ನುಡಿಯಂಗಳ | ಓದುವ ಕೌಶಲದ ವಿಹಂಗಮ ನೋಟ

Date:

ಆಲಿಸುವುದು, ಮಾತಾಡುವುದು, ಓದುವುದು ಮತ್ತು ಬರೆಯುವುದು ಇವುಗಳನ್ನು ನಾಲ್ಕು ಭಾಷಾ ಕೌಶಲಗಳು ಎಂದು ಗುರುತಿಸಲಾಗುತ್ತದೆ. ಭಾಷೆಯ ಸಮರ್ಥ ಪ್ರಯೋಜನವನ್ನು ಪಡೆಯಬೇಕು ಎಂದರೆ ನಮಗೆ ಒಂದು ಭಾಷೆಯಲ್ಲಿ, ಉದಾಹರಣೆಗೆ ಕನ್ನಡ ಭಾಷೆಯಲ್ಲಿ ಈ ನಾಲ್ಕೂ ಕೌಶಲಗಳು ಚೆನ್ನಾಗಿ ಕರಗತವಾಗಿರಬೇಕಾಗುತ್ತದೆ.

ಓದುವುದು ಎಂದರೇನು ಎಂದು ನಿಮಗೆ ಕೇಳಿದರೆ, ನೀವು, “ಇದೇನು ಮಾರಾಯ, ನಿನ್ನ ಅಂಕಣ ‘ಓದು’ತ್ತಾ ಬಂದಿದ್ದೇನೆ, ಈಗಲೂ ಈ ಲೇಖನವನ್ನು ‘ಓದು’ತ್ತಿದ್ದೇನೆ. ಅದರ ಮೇಲೆ ‘ಓದುವುದು ಎಂದರೇನು?’ ಎಂದು ಕೇಳಿದರೆ ಏನು ಹೇಳುವುದು?” ಎನ್ನುವಿರಿ.

ನಿಜ, ಇದು ತುಂಬಾ ಸುಲಭವಾದ ಪ್ರಶ್ನೆ, ಏಕೆಂದರೆ, ಅದರ ಉತ್ತರವೂ ಅಷ್ಟೇ ಸುಲಭ ಎಂದು ನಮಗೆ ಅನ್ನಿಸುತ್ತದೆ. ಆದರೆ, ಓದುವುದು ಎನ್ನುವುದು ಒಂದು ‘ಪ್ರಕ್ರಿಯೆ’ ಎಂಬಂತೆ ನೋಡಿದಾಗ, ಅದರ ವಿವಿಧ ಘಟಕಗಳ ಪರಿಚಯವಾದಾಗ, ಒಂದು ಮೊಬೈಲಿನ ಬಗ್ಗೆ ಹೆಚ್ಚು ಚೆನ್ನಾಗಿ ತಿಳಿದುಕೊಂಡಷ್ಟೂ ಅದನ್ನು ಚೆನ್ನಾಗಿ ನಮ್ಮ ಪ್ರಯೋಜನಕ್ಕಾಗಿ ಬಳಸಿಕೊಳ್ಳಬಹುದು ಎನ್ನುವ ಹಾಗೆ, ಓದುವುದು ಎನ್ನುವುದನ್ನೂ ಈಗಿನದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದು ನನ್ನ ನಂಬಿಕೆ. ಹೀಗಾಗಿ ಸರಳ ಎನ್ನಿಸಿದರೂ, ಒಮ್ಮೆ ಈ ವಿಚಾರವನ್ನು ಪುನರ್ಮನನ ಮಾಡಿಕೊಳ್ಳೋಣ.

WhatsApp Image 2025 07 17 at 8.27.06 PM

ಆಲಿಸುವುದು, ಮಾತಾಡುವುದು, ಓದುವುದು ಮತ್ತು ಬರೆಯುವುದು ಇವುಗಳನ್ನು ನಾಲ್ಕು ಭಾಷಾ ಕೌಶಲಗಳು ಎಂದು ಗುರುತಿಸಲಾಗುತ್ತದೆ. ಭಾಷೆಯ ಸಮರ್ಥ ಪ್ರಯೋಜನವನ್ನು ಪಡೆಯಬೇಕು ಎಂದರೆ ನಮಗೆ ಒಂದು ಭಾಷೆಯಲ್ಲಿ, ಉದಾಹರಣೆಗೆ ಕನ್ನಡ ಭಾಷೆಯಲ್ಲಿ ಈ ನಾಲ್ಕೂ ಕೌಶಲಗಳು ಚೆನ್ನಾಗಿ ಕರಗತವಾಗಿರಬೇಕಾಗುತ್ತದೆ. ಓದುವ ಕೌಶಲದ ವಿಚಾರ ಬಂದಾಗ, ಬರಹದ ವಿಷಯವು, ವಿಜ್ಞಾನ, ಸಾಹಿತ್ಯ, ಆಡಳಿತ ಸಾಹಿತ್ಯ, ಪತ್ರಿಕಾ ಲೇಖನ, ಸುದ್ದಿ ಹೀಗೆ ಯಾವುದೇ ಆಗಿರಬಹುದು, ಕನ್ನಡದಲ್ಲಿ ಬರೆದಿರುವುದನ್ನು ಪ್ರಯೋಜನಕಾರಿಯಾಗಿ ಅರ್ಥ ಮಾಡಿಕೊಳ್ಳಲು ಸಮರ್ಥವಾದ ಓದುವ ಕೌಶಲ ನಮ್ಮಲ್ಲಿ ಇರಬೇಕಾಗುತ್ತದೆ.

