ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

Date:

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ ಏನು ಎಂದರೆ, ಕನ್ನಡದ 49 ಮೂಲಾಕ್ಷರ, ವ್ಯಂಜನಗಳ ಗುಣಿತಾಕ್ಷರ ಮತ್ತು ಒತ್ತಕ್ಷರಗಳು ಗೊತ್ತಿದ್ದ ಹೊರತಾಗಿಯೂ ನಾವು, ಮುಖ್ಯವಾಗಿ, ವ್ಯಂಜನಗಳನ್ನು ಅವು ಉದ್ದೇಶಿತವಾಗಿರುವ ಹಾಗೆಯೇ ನಿಖರವಾಗಿ ಉಚ್ಚರಿಸಲು ಆಗದೇ ತಪ್ಪಾಗಿ ಉಚ್ಚರಿಸಿದರೆ, ಅದನ್ನು ಬರೆಯುವಾಗ ತಪ್ಪಾಗಿ ಬರೆಯುತ್ತೇವೆ. ಏಕೆಂದರೆ, ಮೂಲದಲ್ಲಿಯೇ ಆ ಪದವನ್ನು ನಾವು ತಪ್ಪಾಗಿ ಉಚ್ಚರಿಸಿರುತ್ತೇವೆ.

ಕನ್ನಡ ಲಿಪಿ ಧ್ವನಿ ಲಿಪಿ. ಹೇಗೆ ಉಚ್ಚರಿಸುತ್ತೇವೆಯೋ ಹಾಗೆಯೇ ಬರೆಯುತ್ತೇವೆ. ಹೀಗಾಗಿ ನಾನು ಬರೆದಿರುವುದನ್ನು ಇನ್ನೊಬ್ಬರು ಓದಿದಾಗ ಅದೇ ಧ್ವನಿ ಹೊಮ್ಮುತ್ತದೆ. ಹೀಗಾಗಿ ಅವರಿಗೆ ನಾವು ಬರೆದಿರುವುದು ಅರ್ಥವಾಗುತ್ತದೆ. ಪದ ಅಪರಿಚಿತವಾಗಿದ್ದರೆ, ಅದು ಅರ್ಥವಾಗದೇ ಇರಬಹುದು, ಆದರೆ ಅದನ್ನು ಧ್ವನಿಯಿಂದ ಓದಲು ಮಾತ್ರ ಬರುತ್ತದೆ. ಉದಾಹರಣೆಗೆ ನನಗೆ, ‘ಶಿಖಾಕಲಾಪ’ ಎಂಬ ಪದದ ಅರ್ಥ ಗೊತ್ತಿಲ್ಲ. (ನಿಮಗೆ ಗೊತ್ತಿದೆಯೇ?) ಆದರೆ ನನಗೆ ಕನ್ನಡ ಮೂಲಾಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರ ಎಲ್ಲವೂ ಚೆನ್ನಾಗಿ ಗೊತ್ತಾದ್ದರಿಂದ ಈ ಪದವನ್ನು ನಾನು (ಅರ್ಥವಾಗದೆಯೂ) shikhaakalaapaa ಎನ್ನುವ ರೀತಿಯಲ್ಲಿ ಓದಬಲ್ಲೆ. ನಿಘಂಟು ನೋಡಿ, ಶಿಖಾಕಲಾಪ ಎಂದರೆ, ಉರಿಯ ಗುಂಪು, ಜ್ವಾಲೆಯ ಸಮೂಹ ಎಂದು ತಿಳಿಯಬಲ್ಲೆ.

