆಳೆದು ತೆಂಗು, ಅಡಿಕೆ, ಸೀಬೆ, ಪಪಾಯ, ಮಾವು ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಹಸಿರು ಗೊಬ್ಬರವಾಗಿ ಬಳಸಿರಿ ಎಂದು ಪ್ರಚಾರ ಮಾಡುತ್ತಿದ್ದರು.

ರಾಮನಗರ ಬಳಿಯ ಬಿಳಿಗುಂಬದವರಾದ ಬಿ. ಸಿ. ವಾಸುರವರು ಪಪಾಯ, ತೆಂಗು, ಕುಂಬಳಕಾಯಿಯೊಂದಿಗೆ ಬಂದಿದ್ದರು. ಇದು ಅವರ ಮೂರನೇ ಆಗಮನ. ಏಳು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದವರು ರಾಜ್ಯ ಮಟ್ಟದ ಪ್ರಶಸ್ತಿ ಕೊಟ್ಟಿದ್ದಾರಂತೆ. ಸಂತೆಯಲ್ಲಿ ವ್ಯಾಪಾರ ಚೆನ್ನಾಗಿದೆಯೆಂದರು. ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆಯವರು ಕೊಟ್ಟ ತಂತ್ರಜ್ಞಾನವನ್ನು ಬಳಸಿಕೊಂಡು ಸಿರಿಧಾನ್ಯಗಳ ಉಪ ಉತ್ಪನ್ನಗಳನ್ನು ಸುಮಾರು 15 ವರ್ಷಗಳಿಂದ ತಯಾರಿಸುತ್ತಿದ್ದಾರೆ.

ನಾಗಮಂಗಲ ತಾಲ್ಲೂಕು ಸಾವಯವ ರೈತರ ಸಂಘದವರು ಮೊದಲ ಬಾರಿ ತಮ್ಮ ಉತ್ಪನ್ನಗಳಾದ ಅಣಬೆ, ಹಿರೇಕಾಯಿ, ನೆಲ್ಲಿಕಾಯಿ, ಸೊಪ್ಪು ಮಾರಾಟ ಮಾಡುತ್ತಿದ್ದರು. ಮಾರಾಟ ಚೆನ್ನಾಗಿ ನಡೆಯುತ್ತಿತ್ತು. ಅವಕಾಶ ಕಲ್ಪಿಸಿದ್ದಕ್ಕೆ ವಿಶ್ವವಿದ್ಯಾಲಯಕ್ಕೆ ಧನ್ಯವಾದ ಹೇಳಿದರು. ಅಂದು ಅಲ್ಲಿಯೇ ನಡೆದ ರೈತ ದಿನಾಚರಣೆಗೆ ಬಂದಿದ್ದ ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್‌ ಅವರು ತಮ್ಮ ಅಂಗಡಿಗೆ ಭೇಟಿ ನೀಡಿ ಅಣಬೆ ಕೊಂಡರೆಂದು ಸಂತಸ ವ್ಯಕ್ತಪಡಿಸಿದರು.

ಅಮೋಘ ಆರ್ಗಾನಿಕ್ಸ್ ಫಾರ್ಮ್‍ನವರು ಇಡೀ ಇಂಡಿಯಾದಲ್ಲೇ ಅತ್ಯುತ್ತಮ ಅರಿಶಿನ ಪುಡಿಯನ್ನು ಮಾರಾಟ ಮಾಡುತ್ತಿದ್ದೇವೆ ಎಂಬ ಪ್ರಚಾರದೊಂದಿಗೆ ಬಂದಿದ್ದರು. ಮೇಘಾಲಯದ ಲಕಡಾಂಗ್ ತಳಿಯ ಅರಿಶಿನವದು. ಅದಕ್ಕೆ ಭೌಗೋಳಿಕ ಸೂಚ್ಯಂಕ (Geographical Indication) ಇದೆ. ಲಕಡಾಂಗ್ ಹಳ್ಳಿಯ ಸುತ್ತಮುತ್ತ ಬೆಳೆಯುವ ಅರಿಶಿನದಲ್ಲಿ ಶೇ. 7-12ರಷ್ಟು ಕರ್ಕುಮಿನ್ ಎಂಬ ರಾಸಾಯನಿಕ ವಸ್ತುವಿದೆ. ಕರ್ಕುಮಿನ್‍ಗೆ ಕ್ಯಾನ್ಸರ್ ನಿರೋಧಕ ಶಕ್ತಿಯಿದೆ ಎಂಬುದು ಸಂಶೋಧನೆಗಳ ಸಾರ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
KVK Mandya