ಸಂವಹನದಲ್ಲಿ ಮಾತನ್ನು ಬಳಸಿದಾಗ ಒಬ್ಬರು ಮಾತಾಡುತ್ತಾರೆ, ಇನ್ನೊಬ್ಬರು ಅಥವಾ ಹಲವರು ಅದನ್ನು ಆಲಿಸಿ, ಅರ್ಥ ಮಾಡಿಕೊಳ್ಳುತ್ತಾರೆ. ಈ ಕ್ರಿಯೆಯ ಬಗ್ಗೆ ನನ್ನದೇ ನುಡಿಯಂಗಳದಲ್ಲಿ ಇದೇ 2025ರ ಮಾರ್ಜ್ 16ರಂದು ಪ್ರಕಟವಾದ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ. [ನೋಡಿ: https://eedina.com/columns/nuduyangala-communication-encoding-decoding-etc-1015/2025-03-19/ ]
ಇಲ್ಲಿ ನಾವು ಬರಹದ ಮೂಲಕ ನಡೆಯುವ ಸಂವಹನದ ವಿಚಾರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಬರಹದ ಮೂಲಕ ಸಂವಹನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 07 17 at 8.27.06 PM1

ಇಲ್ಲಿ ಸಂವಹನ ಕ್ರಿಯೆಯು ಬರಹಗಾರರಿಂದ ಆರಂಭವಾಗುತ್ತದೆ. ತಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಅವರು ಕೈಬರಹದಲ್ಲೋ, ಟೈಪು ಮಾಡುವುದರ ಮೂಲಕವೋ ಪುಟದ ಮೇಲೆ ಇರಿಸುತ್ತಾರೆ. ಇಲ್ಲಿ ಇದನ್ನು ಗ್ರಹಿಸುವ ಓದುಗರ ವರ್ಗ ಯಾವುದು ಎನ್ನುವ ಕುರಿತು ಸ್ಥೂಲವಾದ ಅರಿವು ಇರುತ್ತದೆ. ಆದರೂ ನಿರ್ದಿಷ್ಟವಾಗಿ ಅದನ್ನು ಓದುವವರು ಯಾರು ಎಂಬ ಕಲ್ಪನೆ ಬರೆಯುವವರಿಗೆ ಇರುವುದಿಲ್ಲ. ಓದುಗರು ಮುಖಾಮುಖಿ ಇರುವುದಿಲ್ಲ. ಬರೆದಿರುವುದು ಅವರಿಗೆ ಅರ್ಥವಾಯಿತೋ ಇಲ್ಲವೋ ಎಂಬುದ ಹಿಮ್ಮಾಹಿತಿ ನಮಗೆ ಸಿಗುವುದಿಲ್ಲ. ಮಾತಿನ ಮೂಲಕ ನಡೆಯುವ ಸಂವಹನದಲ್ಲಿ ಹಿಮ್ಮಾಹಿತಿಯನ್ನು ಅನುಸರಿಸಿ ತಿದ್ದಿಕೊಳ್ಳುವ ಅವಕಾಶ ಇಲ್ಲಿ ಇರುವುದಿಲ್ಲ. ಈ ಕಾರಣಕ್ಕಾಗಿ ಬರಹವು ಹೆಚ್ಚು ನಿಖರವಾಗಿರಬೇಕಾಗುತ್ತದೆ. ಪದ, ಪದಪುಂಜ ನುಡಿಗಟ್ಟು, ವಾಕ್ಯ ಸಮರ್ಪಕವಾಗಿ ಬರೆಯಬೇಕು. ಲೇಖನ ಚಿಹ್ನೆಗಳನ್ನು ಸರಿಯಾಗಿ ಬಳಸಿರಬೇಕು. ವಾಕ್ಯವೃಂದಗಳನ್ನು ಸರಿಯಾಗಿ ಸಂಘಟಿಸಬೇಕು. ಅಗತ್ಯವಾದ ಚಿತ್ರಗಳನ್ನು, ಕೋಷ್ಠಕಗಳನ್ನು ಅಳವಡಿಸಿಕೊಳ್ಳುವ ಯೋಜನೆ ಇರಬೇಕು.

ಈ ಹಂತವನ್ನು ನಾವು ಸಂದೇಹದ ಕೋಡೀಕರಣ ಎನ್ನುತ್ತೇವೆ. ಮುಂದಿನ ಹಂತ ಮಾಧ್ಯಮ. ಬರೆಯುವುದು ಸಾಮಾನ್ಯವಾಗಿ ಎದುರಿಗೆ, ಆಗಲೇ ಇಲ್ಲದ ಓದುಗರಿಗಾಗಿ. ಹೀಗಾಗಿ ಅದನ್ನು ಓದುಗರಿಗೆ ತಲುಪಿಸುವ ಒಂದು ಮಾಧ್ಯಮ ಇರಬೇಕಾಗುತ್ತದೆ. ಪುಸ್ತಕ, ಪತ್ರಿಕೆ ಇತ್ಯಾದಿ ಮಾಧ್ಯಮಗಳಾಗುತ್ತವೆ. ಇವು ಮುದ್ರಿತ ರೂಪದಲ್ಲಿ ಓದುಗರ ಕೈಗೆ ತಲುಪಬಹುದು. ಅಥವಾ ಇವತ್ತಿನ ಆಧುನಿಕ ಡಿಜಿಟಲ್ ರೂಪದಲ್ಲಿ ತಲುಪಬಹುದು. ಪ್ರಕಾಶಕರು, ಪತ್ರಿಕೆಗಳು, ಇ-ಪತ್ರಿಕೆಗಳು, ಬ್ಲಾಗುಗಳು, ವೆಬ್ದಾಣಗಳು ಇತ್ಯಾದಿ ಈ ಮಾಧ್ಯಮವನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.

