ಕಾಲಮಾನ | ಜನಕೇಂದ್ರಿತ ಪರಿಸರವಾದಿಯಾಗಿದ್ದವರು ಮಾಧವ ಗಾಡ್ಗೀಳ್‌

Date:

ಜಾಗತಿಕ ಪರಿಸರ ಸಂರಕ್ಷಣೆಯ ಸಂಕಥನದ ಮಾದರಿ ಬದಲಾವಣೆ (Paradigm Shift)ಯ ವಿಚಾರದಲ್ಲಿ ಗಾಡ್ಗೀಳ್‌ ಅವರಿಗೆ ಹೆಚ್ಚಿನ ಆಸ್ಥೆಯಿತ್ತು. ಅಂದರೆ ಪರಿಸರ ಸಂರಕ್ಷಣೆ ಕುರಿತಂತೆ ಅವರು ಮಾನವ ಹಕ್ಕುಗಳಿಗೆ ಮುಖ್ಯ ಸ್ಥಾನವನ್ನು ನೀಡಿದರು ಎನ್ನಬಹುದು. ಆದಿವಾಸಿಗಳು ಮತ್ತು ರೈತರ ಹಕ್ಕುಗಳಿಗೆ ಚ್ಯುತಿಯಾಗುವಂತಹ ಸರ್ಕಾರಗಳ ವಾಣಿಜ್ಯ/ವ್ಯಾಪಾರ ಹಿತಾಸಕ್ತಿಗಳ ಆಡಳಿತ ಕ್ರಮಗಳು ಅವರನ್ನು ಬಾಧಿಸುತ್ತಿದ್ದವು!

ಮಾನವ ಎಂದು ವಲಸೆ ಶುರು ಮಾಡಿದನೋ ಅಂದು ಪರಿಸರ ನಾಶಕ್ಕೆ ನಾಂದಿ ಹಾಡಲಾಯಿತು, ಕೃಷಿ ಅಸ್ತಿತ್ವಕ್ಕೆ ಬಂದ ತರುವಾಯ ಪರಿಸರ ಅವನತಿಯ ಹೆಜ್ಜೆ ಶುರುವಾಯಿತು ಎಂಬಿತ್ಯಾದಿ ಪ್ರತಿಪಾದನೆಗಳಿವೆ. ಕೈಗಾರಿಕಾ ಕ್ರಾಂತಿಯ ತರುವಾಯ ನಾನಾ ತೆರನಾದ ಯಂತ್ರಗಳ ಆವಿಷ್ಕಾರದ ಮಹಾದ್ವಾರ ತೆರೆದ ನಂತರ ಪರಿಸರದ ಮೇಲೆ ಹೆಚ್ಚಿನ ಒತ್ತಡಗಳು ಪ್ರಾರಂಭವಾದವು ಎಂಬ ವಾದವೂ ಇದೆ. ಆದರೆ ಕಳೆದ ಸುಮಾರು ಒಂದೂವರೆ ಶತಮಾನಗಳಿಂದ ವೈಜ್ಞಾನಿಕ ಹಾಗೂ ತಾಂತ್ರಿಕ ಪಲ್ಲಟಗಳು ಇತ್ಯಾತ್ಮಕ ಹಾಗೂ ಪರಿಸರ ದೃಷ್ಟಿಯಿಂದ ಋಣಾತ್ಮಕ ಪರಿಣಾಮಗಳನ್ನು ಬೀರಿವೆ ಎಂಬುದು ನಮ್ಮ ಮುಂದಿರುವ ಸತ್ಯದ ಸಂಗತಿಗಳು!

