ಜೋಳಿಗೆ | ಮೈಸೂರಿನಲ್ಲಿ ನನ್ನ ಸಾಮಾಜಿಕ ಬದುಕು- ಭಾಗ 2

Date:

ಜುಲೈ ತಿಂಗಳು, ಮಳೆಗಾಲ ಆಗಷ್ಟೇ ಶುರುವಾಗಿತ್ತು. ಕಾವೇರಿಯಲ್ಲಿ ನೀರು ಸ್ವಲ್ಪವೇ ಹೆಚ್ಚಾಗಿತ್ತು, ಇನ್ನೂ ದೊಡ್ಡ ಪ್ರವಾಹದ ನೀರು ಬಂದಿರಲಿಲ್ಲ. ಒಂದು ಶನಿವಾರ ಬೇಗ ಕಾಲೇಜಿನಿಂದ ಬಂದು, ನನ್ನ ಅತ್ತಿಗೆಯ ಹತ್ತಿರ, ನಾವು ಕೆಲವು ಸ್ನೇಹಿತರು ಶ್ರೀರಂಗಪಟ್ಟಣದ ಕಡೆ ಪಿಕ್‌ನಿಕ್‌ ಹೋಗುತ್ತಿರುವುದಾಗಿಯೂ, ವಾಪಸ್‌ ಬರಲು ಎರಡು-ಮೂರು ದಿನ ಆಗಬಹುದೆಂದೂ ತಿಳಿಸಿ, ಟ್ರಂಕ್‌ ತೆಗೆದುಕೊಂಡು ಹೊರಟುಬಿಟ್ಟೆ…

[ಪ್ರಿಯ ಓದುಗರೆ, ಹೈಸ್ಕೂಲಿನ ದಿನಗಳಿಂದಲೂ ವಿಜ್ಞಾನದ ವಿದ್ಯಾರ್ಥಿಯಾಗಿ ತರಗತಿಗೆ ʻಟಾಪರ್‌ʼ ಆಗಿದ್ದ ನನಗೆ ಪಿಯೂಸಿ ಮುಗಿಸಿ ಬಿಎಸ್ಸಿಗೆ ಬರುವಷ್ಟರಲ್ಲಿ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹೊರಟು ಹೋಗಿ ಕಾಲೇಜೇ ಬೇಡವೆನ್ನಿಸುವಂತಾಗಿ, ನಾನು ಊರು ಬಿಟ್ಟು ಪರಾರಿಯಾಗಲು ಹಾಗೂ ಮಹಾರಾಷ್ಟ್ರದ ನಾಗಪುರದ ಬಳಿಯಲ್ಲೆಲ್ಲೋ ʼಸಾಕೋಲಿʼ ಎಂಬ ಊರಿನಲ್ಲಿದ್ದ ನನ್ನ ಎರಡನೇ ಅಣ್ಣ ಸುಬ್ಬಣ್ಣನ ಬಳಿ ಹೋಗಿ ಸೇರಿಕೊಳ್ಳಲು ನಿರ್ಧರಿಸಿದ್ದು – ಈ ಕುರಿತು ಕಳೆದ ಕಂತಿನಲ್ಲಿ ಬರೆದಿದ್ದೆನಷ್ಟೆ. ಮುಂದೆ ಓದಿ…]

ಅದು 1970ನೇ ಇಸವಿ. ಕರ್ನಾಟಕದಿಂದ ದೆಹಲಿಗೆ ಇನ್ನೂ ನೇರ ರೈಲು ಇರಲಿಲ್ಲ. ಬೆಂಗಳೂರಿನಿಂದ ನವದೆಹಲಿಗೆ ಈಗ ನೇರ ಸಂಪರ್ಕ ಕಲ್ಪಿಸುತ್ತಿರುವ ʻಕರ್ನಾಟಕ ಎಕ್ಸ್‌ಪ್ರೆಸ್‌ʼ ಆರಂಭವಾದುದು 1983ರಲ್ಲಿ. ಆಗಲೂ ಅದು ಮೂರು ಬೇರೆಬೇರೆ ಮಾರ್ಗಗಳಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ಸಂಚರಿಸುತ್ತಿತ್ತು. ಅದಕ್ಕೂ ಮೊದಲ ಅದನ್ನು ʻಕೇರಳ-ಕರ್ನಾಟಕ ಎಕ್ಸ್‌ಪ್ರೆಸ್‌ʼ ಎಂಬ ಹೆಸರಿನಲ್ಲಿ 1976ರಲ್ಲಿ ಆರಂಭಿಸಲಾಗಿತ್ತು. ದೆಹಲಿಯಿಂದ ಬರುವ ಅದು ಜೋಲಾರ್‌ಪೇಟೆಯಲ್ಲಿ ವಿಭಾಗಗೊಂಡು ಒಂದು ಭಾಗ ಬೆಂಗಳೂರಿಗೂ ಇನ್ನೊಂದು ಭಾಗ ಕೇರಳಕ್ಕೂ ಹೋಗುತ್ತಿತ್ತು. ಹಾಗಾಗಿ 1970ರಲ್ಲಿ ನಾಗಪುರಕ್ಕೆ ಹೋಗಲು ನಾನು ಮೈಸೂರಿನಿಂದ ಬೆಂಗಳೂರಿಗೆ, ಅಲ್ಲಿಂದ ಮದರಾಸಿಗೆ ಹೋಗಿ ಅಲ್ಲಿಂದ ದೆಹಲಿ ರೈಲು ಹಿಡಿಯಬೇಕಿತ್ತು.