ಪತ್ರಿಕೆ, ಪುಸ್ತಕ ಇತ್ಯಾದಿ ಮಾಧ್ಯಮದ ಮೂಲಕ ಸಾಮಗ್ರಿಯು ಉದ್ದೇಶಿತ ಓದುಗರನ್ನು ತಲುಪಿದ ನಂತರದ ಹಂತ ಡಿಕೋಡೀಕರಣ. ಬರಹಗಾರರು ಕೋಡೀಕರಿಸಿದ ಸಂದೇಶವನ್ನು ಓದುಗರು ಡಿಕೋಡೀಕರಿಸಬೇಕು. ಎಂದರೆ, ಬರಹಗಾರರು ಮಾಧ್ಯಮದ ಮೂಲಕ ಕಳಿಸಿಕೊಟ್ಟ ಸಂದೇಶದ ಬುತ್ತಿಯನ್ನು ಬಿಚ್ಚಿ, ಅದರೊಳಗಿನ ಸಂದೇಶವನ್ನು ಸವಿಯಬೇಕು. ಎಂದರೆ, ಬರಹಗಾರರು ಯಾವ ಭಾಷೆಯಲ್ಲಿ, ಯಾವ ಶೈಲಿಯಲ್ಲಿ ಸಂದೇಶವನ್ನು ಕಟ್ಟಿದ್ದಾರೋ ಆ ಭಾಷೆ, ಶೈಲಿ, ಬರಹ ಇತ್ಯಾದಿ ಗೊತ್ತಿದ್ದರೆ ಮಾತ್ರ ಓದುಗರಿಗೆ ಅದರ ಪ್ರಯೋಜನವಾಗುತ್ತದೆ. ಈ ಹಂತವನ್ನೇ ಓದುವುದು ಎನ್ನುತ್ತೇನೆ. ಈ ಲೇಖನದಲ್ಲಿ ಓದುವ ಕೌಶಲದ ಕುರಿತು ಹೆಚ್ಚು ತಿಳಿದುಕೊಳ್ಳೋಣ.

ಮೂಲಭೂತ ಬುನಾದಿ

ಓದುವುದು ಒಂದು ‘ಪ್ರಕ್ರಿಯೆ’ ಎಂದು ಪರಿಗಣಿಸಬೇಕು. ಇದರಲ್ಲಿ ಹಂತಗಳಿರುತ್ತವೆ. ಅವುಗಳನ್ನು ಬಿಡಿಸಿ ಅರ್ಥ ಮಾಡಿಕೊಂಡಾಗ, ನಮ್ಮಲ್ಲಿ ನಮಗೋ ನಮ್ಮ ವಿದ್ಯಾರ್ಥಿಗಳಿಗೋ, ಮಕ್ಕಳಿಗೋ ಓದುವುದರಲ್ಲಿ ಸಮಸ್ಯೆ ಇದ್ದರೆ, ಅದು ಪ್ರಕ್ರಿಯೆಯ ಯಾವ ಹಂತದಲ್ಲಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ, ಅದು ಸಾಧ್ಯವಾದಾಗ ಆ ಹಂತದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಅದನ್ನು ಬಿಟ್ಟು, ಯಾರಿಗೋ ಕನ್ನಡವನ್ನೇ ‘ಸರಿಯಾಗಿ ಓದುವುದಕ್ಕೆ ಬರುವುದಿಲ್ಲ,’ ಎಂದು ದೂಷಿಸುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಓದುವ ಪ್ರಕ್ರಿಯೆಯಲ್ಲಿ ನಮಗೆ ಈಗಾಗಲೇ ಕೈಬರಹದಲ್ಲೋ, ಮುದ್ರಣದಲ್ಲೋ ಅಥವಾ ಮೊಬೈಲ್ ಅಥವಾ ಕಂಪ್ಯೂಟರ್ ತೆರೆಯ ಮೇಲೆಯೋ ಸಾಮಗ್ರಿ ಒದಗಿರುತ್ತದೆ. ಅದನ್ನು ನಾವು ಓದಬೇಕು. ನಾನು ಇಲ್ಲಿ ಬರೆಯುವ ಅಂಶಗಳು ಕನ್ನಡವನ್ನು ಪರಿಣತ ಮಟ್ಟದಲ್ಲಿ ಓದುತ್ತಿರುವ ನಿಮಗಾಗಿ ಬರೆಯುತ್ತಿದ್ದೇನೆ ಎಂದಲ್ಲ. ಬದಲಿಗೆ ಓದುವ ಪ್ರಕ್ರಿಯೆಯ ಸಮಗ್ರ ಪರಿಚಯವಿದ್ದರೆ, ಓದುವ ಕೌಶಲದಲ್ಲಿ ಏನಾದರೂ ಸಮಸ್ಯೆ, ಅಡಚಣೆ ಇದ್ದ ನಿಮ್ಮ ವಿದ್ಯಾರ್ಥಿಗಳೋ, ಮಕ್ಕಳೋ, ಸಹೋದ್ಯೋಗಿಗಳೋ ಯಾರಿಗಾದರೂ ನೀವು ಸಹಾಯ ಮಾಡಬಹುದು.