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ ಏನು ಎಂದರೆ, ಕನ್ನಡದ 49 ಮೂಲಾಕ್ಷರ, ವ್ಯಂಜನಗಳ ಗುಣಿತಾಕ್ಷರ ಮತ್ತು ಒತ್ತಕ್ಷರಗಳು ಗೊತ್ತಿದ್ದ ಹೊರತಾಗಿಯೂ ನಾವು, ಮುಖ್ಯವಾಗಿ, ವ್ಯಂಜನಗಳನ್ನು ಅವು ಉದ್ದೇಶಿತವಾಗಿರುವ ಹಾಗೆಯೇ ನಿಖರವಾಗಿ ಉಚ್ಚರಿಸಲು ಆಗದೇ ತಪ್ಪಾಗಿ ಉಚ್ಚರಿಸಿದರೆ, ಅದನ್ನು ಬರೆಯುವಾಗ ತಪ್ಪಾಗಿ ಬರೆಯುತ್ತೇವೆ. ಏಕೆಂದರೆ, ಮೂಲದಲ್ಲಿಯೇ ಆ ಪದವನ್ನು ನಾವು ತಪ್ಪಾಗಿ ಉಚ್ಚರಿಸಿರುತ್ತೇವೆ.
ಉದಾಹರಣೆಗೆ, ನಮ್ಮ ದೇಶದ ಹೆಸರನ್ನು baarata ಎಂಬಂತೆ, ನಮ್ಮ ಸರಕಾರದ ಶಕ್ತಿ ಕೇಂದ್ರವನ್ನು vidaanasauda ಎಂಬಂತೆ ಕರೆಯುವವರು ಅವುಗಳನ್ನು ಬರೆಯುವಾಗ ಅನಾಯಾಸ ‘ಬಾರತ’ ಮತ್ತು ‘ವಿದಾನಸೌದ’ ಎಂದೇ, ಎಲ್ಲವನ್ನೂ ಅಲ್ಪಪ್ರಣಾಕ್ಷಗಳಲ್ಲಿ ಬರೆಯುತ್ತಾರೆ. ಅವರು ನುಡಿಯುವಂತೆ ಬರೆದಿರುವುದರಿಂದ ಅವರು ಬರೆದಿರುವುದು ‘ಸರಿ’ ಎನ್ನಬೇಕಾಗುತ್ತದೆ; ಆದರೆ, ಅವರು ಬರೆದಿರುವುದು ಪ್ರಮಾಣಿತ, ಲಿಖಿತ ಮಾದರಿಯ ಪ್ರಕಾರ ತಪ್ಪು ಎಂದಾಗುತ್ತದೆ. ಹೀಗಾಗಿ ಕನ್ನಡದ ಆಡುಮಾತಿನಲ್ಲಿ, ಉಪಭಾಷೆಗಳಲ್ಲಿ ಅವರವರ ರೂಢಿಯಂತೆ ಉಚ್ಚರಿಸಿದರೆ ನಡೆಯುತ್ತದೆ. ಆದರೆ, ಗ್ರಾಂಥಿಕ ರೂಪದಲ್ಲಿ ಬರವಣಿಗೆಯಲ್ಲಿಡುವಾಗ ಸರಿಯಾಗಿಯೇ ಬರೆಯಬೇಕಾಗುತ್ತದೆ.

ಕಾರ್ಡು ಅಲುಗಾಡಿದರೆ ಮಹಾಪ್ರಾಣ

ಸುಮಾರು 1977ರಲ್ಲಿ ಒಮ್ಮೆ ನಾನು ಮದ್ದೂರಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕನ್ನಡಬಾರದ ಇಂಜಿನಿಯರುಗಳಿಗೆ ಕನ್ನಡವನ್ನು ಕಲಿಸುವ, 23 ದಿನಗಳ ಶಿಬಿರವನ್ನು ನಡೆಸಿದ್ದೆ. ಸುಮಾರು ಒಂದು ವಾರದ ತರಗತಿಗಳ ನಂತರ ಒಂದು ಭಾಷಾಭ್ಯಾಸ ಮಾಡುವಾಗ, ‘ನಮ್ಮ ದೇಶ ಭಾರತ’ ಎಂಬ ವಾಕ್ಯವನ್ನು ಭಾಗಿಗಳು ನನ್ನೊಂದಿಗೆ ಪುನರುಚ್ಚರಿಸಬೇಕಾಗಿತ್ತು. ಹೆಚ್ಚಿನವರು ಸರಿಯಾಗಿಯೇ ಉಚ್ಚರಿಸುತ್ತಿದ್ದರು. ಅವರಲ್ಲಿ ಕೆಲವರು ‘ಭಾರತ’ ಎಂಬುದನ್ನು ‘ಬಾರತ’ ಎಂದು, ಮೊದಲಕ್ಷರವನ್ನು ಅಲ್ಪಪ್ರಾಣದಲ್ಲಿ ಉಚ್ಚರಿಸುತ್ತಿದ್ದರು.

‘ನೀವು ಉಚ್ಚರಿಸುತ್ತಿರುವುದು ತಪ್ಪು’ ಎಂದು ಭಾಗಿಗಳಿಗೆ ನೇರವಾಗಿ ಹೇಳಬಾರದು ಎಂಬುದು ಸುಗಮಕಾರಿಕೆಯ ಒಂದು ತಂತ್ರ, ನಾನು ಅದನ್ನು ಅನುಸರಿಸುತ್ತೇನೆ. ಅದಕ್ಕೆ, ನಾನೇ ಸರಿಯಾದ ಮಾದರಿಯನ್ನು ಮತ್ತೆ ಮತ್ತೆ ಉಚ್ಚರಿಸಿ, ಅವರು ಅದನ್ನು ಅನುಸರಿಸಿ ಸರಿಯಾಗಿ ಉಚ್ಚರಿಸಲಿ ಎಂದು ನೋಡಿದೆ. ಆದರೆ ಎಷ್ಟು ಸಲ ಹೀಗೆ ಮಾಡಿದರೂ ಅವರ ಉಚ್ಚಾರಣೆ ಸರಿಹೋಗಲೇ ಇಲ್ಲ. ನನಗಿದು ಚಿಂತೆಯಾಯಿತು. ಸ್ವಲ್ಪ ಗಮನಿಸಿದ ನೋಡಿದಾಗ, ಅಲ್ಲಿದ್ದವರಲ್ಲಿ ಅಂಥ ಸಮಸ್ಯೆ ಇರುವವರೆಲ್ಲಾ ಪ್ರಧಾನವಾಗಿ ತಮಿಳು ಮಾತೃಭಾಷೀಯರು ಎಂಬ ಅರಿವು ನನಗೆ ಮೂಡಿತು. ನಂತರ ನನ್ನ ಹಿರಿಯರನ್ನು ಮಾತಾಡಿಸಿದಾಗ ಒಂದು ಸಂಗತಿ ತಿಳಿಯಿತು.