ಆ ಪ್ರಯಾಣದ ಬಗ್ಗೆ ಸುಬ್ಬಣ್ಣ ಹೇಳಿದ ವಿವರಗಳು ನೆನಪಿನಲ್ಲಿದ್ದವು. ಆಗ ನನಗೆ ಊರಿನಿಂದ ತಿಂಗಳಿಗೆ ಅರವತ್ತೋ ಎಪ್ಪತ್ತೋ ರೂಪಾಯಿ ಕಳಿಸುತ್ತಿದ್ದರು. ಈ ಪ್ರಯಾಣಕ್ಕೆ ಅದು ಸಾಕಾಗದಲ್ಲ. ಹಾಗಾಗಿ ಅಣ್ಣಯ್ಯನ (ಹಿರಿಯ ಅಣ್ಣ ಮಹಾಬಲ ರಾವ್)‌ ಒಬ್ಬಿಬ್ಬರು ಸಹೋದ್ಯೋಗಿಗಳ ಬಳಿ ಏನೋ ಪುಸ್ತಕದ ನೆಪ ಹೇಳಿ ನೂರು ನೂರು ಒಟ್ಟು ಇನ್ನೂರು ರೂಪಾಯಿ ಸಾಲ ತೆಗೆದುಕೊಂಡೆ. ನನ್ನಲ್ಲಿ ಇದ್ದಿದ್ದು ಎರಡೇ ಜೊತೆ ಪ್ಯಾಂಟ್‌ ಶರ್ಟ್.‌ ಬಟ್ಟೆಬರೆ ಇತ್ಯಾದಿ ಇಟ್ಟುಕೊಳ್ಳಲು ಆಗಿನ ದಿನಗಳಲ್ಲಿ ಮಾಮೂಲಾಗಿದ್ದ ತಗಡಿನ ಚಿಕ್ಕ ಟ್ರಂಕ್‌ ಒಂದಿತ್ತು. ಅದರಲ್ಲಿ ಅಗತ್ಯ ವಸ್ತುಗಳನ್ನು ಪ್ಯಾಕ್‌ ಮಾಡಿಕೊಂಡೆ. ಜುಲೈ ತಿಂಗಳು, ಮಳೆಗಾಲ ಆಗಷ್ಟೇ ಶುರುವಾಗಿತ್ತು. ಕಾವೇರಿಯಲ್ಲಿ ನೀರು ಸ್ವಲ್ಪವೇ ಹೆಚ್ಚಾಗಿತ್ತು, ಇನ್ನೂ ದೊಡ್ಡ ಪ್ರವಾಹದ ನೀರು ಬಂದಿರಲಿಲ್ಲ. ಒಂದು ಶನಿವಾರ ಬೇಗ ಕಾಲೇಜಿನಿಂದ ಬಂದು, ನನ್ನ ಅತ್ತಿಗೆಯ ಹತ್ತಿರ, ನಾವು ಕೆಲವು ಸ್ನೇಹಿತರು ಶ್ರೀರಂಗಪಟ್ಟಣದ ಕಡೆ ಪಿಕ್‌ನಿಕ್‌ ಹೋಗುತ್ತಿರುವುದಾಗಿಯೂ, ವಾಪಸ್‌ ಬರಲು ಎರಡು-ಮೂರು ದಿನ ಆಗಬಹುದೆಂದೂ ತಿಳಿಸಿ, ಟ್ರಂಕ್‌ ತೆಗೆದುಕೊಂಡು ಹೊರಟುಬಿಟ್ಟೆ. ನನಗಾಗ 18 ವರ್ಷ ವಯಸ್ಸು. (18 ಆದರೂ ಇನ್ನೂ ಮೀಸೆ ಮೊಳೆತಿರಲಿಲ್ಲ, 14-15ರ ಹುಡುಗನಂತೆ ಕಾಣುತ್ತಿದ್ದೆ!)

ಬಸ್ಸಿನಲ್ಲಿ ಬೆಂಗಳೂರು ತಲುಪಿದೆ. ನಾಗಪುರದ ಪ್ರಯಾಣ ಎರಡು ದಿನ ಆಗುವುದಾಗಿಯೂ, ರೈಲಿನಲ್ಲಿ ವಿಪರೀತ ಸೆಕೆ, ಆದರೂ ಸ್ನಾನಕ್ಕೆ ಅನುಕೂಲ ಇರುವುದಿಲ್ಲವೆಂದೂ ಸುಬ್ಬಣ್ಣನಿಂದ ತಿಳಿದಿತ್ತು. ಆದ್ದರಿಂದ ಬೆಂಗಳೂರಿನಲ್ಲಿ ಒಮ್ಮೆ ಸ್ನಾನ ಮಾಡಿಕೊಂಡೇ ಹೋಗುವ ಯೋಚನೆ ಮಾಡಿದೆ. ಹೇಗೂ ಮದರಾಸು ರೈಲು ರಾತ್ರಿಗೆ ಇತ್ತು. ಆದ್ದರಿಂದ ಮೆಜೆಸ್ಟಿಕ್‌ ಏರಿಯದ ಯಾವುದೋ ಒಂದು ಚಿಕ್ಕ ಹೋಟೆಲಲ್ಲೊಂದು ಸಿಂಗಲ್‌ ರೂಂ ತೆಗೆದುಕೊಂಡೆ. ಆದರೆ ನನ್ನ ದುರದೃಷ್ಟಕ್ಕೆ ಆ ಹೋಟೆಲಲ್ಲಿ ನಲ್ಲಿಯಲ್ಲಿ ಸ್ನಾನಕ್ಕೆ ನೀರೇ ಇರಲಿಲ್ಲ! ಮತ್ತೆ, ಅಣ್ಣಯ್ಯನೇನಾದರೂ ಸಂಶಯಗೊಂಡು ಪೊಲೀಸ್‌ ಕಂಪ್ಲೇಂಟ್‌ ಕೊಟ್ಟು, ನನ್ನನ್ನು ಹುಡುಕಿಕೊಂಡು ಬಂದು ಬಿಟ್ಟರೆ? ಅಂತ ಆತಂಕವಾಯಿತು. ನನ್ನ ಟ್ರಂಕಿನ ತಳವೆಲ್ಲ ತುಕ್ಕು ಹಿಡಿದಿತ್ತು, ಸುಲಭವಾಗಿ ಗುರುತು ಹಿಡಿದಾರು ಅನ್ನಿಸಿತು. ಅದನ್ನಾದರೂ ಕವರ್‌ ಮಾಡಿಕೊಳ್ಳೋಣವೆಂದು 6 ರೂಪಾಯಿ ಕೊಟ್ಟು, ಸಾಧ್ಯವಿದ್ದಷ್ಟು ದೊಡ್ಡದೊಂದು ಕಿಟ್ ಬ್ಯಾಗ್‌ ಖರೀದಿಸಿದೆ. ಹೋಟೆಲಿಗೆ ತಂದು ನೋಡಿದರೆ ಟ್ರಂಕು ಅದರೊಳಗೆ ಹಿಡಿಸಲೇ ಇಲ್ಲ! ಈಗ ಇದೊಂದು ಹೊರೆ ಬೇರೆ ಗಂಟು ಬಿದ್ದಂತಾಯಿತು. ಅಲ್ಲದೆ, ಇದ್ದ ಹಣವೂ ಅಷ್ಟು ಖಾಲಿಯಾಯಿತು.