WhatsApp Image 2025 07 17 at 8.27.06 PM2

ಹಂತ 1: ಓದುವುದರಲ್ಲಿ ಮೊಟ್ಟಮೊದಲ ಹಂತ ಎಂದರೆ ನಾವು ಅದನ್ನು ನೋಡಬೇಕು. ಹೌದು, ನೋಡದೇ ಇದ್ದರೆ ಮುಂದಕ್ಕೆ ಎಲ್ಲಾ ಬಂದರೂ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಓದುವ ವ್ಯಕ್ತಿಗೆ, ಮಗುವಿಗೆ ಕಣ್ಣು ಸರಿಯಾಗಿ ಕಾಣುತ್ತದೆಯೇ? ಬೆಳಕು ಸಾಕಷ್ಟು ಇದೆಯೇ? ಮುದ್ರಣ, ಬರಹ ಸ್ಪಷ್ಟವಾಗಿದೆಯೇ? ಬೋರ್ಡಿನ ಮೇಲೆ ಬರೆದಿರುವುದು ದೂರದಿಂದ ಕಾಣುತ್ತಿಲ್ಲವೇ? ವಿದ್ಯಾರ್ಥಿ ಕುಳಿತಲ್ಲಿಂದ ನೋಡುವಾಗ ಬೋರ್ಡಿನ ಮೇಲೆ ಬಾಗಿಲು ಅಥವಾ ಕಿಟಿಕಿಯ ಬೆಳಕು ಗ್ಲೇರ್ ಆಗುತ್ತಿದೆಯೋ? ಇವೆಲ್ಲವನ್ನು ಪರಿಗಣಿಸಬೇಕಾಗುತ್ತದೆ. ಈ ತೊಡಕುಗಳನ್ನು ಬಗೆಹರಿಸಬೇಕಾಗುತ್ತದೆ. ಸರಿಯಾಗಿ ಕಾಣದೇನೆ ಇದ್ದರೆ, ಓದುವಿಕೆಯ ಮುಂದಿನ ಹಂತಗಳು ಸಮರ್ಥವಾಗಿ ಬರುತ್ತಿದ್ದರೂ ಅವು ವ್ಯರ್ಥವಾಗುತ್ತವೆ.
ಹಂತ 2: ಬರಹ ಸರಿಯಾಗಿ ಕಾಣುತ್ತಿದೆ ಎಂದರೆ, ಮುಂದಿನ ಹಂತ ಓದುವವರಿಗೆ ಕನ್ನಡದ ಎಲ್ಲಾ 49 ಅಕ್ಷರ, ಅವುಗಳ ಗುಣಿತಾಕ್ಷರ ಮತ್ತು ಒತ್ತಕ್ಷರಗಳ ಪರಿಚಯ ಚೆನ್ನಾಗಿ ಇದೆಯೋ ಎನ್ನುವ ಪ್ರಶ್ನೆ. ಕೆಲವು ಅಕ್ಷರಗಳನ್ನೋ, ಒತ್ತಕ್ಷರಗಳನ್ನು ಗುರುತಿಸುವಲ್ಲಿ ತೊಂದರೆ ಇದ್ದರೆ, ಪ್ರಯೋಜನಕಾರಿ ಓದು ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ ಓದುವುದು ಎಂದರೆ ಬರಹಕ್ಕೆ ಧ್ವನಿ ಕೊಡುವುದು ಎಂದರ್ಥ.
ಹಂತ 3: ಮೂರನೇ ಹಂತದಲ್ಲಿ ಉಚ್ಚರಿಸಿದ ಪದ, ಪದಪುಂಜ, ನುಡಿಗಟ್ಟು, ವಾಕ್ಯ ಇತ್ಯಾದಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಈ ವರೆಗೆ ಗೊತ್ತಿರದ ಪದಗಳೂ ಕೆಲವೊಮ್ಮೆ ಅದು ಬಂದಿರುವ ವಾಕ್ಯದ ಸನ್ನಿವೇಶದಲ್ಲಿ ಅರ್ಥವಾಗುವ ಸಾಧ್ಯತೆ ಇರುತ್ತದೆ. ಇಲ್ಲದೇ ಇದ್ದರೆ ಅದನ್ನು ತಿಳಿಯಲು ಯಾವುದಾದರೂ ಉತ್ತಮವಾದ ನಿಘಂಟುವಿನ ನೆರವನ್ನು ಪಡೆಯಬೇಕಾಗುತ್ತದೆ. ನಿಘಂಟುವಿನಲ್ಲಿ ಹುಡುಕಿ ತಿಳಿದನಂತರ ಮತ್ತೆ ಬರಹಕ್ಕೆ ಹಿಂದಿರುಗಿ ಆ ಪದ ಇರುವ ವಾಕ್ಯವನ್ನು ಇನ್ನೊಮ್ಮೆ ಓದಿಕೊಂಡು ಮುಂದುವರೆಯಬೇಕು. ಈ ಹಂತದಲ್ಲಿ ನಮಗೆ ಲೇಖನ ಚಿಹ್ನೆಗಳು, ಅವುಗಳ ಕಾರ್ಯದ ಪರಿಚಯ ಇರಬೇಕಾಗುತ್ತದೆ. ಬರಹದಲ್ಲಿ ಬಳಸಲಾಗಿರುವ ಲೇಖನ ಚಿಹ್ನೆಗಳನ್ನು ಸರಿಯಾಗಿ ಗುರುತಿಸಿ ಗ್ರಹಿಸದೇ ಇದ್ದರೆ ಕೆಲವೊಮ್ಮೆ ವಾಕ್ಯವು ಅರ್ಥವಾಗದೇ ಇರಬಹುದು ಅಥವಾ ಬೇರೆ ಅರ್ಥವನ್ನೂ ಕೊಡಬಹುದು.

[23-04-2925ರ ನನ್ನ ನುಡಿಯಂಗಳದಲ್ಲಿ “ಸಮರ್ಥ ಬರಹದ ಸಾಧನ : ಲೇಖನ ಚಿಹ್ನೆಗಳು ಎಂಬ ಲೇಖನವು ಪ್ರಕಟವಾಗಿದೆ. ನೋಡಿ: https://eedina.com/columns/nudiyangala-efficient-writing-tools-article-symbols-1015/2025-04-23/