ತಮಿಳು ಭಾಷೆಯಲ್ಲಿ ಕನ್ನಡದಲ್ಲಿ ಇರುವಹಾಗೆ ವರ್ಗೀಯ ವ್ಯಂಜನಗಳಲ್ಲಿ ಮಹಾಪ್ರಾಣದ ದ್ವಯಗಳಿಲ್ಲ. ಕ, ಚ, ಟ, ತ, ಪ ವರ್ಗಗಳಲ್ಲಿ ಮೊದಲನೆಯ ವರ್ಣದ ನಂತರ ನೇರವಾಗಿ ಅವರಲ್ಲಿ ಇರುವುದು ಆಯಾ ವರ್ಗಗಳ ಅನುನಾಸಿಕಗಳು. ಕೆಳಗಿನ ಚಿತ್ರದಲ್ಲಿ ಕನ್ನಡ ಮತ್ತು ತಮಿಳು ವ್ಯಂಜನಗಳ ಹೋಲಿಕೆಯನ್ನು ನೋಡಿ.

WhatsApp Image 2025 08 05 at 8.43.42 PM

ಇಂಥ ಒಂದು ಭಾಷಾ ವ್ಯವಸ್ಥೆಯಲ್ಲಿ ಪಳಗಿಬಂದ ವ್ಯಕ್ತಿಗಳಿಗೆ ಇದ್ದಕ್ಕಿದ್ದ ಹಾಗೆ ಕನ್ನಡದಲ್ಲಿರುವ ಮಹಾಪ್ರಾಣ ಧ್ವನಿಗಳನ್ನು ಉಚ್ಚರಿಸಿ ಎಂದರೆ ಹೇಗಾದೀತು(ಹಳೆಯ ಮೈಸೂರು ವಿಭಾಗದ ಗ್ರಾಮೀಣ ಹಿನ್ನೆಲೆಯಿಂದ ಬಂದ ಕನ್ನಡಿಗರಲ್ಲಿಯೂ ಹೆಚ್ಚಿನವರಲಿ ಈ ಸಮಸ್ಯೆ ಇದೆ). ಆದರೂ ಸ್ವಲ್ಪ ಪ್ರಜ್ಞಾಪೂರ್ವಕ ಪ್ರಯತ್ನದಿಂದ ಕನ್ನಡದ ಸಂದರ್ಭದಲ್ಲಿಯಾದರೂ ಮಹಾಪ್ರಾಣ ಧ್ವನಿಗಳನ್ನು ಉಚ್ಚರಿಸುವುದನ್ನು ಕಲಿಯುವುದು ಸಾಧ್ಯ. ಅದರೆ ಕಲಿಸುವುದು ಹೇಗೆ?

ಅಂದು ಸಂಜೆ ಊಟ ಮಾಡಿ ಮಲಗಿರುವಾಗ ನನಗೆ ಈ ಸಮಸ್ಯೆಗೆ ಪರಿಹಾರ ಹೊಳೆಯಿತು. ಮಹಾಪ್ರಾಣ ಎಂದರೇನೇ ಹೆಚ್ಚು ಉಸಿರು, ಮಹಾಪ್ರಾಣ ಧ್ವನಿಗಳನ್ನು ಉಚ್ಚರಿಸುವಾಗ ಉಳಿದವುಗಳ ಹೋಲಿಕೆಯಲ್ಲಿ ಸ್ವಲ್ಪ ಹೆಚ್ಚುವರಿ ಉಸಿರು ಬಾಯಿಯಿಂದ ಹೊರಗೆ ಬರುತ್ತದೆ. ಅದರಲ್ಲೂ ವಿಶೇಷವಾಗಿ ಭ ಮತ್ತು ಫ ವರ್ಣಗಳನ್ನು, ಅದರಲ್ಲೂ ಆವುಗಳಿಂದ ಆರಂಭವಾಗುವ, ಭಾರತ, ಭರ್ಜರಿ, ಭಾವುಕ, ಭಗವಂತ, ಫಲ, ಫಲಕಾರಿ, ಫಲಿತಾಂಶ ಮುಂತಾದ ಪದಗಳನ್ನು ಉಚ್ಚರಿಸುವಾಗ ನಿಮ್ಮ ಹಸ್ತವನ್ನು ನಿಮ್ಮ ಬಾಯಿ ಎದುರಿಗೆ ಹಿಡಿದರೆ ಹೊರಬರುವ ಹೆಚ್ಚುವರಿ ಉಸಿರಿನ ಅನುಭವವಾಗುತ್ತದೆ. ಒಮ್ಮೆ ಈಗಲೇ ಮಾಡಿನೋಡಿ.

