ಸರ್ಕಾರ ಮೀಸಲಾತಿಯ ಮೂಲಕ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯಕ್ಕೆ ಪ್ರಯತ್ನಿಸಿವೆ. ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ, ರಾಜಕೀಯ ರಂಗದಲ್ಲಿ ಪ್ರಾತಿನಿಧ್ಯ, ಸಾಮಾಜಿಕ ಸ್ಥಾನಮಾನ ಹೀಗೆ ಹಿಂದುಳಿದ ಸಮಾಜಗಳನ್ನು ಮೇಲೆತ್ತಲು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಲವು. ಅವುಗಳ ವಿಸ್ತಾರವಾದ ಚರ್ಚೆಗೆ ಇಲ್ಲಿ ಅವಕಾಶವಿಲ್ಲ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೈಗೊಂಡಿರುವ ಜಾತಿ ಜನಗಣತಿ ರಾಜ್ಯದಲ್ಲಿ ಭರದಿಂದ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಮತ್ತೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ಇದು ರಾಜ್ಯದ ಎಲ್ಲ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಲು ನಡೆಸಿರುವ ಸಮೀಕ್ಷೆ. ಹಿಂದುಳಿದ ಸಮುದಾಯಗಳು ಆಸಕ್ತಿಯಿಂದಲೇ ಈ ಸಮೀಕ್ಷೆಯಲ್ಲಿ ಭಾಗವಹಿಸುತ್ತಿವೆ. ಕೆಲವು ಸಮುದಾಯಗಳ ಜನರು ವಿಭಿನ್ನ ಮತ್ತು ವಿಚಿತ್ರ ಹೇಳಿಕೆಗಳನ್ನು ನೀಡುತ್ತ ಈ ಸಮೀಕ್ಷೆಯಿಂದ ದೂರ ಉಳಿಯಲು ನೋಡುತ್ತಿವೆ.
ಡಾ. ಬಾಬಾ ಸಾಹೇಬ ಅವರದೊಂದು ಮಹತ್ವದ ಕನಸಿತ್ತು: ಭಾರತ ಸ್ವತಂತ್ರಗೊಂಡರೆ ಎಲ್ಲ ರಾಷ್ಟ್ರದ ಸಮುದಾಯಗಳು ಜೊತೆಜೊತೆಯಲ್ಲಿ ಹೆಜ್ಜೆಹಾಕಬೇಕು. ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕು. ಸ್ವಾತಂತ್ರ್ಯ, ಸಮಾನತೆ, ಸೋದರತ್ತ, ಸಹಬಾಳ್ವೆ ಸಾಧ್ಯವಾದಾಗ ವ್ಯಕ್ತಿ ಘನತೆ, ಗೌರವ, ಸಮುದಾಯಗಳ ಅಸ್ತಿತ್ವ, ಅಸ್ಮಿತೆ- ಎಲ್ಲವೂ ಸಾಧ್ಯ ಎಂದು ಅಂಬೇಡ್ಕರ್ ಹಂಬಲಿಸಿದ್ದರು. ಇದಕ್ಕಾಗಿ ಅವರ ಮುಂದಾಳುತನದಲ್ಲಿ ರೂಪಿಸಿದ ಸಂವಿಧಾನದಲ್ಲಿ ಬಾಬಾ ಸಾಹೇಬ್ ಅವರ ಕನಸಿನ ಬೀಜಗಳನ್ನು