ಈ ಹಂತದಲ್ಲಿ ಬರಹದಲ್ಲಿ ಬರುವ ವರ್ಣಗಳು, ಕಾಗುಣಿತ ಮತ್ತು ಒತ್ತಕ್ಷರಗಳ ಸರಿಯಾದ ಉಚ್ಚಾರ ಬಹಳ ಮುಖ್ಯ. ಹಾಗೆಯೇ ನಿರರ್ಗಳವಾಗಿ ಓದುವುದೂ ಮುಖ್ಯ. ತಡವರಿಸಿ ಓದಿದರೆ ಮಿದುಳಿಗೆ ಸರಿಯಾದ ಸಂದೇಶ ತಲುಪದೆ ಆ ವಾಕ್ಯ/ಭಾಗದ ಅರ್ಥವು ಹುಟ್ಟುವುದಿಲ್ಲ. ಒಂದು ವಾಕ್ಯವನ್ನು ಮೊದಲಿಗೆ ತಡವರಿಸಿ ಓದಿದರೂ ಅದನ್ನು ಇನ್ನೊಮ್ಮೆ ಸರಾಗವಾಗಿ ಎಂಬಂತೆ ಓದಬೇಕು. ಹಾಗೆಯೇ ಒಂದು ವಾಕ್ಯದಲ್ಲಿ ಧ್ವನಿಯ ಏರಿಳಿತವೂ ಒಳಗೊಂಡಿರುತ್ತದೆ. ಹೇಳಿಕೆಯಾದರೆ ಒಂದು ತರಹ, ಪ್ರಶ್ನೆಯಾದರೆ ಇನ್ನೊಂದು ತರಹ, ಅಚ್ಚರಿಯಾದರೆ ಮತ್ತೊಂದು ತರಹ ಹೀಗೆ. ಆದ್ದರಿಂದ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಓದುವುದನ್ನು ಹೇಳಿಕೊಡುವಾಗ ಈ ಉಚ್ಚಾರಣೆಯ ನಿಖರತೆ, ಧ್ವನಿಯ ಏರಿಳಿತ ಮತ್ತು ನಿರರ್ಗಳತೆಯ ಅಭ್ಯಾಸಕ್ಕೂ ಗಮನ ಕೊಡಬೇಕು.

ಓದುವುದರಲ್ಲಿ ತಂತ್ರಗಳು

ಓದುವ ಪ್ರಕ್ರಿಯೆಯನ್ನು ಗ್ರಹಿಸಿದ ನಂತರ ನಾವು ಓದುವಿಕೆಯಲ್ಲಿ ಇರುವ ವಿಧಾನಗಳನ್ನು ತಿಳಿದುಕೊಳ್ಳೋಣ. ಯಾವುದನ್ನೇ ಆಗಲಿ ನಾವು ಓದುವ ಉದ್ದೇಶಗಳು ವಿಭಿನ್ನವಾಗಿರುತ್ತದೆ. ತಿಂಗಳು ತಿಂಗಳು ಬರುವ ವಿದ್ಯುದ್ಬಿಲ್ಲನ್ನು ವಿವರವಾಗಿ ಓದಲು ಹೋಗುವುದಿಲ್ಲ, ನಮ್ಮ ಕಣ್ಣು ನೇರವಾಗಿ ಈ ಬಾರಿ ಎಷ್ಟು ಎನ್ನುವ ಸಾಲಿಗೆ ಹೋಗುತ್ತದೆ. ಓದು ಮುಗಿಯಿತು. ಪ್ರೇಯಸಿ/ಪ್ರಿಯಕರನ ಪತ್ರವನ್ನು ಓದುವುದು ಬೇರೆ. ಆದರೇ, ಅದೇ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಸಂಶೋಧನಾ ಪ್ರಬಂಧವನ್ನು ಓದುವುದು ಬೇರೆ.

ನಾವು ಮಾಹಿತಿಯನ್ನು ತಿಳಿಯಲು, ಸಂಶೋಧನೆಗಾಗಿ, ಪರೀಕ್ಷೆಗಾಗಿ, ಸಂದರ್ಶನಕ್ಕಾಗಿ, ಏನನ್ನಾದರೂ ಹೊಸದನ್ನು ಕಲಿಯಲು, ನೀವೇ ಏನನ್ನಾದರೂ ಬರೆಯಲು ಪೂರಕವಾಗಿ, ವೈಯಕ್ತಿಕ ಬೆಳವಣಿಗೆಗಾಗಿ, ಮನರಂಜನೆಗಾಗಿ, ಬೇರೆ ಏನೂ ಕೆಲಸವಿಲ್ಲ ಎನ್ನುವುದಕ್ಕಾಗಿ -ಹೀಗೆ ಅನೇಕ ಉದ್ದೇಶಗಳನ್ನಿಟ್ಟುಕೊಂಡು ನಾವು ಸೂಕ್ತವಾದ ಸಾಮಗ್ರಿಯನ್ನು ಹುಡುಕಿ ಓದುತ್ತೇವೆ. ವಾಸ್ತವವಾಗಿ ನಮ್ಮ ಓದು ಉದ್ದೇಶಕ್ಕೆ ತಕ್ಕ ಹಾಗೆ ನಾವು ಓದುವ ವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ. ಆಗ ಇರುವಷ್ಟು ಸಮಯದಲ್ಲಿ ಓದಿನಿಂದ ಹೆಚ್ಚು, ನಿರ್ದಿಷ್ಟ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅವುಗಳನ್ನು ನಾವು ನಾಲ್ಕು ವಿಧಗಳನ್ನಾಗಿ ಮಾಡಿಕೊಂಡು ಅರ್ಥ ಮಾಡಿಕೊಳ್ಳಬಹುದು.