ತಿಪಟೂರಿನ ಮನ್ವಿಕ್ ನ್ಯಾಚುರಲ್ಸ್‍ರವರು ನಾಲ್ಕನೇ ಸಾರಿ ರೈತ ಸಂತೆಗೆ ಬಂದಿದ್ದರು. ಮರದ ಗಾಣದ ಎಣ್ಣೆ ಮತ್ತು ಮನೆಯಲ್ಲಿಯೇ ತಯಾರಿಸಿದ ಸಾಂಬಾರ್ ಪುಡಿ, ಪುಳಿಯೋಗರೆ ಪುಡಿ, ಚಟ್ನಿ ಪುಡಿ, ಅಗಸೆ ಬೀಜದ ಪುಡಿ, ನುಗ್ಗೆ ಸೊಪ್ಪಿನ ಚಟ್ನಿ ಪುಡಿ ಮತ್ತು ಜೇನು ತುಪ್ಪ ಮಾರುತ್ತಿದ್ದರು.

ಚನ್ನಪಟ್ಟಣದ ಬಿ.ವಿ. ಹಳ್ಳಿಯ ಕೃಷ್ಣಾರವರ ಕಂಪನಿಯ ಹೆಸರು ‘ರೈತನ ಹಟ್ಟಿ’. ವಿವಿಧ ಬಣ್ಣಗಳ ಅಕ್ಕಿಗಳಾದÀ ರಾಜಮುಡಿ ಅಕ್ಕಿ, ಕೆಂಪು ಅಕ್ಕಿ, ಕಂದು ಅಕ್ಕಿ, ಕಪ್ಪು ಅಕ್ಕಿಗಳ ಜೊತೆಗೆ ತುಪ್ಪ, ಬೆಲ್ಲ, ಅಡುಗೆ ಎಣ್ಣೆಯನ್ನೂ ಮಾರುತ್ತಿದ್ದರು. ತರಕಾರಿಗಳ ನಾಟಿ ಬೀಜಗಳು ಲಭ್ಯವಿದ್ದವು.

ತುಮಕೂರು ಜಿಲ್ಲೆಯ ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ತರಬೇತಿ ಪಡೆದ ಕುಣಿಗಲ್‍ನ ಶ್ರೀಲಕ್ಷ್ಮಿ ಕೃಷಿ ಮಹಿಳಾ ಸಂಘದವರು ಆರೋಗ್ಯವರ್ಧಿತ ಉತ್ಪನ್ನಗಳನ್ನು ಮಾರಾಟಕ್ಕಿಟ್ಟದ್ದರು.

ಚನ್ನಪಟ್ಟಣದ ಬಳಿಯ ವಿಠಲೇನಹಳ್ಳಿಯ ರೈತರಾದ ರಾಘವೇಂದ್ರ ಅವರ ತೋಟದಲ್ಲಿ ಬೆಳೆದ ತೆಂಗಿನಕಾಯಿ ಮಾರಾಟಕ್ಕಿದ್ದವು. ತಮ್ಮ 20 ಎಕರೆ ತೋಟದಲ್ಲಿ ತೆಂಗು, ಡ್ರ್ಯಾಗನ್ ಫ್ರೂಟ್ ಮತ್ತು ಜೇನು ಸಾಕಾಣಿಕೆಯಿದೆಯೆಂದರು. ಒಂದು ಸಾರಿಗೆ 7000ದಿಂದ 8000 ತೆಂಗಿನ ಕಾಯಿಗಳನ್ನು ಕಿತ್ತು ಒಣಗಿಸಿ ಗಾಣದಿಂದ ತೆಂಗಿನೆಣ್ಣೆ ತೆಗೆದು ಮಾರುತ್ತಿದ್ದಾರೆ.

