ಕೃಷಿರಂಗ | ಸಿರಿಧಾನ್ಯಕ್ಕಿದೆ ಹವಾಮಾನ ವೈಪರೀತ್ಯ ಮೆಟ್ಟಿ ನಿಲ್ಲುವ ಶಕ್ತಿ

Date:

ಸಿರಿಧಾನ್ಯಗಳು ಬರಗಾಲವನ್ನು ಮೆಟ್ಟಿನಿಂತು ಬೆಳೆಯುತ್ತವೆ. ಉಪ್ಪು ಮಣ್ಣಿನಲ್ಲೂ ಉಳಿದು ಬೆಳೆಯುತ್ತವೆ. ಹವಾಮಾನದ ವೈಪರೀತ್ಯಗಳನ್ನು ಎದುರಿಸಿ ಚೇತರಿಸಿಕೊಳ್ಳುತ್ತವೆ. ನಂಬಿದ ಅನ್ನದಾತನ ಕೈಹಿಡಿಯುತ್ತವೆ.

ವಚನಕಾರರಾದ ದೇಶಿಕೇಂದ್ರ ಸಂಗನಬಸವಯ್ಯನವರು ತಮ್ಮ ವಚನವೊಂದರಲ್ಲಿ ಪ್ರಸಾದ ಅರ್ಥಾತ್ ಆಹಾರದ ಪಾಕವನ್ನು ತಯಾರಿಸಲು ಹಲವು ಪದಾರ್ಥಗಳನ್ನು ಬಳಸುವ ಕುರಿತು ಬರೆದಿದ್ದಾರೆ. ಅದರಲ್ಲಿ ಗೋಧಿ, ತೊಗರಿ, ಬರಗು, ಅಗಸೆ, ಚೆನ್ನಂಗಿಬೇಳೆ, ಕಡ್ಲೆಬೇಳೆ, ಬೆಲ್ಲ, ಹುಣಿಸಿಹಣ್ಣು, ಮಧು, ಅಕ್ಕಿ, ಕುಸುಬೆ, ಬಿಳಿಎಳ್ಳು, ಬಿಳಿಜೋಳ, ಸಾಸಿವೆ, ಹಾಲು, ಮೊಸರು, ಲವಣ, ಹೆತ್ತುಪ್ಪ, ಶುಂಠಿ, ಉದ್ದು, ಸಾವೆ, ವಟಾಣೆ, ಸಜ್ಜೆ, ಕರಿಕಡೆ, ಕಡ್ಲೆ ತೈಲ, ಮೆಣಸು, ಲಾವಂಗಗಳು ಸೇರಿವೆ. ಇದರಲ್ಲಿ ಬರಗು, ಸಾವೆ (ಸಾಮೆ) ಮತ್ತು ಸಜ್ಜೆ ಎಂಬ ಮೂರು ಸಿರಿಧಾನ್ಯಗಳಿವೆ.

ಜನತೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಂತೆ ಸಿರಿಧಾನ್ಯಗಳ ಆಹಾರ ಮುನ್ನೆಲೆಗೆ ಬರುತ್ತಿದೆ. ನಗರಗಳ ಸೂಪರ್ ಮಾರ್ಕೆಟ್‍ಗಳಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ರೈತರು ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಕೃಷಿ ವಿಶ್ವವಿದ್ಯಾಲಯಗಳು ಸಿರಿಧಾನ್ಯ ಬೆಳೆಗಳ ಕುರಿತು ಎಂದಿಗಿಂತ ಇಂದು ಹೆಚ್ಚಿನ ಸಂಶೋಧನೆ ಮಾಡುತ್ತಿವೆ. ದಕ್ಷಿಣ ಭಾರತದ ರಾಜ್ಯಗಳು ಸಿರಿಧಾನ್ಯಗಳ ಕಣಜ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಗಿ, ಸಾಮೆ, ನವಣೆ, ಬರಗು, ಊದಲು, ಕೊರಲೆ ಮತ್ತು ಹಾರಕ ಎಂಬ ಏಳು ಧಾನ್ಯಗಳನ್ನು ಸಿರಿಧಾನ್ಯಗಳೆಂದು ಕರೆಯಲಾಗಿದೆ. ಅವುಗಳನ್ನು ಮೊದಲು ತೃಣಧಾನ್ಯಗಳೆಂದು ಕರೆಯಲಾಗಿತ್ತು. ತೃಣಧಾನ್ಯ ಪದವು ಅಸೂಕ್ತವೆಂದು ಅವು ಆರೋಗ್ಯಸಿರಿಯ ಆಹಾರ ಪದಾರ್ಥಗಳಾಗಿರುವುದರಿಂದ ‘ಸಿರಿಧಾನ್ಯ’ ಎಂಬ ಹೆಸರೇ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಅವೆಲ್ಲವೂ ಹುಲ್ಲುಜಾತಿಗೆ ಸೇರಿದ ಬೆಳೆಗಳು. ಮಾನವನಿಗೆ ಧಾನ್ಯ ಕೊಟ್ಟರೆ, ಜಾನುವಾರುಗಳಿಗೆ ಮೇವು ಕೊಡುತ್ತವೆ.