ನಾನು ಇದನ್ನೇ ತರಗತಿಯಲ್ಲಿ ಬಳಸಿಕೊಳ್ಳುವ ಉಪಾಯ ಮಾಡಿದೆ. ಹೊರಬರುವ ಉಸಿರಿನ ಪರಿಣಾಮ ಇನ್ನೂ ಎದ್ದುಕಾಣುವ ಹಾಗೆ ಮಾಡುವ ಸಲುವಾಗಿ ಬಾಯಿ ಎದುರು ಒಂದು ಇಂಡೆಕ್ಸ್ ಕಾರ್ಡನ್ನು ಹಿಡಿದುಕೊಂಡು, ಬಾರತ ಎಂದಾಗ ಕಾರ್ಡು ಅಲುಗಾಡುತ್ತಿರಲಿಲ್ಲ; ಅದೇ, ಭಾರತ ಎಂದಾಗ, ಕಾರ್ಡು ಎದ್ದುಕಾಣುವ ಹಾಗೆ ಅಲುಗಾಡುತ್ತಿತ್ತು. ಅದೇ ರೀತಿ, ಭಾವುಕ, ಫಲಕಾರಿ ಇತ್ಯಾದಿ.

ಮರುದಿನದ ತರಗತಿಯಲ್ಲಿ ಅದೊಂದು ಆಟವೇ ಆಗಿಹೋಯಿತು. ಎಲ್ಲರೂ ಅವರಿಗೆ ಕೊಡಮಾಡಿದ್ದ ಇಂಡೆಕ್ಸ್ ಕಾರ್ಡನ್ನು ಬಾಯಿಯ ಎದುರಿಗೆ ಹಿಡಿದುಕೊಂಡು ಮಹಾಪ್ರಾಣಾಕ್ಷರ ಇರುವ ಪದಗಳನ್ನು ಹೇಳಿದ್ದೇ ಹೇಳಿದ್ದು. ಎಲ್ಲರ ಕಾರ್ಡುಗಳು ಅಲುಗಾಡುತ್ತಿದ್ದವು. ಆದರೆ, ನಾನು ಯಾರಿಗಾಗಿ ಈ ಪ್ರಯೋಗವನ್ನು ಕಂಡುಕೊಂಡಿದ್ದೆನೋ ಅವರಿಗೂ ಇದು ಪ್ರಯೋಜನಕಾರಿಯಾಯಿತೇ ಎಂದು ನೋಡಬೇಕಾಗಿತ್ತು.

ತಂಗವೇಲು ಎನ್ನುವವರನ್ನು ನಿಲ್ಲಿಸಿ, ನೀವು ಕಾರ್ಡಿನೆದುರು ಭಾರತ ಹೇಳಿ ಎಂದು ಕೇಳಿದೆ. ಅವರು ಏನೇನೋ ಪ್ರಯತ್ನಿಸಿ ಹೇಳಿದರೂ ಕಾರ್ಡು ಮಾತ್ರ ಅಲುಗಾಡಲಿಲ್ಲ. ನಂತರ, ತಿರುಮಲೈ ಪ್ರಯತ್ನಿಸಿದರೂ ಆಗಲಿಲ್ಲ. ಅಣ್ಣಮಲೈಅವರೂ ಮಾಡಲು ನೋಡಿ ಸೋತರು. ನನಗೆ ಭಯಂಕರ ನಿರಾಸೆಯಾಯಿತು. ಎಲ್ಲರೂ ಈಗಲೂ ಬಾರತ ಎಂದೇ ಹೇಳುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 08 05 at 8.43.42 PM1