ಬಿತ್ತಲಾಗಿತ್ತು. ಸ್ವಾತಂತ್ರ್ಯ ಬಂದು, ಸಂವಿಧಾನವನ್ನು ನಾವು ರೂಪಿಸಿಕೊಂಡು ಏಳು ದಶಕಗಳ ಸುದೀರ್ಘ ಕಾಲ ಸರಿದುಹೋಗಿದೆ. ನದಿಗಳಲ್ಲಿ ಸಾಕಷ್ಟು ನೀರು ಹರಿದಿರುವುದು ಮಾತ್ರವಲ್ಲ, ನದಿಗಳ ಪಥಗಳೂ ಬದಲಾಗಿವೆ. ಸ್ವಾತಂತ್ರ್ಯ ಭಾರತ ಹಲವು ಏಳುಬೀಳುಗಳನ್ನು ಕಂಡಿದೆ. ತನ್ನ ಅಸ್ಮಿತೆಗಾಗಿ ಅದು ಹೋರಾಟವನ್ನೂ ಮಾಡಿದೆ. ಆದರೂ ಭಾರತದಲ್ಲಿ ಇವತ್ತು ಎಲ್ಲ ಸಮುದಾಯಗಳು ಸಮ ಸಮವಾಗಿ ತಲೆ ಎತ್ತಿ ನಿಂತಿಲ್ಲ. ಮುಂದೆ ಹೆಜ್ಜೆ ಹಾಕಿರುವ ಒಂದಿಷ್ಟು ಸಮುದಾಯಗಳು ಸಾಕಷ್ಟು ದಾರಿಯನ್ನು ಕ್ರಮಿಸಿವೆ. ಹಿಂದೆಬಿದ್ದ ಸಮುದಾಯಗಳು ಇವತ್ತಿಗೂ ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯಗಳ ಬಲೆಯಲ್ಲಿ ಸಿಕ್ಕು ಹೊರಬರಲಾಗದೆ ಉಬ್ಬಸಪಡುತ್ತಿವೆ.
ಸರ್ಕಾರ ಮೀಸಲಾತಿಯ ಮೂಲಕ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯಕ್ಕೆ ಪ್ರಯತ್ನಿಸಿವೆ. ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ, ರಾಜಕೀಯ ರಂಗದಲ್ಲಿ ಪ್ರಾತಿನಿಧ್ಯ, ಸಾಮಾಜಿಕ ಸ್ಥಾನಮಾನ ಹೀಗೆ ಹಿಂದುಳಿದ ಸಮಾಜಗಳನ್ನು ಮೇಲೆತ್ತಲು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಲವು. ಅವುಗಳ ವಿಸ್ತಾರವಾದ ಚರ್ಚೆಗೆ ಇಲ್ಲಿ ಅವಕಾಶವಿಲ್ಲ.
ಹಿಂದುಳಿದ ವರ್ಗಗಳ ಆಯೋಗ ರಚನೆಯ ಹಿಂದಿರುವ ಆಶಯವೂ ಇದೇ. ಕಾಲಕಾಲಕ್ಕೆ ಸಮುದಾಯಗಳ ಸಮಗ್ರ ಚಿತ್ರಣವನ್ನು ನೀಡುವುದು ಮತ್ತು ಅಗತ್ಯ ಸಲಹೆ ಸೂಚನೆಗಳನ್ನು ಸರ್ಕಾರಕ್ಕೆ ಕೊಡುವುದು. ನಮ್ಮ ರಾಜ್ಯದಲ್ಲಿ ಕಾಲಕಾಲಕ್ಕೆ ಇಂಥ ಆಯೋಗಗಳು ಬಂದು ಕೆಲಸ ಮಾಡಿವೆ. ಆದರೆ ಈ ಆಯೋಗಗಳ ವರದಿಯನ್ನು ಸಚಿವ ಸಂಪುಟ ಪರಾಮರ್ಶಿಸಿ, ಅಂಗೀಕರಿಸಿ, ಅನುಷ್ಠಾನಕ್ಕೆ ತರುವ ಕೆಲಸ ಮಾತ್ರ ಪ್ರಾಮಾಣಿಕತೆ ಮತ್ತು ಕಾಳಜಿಯಿಂದ ನಡೆದಿದೆ ಎಂದು ಹೇಳುವಂತಿಲ್ಲ.