WhatsApp Image 2025 07 17 at 8.27.06 PM3

ಸ್ಕಿಮ್ಮಿಂಗ್- ಪಕ್ಷಿನೋಟ ಓದು

ಸ್ಥೂಲವಾಗಿ ಕಣ್ಣಾಡಿಸುತ್ತಾ, ಮೇಲೆ ಮೇಲೆ ಓದಿಕೊಂಡು ಪ್ರಧಾನ ಅಂಶಗಳನ್ನು ಮಾತ್ರ ಗಮನಿಸುತ್ತಾ ಹೋಗುವುದು. ಇದರಿಂದ ಬರಹವು ಯಾವುದರ ಕುರಿತು ಇದೆ ಎಂಬ ಮೂಲಭೂತ ಸುಳಿವು ಸಿಗುತ್ತದೆ. ಸಾಮಾನ್ಯವಾಗಿ ಈ ವಿಧಾನವನ್ನು ದಿನ ಪತ್ರಿಕೆ ಅಥವಾ ಇತರ ನಿಯತಕಾಲಿಕೆಗಳನ್ನು ಓದುವಾಗ ಬಳಸುತ್ತೇವೆ. ಪರಿಚಯ, ಸಾರಾಂಶ, ದಪ್ಪಕ್ಷರ, ಇಟ್ಯಾಲಿಕ್ಸ್, ಬುಲೆಟ್ ಪಾಯಿಂಟ್‍ಗಳು, ಶೀರ್ಷಿಕೆ, ಉಪಶೀರ್ಷಿಕೆ, ದಿನಾಂಕಗಳು, ಅಂಕಿಗಳು, ಗಮನ ಸೆಳೆಯುತ್ತವೆ. ಒಮ್ಮೆ ಎಲ್ಲಾ ಪುಟಗಳಲ್ಲಿರುವ ಶೀರ್ಷಿಕೆಗಳು, ಚಿತ್ರಗಳ ಮೇಲೆ ಕಣ್ಣಾಡಿಸಿ ಅವುಗಳಲ್ಲಿ ಯಾವುದನ್ನು ಓದಲು ಪರಿಗಣಿಸಬಹುದು ಎಂಬುದನ್ನು ತೀರ್ಮಾನಿಸುತ್ತೇವೆ. ವಿವರಗಳು, ಉದಾಹರಣೆಗಳು, ಕೋಷ್ಠಕಗಳ ವಿವರಗಳು ಸಧ್ಯಕ್ಕೆ ಬಿಡುತ್ತೇವೆ. ಈ ಕ್ರಿಯೆ ವೇಗವಾಗಿ ನಡೆಯುತ್ತದೆ. ಓದುಗರ ಸಮಯವನ್ನು ಉಳಿಸುತ್ತದೆ.

ಪುಸ್ತಕದಲ್ಲಾದರೆ ಮುನ್ನುಡಿಯ ಮೇಲೆ, ಪರಿವಿಡಿಯ ಮೇಲೆ, ಅಧ್ಯಾಯದ ಶೀರ್ಷಿಕೆಗಳ ಮೇಲೆ ಕಣ್ಣಾಡಿಸಿದರೆ, ಆ ಪುಸ್ತಕವು ಮುಂದಿನ ಓದಿಗಾಗಿ ಪರಿಗಣಿಸಬಹುದೇ ಎಂಬುದು ತಿಳಿಯುತ್ತದೆ. ಪುಸ್ತಕ ಖರೀದಿಸುವಾಗಲೂ ಈ ಪಕ್ಷಿನೋಟವು ಪ್ರಯೋಜನಕ್ಕೆ ಬರಬಹುದು.

ಸ್ಕ್ಯಾನಿಂಗ್ ಅಥವಾ ಕ್ಷಿಪ್ರ ಓದು

ಪಕ್ಷಿನೋಟದಲ್ಲಿ ಬರಹದ ಒಟ್ಟಾರೆ ಮೇಲ್ನೋಟವನ್ನು ಗ್ರಹಿಸುವುದು ನಮ್ಮ ಉದ್ದೇಶವಾಗಿರುತ್ತದೆ. ಸ್ಕ್ಯಾನಿಂಗ್ ಎನ್ನುವುದು ಬರಹದಲ್ಲಿ, ನಮಗೆ ಅಗತ್ಯವಿರುವ ಒಂದು ನಿರ್ದಿಷ್ಟ ಅಂಶಕ್ಕಾಗಿ ಹುಡುಕುವುದು ಎಂದರ್ಥ. ಇಲ್ಲಿ ಈಗಾಗಲೇ ನಮಗೆ ಏನು ಬೇಕು ಎಂಬುದು ತಿಳಿದಿರುತ್ತದೆ. ಅದನ್ನು ಹುಡುಕಿ ಗುರುತಿಸುವುದು ಉದ್ದೇಶವಾಗಿರುತ್ತದೆ. ದಿನಾಂಕ, ಅಂಕಿಅಂಶ, ವ್ಯಕ್ತಿ/ಊರು/ಸಂಸ್ಥೆ/ಯೋಜನೆ ಇತ್ಯಾದಿ ಹೆಸರು ಇವುಗಳನ್ನು ಕಂಡುಕೊಳ್ಳಲು ಸ್ಕ್ಯಾನಿಂಗ್ ಮಾಡುತ್ತೇವೆ. ಆದರೆ ಬರಹವನ್ನು ವಿವರವಾಗಿ ಓದಲು ಹೋಗುವುದಿಲ್ಲ. ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳುವುದಕ್ಕಾಗಿ ಹೀಗೆ ಓದುವುದು. ಆ ಉತ್ತರಗಳು ಸಿಕ್ಕ ಕೂಡಲೇ ಓದುವುದನ್ನು ನಿಲ್ಲಿಸುತ್ತೇನೆ.