ನಂತರ ಒಬ್ಬರು ಎದ್ದು ನಿಂತು, ಸಾರ್ ನನಗೆ ಬರುತ್ತದೆ ಎಂದರು. ಹೆಸರು ಯೋಗಲಿಂಗಂ. ಅವರೂ ತಮಿಳು ಭಾಷೀಯರು. ನನಗೆ ಒಬ್ಬರಾದರೂ ಸಿಕ್ಕರಲ್ಲ ಎಂದು ಖುಷಿಯಾಗಿ, ಎದುರಿಗೆ ಕರೆದು, ಅಂದುತೋರಿಸಿ ಎಂದು ಹೇಳಿದೆ. ಅವರು ಶಿಸ್ತಾಗಿ ಬಂದು, ಎಲ್ಲರೆದು ನಿಂತುಕೊಂಡು, ನೋಡಿಸಾರ್ ಇದು, ‘ಬಾರತ’ ಎಂದರು, ಕಾರ್ಡು ಅಲುಗಾಡಲಿಲ್ಲ. ಆದರೆ, ಇದು ‘ಬಾರತ’ ಎಂದರು, ಈಗಲೂ ಅಲ್ಪಪ್ರಾಣವೇ. ಆದರೆ, ‘ಬಾರತ’ ಎಂದಾಗಲೂ ಅವರು ಬಾಯಿಯ ಎದುರು ಹಿಡಿದಿದ್ದ ಕಾರ್ಡು ಮಾತ್ರ ಅಲುಗಾಡಿತು. ಇದು ಹೇಗೆ? ಕಾರ್ಡು ತಾನಾಗಿ ಅಲುಗಾಡಲಿಲ್ಲ. ಬಾಯಿಂದ ಅವರು ‘ಬಾರತ’ ಎಂದೇ ಹೇಳುತ್ತಿದ್ದರು, ಆದರೆ, ಕಾರ್ಡನ್ನು ಕೈಯಿಂದಲೇ ಅಲುಗಾಡಿಸುತ್ತಿದ್ದರು!

ವಿಗ್ನಾನ ಎಂದು ಬರೆದರೆ ಅಗ್ನಾನ

ಉಚ್ಚಾರಣೆಯ ಪ್ರಶ್ನೆ ಬಂದಾಗ ಬಹಳಷ್ಟು ಜನ, ಮಾತೃಭಾಷೀಯರೂ ಎಡಹುವ ಇನ್ನೆರಡು ಧ್ವನಿಗಳು ಎಂದರೆ, ‘ಙ’ ಮತ್ತು ‘ಞ’. ಇವೆರಡೂ ಅನುನಾಸಿಕಗಳು. ಚಿತ್ರ 01ರಲ್ಲಿ ನೋಡಿರುವ ಹಾಗೆ ವರ್ಗೀಕೃತ ವ್ಯಂಜನಗಳ. ಕ, ಚ, ಟ, ತ ಮತ್ತು ಪ, ಹೀಗೆ ಪ್ರತಿ ವರ್ಗದ ಐದನೇ ವರ್ಣಗಳಾದ ಙ, ಞ, ಣ, ನ ಮತ್ತು ಮ ವರ್ಣಗಳನ್ನು ಅನುನಾಸಿಕ ಎನ್ನುತ್ತೇವೆ. ಎಂದರೆ, ಅವುಗಳನ್ನು ಮೂಗಿನಿಂದಲೂ ಉಚ್ಚರಿಸಲಾಗುತ್ತದೆ. ನೀವೂ ಒಮ್ಮೆ ಈಗ ಅಂದು ನೋಡಿ, ನಿಮಗೆ ಅದರ ಅರಿವು ಹಸಿರಾಗುತ್ತದೆ.

ಟ, ತ, ಪ ವರ್ಗದ ಅನುನಾಸಿಕಗಳು ಕ್ರಮವಾಗಿ ಣ, ನ ಮತ್ತು ಮ. ಇವುಗಳನ್ನು ಸಾಮಾನ್ಯವಾಗಿ ಎಲ್ಲರೂ ಸರಿಯಾಗಿ ಹೇಳುತ್ತಾರೆ. ಆದರೆ, ಕ ಮತ್ತು ಚ ವರ್ಗದ ಅನುನಾಸಿಕಗಳಾದ, ‘ಙ’ ಮತ್ತು ‘ಞ’ಗಳನ್ನು ಬಹಳ ಜನ ತಪ್ಪಾಗಿ ಉಚ್ಚರಿಸುತ್ತಾರೆ. ಅವುಗಳನ್ನು ‘ಗ್ನ’ ಅಥವಾ ‘ಜ್ನ’ ಎನ್ನುವ ರೀತಿಯಲ್ಲಿ ಉಚ್ಚರಿಸುತ್ತಾರೆ. ಇಲ್ಲಿರುವ ಸಮಸ್ಯೆಯಂದರೆ, ತಾವು ಉಚ್ಚರಿಸುತ್ತಿರುವುದು ಸರಿಯಾಗಿಯೇ ಇದೆ ಎಂಬ ಭಾವನೆ ಅವರಿಗಿರುತ್ತದೆ. ಅವರ ಶಿಕ್ಷಕರೂ ಇದನ್ನು ತಿದ್ದಿರುವುದಿಲ್ಲ. ಏಕೆಂದರೆ, ನೀವು ‘ನುಡಿಯಂಗಳ’ದ 28-05-2025ರ “‘ಕಾನಾ ಕಾನಾ’ ಎಂದರೆ ಸರಿ, ‘ಕಾನಾ ಕಾನಾ’ ಎಂದರೆ ತಪ್ಪು” ಎನ್ನುವ ಲೇಖನದಲ್ಲಿ ಓದಿದ್ದೀರಲ್ಲ, ಇಲ್ಲಿಯೂ ಅಂತಹದೇ ಪ್ರಕರಣ.