ಕೇಂದ್ರ ಸರ್ಕಾರ ಹತ್ತು ವರ್ಷಕ್ಕೊಮ್ಮೆ ನಡೆಸುವ ಜಾತಿ ಜನಗಣತಿ ಬೇರೆ. ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಜನಗಣತಿ ಬೇರೆ. ರಾಜ್ಯದ ಆಯೋಗಕ್ಕೆ ಕಾನೂನಿನ ತೊಡಕು ಉಂಟಾಗಬಾರದು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ರಚಿಸಿದೆ. ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಲು ಸಮೀಕ್ಷೆ ನಡೆಸುವ ಅಧಿಕಾರ ಈ ಶಾಶ್ವತ ಆಯೋಗಕ್ಕೆ ಇದೆ. ಈ ಕಾರಣದಿಂದಾಗಿಯೇ ಆಯೋಗ ಪ್ರಸಕ್ತ ಸಮೀಕ್ಷೆಯನ್ನು ಕೈಗೊಂಡಿದೆ.
ನಮ್ಮಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಾತಿನಿಧ್ಯ ಪಡೆದು, ಮುನ್ನಡೆಯನ್ನು ಸಾಧಿಸಿ, ತಮ್ಮ ಜನಸಂಖ್ಯಾ ಬಲದಿಂದ ರಾಜಕೀಯ ಅಧಿಕಾರವನ್ನು ಆಗಾಗ ನಡೆಸಿರುವ ಬಲಿಷ್ಠ ಜಾತಿಗಳಿಗೆ ಎಲ್ಲ ಸಮುದಾಯಗಳನ್ನು ಜೊತೆ ಜೊತೆಗೆ ಕರೆದುಕೊಂಡು ಹೋಗಬೇಕೆಂಬ ಕಳಕಳಿ ಇದ್ದಂತೆ ಕಾಣಿಸುವುದಿಲ್ಲ. ಯಾಕೆಂದರೆ ಈಗ ನಡೆಯುತ್ತಿರುವ ಜಾತಿ ಜನಗಣತಿಗೆ ವಿರೋಧ ಬಂದಿರುವುದು ಇಂಥ ಸಮುದಾಯಗಳಿಂದಲೇ. ಇಂಥ ಸಮುದಾಯಗಳ ಪ್ರತಿನಿಧಿಯಂತಿರುವ ಬಿಜೆಪಿ, ಈ ಸಮೀಕ್ಷೆಯನ್ನು ವಿರೋಧಿಸಿ, ಸಮೀಕ್ಷೆಗೆ ತಡೆ ನೀಡಬೇಕೆಂದು ಕೇಳಿ ರಾಜ್ಯ ಹೈಕೋರ್ಟ್ ಮೆಟ್ಟಿಲನ್ನು ಏರಿತು. ಹೈಕೋರ್ಟ್ ತಡೆಯನ್ನು ನೀಡಲಿಲ್ಲ. ಆದರೆ ತನ್ನ ಮಧ್ಯಂತರ ಆದೇಶದಲ್ಲಿ, ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಅಥವಾ ಪಾಲ್ಗೊಳ್ಳದಿರುವುದು ಸಮುದಾಯಗಳು ಮತ್ತು ವ್ಯಕ್ತಿಗಳಿಗೆ ಬಿಟ್ಟ ವಿಚಾರ, ಅದು ಅವರ ಸ್ವಾತಂತ್ರ್ಯ. ಅವರ ಹಕ್ಕು. ಅದನ್ನು ಉಲ್ಲಂಘಿಸಲು ಆಗದು. ಜೊತೆಗೆ ಈ ಸಮೀಕ್ಷೆಯ ಮೂಲಕ ಸಂಗ್ರಹಿಸುವ ಮಾಹಿತಿಯನ್ನು ಗೋಪ್ಯವಾಗಿಡಬೇಕು, ಬಹಿರಂಗಪಡಿಸಬಾರದು ಎಂದು ಹೇಳಿತು.