Manvik Naturals

‘ಮೈತ್ರಾ’ದ ಕುಮಾರ್ ಗೌರಿಯವರು ಸುಸ್ಥಿರ ಕೃಷಿಯಲ್ಲಿ ಬೆಳೆದ ದವಸಧಾನ್ಯಗಳಿಂದ ರಾಗಿ ಹಿಟ್ಟು, ಹುಚ್ಚೆಳ್ಳು ಪುಡಿ, ಸಿರಿಧಾನ್ಯ ಪುಡಿ ಮತ್ತು ಚಟ್ನಿ ಪುಡಿಯನ್ನು ಮಾರಾಟಕ್ಕಿಟ್ಟಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬೆಲೆ ಬಳಿಯ ಪುಟ್ಟತಿಮ್ಮನಹಳ್ಳಿಯ ಶಿವಕುಮಾರ್ ‘ಆರ್ಗಾನಿಕ್ ಚಿಕ್ಕಬಳ್ಳಾಪುರ’ ಹೆಸರಿನಡಿ ನುಗ್ಗೆಯಿಂದ ತಯಾರಿಸಿದ ನಿಪ್ಪಟ್ಟು, ಚಟ್ನಿ ಪುಡಿ, ಸೂಪ್, ಚಾಕಲೇಟ್, ನೆಲ್ಲಿಕಾಯಿ ರಸ, ನೆಲ್ಲಿಕಾಯಿ ಪುಡಿಯನ್ನು ಮಾರುತ್ತಿದ್ದರು. ಕೃಷಿ ಸಂತೆಗೆ ಎಂಟು ತಿಂಗಳಿಂದ ಬರುತ್ತಿದ್ದಾರೆ.

ಮಂಡ್ಯ ತಾಲ್ಲೂಕಿನ ಜಿ. ಕೆಬ್ಬಳ್ಳಿಯಲ್ಲಿ 10 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ಬೆಲ್ಲ ಮಾಡಲು ದೇಸಿ ಆಲೆಮನೆ ಹೊಂದಿರುವ ಮಂಜುನಾಥ್‍ರವರು ‘ಹೊಂಬಾಳಮ್ಮ ಆರ್ಗಾನಿಕ್ಸ್’ ಹೆಸರಿನ ಬೆಲ್ಲದ ಪುಡಿ, ಬೆಲ್ಲದ ಗೋಲಿ ಮಾರುತ್ತಿದ್ದರು. ಇದು ಅವರ ಮೊದಲ ಆಗಮನ. ವ್ಯಾಪಾರ ಆಗುತ್ತಿತ್ತು. ಮೊದಲು ಬೇರೆ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಕೊಡುತ್ತಿದ್ದರಂತೆ. ಈಗ ಅವರೇ ನೇರವಾಗಿ ಮಾರಾಟಕ್ಕಿಳಿದಿದ್ದಾರೆ.

ತಿಪಟೂರು ತಾಲ್ಲೂಕು ನೊಣವಿನಕೆರೆ ಬಳಿಯ ಬೋಚಿಹಳ್ಳಿಯ ಗೋಪಾಲ್‍ರವರು ‘ಮನೆ ಬೆಣ್ಣೆ’ ಎಂಬ ಬ್ರಾಂಡ್‍ನಡಿ ತಾಜಾ ಹಾಗೂ ಪರಿಶುದ್ದವಾದ ಹಸುವಿನ ಮತ್ತು ಎಮ್ಮೆಯ ಬೆಣ್ಣೆಯನ್ನು ಮಾರುತ್ತಿದ್ದರು. ತಮ್ಮ ಸ್ನೇಹಿತರು ಸಾಕುತ್ತಿರುವ 122 ಗಿರ್ ತಳಿಯ ಹಸುಗಳು ಮತ್ತು ಎಮ್ಮೆಗಳ ಹಾಲಿನಿಂದ ತಯಾರಾದ ಬೆಣ್ಣೆಯದು.

ಮಿಸ್ಟರ್ ಮಿಲ್ಲೆಟ್, ಸಂಜೀವಿನಿ ವುಡ್ ಪ್ರೋಸೆಸ್ಡ್ ಆಯಿಲ್, ದೊಡ್ಡ ಆಲಹಳ್ಳಿಯ ಶ್ರೀ ಪಟ್ಟಲದಮ್ಮ ಸಂಜೀವಿನಿ ಒಕ್ಕೂಟ, ಉಕಾಸ ಕಲ್ಪರಸ, ಪ್ರದ್ಯಾ ಫುಡ್ಸ್ ಇನ್ನಿತರೆ ಮಳಿಗೆಗಳಿದ್ದವು.