ಪ್ರತ್ಯಕ್ಷ ತರಗತಿಯಾಗಿದ್ದರೆ ನಾನು ಅವುಗಳನ್ನು ಸರಿಯಾಗಿ ಉಚ್ಚರಿಸುವುದು ಹೇಗೆ ಎಂದು ಉಚ್ಚರಿಸಿಯೇ ತೋರಿಸುತ್ತಿದ್ದರೆ. ಈಗ, ಚಿತ್ರ ಮತ್ತು ಬರಹದ ವಿವರಣೆಯಿಂದಲೇ ಆದಷ್ಟು ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕಾಗಿದೆ. ಕೆಳಗಿನ ಚಿತ್ರವನ್ನು ನೋಡಿ:

WhatsApp Image 2025 08 05 at 8.43.42 PM2

ಅನುಕೂಲಕ್ಕಾಗಿ, ಮೊದಲು ‘ಮ’ದಿಂದ ಆರಂಭಿಸಿ. ಅದರ ವರ್ಗದ, ‘ಪ, ಫ, ಬ, ಭ’ಗಳನ್ನು ಉಚ್ಚರಿಸುವ ಜಾಗದಿಂದಲೇ, ಉಚ್ಚರಿಸುವ ರೀತಿಯಲ್ಲಿಯೇ ‘ಮ’ವನ್ನು ಉಚ್ಚರಿಸುತ್ತೇವೆ; ಆದರೆ ಇದು ಅನುನಾಸಿಕವಾಗಿರುತ್ತದೆ. ಅದೇ ರೀತಿ, ‘ನ’ ಮತ್ತು ‘ಣ’ಗಳು ತಮ್ಮತಮ್ಮ ವರ್ಗದ ನಾಲ್ಕು ವರ್ಣಗಳನ್ನು ಉಚ್ಚರಿಸುವ ಜಾಗದಲ್ಲಿಯೇ, ಅದೇ ರೀತಿಯೇ ಉಚ್ಚರಿಸಲಾಗುವ ಅನುನಾಸಿಕಗಳು.

ಈಗ ಬಂತು ‘ಞ’ ಮತ್ತು ‘ಙ’ ಇವುಗಳ ಸರದಿ. ಇವುಗಳನ್ನೂ ತಮ್ಮ ತಮ್ಮ ವರ್ಗಗಳ ನಾಲ್ಕು ವರ್ಣಗಳನ್ನು ಉಚ್ಚರಿಸುವ ಜಾಗದಲ್ಲಿಯೇ, ಅದೇ ರೀತಿಯಲ್ಲಿಯೇ ಉಚ್ಚರಿಸಿದರೆ ಮಾತ್ರ ‘ಞ’ ಮತ್ತು ‘ಙ’ ಧ್ವನಿಗಳು ಸರಿಯಾಗಿ ಹೊರಡುತ್ತವೆ. ಆದರೆ, ಅದು ಹೇಗೋ ಹೆಚ್ಚಿನವರು ತಮ್ಮ ಉಚ್ಚಾರಣೆಯ ವಿಧಾನವನ್ನು ಸ್ವಲ್ಪ ಬದಲಾಯಿಸಿ, ‘ಜ್ನ’ ಮತ್ತು ‘ಗ್ನ’ದ ರೀತಿಯಲ್ಲಿ ಉಚ್ಚರಿಸುತ್ತಾರೆ.

ಕನ್ನಡವು ನುಡಿದಂತೆ ಬರೆವ ಭಾಷೆಯಾದ್ದರಿಂದ, ಜ್ಞಾನ, ವಿಜ್ಞಾನ, ಅಜ್ಞಾನಿ, ಸುಜ್ಞಾನಿ, ತಜ್ಞ ಮುಂತಾದ ಪದಗಳನ್ನು ಅವರ ತಪ್ಪು ಉಚ್ಚಾರಣೆಯನ್ನು ಅನುಸರಿಸಿ, ಕ್ರಮವಾಗಿ, ಗ್ನಾನ, ವಿಗ್ನಾನ, ಅಗ್ನಾನಿ, ಸುಗ್ನಾನಿ, ತಗ್ನ ಮುಂತಾಗಿ ಬರೆಯುತ್ತಾರೆ. ಅವರಮಟ್ಟಿಗೆ ಅವರು ಸರಿಯೇ, ಆದರೆ, ಶಿಷ್ಟ ಮಾದರಿಯಲ್ಲಿ ಅವರು ಬರೆದಿರುವುದು ತಪ್ಪು. ಇದಕ್ಕೆ ಮೂಲ, ಅವರ ಉಚ್ಚಾರಣೆಯೇ ತಪ್ಪು! ಇಷ್ಟು ಅರಿವಿನೊಂದಿಗೆ ಪ್ರಯತ್ನಿಸಿದಾಗ ತಿದ್ದಿಕೊಳ್ಳುವುದು ಸಾಧ್ಯವಾಗಬಹುದು.