ಸಿರಿಧಾನ್ಯಗಳು ಬರಗಾಲವನ್ನು ಮೆಟ್ಟಿನಿಂತು ಬೆಳೆಯುತ್ತವೆ. ಉಪ್ಪು ಮಣ್ಣಿನಲ್ಲೂ ಉಳಿದು ಬೆಳೆಯುತ್ತವೆ. ಹವಾಮಾನದ ವೈಪರೀತ್ಯಗಳನ್ನು ಎದುರಿಸಿ ಚೇತರಿಸಿಕೊಳ್ಳುತ್ತವೆ. ನಂಬಿದ ಅನ್ನದಾತನ ಕೈಹಿಡಿಯುತ್ತವೆ.

ಸಿರಿಧಾನ್ಯಗಳಲ್ಲಿ ಶೇ. 8ರಿಂದ 20ರಷ್ಟು ನಾರಿನಂಶವಿರುವುದರಿಂದ ಕರುಳಿನ ಆರೋಗ್ಯಕ್ಕೆ ಅನುಕೂಲಕರ. ಶರ್ಕರಪಿಷ್ಟಗಳ ಪ್ರಮಾಣ ಕಡಿಮೆ. ಕರುಳಿನಿಂದ ನಿಧಾನವಾಗಿ ಸಕ್ಕರೆ ಬಿಡುಗಡೆಯಾಗುವುದರಿಂದ ಮಧುಮೇಹಿಗಳಿಗೆ ಉಪಯುಕ್ತ. ರಕ್ತದಲ್ಲಿನ ಸಕ್ಕರೆ ಅಂಶವು ದಿಢೀರ್ ಏರಿಕೆಯಾಗುವುದಿಲ್ಲ. ರಾಗಿಯಲ್ಲಿ ಅಧಿಕ ಪ್ರಮಾಣದಲ್ಲಿ ಪ್ರತಿ 100 ಗ್ರಾಂ ಧಾನ್ಯದಲ್ಲಿ 344ರಿಂದ 400 ಮಿಲಿಗ್ರಾಂ ಕ್ಯಾಲ್ಶಿಯಂ ಇರುತ್ತದೆ. ಸಾಮೆಯಲ್ಲಿ ಪ್ರತಿ 100 ಗ್ರಾಂ ಧಾನ್ಯದಲ್ಲಿ 9.3 ಮಿಲಿಗ್ರಾಂ ಕಬ್ಬಿಣದ ಅಂಶವಿರುತ್ತದೆ. ಸಿರಿಧಾನ್ಯಗಳಲ್ಲಿ ದೇಹಕ್ಕೆ ಬೇಕಾದ ಕ್ಯಾಲ್ಶಿಯಂ, ಮೆಗ್ನೀಶಿಯಂ, ಸತು, ಕಬ್ಬಿಣ, ರಂಜಕದಂತಹ ಲವಣಗಳಿರುತ್ತವೆ. ಶೇ. 1.5ರಿಂದ 4.4ರಷ್ಟು ಪ್ರಮಾಣದಲ್ಲಿ ಲವಣಗಳಿರುತ್ತವೆ.

ಥಯಾಮಿನ್ (B1), ರೈಬೋಪ್ಲೇವಿನ್ (B2), ನಯಾಸಿನ್ (B3), ಪಿರಿಡಾಕ್ಸಿನ್ (B6), ಫೋಲೇಟ್ (B9), ಟೋಕೋಫೆರಾಲ್ (ಇ) ಮುಂತಾದ ಜೀವಸತ್ವಗಳಿರುತ್ತವೆ. ಅವುಗಳ ಕೆರೋಟಿನ್ ವಸ್ತುವು ದೇಹದಲ್ಲಿ ಜೀವಸತ್ವ ಎ ಆಗಿ ಪರಿವರ್ತನೆಯಾಗುತ್ತದೆ.
ಗೋಧಿಯಲ್ಲಿ ಗ್ಲುಟೆನ್ (Gluten) ಎಂಬ ಪ್ರೋಟೀನ್ ಇದ್ದು ಅದು ಸಕ್ಕರೆ ಕಾಯಿಲೆಯನ್ನು ಉಲ್ಬಣವಾಗುವಂತೆ ಮಾಡುತ್ತದೆ ಎಂಬುದು ಇತ್ತೀಚಿನ ಕೆಲ ವರ್ಷಗಳ ಸಂಶೋಧನೆ. ಆದರೆ, ಸಿರಿಧಾನ್ಯಗಳಲ್ಲಿ ಅಂತಹ ಗ್ಲುಟೆನ್ ಇರುವುದಿಲ್ಲ. ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಲು ಇದೂ ಒಂದು ಪ್ಲಸ್ ಪಾಯಿಂಟ್. ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ವೈದ್ಯರು ಸಿರಿಧಾನ್ಯಗಳನ್ನು ಸೇವಿಸಲು ಸಲಹೆ ನೀಡುತ್ತಿದ್ದಾರೆ. ಅದು ಸಮಸ್ಯೆಯು ಮತ್ತಷ್ಟು ಬಿಗಡಾಯಿಸದಿರಲಿ ಎಂದೇ ಹೊರತು ಚಿಕಿತ್ಸಾ ರೂಪದಲ್ಲಿ ಅಲ್ಲ.