ಕೃಷಿ ವಿಜ್ಞಾನ ಕೇಂದ್ರಗಳ ಸರಕುಗಳು

ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರದಿಂದ ಆಹಾರ ಪದಾರ್ಥಗಳಾದ ಅರಿಶಿನ ಪುಡಿ, ಜೇನು ತುಪ್ಪ, ಬೆಲ್ಲ, ರಾಗಿ ಮಾಲ್ಟ್, ರಾಗಿ ಹಪ್ಪಳ, ರಾಗಿ ತಂಬಿಟ್ಟು, ಅಕ್ಕಿ ಹಿಟ್ಟು ಮತ್ತು ಗೊಬ್ಬರಗಳಾದ ಹೊಂಗೆ ಹಿಂಡಿ ಹಾಗೂ ಬೇವಿನ ಹಿಂಡಿ ಮತ್ತು ಕೀಟಗಳ ನಿರ್ವಹಣೆಗಾಗಿ ಬೇವಿನ ಎಣ್ಣೆ, ಹೊಂಗೆ ಎಣ್ಣೆ ಮಾರುತ್ತಿದ್ದರು.

ಮಂಡ್ಯದ ವಿಸಿ ಫಾರ್ಮಿನ ಕೃಷಿ ವಿಜ್ಞಾನ ಕೇಂದ್ರದಿಂದ ‘ಕೀರೆ ಮಡಿ’ ಬ್ರಾಂಡ್ ಹೆಸರಿನ ಪುಡಿಬೆಲ್ಲ ಭರದಿಂದ ಮಾರಾಟವಾಗುತ್ತಿತ್ತು. ಸ್ನಾನ ಮಾಡುವಾಗ ಮೈ ಉಜ್ಜಿಕೊಳ್ಳುವ ಉದ್ದೇಶಕ್ಕಾಗಿ ಒಣಗಿಸಿದ ಹೀರೆಕಾಯಿ ನಾರು ಕೂಡ ಇದ್ದದ್ದು ವಿಶೇಷವಾಗಿತ್ತು. ಊಟಕ್ಕೆ ಬಡಿಸಿಕೊಳ್ಳಲು ಹುಣಸೆ ತೊಕ್ಕು, ಮಕ್ಕಳಿಗೆಂದು ಹುಣಸೆಹಣ್ಣಿನ ಲಾಲಿ ಪಾಪ್ ತಯಾರಿಸಿ ತಂದಿದ್ದರು.

ರಾಮನಗರದ ಬಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ಬೆಟ್ಟದ ನೆಲ್ಲಿಕಾಯಿ, ಅವರೆ ಕಾಯಿ, ಹಿದುಕಿದ ಬೇಳೆ, ಧೂಪ ಹಾಕಲು ಒಣಗಿಸಿದ ಬೆರಣಿ, ತಾರಸಿ ತೋಟದ ಕುಂಡಗಳಿಗೆ ಜೈವಿಕ ಗೊಬ್ಬರ ಬಿಕರಿಯಾಗುತ್ತಿತ್ತು. ಜಿಕೆವಿಕೆಯ ವಲಯ ಸಂಶೋಧನಾ ಕೇಂದ್ರವು ಹಿರೇಹಳ್ಳಿ ತಳಿಯ ಅಡಿಕೆ ಸಸಿ ಮತ್ತು ಹೊಸದಾಗಿ ಬಂದಿರುವ ಛಾಯಾ ಮೇವಿನ ಗಿಡವನ್ನು ಮಾರಾಟಕ್ಕಿಟ್ಟಿತ್ತು.

Nagamangala Farmers

ಮಹಾವಿದ್ಯಾಲಯಗಳ ಅಂಗಡಿಗಳು

ಚಿಂತಾಮಣಿಯ ರೇಷ್ಮೆ ಮಹಾವಿದ್ಯಾಲಯದವರು ರೇಷ್ಮೆ ಗೂಡಿನಿಂದ ಮಾಡಿದ ಹಾರ, ಬೊಂಬೆ, ಮಣಿ ಹಾರ, ಪುಷ್ಪಗುಚ್ಛ ತಂದಿದ್ದರು. ಮಹಾವಿದ್ಯಾಲಯದಲ್ಲಿಯೇ ಬಯೋಕ್ರಾಫ್ಟ್ ಘಟಕವಿದ್ದು ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಲಾಗುತ್ತಿದೆಯೆಂದರು. ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಮೊದಲೇ ತಿಳಿಸಿದಲ್ಲಿ ರೇಷ್ಮೆ ಗೂಡಿನಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಕೊಡಲಾಗುವುದೆಂದರು.

ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ, 1968ರಿಂದ, ಸಾರ್ವಜನಿಕರಿಗೆ ಬೇಕರಿ ತರಬೇತಿ ಕೊಡುತ್ತಿರುವ ಕೃಷಿ ವಿಶ್ವವಿದ್ಯಾಲಯದ ಬೇಕರಿ ತರಬೇತಿ ಕೇಂದ್ರವು ಹಲವು ಪದಾರ್ಥಗಳನ್ನು ಮತ್ತು ಕನ್ನಡ ಅಧ್ಯಯನ ವಿಭಾಗವು ಕೃಷಿಗೆ ಸಂಬಂಧಿಸಿದ ಪುಸ್ತಕಗಳನ್ನು ಮಾರಾಟಕ್ಕಿಟ್ಟಿದ್ದವು. ಜಿಕೆವಿಕೆಯ ಕೃಷಿ ಕಾಲೇಜಿನ ಸಸ್ಯ ರೋಗ ವಿಜ್ಞಾನ ವಿಭಾಗದವರು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ರೋಗಗಳ ಹತೋಟಿಗೆ ಜೈವಿಕ ನಿಯಂತ್ರಣ ವಸ್ತು (Bio-control agents) ಗಳನ್ನು ಮಾರುತ್ತಿದ್ದರು. ಆಹಾರ ವಿಜ್ಞಾನ ಮತ್ತು ಪೋಷಕಾಂಶ ವಿಭಾಗದವರು ರಾಗಿ ಮಾಲ್ಟ್, ರಾಗಿ ಲಡ್ಡು ಮತ್ತು ಚಟ್ನಿ ಪುಡಿಯನ್ನು ಮಾರಾಟಕ್ಕಿಟ್ಟಿದ್ದರು. ಕೆಲ ವಿಭಾಗಗಳ ವಿದ್ಯಾರ್ಥಿಗಳು ಹೂಕುಂಡಗಳನ್ನು ಮತ್ತು ಸುವಾಸನೆ ಭರಿತ ಮೇಣದ ಬತ್ತಿ, ಪುಷ್ಪಗುಚ್ಛ, ಶುಭಾಶಯ ಪತ್ರಗಳನ್ನಿಟ್ಟಿದ್ದರು. ಹಲವು ದಶಕಗಳ ಹಿಂದೆ ಕೃಷಿ ವಿವಿಯಲ್ಲಿದ್ದ ‘Earn while you learn’ ಎಂಬ ಯೋಜನೆಯನ್ನದು ನೆನಪಿಸುತ್ತಿತ್ತು.

Bakery Training Unit

ಕುಲಪತಿಗಳ ಕ್ರಿಯಾತ್ಮಕತೆ

ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ 2024 ಮತ್ತು 2025ರಲ್ಲಿ ಮೂರು ವಿಭಾಗಗಳಲ್ಲಿ ಶ್ರೇಯಾಂಕ ಪಡೆದ ರಾಜ್ಯದ ಏಕೈಕ ವಿಶ್ವವಿದ್ಯಾಲಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ. ಕುಲಪತಿಗಳಾದ ಡಾ. ಎಸ್. ವಿ. ಸುರೇಶ್‍ರವರು ವಿವಿಯನ್ನು ಸದಾ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ರೈತರು ಹಾಗೂ ಸಾರ್ವಜನಿಕರಿಗೆ ಹಲವು ವಿಧಗಳಲ್ಲಿ ಸ್ಪಂದಿಸುತ್ತಿದ್ದಾರೆ. ರೈತ ಸಂತೆ ಆಯೋಜನೆ ಕುರಿತು ತಮ್ಮ ಅಲೋಚನೆಗಳನ್ನು ಈ ಲೇಖಕರೊಂದಿಗೆ ಹಂಚಿಕೊಂಡರು.

ಸಾರ್ವಜನಿಕ ವಲಯದ ವಿಶ್ವವಿದ್ಯಾಲಯಗಳ ಜವಾಬ್ದಾರಿ ಹೆಚ್ಚಾಗಿದೆ. ರೈತರಿಗಷ್ಟೇ ಅಲ್ಲದೆ ಸಾರ್ವಜನಿಕರಿಗೂ ಒಳಿತನ್ನು ಮಾಡಬೇಕಿದೆ. ಆಹಾರೋತ್ಪಾದನೆಗಾಗಿ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಚಟುವಟಿಕೆಗಳನ್ನು ಕೈಗೊಳ್ಳುವ ನಮಗೆ ಎಲ್ಲರೂ ಗ್ರಾಹಕರೇ. ನಗರ ಪ್ರದೇಶದಲ್ಲಿ ತಾರಸಿ ತೋಟ ಮಾಡುವವರಿದ್ದಾರೆ. ಅವರ ಅಗತ್ಯಗಳಿಗೂ ಸ್ಪಂದಿಸಬೇಕಿದೆ. ಗ್ರಾಮೀಣ ಜನರ ಬದುಕಿನ ಪರಿಚಯವನ್ನು ನಗರವಾಸಿಗಳಿಗೆ ಮಾಡಿಕೊಡಬೇಕಿದೆ. ವಿಶ್ವವಿದ್ಯಾಲಯದ ಉತ್ಪನ್ನಗಳನ್ನೂ ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ರೈತ ಸಂತೆಯು ಸಾರ್ವಜನಿಕರನ್ನು ತಲುಪಲು ಒಂದು ರೀತಿಯ ಸೇತುವೆಯಾಗಿದೆ.