ಜನವರಿ 7, 2025ರಂದು ಪುಣೆಯಲ್ಲಿ ನಿಧನರಾದ ಮಾಧವ ಗಾಡ್ಗೀಳ್‌ ನಮ್ಮ ದೇಶದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಗಮನಾರ್ಹ ಕೊಡುಗೆಗಳನ್ನು ನೀಡಿರುವವರ ಪೈಕಿ ಪ್ರಮುಖ ವಿಶೇಷಜ್ಞರಾಗಿರುತ್ತಾರೆ. ಮೂಲತಃ ಮಹಾರಾಷ್ಟ್ರದವರಾಗಿದ್ದ ಅವರಿಗೆ ಕರ್ನಾಟಕದ ಜೊತೆ ಗಾಢ ನಂಟಿತ್ತು. ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಗಣತೀಯ ಪರಿಸರಶಾಸ್ತ್ರ (Mathematical Ecology) ಕುರಿತಂತೆ ಮಹಾಪ್ರಬಂಧವನ್ನು ಸಲ್ಲಿಸಿ, 1973ರಲ್ಲಿ ಜೀವಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿಯನ್ನು ಗಳಿಸಿದರು. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ 1983ರಲ್ಲಿ ಪರಿಸರ ವಿಜ್ಞಾನ ಕೇಂದ್ರ (Centre of Ecological Science) ಸ್ಥಾಪಿಸುವ ನಿಟ್ಟಿನಲ್ಲಿ ಅವರು ರೂವಾರಿಯಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕದ ಬಂಡೀಪುರದ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 1974ರಲ್ಲಿ ಕ್ಷೇತ್ರ ಕಾರ್ಯವನ್ನು ವಿಸ್ತೃತ ನೆಲೆಯಲ್ಲಿ ಕೈಗೊಂಡರು. ಇದರ ಫಲವಾಗಿ ದೇಶದಲ್ಲೇ ಪ್ರಥಮ ಬಾರಿ ಒಂದು ಜೈವವಲಯ ಸಂರಕ್ಷಣಾ ಪ್ರದೇಶ (Biosphere Reserve) ಅಸ್ತಿತ್ವಕ್ಕೆ ಬಂದಿತು. ಅದೇ ನೀಲಗಿರಿ ಜೈವಿಕವಲಯ ಸಂರಕ್ಷಣಾ ಪ್ರದೇಶ(1986). ಈ ಭಾಗದ ಕಾಡುಗಳಲ್ಲಿ ಆನೆಗಳ ವಾಸ, ಚಲನವಲನ ಇತ್ಯಾದಿಗಳು ಒಂದು ವೈಶಿಷ್ಟ್ಯದ ಸಂಗತಿ. ಹೀಗಾಗಿ ಗಾಡ್ಗಿಲ್‌ ದೇಶದಲ್ಲೇ ಪ್ರಥಮ ಬಾರಿ ಆನೆಗಳ ಗಣತಿಗೆ ಚಾಲನೆಯನ್ನು ನೀಡಿದರು. 1970-80ರ ದಶಕದಲ್ಲಿ ಅವರು ಕೇರಳದಲ್ಲಿ ಜರುಗಿದ ʼಮೌನ ಕಣಿವೆ ಉಳಿಸಿʼ ಚಳವಳಿಗೆ ಬೆಂಬಲವನ್ನು ಸೂಚಿಸಿ, ಮಧ್ಯಪ್ರವೇಶವನ್ನು ಮಾಡಿದರು.

ಎ ವಾಕ್‌ ಅಪ್‌ ದಿ ಹಿಲ್:‌ ಲಿವಿಂಗ್‌ ವಿತ್‌ ಪೀಪಲ್‌ ಅಂಡ್‌ ನೇಚರ್‌ ಎಂಬ ಗಾಡ್ಗೀಳ್‌ ಅವರ ಆತ್ಮಕಥೆಯ ಪುಸ್ತಕ 2023ರಲ್ಲಿ ಲೋಕಾರ್ಪಣೆಗೊಂಡಿತು. ಅದರಲ್ಲಿ ಅವರು ತಮ್ಮ ಪ್ರಾರಂಭಿಕ ಹಂತದ ಪರಿಸರವಾದಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ. “ಪರಿಸರ ಸಂರಕ್ಷಣೆಯ ವಿಷಯದಲ್ಲಿ ಮೊದಲು ನಾನು ಕೂಡ ನಗರ-ಕೇಂದ್ರಿತ ನಡೆಯನ್ನು ಅನುಸರಿಸುತ್ತಿದ್ದೆ. ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳನ್ನು ಸ್ಥಾಪಿಸುವ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಜನರ ನೆಲೆಗಳನ್ನು ಆ ಭಾಗಗಳಿಂದ ಪ್ರತ್ಯೇಕಗೊಳಿಸಬೇಕೆಂಬ ನಿಲುವನ್ನು ಹೊಂದಿದ್ದೆ. ಆದರೆ 1980ರ ದಶಕದಲ್ಲಿ ನನ್ನ ಈ ನಿಲುಮೆ ಮಾರ್ಪಾಟಾಯಿತು. ಸಾಮಾನ್ಯ ಜನತೆಯನ್ನು ಒಳಗೊಂಡ ಪರಿಸರ ಸಂರಕ್ಷಣೆಯನ್ನು ಮಾಡುವ ಕಾರ್ಯಗಳಲ್ಲಿ ನಿರತನಾದೆ” ಎಂದು ಅವರು ದಾಖಲಿಸಿದ್ದಾರೆ.

ಜಾಗತಿಕ ಪರಿಸರ ಸಂರಕ್ಷಣೆಯ ಸಂಕಥನದ ಮಾದರಿ ಬದಲಾವಣೆ (Paradigm Shift)ಯ ವಿಚಾರದಲ್ಲಿ ಗಾಡ್ಗೀಳ್‌ ಅವರಿಗೆ ಹೆಚ್ಚಿನ ಆಸ್ಥೆಯಿತ್ತು. ಅಂದರೆ ಪರಿಸರ ಸಂರಕ್ಷಣೆ ಕುರಿತಂತೆ ಅವರು ಮಾನವ ಹಕ್ಕುಗಳಿಗೆ ಮುಖ್ಯ ಸ್ಥಾನವನ್ನು ನೀಡಿದರು ಎನ್ನಬಹುದು. ಆದಿವಾಸಿಗಳು ಮತ್ತು ರೈತರ ಹಕ್ಕುಗಳಿಗೆ ಚ್ಯುತಿಯಾಗುವಂತಹ ಸರ್ಕಾರಗಳ ವಾಣಿಜ್ಯ/ವ್ಯಾಪಾರ ಹಿತಾಸಕ್ತಿಗಳ ಆಡಳಿತ ಕ್ರಮಗಳು ಅವರನ್ನು ಬಾಧಿಸುತ್ತಿದ್ದವು! 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಎಂಬುದು ನಮ್ಮ ದೇಶದ ಸಾಮಾನ್ಯ ಜನರನ್ನು ಪರಾಧೀನ ಮಾಡುವ ಅರಣ್ಯ ಇಲಾಖೆಗಳ ಅಸ್ತ್ರವೆಂದು ಅವರು ಭಾವಿಸಿದರು!

ನಮ್ಮ ರಾಜ್ಯದಲ್ಲಿ 1974ರಲ್ಲಿ ಬಿದಿರು ಬುಟ್ಟಿ ಹೆಣೆಯುವವರ ಒಂದು ಆಂದೋಲನ ಶುರುವಾಯಿತು. ಕಾಗದವನ್ನು ಉತ್ಪಾದಿಸುವ ಕಾರ್ಖಾನೆಗಳು ಬಿದಿರು ಸಂಪನ್ಮೂಲಗಳನ್ನು ಯಥೇಚ್ಛವಾಗಿ ನಾಶ ಮಾಡುತ್ತಿವೆ ಎಂಬುದು ಅವರ ಪ್ರತಿರೋಧದ ದನಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸ್ಟೇಟ್‌ ಕೌನ್ಸಿಲ್‌ ಫಾರ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಸಂಸ್ಥೆ ನಮ್ಮ ರಾಜ್ಯದ ಬಿದಿರು ಸಂಪನ್ಮೂಲಗಳ ನಿರ್ವಹಣೆ ಹಾಗೂ ರಕ್ಷಣೆಯ ಬಗೆಗೆ ಸಮಗ್ರ ಅಧ್ಯಯನವನ್ನು ನಡೆಸುವ ಜವಾಬ್ದಾರಿಯನ್ನು ಗಾಡ್ಗೀಳ್‌ ಅವರಿಗೆ ವಹಿಸಿತು.