  1. ರಾಗಿ (ಫಿಂಗರ್ ಮಿಲ್ಲೆಟ್, Eleusine coracana)

ರಾಗಿಮುದ್ದೆಯು ಜನಪ್ರಿಯ ಆಹಾರವಾಗುತ್ತಿದೆ. ನಗರದ ಹಲವಾರು ಹೊಟೆಲ್ಲುಗಳಲ್ಲಿ ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಇಡ್ಲಿ, ರಾಗಿ ದೋಸೆ ಲಭ್ಯ. ರಾಗಿಯಿಂದ ವಿವಿಧ ಬೇಕರಿ ಪದಾರ್ಥಗಳು ತಯಾರಾಗುತ್ತಿವೆ. ‘ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ’, ‘ರಾಗಿ ತಿಂದವರು ನಿರೋಗಿ’ ಎಂಬ ಗಾದೆ ಮಾತುಗಳು ಜನಪದರಲ್ಲಿ ಹುಟ್ಟಿಕೊಂಡಿವೆ. ರಾಗಿಯಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಾಗಿರುವುದರಿಂದ ಮಾಂಸ ಖಂಡಗಳನ್ನು ಸಂಕುಚನಗೊಳಿಸಿ ದುಡಿಮೆಗೆ ಬಲ ಕೊಡುತ್ತದೆ.

ರಾಗಿ 3

ತಮ್ಮದೇ ಆದ ‘ವಿಶೇಷ ಸಂಪರ್ಕ ಪದ್ದತಿ’ ಎಂಬ ವಿಧಾನದಿಂದ ಇಂಡಾಫ್ ಸೇರಿದಂತೆ ಒಟ್ಟು 23 ಅಧಿಕ ಇಳುವರಿಯ ರಾಗಿತಳಿಗಳನ್ನು 1954ರಿಂದ 1993ರವರೆಗೆ ಸಂಶೋಧಿಸಿದ ರಾಗಿ ಲಕ್ಷ್ಮಣಯ್ಯನವರು ‘ಹೊಟ್ಟೆ ತುಂಬ ಮುದ್ದೆ ಉಂಡು, ಬಾಯಿತುಂಬ ಅನ್ನ ಉಣ್ಣಬೇಕು’ ಎಂದಿದ್ದಾರೆ. ಲಕ್ಷ್ಮಣಯ್ಯನವರು ವಿಶ್ವದ ಮೊಟ್ಟಮೊದಲ ರಾಗಿ ಬ್ರೀಡರ್. ಮನುಷ್ಯರಿಗೆ ರಾಗಿ ಮತ್ತು ಜಾನುವಾರುಗಳಿಗೆ ರಾಗಿ ಹುಲ್ಲು ಒದಗಿಸುವ ಎತ್ತರದ ತಳಿಗಳನ್ನೂ ಕೂಡ ಕಂಡುಹಿಡಿದರವರು. ಎಕರೆಯೊಂದಕ್ಕೆ 18ರಿಂದ 25 ಕ್ವಿಂಟಾಲ್ ರಾಗಿ ಇಳುವರಿ ಕೊಡುವ ತಳಿಗಳನ್ನು ಲಕ್ಷ್ಮಣಯ್ಯನವರು ಕೊಟ್ಟುಹೋಗಿದ್ದಾರೆ.

ರಾಗಿಯಲ್ಲಿ ಹೊಸ ಹೊಸ ಸಂಕರಣ ತಳಿಗಳನ್ನು ತಂದ ಕೀರ್ತಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಲಕ್ಷ್ಮಣಯ್ಯನವರ ಇಂಡಾಫ್ 1ರಿಂದ 15ರವರೆಗಿನ ಸರಮಾಲೆಯ ರಾಗಿ ತಳಿಗಳು, ಎಂಆರ್ ಸರಮಾಲೆಯ ಮಂಡ್ಯ ರಾಗಿ ತಳಿಗಳು, ಜಿಕೆವಿಕೆಯ ಜೆರ್ಮ್ ಪ್ಲಾಸಮ್ ಯೂನಿಟ್ (ಜಿಪಿಯು) ರಾಗಿ ತಳಿಗಳು, ಜಿಕೆವಿಕೆಯ ಕೃಷಿ ಕಾಲೇಜಿನ ಜೆನೆಟಿಕ್ಸ್ ಮತ್ತು ಪ್ಲಾಂಟ್ ಬ್ರೀಡಿಂಗ್ ವಿಭಾಗದ ಎಂಎಲ್ ರಾಗಿ ತಳಿಗಳು ಬೆಂಗಳೂರು ಕೃಷಿ ವಿವಿಯ ಕಿರೀಟಕ್ಕೆ ಹಲವು ಗರಿಗಳನ್ನು ಪೋಣಿಸಿವೆ. ರಾಗಿಯಲ್ಲಿ ಕನಿಷ್ಟ 240ರಿಂದ 250 ರೀತಿಯ ಪ್ರಭೇದಗಳಿವೆ.