ಎಕ್ಸ್‌ಟೆನ್ಸಿವ್ ಅಥವಾ ವ್ಯಾಪಕ ಓದು

ಇನ್ನೊಂದು ಬಗೆಯ ಓದುವ ತಂತ್ರವೆಂದರೆ ವ್ಯಾಪಕ ಓದು. ನಾವು ಈಗಾಗಲೇ ಮೇಲಿನ ಎರಡು ತಂತ್ರಗಳನ್ನು ಬಳಸಿ ಯಾವುದನ್ನು ಓದಬೇಕು ಎಂಬುದನ್ನು ನಿರ್ಣಯಿಸಿದ ನಂತರ ಅದನ್ನು ನಿರ್ದಿಷ್ಟ ಪ್ರಯೋಜನಕ್ಕಾಗಿ ಒದುವ ತಂತ್ರ ವ್ಯಾಪಕ ಓದು. ಪುಸ್ತಕ, ನಿಯತಕಾಲಿಕ ಅಥವಾ ದಿನಪತ್ರಿಕೆಯಲ್ಲಿ ಮಗ್ನರಾಗಿ, ಆನಂದಕ್ಕಾಗಿ ಅಥವಾ ವಿಷಯದ ಬಗ್ಗೆ ಸಾಮಾನ್ಯ ಮಾಹಿತಿ, ಪರಿಕಲ್ಪನೆಗಳ ತಿಳಿವಳಿಕೆಯನ್ನು ಪಡೆಯುವ ಸಲುವಾಗಿ ಓದುವುದನ್ನು ವ್ಯಾಪಕ ಓದು ಎನ್ನಬಹುದು. ಸಾಮಾನ್ಯವಾಗಿ ಈ ವಿಧಾನಕ್ಕಾಗಿ ನಾವು ಆಯ್ದುಕೊಳ್ಳುವ ಸಾಮಗ್ರಿಯು ಸರಳವಾಗಿರುತ್ತದೆ, ಮನೋರಂಜಕವಾಗಿರುತ್ತದೆ. ಇದರಲ್ಲಿ ನಮಗೆ ಅಪರಿಚಿತವಾದ ಪದಗಳು ಇರುವುದು ಅಪರೂಪ. ಈ ಓದಿನ ನಂತರ ಮತ್ತೆ ಅದನ್ನು ವಿಮರ್ಶಿಸುವುದು, ಚರ್ಚೆಗೆ ಒಳಪಡಿಸುವುದು ಇಂಥ ಅಗತ್ಯಗಳು ಇರುವುದಿಲ್ಲ.

ಇಂಟೆನ್ಸಿವ್ ಅಥವಾ ಗಹನ ಓದುವಿಕೆ

ಓದಲು ತೀರ್ಮಾನಿಸಿರುವ ಪಠ್ಯದ ಸಾಹಿತ್ಯಕ ಮತ್ತು ಭಾಷಿಕ ಅರ್ಥವನ್ನು ಗ್ರಹಿಸುವ ಉದ್ದೇಶದಿಂದ ಅದರ ನಿಕಟವಾದ ಅಧ್ಯಯನಕ್ಕಾಗಿ ಓದುವ ವಿಧಾನವನ್ನು ತೀವ್ರವಾದ ಅಥವಾ ಗಹನವಾದ ಓದುವಿಕೆ ಎಂದು ಕರೆಯುತ್ತೇವೆ. ಓದುಗರು ಸಾಮಗ್ರಿಯನ್ನು ಹೆಚ್ಚು ಏಕಾಗ್ರತೆ ಮತ್ತು ಸೂಕ್ತ ಕಾಳಜಿಯಿಂದ ಓದುತ್ತಾರೆ. ಏಕೆಂದರೆ ಈ ಓದುವಿಕೆಯಲ್ಲಿ ನಿಗದಿತ ಕಲಿಕೆಯ ಗುರಿಗಳು ಇರುತ್ತವೆ.

ಈ ಬಗೆಯ ಓದುವಿಕೆಯಲ್ಲಿ ವಾಕ್ಯಗಳ ವಿಘಟನೆಯ ಮೂಲಕ ಪಠ್ಯದ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ, ಮತ್ತು ಪಠ್ಯದ ಸಾರ ಮತ್ತು ಅರ್ಥವನ್ನು ಸಾಧ್ಯವಾದಷ್ಟು ಹೊರತೆಗೆಯುವ ಉದ್ದೇಶವಿರುವುದರಿಂದ ಪ್ರತಿಯೊಂದು, ಪದ, ಪದಪುಂಜ, ನುಡಿಗಟ್ಟು, ಗಾದೆಮಾತು ಇತ್ಯಾದಿಗಳನ್ನು ಆಳವಾಗಿ ಗ್ರಹಿಸಬೇಕಾಗುತ್ತದೆ. ಇದಕ್ಕಾಗಿ ನಮ್ಮ ಕ್ಷೇತ್ರದ, ಅಥವಾ ನಾವು ಓದುತ್ತಿರುವ ಸಾಮಗ್ರಿಗೆ ಸಂಬಂಧಿಸಿದ ಕ್ಷೇತ್ರದ ಶ್ರೀಮಂತವಾದ ಪದಕೋಶ ನಮ್ಮಲ್ಲಿ ಇರಬೇಕಾಗುತ್ತದೆ.