ಪಶ್ಚಿಮ ಘಟ್ಟಗಳು ವಿಶ್ವದ ಎಂಟು ಅತ್ಯಂತ ಪ್ರಮುಖ ‘ಜೀವವೈವಿಧ್ಯದ ತಾಣ’ಗಳಲ್ಲಿ (Biodiversity Hotspots) ಒಂದಾಗಿವೆ. ಕರ್ನಾಟಕ, ಗೋವಾ, ತಮಿಳು ನಾಡು, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತಿನ ಮೂಲಕ ಹಾದುಹೋಗುವ ಈ ಪರ್ವತ ಶ್ರೇಣಿ ಸಾವಿರಾರು ಪ್ರಭೇದಗಳ ಸಸ್ಯಗಳು, ಪ್ರಾಣಿಗಳು ಮತ್ತು ಪಕ್ಷಿಗಳ ವಾಸಸ್ಥಾನವಾಗಿದೆ. ಈ ಪ್ರದೇಶಗಳಲ್ಲಿ ಮಳೆ ಬೀಳಲು ಪಶ್ಚಿಮ ಘಟ್ಟಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇಲ್ಲಿ ಕೃಷ್ಣಾ, ಕಾವೇರಿ, ಗೋದಾವರಿ ಮತ್ತು ತುಂಗಭದ್ರಾ ಸೇರಿದಂತೆ ಅನೇಕ ಪ್ರಮುಖ ನದಿಗಳು ಉಗಮಿಸುತ್ತವೆ. ಇದು ದಕ್ಷಿಣ ಭಾರತದ ಕೋಟ್ಯಂತರ ಜನರ ಕುಡಿಯುವ ನೀರು ಮತ್ತು ಕೃಷಿಗೆ ಆಧಾರವಾಗಿದೆ. ಈ ಪ್ರದೇಶವು ಟೀ, ಕಾಫಿ, ಸಾಂಬಾರ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ, ಯುನೆಸ್ಕೋ (UNESCO) ಇದನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ಒಟ್ಟಾರೆಯಾಗಿ, ಪಶ್ಚಿಮ ಘಟ್ಟಗಳು ಭಾರತದ ಪರಿಸರ ವ್ಯವಸ್ಥೆಯ ಬೆನ್ನೆಲುಬಾಗಿವೆ.

ಇಂತಹ ನಿಸರ್ಗದತ್ತ ಸಂಪತ್ತು ವರ್ಷಗಳು ಉರುಳಿದಂತೆ ಅನೇಕ ತೆರನಾದ ದಾಳಿಗಳನ್ನು ಎದುರಿಸಿತು. ವ್ಯಾವಹಾರಿಕ ದುರಾಸೆ, ಹವಾಮಾನ ಬದಲಾವಣೆ, ಕೈಗಾರಿಕಾಕರಣ ಇತ್ಯಾದಿ ಕಾರಣಗಳಿಂದ ಇದು ಕ್ಷೀಣಿಸತೊಡಗಿತು. ಪರಿಸರವಾದಿಗಳು, ವಿಶೇಷಜ್ಞರು ಮತ್ತು ಪ್ರಜ್ಞಾವಂತ ಸ್ಥಳೀಯರು ಅಪಾಯದ ಗಂಟೆಯನ್ನು ಮೊಳಗಿಸಿದರು. ಇದಕ್ಕೆ ಕೇಂದ್ರದ ಮನಮೋಹನ್‌ ಸಿಂಗ್‌ ಸರ್ಕಾರ ಸ್ಪಂದಿಸಿ ಪಶ್ಚಿಮ ಘಟ್ಟ ಪರಿಸರಶಾಸ್ತ್ರ ತಜ್ಞರ ಸಮಿತಿಯನ್ನು ರಚಿಸಿತು. ಇದರ ನೇತೃತ್ವವನ್ನು ಮಾಧವ ಗಾಡ್ಗೀಳ್‌ ಅವರಿಗೆ ವಹಿಸಲಾಯತು. ಅವರು ಗ್ರಾಮ ಮತ್ತು ಅರಣ್ಯ ಸಮುದಾಯಗಳು, ಪಂಚಾಯತಿಗಳು ಮತ್ತು ಅರಣ್ಯ ಅಧಿಕಾರಿಗಳನ್ನು ಭೇಟಿ ಮಾಡಿದರು. ಪಶ್ಚಿಮ ಘಟ್ಟಗಳನ್ನು ಉಳಿಸುವ ನಿಟ್ಟಿನಲ್ಲಿ ಅವರು ಜನ-ಚಾಲಿತ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಮಾಡುವ ಶಿಫಾರಸ್ಸುಗಳನ್ನು ತಮ್ಮ ವರದಿ(2011)ಯಲ್ಲಿ ನೀಡಿದರು. ಇದರ ಅನೇಕ ಭಾಗಗಳನ್ನು ಪರಿಸರ-ಸೂಕ್ಷ್ಮ ವಲಯಗಳೆಂದು ಘೋಷಿಸಬೇಕು ಎಂಬ ವಿಚಾರವನ್ನು ಬಲವಾಗಿ ಪ್ರತಿಪಾದಿಸಿದರು. ಮಾಲಿನ್ಯಕ್ಕೆ ಇಂಬು ನೀಡುವಂತಹ ಉದ್ಯಮಗಳಿಗೆ ಅಲ್ಲಿ ಅವಕಾಶವನ್ನು ಕಲ್ಪಿಸಬಾರದೆಂಬ ಅಂಶದ ಬಗೆಗೆ ಒತ್ತು ನೀಡಿದರು.