  1. ನವಣೆ (ಫಾಕ್ಸ್‍ಟೈಲ್ ಮಿಲ್ಲೆಟ್, Setaria italica)

ನವಣೆಯ ಕಾಳುಗಳು ಹಲವು ಬಣ್ಣಗಳಲ್ಲಿ ಲಭ್ಯ. ಹಳದಿ ಮತ್ತು ಬಂಗಾರದ ಬಣ್ಣ ಸರ್ವೇ ಸಾಮಾನ್ಯ. ಬೀಟಾ ಕೆರೋಟಿನ್ ಬಂಗಾರದ ಬಣ್ಣಕ್ಕೆ ಕಾರಣ. ಕಿತ್ತಳೆ, ಕಪ್ಪು ಬಣ್ಣದ ಕಾಳುಗಳು ಕೂಡ ಇರುತ್ತವೆ. ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಮತ್ತು ಆಂಧ್ರ, ತೆಲಂಗಾಣದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಸ್ವಲ್ಪ ಮಟ್ಟಿಗೆ ಬೆಳೆಯುತ್ತಾರೆ. ಇಳುವರಿ ಪ್ರತಿ ಎಕರೆಗೆ 10ರಿಂದ 12 ಕ್ವಿಂಟಾಲ್.

ನವಣೆ
  1. ಸಾಮೆ (ಲಿಟ್ಲ್ ಮಿಲ್ಲೆಟ್, Panicum sumatrense))

ಸಾಮೆಯನ್ನು ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ ಮುಂತಾದ ಜಿಲ್ಲೆಗಳಲ್ಲಿ ಕನಿಷ್ಟ 26,000 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲೂ ಕೂಡ ಬೆಳೆಯುತ್ತಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯವು ಸಾಮೆಯಲ್ಲಿ ಹೊಸ ತಳಿಯನ್ನು ಬಿಡುಗಡೆ ಮಾಡಿದೆ. ಸಾಮೆಯಲ್ಲಿ ಶೇ. 15ರಿಂದ 20ರಷ್ಟು ನಾರಿನಂಶವಿರುತ್ತದೆ. ಇಳುವರಿ ಪ್ರತಿ ಎಕರೆಗೆ 5ರಿಂದ 10 ಕ್ವಿಂಟಾಲ್.

ಸಾಮೆ
  1. ಬರಗು (ಪ್ರೋಸೋ ಮಿಲ್ಲೆಟ್, Panicum miliaceum)

ಬರಗು ಬೆಳೆ ಬರದ ಬೆಳೆ. ಸಿರಿಧಾನ್ಯಗಳಲ್ಲೆಲ್ಲಾ ಹೆಚ್ಚು ಬರ ನಿರೋಧಕ ಗುಣವಿರುವುದು ಬರಗು ಬೆಳೆಗೆ. ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನಗಳ ತೀವ್ರ ಬರಗಾಲಗಳಲ್ಲಿ ರೈತರು ನೆಚ್ಚಿಕೊಂಡು ಬಿತ್ತಿ ಬೆಳೆದು ಜೀವ ಉಳಿಸಿಕೊಂಡ ಬೆಳೆ ಬರಗು. ಈ ಬೆಳೆಗೆ ಇಬ್ಬನಿಯ ಹನಿಗಳಷ್ಟು ತೇವಾಂಶವಿದ್ದರೂ ಬೆಳೆಯುತ್ತದೆ. ಆ ಕಾರಣಕ್ಕಾಗಿಯೇ ತಮಿಳಿನಲ್ಲಿ ‘ಪನಿವೆರಗು’ ಎಂದು ಕರೆಯುತ್ತಾರೆ. ಪನಿ ಎಂದರೆ ಇಬ್ಬನಿ.

ಬರಗಿನ ಕಾಳುಗಳು ಸಾಮಾನ್ಯವಾಗಿ ಹಳದಿ ಮತ್ತು ಬಂಗಾರದ ಬಣ್ಣದಲ್ಲಿರುತ್ತವೆ. ಈ ಬಣ್ಣಕ್ಕೆ ಬೀಟಾ ಕೆರೋಟಿನ್ ಕಾರಣ. ಬೀಟಾ ಕೆರೋಟಿನ್‍ನಿಂದ ದೇಹದಲ್ಲಿ ಜೀವಸತ್ವ ಎ ತಯಾರಾಗುತ್ತದೆ. ಎ ಜೀವಸತ್ವವು ಆರೋಗ್ಯಕ್ಕೆ ಅತ್ಯಗತ್ಯ. ಕಣ್ಣಿನ ದೃಷ್ಟಿಗೆ, ರೋಗ ನಿರೋಧಕ ಶಕ್ತಿಗೆ, ಚರ್ಮದ ಹೊಳಪಿಗೆ, ಹೃದಯದ ಆರೋಗ್ಯಕ್ಕೆ, ಉತ್ಕರ್ಷಣ ನಿರೋಧಕತೆಗೆ (ಆಂಟಿ ಆಕ್ಸಿಡೆಂಟ್ ಗುಣ) ಮತ್ತಿತರ ಕಾರ್ಯಗಳಿಗೆ ಎ ಜೀವಸತ್ವ ಬೇಕು. ಬರಗಿನಲ್ಲಿ ಕಿತ್ತಳೆ ಮತ್ತು ಕಪ್ಪು ಬಣ್ಣದ ಕಾಳುಗಳೂ ಇರುತ್ತವೆ. ಇಳುವರಿ ಪ್ರತಿ ಎಕರೆಗೆ 4ರಿಂದ 9 ಕ್ವಿಂಟಾಲ್.