ಹೋಟೆಲಲ್ಲಿ ಏನೋ ಸ್ವಲ್ಪ ತಿಂದು ರೈಲು ನಿಲ್ದಾಣಕ್ಕೆ ಬಂದೆ. ಅಲ್ಲಿ ಸ್ವಲ್ಪ ಅನುಕೂಲಸ್ಥರು ಮತ್ತು ಪರೋಪಕಾರಿಗಳು ಎಂದು ಊಹಿಸಬಹುದಾಗಿದ್ದ ಇಬ್ಬರು ಮಧ್ಯ ವಯಸ್ಕರು ರೈಲಿಗಾಗಿ ಕಾಯುತ್ತಿದ್ದರು. ಅವರ ಹತ್ತಿರ, ನಾಗಪುರಕ್ಕೆ ಅಣ್ಣನ ಬಳಿಗೆ ಹೋಗಬೇಕಾಗಿದೆ ಎಂದೂ, ಹಣ ಕಮ್ಮಿ ಬಿದ್ದಿದೆ ಎಂದೂ ಹೇಳಿ ಆ ಕಿಟ್ ಬ್ಯಾಗನ್ನು ತೆಗೆದುಕೊಂಡು ನನಗೆ ಆರು ರೂಪಾಯಿ ಕೊಡಬೇಕೆಂದು ವಿನಂತಿಸಿದೆ. ಅವರಿಗೆ ಏನನ್ನಿಸಿತೋ, ʻಇದು ನಮಗೇನೂ ಉಪಯೋಗಕ್ಕೆ ಬರಲ್ಲ, ಆದರೂ ನಿನಗೆ ಸಹಾಯ ಮಾಡಲಿಕ್ಕೆಂದು ತಗೊಳ್ತೀವಿʼ ಅಂತ ಹೇಳಿ 6 ರೂಪಾಯಿ ಕೊಟ್ಟು ಅದನ್ನು ತೆಗೆದುಕೊಂಡರು. ರಾತ್ರಿಯ ರೈಲಿನಲ್ಲಿ ಬೆಳಗಿನ ಜಾವ ಮದರಾಸು ತಲುಪಿದೆ.

ಶೃಂಗೇರಿಯಿಂದ ಹೊರಗಿನ ಊರು ಅಂತ ಕಂಡಿದ್ದೇ 1968ರಲ್ಲಿ ಪಿಯೂಸಿಗೆ ಸೇರಲು ಉಡುಪಿಗೆ ಹೋದಾಗ. ಅದನ್ನು ಬಿಟ್ಟರೆ ನೋಡಿದ್ದು ಮೈಸೂರು. ಅದರಾಚೆಗೆ ಹೊರಗಿನ ಪ್ರಪಂಚದ ತಿಳಿವಳಿಕೆ ಏನೇನೂ ಇರಲಿಲ್ಲ. ಮದರಾಸು ರೈಲು ನಿಲ್ದಾಣದಲ್ಲೋ ಅದರ ಅಕ್ಕಪಕ್ಕ ಎಲ್ಲೋ ಒಂದು ಹೋಟೆಲಿಗೆ ಹೋದೆ. ಒಂದು ಸಿಂಗಲ್‌ ಇಡ್ಲಿ ತಿಂದು ಕಾಫಿ ಹೇಳಿದೆ. ಒಂದು ಚಿಕ್ಕ ಜಾರ್‌ನಲ್ಲಿ ಹಾಲು, ಕಪ್‌ನಲ್ಲಿ ಕಾಫಿ ಡಿಕಾಕ್ಷನ್‌, ಪ್ರತ್ಯೇಕವಾಗಿ ಸಕ್ಕರೆ ಇಷ್ಟು ತಂದಿಟ್ಟ ಮಾಣಿ. ಅಲ್ಲಿ ನಾನು ಕೊಡಬೇಕಿದ್ದ ಹಣಕ್ಕೆ ಅಷ್ಟು ಹಾಲು-ಕಾಫಿಯೂ ನನ್ನ ಪಾಲಿನದೇ ಆಗಿತ್ತು, ಆದರೆ ಹಾಗಂತ ಗೊತ್ತಾಗಲೇ ಇಲ್ಲ. ಒಂದೇ ಕಪ್‌ ಕಾಫಿ ಕುಡಿದು ಮಿಕ್ಕಿದ್ದನ್ನು ಅಲ್ಲೇ ಬಿಟ್ಟುಬಿಟ್ಟೆ. ಬಿಲ್‌ ನೋಡಿದಾಗ ಎದೆ ಒಡೆಯಿತು. ಆದರೇನು ಮಾಡುವುದು? ನಿರ್ವಾಹವಿರಲಿಲ್ಲ.