ಇದನ್ನೂ ಓದಿ ನುಡಿ ನಮನ | ಜನರ ನಡುವಿನ ಪರಿಸರ ವಿಜ್ಞಾನಿ ‘ಮಾಧವ ಗಾಡ್ಗೀಳ್‌’

ಈ ವರದಿ ಮಂಡನೆಯಾದ ತರುವಾಯ ಅಪಸ್ವರಗಳು ಎದ್ದವು. ಇದನ್ನು ಅನುಷ್ಠಾನಗೊಳಿಸಿದರೇ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಲಕ್ಷಗಟ್ಟಲೆ ಮಂದಿಯ ಜೀವನೋಪಾಯಗಳಿಗೆ ಸಂಚಕಾರ ಒದಗಬಹುದು ಎಂಬ ವಾದವನ್ನು ಮುಂದಿಡಲಾಯಿತು. ಪ್ರತಿಭಟನೆಗಳು ಜರುಗಿದವು. ಇಂತಹ ಸಂದರ್ಭಗಳಲ್ಲಿ ರಾಜಕಾರಣಿಗಳು ಸುಮ್ಮನಿರುತ್ತಾರೆಯೇ? ಅವರು ಬೆಂಕಿಗೆ ಗಾಳಿಯನ್ನು ಬೀಸಿದರು. ಈ ಕಾರಣಗಳಿಂದ ಕೇಂದ್ರ ಸರ್ಕಾರ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕೆ ಕಸ್ತೂರಿರಂಗನ್ ಅವರ ಮುಂದಾಳತ್ವದಲ್ಲಿ ಇನ್ನೊಂದು ಸಮಿತಿಯನ್ನು ರಚಿಸಿತು. ಅದು 2013ರಲ್ಲಿ ತನ್ನ ವರದಿಯನ್ನು ನೀಡಿತು. ಗಾಡ್ಗೀಳ್‌ ಸಮಿತಿಯ ವರದಿಗಿಂತ ಇದರಲ್ಲಿ ಸಡಿಲಗೊಂಡ ಶಿಫಾರಸ್ಸುಗಳು ಇದ್ದವು! ವರ್ಷಗಳು ಸಾಗುತ್ತಿದ್ದರೂ ಇದೂ ಕಾರ್ಯರೂಪಕ್ಕೆ ಇಳಿದಿಲ್ಲ!

“ಅಭಿವೃದ್ಧಿ ಎಂದರೆ ಎಲ್ಲೆಲ್ಲೂ ಒಂದೇ ಮಾದರಿಯ ಯೋಜನೆಗಳನ್ನು ಹೇರಿಕೆ ಮಾಡುವುದು ಅಲ್ಲ; ಸ್ಥಳೀಯ ಪರಿಸರ, ಸಂಸ್ಕೃತಿ ಮತ್ತು ಅಗತ್ಯಗಳಿಗೆ ಹೊಂದಿಕೊಳ್ಳುವ ಬೆಳವಣಿಗೆಯೇ ನಿಜವಾದ ಅಭಿವೃದ್ಧಿ“ ಎಂದು ಅಭಿವೃದ್ಧಿ ವ್ಯಾಖ್ಯಾನವನ್ನು ಮಾಡಿದ ಮಾಧವ ಗಾಡ್ಗಿಲರು ತಮ್ಮ ನೇರ ನುಡಿ ಮತ್ತು ನಡೆಗಳಿಂದ ನಮ್ಮ ಪರಿಸರ ಸಂರಕ್ಷಣೆಯ ಮಾರ್ಗದಲ್ಲಿ ನೈಜ ಹೆಜ್ಜೆ ಗುರುತುಗಳನ್ನು ಬಿಟ್ಟಿದ್ದಾರೆ! ಮುಂಬರುವ ಜನಾಂಗಗಳಿಗೆ ಮಾದರಿಯಾಗಿದ್ದಾರೆ.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...