  1. ಊದಲು (ಬಾರ್ನ್‍ಯಾರ್ಡ್ ಮಿಲ್ಲೆಟ್, Echinochloa esculenta)

ಉತ್ತರಾಖಂಡದ ರಾಣಿಚೌರಿ ಮತ್ತು ಅಲ್ಮೊರಾದಲ್ಲಿ ಊದಲನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲಿಯ ಕೆಲ ಭಾಗಗಳಲ್ಲಿ ಪ್ರಧಾನ ಆಹಾರ. ಗ್ಲುಟೆನ್ ಎಂಬ ಮಧುಮೇಹಜನಕ ವಸ್ತು ಊದಲಿನಲ್ಲಿರುವುದಿಲ್ಲ. ಆದ್ದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರ. ರಂಜಕದ ಪ್ರಮಾಣ ಹೆಚ್ಚಿರುವುದರಿಂದ ಮೂಳೆಗಳ ಬೆಳವಣಿಗೆಗೆ ಅನುಕೂಲಕರ. ಇಳುವರಿ ಪ್ರತಿ ಎಕರೆಗೆ 4ರಿಂದ 6 ಕ್ವಿಂಟಾಲ್.

udalu
  1. ಕೊರಲೆ (ಬ್ರೌನ್‍ಟಾಪ್ ಮಿಲ್ಲೆಟ್, Urochloa ramose)

ಕೊರಲೆಯನ್ನು ನಮ್ಮ ರಾಜ್ಯದ ತುಮಕೂರು, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮತ್ತು ಆಂಧ್ರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಕೊರಲೆ ಅನ್ನ, ಕೊರಲೆ ಉಪ್ಪಿಟ್ಟು ರುಚಿಕರವಾಗಿರುತ್ತದೆ. ಇಳುವರಿ ಪ್ರತಿ ಎಕರೆಗೆ 7ರಿಂದ 8 ಕ್ವಿಂಟಾಲ್.

ಕೊರಲು
  1. ಹಾರಕ (ಕೋಡೋ ಮಿಲ್ಲೆಟ್, Paspalum scrobiculatum)
    ಹಾರಕ (ಅರ್ಕ, ಆರ್ಕ)ದ ಕಾಳಿನ ಹೊಟ್ಟಿನಲ್ಲಿ ಏಳು ಪದರಗಳಿವೆ. ಗ್ಲುಟೆನ್ ಎಂಬ ಮಧುಮೇಹಜನಕ ಪ್ರೋಟೀನು ಹಾರಕದಲ್ಲಿರುವುದಿಲ್ಲ. ನಯಾಸಿನ್ ಮತ್ತು ಫೋಲಿಕ್ ಆಮ್ಲ ಅಂಶ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಮಧ್ಯ ಪ್ರದೇಶದ ದಿಂಡೋರಿ ಮತ್ತು ಮಾಂಡ್ಲಾ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಛತ್ತೀಸಗಡ, ತಮಿಳುನಾಡು, ಕರ್ನಾಟಕ ಮತ್ತು ಗುಜರಾತಿನಲ್ಲಿಯೂ ತಕ್ಕಮಟ್ಟಿಗೆ ಬೆಳೆಯುತ್ತಾರೆ. ಇಳುವರಿ ಪ್ರತಿ ಎಕರೆಗೆ 7ರಿಂದ 18 ಕ್ವಿಂಟಾಲ್.
haraka

ವಿಶ್ವವಿದ್ಯಾಲಯಗಳಲ್ಲಿ ಸಿರಿಧಾನ್ಯಗಳ ಸಂಶೋಧನೆ

ಸಿರಿಧಾನ್ಯಗಳ ಸಂಶೋಧನೆಯು ದೇಸಿ ತಳಿಗಳ (ಲ್ಯಾಂಡ್‍ರೇಸ್)ಗಳನ್ನು ಸಂರಕ್ಷಿಸುವ ಉದ್ದೇಶವನ್ನಿಟ್ಟುಕೊಂಡಿದೆ. ಜೊತೆಗೆ, ಸಂಕರಣದ ಮೂಲಕ ಅಧಿಕ ಇಳುವರಿ, ರೋಗ ನಿರೋಧಕ ಹೊಸ ಪ್ರಭೇದಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರಾಗಿ, ಸಾಮೆ, ನವಣೆ, ಬರಗು ಮತ್ತು ಊದಲು ಬೆಳೆಗಳಲ್ಲಿ ಸಂಶೋಧನೆ ಮಾಡುತ್ತಿದೆ. ಸಿರಿಧಾನ್ಯಗಳಿಗೊಂದು ಅಖಿಲ ಭಾರತ ಸಂಯೋಜಿತ ಯೋಜನೆ [All India Coordinated Research Project (AICRP) on Small Millets]ಇದೆ.