ಗಟ್ಟಿ ಮತ್ತು ಮೌನ ಓದು

WhatsApp Image 2025 07 17 at 8.27.06 PM4

ಓದುವುದರಲ್ಲಿ, ಅವುಗಳ ವಿಧಾನ ಮತ್ತು ಅವು ನೀಡುವ ಪ್ರಯೋಜನಗಳನ್ನು ಆಧರಿಸಿ, ಗಟ್ಟಿ ಓದು ಮತ್ತು ಮೌನ ಓದು ಎಂಬ ವ್ಯತ್ಯಾಸವನ್ನೂ ನಾವು ಕಾಣುತ್ತೇವೆ. ಗಟ್ಟಿಯಾಗಿ ಓದುವ ವಿಧಾನವನ್ನು ಸಾಮಾನ್ಯವಾಗಿ ಇನ್ನೊಬ್ಬರಿಗೆ ಓದಿ ಹೇಳುವಾಗ ಬಳಸುತ್ತೇವೆ. ಉದಾಹರಣೆಗೆ ನಾವು ಕಥೆ, ಕವನಗಳನ್ನು ಮಕ್ಕಳಿಗೆ ಓದಿ ಹೇಳುತ್ತೇವೆ. ವಿಚಾರ ಸಂಕಿರಣಗಳಲ್ಲಿ ಪ್ರಬಂಧ/ಭಾಷಣ/ಕವಿತೆಯನ್ನು ಇತರಿಗೆ ಕೇಳಿಸುವ ಹಾಗೆ ಗಟ್ಟಿಯಾಗಿ ಓದಿ ಹೇಳುತ್ತೇವೆ. ಆಗ, ಓದಿದ್ದು ಆಲಿಸುತ್ತಿರುವವರಿಗೆ ಸಂಪೂರ್ಣವಾಗಿ ಅರ್ಥವಾಗಬೇಕು ಎಂದರೆ, ನಾವು ಬರಹದಲ್ಲಿರುವುದನ್ನು ಯಥಾವತ್ತಾಗಿ ಧ್ವನಿಸಬೇಕಾಗುತ್ತದೆ. ಎಂದರೆ, ಪದ, ವಾಕ್ಯ, ಲೇಖನ ಚಿಹ್ನೆಗಳು, ಧ್ವನಿಯ ಏರಿಳಿತವನ್ನು ಪರಿಣಾಮಕಾರಿಯಾಗಿ ಉತ್ಪಾದಿಸಬೇಕಾಗುತ್ತದೆ. ಧ್ವನಿಯು ಆಲಿಸುವವರು ಕೇಳುವುದಕ್ಕೆ ಎಷ್ಟು ಅಗತ್ಯವೋ ಅಷ್ಟೇ ಗಟ್ಟಿಯಾಗಿ ಓದಬೇಕು, ದೊಡ್ಡದಾಗಿ ಚೀರಬಾರದು.

ನಮಗೆ ನಾವೇ ಓದಿಕೊಳ್ಳುವಾಗಲೂ ಕೆಲವೊಮ್ಮೆ ನಾವು ಗಟ್ಟಿಯಾಗಿ ಓದುವ ವಿಧಾನವನ್ನು ಬಳಸುತ್ತೇವೆ. ಆಗ ನಾವೇ ಓದುಗರು ಮತ್ತು ನಾವೇ ಆಲಿಸುವವರು ಆಗುತ್ತೇವೆ. ಕೆಲವೊಮ್ಮೆ ಮೌನ ಓದಿನಲ್ಲಿ ಅರ್ಥವಾಗಿರದೇ ಇರುವುದು, ಲೇಖನ ಚಿಹ್ನೆಗಳನ್ನು ಗಮನದಲ್ಲಿರಿಸಿಕೊಂಡು ಸರಿಯಾದ ಉಚ್ಚಾರಣೆ ಬಳಸಿ ಧ್ವನಿಯಲ್ಲಿ ಓದಿದಾಗ ಓದಿದ್ದು ಹೆಚ್ಚು ಚೆನ್ನಾಗಿ ಅರ್ಥವಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ ದಿಲ್ಲಿ ಮಾತು | ಕೇಸರಿ ಪುಂಡರ ಕಾಂವಡಯಾತ್ರೆ

ಗಟ್ಟಿ ಓದಿನಿಂದ ಓದುವ ನಿರರ್ಗಳತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯಕವಾಗಿದೆ. ಇದು ಸಾರ್ವಜನಿಕವಾಗಿ ಮಾತಾಡುವ ಸಂದರ್ಭ ಬಂದಾಗ ಹೆಚ್ಚು ಆತ್ಮವಿಶ್ವಾಸದಿಂದ ಮಾತಾಡುವ ಕೌಶಲವನ್ನು ನೀಡಬಲ್ಲದು. ಮೌನ ಓದಿನಲ್ಲಿ ನಮಗಾಗಿ ಮಾತ್ರ ಓದಿಕೊಳ್ಳುತ್ತೇವೆ. ಕೆಲವೊಮ್ಮೆ ಪದಗಳನ್ನು ಉಚ್ಚರಿಸಿದರೂ ತುಂಬಾ ಕಡಿಮೆ ಧ್ವನಿಯಲ್ಲಿ ಹೇಳುತ್ತೇವೆ. ಸಾಮಾನ್ಯವಾಗಿ ಸಾಮಗ್ರಿಯನ್ನು ಕಣ್ಣಿಂದ ನೋಡುತ್ತಾ ಮಾತಿನ ಅಂಗಾಂಗಳನ್ನು ಚಲಿಸದೇ ಬರಹವನ್ನು ಮೌನವಾಗಿಯೇ ಗ್ರಹಿಸುತ್ತೇವೆ. ಪ್ರಶಾಂತವಾದ ಪರಿಸರವಿದ್ದಲ್ಲಿ ಮೌನ ಓದು ಕಡಿಮೆ ಸಮಯದಲ್ಲಿ ಹೆಚ್ಚಿನ ಗ್ರಹಿಕೆಗೆ ಸಹಾಯಕ. ಮೌನ ಓದಿನಲ್ಲಂತೂ ಅಕ್ಷರ, ಗುಣಿತಾಕ್ಷರ, ಒತ್ತಕ್ಷರ, ಲೇಖನ ಚಿಹ್ನೆಗಳ ಗಟ್ಟಿ ಪರಿಚಯವಿರಬೇಕಾಗುತ್ತದೆ. ಇಲ್ಲವಾದರೆ ಮೌನ ಓದು ಫಲಕಾರಿಯಾಗುವುದಿಲ್ಲ.

ಓದುವ ಕೌಶಲದ ಕುರಿತು ಈ ಒಂದು ವಿಹಂಗಮ ನೋಡದ ಪರಿಚಯ ನಮಗಿದ್ದರೆ ನಮ್ಮ ಓದುವಿಕೆ ಹೆಚ್ಚು ಫಲಕಾರಿಯಾಗಿತ್ತದೆ

WhatsApp Image 2025 11 17 at 4.13.46 PM
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...