ಹೈಕೋರ್ಟಿನ ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಲು ಅವಕಾಶವಿತ್ತು. ಆದರೆ ಸಮೀಕ್ಷೆ ವಿಳಂಬವಾಗಬಹದೆಂಬ ಕಾರಣಕ್ಕೊ ಅಥವಾ ಮತ್ತಾವುದೊ ಲೆಕ್ಕಾಚಾರಕ್ಕೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಹೋಗಲಿಲ್ಲ. ಸಮೀಕ್ಷೆ ಆರಂಭವಾಯಿತು.
ನ್ಯಾಯಾಲಾಯದ ಮಾತುಗಳನ್ನು ಕೇಳಿದ್ದ ಕೆಲವರು ಸಮೀಕ್ಷೆಯಲ್ಲಿ ಭಾಗವಹಿಸುವುದನ್ನು ಸಂಪೂರ್ಣವಾಗಿ ನಿರಾಕರಿಸಿದರು. ಮತ್ತೆ ಕೆಲವು ಜನ ಸಮೀಕ್ಷೆಗೆ ಬಂದ ಸಿಬ್ಬಂದಿಯನ್ನು ಅಪಮಾನಿಸುವ ರೀತಿಯಲ್ಲಿ ನಡೆದುಕೊಂಡರು. ಎಲ್ಲವನ್ನೂ ಎದುರಿಸಿ, ಸಿಬ್ಬಂದಿ, ವಿಶೇಷವಾಗಿ ಅಧ್ಯಾಪಕ ವೃಂದ ಸಮೀಕ್ಷೆಯನ್ನು ಬಹಳ ಶ್ರಮವಹಿಸಿ ಮಾಡುತ್ತಿದೆ. ಇವರ ಶ್ರಮವನ್ನು ಗಮನಿಸಿ ರಾಜ್ಯ ಸರ್ಕಾರ ಸಮೀಕ್ಷಾ ಕಾರ್ಯದ ಅವಧಿಯನ್ನು ಈ ತಿಂಗಳ ಕೊನೆಯವರೆಗೆ ಹಿಗ್ಗಿಸಿದೆ.
ಮುಂದುವರಿದ ಜಾತಿಗಳೆಂದು ಪರಿಗಣಿಸಲಾಗಿರುವ ಬ್ರಾಹ್ಮಣರು, ಲಿಂಗಾಯತರು ಮತ್ತು ಒಕ್ಕಲಿಗರು ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ವಿರೋಧವನ್ನು ವ್ಯಕ್ತಪಡಿಸಿದ ರಾಜಕೀಯ ಪಕ್ಷವಾಯಿತು. ಈ ವಿರೋಧಕ್ಕೆ ಸಮರ್ಥವಾದ ಕಾರಣವೇನೂ ಇಲ್ಲ. ಬಿಜೆಪಿಯ ಕಾರಣಗಳನ್ನು ನ್ಯಾಯಾಲಯ ತಳ್ಳಿಹಾಕಿದೆ.
ಇನ್ನು ಕೆಲವು ಗಣ್ಯರೆನಿಸಿಕೊಂಡಿರುವ ಆರ್ಥಿಕ ಬಲಿಷ್ಠ ವ್ಯಕ್ತಿಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಈ ವ್ಯಕ್ತಿಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದುವರಿದವರೇ ಆಗಿದ್ದಾರೆ. ಇವರಿಗೆ ಹಿಂದುಳಿದ ವರ್ಗಗಳು