ಸಂಶೋಧನೆಗಾಗಿ ಸಿರಿಧಾನ್ಯಗಳನ್ನು ಸಂರಕ್ಷಿಸಿಡುವ ಕೆಲಸ ನಡೆಯುತ್ತಿದೆ. ಸುಮಾರು 4 ಡಿಗ್ರಿ ಸೆಲ್ಶಿಯಸ್ ಶೀತ ವಾತಾವರಣದಲ್ಲಿ ಆರರಿಂದ ಎಂಟು ವರ್ಷಗಳ ಕಾಲ ರಾಗಿಯನ್ನು ಸಂರಕ್ಷಿಸಬಹುದಾಗಿದೆ. ನಮ್ಮ ಪೂರ್ವಿಕರು ಹಗೇವುಗಳಲ್ಲಿ ರಾಗಿಯನ್ನು ಸಂಗ್ರಹಿಸಿಡುತ್ತಿದ್ದರು. ಹರಪ್ಪ ಮತ್ತು ಮೊಹೆಂಜದಾರೋ ಸಂಸ್ಕøತಿಯ ಉತ್ಖನನ ನಡೆದಾಗ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಸಂಗ್ರಹಣೆಗಿಟ್ಟಿದ್ದ ರಾಗಿಯು ಕೆಡದಂತೆ ಸಿಕ್ಕಿತೆಂದು ಹೇಳಲಾಗುತ್ತಿದೆ.
ಸಂಶೋಧಕರು ನಿಜಕ್ಕೂ ಧ್ಯಾನಸ್ಥರಂತೆ ಕಾರ್ಯ ನಿರ್ವಹಿಸುತ್ತಾರೆ. ಒಂದು ಹೊಸ ಪ್ರಭೇದವನ್ನು ಬಿಡುಗಡೆ ಮಾಡಲು ಹಲವಾರು ವರ್ಷಗಳೇ ಸಂಶೋಧನೆ ನಡೆಸಬೇಕು. ತಮ್ಮ ಸಂಶೋಧನಾ ಕೇಂದ್ರದಲ್ಲಿ ಕನಿಷ್ಟ ಎರಡು ವರ್ಷಗಳ ಕಾಲ ಸಂಶೋಧನೆ ನಡೆಸುತ್ತಾರೆ. ನಂತರ ವಿವಿಧ ಹವಾಮಾನದ ವಲಯಗಳಲ್ಲಿ 20 ಕಡೆ ಬೆಳೆ ಪ್ರಯೋಗ ನಡೆಸಿ ಕನಿಷ್ಟ ಶೇ. 10ರಷ್ಟು ಹೆಚ್ಚು ಇಳುವರಿ ಬಂದರೆ ರೈತರಿಗೆ ಬಿಡುಗಡೆ ಮಾಡುತ್ತಾರೆ.

ಹಾರಕದಲ್ಲಿ ಬ್ರೀಡಿಂಗ್ ಸುಲಭ ಸಾಧ್ಯವಲ್ಲ. ಕಾರಣ ಅದರ ತೆನೆಯ ಹೂಗಳು ಹೊರಕ್ಕೆ ಸೂಸಿರುವುದಿಲ್ಲ. ತೆನೆಯ ಹೂಗಳಿಗೊಂದು ಹೊದಿಕೆಯಿರುತ್ತದೆ. ತೆನೆಗಳಿಗೆ ಪರಾಗಸ್ಪರ್ಶವನ್ನು ಏರ್ಪಡಿಸುವುದು ವಿಜ್ಞಾನಿಗಳಿಗೊಂದು ಸವಾಲಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯವು ಸಾಮೆ, ನವಣೆ, ಊದಲು ಮತ್ತು ರಾಗಿಯಲ್ಲಿ ಸಂಶೋಧನೆ ಮಾಡುತ್ತಿದೆ. ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ನವಣೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳ ಸಂಶೋಧನೆಯಲ್ಲಿ ತೊಡಗಿದೆ. ಭಾರತೀಯ ಸಿರಿಧಾನ್ಯ ಸಂಶೋಧನಾ ಕೇಂದ್ರವನ್ನು ಹೈದರಾಬಾದಿನಲ್ಲಿ ಆರಂಭಿಸಲಾಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ತಮಿಳುನಾಡು ಕೃಷಿ ವಿಶ್ವವಿದ್ಯಾಲಯವು ಊದಲು ಸಂಶೋಧನೆಯಲ್ಲಿ ಹೆಚ್ಚು ತೊಡಗಿಕೊಂಡಿದೆ.

ನಮ್ಮ ರಾಜ್ಯದ ‘ಸಹಜ ಸಮೃದ್ಧ’ ಎಂಬ ಸರ್ಕಾರೇತರ ಸಂಸ್ಥೆಯು 27 ವರ್ಷಗಳಿಂದ ರೈತರ ಸಹಭಾಗಿತ್ವದಲ್ಲಿ ಸಿರಿಧಾನ್ಯ ಮತ್ತಿತರ ಬೀಜ ಸಂರಕ್ಷಣೆ, ಉತ್ಪಾದನೆ, ಸಾವಯವ ಕೃಷಿಯ ಮೂಲಕ ಒಂದು ದೊಡ್ಡ ಚಳುವಳಿಯಾಗಿ ರೂಪುಗೊಂಡಿದೆ.
ಒಡಿಶಾ ಮಿಲ್ಲೆಟ್ ಮಿಷನ್ ಯೋಜನೆಯು ರೈತರನ್ನು ಬಳಸಿಕೊಂಡು ಸಿರಿಧಾನ್ಯಗಳ ಸಂರಕ್ಷಣೆಯಲ್ಲಿ ತೊಡಗಿದೆ. ಫಾರ್ಮರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್‍ಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ಪಾತ್ರವೂ ದೊಡ್ಡದಿದೆ. ತೆಲಂಗಾಣದ ಡೆಕ್ಕನ್ ಡೆವೆಲಪ್‍ಮೆಂಟ್ ಸೊಸೈಟಿಗಳೂ ಕೂಡ ಸಿರಿಧಾನ್ಯಗಳ ಉತ್ಪಾದನೆಯಲ್ಲಿ ತೊಡಗಿವೆ.