ಮದರಾಸಿನಿಂದ ನಾಗಪುರಕ್ಕೆ ಅದೆಷ್ಟೋ ಗಂಟೆಗೆ ರೈಲು ಇತ್ತು. ಅದರ ಟಿಕೆಟ್‌ ವಿಚಾರಿಸಿದೆ. ಆದರೆ ನನ್ನ ಬಳಿ ಅಷ್ಟು ಹಣ ಉಳಿದಿರಲಿಲ್ಲ. ಆಗ ಅಲ್ಲೇ ಹೊಂಚು ಹಾಕುತ್ತಿದ್ದ ವ್ಯಕ್ತಿಯೊಬ್ಬ ತಾನು ಟಿಕೆಟ್‌ ತಂದು ಕೊಡುವುದಾಗಿ ಹೇಳಿ ಹಣ ಇಸಕೊಂಡು ಟಿಕೆಟ್‌ ತಂದು ಕೊಟ್ಟ: ನೋಡಿದರೆ ಅದು ಅರ್ಧ ಟಿಕೆಟ್!‌ “ಏನೂ ಪರವಾಗಿಲ್ಲ. ಟಿಕೆಟ್‌ ಇನ್ಸ್‌ಪೆಕ್ಟರ್‌ ಬಳಿ ಸ್ಟೂಡೆಂಟು ಅಂತ ಹೇಳಿ ರಿಕ್ವೆಸ್ಟ್‌ ಮಾಡಿಕೊ, ಒಪ್ಪಿಕೊಳ್ತಾರೆ” ಅಂತ ಪುಸಲಾಯಿಸಿ, ಉಳಿದ ಒಂದಷ್ಟು ಹಣವನ್ನೂ ತೆಗೆದುಕೊಂಡು ಹೊರಟುಹೋದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ನಾಗಪುರ

ರೈಲಿನಲ್ಲಿ ಈಗ ಸೆಕೆಂಡ್‌ ಕ್ಲಾಸ್, ʻಸ್ಲೀಪರ್‌ ಕ್ಲಾಸ್‌ʼ ಅಂತ ಇವೆಯಲ್ಲ, ಆಗ ಅವಕ್ಕೆ ಸೆಕೆಂಡ್‌ ಕ್ಲಾಸ್ ಮತ್ತು ಥರ್ಡ್‌ ಕ್ಲಾಸ್‌ ಎಂದು ಹೆಸರಿತ್ತು. ಥರ್ಡ್‌ ಕ್ಲಾಸ್‌ನಲ್ಲಿ ಹಮಾಲಿಗಳು ಎಲ್ಲ ಸೀಟುಗಳಿಗೂ ಬಟ್ಟೆ ಹಾಸಿ ಇಟ್ಕೊಂಡಿರುತ್ತಿದ್ದರು. ಸೀಟು ಬೇಕಿದ್ದರೆ ಅವರಿಗೆ ದುಡ್ಡು ಕೊಡಲೇ ಬೇಕಿತ್ತು. (ಸೆಕೆಂಡ್‌ ಕ್ಲಾಸ್ ಅಂತ ಹೆಸರಾದ ಮೇಲೂ ಈ ಪದ್ಧತಿ ಬಹಳ ಕಾಲ ಮುಂದುವರಿದಿತ್ತು, ಬಹುಶಃ ಈಗ ಇಲ್ಲ ಅಂದ್ಕೊಂಡಿದೀನಿ.) ನಾನು ಇದ್ದುದರಲ್ಲೇ ನಾಲ್ಕಾಣೆಯೋ ಎಂಟಾಣೆಯೋ ಕೊಟ್ಟು ಸೀಟು ತಗೊಂಡೆ. ರಾತ್ರಿ ಲಗೇಜು ಇರಿಸುವ ಅಟ್ಟಣಿಗೆಯಲ್ಲಿ ಸೀಟು ಹಿಡಿದಿದ್ದ ಇನ್ನೊಬ್ಬ ಪ್ರಯಾಣಿಕೆನಿಗೆ ಒಂದು ರೂಪಾಯಿ ಕೊಟ್ಟು, ಅದರಲ್ಲಿ ಇಬ್ಬರೂ ಮಲಗುವ ವ್ಯವಸ್ಥೆ ಮಾಡಿಕೊಂಡೆ. ಮಾರನೇ ದಿನ ಹಗಲಿನಲ್ಲಿ ಟಿಟಿ ಬಂದೇ ಬಿಟ್ಟರು. ನನ್ನ ಅರ್ಧ ಟಿಕೆಟ್‌ ನೋಡಿ, ಮುಂದಿನ ಸ್ಟೇಶನ್ನಿನಲ್ಲಿ ಪೊಲೀಸಿಗೆ ಕೊಡುವುದಾಗಿ ವರಾತ ತೆಗೆದರು. ನಾನು ಅವರೊಂದಿಗೆ ರಿಕ್ವೆಸ್ಟ್‌ ಮಾಡುತ್ತಲೇ ಅಳು ಬರತೊಡಗಿತು. ನನಗಾಗ ಮಾತಿಗೆ ಮುಂಚೆ ಅಳು ಬರುತ್ತಿತ್ತು! ಆಗ ಸಹಪ್ರಯಾಣಿಕರು ಎಲ್ಲಿಗೆ? ಎತ್ತ? ಅಂತ ವಿಚಾರಿಸಿದರು. ನಾನು ಆರನೇ ತರಗತಿಯಿಂದಲೇ ʻದ.ಭಾ. ಹಿಂದಿ ಪ್ರಚಾರ ಸಭಾʼದ ವಿಶೇಷ ಹಿಂದಿ ಪರೀಕ್ಷೆಗಳನ್ನು ಪಾಸು ಮಾಡಿದ್ದೆ; ಮನೆಯಲ್ಲಿ ನಾವು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು ಹಿರಿಯರಿಗೆ ಗೊತ್ತಾಗದಂತೆ ಏನಾದರೂ ಗುಟ್ಟು ಮಾತಾಡಿಕೊಳ್ಳಲು ಹಿಂದಿಯಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಮತ್ತು ಪಿಯೂಸಿಗೆ ಉಡುಪಿಗೆ ಹೋದ ಮೇಲೆ ಕೆಲವಷ್ಟು ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದೆ. ಹೀಗಾಗಿ ನನಗೆ ಹಿಂದಿಯಲ್ಲಿ ಮಾತಾಡಲು ಸಾಕಷ್ಟು ಚೆನ್ನಾಗಿಯೇ ಬರುತ್ತಿತ್ತು. ಅಣ್ಣನ ಬಳಿಗೆ ಹೋಗುತ್ತಿದ್ದೇನೆಂದು ಹೇಳಿದ್ದರಿಂದ ಸಹಪ್ರಯಾಣಿಕರು ಟಿಟಿಗೆ ಹೇಳಿ ನನ್ನನ್ನು ʻಖುಲಾಸೆʼ ಮಾಡಿಸಿದರು.