ಹಿಂದುಳಿದರೇನು, ಮುಂದುವರಿದರೇನು? ತಾವು ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹಿಂದುಳಿದ ವರ್ಗಗಳನ್ನು ಎಂದಾದರೂ ಈ ವ್ಯಕ್ತಿಗಳು ಪರಿಗಣಿಸಿದ್ದಾರೆಯೇ ಎಂಬ ಪ್ರಶ್ನೆಯೂ ಏಳುತ್ತದೆ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಈ ಸಮೀಕ್ಷೆಯಲ್ಲಿ ಸರಿಯಾದ ದತ್ತಾಂಶಗಳು ಸಿಕ್ಕರೆ, ಕಾಳಜಿಯಿರುವ ಸರ್ಕಾರಕ್ಕೆ ಬಹಳ ಪ್ರಯೋಜನವಾಗುತ್ತದೆ. ಹಿಂದುಳಿದ ಸಮುದಾಯಗಳು ಹಿಂದುಳಿಯಲು ಮುಖ್ಯ ಕಾರಣಗಳೇನು? ಅವರಿಗೆ ಯಾವ ಬಗೆಯ ಸೌಲಭ್ಯಗಳನ್ನು ನೀಡಿ ಅವರ ಬೆಳವಣಿಗೆಗೆ ನೆರವಾಗಬೇಕು ಇತ್ಯಾದಿ ಸಂಗತಿಗಳನ್ನು ಚಿಂತಿಸಿ ಯೋಜನೆಗಳನ್ನು ರೂಪಿಸಬಹುದು. ಅಂಥ ಯೋಜನೆಗಳ ಜಾರಿಯಿಂದ, ನಿಜವಾದ ಕಳಕಳಿಯಿಂದ ಹಿಂದುಳಿದ ಸಮುದಾಯಗಳ ಘನತೆ ಗೌರವ ಹೆಚ್ಚಿಸಬಹುದು. ಆಗ ಅಂಬೇಡ್ಕರ್ ಕನಸಿನ ಭಾರತ ನಿಜ ಭಾರತವಾಗಬಹುದು.
ಇವತ್ತಿಗೂ ನಮ್ಮಲ್ಲಿ ಅನೇಕ ಸಮುದಾಯಗಳಿಗೆ ನೆಲೆಗಳಿಲ್ಲ. ಊರು ಕೇರಿ ಹೊಲ ಮನೆಗಳಿಲ್ಲ. ಹೆಸರುಗಳೂ ಸರಿಯಾಗಿ ದಾಖಲಾಗಿಲ್ಲ. ಅವರ ಮಕ್ಕಳು ಹೇಗೆ ಬದುಕುತ್ತಿದ್ದಾರೆ, ಅವರ ನಾಳಿನ ಪ್ರಶ್ನೆ ಏನು? ಇಂಥ ಪ್ರಶ್ನೆಗಳಿಗೆ ಉತ್ತರವೇ ಸಿಕ್ಕದಂಥ ಸ್ಥಿತಿ ನಿಜಸ್ಥಿತಿಯಾಗಿದೆ. ಇಂಥ ಸಮುದಾಯಗಳ ಸಮೀಕ್ಷೆ ಅಗತ್ಯವಾಗಿ ನಡೆಯಬೇಕು.
ಇದನ್ನೂ ಓದಿ RSS- ನೂರು ವರ್ಷಗಳು : ಬಿಟ್ಟರೂ ಬಿಡದ ತಾತ್ವಿಕ ಪ್ರಶ್ನೆಗಳು
ಧರ್ಮವನ್ನು ರಾಜಕೀಯ ದಾಳವಾಗಿ ಉರುಳಿಸುತ್ತ, ಈ ಆಟದಿಂದಲೇ ಅಧಿಕಾರವನ್ನು ಹಿಡಿದಿರುವ ಬಿಜೆಪಿ ಮತ್ತು ಸಂಘ ಪರಿವಾರದ ಘಟಕಗಳು ಈ ಸಮೀಕ್ಷೆಯ ಹೊತ್ತಿನಲ್ಲೂ ತಮ್ಮ ಆಟವನ್ನು ನಿಲ್ಲಿಸಿಲ್ಲ. ಧರ್ಮ ಕಾಲಂನಲ್ಲಿ ʼಹಿಂದೂಧರ್ಮʼ ಎಂದು ಬರೆಸಿ ಎಂದು ಸಮುದಾಯಗಳಿಗೆ ತಾಕೀತು ಮಾಡುತ್ತಿವೆ; ಸಾಕಷ್ಟು ಪ್ರಚಾರವನ್ನೂ ಸಾಮಾಜಿಕ ಜಾಲತಾಣಗಳ ಮೂಲಕ ಮಾಡಿವೆ. ಇದು ಎಂಥ ವ್ಯಂಗ್ಯ! ಹಿಂದೂಧರ್ಮದ ಬಳಕೆ ಅದರ ವಿಶಾಲವಾದ, ಕರುಣೆ, ಸಹಬಾಳ್ವೆಯ, ಮಾನವೀಯತೆಯ ನೆಲೆಯಲ್ಲಿ ನಡೆಯದೆ, ಜನರನ್ನು ಒಡೆಯುವ, ಅನ್ಯ ಧರ್ಮೀಯರನ್ನು ದ್ವೇಷಿಸುವ ಸಾಧನವಾಗಿ ಬಳಕೆಯಾಗುತ್ತಿದೆ. ಹಿಂದೂಧರ್ಮ ತನ್ನ ಚೌಕಟ್ಟಿನಿಂದಲೇ ಹೊರಗಿಟ್ಟ ಸಮುದಾಯಗಳನ್ನು ಈಗ ಹತ್ತಿರ ಕರೆಯುತ್ತ, ನಮ್ಮ ಧರ್ಮ, ಹಿಂದೂಧರ್ಮ ಎಂದು ಹೇಳಿ ಎಂದು ಒತ್ತಾಯಿಸುತ್ತಿದೆ. ಹಿಂದುಳಿದ ಸಮುದಾಯಗಳು ಶೈಕ್ಷಣಿಕವಾಗಿ ಹಿಂದೆ ಬಿದ್ದಿರಬಹುದು. ಆದರೆ ಅವರ ಲೋಕಜ್ಞಾನ ಮತ್ತು ಸಾಮಾನ್ಯ ತಿಳಿವಳಿಕೆ ಇನ್ನೂ ಮಂಕಾಗಿಲ್ಲ. ಹಿಂದೂಧರ್ಮದ ಹೆಸರಿನಲ್ಲಿ ಕೆಲವು ಜಾತಿಗಳು ನಡೆಸಿದ ದಬ್ಬಾಳಿಕೆ ಮತ್ತು ಕ್ರೌರ್ಯವನ್ನು ಈ ಸಮುದಾಯಗಳು ಮರೆತಿಲ್ಲ. ಹೀಗಾಗಿ ಅವರು ಹಿಂದೂಧರ್ಮದ ಹೆಸರನ್ನು ಹೇಳುವುದು ಹೇಗೆ ಸಾಧ್ಯ?
ಹಿಂದೂಗಳ ಸಂಖ್ಯಾಬಲ ಹೆಚ್ಚಾದಷ್ಟೂ ನಮ್ಮ ರಾಜಕೀಯ ಲಾಭಗಳು ಹೆಚ್ಚುತ್ತವೆ, ತಾವು ಅಧಿಕಾರ ಹಿಡಿಯುವುದು ಸುಲಭ ಎಂಬ ಅಮಲಿನಲ್ಲಿರುವ ಹಿಂದೂ ಪರಿವಾರದ ಅಮಲು ಇಳಿಯಬೇಕಾದರೆ ಇಂಥ ಜಾತಿ ಜನಗಣತಿಗಳು ನಡೆಯಬೇಕು. ಅರ್ಥಪೂರ್ಣವಾಗಿ ನಡೆಯಬೇಕು. ಎಲ್ಲ ಸಮುದಾಯಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಸ್ಥಿತಿಗತಿಗಳ ಚಿತ್ರಣವನ್ನು ಪ್ರಾಮಾಣಿಕವಾಗಿ ನೀಡಬೇಕು. ಇದು ನಮ್ಮ ಸಂವಿಧಾನಾತ್ಮಕ ಹೊಣೆಗಾರಿಕೆ; ನೈತಿಕ ನಿಲುವು. ಹಿಂದೆ ಸರಿಯುವುದು ನೈತಿಕನಿಷ್ಠೆಯಿಂದ ದೂರ ಸರಿದಂತೆ.