ಸಿರಿಧಾನ್ಯಗಳ ರಾಷ್ಟ್ರೀಯ ವರ್ಷವನ್ನು 2018ರಲ್ಲಿ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವರ್ಷವನ್ನು 2023ರಲ್ಲಿ ಆಚರಿಸಲಾಗಿದೆ. ಸಿರಿಧಾನ್ಯಗಳ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ಹಲವು ಉದ್ದಿಮೆದಾರರು ತೊಡಗಿಸಿಕೊಂಡಿದ್ದಾರೆ.

ಸಿರಿಧಾನ್ಯ ಉತ್ಪಾದನೆಯ ಅಂಕಿ ಅಂಶಗಳು
ಒಂದು ಅಂದಾಜಿನಂತೆ ರಾಷ್ಟ್ರ ಮಟ್ಟದಲ್ಲಿ ವಿವಿಧ ಸಿರಿಧಾನ್ಯಗಳ ಉತ್ಪಾದನೆ, ಲಕ್ಷ ಟನ್‍ಗಳಲ್ಲಿ : ರಾಗಿ 12-18, ನವಣೆ 8, ಸಾಮೆ 4-7, ಊದಲು 1.5, ಹಾರಕ 0.84, ಬರಗು 0.22 ಮತ್ತು ಕೊರಲೆ 0.12.

ಹೆಸರು ಮಾಡಿದ ಸಿರಿಧಾನ್ಯ ಪ್ರವರ್ತಕರು
ಒಡಿಶಾದ ಆದಿವಾಸಿ ಮಹಿಳೆಯಾದ ರೈಮತಿ ಗಿಯೂರಿಯ ಅವರಿಗೆ ‘ಮಿಲ್ಲೆಟ್ ರಾಣಿ’ ಎಂಬ ಬಿರುದು ನೀಡಲಾಗಿದೆ. ಸಿರಿಧಾನ್ಯಗಳ 300 ಪ್ರಭೇದಗಳನ್ನವರು ಸಂರಕ್ಷಿಸಿದ್ದಾರೆ. ಒಡಿಶಾ ಕೃಷಿ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಮಧ್ಯ ಪ್ರದೇಶದ ಸಿಲ್ಪಿಡಿ ಗ್ರಾಮದ ಬೈಗಾ ಆದಿವಾಸಿಯಾದ ಲಹರಿ ಬಾಯಿಯವರಿಗೆ ‘ಮಿಲ್ಲೆಟ್ ಲೇಡಿ ಆಫ್ ಇಂಡಿಯಾ’ ಬಿರುದಿದೆ. ಹತ್ತು ವರ್ಷಗಳಿಂದ ಸಿರಿಧಾನ್ಯಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಸಂರಕ್ಷಿಸುವ ಬಗೆಯನ್ನು ತಮ್ಮ ಅಜ್ಜಿಯಿಂದ ಕಲಿತಿದ್ದಾರೆ. ಬೀಜ ಬ್ಯಾಂಕ್ ಸ್ಥಾಪಿಸಿ ಸುತ್ತಮುತ್ತಲ 20 ಗ್ರಾಮಗಳಿಗೆ ಸಿರಿಧಾನ್ಯಗಳ ಬಿತ್ತನೆ ಬೀಜಗಳನ್ನು ಹಂಚಿದ್ದಾರೆ.
ಡೆಕ್ಕನ್ ಡೆವೆಲಪ್‍ಮೆಂಟ್ ಸೊಸೈಟಿಯ ಎಕ್ಸುಕ್ಯೂಟಿವ್ ಡೈರೆಕ್ಟರ್ ಆದ ಪಿ. ವಿ. ಸತೀಶ್‍ರವರು ಗ್ರಾಮ ಮಟ್ಟದ ಮಹಿಳಾ ಸಂಘಗಳನ್ನು ರಚಿಸಿ ಸಿರಿಧಾನ್ಯಗಳ ಉತ್ಪಾದನೆಯಲ್ಲಿ ತೊಡಗಿಸಿದ್ದಾರೆ. ಅವರ ಶ್ರಮದಿಂದ ವಿಶ್ವಸಂಸ್ಥೆಯು 2023 ಅನ್ನು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವರ್ಷವೆಂದು ಘೋಷಿಸಿತು. ಅವರನ್ನು ‘ಮಿಲ್ಲೆಟ್ ಮ್ಯಾನ್’ ಎಂದು ಕರೆಯಲಾಗಿದೆ.
ಮೈಸೂರಿನವರಾದ ಡಾ. ಖಾದರ್ ವಲಿಯವರು ‘ಮಿಲ್ಲೆಟ್ ಮ್ಯಾನ್ ಆಫ್ ಇಂಡಿಯಾ’ ನಾಮಾಂಕಿತರಾದವರು. ಸಿರಿಧಾನ್ಯಗಳ ಪೋಷಕಾಂಶತೆ, ಆರೋಗ್ಯ ಮತ್ತು ಸುಸ್ಥಿರತೆ ಕುರಿತು ತಮ್ಮ ಜ್ಞಾನವನ್ನು ಹಂಚಿಕೊಂಡವರು. ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಂತಹ ಜೀವನ ಶೈಲಿ ಕಾಯಿಲೆಗಳಿಗೆ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಿದ್ದಾರೆ. ಅವರಿಗೆ 2023ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿದೆ.