ಆದರೆ ʻಸಾಕೋಲಿಗೆ ಹೋಗಲು ನಾಗಪುರಕ್ಕೆ ಹೋಗಬಾರದು, ಅದು ಇನ್ನೂ ಮುಂದೆ ತುಂಬಾ ದೂರʼ ಎಂದು ತಿಳಿಸಿ, ನಾಗಭೀಡ್‌ ಎಂಬ ನಿಲ್ದಾಣದಲ್ಲಿ ಇಳಿದುಕೊಂಡು, ಬೆಳಿಗ್ಗೆ 6 ಗಂಟೆಗೆ ಎದುರು ದಿಕ್ಕಿನಿಂದ ಬರುವ ಇನ್ನೊಂದು ರೈಲಿನಲ್ಲಿ ಚಂದ್ರಪುರಕ್ಕೆ ಹೋಗಿ ಅಲ್ಲಿಂದ ಸಾಕೋಲಿಗೆ ಹೋಗಬೇಕೆಂದು ತಿಳಿಸಿ, ಸ್ವಲ್ಪ ಚಿಲ್ಲರೆ ಹಣವನ್ನೂ ನೀಡಿದರು. ಅಂದರೆ ನಾನು ತಲುಪಬೇಕಾಗಿದ್ದುದಕ್ಕಿಂತ ಸಾಕಷ್ಟು ದೂರ ಮುಂದಕ್ಕೆ ಹೋಗಿದ್ದೆ. ಅಪರಾತ್ರಿ ಎರಡೋ ಮೂರೋ ಗಂಟೆಯಲ್ಲಿ ನಾಗಭೀಡ್‌ನಲ್ಲಿ ಇಳಿದುಕೊಂಡೆ. ಸ್ಟೇಶನ್ನಿನಲ್ಲೇ ಟ್ರಂಕಿಗೆ ತಲೆ ಕೊಟ್ಟು ಸ್ವಲ್ಪ ನಿದ್ದೆ ಮಾಡಿ ಬೆಳಗಿನ ಜಾವ ಎದ್ದು ಅಲ್ಲೇ ಒಂದು ಬನ್ ತಿಂದು ಟೀ ಕುಡಿದೆ. ನಂತರ ಬಂದ ರೈಲಿನಲ್ಲಿ ಚಂದ್ರಪುರಕ್ಕೆ, ಅಲ್ಲಿಂದ ಸಾಕೋಲಿಗೆ ತಲುಪಿದೆ. ಅಲ್ಲಿ ಯಾರನ್ನೋ ವಿಚಾರಿಸಿ ಅರ್ಜುನಿ ಎಂಬ ಹಳ್ಳಿಯನ್ನು ಹುಡುಕಿಕೊಂಡು ಕಾಲುದಾರಿಯಲ್ಲಿ ನಡೆದುಕೊಂಡು ಹೋದೆ. ಆಗ ಅಲ್ಲೆಲ್ಲಾ ಚೆನ್ನಾಗಿ ಮಳೆಯಾಗಿ, ದಾರಿ ಎಲ್ಲ ಕೆಸರಾಗಿತ್ತು. ಗದ್ದೆ ಅಂಚುಗಳಲ್ಲಿ ಜಾರುತ್ತ ಸಾವರಿಸುತ್ತ ಅರ್ಜುನಿ ತಲುಪಿದರೆ, ಆ ಕುಗ್ರಾಮದಲ್ಲಿ ನನಗೆ ಬೇಕಾಗಿದ್ದ ನಮ್ಮಣ್ಣನ ಮಿತ್ರರಾದ ಎಂಜಿನಿಯರಿಂಗ್‌ ಸೂಪರ್‌ವೈಸರ್ ಸುಬ್ರಮಣ್ಯ ಅವರನ್ನಾಗಲಿ, ಅವರ ತಮ್ಮನನ್ನಾಗಲಿ ಬಲ್ಲವರು ಸುಲಭಕ್ಕೆ ಸಿಗಲಿಲ್ಲ. ಕೊನೆಗೆ ಸಿಕ್ಕ ಯಾರೋ ಒಬ್ಬರು ಮಹಾರಾಷ್ಟ್ರ ನೀರಾವರಿ ಇಲಾಖೆ ನೌಕರರು, ʻಅವರು ಇಲ್ಲಿ ಇರುವುದಲ್ಲ, ಸಾಕೋಲಿಯಲ್ಲೇ ಇರುತ್ತಾರೆʼ ಅಂತ ಹೇಳಿ, ಅಲ್ಲಿ ಯಾರನ್ನು ಕಾಣಬೇಕೆಂದು ವಿಳಾಸ ಕೊಟ್ಟರು. ಬಂದ ದಾರಿಗೆ ಸುಂಕವಿಲ್ಲವೆಂದುಕೊಳ್ಳುತ್ತ ಸಾಕೋಲಿಗೆ ಹಿಂದಿರುಗಿ, ಅವರು ಹೇಳಿದ್ದ ವ್ಯಕ್ತಿಯ ಬಳಿ ಹೋದೆ.