ನಮ್ಮಿಂದ ತರಬೇತಿ ಪಡೆದ ರೈತರನ್ನೇ ಹೆಚ್ಚಾಗಿ ರೈತ ಸಂತೆಗೆ ಆಹ್ವಾನಿಸುತ್ತಿದ್ದೇವೆ. ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ನಿಖರ ಬೆಲೆಗೆ ಸಿಗುತ್ತಿವೆ. ಪ್ರತಿ ತಿಂಗಳ ಸಂತೆಗೆ 20,000ರಿಂದ 25,000 ಗ್ರಾಹಕರು ಆಗಮಿಸುತ್ತಿದ್ದಾರೆ. ಪ್ರತಿ ಸಂತೆಯಲ್ಲಿ ಆರರಿಂದ ಎಂಟು ಲಕ್ಷ ರೂಪಾಯಿಗಳಷ್ಟು ವಹಿವಾಟು ಜರುಗುತ್ತಿದೆ. ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಸಂತೆ ನಡೆಯುತ್ತದೆ.

Plant Pathology

ರೈತ ಸಂತೆಯಲ್ಲಿ ಗ್ರಾಹಕರಿಗಾಗಿ ಎತ್ತಿನ ಗಾಡಿಯ ಸವಾರಿಯಿರುತ್ತದೆ. ನಗರವಾಸಿ ಮಕ್ಕಳಿಗೆ ಕುಂಟಾ ಬಿಲ್ಲೆ, ಬುಗುರಿ, ಗೋಲಿಯಾಟ, ವಿಕೆಟ್‍ಗೆ ಗುರಿಯಿಟ್ಟು ಹೊಡೆಯುವುದು ಮುಂತಾದ ಕೆಲವು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತಿದ್ದೇವೆ.

ರೈತ ಸಂತೆ ಯಶಸ್ವಿಯಾಗಿ ನಡೆಯುತ್ತಿದೆ. ರೈತರಿಂದ ಹಾಗೂ ಗ್ರಾಹಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಗ್ರಾಹಕರು ಒಮ್ಮೆ ರೈತರ ಜೊತೆ ಸಂಪರ್ಕಕ್ಕೆ ಬಂದ ಮೇಲೆ ಆನ್‍ಲೈನ್ ಮೂಲಕ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. ಮನೆಮನೆಗೆ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರೈತ ಸಂತೆಯು ಇನ್ನಷ್ಟು ಯಶಸ್ಸು ಕಾಣಲಿದೆ.

ಕೊನೆಯ ಮಾತು
ವಾಟ್ಸ್ಯಾಪ್‍ನಲ್ಲಿ UAS BANGALORE ಚಾನೆಲ್ ಅನ್ನು ವೀಕ್ಷಿಸಿ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ಎಲ್ಲರೂ ತಿಳಿಯಬಹುದಾಗಿದೆ. ಮುಂದಿನ ರೈತ ಸಂತೆಗಳಿಗೆ ಆಗಮಿಸಲಿಚ್ಚಿಸುವ ರೈತರು ಹತ್ತಿರದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿಗೆ ಸಂಬಂಧಿಸಿದ ಕಾಲೇಜುಗಳ ಸಿಬ್ಬಂದಿ, ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯ, ಇವುಗಳಲ್ಲಿ ಯಾವುದಾದರೊಂದನ್ನು ಸಂಪರ್ಕಿಸಿ ಭಾಗವಹಿಸಬಹುದಾಗಿದೆ. ಗ್ರಾಹಕರು ರೈತರಿಗೆ ನೆರವಾಗಲು ತಿಂಗಳ ಕೊನೆಯ ಶನಿವಾರ ನಡೆಯುವ ರೈತ ಸಂತೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ರೈತರಿಂದ ನೇರವಾಗಿ ತಮಗೆ ಬೇಕಾದ ಪದಾರ್ಥಗಳನ್ನು ಕೊಳ್ಳಬಹುದು.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...