ಶರ್ಮಿಳಾ ಓಸ್ವಾಲ್‍ರವರು ‘ಮಿಲ್ಲೆಟ್‍ಪ್ರ್ಯೂನರ್’ ಅರ್ಥಾತ್ ಮಿಲ್ಲೆಟ್ ಉದ್ದಿಮೆದಾರರು. ಭಾರತೀಯ ಸಿರಿಧಾನ್ಯಗಳ ಸಂಘವನ್ನು ರಚಿಸಿ ರೈತರು, ವಿಜ್ಞಾನಿಗಳು ಮತ್ತು ಬಳಕೆದಾರರನ್ನು ಬೆಸೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಸಿರಿಧಾನ್ಯಗಳ ಸಂರಕ್ಷಣೆಯ ಪರಂಪರೆ
ಅಜ್ಜಿ, ಮುತ್ತಜ್ಜಿಯರು ಸಿರಿಧಾನ್ಯಗಳ ಬೀಜಗಳನ್ನು ಉಟ್ಟ ಸೀರೆ ಸೆರಗಿನಲ್ಲಿ ಕಟ್ಟಿಕೊಂಡು ಸಂರಕ್ಷಿಸುತ್ತಿದ್ದರು. ಕೇಳಿದವರಿಗೆ ತಕ್ಷಣ ಹಂಚುತ್ತಿದ್ದರು. ಹೊಲಗಳನ್ನು ಬಿತ್ತುವ ಸಂದರ್ಭದಲ್ಲಿ ಸಾಲುಗಳಾಗಿ ಬೆಳೆಯಲು ಸಾಮೆ, ನವಣೆ ಕಾಳುಗಳನ್ನು ಶೇಖರಿಸಿಟ್ಟ ಮಡಿಕೆ, ಕುಡಿಕೆಗಳಿಂದ ತೆಗೆದುಕೊಡುತ್ತಿದ್ದರು. ರುಚಿಕರ ಸಾಂಬಾರ್ ಪುಡಿಯನ್ನು ತಯಾರು ಮಾಡಲು ಒಂದಿಷ್ಟು ಸಾಮೆ ಅಕ್ಕಿಯನ್ನು ಸೇರಿಸುತ್ತಿದ್ದರು. ಸುಗ್ಗಿಯ ಕಾಲದಲ್ಲಿ ರುಚಿಕರ ಸಿರಿಧಾನ್ಯಗಳ ಅನ್ನವನ್ನು ತಯಾರಿಸಿ ಮಜ್ಜಿಗೆಯೊಂದಿಗೆ ಮೃಷ್ಟಾನ್ನದಂತೆ ಉಣ್ಣಲು ನೀಡುತ್ತಿದ್ದರು. ಇಂತಹ ಪರಂಪರೆಯು ಆರೋಗ್ಯಸಿರಿಗಾಗಿ ಗ್ರಾಮ ಮತ್ತು ನಗರಗಳಲ್ಲಿಯೂ ಉಳಿಯಬೇಕಿದೆ.

ಕೊನೆಯ ಮಾತು
ರೈತರು ಸಿರಿಧಾನ್ಯಗಳನ್ನು ಬೆಳೆದು ಜನರ ಆರೋಗ್ಯ ರಕ್ಷಣೆಗೆ ತಾವು ಮಾಡುತ್ತಿರುವ ಸೇವೆಯನ್ನು ಮುಂದುವರೆಸಲಿ ಎಂದು ಹಾರೈಸೋಣ. ಸರ್ಕಾರವು ಸಿರಿಧಾನ್ಯಗಳಿಗೆ ಉತ್ತಮ ಬೆಂಬಲ ಬೆಲೆ ಕೊಡಲಿ. ರಾಜ್ಯದಲ್ಲಿರುವ ಲಕ್ಷಾಂತರ ಎಕರೆಗಳಷ್ಟು ಬೀಳು ಭೂಮಿಯು ಬಳಕೆಯಾಗಿ ಸಿರಿಧಾನ್ಯಗಳನ್ನಾದರೂ ಬೆಳೆಯಬಹುದು. ಅದಕ್ಕಾಗಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯು ಜಂಟಿಯಾಗಿ ಯೋಜನೆ ರೂಪಿಸಿ ರೈತರಿಗೆ ನೆರವಾಗಬೇಕು. ಮದುವೆಗಳಲ್ಲಿ ರಾಗಿ ಮುದ್ದೆ ಕಾಣೆಯಾಗಿ ಕಾಲಕ್ಕೆ ತಕ್ಕಂತೆ ರಾಗಿ ರೊಟ್ಟಿ ಬಂದಿದೆ. ಸಿರಿಧಾನ್ಯಗಳ ಅನ್ನವಾಗಿ ‘ಸಿರಿ ಅನ್ನ’ ಕೂಡ ಬರಲಿ ಎಂದು ಆಶಿಸೋಣ.

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...