ಎರಡೂವರೆ ದಿನದ ನಿದ್ರೆಯಿಲ್ಲದ ಪ್ರಯಾಣ, ಅರೆಹೊಟ್ಟೆ-ಉಪವಾಸ, ಕೆಸರ ಹಾದಿಯ ನಡಿಗೆ ಎಲ್ಲ ಸೇರಿ ದಣಿದು ಹೋಗಿದ್ದೆ. ಅವರು ಊಟ ಕೊಟ್ಟು, ʻಸುಬ್ರಮಣ್ಯ ಅವರು ಸಾಕೋಲಿಯಲ್ಲೇ ಬೇರೆ ಕಡೆ ಇರುತ್ತಾರೆ, ಅವರು ಸಿಗುವುದು ಸಂಜೆಯಾಗುತ್ತೆʼ ಎಂದು ತಿಳಿಸಿ ಸ್ವಲ್ಪ ಮಲಗಲು ಹೇಳಿದರು. ಸಂಜೆ ಅವರೇ ಸುಬ್ರಮಣ್ಯ ಅವರಿದ್ದಲ್ಲಿಗೆ ನನ್ನನ್ನು ಕರೆದುಕೊಂಡು ಹೋಗಿ ತಲುಪಿಸಿದರು. ನನ್ನನ್ನು ನೋಡಿ ನಮ್ಮಣ್ಣ ಸುಬ್ಬಣ್ಣ ಹೌಹಾರಿಬಿಟ್ಟ. ಅವನಿಗೆ ಒಂಥರಾ ಅಯೋಮಯ ಆಗಿಬಿಟ್ಟಿತು: ಇದೇನು ಕನಸೋ ನನಸೋ ಎಂಬಂತಾಯಿತು. ಸಾವರಿಸಿಕೊಂಡು, ನನಗೆ ಸ್ನಾನ ಮಾಡಲು ಹೇಳಿ, ನಂತರ ನನ್ನ ಸಂಗತಿಯನ್ನೆಲ್ಲ ವಿಚಾರಿಸಿಕೊಂಡ. ಕೂಡಲೇ ಟೆಲಿಗ್ರಾಫ್‌ ಆಫೀಸಿಗೆ ಹೋಗಿ, ʻನಾಗರಾಜ ನನ್ನಲ್ಲಿಗೆ ಬಂದಿದ್ದಾನೆ, ಯಾರೂ ಗಾಬರಿಯಾಗಬೇಡಿʼ ಅಂತ ಮೈಸೂರಿಗೂ, ಸಿರಿಮನೆಗೂ ಟೆಲಿಗ್ರಾಂ ಕಳಿಸಿದ.

ಅತ್ತ ಮೈಸೂರಿನಲ್ಲಿ, ಎರಡು ದಿನ ಕಳೆದರೂ ನಾನು ಮನೆಗೆ ವಾಪಸಾಗದಿದ್ದಾಗ ಅಣ್ಣಯ್ಯ-ಅತ್ತಿಗೆ ಗಾಬರಿ ಬಿದ್ದರು. ನನಗೆ ಹೊಳೆ, ಈಜು ಅಂದರೆ ವಿಪರೀತ ಹುಚ್ಚು ಅಂತ ಗೊತ್ತಿದ್ದರಿಂದ ಅವರ ಗಾಬರಿ ಇನ್ನೂ ಹೆಚ್ಚಾಯಿತು. ಕಂಪ್ಲೇಂಟ್‌ ಕೊಡುವುದೋ ಬೇಡವೋ ಎಂದು ಯೋಚಿಸುತ್ತ, ಊರಿಗೆ ಹೋಗಿರಬಹುದೇನೋ ನೋಡೋಣ ಅಂದುಕೊಂಡು ಮೊದಲು ಸಿರಿಮನೆಗೆ ಟೆಲಿಗ್ರಾಂ ಕಳಿಸಿದರು. ಅಲ್ಲೂ ಎಲ್ಲರೂ ಗಾಬರಿಯಾದರು. ಆಗೆಲ್ಲ ಫೋನ್‌ ಸೌಕರ್ಯ ಈಗಿನಂತಿರಲಿಲ್ಲ. ಶೃಂಗೇರಿಯಲ್ಲಿ ಅನುಕೂಲಸ್ಥ ನಾಲ್ಕಾರು ಜನರಿಗೆ ಫೋನ್‌ ಇದ್ದಿರಬಹುದು ಅಷ್ಟೇ. ಅಲ್ಲಿಂದ ಮುಂದಕ್ಕೆಲ್ಲೂ ಫೋನ್‌ ಹೋಗಿರಲಿಲ್ಲ. ಟೆಲಿಗ್ರಾಂ ಮಾಡಿದರೂ ಅದು ಶೃಂಗೇರಿಗೆ ತಲುಪಿ ಮಾರನೇ ದಿನ ನಮ್ಮ ಅಂಚೆ ಕಚೇರಿ ಇರುವ ಕಿಗ್ಗ ಎಂಬ ಹೋಬಳಿ ಕುಗ್ರಾಮಕ್ಕೆ ತಲುಪಿ, ಅಲ್ಲಿಂದ ಯಾರಾದರೂ ಸಿರಿಮನೆಗೆ ಹೋಗುವವರು ಸಿಕ್ಕಿದಾಗ ಅವರ ಕೈಯಲ್ಲಿ ನಮ್ಮನೆಗೆ ತಲುಪಬೇಕಿತ್ತು. ನಾನು ಶ್ರೀರಂಗಪಟ್ಟಣದಿಂದ ಹಿಂದಿರುಗುವುದು ಎರಡು ದಿನ ಆಗಬಹುದು ಅಂತ ಮುಂದಾಲೋಚನೆಯಿಂದ ಹೇಳಿದ್ದು ಒಳ್ಳೆಯದಾಗಿತ್ತು; ಅಣ್ಣಯ್ಯ ಎರಡು ದಿನದ ನಂತರವಷ್ಟೇ ಗಾಬರಿಗೊಂಡಿದ್ದರು. ಇಷ್ಟೆಲ್ಲಾ ಟೆಲಿಗ್ರಾಂ ವ್ಯವಹಾರವೆಲ್ಲಾ ಆಗುವಷ್ಟರಲ್ಲಿ ಮೂರು ದಿನ ಕಳೆದು ಹೋಗಿತ್ತು. ಅಷ್ಟರಲ್ಲಿ ಸುಬ್ಬಣ್ಣನ ʻಸೌಖ್ಯʼದ ಟೆಲಿಗ್ರಾಂ ಎರಡು ಕಡೆಗೂ ತಲುಪಿ, ಎಲ್ಲರೂ ಇದ್ದುದರಲ್ಲೇ ನಿರಾಳವಾದರು.

ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಸಾಕೋಲಿ ಮುಂತಾದ ಪ್ರದೇಶಗಳು ಬಹುಶಃ ಅರೆಮಲೆನಾಡಿನಂತೆ ಇದ್ದಿರಬೇಕು. ಆ ಸುತ್ತಮುತ್ತಲೆಲ್ಲ ಸಣ್ಣ-ಮಧ್ಯಮ ನೀರಾವರಿ ಯೋಜನೆಗಳ ಸರಮಾಲೆಯೇ ನಡೆಯುತ್ತಿತ್ತು. ಸುಬ್ರಮಣ್ಯ ಅವರು ನನ್ನನ್ನು ಏಳೆಂಟು ದಿನ ಇರಿಸಿಕೊಂಡು, ಡ್ಯಾಂ ಕೆಲಸ ನಡೆಯುತ್ತಿದ್ದ ಸೈಟುಗಳಿಗೆ ಕರೆದುಕೊಂಡು ಹೋಗಿ ಸುತ್ತಾಡಿಸಿದರು. ಆಮೇಲೆ ಕೂರಿಸಿಕೊಂಡು, “ನೀನು ಬಹಳ ಬುದ್ಧಿವಂತ ಹುಡುಗ. ಚೆನ್ನಾಗಿ ಓದಿ ಬಿಎಸ್ಸಿ ಮುಗಿಸು. ಅಲ್ಲೆಲ್ಲೂ ಕೆಲಸ ಸಿಗದಿದ್ದರೆ ನಾನು ಕೆಲಸ ಕೊಡಿಸ್ತೀನಿ…” ಅಂತೆಲ್ಲ ಪುಸಲಾಯಿಸಿ (ರಮಿಸಿ) ಊರಿಗೆ ವಾಪಸ್‌ ಹೋಗಲು ಒಪ್ಪಿಸಿದರು. ನಂತರ ಸುಬ್ಬಣ್ಣ ನನ್ನನ್ನು ಚಂದ್ರಪುರಕ್ಕೆ ಕರೆದೊಯ್ದು, ಮದರಾಸು ರೈಲು ಹತ್ತಿಸಿ ಕಳಿಸಿಕೊಟ್ಟ. ಎರಡು ದಿನದ ನಂತರ ಪುನಃ ಬಟ್ಟೆ-ಮೈಯೆಲ್ಲ ಕೊಳೆ ಮಾಡಿಕೊಂಡು ಮೈಸೂರು ತಲುಪಿದೆ. ಬಹಳ ಲಿಬರಲ್‌ ವ್ಯಕ್ತಿಯಾಗಿದ್ದ ಅಣ್ಣಯ್ಯ ನನಗೇನೂ ಬಯ್ದುಗಿಯ್ದು ಮಾಡಲಿಲ್ಲ. ನನ್ನ ಸಮ ವಯಸ್ಕರೂ, ಪ್ರೈಮರಿ ಸ್ಕೂಲ್‌ ಸಹಪಾಠಿಯೂ ಆಗಿದ್ದ ಅತ್ತಿಗೆ ಮಾತ್ರ ಒಂದೆರಡು ದಿನ ತಮಾಷೆ ಮಾಡಿ ನೆಗಾಡಿದರು ಅಷ್ಟೇ. ಊರು ಬಿಟ್ಟು ಹೋಗಿದ್ದೂ ಆಯಿತು, ಬಂದಿದ್ದೂ ಆಯಿತು. ಈಗ ಪುನಃ ಅದೇ ʻಬೇಡದʼ ಬಿಎಸ್ಸಿಗಾಗಿ
ಅದೇ ʻಬೇಡದʼ ಕಾಲೇಜಿಗೆ ಹೋಗಲೇಬೇಕಾಯಿತು. ಅದಾಗಲೇ ಹದಿನೈದಿಪ್ಪತ್ತು ದಿನ ಕಾಲೇಜಿಗೆ ಚಕ್ಕರ್‌ ಆಗಿತ್ತು. ಮತ್ತೊಂದು ಕೆಲವು ದಿನವೋ ಒಂದೆರಡು ವಾರವೋ ಕಳೆಯುವುದರೊಳಗೆ ವಿದ್ಯಾರ್ಥಿಗಳ ʻಎಕ್ಸ್‌ಪೊʼ ಚಳವಳಿ ಭುಗಿಲೆದ್ದಿತು. ಈಗ ನಮ್ಮ ರಾಜ್ಯದ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ ಎಂದರೇನೆಂದೇ ಗೊತ್ತಿಲ್ಲದ ಸ್ಥಿತಿ ಇದೆ.