ಶ, ಷ, ಸ ಎಲ್ಲಾ ಒಂದೇ ಅಲ್ಲ

ಕೆಲವರಿಗೆ ಕನ್ನಡದ ಅವರ್ಗೀಯ ವ್ಯಂಜನಗಳಲ್ಲಿರುವ ಶ, ಷ ಮತ್ತು ಸ-ಗಳನ್ನು ಪ್ರತ್ಯೇಕವಾಗಿರುವ ಹಾಗೆ ಉಚ್ಚರಿಸಲು ಬರುವುದಿಲ್ಲ. ಮೂರನ್ನೂ ಒಂದೇ ತರಹ ಉಚ್ಚರಿಸುತ್ತಾರೆ.

ನಾವು ಚಿಕ್ಕವರಿದ್ದಾಗ ಇವುಗಳ ಉಚ್ಚಾರಣೆಯ ಅನನ್ಯತೆಯನ್ನು ಮನದಟ್ಟು ಮಾಡಿಸಲು ನಮ್ಮ ಕನ್ನಡ ಮೇಷ್ಟ್ರು ಒಂದು ಉಪಾಯವನ್ನು ಮಾಡುತ್ತಿದ್ದರು. ಪ್ರತಿ ಅಕ್ಷರಕ್ಕೆ ಒಂದು ಜನಪ್ರಿಯ ಪದವನ್ನು ಜೋಡಿಸಿ ಹೇಳುತ್ತಿದ್ದರು: ಉದಾ: ಸಕ್ಕರೆ ಸ, ಶಂಕರ-ಶ ಮತ್ತು ಷಣ್ಮುಖ ಷ. ಇವುಗಳ ನೆರವಿನಿಂದ ನಾವು ಆ ಮೂರು ಅಕ್ಷರಗಳನ್ನು ಸರಿಯಾಗಿ ಕಲಿಯುತ್ತಿದ್ದೆವು.
ನಾನು ಹಲವು ರೀತಿಯ ಕನ್ನಡ ಕಲಿಕಾ ತರಬೇತಿಗಳನ್ನು ನಡೆಸುತ್ತೇನೆ. ಕೆಲವು ಕಡೆ ಭಾಗಿಗಳಿಗೆ ಇವನ್ನು ಪ್ರತ್ಯೇಕವಾಗಿ ಹೇಳಲು ಬರುವುದಿಲ್ಲ. ಅಂಥ ಸಮಯದಲ್ಲಿ ನಾನೂ ನಮ್ಮ ಮೇಷ್ಟ್ರು ಹೇಳಿಕೊಟ್ಟ ಉಪಾಯ ಬಳಸುತ್ತೇನೆ. ಒಂದು ಶಿಬಿರದಲ್ಲಿ, ಉದಾ: “ಸಕ್ಕರೆ ಸ, ಶಂಕರ-ಶ ಮತ್ತು ಷಣ್ಮುಖ ಷ.” ಎಂದು ಹೇಳಿ ಅದರಂತೆ ಅಭ್ಯಾಸ ಮಾಡಲು ಭಾಗಿಗಳಿಗೆ ಹೇಳಿದೆ. ಎಲ್ಲರೂ ತರಗತಿಯಲ್ಲಿಯೇ ಧ್ವನಿಯಿಂದ ಅಭ್ಯಾಸ ಮಾಡತೊಡಗಿದರು. ಒಬ್ಬ ತರಬೇತಿದಾರರಿಗೆ ಇದಕ್ಕಿಂತ ಇಂಪಾದ ಸಂಗೀತ ಇನ್ನೊಂದಿಲ್ಲ. ಅಷ್ಟರಲ್ಲಿ, ಒಬ್ಬ ಭಾಗಿ, ‘ಸಾ… ನನಗೆ ಏಳೋಕ್ ಬರುತ್ತೆ ಸಾ..,’ ಎಂದ. ನನಗೆ ಸಂತೋಷವಾಗಿ, ಆತನನ್ನು ಎದುರಿಗೆ ಕರೆದು ಎಲ್ಲರಿಗೂ ಕೇಳಿಸುವ ಹಾಗೆ(ಏಳು, ಅಲ್ಲ) ಹೇಳು ಎಂದೆ.
ಆಗ ಆತ, ಬಹಳ ಆತ್ಮವಿಶ್ವಾಸದಿಂದ, “ನೋಡಿ ಸಾ…, ಸಕ್ಕರೆ -ಸ, ಸಂಕರ -ಸ, ಸಣ್ಮುಖ -ಸ ಮತ್ತು ಸರಿನಾ ಸಾ… ಎಂದ.” ನಾನು ನಿನ್ನ ಹೆಸರೇನಪ್ಪ ಎಂದು ಕೇಳಿದಾಗ, ಆತ ಖುಷಿಯಿಂದ ಹೇಳಿದ ‘ರಮೇಸ, ಸಾ…’ ಎಂದ.