ಇದನ್ನೂ ಓದಿ ಜೋಳಿಗೆ | ಮೈಸೂರಿನಲ್ಲಿ 12 ವರ್ಷ ನನ್ನ ಸಾಮಾಜಿಕ ಬದುಕು…

ಬೇರೆ ರಾಜ್ಯಗಳಲ್ಲೂ ಹೀಗೇ ಇರಬಹುದು. ಆದರೆ ನಮ್ಮ ಕಾಲದಲ್ಲಿ ಎಲ್ಲ ಕಾಲೇಜಿನಲ್ಲೂ ವಿದ್ಯಾರ್ಥಿ ಸಂಘಗಳು ಇರುತ್ತಿದ್ದವು, ಅವಕ್ಕೆ ಪ್ರತಿ ವರ್ಷ ಚುನಾವಣೆ ನಡೆಯುತ್ತಿತ್ತು. ಆ ಚುನಾವಣೆಗಳು ಎಷ್ಟು ರಂಗೇರುತ್ತಿದ್ದವು ಎಂದರೆ, ಅವುಗಳಲ್ಲಿ ರಾಜಕೀಯ ಪಕ್ಷಗಳೂ ಆಸಕ್ತಿ ವಹಿಸುತ್ತಿದ್ದವು, ಮೂಗು ತೂರಿಸುತ್ತಿದ್ದವು. ಆಗ ರಾಜಕೀಯದಲ್ಲಿ ಪ್ರಮುಖವಾಗಿ ಇದ್ದುದು ಎರಡೇ ಪಕ್ಷಗಳು: ಕಾಂಗ್ರೆಸ್‌ ಮತ್ತು ಭಾರತೀಯ ಜನಸಂಘ (ಬಿಜೆಪಿಯ ಪೂರ್ವಾಶ್ರಮದ ಪಕ್ಷ). (ಜನತಾ ಪಕ್ಷ ಇನ್ನೂ ಹುಟ್ಟಿರಲಿಲ್ಲ) ಎರಡಕ್ಕೂ ಅವುಗಳದ್ದೇ ಆದ ಎನ್‌ಎಸ್‌ಯೂಐ (NSUI) ಮತ್ತು ಎಬಿವಿಪಿ (ABVP) ಎಂಬ ವಿದ್ಯಾರ್ಥಿ ಸಂಘಟನೆಗಳಿದ್ದವು. ಸಿಪಿಐ ಮತ್ತು ಸಿಪಿಎಂ ಪಕ್ಷಗಳಿಗೂ ಎಐಎಸ್ಎಫ್‌ (AISF) ಮತ್ತು ಎಸ್‌ಎಫ್‌ಐ (SFI) ಎಂಬ ವಿದ್ಯಾರ್ಥಿ ಸಂಘಟನೆಗಳು ಇದ್ದವಾದರೂ ಅಷ್ಟು ಪ್ರಚಲಿತದಲ್ಲಿರಲಿಲ್ಲ. ಕಾಲೇಜುಗಳ ವಿದ್ಯಾರ್ಥಿ ಸಂಘಗಳಲ್ಲಿ ಈ ರಾಜಕೀಯ ವಿದ್ಯಾರ್ಥಿ ಸಂಘಟನೆಗಳೂ ಪರೋಕ್ಷವಾಗಿ ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸುತ್ತಿದ್ದವು, ಅಲ್ಲದೆ ಸ್ವತಂತ್ರ ಅಭ್ಯರ್ಥಿಗಳೂ ಸ್ಪರ್ಧಿಸುತ್ತಿದ್ದರು. ಹೀಗೆ ಆಯ್ಕೆಯಾದ ವಿದ್ಯಾರ್ಥಿ ಸಂಘಗಳು ಕಾಲೇಜಿನ ವಿದ್ಯಾರ್ಥಿ ಚಟುವಟಿಕೆಗಳ ಮತ್ತು ಯಾವುದೇ ಸಮಸ್ಯೆಗಳ ವಿಚಾರದಲ್ಲಿ ವಿದ್ಯಾರ್ಥಿಗಳಿಗೂ ಆಡಳಿತ ಮಂಡಳಿಗೂ ನಡುವಿನ ಸೇತುವೆಯಾಗಿರುತ್ತಿದ್ದವು. ಜೊತೆಗೆ ಪ್ರತಿವರ್ಷದ ಆರಂಭದಲ್ಲಿ ಬಸ್‌ ದರ ಅಥವಾ ಹೋಟೆಲ್‌ ತಿಂಡಿಗಳ ದರ ಏರಿಕೆಯೋ, ಇಲ್ಲಾ ಫೀ ಹೆಚ್ಚಳವೋ ಯಾವುದಾದರೊಂದು ವಿಚಾರಕ್ಕೆ ನಗರದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳೂ ಒಟ್ಟಾಗಿ ಪ್ರತಿಭಟನೆ, ಹೋರಾಟ, ಮುಷ್ಕರ ನಡೆಸುವುದು, ಅದರಿಂದಾಗಿ ಒಂದೆರಡು ದಿನ ಕಾಲೇಜುಗಳು ಬಂದ್‌ ಆಗುವುದು ಕೂಡ ಮಾಮೂಲಿಯಾಗಿತ್ತು. ಹಾಗೆಯೇ ʻಎಕ್ಸ್‌ಪೊʼ ಚಳವಳಿಯಲ್ಲೂ ವಿದ್ಯಾರ್ಥಿ ಸಂಘಗಳು ಬಹಳ ಪ್ರಮುಖ ಪಾತ್ರ ವಹಿಸಿದ್ದವು. ಚಳವಳಿ ದಿನ ದಿನಕ್ಕೂ ಉಗ್ರವಾಗತೊಡಗಿತು.

ಒಂದೆರಡು ವಾರ ಕಳೆದರೂ ಅದು ತಣಿಯದಿದ್ದಾಗ, ಸರ್ಕಾರ ನವರಾತ್ರಿ ರಜೆಯನ್ನೇ ಕೆಲ ದಿನ ಹಿಂದೂಡಿ, ಅಕ್ಟೋಬರ್ ತಿಂಗಳ ಆರಂಭದಲ್ಲೇ ಕಾಲೇಜುಗಳಿಗೆ ದೀರ್ಘ ರಜೆ ಘೋಷಿಸಿಬಿಟ್ಟಿತು.

(ಮುಂದೆ: ಎಕ್ಸ್‌ಪೊ ಚಳವಳಿ, ನನ್ನ ಟೈಫಾಯ್ಡ್‌ – ಮರುಕಳಿಕೆ, ಆ ವರ್ಷದ ಮಟ್ಟಿಗೆ ಕಾಲೇಜಿಗೆ ಬೈಬೈ.)

WhatsApp Image 2025 11 17 at 5.25.56 PM
ಸಿರಿಮನೆ ನಾಗರಾಜ್‌
+ posts

ಲೇಖಕ, ಸಾಮಾಜಿಕ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಸಿರಿಮನೆ ನಾಗರಾಜ್‌
ಸಿರಿಮನೆ ನಾಗರಾಜ್‌
ಲೇಖಕ, ಸಾಮಾಜಿಕ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...