WhatsApp Image 2025 08 05 at 8.43.42 PM3


ಸ, ಶ ಮತ್ತು ಷ ಧ್ವನಿಗಳನ್ನು ಹೊರಡಿಸುವಾಗ ನಾಲಿಗೆ(ಯ ತುದಿ) ಎಲ್ಲಿರುತ್ತದೆ, ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿ ಬಿಂಬಿಸುವ ಪ್ರಯತ್ನವನ್ನು ಮಾಡಲಾಗಿದೆ.

ಇದನ್ನೂ ಓದಿ ನುಡಿಯಂಗಳ | ಓದುವ ಕೌಶಲದ ವಿಹಂಗಮ ನೋಟ

ಯಾರದೋ ಉಚ್ಚಾರಣೆಯನ್ನು ತೆಗೆದುಕೊಂಡು ಅವರನ್ನು ತಮಾಷೆ ಮಾಡುವುದು ಇಲ್ಲಿನ ಉದ್ದೇಶ ಖಂಡಿತ ಅಲ್ಲ. ಬಾಲ್ಯದಿಂದ ಮನೆ, ನೆರೆಹೊರೆ, ಶಾಲೆಗಳಲ್ಲಿ ಸಹಜವಾಗಿ ಕಲಿತ ಉಚ್ಚಾರಣೆಯೇ ಅವರ ಗುರುತು. ಅದು ಪ್ರಮಾಣಿತ, ಲಿಖಿತ, ಗ್ರಂಥಸ್ಥ ಭಾಷೆಯ ನಿಟ್ಟಿನಲ್ಲಿ ಅದನ್ನು ದೋಷ ಎನ್ನುವುದಕ್ಕಿಂತ, ಭಿನ್ನತೆ, ವೈಶಿಷ್ಟ್ಯ ಎನ್ನಬಹುದು. ಇದನ್ನು ಅರಿವು, ಅಭ್ಯಾಸ, ದೃಢ ನಿರ್ಧಾರದಿಂದ ಸರಿಪಡಿಸಿಕೊಳ್ಳಬಹುದು. ಆಗ ನುಡಿ ಮತ್ತು ಬರಹ ಎರಡೂ ಸುಧಾರಿಸುತ್ತವೆ.
ವಿವಿಧ ಬಗೆಯ ಇಂಥ ಉಚ್ಚಾರಣಾ ಸಮಸ್ಯೆಗಳಿಗೆ ಕಾರಣ, ಸುಧಾರಣೆಯ ಕ್ರಮಗಳು, ಸುಧಾರಣೆಗಾಗಿ ಹಲವಾರು ಅಭ್ಯಾಸಗಳನ್ನು, ಡಾ.ಸಿ.ಆರ್.ಚಂದ್ರಶೇಖರ್‌ ಅವರ ಸಂಪಾದಕತ್ವದಲ್ಲಿ, “ವ್ಯಕ್ತಿತ್ವ ವಿಕಸನಮಾಲೆ”ಯ ಭಾಗವಾಗಿ ನಾನು ಬರೆದು, ನವಕರ್ನಾಟಕ ಪ್ರಕಟಿಸಿರುವ ಈ ಪುಸ್ತಕದಲ್ಲಿ ಕೊಡಲಾಗಿದೆ. ಓದಿ ಪ್ರಯೋಜನವಾದರೆ ಸಂತೋಷ.

WhatsApp Image 2025 08 05 at 8.43.42 PM4



WhatsApp Image 2025 11 17 at 4.13.46 PM
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಕ್ರೂರಿಗಳ ಲೋಕದಲ್ಲಿ ಮಹಿಳಾ ದಿನ

ನಮ್ಮ ಪಾಖಂಡ ಸಮಾಜದ ರೀತಿ ನೀತಿಗಳನ್ನು ನೋಡಿ ನಗು ಬರುತ್ತದೆ. ಇಲ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನೇತ್ರಮಹಿಮೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಯುಗಧರ್ಮ | ಇರಾನ್ ಬಗ್ಗೆ ಮೋದಿ ಮೌನ ನಮ್ಮನ್ನು ನಾಚಿಕೆಗೀಡು ಮಾಡಿದೆ

ಕನಿಷ್ಠ ಭಾರತವಾದರೂ ಈ ಬೂಟಾಟಿಕೆಯಲ್ಲಿ ಭಾಗವಹಿಸಬಾರದು. ನಮ್ಮ ಪರಮಾಣು ಬಾಂಬ್‌ಗಳಿಗೆ ಜಾಗತಿಕ...